ಮನಸೆಳೆಯುವ ‘ಪುಟ್ಟ ಗೌರಿ’

ಡಿ ಎಸ್ ರಾಮಸ್ವಾಮಿ

ಮಕ್ಕಳ ಸಾಹಿತ್ಯ ಎನ್ನುವುದನ್ನು ಹೇಗೆ ವಿವರಿಸಬೇಕು? ಮಕ್ಕಳಿಗಾಗಿ ದೊಡ್ಡವರು ಬರೆದ ಸಾಹಿತ್ಯವೇ ಅಥವ ಮಕ್ಕಳು ಸ್ವತಃ ಬರೆದ ಸಾಹಿತ್ಯವೇ ಅಥವ ಇನ್ನೂ ಮಕ್ಕಳ ಮುಗ್ಧತೆಯಲ್ಲೇ ಇದ್ದೇವೆಂದು ಅಂದುಕೊಂಡವರು ಬರೆದದ್ದೇ?

ಇತ್ತೀಚೆಗೆ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದು ಮತ್ತು ಸಮ್ಮೇಳನಗಳಲ್ಲಿ ಮಕ್ಕಳನ್ನೇ ಉದ್ಘಾಟನೆಗೆ ಅಧ್ಯಕ್ಷತೆಗೆ ಮತ್ತು ವಿವಿಧ ಗೋಷ್ಠಿಗಳ ಪ್ರಬಂಧ ಮಂಡನೆಗೂ ಆಯ್ಕೆ ಮಾಡುತ್ತಿರುವುದರಿಂದ ಹಿರಿಯ ಮಕ್ಕಳ ಸಾಹಿತಿಗಳನ್ನು ಅವಗಣನೆ ಮಾಡಲಾಗುತ್ತಿದೆಯೆಂದು ಧಂಡಿ ಧಂಡಿ ಮಕ್ಕಳ ಸಾಹಿತ್ಯ ಪ್ರಕಟಿಸಿಯೂ ಅಷ್ಟಾಗಿ ಖ್ಯಾತರಾಗದ ಮಕ್ಕಳ ಸಾಹಿತಿಯೊಬ್ಬರು ಅಲವತ್ತುಕೊಂಡರು. 

ಮಕ್ಕಳು ತಮಗಿರುವ ಸಹಜ ಮುಗ್ಧತೆಯಲ್ಲೇ ಅರಿವನ್ನು ಪಡೆಯುವಲ್ಲಿ ಸಹಕಾರಿಯಾದ ಮತ್ತು ಅವರ ಶಿಕ್ಷಣಕ್ಕೆ ಪೂರಕವೂ ಆದ ತಿಳುವಳಿಕೆಯನ್ನು ಕತೆ, ಕವಿತೆ ಮತ್ತು ಭಾವಾಭಿನಯದ ಮೂಲಕ ಕಟ್ಟಿಕೊಡುವುದನ್ನು ಮಕ್ಕಳ ಸಾಹಿತ್ಯ ಎಂದು ಕರೆಯಬಹುದು.

ಆದರೆ ಪ್ರಸಕ್ತ ಪ್ರಾಥಮಿಕ ಶಾಲೆಗಳ ಪಠ್ಯ ಪುಸ್ತಕಗಳನ್ನು ತಡಕಿದರೆ ಇಂಥ ಸಾಧ್ಯತೆಗಳನ್ನು ಪೋಷಿಸುವುದಿರಲಿ, ಅದರ ಹತ್ತಿರಕ್ಕೂ ಸುಳಿಯದ ಮತ್ತು ಮಕ್ಕಳ ವಯಸ್ಸು ಹಾಗೂ ಕಲಿಕಾ ಸಾಮರ್ಥ್ಯವನ್ನು ಮೀರಿದ ಸಂಗತಿಗಳೇ ಹೆಚ್ಚಾಗಿವೆ.

ಅಲ್ಲದೆ ಇತ್ತೀಚೆಗೆ ಮಾತೃಭಾಷೆಯನ್ನು ನಿರಾಕರಿಸಿ ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನು ಕಲಿಸುವ ಅವಕಾಶ ಇರುವುದರಿಂದ ನಗರ ಪ್ರದೇಶದ ಮತ್ತು ನಗರಗಳಿಗೆ ಹತ್ತಿರದ ಬಹುತೇಕ ಹಳ್ಳಿಗಳ ಮಕ್ಕಳು ಶಿಕ್ಷಣಕ್ಕೆ ಕನ್ನಡಕ್ಕಿಂತ ಆಂಗ್ಲ ಭಾಷೆಯನ್ನೇ ಅನುಸರಿಸುತ್ತಿರುವ ಈ ಕಾಲದಲ್ಲಿ ಮಕ್ಕಳಿಗೆ ಎಂದು ಬರೆಯುತ್ತಿರುವ ಸಾಹಿತ್ಯವನ್ನು ಯಾರು ಓದಬೇಕು?

ಮಕ್ಕಳಿಗೆಂದೇ ಲೇಬಲ್ ಹಚ್ಚಿಕೊಂಡು ಬಂದ ಈ ಬಗೆಯ ಸಾಹಿತ್ಯದಿಂದ ಅದನ್ನು ಬರೆದ ಸಾಹಿತಿ ಗಳಿಸಿದ್ದದಾದರೂ ಏನು ಎನ್ನುವುದನ್ನು ಆಲೋಚಿಸಿದರೆ ನಿರಾಶೆಯೇ ಆಗುತ್ತದೆ. ಏಕೆಂದರೆ ಹೀಗೆ ಸೃಜನೆಯಾದ ಮಕ್ಕಳ ಸಾಹಿತ್ಯ ಆ ಮಕ್ಕಳಿಗೇ ಮುಟ್ಟದೇ ಹೋದರೆ ಅದು ನಷ್ಠವೇ ಅಲ್ಲವೇ?

ಪಂಜೆ, ಹೊಯಿಸಳ, ಪಳಕಳ ಸೀತಾರಾಮ ಭಟ್ಟರೇ ಮೊದಲಾದವರು ಸೃಜಿಸಿದ ಸಾಹಿತ್ಯವು ಅರವತ್ತು ಎಪ್ಪತರ ದಶಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಪಠ್ಯದಲ್ಲಿ ಅಳವಡಿಸುತ್ತಿದ್ದುದರಿಂದ ಮತ್ತು ಗುಂಡಣ್ಣನವರ ಕಿರು ನಾಟಕಗಳನ್ನು ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳೇ ಅಭಿನಯಿಸುತ್ತಿದ್ದರಿಂದ ಆ ಕಾಲದಲ್ಲಿ ಮಕ್ಕಳ ಸಾಹಿತ್ಯ ಎಂಬ ವಿಭಾಗೀಕರಣಕ್ಕೆ ಅರ್ಥವಿತ್ತು.

ಆದರೆ ಯಾವಾಗ ಹುಯ್ಯೋ ಹುಯ್ಯೋ ಮಳೆರಾಯ ಹಾಡನ್ನು ಮರೆತ ಮಕ್ಕಳು rain rain go away, little Johnny wants to play ಎಂದು ಹಾಡಲು ಮೊದಲಿಟ್ಟರೋ ಆವಾಗಲೇ ಹಾಡು ಮತ್ತು ನೀತಿಕತೆಗಳ ಆಗರವಾಗಿದ್ದ ಮಕ್ಕಳ ಸಾಹಿತ್ಯವು ತೋರಿಕೆಯ ಮತ್ತು ಅವಕಾಶವಾದೀ ವಲಯವಾಗಿಯೂ ಬದಲಾಯಿತೇನೋ?

ಏಕೆಂದರೆ ಈ ಕಾಲದ ಮಕ್ಕಳಿಗೆ ಅಜ್ಜನ ಕೋಲಿದು ನನ್ನಯ ಕುದುರೆಯಾಗಲೀ ಮಂಗಗಳ ಉಪವಾಸವಾಗಲೀ ಮುದ್ದು ಬೆಕ್ಕು ಎಲ್ಲಿ ಹೋಗಿತ್ತೆಂಬ ಕುತೂಹಲವಾಗಲೀ ಇಲ್ಲದೆ ಆ ಮಕ್ಕಳೆಲ್ಲ ಪೋಗೋ ಮತ್ತು ಕಾರ್ಟೂನ್ ನೆಟ್ವರ್ಕಿನ ಸೀರಿಯಲ್ಲುಗಳಲ್ಲಿ ಮುಳುಗಿ ಹೋಗಿದ್ದಾರೆ.

ದೂರದ ಹಳ್ಳಿ ಶಾಲೆಗಳಲ್ಲಿ ಇರುವ ಕನ್ನಡ ಶಾಲೆಗಳ ಪಠ್ಯ ಪುಸ್ತಕಗಳಲ್ಲಿ ಅವನು ಬಸವ, ಇವಳು ಕಮಲ ಎಂಬ ಲಿಂಗ ಬೇಧ ನೀತಿಯ ಪಾಠಗಳೇ ಇರುವಾಗ ಆ ಮಕ್ಕಳು ಆಟದ ಜೊತೆಗೇ ಕಲಿಯುತ್ತಾರೆನ್ನುವ ಶಿಕ್ಷಣ ನೀತಿಯ ಆಶಯಕ್ಕೇ ಪೆಟ್ಟುಬಿದ್ದಂತಾಗಿದೆ. ಇಂಥ ಸಂದರ್ಭದಲ್ಲಿ ಪಠ್ಯದ ಜೊತೆಗೇ ಪೂರಕವಾಗಿ ಮಕ್ಕಳ ಸಾಹಿತ್ಯವೆಂಬ ಬೃಹತ್ ಆಕರವನ್ನು ಬಳಸಿಕೊಳ್ಳಬಹುದು‌.

ಅದಕ್ಕೆ ಶಿಕ್ಷಕರಿಗೆ ಸ್ವಂತ ಆಸಕ್ತಿ ಮತ್ತು ಮಕ್ಕಳಿಗೆ ಕಲಿಸಲೇ ಬೇಕೆನ್ನುವ ಕರ್ತವ್ಯಪರತೆ ಇರಲೇ ಬೇಕಾಗುತ್ತದೆ. ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ನಮ್ಮ ಸರ್ಕಾರೀ ನೌಕರರಲ್ಲಿ ಅಂಥದಕ್ಕೆಲ್ಲ ಎಲ್ಲಿ ಪುರುಸೊತ್ತು ಇದ್ದೀತು ಮತ್ತು ಅಕಸ್ಮಾತ್ ಅಂಥ ಅಭಿಲಾಷೆ ಇರುವ ಶಿಕ್ಷಕರಿಗೆ ಯಾರು ಪ್ರೋತ್ಸಾಹ ನೀಡಿಯಾರು?

ಈ ಎಲ್ಲ ಇಲ್ಲಗಳ ‌ನಡುವೆಯೇ ಅಪರೂಪಕ್ಕೆ ಶ್ರೀಮತಿ ಜಯಲಕ್ಷ್ಮಿ ಎನ್ ಎಸ್, ಕೋಳಗುಂದ ಮಕ್ಕಳ ಮುಗ್ಧ ಪ್ರಶ್ನೆಗೆ ಕುತೂಹಲದ ಸಂಗತಿಗಳ ಮೂಲಕ ಉತ್ತರಿಸುವುದು ಕವಿತೆಗಳ ಮೂಲಕ. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಎನ್ ಎಸ್ ಕೋಳಗುಂದ ಈಗಾಗಲೇ “ತಾಯೊಡಲ ತಲ್ಲಣ” ಹೆಸರಿನ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ.

ಫೇಸ್ಬುಕ್‌ನಲ್ಲಿ ಕೂಡ ಕ್ರಿಯಾಶೀಲರಾಗಿರುವ  ಅವರು “ಪುಟ್ಟಗೌರಿ” ಹೆಸರಿನ ಮಕ್ಕಳ ಕವಿತೆಗಳನ್ನು ತುಮಕೂರಿನ ಗೋಮಿನಿ ಪ್ರಕಾಶನದ ೬೭ನೆಯ ಪುಸ್ತಕವಾಗಿ ಪ್ರಕಟಿಸುತ್ತಿದ್ದಾರೆ‌. ಇದೇ ಭಾನುವಾರ ಅರಸೀಕೆರೆಯಲ್ಲಿ ಲೋಕಾರ್ಪಣೆಗೊಳ್ಳಲಿರುವ ಪುಸ್ತಕದ ಕೆಲವು ಕವಿತೆಗಳನ್ನು ಕುರಿತು ಈ ಟಿಪ್ಪಣಿಗಳು.

ಡಾ.ನಾ.ದಾಮೋದರಶೆಟ್ಟರ ಮುನ್ನುಡಿ ಮತ್ತು ವಿಜಯೇಂದ್ರ ಪಾಟೀಲರ ಬೆನ್ನುಡಿ ಈ ಪುಸ್ತಕದ ನೆರವಿಗೆ ಪೂರಕವಾಗಿವೆ‌. ಮುಖಪುಟ ಮತ್ತು ಒಳಪುಟಗಳಲ್ಲಿ ಬಳಸಿರುವ ಚಿತ್ರಗಳೂ ಪುಸ್ತಕದ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಒಟ್ಟೂ ಪುಸ್ತಕದ ಮೇಕಿಂಗ್, ಬಳಸಿರುವ ಕಾಗದ ಮತ್ತು ಒಳಗಿನ ಅಕ್ಷರದ ಫಾಂಟ್ ಕೂಡ ವೃತ್ತಿನಿರತತೆಯ ಪ್ರತೀಕ.

ಒಟ್ಟು ೪೩ ಕವಿತೆಗಳಿರುವ ಈ ಸಂಕಲನದಲ್ಲಿ ಮಕ್ಕಳು ಎತ್ತಬಹುದಾದ ಸಹಜ ಪ್ರಶ್ನೆಗಳಿಗೆ ಸಮಾಧಾನದ ಉತ್ತಗಳ ಜೊತೆಗೇ ಅವರ ಕುತೂಹಲವನ್ನು ತಣಿಸುವ, ಅವರ ಆಟ ಊಟ ಪಾಠಗಳ ಬಗೆಗೆ ತಿಳುವಳಿಕೆಯ ಮಾತುಗಳಿವೆ. ಎಲ್ಲೂ ಅತಿರೇಕಕ್ಕೆ ಹೋಗದ, ಸುಮ್ಮನೆ ನಾನು ಹೇಳಿದ್ದು ಕೇಳು ಎನ್ನುವ ಹಟವಿಲ್ಲದೇ ಚಿಣ್ಣರನ್ನು ಆಕರ್ಷಿಸುತ್ತಲೇ ಆಟದ ಜೊತೆಗಿನ ಪಾಠವಾಗಿಯೂ ಯಶಸ್ವಿಯಾಗಿವೆ.

ಅವೆಲ್ಲಕ್ಕಿಂತ ಮುಖ್ಯವಾಗಿ ಮಕ್ಕಳು ಹಾಡಿಕೊಳ್ಳಲು ಪೂರಕ ಸಂಗೀತದ ಮಟ್ಟಿಗೆ ಹೊಂದಿಸಿ ಮತ್ತೆ ಮತ್ತೆ ರಿಪೀಟ್ ಮಾಡುತ್ತ ಆನಂದಿಸಬಹುದಾದ ಗೇಯತೆ, ಪ್ರಾಸ ಮತ್ತು ನೀತಿಗಳಿರುವ ಹೊತ್ತಿಗೆ ಇದಾಗಿದೆ.

ಪುಕ್ಕವ ತಿರುವುತ ರೆಕ್ಕೆಯ ಬೀಸುತ

ಎಲ್ಲಿಗೆ ಹೊರಟೆ ಎಲೆ ನವಿಲೆ

ಗರಿಗಳ ಬಿಚ್ಚಿ ಕುಣಿಯಲು ನೀನು

ಸ್ವರ್ಗವ ಕಾಣುವೆ ನಾನಿಲ್ಲೆ

ಎಂದು ಮೊದಲಲ್ಲೇ ಆಕರ್ಷಣೆ ಪ್ರಾಸ ಮತ್ತು ಗೇಯತೆಗಳ ಭರಪೂರತೆಯನ್ನು ಹೊಂದಿರುವ “ನವಿಲೇ ನವಿಲೇ” ಪದ್ಯ ಇದ್ದರೆ ಕಡೆಯ ಕವಿತೆ “ಕೊರೋನಾ ಗುಮ್ಮ”

ಹೊರಗಡೆ ಹೋಗದೆ ಒಳಗೇ ಇದ್ದರೆ

ನಮ್ಮಯ ಜೀವವು ಉಳಿಯುವುದು

ತಾನು ಬೆಳೆಯಲು ಆಸರೆ ಸಿಗದೇ

ಕಾಣದ ಗುಮ್ಮನು ಸಾಯುವುದು

ಎಂಬ ಸಹಜ ಸಾಲುಗಳ ಮೂಲಕ ಮಕ್ಕಳ ಮನಸ್ಸನ್ನು ಗೆಲ್ಲುತ್ತಲೇ ಅವರಿಗೆ ತಿಳುವಳಿಕೆ ಕೊಡಲು ಸಶಕ್ತವಾಗಿದೆ.

ಕವನ ಸಂಕಲನಗಳನ್ನು ವಿಮರ್ಶಿಸುವ ರೀತಿಯಲ್ಲಿ ಮಕ್ಕಳ ಕವಿತೆಗಳನ್ನು ಯಾವುದೋ ಕವಿತೆಯ ಮಧದ್ಯ ಸಾಲನ್ನು ಕೋಟ್ ಮಾಡಿ ಬರೆಯುವ ಬದಲು ಇಡೀ ಪದ್ಯವನ್ನು ಓದುತ್ತ ಹಾಡುತ್ತ ಆ ಪದ್ಯದ ಪ್ರಾಸ, ಗೇಯತೆ ಮತ್ತು ಓದುತ್ತಲೇ ಹುಟ್ಟುವ ಆನಂದವನ್ನು ಅನುಭವಿಸುವುದು ಮುಖ್ಯವೆಂದು ಭಾವಿಸಿ ಸಂಕಲನದ ನಾಲ್ಕು ಪದ್ಯಗಳನ್ನು ಇಡಿಯಾಗಿ ಇಲ್ಲಿ ಕೊಟ್ಟಿದ್ದೇನೆ.

ಅವುಗಳ ಒಳಗೇ ಇರುವ ಪಾಠದ ರೀತಿ ನಿಮಗೂ ಇಷ್ಟವಾಗಬಹುದು.

೧. ಕೋಗಿಲೆ

ಹಸಿರ ಮರದ ಮರೆಯಲೇಕೆ

ಕುಳಿತೆ ನೀನು ಕೋಗಿಲೆ

ಬಿಂಕ ತೊರೆದು ಭಯವ ಮರೆತು

ಬಾರೆ ಇಲ್ಲಿ ಈಗಲೆ

ಹಾಲು ಕೊಡುವೆ ಹಣ್ಣನೀವೆ

ಕಾಳು ಕಡಿಯ ತಿನಿಸುವೆ

ನಿನ್ನ ಕೂಡ ಹಾಡಿ ನಲಿವೆ

ಹಾಡು ಕಲಿಸು ಹಾಡುವೆ

ಮೈಮರೆಯದ ಮನುಜನಾರೆ

ನಿನ್ನ ದನಿಯ ಇಂಪಿಗೆ

ನೀನು ಮಾತ್ರ ಮಾರು ಹೋದೆ

ಮಾವಮರದ ಕಂಪಿಗೆ

ಒಮ್ಮೆ ಇಲ್ಲಿ ಬಂದು ಬಿಡು

ಅಳುಕ ಮರೆತು ಹಾಡುತ

ನೀನು ಹಾರಿ ಮುಂದೆ ಸಾಗು

ನಾನು ನಿಲುವೆ ನೋಡುತ

೨. ಅಲ್ಲಿ ನೋಡು ಚಿಟ್ಟೆ

ಅಮ್ಮ ಅಮ್ಮ ಅಲ್ಲಿ ನೋಡು

ಹಾರುತಿರುವ ಚಿಟ್ಟೆ

ಅದರ ಹಾಗೆ ನನಗು ಕೂಡ

ರೆಕ್ಕೆಯೆರಡ ಕಟ್ಟೆ

ರೆಕ್ಕೆ ಬಡಿದು ಹಾರಿ ಹಾರಿ

ಮೋಡದೊಳಗೆ ಹಾಯುವೆ

ಮಳೆಬಿಲ್ಲಿನ ರಂಗಿನಲ್ಲಿ

ಮನದಣಿಯೆ ಮೀಯುವೆ

ಚುಕ್ಕಿಮಣಿಯ ಮೊಗೆದು ತಂದು

ಮಾಲೆ ಮಾಡಿ ಕೊಡುವೆನು

ಪೂರ್ಣಚಂದ್ರ ಪದಕ ಮಾಡಿ

ನಿನ್ನ ಕೊರಳಲಿಡುವೆನು

ನಿನ್ನ ನಾನು ಬೆನ್ನ ಮೇಲೆ

ಹೊತ್ತುಕೊಂಡು ಹಾರುವೆ

ಮೂರುಲೋಕ ಸುತ್ತಿಕೊಂಡು

ಮತ್ತೆ ಮನೆಯ ಸೇರುವೆ.

೩. ಅಪ್ಪನ ಸೈಕಲ್ಲು

ಟ್ರಿಣ್ ಟ್ರಿಣ್ ಟ್ರಿಣ್ ಟ್ರಿಣ್ ಸದ್ದನು ಮಾಡುತ

ಓಡುವ ಅಪ್ಪನ ಸೈಕಲ್ಲು

ಕಾಣೆನು ನಾ‌ನು ಇಂತಹ ಮಜವ

ವೇಗದಿ ಓಡುವ ಬೈಕಲ್ಲು

ಪೆಡಲನು ತುಳಿದರೆ ಓಡುತಲಿತ್ತು

ನನ್ನಯ ನೆಚ್ಚಿನ ಅಂಬಾರಿ

ಪೆಟ್ರೋಲ್ ಬೇಡ ಡೀಸೆಲ್ ಬೇಡ

ಸಾಗುತಲಿತ್ತು ರಹದಾರಿ

ಕಾಡೇ ಇರಲಿ ಮೇಡೇ ಇರಲಿ

ಬೆದರದೆ ಓಡುವ ಸ್ಫೂರ್ತಿಯದು

ಸೌದೆ ಸೊಪ್ಪನು ಹೊರಿಸಲು ಎಂದೂ

ಮುನಿಯದ ಸಹನೆಯ ಮೂರ್ತಿಯದು

ಇಂದಿಗು ಕೂಡ ಅಪ್ಪನ ಸೈಕಲ್

ಕನಸಲಿ ಬಂದು ಕಾಡುವುದು

ಮರೆತೂ ಮರೆಯದ ಅಪ್ಪನ ನೆನಪನು

ಮನದಲಿ ಮೂಡಿಸಿ ಓಡುವುದು

೪. ಕಳ್ಳ ನಾಯಿ

ನಮ್ಮ ಮನೆಯ ನಾಯಿ ಮರಿ

ಕದ್ದು ತಿಂತು ಕಾಯಿ ತುರಿ

ಅಮ್ಮ ಇದನು ಕಂಡಳು

ಕೋಲು ಹಿಡಿದು ಬಂದಳು

ಕುನ್ನಿ ಇದನು ನೋಡಿತು

ಬಾಲ ಮುದುರಿ ಓಡಿತು.

‍ಲೇಖಕರು Avadhi

November 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: