ಕುಶ್ವಂತ್ ಕೋಳಿಬೈಲು ಓದಿದ ‘ಮನಸು ಅಭಿಸಾರಿಕೆ’

ಕುಶ್ವಂತ್ ಕೋಳಿಬೈಲು

ಶಾಂತಿ ಕೆ ಅಪ್ಪಣ್ಣನವರ “ಮನಸು ಅಭಿಸಾರಿಕೆ” ಪುಸ್ತಕ ತರಿಸಿ ಸುಮಾರು ಒಂದು ತಿಂಗಳ ಮೇಲಾಗಿತ್ತು. ಮೊದಲ ಕೆಲವು ಕಥೆಗಳನ್ನು ಓದಿ ಅಲ್ಲಿಗೆ ನಿಲ್ಲಿಸಿದ್ದೆ. ಶಾಂತಿ ಕೆ ಅಪ್ಪಣ್ಣ ಕೊಡಗಿನವರು ಮತ್ತು ಈ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ ಎಂಬ ಅಭಿಮಾನದಿಂದ ಈ ಪುಸ್ತಕವನ್ನು ಕೈಗೆತ್ತಿಕೊಂಡಿದ್ದರೂ ಮೊದಲ ಕೆಲವು ಕಥೆಗಳಾದ ಮುಳ್ಳುಗಳು.. ನನ್ನ ಹಾಡು ನನ್ನದು.. ಕಥೆಗಳು ನನ್ನನ್ನು ಅಷ್ಟಾಗಿ ಆಕರ್ಷಿಸಲಿಲ್ಲ..

ಈ ಕಥೆಗಳು ಬಹಳ ಗ್ಲೋಬಲ್ ವಿಷಯಗಳಾದ ಬಡತನ ಮತ್ತು ದೌರ್ಜನ್ಯದ ತಳಹದಿಯ ಮೇಲೆ ಬರೆದ ಕಥೆಗಳಂತೆ ಓದಿಸಿಕೊಂಡು ಹೋಯಿತು. ‌ಸಾಹಿತಿಯ ಹಿನ್ನಲೆ, ಊರು, ವೃತ್ತಿ, ವಯಸ್ಸು ಮತ್ತು ಲಿಂಗದ ಆಧಾರದಲ್ಲಿ ಅವರು ಬರವಣಿಗೆ ಹೀಗೆ ಇರಬಹುದೆಂದು ನಾವು ಊಹಿಸಿಕೊಳ್ಳುವುದು ಸಹಜ ಮತ್ತು ಓದಲು ಶುರು ಮಾಡಿದಾಗ ಅದು ನಮ್ಮ ಊಹೆಗಿಂತ ವಿಭಿನ್ನವಾಗಿದ್ದಾಗ ವಿಸ್ಮಯವಾಗುವುದೂ ನಿಜ!!

ನಾನು ನಿರೀಕ್ಷಿಸಿದಂತೆ ಕೊಡಗಿನ ಕಾಫಿ‌ ಎಸ್ಟೇಟಿನಿಂದ ಅಥವಾ ಈ ಜಿಲ್ಲೆಯಾದ್ಯಂತ ಹರಡಿಕೊಂಡಿರುವ ಕೇವಲ ಹತ್ತಿಪ್ಪತ್ತು ಅಂಗಡಿಗಳಿದ್ದರೂ “ಟೌನ್” ಎಂದು ಅನಿಸಿಕೊಂಡಿರುವ ಕೊಡಗಿನ ಯಾವುದೇ ಪಟ್ಟಣದಿಂದ ಶಾಂತಿ ಕೆ ಅಪ್ಪಣ್ಣನವರ ಕಥೆಗಳು ಶುರುವಾಗಲಿಲ್ಲ… “ಶಾಂತಿ ಕೆ ಅಪ್ಪಣ್ಣ ತುಂಬಾ ಬೋಲ್ಡಾಗಿ ಬರಿತಾರೆ.. ಅವರ ಕಥೆಗಳನ್ನು ನೀನು ಓದಬೇಕು” ಎಂದು ಕವಯಿತ್ರಿ ಸ್ಮಿತಾ ಅಮೃತ್‌ರಾಜ್ ಬಹಳ ಹಿಂದೆ ಹೇಳಿದ ನೆನಪು. ಬೋಲ್ಡಾಗಿ ಬರೆದ ಕಥೆಗಳ ನಿರೀಕ್ಷೆಯಲ್ಲಿದ್ದ ನನಗೆ ಹೆಚ್ಚಿನ ಬೋಲ್ಡಾಗಿ ಬರೆಯುವವರ ಕಥೆಗಳಂತೆ ಇವರ ಕಥೆಗಳು ಯಾವುದೋ ಲಿವ್ ಇನ್ ರಿಲೇಶನ್ಸ್ಶಿಫ್ ಅಥವಾ ಎಕ್ಸ್‌ಟ್ರಾ ಮರೈಟಲ್ ಎಫೇರ್ ಸುತ್ತ ಸುತ್ತದಿರುವುದು ಅಚ್ಚರಿ ಮೂಡಿಸಿತು..

ಅವರ ಪಯಣ ಕಥೆಯ ಇಂಗ್ಲೀಷ್ ಅನುವಾದವನ್ನು ಅಂತರ್ಜಾಲದಲ್ಲಿ ಓದಿ ಇಷ್ಟಪಟ್ಟ ನಂತರ ಮತ್ತೆ ಮನಸ್ಸು ಅಭಿಸಾರಿಕೆಯನ್ನು ಕೈಗೆತ್ತಿಕೊಂಡೆ. ಇವರ “ಪ್ರಶ್ನೆ” ಕಥೆ ನನ್ನನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಯಿತು. ಯಾವ ಪಾತ್ರಕ್ಕೆ ಸಹಾನುಭೂತಿ ವ್ಯಕ್ತಪಡಿಸಬೇಕೆಂಬ ಗೊಂದಲವನ್ನು‌ ಕಥೆಯು ನನ್ನಲ್ಲಿ ಕೊನೆಗೆ ಉಳಿಸಿಹೋಯಿತು. ಆ ಕಥೆಯಲ್ಲಿ ಬರುವ ಮೂರು ಪ್ರಮುಖ ಪಾತ್ರದಾರಿಗಳಲ್ಲಿ ಇಬ್ಬರ ಕೊಲೆ ಮತ್ತೊಬ್ಬರ ಆತ್ಮಹತ್ಯೆ?! ನಡೆದಿದ್ದರೂ ಅವರವರ ಜಾಗದಲ್ಲಿ ಅವರವರ ನಿಲುವುಗಳು ಸರಿಯಾಗಿಯೆ ಇವೆಯೆಂದು ಅನಿಸಿತು. “ಕರ್ಣನ ಮೇಲೆ ಕುಂತಿಯ ನೆರಳೂ ಇರಬಾರದಿತ್ತು‌.. ಆಗಲಾದರು ಅವನು ಚನ್ನಾಗಿರುತ್ತಿದ್ದ.. ಕುಂತಿ ಇದ್ದೂ ಇಲ್ಲವಾಗಿ ಕರ್ಣನನ್ನು ಕಡೆಯ ತನಕ ಕಾಡಿದಳು” ಎನ್ನುವ. ಸಾಲುಗಳು ನನ್ನನ್ನೂ ಕಾಡಿದವು
ಅದೇ ಕಥೆಯ “ತುಂಬಾ ಭಾವನಾತ್ಮಕವಾಗಿರುವುದರಿಂದ ಬದುಕಿನಲ್ಲಿ‌ ಅನರ್ಥಗಳು ನಡೆಯುವುದು ಹೆಚ್ಚು” ಎಂಬ ಸಾಲನ್ನು‌ ಅಂಡರ್ಲೈನ್ ಮಾಡಿ ನಾನು ಮುಂದಕ್ಕೆ ಹೋದೆ!!

“ಸುಳಿ” ಕಥೆಯಲ್ಲಿ ವಸುಧಳ ಸುಳಿಯಿಂದ ಹೊರಬರಲಾರದ ಶೇಖರ.. “ವೇಷ” ಕಥೆಯಲ್ಲಿ ಸಂಬಂಧಗಳ ವೇಷ ಹಾಕಿ ತರೆಯ ಮೇಲೆ ಬರುವ ಪಾತ್ರಧಾರಿಗಳನ್ನು ಓದುತ್ತಿದ್ದಂತೆ ಶಾಂತಿ ಕೆ ಅಪ್ಪಣನವರ ಪಾತ್ರಗಳು ಕಥೆ ಹೇಳುವ ಶೈಲಿಗೆ ನಾನು ಒಗ್ಗಿ ಹೋಗಿದ್ದೆ. ಸುಂದರ ಮುಖಗಳ ಹಿಂದಿರುವ ತಣ್ಣನೆಯ ಕ್ರೌರ್ಯ, ಮನುಷ್ಯನ ಮನಸಿನ ಹಿಂದಿರುವ ಹಸಿ ಲೆಕ್ಕಾಚಾರಗಳು, ಸಂಬಂಧಗಳ ವ್ಯಾಲಿಡಿಟಿ ಮುಗಿದಂತೆ ಹೊಸಲು ದಾಟಿಕೊಂಡು ಹೋಗುವವರ ನಿಶ್ಚಯಗಳು.. ಹೀಗೆ ಶಾಂತಿ ಕೆ ಅಪ್ಪಣನವರ ಕಥೆಗಳು ಹೆಣ್ಣಿನ ಮನಸ್ಸಿನ ಗೊಂದಲಗಳನ್ನು, ಸಂಬಂಧಗಳ ಹುಟ್ಟಿನ ಬಿಸಿಯುಸಿರು ಮತ್ತು ಸಾವಿನ ನಿಟ್ಟುಸಿರನ್ನು ಹಿಡಿದಿಟ್ಟಿದೆ..

“ದಾರಿ” ಮತ್ತು “ಮನಸು ಅಭಿಸಾರಿಕೆ” ಕಥೆಗಳು ನನಗೆ ಬಹಳ ಕುಷಿ ಕೊಟ್ಟ ಎರಡು ಕೊನೆಯ ಕಥೆಗಳು. ಮನುಷ್ಯನ ಸಣ್ಣತನಗಳನ್ನು ಮತ್ತು ಮನಸ್ಸಿನ ದೌರ್ಬಲ್ಯಗಳನ್ನು ಬಹಳ ಸಹಜವೆನ್ನುವಂತೆ ಬರೆದುಕೊಂಡು ಹೋಗುವುದು ಶಾಂತಿ ಕೆ ಅಪ್ಪಣನವರಿಗೆ ಸಹಜವಾಗಿ ಒಲಿದು ಬಂದಿದ್ದೆ. ಬೇರಯವರ ಕಥೆಗಳಲ್ಲಿ ಬರುವ ಊರಿನ ವರ್ಣನೆ, ಮಳೆಯ ಅಥವಾ ಪ್ರಕೃತಿಯ ಚಿತ್ತಾರಗಳು ಓದಿಸಿಕೊಂಡು ಹೋಗುವಂತೆ ಇವರ ಕಥೆಗಳಲ್ಲಿ ಹೆಣ್ಣಿನ ಮನಸ್ಸಿನ ತುಮುಲಗಳು ನನ್ನನ್ನು ಓದಿಸಿಕೊಂಡು ಹೋಗುವುದರ ಜೊತೆಗೆ ಬೆಚ್ಚಿಬೀಳಿಸಿದವು.

‍ಲೇಖಕರು Admin

June 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: