‘ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು’ – ಬಿ.ಎ.ವಿವೇಕ್ ರೈ

ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್. ವಿ.ಪರಮೇಶ್ವರ ಭಟ್ಟರು

 

ಬಿ.ಎ. ವಿವೇಕ ರೈ

ನಾಳೆ ,ಫೆಬ್ರವರಿ ಎಂಟು, ಪ್ರೊ.ಎಸ.ವಿ .ಪರಮೇಶ್ವರ ಭಟ್ಟರ ಜನುಮದಿನ ( ೧೯೧೪-೨೦೦೦ ). ಮಂಗಳೂರಿನಲ್ಲಿ ಅವರ ಹೆಸರಿನಲ್ಲಿ ೨೦೦೨ ರಿಂದ ಒಂದು ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿಗಳಿಗೆ ಸಾಹಿತ್ಯ ಅಭಿರುಚಿ ಶಿಬಿರವನ್ನು ‘ಎಸ ವಿ ಪಿ ಸಂಸ್ಮರಣ ಸಮಿತಿ’ ಯವರು ನಡೆಸುತ್ತಾ ಬಂದಿದ್ದಾರೆ.ಏರ್ಯ ಲಕ್ಸ್ಮಿನಾರಾಯಣ ಆಳ್ವರ ಅಧ್ಯಕ್ಷತೆಯ ಆ ಸಮಿತಿಯ ಚಾಲಕ ಶಕ್ತಿ ಆಗಿದ್ದ ಪ್ರೊ.ನಾಗರಾಜ ರಾವ್ ಜವಳಿ ಈ ವರ್ಷ ನಮ್ಮನ್ನು ಅಗಲಿದ್ದಾರೆ.ಜವಳಿ ತಮ್ಮ ಗುರುಗಳಾದ ಎಸ ವಿ ಪಿ ಅವರ ಬಗ್ಗೆ ತಾಳಿದ್ದ ಅಪಾರ ಪ್ರೀತಿ ಅಭಿಮಾನ ಈ ಎಲ್ಲ ನೆನಪಿನ ಕಾರ್ಯಕ್ರಮಗಳ ಜೀವಾಳವಾಗಿತ್ತು.ಜವಳಿ ಇಲ್ಲದ ಎಸ ವಿ ಪಿ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳುವುದು ಬಹಳ ನೋವಿನ ಕೆಲಸ.

ಎಸ ವಿ ಪಿ ಅವರ ಬಗ್ಗೆ ನಾನು ಹಿಂದೆ ಬರೆದಿದ್ದ ಒಂದು ಬರಹವನ್ನು ಬಹುಮಟ್ಟಿಗೆ ಹಾಗೆಯೇ ಇಲ್ಲಿ ಕೊಟ್ಟಿದ್ದೇನೆ.ಅದಕ್ಕೆ ಹಿನ್ನೆಲೆಯಾಗಿ ಕೆಲವು ಮಾತುಗಳನ್ನು ಆರಂಭದಲ್ಲಿ ಇಲ್ಲಿ ಸೇರಿದ್ದೇನೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಲೆನಾಡಿನಲ್ಲಿ ಹುಟ್ಟಿ ,ನಿಸರ್ಗದ ನಡುವೆ ಬೆಳೆದ ಪರಮೇಶ್ವರ ಭಟ್ಟರು ಸಹಜ ಕವಿಯಾಗಿ ಬೆಳೆದವರು.’ರಾಗಿಣಿ’ ಕವನ ಸಂಕಲನ ಅವರ ಮೊದಲ ಕೃತಿ.ಅವರ ಎಲ್ಲ ಸಾಹಿತ್ಯಸಾಧನೆಗಳ ವಿಸ್ತಾರದ ನಡುವೆಯೂ ಅವರೊಬ್ಬ ಅಪ್ಪಟ ಕವಿ ಮತ್ತು ಕವಿಹೃದಯದ ಸಹೃದಯ. ಕನ್ನಡದ ಪ್ರಾಚೀನ ಕಾವ್ಯ ಪ್ರಕಾರಗಳನ್ನು ಮತ್ತು ಛಂದೋಪ್ರಭೇದಗಳನ್ನು ಅವರು ಹೊಸಗನ್ನಡ ಕಾವ್ಯರೂಪದಲ್ಲಿ ಪುನರುಜ್ಜೀವನ ಮಾಡಿದರು.ಸಾಂಗತ್ಯ ,ತ್ರಿಪದಿ,ಏಳೆ, ವಚನ ಪ್ರಕಾರಗಳು ಅವರ ಕಾವ್ಯಪ್ರಯೋಗದ ಮೂಲಕ ಹೊಸ ಅರ್ಥವನ್ನು ಪಡೆದವು.ಇಂದ್ರಚಾಪ, ಚಂದ್ರವೀಧಿ ದಂತಹ ಸಾಂಗತ್ಯ ಕೃತಿಗಳು; ಉಪ್ಪುಕಡಲು ,ಪಾಮರದಂತಹ ವಚನಸಂಕಲನಗಳು ;ಸುರಗಿ ಸುರಹೊನ್ನೆಯಂತಹ ತ್ರಿಪದಿ ಮುಕ್ತಕಗಳು ,ಇಂದ್ರಗೋಪದಂತಹ ಏಳೆ ರಚನೆಗಳು -ಇವು ಪ್ರಯೋಗಗಳೂ ಹೌದು ,ಕನ್ನಡ ದೇಸಿಯ ಅನನ್ಯತೆಯನ್ನು ಉಳಿಸಿದ ಸಾಹಸಗಳೂ ಹೌದು.ಜನಪದ ಸಾಹಿತ್ಯದ ಜನಪ್ರಿಯ ಪ್ರಕಾರಗಳಾದ ಗಾದೆ ಮತ್ತು ಒಗಟುಗಳನ್ನು ಆಧುನಿಕ ಕಾಲದಲ್ಲಿ ಕಾವ್ಯಸೃಷ್ಟಿಯ ರೂಪದಲ್ಲಿ ಸ್ವತಂತ್ರ ರಚನೆಗಳನ್ನಾಗಿ ಎಸ ವಿ ಪಿ ನಿರ್ಮಿಸಿ ,ಜನಪದ ಸಾಹಿತ್ಯಕ್ಕೆ ಆಧುನಿಕ ಕಾವ್ಯದ ಜೊತೆಗೆ ಮನ್ನಣೆ ತಂದುಕೊಟ್ಟರು.’ಮಂಥಾನ’ ಅವರ ಸ್ವತಂತ್ರ ಗಾದೆಗಳ ಸಂಕಲನ ;’ಕಣ್ಣುಮುಚ್ಚಾಲೆ’ ಸ್ವತಂತ್ರ ಒಗಟುಗಳ ರಚನೆ.

ವಿದ್ವತ್ತಿನ ವಲಯದಲ್ಲಿ ಪ್ರೊ.ಪರಮೇಶ್ವರ ಭಟ್ಟರದ್ದು ಸಂಸ್ಕೃತದ ಕ್ಲಾಸಿಕ್ ಗಳನ್ನು ಕನ್ನಡಕ್ಕೆ ತಂದುಕೊಟ್ಟ ಭೂಮ ಪ್ರತಿಭೆ ಹಾಲನ ‘ಗಾಥಾ ಸಪ್ತಶತಿ ‘ ಯನ್ನು ಮೊದಲ ಬಾರಿ ಕನ್ನಡದಲ್ಲಿ ಸರಸರೂಪದಲ್ಲಿ ತಂದ ಎಸ ವಿ ಪಿ ,ಬಳಿಕ ಕಾಳಿದಾಸ ,ಭಾಸ, ಹರ್ಷ,ಭವಭೂತಿ ,ಭರ್ತೃಹರಿ -ಹೀಗೆ ಇವರ ಎಲ್ಲರ ಕಾವ್ಯ ನಾಟಕಗಳ ಅನುವಾದಗಳ ಸಮಗ್ರ ಸಂಪುಟಗಳನ್ನು ತಂದರು.ಸಂಸ್ಕೃತ ,ಕನ್ನಡಗಳ ಜೊತೆಗೆ ಇಂಗ್ಲಿಶ್ ನಲ್ಲೂ ಒಳ್ಳೆಯ ಪ್ರಭುತ್ವ ಇದ್ದ ಅವರು ‘ಇಂಗ್ಲಿಶ್ ಪ್ರಬಂಧಗಳು ‘ ಎಂಬ ಇಂಗ್ಲಿಷ್ ಎಸ್ಸೆ ಗಳ ಕನ್ನಡ ಅನುವಾದದ ಗ್ರಂಥವನ್ನು ಪ್ರಕಟಿಸಿದರು.ಇದರಲ್ಲಿ ಪ್ರಬಂಧ ಪ್ರಕಾರದ ಸರಿಯಾದ ಪ್ರವೇಶ ಇದೆ.ವಿಮರ್ಶೆಯ ಕ್ಷೇತ್ರದಲ್ಲಿ ಎಸ ವಿ ಪಿ ಅವರದ್ದು ಪೌಖಿಕ ಪರಂಪರೆಯ ಮಾದರಿ.ಅವರ ಭಾಷಣಗಳಿಗೂ ಬರಹಕ್ಕೂ ಬಹಳ ವ್ಯತ್ಯಾಸ ಇಲ್ಲ.ಅವರಿಗೆ ಇಷ್ಟವಾದ ಭಾರತೀಯ ಕಾವ್ಯಮೀಮಾಸೆಯ ಒಂದು ಉಕ್ತಿ :’ರೀತಿಯೇ ಕಾವ್ಯದ ಆತ್ಮ’. ಹಾಗಾಗಿ ಭಾಷೆಗೆ ಭಾವದ ಆಲಿಂಗನ ಅವರ ಎಲ್ಲ ಬರಹಗಳಲ್ಲೂ ವಿಶೇಷವಾಗಿ ಕಾಣಿಸುತ್ತದೆ.ಅವರ ಭಾಷಣಗಳು,ಮುನ್ನುಡಿಗಳು,ಪ್ರಬಂಧಗಳು -ಎಲ್ಲವೂ ವಿಮರ್ಶೆಗಳೇ.ಮುದ್ದಣ ಕವಿ ಅವರ ಮೆಚ್ಚಿನ ಕವಿ.ಮುದ್ದಣನ ಕೃತಿಗಳನ್ನು ರಾಮಪಟ್ಟಾಭಿಷೇಕ ,ಅದ್ಭುತರಾಮಾಯಣಗಳನ್ನು ಸಂಪಾದನೆ ಮಾಡುವುದರ ಜೊತೆಗೆ ಕರಾವಳಿಯ ಅಲಕ್ಷಿತ ಕವಿ ಮುದ್ದಣನಿಗೆ ಕರ್ನಾಟಕದ ವ್ಯಾಪ್ತಿಯಲ್ಲಿ ಹೆಸರು ತಂದುಕೊಟ್ಟವರಲ್ಲಿ ಎಸ ವಿಪಿ ಪ್ರಮುಖರು. ನಾನು ಪದವಿ ತರಗತಿಯಲ್ಲಿ ಇದ್ದಾಗ ೧೯೬೫ರಲ್ಲಿ ಅವರ ವಿಮರ್ಶಾಲೇಖನಗಳ ಸಂಕಲನ ‘ಸೀಳುನೋಟ ‘ ನಮಗೆ ಅಧ್ಯಯನಕ್ಕೆ ದೊರಕಿತ್ತು. ನನಗೆ ಆಗ ಏನೂ ಗೊತ್ತಿಲ್ಲದ ಕನ್ನಡ ಸಾಹಿತ್ಯದ ಜಗತ್ತನ್ನು ತೆರದು ತೋರಿಸಿದ್ದವು ಅದರಲ್ಲಿನ ಲೇಖನಗಳು.ಆ ಸಂಕಲನದ ’ಪಂಪನು ಬೆಳಗಿದ ಲೌಕಿಕದ ಒಂದು ಚಿತ್ರ’ ಎಂಬ ಲೇಖನ ನನ್ನ ಬಹಳ ಮೆಚ್ಚಿನದ್ದು. ಕಳೆದ ಎರಡು ವರ್ಷಗಳಿಂದ ಬ್ಲಾಗ್ ಬರಹಗಳನ್ನು ಬರೆಯುತ್ತಿರುವ ನನಗೆ ಈಗ ಎಸ ವಿಪಿ ಅವರ ಕನ್ನಡ ಪದಸಂಪತ್ತು ಮತ್ತು ಬರಹದ ಶಕ್ತಿಯ ಮಹತ್ವ ಹೆಚ್ಚು ಅರ್ಥವಾಗುತ್ತಿದೆ.

ಈಗ ಕಳೆದ ಒಂದು ವಾರದಿಂದ ಇಲ್ಲಿ ಜರ್ಮನಿಯಲ್ಲಿ ಮರಗಟ್ಟುವ ಚಳಿ.ಮೈನಸ್ ಹತ್ತರಿಂದ ಮೈನಸ್ ಇಪ್ಪತ್ತು ಡಿಗ್ರಿಯವರೆಗೆ ಹವೆ ನಡುಗುತ್ತಿದೆ.ಹೊರಗೆ ನಾಲ್ಕು ಹೆಜ್ಜೆ ನಡೆದಾಗ ,ಗಾಳಿಗೆ ತೆರೆದುಕೊಂಡಿರುವ ಮುಖದ ಯಾವುದೇ ಅಂಗಗಳು ನಿಜವಾಗಿ ಇವೆಯೇ ಎಂದು ಸ್ಪರ್ಶಕ್ಕೆ ಸಿಗುತ್ತಿಲ್ಲ.ಮೂಗು ತುಟಿ ಬಾಯಿ ಮುಖ ಸ್ಪರ್ಶದ ಸ್ಪಂದನಕ್ಕೆ ಸಿಗುತ್ತಿಲ್ಲ.ಇಂತಹ ಕೋರೈಸುವ ಚಳಿಯಲ್ಲಿ ಈಗ ಬೆಳಗ್ಗೆ ಎಂಟು ಗಂಟೆಗೆ ಗುರುಗಳಾದ ಪ್ರೊ.ಎಸ.ವಿ ಪರಮೇಶ್ವರ ಭಟ್ಟರ ನೆನಪು ಬೆಚ್ಚನೆಯ ಸುಖವನ್ನು ಕೊಡುತ್ತಿದೆ. ಎಸ ವಿಪಿ ಅವರ ಬಗ್ಗೆ ಹಿಂದೆ ಬರೆದ ಲೇಖನವನ್ನು ಮತ್ತೆ ಹಾಗೆಯೇ ಮುಂದೆ ಕೊಟ್ಟಿದ್ದೇನೆ.

ಗುರುಗಳ ಬಗ್ಗೆ ಹಿರಿಯ ಸಾಹಿತಿಗಳ ಬಗ್ಗೆ ಎಸ್ವಿಪಿ ಅವರಿಗೆ ಅಪಾರ ಗೌರವ.ತಮ್ಮ ತೀರ್ಥಹಳ್ಳಿಯ ಗುರುಗಳಾದ ಕಮಕೋಡು ನರಸಿಂಹ ಶಾಸ್ತ್ರಿಗಳ ಬದುಕು ಬರಹದ ಬಗ್ಗೆ ಒಂದು ಒಳ್ಳೆಯ ಅಭಿನಂದನಾ ಗ್ರಂಥವನ್ನು ಅವರು ಸಂಪಾದಿಸಿ ಪ್ರಕಟಿಸಿದರು.ಅದಕ್ಕೆ ನನ್ನಿಂದಲೂ ಒಂದು ಲೇಖನ ಬರೆಸಿದರು.ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ತೀರ್ಥಹಳ್ಳಿಯಲ್ಲಿ ನಡೆಯಿತು.ಅದಕ್ಕೆ ನನ್ನನ್ನೂ ಕರೆದುಕೊಂಡು ಹೋಗಿದ್ದರು.ನರಸಿಂಹ ಶಾಸ್ತ್ರಿಗಳನ್ನು ನಾನು ಅಲ್ಲೇ ಮೊದಲು ನೋಡಿದ್ದು.ಯು.ಆರ್.ಅನಂತಮೂರ್ತಿ ಅವರ ಸಹಿತ ತೀರ್ಥಹಳ್ಳಿ ಪರಿಸರದ ಆ ಕಾಲದ ಸಾಹಿತಿಗಳನ್ನು ಸಮಾಜವಾದಿ ಚಿಂತಕರನ್ನು ಒಟ್ಟಿಗೆ ನಾನು ನೋಡಿದ್ದು ಆ ಕಾರ್ಯಕ್ರಮದಲ್ಲಿ.ಎಸ್ವಿಪಿ ಅವರು ತಮ್ಮ ತರಗತಿಗಳಲ್ಲಿ ಸ್ವಲ್ಪ ಸಮಯವನ್ನು ತಮ್ಮ ಗುರುಗಳ ನೆನಪುಗಳ ಮೂಲಕ ಅವರ ವಿಚಾರಗಳ ವೈಶಿಷ್ಯಗಳನ್ನು ತಿಳಿಸಲು ಬಳಸುತ್ತಿದ್ದರು.ಟಿ ಎಸ ವೆಂಕಣ್ಣಯ್ಯ, ಕುವೆಂಪು ,ಡಿ ಎಲ್ ನರಸಿಂಹಾಚಾರ್ ,ತೀ ನಂ ಶ್ರೀ ಇವರೆಲ್ಲಾ ಅವರ ಕೃತಿಗಳ ಆಚೆಗೂ ನನಗೆ ಮಾನಸಿಕ ಗುರುಗಳಾಗಿ ದಕ್ಕಿದ್ದು ಎಸ್ವಿಪಿ ಅವರ ಪಾಠಗಳಿಂದ .

೧೯೬೮ರ ಜುಲೈ :ಹನಿ ಕಡಿಯದೆ ಸುರಿಯುತ್ತಿದ್ದ ಧಾರಾಕಾರ ಮಳೆಗೆ, ಬಂಟ್ವಾಳದ ನೆರೆಗೆ ಅಂಜದೆ , ಮೈಸೂರಿನಿಂದ ಘಟ್ಟ ಇಳಿದು ಬಂದ ಎಸ. ವಿ. ಪರಮೇಶ್ವರ ಭಟ್ಟರು ಕೇವಲ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿ ೧೯೭೪ ಮಾರ್ಚ್ ನಲ್ಲಿ ನಿವೃತ್ತ ರಾಗಲಿಲ್ಲ. ಸುಮಾರು ಆರು ವರ್ಷಗಳ ಕಾಲ ಅವರು ಮಂಗಳೂರನ್ನು ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ದಿಗ್ವಿಜಯ ಸಾಧಿಸಿದರು. ಅಲ್ಲಿ ಯುದ್ಧವಿಲ್ಲ , ಸಾವು ನೋವುಗಳಿಲ್ಲ .ಅದೊಂದು ಬುದ್ಧನ ಶಾಂತಿ ಯಾತ್ರೆಯಂತೆ. ಅಲ್ಲಿನ ಮಂತ್ರ ಕನ್ನಡ , ಮಾತು ಸಾಹಿತ್ಯ , ಬದುಕು ಸಂಸ್ಕೃತಿ.

ಎಸ.ವಿ.ಪಿ. ೧೯೬೮ರ ಜುಲೈ ಯಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಕನ್ನಡ ಪ್ರೊಫೆಸ್ಸರ್ ಆಗಿ ಬಂದಾಗ ,ಅಲ್ಲಿ ಕಚೇರಿ ಇರಲಿಲ್ಲ ;ಸಿಬ್ಬಂದಿ ಇರಲಿಲ್ಲ ;ಗ್ರಂಥಾಲಯ ಇರಲಿಲ್ಲ .ತಾವೊಬ್ಬರೇ ಕಚೇರಿಯಾಗಿ ಸಿಬ್ಬಂದಿಯಾಗಿ ನಡೆದಾಡುವ ಗ್ರಂಥಾಲಯವಾಗಿ ಕನ್ನಡ ವಿಭಾಗವನ್ನು , ಸ್ನಾತಕೋತ್ತರ ಕೇಂದ್ರವನ್ನು ತಮ್ಮ ಮಾಂತ್ರಿಕ ಶಕ್ತಿಯಿಂದ ನಿರ್ಮಾಣ ಮಾಡಿದರು. ವಿಜ್ಞಾನದ ಪದವೀಧರನಾಗಿದ್ದ ನಾನು , ಆಗಿನ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕನ್ನಡ ದಿನಪತ್ರಿಕೆ ‘ನವಭಾರತ ‘ ದಲ್ಲಿ ಕನ್ನಡ ಎಂ.ಎ.ಗೆ ಅರ್ಜಿ ಸಲ್ಲಿಸುವ ಅವಕಾಶದ ಬಗ್ಗೆ ಓದಿ ತಿಳಿದು ಅರ್ಜಿ ಸಲ್ಲಿಸಿದೆ. ಒಂದು ದಿನ ಅಂಚೆ ಕಾರ್ಡಿನಲ್ಲಿ ಎಸ್ವಿಪಿಯವರದೇ ಹಸ್ತಾಕ್ಷರದಲ್ಲಿ ಎಂ.ಎ. ಪ್ರವೇಶಕ್ಕೆ ಆಯ್ಕೆಯಾದ ಸೂಚನೆ ಬಂದಾಗ ನನಗೆ ದಿಗಿಲು ಮತ್ತು ಬೆರಗು.ಮಂಗಳೂರಿಗೆ ಸಾಕಷ್ಟು ಹೊಸಬನಾದ ನಾನು ದಾರಿ ಹುಡುಕುತ್ತಾ ಸೈಂಟ್ ಅಲೋಶಿಯಸ್ ಕಾಲೇಜಿನ ತಳ ಅಂತಸ್ತಿನ ಒಂದು ಕೊಠಡಿಯ ಒಳಹೊಕ್ಕು ಎಸ್ವಿಪಿಯವರನ್ನು ವಿಚಾರಿಸಿದೆ.ಆಗ ಬೆಳ್ಳಿ ಕೂದಲ , ಕುಳ್ಳ ದೇಹದ ನಗುಮುಖದವರೊಬ್ಬರು , ‘ಬನ್ನಿ , ಬನ್ನಿ ‘ ಎಂದು ಒಳ ಕರೆದು ತಮ್ಮೆದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ನನಗೆ ಮತ್ತಷ್ಟು ಗಾಬರಿ. ಅಳುಕುತ್ತಾ ಮೈ ಆಲಸಿಯಾದಂತೆ ಕುಳಿತುಕೊಂಡೆ. ಅಕ್ಕರೆಯಿಂದ ವಿಚಾರಿಸಿಕೊಂಡು , ಕನ್ನಡದ ಬಗ್ಗೆ ಪ್ರೀತಿ ಮೊಳೆಯುವಂತಹ ಮಾತುಗಳನ್ನು ಆಡಿ, ಬೆನ್ನು ತಟ್ಟುವ ಸಂಭ್ರಮವನ್ನು ಕಂಡ ನನಗೆ ಹೊಸತೊಂದು ಲೋಕದ ಅನುಭವವಾಯಿತು.

ಮುಂದೆ ೧೯೬೮ರಿನ್ದ ೧೯೭೦ರ ವರೆಗೆ ಎರಡು ವರ್ಷಗಳ ಕಾಲ ಎಂ.ಎ.ತರಗತಿಯಲ್ಲಿ ಅವರ ವಿದ್ಯಾರ್ಥಿಯಾಗಿ , ಹದಿನಾರು ಮಂದಿ ಶಿಷ್ಯರಲ್ಲಿ ಒಬ್ಬನಾಗಿ ನಾನು ಕಂಡ ಕೇಳಿದ ಅನುಭವಿಸಿದ ವಿಷಯಗಳು ಸಂಗತಿಗಳು ನೂರಾರು.ಅವರ ಪಾಠ ಅದೊಂದು ರಸಲೋಕದ ಯಾತ್ರೆಯಂತೆ. ಹದಿನಾರು ಮಂದಿಯ ತರಗತಿಯಾಗಲಿ , ಸಾವಿರ ಮಂದಿಯ ಸಭೆಯಾಗಲಿ , ಆ ಮಾತಿನ ರೀತಿ , ರೂಪಕಗಳ ಸರಮಾಲೆ , ತಮ್ಮ ಗುರು ಪರಂಪರೆಯ ಸಂಬಂಧದ ಅನುಭವಗಳನ್ನು ಬಿಚ್ಚುತ್ತಿದ್ದ ವೈಖರಿ , ವಿಷಯದ ಮಂಡನೆಯೊಂದಿಗೆ ಜೋಡಣೆಗೊಳ್ಳುತ್ತಿದ್ದ ನೂರಾರು ಅನುಭವದ ತುಣುಕುಗಳು – ಹೀಗೆ ಒಂದು ಗಂಟೆ ಮುಗಿಯುವುದರೊಳಗೆ ಒಂದು ರಸ ವಿಶ್ವಕೋಶದ ಒಳಗಡೆ ತಿರುಗಾಟದ ಸುಖ ದೊರೆಯುತ್ತಿತ್ತು.ಪಂಪನ ಆದಿಪುರಾಣ ದಂತಹ ಕಾವ್ಯವಾಗಲಿ ,ಭಾರತೀಯ ಕಾವ್ಯಮೀಮಾಂಸೆ ಯಂತಹ ಶಾಸ್ತ್ರವಾಗಲಿ , ಅಕ್ಕಮಹಾದೇವಿಯ ವಚನಗಳಾಗಲಿ ,ಇಂಗ್ಲಿಶ್ ಲಲಿತ ಪ್ರಬಂಧಗಳ ಅನುವಾದವಾಗಲಿ – ಎಸ್ವಿಪಿ ಅವರ ಪಾಠ ಅವರ ಅನುಭವ ಲೋಕದ ಮೂಲಕವೇ ನಮಗೆ ಭಾವಗಮ್ಯ ಆಗುತ್ತಿತ್ತು.

ತರಗತಿಯ ಒಳಗಿನ ಪಾಠ ಪ್ರವಚನಗಳ ಸೊಗಸು ಒಂದು ಕಡೆಯಾದರೆ , ಕನ್ನಡವನ್ನು ಪ್ರೀತಿಸಲು ಎಸ್ವಿಪಿ ನಮಗೆ ತೋರಿಸಿಕೊಟ್ಟ ರಹದಾರಿಗಳು ನೂರಾರು. ಕನ್ನಡ ಕವಿಗಳ ಸಾಹಿತಿಗಳ ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದುದು ಅಂತಹ ಒಂದು ಅಪೂರ್ವ ಅವಕಾಶ. ಬೇಂದ್ರೆ ,ಕಾರಂತ ,ಮಾಸ್ತಿ ,ರಾಜರತ್ನಂ, ಅಡಿಗ ,ಅನಂತಮೂರ್ತಿ ,ನಿಸ್ಸಾರ್ ,ದೇಜಗೌ , ಹಾಮಾನಾ, ಹಂಪನಾ -ಹೀಗೆ ಹಿರಿಯ ಕಿರಿಯ ಎಲ್ಲ ಸಾಹಿತಿಗಳನ್ನು ಸೆಳೆದು ತಂದು ನಮ್ಮ ಕನ್ನಡ ವಿಭಾಗದಲ್ಲಿ ಉಪನ್ಯಾಸ ಕೊಡಿಸುತ್ತಿದ್ದರು.ಉಳಿದ ವಿಭಾಗಗಳ ವಿದ್ಯಾರ್ಥಿಗಳು ನಮ್ಮ ಕನ್ನಡ ವಿಭಾಗದ ಬಗ್ಗೆ ಆಗ ಮಾಡುತ್ತಿದ್ದ ತಮಾಷೆಯೆಂದರೆ – ಮಂಗಳೂರು ಹಂಪನಕಟ್ಟೆಯ ಬಸ್ ನಿಲ್ದಾಣದಲ್ಲಿ ಇಳಿಯುವ ಯಾವುದೇ ಸಾಹಿತಿಯನ್ನು ನಾವು ಅಪಹರಿಸಿ ಎಳೆದುತಂದು ನಮ್ಮ ವಿಭಾಗದಲ್ಲಿ ಕಾರ್ಯಕ್ರಮ ಏರ್ಪಡಿಸುತ್ತಿದ್ದೆವು ಎಂದು.ನನಗೆ ನೆನಪಿರುವ ಹಾಗೆ ೧೯೬೮ರಿನ್ದ ೧೯೭೪ರ ಅವಧಿಯಲ್ಲಿ ಕುವೆಂಪು ಒಬ್ಬರನ್ನು ಬಿಟ್ಟರೆ ನಮ್ಮ ಕನ್ನಡ ವಿಭಾಗಕ್ಕೆ ಬಾರದ ಮಾತನಾಡದ ಆ ಕಾಲದ ಮುಖ್ಯ ಸಾಹಿತಿ ಯಾರೂ ಇಲ್ಲ.

ಪ್ರೊಫೆಸರ್ ಎಸ್ವಿಪಿ ಅವರ ಕನ್ನಡ ಪ್ರೀತಿಯ ಇನ್ನೊಂದು ಗೀಳೆಂದರೆ ,ಪುಸ್ತಕ ಪ್ರಕಟಣೆ. ಬಹಳ ಬಾರಿ ಸಾಲ ಮಾಡಿ ,ಮನೆ ತುಂಬಾ ರಾಶಿ ರಾಶಿಯಾಗಿ ಪೇರಿಸಿಟ್ಟ ಪುಸ್ತಕಗಳ ನಡುವೆ ಅವರು ಸಿಕ್ಕಿಹಾಕಿಕೊಂಡಿದ್ದಾರೋ ಎನ್ನುವಷ್ಟು ಸಂಖ್ಯೆಯಲ್ಲಿ ಕನ್ನಡ ಗ್ರಂಥಗಳನ್ನು ಅವರು ಪ್ರಕಟಿಸಿದರು. ಸಹೋದ್ಯೋಗಿಗಳ , ಶಿಷ್ಯರ , ತಮ್ಮ ಸಂಪರ್ಕಕ್ಕೆ ಬಂದ ಅಭಿಮಾನಿಗಳ ಪುಸ್ತಕಗಳನ್ನು ಪ್ರಕಟಿಸಲು ಉತ್ತೇಜನ ಕೊಟ್ಟರು. ಅದಕ್ಕಾಗಿ ಅಕ್ಷರಶಃ ತಮ್ಮ ತನು-ಮನ-ಧನಗಳನ್ನು ವಿನಿಯೋಗಿಸಿದರು. ಹಾಗಾಗಿ ಗ್ರಂಥ ಪ್ರಕಟಣೆ ಮತ್ತು ಗ್ರಂಥ ಬಿಡುಗಡೆ ಅವರ ಕಾಲದಲ್ಲಿ ನಿತ್ಯೋತ್ಸವ ಆಯಿತು. ನಾವು ಎಂ.ಎ. ವಿದ್ಯಾರ್ಥಿಗಳು ಬರೆದ ಕವನಗಳ ಸಂಕಲನ ‘ಮಂಗಳ ಗಂಗೆ ‘ ಯನ್ನು ನಮ್ಮ ಈ ಪ್ರೀತಿಯ ಗುರುಗಳಿಗೆ ಅರ್ಪಿಸಿದೆವು.ನನ್ನ ಮೊದಲ ಕವನ ‘ಸತ್ಯವತಿ ‘ ಪ್ರಕಟ ಆದದ್ದು ೧೯೭೦ರಲ್ಲಿ ಈ ಸಂಕಲನದಲ್ಲಿ.

೧೯೭೦ರಲ್ಲಿ ನಾನು ಕನ್ನಡ ಎಂ.ಎ. ಮುಗಿಸಿ, ಕಲಿತ ಕನ್ನಡ ವಿಭಾಗದಲ್ಲೇ ಉಪನ್ಯಾಸಕನಾಗಿ ಸೇರುವಲ್ಲಿ ಗುರುಗಳ ಆಶೀರ್ವಾದ ಮುಖ್ಯವಾಗಿತ್ತು.ಕೆಲವು ತಿಂಗಳ ಹಿಂದಿನ ಶಿಷ್ಯನನ್ನು ಸಹೋದ್ಯೋಗಿಯೆಂದು ಪ್ರೀತಿಯಿಂದ ಬರಮಾಡಿಕೊಂಡು ಅಧ್ಯಾಪನದ ದೀಕ್ಷೆಯನ್ನು ಕೊಟ್ಟ ಪ್ರೊಫೆಸರ್ , ಸಾಹಿತ್ಯದ ಓದಿನಿಂದ ತೊಡಗಿ ಕನ್ನಡದ ಕೆಲಸಗಳನ್ನು ಮೈತುಂಬಾ ಹಚ್ಚಿಕೊಂಡು ,ಒತ್ತಡಗಳ ನಡುವೆಯೇ ಸುಖವನ್ನು ಕಾಣುವ ದಾರಿಯನ್ನು ನಮಗೆ ತೋರಿಸಿಕೊಟ್ಟರು. ಆಗ ಕನ್ನಡ ವಿಭಾಗದಲ್ಲಿ ಇದ್ದ ನಾವು ನಾಲ್ವರು ಅಧ್ಯಾಪಕರೇ ನಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಜೋಡಿಸಿ, ‘ ಪಲಚಂವಿ ‘ ಪ್ರಕಾಶನವನ್ನು ( ಪರಮೇಶ್ವರ ಭಟ್ಟ , ಲಕ್ಕಪ್ಪ ಗೌಡ ,ಚಂದ್ರಶೇಖರ ಐತಾಳ , ವಿವೇಕ ರೈ ) ಆರಂಭಿಸಿ ,ಪುಸ್ತಕಗಳನ್ನು ಪ್ರಕಟಿಸಿದೆವು. ಕನ್ನಡ ಪುಸ್ತಕಗಳ ಬಗ್ಗೆ ಮಂಗಳೂರು ಪರಿಸರದಲ್ಲಿ ಆಸಕ್ತಿ ತೀರಾ ಕಡಮೆ ಇದ್ದ ಆ ದಿನಗಳಲ್ಲಿ ‘ ಮನೆ ಮನೆಗೆ ಸರಸ್ವತಿ ‘ಎಂಬ ಪುಸ್ತಕ ಮಾರಾಟ ಅಭಿಯಾನವನ್ನು ಆರಂಭಿಸಿದೆವು. ಎಸ್ವಿಪಿ ಅವರು ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಜೊತೆಗೆ ಹೆಗಲಿಗೆ ಚೀಲ ಹಾಕಿಕೊಂಡು ಪುಸ್ತಕಗಳನ್ನು ತುಂಬಿಕೊಂಡು ಬಿಸಿಲಿನಲ್ಲಿ ನಡೆದಾಡುತ್ತಾ ಎಲ್ಲರಲ್ಲೂ ತಮ್ಮ ನಗೆ ಮಾತುಗಳಿಂದ ಉತ್ಸಾಹವನ್ನು ತುಂಬುತ್ತಾ ,ಮನೆಯಿಂದ ಮನೆಗೆ , ಅಂಗಡಿಯಿಂದ ಅಂಗಡಿಗೆ ಅಲೆಯುತ್ತಾ ಕನ್ನಡ ಪುಸ್ತಕ ಮಾರಾಟ ಮಾಡುವ ಕಾಯಕವನ್ನು ಕೈಕೊಂಡರು.

ಯಕ್ಷಗಾನದ ಮಾತುಗಾರಿಕೆ ಮತ್ತು ಪ್ರದರ್ಶನದಿಂದ ವಿಶೇಷ ಪ್ರಭಾವಿತರಾಗಿದ್ದ ಪ್ರೊಫೆಸರ್ , ಅನೇಕ ತಾಳಮದ್ದಲೆಗಳನ್ನು ಏರ್ಪಡಿಸಿದರು. ಆಗ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ವಸ್ತು ಪ್ರದರ್ಶನದ ಟೆಂಟಿನ ಒಳಗಡೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಬಯಲಾಟ ಸ್ಪರ್ಧೆಯನ್ನು ಏರ್ಪಡಿಸಿದರು. ವಿದ್ಯಾರ್ಥಿಗಳಾಗಿದ್ದ ನಾವು , ವಸ್ತು ಪ್ರದರ್ಶನದೊಳಗಡೆ ಕನ್ನಡ ಪುಸ್ತಕಗಳ ಸ್ಟಾಲ್ ತೆರೆದು ಪುಸ್ತಕ ಮಾರಾಟ ಮಾಡಿದ್ದು ,ರಾತ್ರಿಯಿಡೀ ಯಕ್ಷಗಾನ ಬಯಲಾಟ ಏರ್ಪಾಡು ಮಾಡಿದ್ದು – ಇವೆಲ್ಲ ರೋಮಾಂಚಕ ಅನುಭವಗಳು.ತರಗತಿಯಲ್ಲಿ ಕಾವ್ಯವನ್ನು ತುಸು ಲಂಬಿಸಿ ವ್ಯಾಖ್ಯಾನ ಮಾಡುವುದಕ್ಕೆ ಎಸ್ವಿಪಿ ಹೇಳುತ್ತಿದ್ದ ಪರಿಭಾಷೆ ಎಂದರೆ ‘ ತಾಳಮದ್ದಲೆ ಮಾಡುವುದು’.

ಮಂಗಳೂರಿನ ಸ್ನಾತಕೋತ್ತರ ಕೇಂದ್ರ (೧೯೮೦ರ ಬಳಿಕ ಮಂಗಳೂರು ವಿವಿ ) ಕ್ಕೆ ‘ ಮಂಗಳಗಂಗೋತ್ರಿ ‘ ಎಂದು ನಾಮಕರಣ ಮಾಡಿದವರು ಪ್ರೊಫೆಸರ್ ಎಸ್ವಿಪಿ.ಒಂದು ದಿನ ಪ್ರೊಫೆಸರ್ ಜೊತೆಗೆ ನಾನು ಮತ್ತು ನನ್ನ ಸಹಪಾಟಿ ಗೆಳೆಯ ಎನ್.ಕೆ.ಚನ್ನಕೇಶವ ನಡೆದುಕೊಂಡು ಬರುತ್ತಿದ್ದಾಗ ಆ ಕೇಂದ್ರಕ್ಕೆ ಹೆಸರು ಇಡುವ ಮಾತು ಬಂತು.ಮೈಸೂರಿನ ‘ಮಾನಸಗಂಗೋತ್ರಿ’ ಎಂಬ ಹೆಸರಿನ ಪ್ರೇರಣೆಯಿಂದ ‘ ಮಂಗಳಗಂಗೋತ್ರಿ’ ಹೆಸರನ್ನು ಆ ದಿನ ಸೂಚಿಸಿದವರು ಎಸ್ವಿಪಿ.ಮುಂದೆ ಅದು ಮೈಸೂರು ವಿವಿಯಿಂದ ಅಧಿಕೃತ ಅಂಗೀಕಾರ ಮುದ್ರೆ ಪಡೆಯಿತು.

ಗುರುಗಳೊಂದಿಗೆ ಅನೇಕ ಬಾರಿ ಅವರ ಭಾಷಣದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ.ಎಸ ವಿ ಪಿ ಅವರು , ಕರೆದಲ್ಲಿಗೆಲ್ಲ, ಎಷ್ಟೇ ಕಷ್ಟವಾದರೂ ,ಸರಿಯಾದ ವಾಹನವಿರಲಿ ಇಲ್ಲದಿರಲಿ ಹೋಗಿ, ಎಲ್ಲಾ ಆಯಾಸಗಳನ್ನು ಮರೆತು ,ಸ್ಪೂರ್ತಿದಾಯಕ ಭಾಷಣ ಮಾಡುತ್ತಿದ್ದರು. ಹೋದ ಊರಿನ ಹೆಸರಿನ ಮೆಚ್ಚುಗೆಯ ವಿವರಣೆಯಿಂದ , ತಮ್ಮ ಸಮ್ಮೋಹಿನಿ ವಿದ್ಯೆ ಯಿಂದ ಜನರನ್ನು ಸೆಳೆಯುತ್ತಿದ್ದ ಅವರ ಕಡಲ ಮೊರೆತದ ಭಾಷಣದ ವೈಖರಿಯನ್ನು ಅನೇಕ ಬಾರಿ ಅವರ ಜೊತೆಗೆ ಕೇಳಿದ ಕಂಡ ನೆನಪುಗಳು ಒಂದು ಕನಸಿನ ಜಗತ್ತನ್ನು ಕಟ್ಟಿಕೊಡುತ್ತವೆ.

ನಾವೆಲ್ಲಾ ಕಂಡಿರದ ಕೇಳಿರದ ಊರುಗಳಿಗೆ ಅವರು ಹೋದವರು , ಕಂಡವರು ಮತ್ತು ಜನರ ಹೃದಯಗಳನ್ನು ಗೆದ್ದವರು. ಇಂದಿಗೂ ಆ ಕಾಲದ ಜನರು ಎಸ್ವಿಪಿ ಮಾತುಗಳ

ಧ್ವನಿ ಅನುರಣನವನ್ನು ತಮ್ಮ ಮನೋಭೂಮಿಕೆಯಲ್ಲಿ ಕೇಳಬಲ್ಲವರಾಗಿದ್ದಾರೆ .ಪರಂಪರೆಯ ಬಗ್ಗೆ ಅಪಾರವಾದ ಗೌರವ ,ಹಿರಿಯರ ಬಗ್ಗೆ ಗುರುಗಳ ಬಗ್ಗೆ ಅವರ ಒಳ್ಳೆಯ ಗುಣಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ಎಸ್ವಿಪಿ ಒಬ್ಬ ಅಜಾತ ಶತ್ರು. ಹಸಿದ ಹೊಟ್ಟೆಯಲ್ಲೇ ಪಾಠ ಮಾಡಬಲ್ಲ , ಶ್ರೀಮತಿಯವರ ಕಾಯಿಲೆಯ ವೇಳೆಗೂ ಸರಸ ಭಾಷಣ ಮಾಡಬಲ್ಲ , ಮಗನ ಅಪಘಾತದ ಸುದ್ದಿ ಬಂದಾಗಲೂ ನಡೆಯುತ್ತಿದ್ದ ಸಭೆಯಲ್ಲಿ ಜನ ನಕ್ಕು ನಲಿಯುವಂತೆ ಮಾತಾಡಿ ,ಮತ್ತೆ ಮೈಸೂರಿಗೆ ಮಗನನ್ನು ನೋಡಲು ತೆರಳಿದ , ನೂರು ನೋವುಗಳ ನಡುವೆಯೂ ಸಾವಿರ ಬಗೆಯ ನಗೆ ಚೆಲ್ಲಿದ ಪ್ರೊಫೆಸರ್ ಅವರ ವಿದ್ವತ್ತು ಸಾಧನೆಗಳು , ಅವರ ಸಜ್ಜನಿಕೆಯ ಸರಸತೆಯ ಅತಿ ಉದಾರತೆಯ ಗುಣಗಳ ನಡುವೆ ಬಹಳ ಮಂದಿಗೆ ಕಾಣದೆ ಹೋದದ್ದು ಕನ್ನಡ ಸಾಹಿತ್ಯ ಚರಿತ್ರೆಯ ಒಂದು ವ್ಯಂಗ್ಯ.

ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಪ್ರೊಫೆಸರ್ ಅವರಿಗೆ ಇದ್ದ ಮುಖ್ಯ ಕಾಳಜಿ ಎಂದರೆ ನಿರ್ಮಲ ಪರಿಸರ , ಶುದ್ಧ ನಡವಳಿಕೆ , ಪ್ರೀತಿಯ ಆವರಣ. ಇಂತಹ ಪರಿಸರಕ್ಕೆ ಒಮ್ಮೆ ಹೊಕ್ಕವರು ಮತ್ತೆ ಆ ಸುಖವನ್ನು ಎಂದಿಗೂ ಮರೆಯಲಾರರು.ಅಧಿಕಾರ , ಪ್ರಶಸ್ತಿ , ಬಹುಮಾನ ಇವುಗಳ ಆಸೆ ಎಳ್ಳಷ್ಟೂ ಎಸ್ವಿಪಿ ಅವರಿಗೆ ಇರಲಿಲ್ಲ .ಆದರೆ ಯಾವುದೇ ಪ್ರಶಸ್ತಿ ಬಂದಾಗಲೂ – ತಮಗಾಗಲೀ ಇತರರಿಗಾಗಲೀ – ಅವರು ಹೆಮ್ಮೆ ಪಡುತ್ತಿದ್ದರು. ತಮ್ಮೊಡನೆ ಇರುವವರನ್ನೆಲ್ಲ ಸಂತೋಷ ಪಡುವಂತೆ ಮಾಡುತ್ತಿದ್ದರು.ಹಾಗೆ ನೋಡಿದರೆ ಅವರಿಗೆ ದೊರೆತಿರುವ ಪ್ರಶಸ್ತಿಗಳು ಬಹಳವೇನೂ ಇಲ್ಲ.ಸಣ್ಣ ಸಣ್ಣ ಊರುಗಳಲ್ಲಿ ತಮಗೆ ಮಾಡಿದ ಸನ್ಮಾನಗಳನ್ನು ಅವರು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಜನರ ಪ್ರೀತಿಯನ್ನು ಬಹಳ ದೊಡ್ಡ ಗೌರವ ಎಂದು ಭಾವಿಸುತ್ತಿದ್ದರು.ಈ ಅರ್ಥದಲ್ಲೂ ಎಸ್ವಿಪಿ ಕನ್ನಡದ ಅಪೂರ್ವ ಸಾಹಿತಿ.

ಮಂಗಳೂರಿನ ಕಡಲು , ಪ್ರೊಫೆಸರ್ ಪರಮೇಶ್ವರ ಭಟ್ಟರ ಭಾವಕೋಶದ ಬಹಳ ಪ್ರೀತಿಯ ಭಾಗ. ಅದು ಅವರ ಬದುಕಿನ ರೂಪಕ. ಅವರ ’ಉಪ್ಪು ಕಡಲು ‘ ವಚನ ಸಂಕಲನದಲ್ಲಿ ತಾವು ಕಂಡ ತಾವು ಉಂಡ ಉಪ್ಪನ್ನು ಉಪ್ಪಿನ ಋಣದ ಕಲ್ಪನೆಯನ್ನು ಬಗೆ ಬಗೆಯಾಗಿ ಹೇಳಿಕೊಂಡಿದ್ದಾರೆ. ಕಡಲು ಮತ್ತು ಒಡಲು- ಈ ಕುರಿತು ಎಸ್ವಿಪಿ ಬರೆದ ಈ ವಚನ , ಒಡಲನ್ನು ನೀಗಿಕೊಂಡು ಬಹಳ ಕಾಲದ ಬಳಿಕ ಈಗಲೂ ಅವರ ಸಮಗ್ರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟಿ ಕೊಡುವ ಮತ್ತು ಮನಕ್ಕೆ ಮುಟ್ಟಿಸುವ ಮುತ್ತಿನಂತಹ ಮಾತು :

ನಿನ್ನ ಕಡಲು ಉಪ್ಪಾದರೂ ಅದರೊಳಗೆ

ನಿನ್ನದೆಂಬ ಮುತ್ತುಂಟು ರತ್ನವುಂಟು

ನನ್ನ ಈ ಒಡಲು ಮುಪ್ಪಾದರೂ

ಇದರೊಳಗೆ ನೀನೆಂಬ ಮುತ್ತುಂಟು ರತ್ನವುಂಟು

ಇದು ಕಾರಣ ಆ ಕಡಲೂ ಭವ್ಯ ಈ ಒಡಲೂ ಭವ್ಯ ಸದಾಶಿವ ಗುರು.

‍ಲೇಖಕರು G

February 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. R.narasimhamurthy.

    ನಮಸ್ಕಾರ ಸರ್,
    ತಮ್ಮ ಸಾಂದರ್ಭಿಕ, ಅರ್ಥಪೂರ್ಣ ಲೇಖನ ಇಷ್ಟವಾಯಿತು. ಈ ಬಾರಿ ಪ್ರೊ.ಷ.ಶೆಟ್ಟರ್ ಅವರಿಗೆ ಎಸ್.ವಿ.ಪಿ. ಪ್ರಶಸ್ತಿ ಘೋಷಣೆಯಾಗಿದೆ. ನಾಳೆ ಸಂಜೆ ವಿ.ವಿ. ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.ಪ್ರೊ. ಎನ್. ಜಿ.ಪಟವರ್ಧನ್ ಎಸ್.ವಿ.ಪಿ.ಕುರಿತು ಹಾಗೂ ಡಾ.ಕವಿತಾ ರಯ್ ಅಭಿನಂದನೆಯ ಮಾತನಾಡಲಿದ್ದಾರೆ. ಅಂಕಿತ ಪ್ರಾಯೋಜಕತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಎಸ್.ವಿ.ಪಿ.ಯವರ ಭಾವಗೀತೆಗಳ ಗಾಯನ ತರಬೇತಿಯನ್ನು ಶ್ರೀಮತಿ ರೂಪಶ್ರೀ ನಾಗರಾಜ್ ನೀಡಲಿದ್ದಾರೆ.ಆ ಗೀತೆಗಳನ್ನು ವಿದ್ಯಾರ್ಥಿಗಳು ಸಂಜೆ ಶ್ರೀಯುತ ಏರ್ಯ ಲಕ್ಶ್ಮೀನಾರಾಯಣ ಆಳ್ವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸುತ್ತಾರೆ. -ಆರೆನ್ನೆಂ

    ಪ್ರತಿಕ್ರಿಯೆ
  2. ಜಿ.ಎನ್.ಅಶೋಕ ವರ್ಧನ

    ಅತ್ರಿ ಬುಕ್ ಸೆಂಟರಿನಲ್ಲಿ ನನ್ನೆದುರಿನ ಅರೆ-ಸ್ಟೂಲಿನ ಮೇಲೆ (ಹೌದು,ಅವರ ಬಳಲಿದ ದೇಹ ಸ್ವಸ್ತ ಕೂರಲಾಗದಷ್ಟು ಸಣ್ಣದು)ಕೇವಲ ಮನುಷ್ಯ ಪ್ರೀತಿ, ಪುಸ್ತಕ ಪ್ರೀತಿ ಒಂದು ಪವಿತ್ರ ಕಾರ್ಯವೆನ್ನುವಂತೆ, ನಿತ್ಯ ಬಂದು ಕೂತಿದ್ದು ನಾಲ್ಕು ಮಾತಾಡಿ ಹೋಗುತ್ತಿದ್ದ, ಎಲ್ಲೂ ‘ಮುದಿ-ಹರಟೆಯಾಗದ’, ವ್ಯಾಪಾರಕ್ಕೆ ಅಡ್ಡಿಯಾಗದ ಎಸ್ವೀಪೀ ಔಚಿತ್ಯಪ್ರಜ್ಞೆ ನನ್ನ ನೆನಪಿನಕೋಶದಲ್ಲಿ ನವೀಕರಣಗೊಳಿಸಿದ್ದಕ್ಕೆ ಕೃತಜ್ಞ. ಅನಾರೋಗ್ಯ ತೀವ್ರವಾಗಿ ಕಾಡುತ್ತಿದ್ದಾಗಲೂ ಆ ನಿಮಿತ್ತ ಸಮ್ಮೇಳನಾಧ್ಯಕ್ಷತೆ ತಪ್ಪಿದಾಗಲೂ ಯಾವುದೇ ಮನಃಕಶಾಯವಿಟ್ಟುಕೊಳ್ಳದೆ ಸಮ್ಮೇಳನದ ವೇದಿಕೆಗೆ (ಹೊರಿಸಿಕೊಂಡು) ಬಂದು “ನಿಮ್ಮ ವಿಶ್ವಾಸವೇ ನನ್ನ ಶ್ವಾಸ” ಎಂದ ಎಸ್ವೀಪಿ ನಿಜಕ್ಕೂ ಅಮರ
    ಅಶೋಕವರ್ಧನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: