ಅವರು ಮರೆಯಾಗುವ ಮುನ್ನ…

ದೇವರಾಜ್ ಹುಣಸಿಕಟ್ಟಿ

ಅದೇ ಕುರುಚಲುಗಡ್ಡದ ಉದ್ದನೆಯ ನಿಲುವಿನ ಧೃಡ ಧ್ವನಿಯ ಅಪ್ಪಟ ದೇಶೀ ಉಡುಗೊಯ ನನ್ನೂರ ಮೇಷ್ಟ್ರು..
ಆ ದಾರಿಯ ಅಂಚಲ್ಲಿ ಇರುವಾಗಲೇ
ನಾವು ಹೊರಳಿ ದಾರಿ ಬದಲಿಸಲು ಕಾರಣರಾದ ಚೆನ್ನೂರ ಮೇಷ್ಟ್ರು…

ಲೇ ದೇವು, ಲೇ ಹುಣಸಿಕಟ್ಟಿ ಎಂದು ಪ್ರೀತಿಯಿಂದ ಉದ್ಗರಿಸಿದವರು…
ಕಂಡೊಡನೆ ಒಂದ್ ಸಣ್ಣ ಭಯಭಕ್ತಿ ಮೂಡುವಂತೆ ನಡೆದುಕೊಂಡವರು…
ನಮ್ಮ ಮನಸ್ಸಿನರಮನೆಯಲ್ಲಿ ಸದಾ ನೆನಪಾಗಿ ಉಳಿದವರು..
ಅವರು ಮರೆಯಾಗುವ ಮುನ್ನ ನನ್ನ ಕವಿತೆಯಾಗಿ ಅರಳಿದವರು….

ಬೆತ್ತದ ರುಚಿ ಬೆಲ್ಲದ ಮಾತು ಆತ್ಮದ ಶುಚಿ ಎಲ್ಲ ಇಟ್ಟುಕೊಂಡವರು..
ನಮಗೂ ತುಸು-ತುಸು ಎಲ್ಲವನು ಉಣಬಡಿಸಿದವರು…
ನಿರಂತರವಾಗಿ ಕಲಿಯುತ್ತ ನಮಗೂ ಒಂದಿಷ್ಟು ಕಲಿಸಿದವರು…
ಅವರು ಮರೆಯಾಗುವ ಮುನ್ನ
ನನ್ನಂತರಂಗದಲ್ಲಿ ಅಚ್ಚಳಿಯದಂತೆ ಉಳಿದವರು…

ಪುಸ್ತಕದ ಪುಟಗಳ ಮೀರಿ ಮಸ್ತಕದಿ ಇಳಿದವರು…
ಚಿರಕಾಲ ಸ್ನೇಹಹಸ್ತದಿ ಕೈ ಹಿಡಿದು ನಡೆಸಿದವರು..
ನನ್ನ ಅಸ್ತಿತ್ವ ಅರಳಿಸಿದವರು ನಾನು ನಾನಾಗಿರಲು ಕಾರಣರಾದವರು…
ಅವರು ಮರೆಯಾಗುವ ಮುನ್ನ ನನ್ನ ಮೆದುವಾಗಿಸಿ ಹದವಾಗಿಸಿ ಕಣ್ಮರೆಯಾದವರು…

ಮಗನಂತೆ ಮನೆಯಲ್ಲಿ ಕಂಡವರು..
ನೆಂಟನಂತೆ ಮನೆಗೆ ಬಂದು ಉಂಡವರು..
ಆಗೀಗ ಸಂತೆಯಲಿ ಕೂಡಿದರೆ ಕೊಬ್ಬರಿಮಿಠಾಯಿಯಂತ ಮಾತ್ ಆಡಿ ಬೆನ್ನ ತಟ್ಟಿ ಮನೆಮಂದಿಯಲ್ಲರ ಯೋಗ ಕ್ಷೇಮ ಕೇಳಿದವರು…
ಅವರು ಮರೆಯಾಗುವ ಮುನ್ನ ಸಿಹಿ ನೆನಪುಗಳ ಬುತ್ತಿ ಬಿಟ್ಟು ಹೋದವರು…

ನನ್ನ ಮದುವೆಗೆ ಬಂದ್ ನೂರು ರೂಪಾಯಿ ಮುಯ್ಯಿ ಮಾಡಿ ವರ್ಷತುಂಬೋದೋರಳಗ ಹರ್ಷ ಮನಿ ತುಂಬಲಿ ಎಂದ್ ಮನಸ್ಸು ತುಂಬಾ ಹರಸಿಹೋದವರು…

ಹಿಂಗ್ ಒಮ್ಮೆ ಸಿಕ್ಕಾಗ ನಡುದಾರಿಯಲ್ಲೇ..
ಮುತ್ತಿನಂತ ಮಗಳ ಕೊಟ್ಟಾನ ದೇವರು ಎಂದವರು..
ನಡಗೊ ಕೈಲಿ
ನನ್ನ ಮಗಳ ಎತ್ತಿ ಮುತ್ತಿಗಿಂತ ಅಮೂಲ್ಯ ಮುತ್ತ ಅವಳ ಕೆನ್ನೆಗೆ ಕೊಟ್ಟು ಮುದ್ದಿಸಿ ಹೋದವರು….

ಮೊನ್ನೆ ಇದ್ದಕ್ಕಿದ್ದಂಗ ಇಲ್ಲಾ ಎಂದ್ ಸುದ್ದಿ ತಿಳಿದಾಗ
ನನಗೆ ಅರಿವಿಲ್ಲದಂತೆ ಕಣ್ಣಂಚಿನ ಕಣ್ಣೀರಲ್ಲಿ ಕರಗಿ ನೆಲಕಚ್ಚಿದವರು…
ನನ್ನ ಮೇಷ್ಟ್ರು ಜಗದಿ ಸುತ್ತಿ ಹುಡುಕಿದರೂ ಮತ್ತೆ ಸಿಗದವರು…

ನನ್ನ ಮೇಷ್ಟ್ರು ಗುರುವಾಗಿ ಚಿರವಾಗಿ ಸ್ಥಿರವಾಗಿ ನೆನಪಿನಂಗಳದಲ್ಲಿ ಉಳಿದವರು…
ಎಂದೂ ಅಳಿಯದವರು..
ಎಂದೂ ಅಳಿಯದವರು…

‍ಲೇಖಕರು Admin

September 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಪ್ರತಿಭಾ ನಂದಕುಮಾರ್

    ಮೊನ್ನೆ ನಮ್ಮ ಪ್ರೊಫೆಸರ್ ಕುಶಾಲಪ್ಪ ಗೌಡ ಅವರು ತೀರಿಕೊಂಡರು. ಇದು ಅವರ ಬಗ್ಗೆಯೂ ಆಗಬಹುದು ..ಥ್ಯಾಂಕ್ಯೂ

    ಪ್ರತಿಕ್ರಿಯೆ
  2. prathibha nandakumar

    ಕವನ ಬಹಳ ಚೆನ್ನಾಗಿದೆ. ನಮ್ಮ ಪ್ರೊಫೆಸರ್ ಡಾ ಕುಶಾಲಪ್ಪ ಗೌಡ ಅವರು ಮೊನ್ನೆ ತೀರಿಕೊಂಡರು. ಕವನ ಅವರಿಗೂ ಅನ್ವಯಿಸುವ ಹಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: