ಮಮತಾ ರಾವ್ ಓದಿದ ‘ಪೋಸ್ಟ್ ಬಾಕ್ಸ್ ನಂ 203 ನಾಲಾಸೊಪಾರಾ’

ಮಮತಾ ರಾವ್

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ  ವಿಶಿಷ್ಟ  ಹಿಂದಿ ಕಾದಂಬರಿಯ ಕುರಿತಾದ ಒಳನೋಟ 

ವೈದ್ಯಕೀಯ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಗುದದ್ವಾರವಿಲ್ಲದೆ ಜನಿಸುವ ಮಕ್ಕಳ ಸಂಖ್ಯೆ ಪ್ರತಿ ಐದು ಸಾವಿರಕ್ಕೆ ಒಂದು. ಆ ಮಗುವಿನ ದೋಷವನ್ನು ದೂರಮಾಡಲು ಹಂತಹ೦ತದಲ್ಲಿ ಶಸ್ತ್ರಕ್ರಿಯೆಗಳನ್ನು ಮಾಡಿಸಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾ ಮಗುವಿನೊಂದಿಗೆ ತಾವೂ ಯಾತನೆ ಪಡುತ್ತಾ ಆಶಾದಾಯಿಗಳಾಗಿ ಬದುಕುವ ಎಷ್ಟೋ ಜನರು ನಮ್ಮ ನಡುವಿದ್ದಾರೆ. ಅವರಲ್ಲೊಬ್ಬಳು ನನ್ನ ಸಹುದ್ಯೋಗಿಯೇ ಆಗಿದ್ದ ಕಾರಣ ಅವಳ ಚೊಚ್ಚಲ ಕೂಸಿನ ನರಕಯಾತನೆ, ತಾಯಿಯ ಅಸಹಾಯಕತೆ ಎಲ್ಲವನ್ನೂ ಹತ್ತಿರದಿಂದ ಗಮನಿಸುವ ಸಂತೈಸಲು ತಿಳಿಯದೆ ಅಸಹಾಯಕತೆಯಿಂದ ಒದ್ದಾಡುವ ಪರಿಸ್ಥಿತಿ ನನಗೊದಗಿತ್ತು.

ಇನ್ನು ಮೂಕ ಕಿವುಡ ಅಂಧ ಇತರ ಅಂಗವಿಕಲ-ಮತಿಹೀನ ಮಕ್ಕಳನ್ನು ಎದೆಗವಚಿಕೊಂಡು ಬೆಳೆಸುವ ಪಾಲಕರು ಎಲ್ಲೆಲ್ಲೂ ಕಾಣಸಿಗುತ್ತಾರೆ. ಆದರೆ ತಮ್ಮದೇನೂ ತಪ್ಪಿಲ್ಲದೆ ಲಿಂಗನ್ಯೂನತೆ ಅಥವಾ ಲಿಂಗವಿಹೀನನಾಗಿ ಜನಿಸಿದ ಮಗುವಿನ ಕುರಿತಾಗಿ ಜನರಲ್ಲಿ ಯಾಕೆ ಒಂದುರೀತಿಯ ಅಸಡ್ಡೆ?? ಅಂತಹ ಮಗುವನ್ನು ನಿರ್ದಯವಾಗಿ ಯಾಕೆ ತ್ಯಜಿಸುತ್ತಾರೆ? ಸಮಾಜದ ಭಯವೇ? ಅಜ್ಞಾನವೇ? ಇಂಥಹ ಮಕ್ಕಳನ್ನು ಕುಟುಂಬ ವ್ಯವಸ್ಥೆಯಲ್ಲಿ ಒಳಗೊಳ್ಳುವ ಅವಕಾಶ ಯಾಕಿಲ್ಲ? ಯಾಕೆ ತನ್ನವರಿಂದ ದೂರವಾಗಿ ಅನೂಹ್ಯ ಅಸಹ್ಯಕರ ಜಗತ್ತಿನಲ್ಲಿ ಅಸಹಾಯಕತೆಯಿಂದ ಪರ್ಯಾಯವಿಲ್ಲದೆ ಜೀವಚ್ಛವದಂತೆ ಬದುಕು ಸಾಗಿಸುತ್ತಿರುವ ಆ ಮುಗ್ಧ ಮನಸ್ಸು ಎಷ್ಟೆಲ್ಲಾ -ಶಾರೀರಿಕ-ಮಾನಸಿಕ-ಯಾತನೆಗಳನ್ನು ಅನುಭವಿಸಬೇಕಾಗುತ್ತದೆ. ಯಾಕಾಗಿ? ಇದಕ್ಕೆ ಕೊನೆಯಿಲ್ಲವೇ?
ತೃತೀಯ ಲಿಂಗಿಗಳ ಗುಂಪು ಎಲ್ಲಿ ಮಗು ಜನಿಸಿದರೂ ಧಿಡೀರನೆ ಪ್ರತ್ಯಕ್ಷವಾಗಿ ಮಗುವಿಗೆ ಆಶೀರ್ವದಿಸುವ ನೆಪದಲ್ಲಿ ಲಿಂಗ ಪರೀಕ್ಷಿಸುವ ಪರಿಪಾಠದ ಹಿಂದೆ ಎಷ್ಟೆಲ್ಲ ಗೂಢಾರ್ಥಗಳು ಅಡಗಿವೆ ಎನ್ನುವುದನ್ನು ಅರಿಯದವರು ಯಾರು? ಅಕ್ಕಯ್ ಪದ್ಮಶಾಲಿ, ರೇವತಿ, ಮಂಜಮ್ಮ ಜೋಗತಿ ಮುಂತಾದವರ ಬದುಕಿನ ವ್ಯಥೆಯನ್ನು ಅವರ ಆತ್ಮಕಥಾನಕದ ಮೂಲಕ ಓದಿ; ‘ಅವನಲ್ಲ ಅವಳು’, ‘ಹರಿಕಥಾಪ್ರಸಂಗ’ ಇತ್ಯಾದಿ ಚಲನಚಿತ್ರಗಳ; ‘ಅಕ್ಷಯಾಂಬರ’ದ೦ತಹ ಅಧ್ಬುತ ನಾಟಕಗಳ ಮಾಧ್ಯಮಗಳಲ್ಲಿ ಗಂಡಿನ ದೇಹದೊಳಗೆ ಹುದುಗಿರುವ ಹೆಣ್ಣನ ತೊಳಲಾಟವನ್ನು ಕಣ್ಣಾರೆ ಕಂಡವರು ಇಂತಹ ಸಹಜೀವಿಗಳ ಕುರಿತು ಸಹಾನೂಭೂತಿಯಿಂದ ವರ್ತಿಸಲಾರಂಭಿಸಿರುವುದು ಸ್ವಾಗತಾರ್ಹ. ಕಾನೂನು ಕೂಡ ತೃತೀಯ ಲಿಂಗಿಗಳ ಬದುಕನ್ನು ಸಹ್ಯವಾಗಿಸುವ ದಿಕ್ಕಿನಲ್ಲಿ ಬಹಳಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಆದರೆ ಶಿಶ್ನವಿಲ್ಲದೆ ಜನಿಸಿಯೂ ಗಂಡಾಗಿಯೇ ಇರಬಯಸುವ ಉದಾಹರಣೆಗಳು ಅಪರೂಪ.

ಒಂದರಿ೦ದ ಮೂರು ಕೋಟಿ ಮಕ್ಕಳಲ್ಲಿ ಒಂದು ಗಂಡುಮಗು ಶಿಶ್ನವಿಲ್ಲದೆ ಜನಿಸುವುದೆಂದು ವೈದ್ಯಕೀಯ ಅಧ್ಯಯನ ಕಂಡುಕೊ೦ಡಿದೆ. ಇತ್ತೀಚೆಗಷ್ಟೆ ೨೦೧೯ರಲ್ಲಿ ಟರ್ಕಿಯಲ್ಲಿ ಇಂತಹ ಮಗು ಜನಿಸಿದ ಸುದ್ಧಿ ಗಮನ ಸೆಳೆದಿತ್ತು. ಯು.ಕೆ.ಯಲ್ಲಿ ಶಿಶ್ನವಿಲ್ಲದ ಪುರುಷನಿಗೆ ೪೫ನೇ ವಯಸ್ಸಿನಲ್ಲಿ (೨೦೧೮ರಲ್ಲಿ) ಶಸ್ತ್ರಕ್ರಿಯೆ ಮಾಡಿ ಶಿಶ್ನವನ್ನು ಜೋಡಿಸುವಲ್ಲಿ ಪ್ಲಾಸ್ಟಿಕ್ ಸರ್ಜನ್‌ರು ಸಫಲರಾದರು. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ-ಅಧ್ಯಯನಗಳು ಆಗಬೇಕಿದೆ. ಲೈಂಗಿಕಸುಖ ಹಾಗೂ ಸಂತಾನೋತ್ಪತ್ತಿಯ ಆಸ್ಪದವಿಲ್ಲವೆನ್ನುವುದನ್ನು ಬಿಟ್ಟರೆ ಇಂತಹ ಮಗು ಸಹಜವಾಗಿ ಬದುಕಲು ಶಕ್ಯವಾಗಿರುತ್ತದೆ.

ಇಂತಹ ಅನೂಹ್ಯ ವಿಷಯದ ಕುರಿತಾದ ಹಿಂದಿಯಲ್ಲಿ ಪ್ರಕಟಿತ ‘ಪೋಸ್ಟ್ ಬಾಕ್ಸ್ ನಂ ೨೦೩, ನಾಲಾಸೊಪಾರಾ’ ಕಾದಂಬರಿಯ ಓದು ನಮ್ಮನ್ನು ಚಿಂತಿಸುವ೦ತೆ ಮಾಡುತ್ತದೆ ಹಾಗೂ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಸೂಚಿಸುತ್ತದೆ. ಮಧ್ಯಮವರ್ಗದ ಗುಜರಾತಿ ಕುಂಟು೦ಬವೊ೦ದರಲ್ಲಿ ಜನಿಸಿದ ಇಂಥ ಒಂದು ನತದೃಷ್ಟ ಮಗುವಿನ ಮನದ ಅಳಲು ಈ ಕಾದಂಬರಿಯಲ್ಲಿ ಅನಾವರಣಗೊಂಡಿದೆ.

ಸಮಾಜದ ಅವಹೇಳನೆಗೆ ಅಂಜಿ ಮಗುವನ್ನು ತ್ಯಜಿಸುವ ಪರಿವಾರವು ಆತ ಅಪಘಾತದಲ್ಲಿ ಸತ್ತನೆಂಬ ಪುಕಾರು ಹಬ್ಬಿಸಿ ಮನೆಮಾರಿ ದೂರದೂರಿಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕಾದ ಪರದಾಟ; ಮನಸ್ಸಿಲ್ಲದ್ದಿದ್ದರೂ ಕೈಯಾರೆ ತೃತೀಯ ಲಿಂಗದ ಗುಂಪಿಗೆ ಒಪ್ಪಿಸಬೇಕಾಗಿ ಬಂದ ತಾಯ ಕರುಳಿನ ಮೌನ ರೋದನ; ತನ್ನ ತಪ್ಪೇನೆಂದು ತಿಳೀಯದೆ ಆಘಾತಕ್ಕೊಳಗಾದ ದುರದೃಷ್ಟ ಮಗುವಿನ ಬದುಕಿನ ವ್ಯಥೆ; ಅಚಾನಕಾಗಿ ಮನೆ ಫೋನ್ ನಂ ಸಿಕ್ಕಿ ತಾಯಿಯೊಡನೆ ಮಾತನಾಡುವ ಅವಕಾಶ ಸಿಕ್ಕರೂ ಬಹಿರಂಗಗೊಳಿಸಲಾಗದ ಅನಿವಾರ್ಯತೆ; ಒಪ್ಪಂದದ೦ತೆ ಮನೆಯಲ್ಲಿ ಇನ್ಯಾರಿಗೂ ತಿಳಿಯದಂತೆ ಪಕ್ಕದಲ್ಲಿರುವ್ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ಬಾಕ್ಸ್ಗೆ ಪತ್ರ ಬರೆಯುವ ಮೂಲಕ ಮತ್ತೆ ಚಿಗುರುವ ಕರುಳಿನ ಬಾಂಧವ್ಯದ ವ್ಯಾಖ್ಯಾನವೇ ಪ್ರಸ್ತುತ ಕಾದಂಬರಿ.

ಇಡಿಯ ಕಾದಂಬರಿಯು ಪತ್ರರೂಪದಲ್ಲಿದೆ. ಇಲ್ಲಿ ಬಿನ್ನಿ / ಬಿಮಲ್ ಅಥವಾ ವಿನೋದ್‌ನ ಪತ್ರಗಳು ಮಾತ್ರ ಇವೆ. ತಾಯಿಯಿಂದ ಬಂದ ಪತ್ರದ ಸಂಕ್ಷಿಪ್ತವಾದ ಒಕ್ಕಣ ಕೆಯನ್ನು ಉಲ್ಲೇಖಿಸುತ್ತಾ ಅದನ್ನು ವಿಶ್ಲೇಷಿಸುತ್ತಾ, ತನ್ನನ್ನು ಮೃತನೆಂದು ಘೋಷಿಸಿ, ಇದ್ದೂ ಇಲ್ಲದಂತಿರುವ ತನ್ನ ಪರಿವಾರದವರ ಬದುಕಿನ ವಿವರಗಳನ್ನು ಆಸಕ್ತಿಯಿಂದ ಪ್ರೀತಿಯಿಂದ ತಿಳಿಯುವ ಅಪೇಕ್ಷೆಯನ್ನು ವ್ಯಕ್ತ ಪಡಿಸುತ್ತಾ ತನ್ನ ಬದುಕಿನ ನೋವನ್ನು ತನ್ನ ಸಾಧನೆಯನ್ನು ತೋಡಿಕೊಳ್ಳುವ ಒಂದೊ೦ದು ಪತ್ರವೂ ನಮ್ಮ ಅಂತಃಕರಣವನ್ನು ಅಲ್ಲೋಲಕಲ್ಲೋಲಗೊಳಿಸುತ್ತದೆ.

ತೃತೀಯಲಿಂಗಿಗಳೊ೦ದಿಗಿದ್ದರೂ ಅವರಂತಾಗಲು ಬಯಸದ ಬಿನ್ನಿ, ಎಲ್ಲಾ ಅಡೆತಡೆಗಳನ್ನು, ನರಕಯಾತನೆಗಳನ್ನು, ಅಪಮಾನ ಅವಮಾನಗಳನ್ನು ಮೀರಿ ವಿದ್ಯಾಭ್ಯಾಸ ಮೂಲಕ ಸಮಾಜದಲ್ಲಿ ಗೌರವ ಸ್ಥಾನ ಪಡೆಯುವ ಸಾಹಸದ ದಾರಿಯಲ್ಲಿ ಮುನ್ನಡಿಯಿಡುತ್ತಾನೆ. ಅನಿವಾರ್ಯವಿಲ್ಲದೆ ಲೈಂಗಿಕ ಶೋಷಣೆಗೆ ಒಳಗಾಗುವ ಅಥವಾ ಭಿಕ್ಷೆ ಬೇಡುವ ನತದೃಷ್ಟರ ಬದುಕಿಗೆ ದಿಕ್ಕು ತೋರಿಸುವ ಮಹತ್ವಾಕಾಂಕ್ಷೆಯ ದಾರಿಯಲ್ಲಿ ಹೆಜ್ಜೆಯಿಟ್ಟ ವಿನೋದ್ ತೃತೀಯ ಲಿಂಗಿಗಳ ಭರವಸೆಯ ಆಶಾಕಿರಣವಾಗಿ ಮೂಡುತ್ತಾನೆ. ಅನಾರೋಗ್ಯದಲ್ಲಿರುವ ತಾಯಿಯನ್ನು ಕೊನೆಬಾರಿಗೆ ಭೇಟಿಯಾಗಲು ಹೊರಟವ ರಾಜಕೀಯದ ಹುನ್ನಾರಕ್ಕೆ ಬಲಿಯಾಗುತ್ತಾನೆ.

ಮಗನ ಮುಖದರ್ಶನಕ್ಕಾಗಿ ಹಾತೊರೆದು ಕೊನೆಯುಸಿರೆಳೆಯುವ ಮುನ್ನ ತಾಯಿ ಬರೆದ ಕ್ಷಮಾಯಾಚನೆಯ ರೂಪದಲ್ಲಿ ವಿಸ್ತೃತವಾದ ಪತ್ರ ದಿನಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ಸಮಾಜಕ್ಕೆ ಹೆದರಿ ಹೆತ್ತವರ ಅಸಡ್ಡೆಯಿಂದಾಗಿ ದೂರವಾದ ಮಗನಿಂದ ಕ್ಷಮೆಯಾಚಿಸುತ್ತಾ ಅವನೂ ಪರಿವಾರದ ಭಾಗವೆಂದು ಘೋಷಿಸುವ ಮೂಲಕ ಅವನಿಗೂ ಆಸ್ತಿಯಲ್ಲಿ ಅವಕಾಶ ಕಲ್ಪಿಸಿದ್ದು ಮಾತ್ರವಲ್ಲ ಆತ ಬಂದು ಇತರ ಮಕ್ಕಳೊಂದಿಗೆ ತನ್ನ ಚಿತೆಗೆ ಅಗ್ನಿಸ್ಪರ್ಷ ಮಾಡುವ ತನಕ ತನ್ನ ದೇಹವನ್ನು ಕಾಯ್ದಿರಿಸಬೇಕೆಂಬ ಕೊನೆಯಾಸೆಯನ್ನು ಬಹಿರಂಗವಾಗಿ ಪ್ರಕಟಿಸಿದ ಪತ್ರ ಕೇವಲ ಬಿನ್ನಿಯ ತಾಯಿಗೆ ಸೀಮಿತವಾಗದೆ ಇಡಿಯ ಸಮಾಜದ ಮನವಿಯಾಗಬೇಕೆನ್ನುವ ಆಶಯವಿಲ್ಲಿದೆ.

ಅಂತಃಕರಣ ಕಲಕುವ ತಾಯಿ-ಮಗನ ಕರುಳಿನ ಸೆಳೆತದ, ಅಗಲುವಿಕೆಯ ನೋವಿನ ಪರಕಾಷ್ಠತೆಯ ಈ ಕಥಾನಕವು ಲೇಖಕಿಯ ನಿಜಜೀವನದ ಅನುಭವದ ಆಧಾರಿತವಾಗಿದೆ. ಆದುದರಿಂದಲೇ ಈ ಕೃತಿಯನ್ನು ಹಾಗೂ ತಾನು ಪ್ರಸ್ತುತ ಕೃತಿಗೆ ಪಡೆದ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಸಹ ಲೇಖಕಿಯು ತಾನು ರೈಲುಪಯಣದ ಸಂದರ್ಭವೊ೦ದರಲ್ಲಿ ಭೇಟಿಯಾದ ನರೋತ್ತಮನ ಮೂಲಕ ಅವನ ತಾಯಿಗೆ ಸಮರ್ಪಿಸಿದ್ದಾರೆ.

ಹಿಂದಿ ಆಧುನಿಕಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದಿರುವ ಚಿತ್ರಾ ಮುದ್ಗಲ್ ಅವರು ಕಥೆ, ಕಾದಂಬರಿ, ನಾಟಕ, ವೈಚಾರಿಕ ಲೇಖನ ಸಂಗ್ರಹ ಹೀಗೆ ಅಪಾರ ಸಾಹಿತ್ಯ ಕೃಷಿ ಮಾಡಿದ್ದು, ಹಲವಾರು ರಾಷ್ಟ್ರೀಯ-ಅಂತರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದವರು. ಪ್ರಸ್ತುತ ಕಾದಂಬರಿಗೆ ೨೦೧೮ರ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರವು ಲಭಿಸಿದೆ.

ಚಿತ್ರಾ ಮುದ್ಗಲ್ ಅವರು ಕೇವಲ ಸಾಹಿತಿಯಾಗಿ ಮಾತ್ರವಲ್ಲ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡವರು. ಸಾಮಾಜಿಕ, ಆರ್ಥಿಕ ಹಾಗೂ ಮಾನವೀಯ ಅಧಿಕಾರಗಳಿಗಾಗಿ ದನಿಯೆತ್ತಿ ಪ್ರತಿಭಟಿಸುವ ವಿವಿಧ ಸಮುದಾಯಗಳ ಮುಖ್ಯವಾಗಿ ಮಹಿಳೆಯರು, ಶ್ರಮಿಕ ವರ್ಗ, ದಲಿತರು ವಿಶೇಷವಾಗಿ ಹೆತ್ತ ಮಕ್ಕಳಿಂದಲೇ ಉಪೇಕ್ಷಿತರಾಗಿ ಬಳಲುತ್ತಿರುವ ಹಿರಿಯನಾಗರಿಕರ ಅಧಿಕಾರಕ್ಕಾಗಿ ಸತತವಾಗಿ ಶ್ರಮಿಸುತ್ತಿರುವ ಮಹಿಳೆ. ಪ್ರತಿಯೊಬ್ಬರೂ ಓದಬೇಕಾದ ಕಾದಂಬರಿಯಿದು.

‍ಲೇಖಕರು Admin

September 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: