ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ


ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು ತೌಲನಿಕ ಧರ್ಮ ದ ಪ್ರಾಧ್ಯಾಪಕರಾಗಿ ಜಾಗತಿಕ ಜಾನಪದ ವಿದ್ವಾಂಸರ ಸಾಲಿನಲ್ಲಿ ಮೊದಲನೆಯ ಸ್ಥಾನದಲ್ಲಿ ಇದ್ದವರು . ಜನಪದ ನಂಬಿಕೆಗಳು, ಜನಪದ ವೈದ್ಯ , ಶೋಕ ಗೀತೆಗಳಿಂದ ತೊಡಗಿ ಸಂಸ್ಕೃತಿ , ಅನನ್ಯತೆ ಮತ್ತು ಜಾನಪದದ ಅರ್ಥದಂತಹ ಸೈದ್ಧಾಂತಿಕ ವಿಷಯಗಳಲ್ಲಿ ಮಹತ್ವದ ಕೊಡುಗೆ ಕೊಟ್ಟವರು . ಅವರು ಫಿನ್ ಲೆಂಡ್ ದೇಶದ ಜನಪದ ಮಹಾಕಾವ್ಯ ‘ಕಲೆವಾಲ‘ ವನ್ನು ಹೊಸತಾಗಿ ಅಧ್ಯಯನ ಮಾಡಿದಂತೆಯೇ ಕರೆಲಿಯ ,ತಾಂಜಾನಿಯ ದೇಶಗಳ ಜನಪದ ಚಿಕಿತ್ಸೆಗಳ ಬಗ್ಗೆ ಕೂಡಾ ವಿಶೇಷ ಕೆಲಸ ಮಾಡಿದವರು . ಚೀನ,ಬಾಂಗ್ಲಾದೇಶ ಮತ್ತು ಭಾರತದ ಕರ್ನಾಟಕದಲ್ಲಿ ಯುವ ಸಂಶೋಧಕರಿಗೆ ಜಾನಪದ ಅಧ್ಯಯನ ಮತ್ತು ಕ್ಷೇತ್ರಕಾರ್ಯದ ಬಗ್ಗೆ ಆಯಾ ದೇಶಗಳಿಗೆ ಹೋಗಿ ತರಬೇತಿ ಕೊಟ್ಟವರು . ತುಳುವಿನ ಜನಪ್ರಿಯ ಸಂದಿ ‘ಸಿರಿ’ ಯನ್ನು ಬಹು ಮಾಧ್ಯಮಗಳ ಮೂಲಕ ಸಮಗ್ರವಾಗಿ ದಾಖಲಾತಿ ಮಾಡಿ ,ತುಳುವಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗಲು ಕಾರಣರಾದವರು .
ತುಳುನಾಡಿನ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಮಾಚಾರಿನ ಗೋಪಾಲ ನಾಯ್ಕ ಅವರಿಂದ ಸಮಗ್ರ ಸಿರಿ ಸಂದಿಯನ್ನು ಸಂಗ್ರಹಿಸಿ ಅದನ್ನು ಇಂಗ್ಲಿಷಿಗೆ ಅನುವಾದ ಮಾಡಿ ,ಅದನ್ನು ಎರಡು ಸಂಪುಟಗಳಲ್ಲಿ ಫಿನ್ ಲೆಂಡಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಿದವರು . ಅವರ ಈ ಯೋಜನೆಯಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದೆ .ನನ್ನ ಜೊತೆಗೆ ನನ್ನ ಸಹೋದ್ಯೋಗಿ ಆಗಿದ್ದ ಡಾ . ಚಿನ್ನಪ್ಪ ಗೌಡರು ಇದ್ದರು . ಹಾಂಕೊ ಅವರ ಜೊತೆಗೆ ಅವರ ಪತ್ನಿ ಅನೇಲಿ ಅವರು ಈ ಯೋಜನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು . ಈ ಯೋಜನೆಯು 1 9 9 0 ರಿಂದ 1 9 9 8 ರ ವರೆಗೆ ನಿರಂತರ ನಡೆಯಿತು. ಆ ಅವಧಿಯಲ್ಲಿ ಹಾಂಕೊ ದಂಪತಿ ತುಳುನಾಡಿಗೆ ಪ್ರತೀ ವರ್ಷ ಬಂದು ಅಧ್ಯಯನ ನಡೆಸುತ್ತಿದ್ದರು . ನಾನು ಈ ಅವಧಿಯಲ್ಲಿ ಒಟ್ಟು ಎಂಟು ಬಾರಿ ಫಿನ್ ಲೆಂಡ್ ಗೆ ಹೋಗಿ ,ಸಿರಿ ಕಾವ್ಯದ ಲಿಪ್ಯಂತರ ,ಅನುವಾದ ಮತ್ತು ಅಧ್ಯಯನದ ಕೆಲಸಮಾಡಿದೆ . . ಅನೇಕ ಬಾರಿ ಚಿನ್ನಪ್ಪ ಗೌಡರು ನನ್ನ ಜೊತೆಗೆ ಇರುತ್ತಿದ್ದರು .
2002 ಜುಲೈ 15 : ಹಾಂಕೊ ಬೆಳಗ್ಗೆ ಜಾನಪದ ಬೇಸಗೆ ಶಿಬಿರದಲ್ಲಿನ ತನ್ನ ಉಪನ್ಯಾಸದ ಬರವಣಿಗೆ ಸಿದ್ಧಪಡಿಸಿ ,ವಾಕಿಂಗ್ ಹೋದವರು ಅಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ತನ್ನ ಕೊನೆಯುಸಿರೆಳೆದರು .
ಅವರು ನಿಧನ ಆದ ಹತ್ತನೇ ವರ್ಷದ ನೆನಪಿಗೆ ಅವರು ಕೆಲಸ ಮಾಡಿದ ಸಂಸ್ಥೆ -ತುರ್ಕು ವಿಶ್ವವಿದ್ಯಾನಿಲಯದ ಜಾನಪದ ವಿಜ್ಞಾನ ಮತ್ತು ತೌಲನಿಕ ಧರ್ಮ ವಿಭಾಗದವರು ಅಲ್ಲಿನ ಅಬೊ ಅಕಾಡೆಮಿಯವರ ಸಹಯೋಗದಲ್ಲಿ ಕಳೆದ ವಾರ -ಆಗಸ್ಟ್ 21 -23 ರಂದು ‘ಹಾಂಕೊ ಸಮ್ಮೇಳನ ‘ ವನ್ನು ಆಯೋಜಿಸಿದ್ದರು . ಸಮ್ಮೇಳನದ ಆಶಯ ವಿಷಯ :’ಜಾನಪದ ವಿಜ್ಞಾನ ಮತ್ತು ತೌಲನಿಕ ಧರ್ಮ ದಲ್ಲಿ ಸಿದ್ಧಾಂತದ ಪಾತ್ರ ‘ . ವಿಶೇಷ ಉಪನ್ಯಾಸ ಕೊಡಲು ಬೇರೆ ಬೇರೆ ದೇಶಗಳಿಂದ ಆರು ಮಂದಿ ಹಿರಿಯ ವಿದ್ವಾಂಸರನ್ನು ಆಹ್ವಾನಿಸಿದ್ದರು. ಅವರಲ್ಲಿ ನಾನು ಒಬ್ಬನಾಗಿದ್ದೆ ಎನ್ನುವುದು ನನಗೆ ಅಭಿಮಾನದ ಸಂಗತಿ .ಭಾರತದ ಪ್ರತಿನಿಧಿಯಾಗಿ ನಾನು ಒಬ್ಬನೇ ಇದ್ದೆ . ನಾನು ‘ಕನ್ನಡ ಮತ್ತು ತುಳು ಜನಪದ ಮಹಾಕಾವ್ಯಗಳ ಪಟ್ಯ ,ಸಂದರ್ಭ ಮತ್ತು ಪ್ರದರ್ಶನಗಳ ಸಂಕೀರ್ಣತೆಯ ಬಗ್ಗೆ ದೃಶ್ಯ ದಾಖಲೆಗಳ ಸಹಿತ ವಿಷಯ ಮಂಡಿಸಿದೆ . ಒಟ್ಟು ಹದಿನಾರು ದೃಶ್ಯ ತುಣುಕುಗಳನ್ನು ಬಳಸಿಕೊಂಡೆ . ತುಳುವಿನ ಸಿರಿ ,ಕೋಟಿ ಚೆನ್ನಯ ಮತ್ತು ಭೂತಗಳ ಸಂದಿಗಳು ,ಕನ್ನಡದ ಮಲೆ ಮಾದೇಶ್ವರ ,ಮಂಟೇಸ್ವಾಮಿ ,ಜುಂಜಪ್ಪ ಜನಪದ ಮಹಾಕಾವ್ಯಗಳು ,ಕುಂದಾಪುರ ಪರಿಸರದ ಪಾಣಾರಾಟ , ಯೆಲ್ಲಾಪುರದ ಸಿದ್ದಿಗಳ ಬಯಲಾಟ -ಇವನ್ನು ದೃಶ್ಯ ದಾಖಾಲಾತಿಗಳ ಮೂಲಕ ವಿವರಿಸಿದೆ ಜ಼ೊತೆಗೆ ಹಾಂಕೊ ಅವರ ಜೊತೆಗಿನ ನನ್ನ ಒಡನಾಟದ ವಿವರಗಳನ್ನು ಹಂಚಿಕೊಂಡೆ.
ಹಾಂಕೊ ಅವರು ತಾವು ನಿಧನ ಆಗುವ ಸುಮಾರು ಐದು ತಿಂಗಳ ಮೊದಲು ತುಳುನಾಡಿಗೆ ಬಂದಿದ್ದರು .ಸಿರಿಯ ಬದುಕಿಗೆ ಸಂಬಂಧಿಸಿದಂತೆ ಜನರು ಗುರುತಿಸುವ ದೈಲೊಟ್ಟು .ಸೊನ್ನೆ ಗುರಿ ಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿ ದಾಖಲಾತಿ ಮಾಡಿಕೊಂಡಿದ್ದರು . ಅದರ ದೃಶ್ಯಗಳನ್ನೂ ಅಲ್ಲಿ ತೋರಿಸಿದಾಗ ಇಡೀ ಸಭೆ ಭಾವುಕವಾಯಿತು . ಅಳಿದ ಮೇಲೆ ಉಳಿಯುವುದು ನಾವು ಮಾಡಿದ ಅಪೂರ್ವ ಸಾಧನೆಯ ಕೆಲಸಗಳು ಮಾತ್ರ . ಹದಿನಾಲ್ಕು ವರ್ಷಗಳ ಬಳಿಕ ಹಾಂಕೊ ಇಲ್ಲದ ಆ ಕಾರ್ಯಕ್ರಮದ ಮೂರು ದಿನವೂ ಹಾಂಕೊ ಹೆಸರಿನ ಪ್ರಾಣವಾಯು ಅಲ್ಲೆಲ್ಲ ಸುತ್ತು ಸುಳಿಯುತ್ತಿತ್ತು .
ಹಾಂಕೊ ಸಮ್ಮೇಳನದ ಕೆಲವು ಚಿತ್ರಗಳು ಇಲ್ಲಿವೆ.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

August 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: