ಸ್ನಾನದ ಮನೆಯಲ್ಲಿ…

ಸಮತಾ ಆರ್

ಅವತ್ತು ದೀಪಾವಳಿ ಹಬ್ಬ. ಮಲಗಿದ್ದ ಹೈಕಳನ್ನೆಲ್ಲ ಬೆಳಗಿನ ಜಾವ ಐದಕ್ಕೇ ಅವಸರವಸರವಾಗಿ ಏಳಿಸಿದರು. ಕಣ್ಣುಜ್ಜುತ್ತಾ, ಗೊಣಗಿಕೊಂಡು ಎದ್ದರೂ, ಹಬ್ಬ ಅಲ್ಲವಾ, ಹೊಸಬಟ್ಟೆ ಹಾಕೊಬೋದಲ್ಲವಾ, ತಿನ್ನಲು ವಡೆ, ಚಕ್ಕುಲಿ, ಹೊಡೆಯಲು ಪಟಾಕಿ ಎಲ್ಲದರ ಪ್ರಲೋಭನೆ ನಿದ್ದೆ ಮರೆಸಿ ಹೈಕಳೆಲ್ಲ ಎದ್ದು ಕೂರುವಂತೆ ಮಾಡಿತು. ದೊಡ್ಡೋರೆಲ್ಲಾ ಆಗ್ಲೇ ಹೊತ್ತಿಗೆ ಮುಂಚೆ ಎದ್ದು ಬಾಗಿಲು ಸಾರಿಸಿ ರಂಗೋಲಿ ಇಡೋದು, ಕೊಟ್ಟಿಗೆ ದನಕರುಗಳನ್ನು ಆಚೆ ಕಟ್ಟಿ, ಕಸ ತಿಪ್ಪೆಗೆ ಹಾಕೋದು ಮಾಡ್ತಾ ಇದ್ರು.ನಮ್ಮಮ್ಮ ಚಿಕ್ಕಮ್ಮಂದಿರು ಎದ್ದ ತಮ್ಮ ತಮ್ಮ ಹೈಕ್ಳನ್ನೆಲ್ಲ “ಬೇಗ ಹೋಗಿ, ಹಲ್ಲುಜ್ಕೊಳಿ, ಆಮ್ಯಾಲೆ ಯಾರಾದ್ರೂ ಬಂದು ಸ್ನಾನ ಮಾಡುಸ್ತಾರೆ,” ಅಂತ ಬಚ್ಚಲು ಮನೆ ಕಡೆಗೆ ತಳ್ಳಿದರು.

ಕಣ್ಣುಜ್ಜಿಕೊಳ್ಳುತ್ತಲೇ ಬಚ್ಚಲ ಕಡೆ  ಹೊರಟೆವು.ಇದ್ದಿದ್ದು ಒಂದು ಬಚ್ಚಲು, ಹೈಕಳೋ ಏಳೆಂಟು. ಎಲ್ರೂ ಒಟ್ಟಿಗೆ ನುಗ್ಗಿದ್ರೆ ಹೆಂಗೆ. ಅದಕ್ಕೆ ಪಕ್ಕಪಕ್ಕವೇ ಅಂಟಿಕೊಂಡ ಹಾಗೆ ಇದ್ದ ಇನ್ನಿಬ್ಬರು ಮಾವಂದಿರ ಮನೆ ಕಡೆ ಒಂದು ನಾಲ್ಕು ಮಕ್ಕಳ ಕಳಿಸಿದರು. ಅವ್ವ ಕಿರಿಮಗನ ಮನೆಯಲ್ಲಿ ಇದ್ದದ್ದರಿಂದ ನಾವು ರಜೆಗೆ ಹೋದಾಗ ಅಲ್ಲೇ ಇರುತ್ತಾ ಇದ್ದದ್ದು. ಆದ್ರೂ ಮೂರೂ ಮಾವಂದಿರ ಮನೆ ಹೊಕ್ಕಾಡು ತ್ತಿದ್ದದ್ದೇ ಜಾಸ್ತಿ. ಅವರ ಮನೆ ತಿಂಡಿ ತಿಂದು, ಇವರ ಮನೆ ಊಟ ಮಾಡಿ ಮತ್ತೊಬ್ಬರ ಮನೆ ಮಲಗೋದು ಮಾಡಿದ್ದೇ ಹೆಚ್ಚು. ಹಂಗಾಗಿ ಸ್ನಾನಕ್ಕೆ ಯಾರ ಮನೆ ಬಚ್ಚಲು ಖಾಲಿ ಇತ್ತೋ ಅಲ್ಲಿಗೆ ನುಗ್ಗೋದೇ.

ನಾನು ಅವ್ವನ ಮನೆ ಬಚ್ಚಲಿಗೆ ಹೋಗಿ ನೋಡಿದರೆ ಆಗ್ಲೇ ನೀರೊಲೆ ಬೆಂಕಿ ಧಗ ಧಗ ಅಂತ ಕತ್ತಿಕೊಂಡು ಉರಿತಿತ್ತು. ಅವ್ವ ಅಲ್ಲೇ ಕೂತು ನೀರೊಲೆಗೆ ತೆಂಗಿನ ಮಟ್ಟೆ ತುಂಬುತ್ತಾ, ಉರಿ ಸರಿ ಮಾಡುತ್ತಾ ಕೂತಿತ್ತು. ನಾನು ಹಲ್ಲುಜ್ಜಲು ಶುರು ಮಾಡಿದ್ದಷ್ಟೇ, ಅವ್ವ, “ಲೆ ರತ್ನ ಹೈಕ್ಳಿಗೆಲ್ಲ ನೀನ್ ನೀರ್ ಹುಯ್ದು ಬುಡು. ಹೆಂಗುಸ್ರೆಲ್ಲ ವಸಂತನ್ ಮನೆ ನೀರ್ ಹುಯ್ಕೊಳ್ಲಿ. ರಾಮುನ್ ಮನೇಲಿ ಗಂಡಸ್ರು ಸ್ನಾನ ಮಾಡ್ಕೊಳ್ಲಿ,” ಅಂತ ಕೂಗಿ ತನ್ನ ಎರಡನೇ ಮಗಳಿಗೆ ಹೇಳ್ತು.

ನಾನು “ಅಯ್ಯೋ ರತ್ನಕ್ಕನ್ ಕೈಗೆ ಸಿಕ್ರೆ ಮುಗಿತಲ್ಲಪ್ಪ, ಏನ್ ಮಾಡೋದು!, “ಅಂತ ಒಂದರೆಕ್ಷಣ ಹಲ್ಲುಜ್ಜೋದು ಬಿಟ್ಟು ದಂಗಾಗಿ ನಿಂತು ಬಿಟ್ಟೆ. ಯಾಕೆಂದರೆ ರತ್ನಕ್ಕನ್ ಕೈಗೆ ಸಿಕ್ರೆ ಮುಗೀತು ಹೈಕ್ಳ ಕಥೆ ಅಂತನೆ ಅರ್ಥ. ಅವಳೋ ಸ್ನಾನಕ್ಕೆ ಬಚ್ಚಲಲ್ಲಿ ಮಕ್ಕಳಲ್ಲಿ ಯಾರಾದ್ರು ಒಬ್ರನ್ನ ನಿಲ್ಲಿಸಿ, ಸುಡು ಸುಡು ನೀರನ್ನು ಹಂಡೆಯಿಂದ ಮೊಗೆ ಮೊಗೆದು  ಧಬ ಧಬ ಹುಯ್ದು, ಎಡಗೈಯಿಂದ ಸ್ನಾನಕ್ಕೆ ನಿಂತವರ ತಲೆ ಹಿಡಿದುಕೊಂಡು, ರಾತ್ರೆ ನೆನೆಸಿಟ್ಟ ಸೀಗೆಕಾಯಿ ಬೆಳಿಗ್ಗೆ ಒರಳು ಕಲ್ಲಲ್ಲಿ ನುಣ್ಣಗೆ ರುಬ್ಬಿರುವುದನ್ನು, ತಲೆಗೆ ಬಲಗೈಯಿಂದ ಗಸ ಗಸ ತಿಕ್ಕಿ, ತಲೆ ಎಣ್ಣೆ ಎಲ್ಲಾ ಹೋಗೋ ಹಾಗೆ ಉಜ್ಜಿ ತೊಳೆಯುವಾಗ ಆಗುತ್ತಿದ್ದ ನರಕ ಹೇಳಲು ಆಗದು.ಎಷ್ಟು ಕುಯ್ಯೋ ಮರ್ರೋ ಅಂತ ಕಿರುಚಿಕೊಂಡು, ಅರಚಿದರೂ ಬಿಡ್ತಾ ಇರ್ಲಿಲ್ಲ. ಅದು ಸಾಲದು ಅಂತ,ಮೈಗೆಲ್ಲ ಚೆನ್ನಾಗಿ ಸೋಪಾಕಿ, ಮೈ ಉಜ್ಜೋ ಕಲ್ಲಲ್ಲಿ ಹಾಕಿ ತಿಕ್ಕಿದಳು ಅಂದ್ರೆ ಚರ್ಮ ಕಿತ್ತು ಬರೋದು ಒಂದು ಬಾಕಿ. ಅವಳ ಕೈಯಿಂದ ಸ್ನಾನ ಮಾಡಿಸಿಕೊಂಡು ಜೀವಂತ ಹೊರ ಬರ್ತಾ ಇದ್ವಲ್ಲ ಅನ್ನೋದೇ ಒಂದು ಅಚ್ಚರಿ ನಮಗೆ. ಒಂದ್ವಾರ ಸ್ನಾನ ಮಾಡ್ದೇ ಇದ್ರೂ ತಡಿತಿತ್ತು. 

ಇದೆಲ್ಲಾ ಚಕ ಚಕನೆ ಹೊಳೆದು ನಾನು ಬೇಗ ಬೇಗ ಹಲ್ಲುಜ್ಜಿಕೊಂಡು,ನನ್ನ ಹೊಸಬಟ್ಟೆ ಎತ್ತಿಕೊಂಡು,”ಅಮ್ಮಾ ನಾನು ಶಶಿ ಅತ್ತೆ ಮನೇಲಿ ಸ್ನಾನಕ್ಕೆ ಹೊಯ್ತಿನಿ,” ಎಂದು ಹೇಳಿ,ಅಮ್ಮ,”ವಸಿ ನಿಂತ್ಕೋ ಇಲ್ಲಿ,”ಅನ್ನುತ್ತಿದ್ದರೂ ಕೇಳದೆ ಪಕ್ಕದ ಮನೆಗೆ ದೌಡು ಹೊಡೆದೆ.ಶಶಿ ಅತ್ತೆ ಮನೇಲಿ ಬಚ್ಚಲು ಮನೆಗೆ ಹೋಗಿ ನೋಡಿದರೆ ಅತ್ತೆ ಆಗಲೇ ಸ್ನಾನ ಮುಗಿಸಿ,ತಲೆ ಕಟ್ಟಿಕೊಂಡು, ಊದೊ ಕೊಳವೇಲಿ ಒಲೆ ಊದ್ತ ಮುಂದೆ ಸ್ನಾನಕ್ಕೆ ಬರೋರಿಗೆ ನೀರು ಕಾಯುಸ್ತಾ ಇತ್ತು.ನನ್ನ ನೋಡಿ, “ಮಗ ವಸಿ ಇರು ರುಕ್ಕಕ್ಕನು ಇಲ್ಗೆ ಬತ್ತದೆ ಸ್ನಾನಕ್ಕೆ, ನೀನು ಅವುರ್ದ್ ಆದ್ಮೇಲ್ ಮಾಡು,”ಅಂತು.ಅಷ್ಟರಲ್ಲಿ ಅಲ್ಲಿಗೆ ಬಂದ ರುಕ್ಕತ್ತೆ, “ಮಗ ನಮ್ಮನೆ ಬಚ್ಚಲಲ್ಲಿ ಗಂಡ್ ಹೈಕ್ಳು ಸ್ನಾನ ಮಾಡ್ತಾವೆ, ವಸಿ ಅವ್ವುಂಗೆ ಹೋಗಿ ಅವುರ್ಗೆಲ್ಲ ಬೆನ್ ಉಜ್ಜೋಕೆ ಹೇಳ್ ಬರೋಗು.” ಅಂತು.”ಸರಿ” ಅಂತ ಹೇಳಿ ಮತ್ತೆ ವಾಪಸ್ ಅವ್ವನ್ಮನೆ ಬಚ್ಚಲಿಗೆ ಹೋಗಿ ಅವ್ವನಿಗೆ ಹೇಳಿದಾಗ ಅವ್ವ ಒಲೆ ಬೆಂಕಿ ನೂಕೋದು ಬುಟ್ಟು ಎದ್ದು ಹೋಯ್ತು.

ಅಷ್ಟರಲ್ಲಿ ಮಾವನ ಮಗಳು ಪುಟ್ಟಿಗೆ ಸ್ನಾನ ಮಾಡಿಸ್ತಾ ಇದ್ದ ರತ್ನಕ್ಕನ  ಕಡೆ ನನ್ನ ಗಮನ ಹೋಯ್ತು.ಅವಳೋ ಆ ಮೂರು ವರ್ಷದ ಮಗುವ ಬಚ್ಚಲಲ್ಲಿ ಗದುಮಿ ಕೂರಿಸಿ, ತಲೆಗೆ ಸೀಗೆ ಹಾಕಿ ಗಸ ಗಸ ತಿಕ್ಕಿ ತಿಕ್ಕಿ ಇಡ್ತಾ ಇದ್ಲು. ಪಾಪ ಪುಟ್ಟಿ ಕುಕ್ಕುರುಗಾಲಲ್ಲಿ ಮುದುರಿ ಕುಳಿತು,”ಥೂ ಹುಚ್ಚಿ, ಥೂ ಹುಚ್ಚಿ, ಥೂ ಹುಚ್ಚಿ,” ಅಂತ ಬೈಯುತ್ತಾ , ಅಳುತ್ತಾ ಇದ್ದರೂ ಅಲ್ಲಾಡದೆ ಕುಳಿತು ಸ್ನಾನ ಮಾಡಿಸ್ಕೊಳ್ತಾ ಇತ್ತು. ಇನ್ನು ಅಲ್ಲಿ ನಿಂತರೆ ನನಗೂ ಅದೇ ಗತಿ ಅನ್ನಿಸಿ ತಿರುಗಿ ಶಶಿಯತ್ತೆ ಮನೆ ಕಡೆ ಓಟ ಹೊಡ್ದೆ.ಅಲ್ಲಿ ಹೋಗಿ ನೋಡಿದರೆ ಆಗ್ಲೇ ರುಕ್ಕತ್ತೆ ಸ್ನಾನ ಮುಗಿತಾ ಬಂದು,ಶಶಿಯತ್ತೆ ವಾರಗಿತ್ತಿಯ ಬೆನ್ನುಜ್ಜುತ್ತಾ ಇತ್ತು.ನನ್ನ ನೋಡಿ” ಇರು ಮಗ,ಅತ್ತೆದು ಆಗಲಿ,ಅಲ್ಲೇ ಕೂತಿರು ” ಅಂತು.ನಾನು ಮೆಟ್ಟಿಲ ಮೇಲೆ  ಕಾಯುತ್ತಾ ಕುಳಿತು ಅವರಿಬ್ಬರ ಮಾತು ಕೇಳಿಸಕೊಳ್ಳತೊಡಗಿದೆ.ಶಶಿಯತ್ತೆ,”ಅಲ್ಲ ಕಣ್ ರುಕ್ಕಕ್ಕ, ಆ ಚಿಕ್ಕಣ್ಣಂಗ್ ಏನ್ ಬಂದದೆ, ಈ ವಯಸ್ಸಲ್  ಎರಡ್ನೇ ಮದ್ವೆ ಆಗಕ್ ಹೊಂಟವ್ನಲ್ಲ,” ಎಂದು ನಕ್ಕಿತು.ರುಕ್ಕತ್ತೆ “ಅಯ್ಯೋ’ ಬೆನ್ನುಜ್ಜಿ ನೀರ್ ಹುಯ್ಯೋಕ್ ಒಬ್ರು ಬ್ಯಾಡ್ವ’, ಅಂತಾ ಅವ್ನಂತೆ ಕಣ್ರೋ,”ಅಂತು.ನನಗೆ ನಗು ತಡೆಯಲಾಗಲಿಲ್ಲ.” ಅತ್ತೇ ಬೆನ್ನುಜ್ಜೋಕೇ ಅಂತ ಯಾರಾದ್ರೂ ಮದ್ವೆ ಆಯ್ತರಾ! ಕೆಲ್ಸ ದವ್ರ ಹತ್ರ ಉಜ್ಜುಸ್ಕೊಂಡ್ರೆ ಆಕ್ಕಿಲ್ವಾ,!”ಎಂದು ಕೇಳಿದೆ.ಅತ್ತೆಯವರಿಬ್ಬರೂ ,”ನಿಂಗ್ ಅದೆಲ್ಲ ಗೊತ್ತಾಗಲ್ಲ ಬುಡವ್ವ,” ಎಂದು ಜೋರಾಗಿ ಒಬ್ಬರನೊಬ್ಬರು ತಿವಿದು ಕೊಳ್ಳುತ್ತಾ ನಕ್ಕರು. ಅಷ್ಟರಲ್ಲಿ ರುಕ್ಕತ್ತೆ ಸ್ನಾನ ಮುಗಿದು ಶಶಿಯತ್ತೆ ನನ್ನ ಸ್ನಾನಕ್ಕಿಳಿಯಲು ಹೇಳ್ತು.

ಬಚ್ಚಲಿಗೆ ಇಳಿದು ತಲೆ ಕೂದಲು ಬಿಚ್ಚಿ ಹರವಿಕೊಂಡು ಮಣೆ ಮೇಲೆ ಕುಕ್ಕರುಗಾಲಲ್ಲಿ ಕೂತೆ.ಅತ್ತೆ ಹಂಡೆಯಿಂದ ಮೊಗೆ ಮೊಗೆದು ಹದ ಬಿಸಿಯ ನೀರು ಹುಯ್ದು, ಸೀಗೆಯಿಂದ  ನೋವಾಗದಂತೆ ಚೆನ್ನಾಗಿ ತಲೆ ತಿಕ್ಕಿ,ಬೆನ್ನುಜ್ಜಿ ನೀರೆರೆಯಿತು. ಸುತ್ತಾ ಹರಡಿದ್ದ ಹೊಗೆಯ ವಾಸನೆ, ನೀರೊಲೆಯ ಕಾವು, ಸೀಗೆಯ ಘಾಟು,ಮೈಸೂರು ಸ್ಯಾಂಡಲ್ಲಿನ ಪರಿಮಳ ಎಲ್ಲಾ ಸೇರಿ  ಬಚ್ಚಲು ಮನೆಗೆ ಅದರದೇ ಆದ ಬೆಚ್ಚನೆಯ ವಾತಾವರಣ ಸೃಷ್ಟಿಸಿ ಬಿಟ್ಟಿದ್ದವು. ಅತ್ತೆ ಹದವಾಗಿ ಎರೆಯುತ್ತಿದ್ದಾಗ ಇಡೀ ದಿನ ಬೇಕಾದರೂ ಸ್ನಾನ ಮಾಡೋಣ ಅನ್ನಿಸಿ ಬಿಟ್ಟಿತು.

ಸ್ನಾನವಾದ ನಂತರ ಅತ್ತೆ ತಲೆವರೆಸಿ, ಬಿಗಿಯಾಗಿ ಒಂದು ಟವಲ್ ಕಟ್ಟಿ, “ತಲೆ ಆರೋವರ್ಗೂ ಬಿಚ್ಕೊಬೇಡ ಕಣಪ್ಪ, ಶೀತ ಆಯ್ತದೆ.ಈಗ ನಮ್ ವಾಣಿ ಸ್ನಾನಕ್ ಬತ್ತಳೆ, ಇಲ್ಲೇ ಕೂತಿರು, ಅವಳ್ಗೆ ವಸಿ ಬೆನ್ನುಜ್ಜಿ ಕೊಡು, ನಾನು ಬಾಗ್ಲುಗೆ ರಂಗೋಲಿ ಹಾಕ್ಬುಟ್ಟು ಬತ್ತಿನಿ”. ಎನ್ನುತ್ತಾ ತಮ್ಮ ನೆಂಟರ ಹುಡುಗಿ,ಹಬ್ಬಕ್ಕೆ ಅಂತ ಬಂದಿದ್ದ ವಾಣಿಯ ‘ಸ್ನಾನಕ್  ಬಾ’ ಎಂದು ಕರೆದು ಹೋದರು.ವಾಣಿ ಬಂದವಳು ” ಅಕ್ಕ ನಾನು ಪಷ್ಟು ಹಲ್ಲುಜ್ಕೊತಿನಿ,ಆಮೇಲೆ ಸ್ನಾನಕ್ಹೊಯ್ತಿನಿ, “ಅಂದವಳು ಹಲಗೆ ಮೇಲೆ ಇಟ್ಟಿದ್ದ ಒಂದು ಬ್ರಷ್ ಎಳೆದುಕೊಂಡು ಪೇಸ್ಟ್ ಹಾಕಿಕೊಳ್ಳತೊಡಗಿದಳು. ನನಗೆ ಯಾಕೋ ಅನುಮಾನವಾಗಿ,”ಲೆ ವಾಣಿ, ಅದು ನಿನ್ ಬ್ರಶ್ಶ?” ಎಂದು ಕೇಳಿದೆ. ಅದಕ್ಕವಳು, “ಏ ಇಲ್ಲ ಕಣಕ್ಕಾ, ನಾನೇನು ನಮ್ಮೂರಿಂದ ಬ್ರಷ್ ತಂದಿಲ್ಲ, ಇಲ್ಲೇ ಅಷ್ಟೊಂದ್ ಬ್ರಷ್ ಅವಲ್ಲ, ದಿನಾ ಒಂದೊಂದ್ರಲ್ಲಿ ಉಜ್ಕೊತಿನಿ.” ಅಂದಳು. ನನಗೆ ನಗು ತಡೆಯಲಾರದೆ ಅತ್ತೆಗೆ ಓಡಿ ಹೋಗಿ ಚಾಡಿ ಹೇಳಿದೆ. ಅತ್ತೆ ಹಾಕುತ್ತಿದ್ದ ರಂಗೋಲಿ ನಿಲ್ಲಿಸಿ ಬಚ್ಚಲಿಗೆ ಬಂದವರು,” ಲೆ ನಿನ್ ಕುಕ್ಕರ್ಸ, ಮೊದ್ಲೇ ಹೇಳದಲ್ವ,” ಎಂದು ವಾಣಿಗೆ ಬೈದು, ತಮ್ಮ ಮಗನ ಕೂಗಿ ವಾಣಿಗೆ ಹೊಸದೊಂದು ಬ್ರಷ್ ತಂದು ಕೊಡಲು ಹೇಳಿದರು. 

ಹಾಗೆ ಆ ಬೆಳಿಗ್ಗೆ ಇಡೀ ಮೂರೂ ಮನೆ ಬಚ್ಚಲುಗಳಲ್ಲಿ ಹಂಡೆಗೆ ನೀರು ತುಂಬೋದು , ಒಲೆಗೆ ತೆಂಗಿನ ಸೌದೆ ಒಟ್ಟಿ ಕಾಯ್ಸೋದು, ಮನೆ ಜನೆಲ್ಲ ಸ್ನಾನ ಮಾಡಿ ಹೊಸ ಬಟ್ಟೆ ಹಾಕ್ಕೊಳ್ಳೋದ್ರಲ್ಲೇ ಕಳಿತು. ತೆಂಗಿನ ತೋಟದ ಒಳಗಿನ ಮನೆಗಳಾದ್ದರಿಂದ ನೀರು, ಸೌದೆಗೆ ಏನೂ ಬರವಿರಲಿಲ್ಲ. ಇನ್ನು ಬಚ್ಚಲು ಮನೆಗಳೇನು ಈಗಿನ ಹಾಗೆ ಟೈಲ್ಸು,ಶವರ್ರು, ಕಮೋಡು, ಮಿರರ್ರು ತರಹದವೇನು ಅಲ್ಲ. ಒಂದು ಹಂಡೆ ಒಲೆ,ಜಾರದ ತರಕು ನೆಲದ ಬಚ್ಚಲು, ತಣ್ಣೀರು ತೊಟ್ಟಿ,ಗೋಡೆಗೆ ಹೊಡೆದ ಹಲಗೆ ಮೇಲೆ ಒಂದು ಸೀಗೆಪುಡಿ ಚಿಜ್ಜಲು ಪುಡಿ ಡಬ್ಬ, ಮನೆ ಜನಕ್ಕೆಲ್ಲ ಇದ್ದ ಒಂದೇ ಮೈಸೂರು ಸ್ಯಾಂಡಲ್ ಸೋಪ್, ಪೇಸ್ಟ್, ಅವರವರ ಬ್ರಷ್ ಗಳು,ಬಚ್ಚಲು ಗುಡಿಸಲು ಒಂದು ಕಡ್ಡಿ ಬರಲು ಅಷ್ಟೇ ಅವುಗಳ ವೈಭೋಗ. ಅವುಗಳ ಜೊತೆಗೆ ಹಲ್ಲುಜ್ಜಲು, ಮಾವಂದಿರು ಷೇವ್ ಮಾಡಿಕೊಳ್ಳಲು ಒಂದು ಕನ್ನಡಿ ಕಿಟಕಿಗೆ ಸಿಕ್ಕಿಸಿಕೊಂಡು ಇರುತ್ತಿತ್ತು.

ಊರಲ್ಲೇನು,ಭದ್ರಾವತಿಯ ನಮ್ಮ ಮನೆ ಹಾಗೂ ಬಹುತೇಕ ಎಲ್ಲರ ಮನೆಯ ಬಚ್ಚಲು ಮನೆಗಳು ಹಾಗೇ ಇರ್ತಾ ಇದ್ದದ್ದು.ಯಾರಾದರೂ ಚೆನ್ನಾಗಿ ಮನೆ ಕಟ್ಟಿ,ಟೈಲ್ಸ್ ಹಾಕಿಸಿ ಬಿಟ್ಟಿದ್ದಿದ್ದರೆ ಅದೇ ದೊಡ್ಡ ಸುದ್ದಿ. ಇನ್ನು ಬಾತ್ ಟಬ್ ಗಳನ್ನೆಲ್ಲ ಸಿನೆಮಾಗಳಲ್ಲಿ ಮಾತ್ರ ನೋಡಿದ್ದು.ಅಂತ ಒಂದು ಸಮಯದಲ್ಲಿ,ನಾನು ಕಾಲೇಜ್ ನಲ್ಲಿದ್ದಾಗ,ಒಂದಿನ ನಾವೆಲ್ಲಾ ಗೆಳತಿಯರು ಕುಳಿತು ಹರಟುತ್ತಿದ್ದಾಗ,  ನನ್ನ ಗೆಳತಿಯೊಬ್ಬಳು ಅವರಪ್ಪ ಕಟ್ಟಿಸುತ್ತಿದ್ದ  ಹೊಸ ಮನೆಯ ಬಗ್ಗೆ ಕೊಚ್ಚಿಕೊಳ್ಳಲು ತೊಡಗಿದಳು.”ಮನೆಗೆ ಮಾರ್ಬಲ್ ಎಲ್ಲಾ ರಾಜಸ್ಥಾನದಿಂದ ತರಿಸುತ್ತಿದ್ದಾರೆ,ಬಾತ್ ರೂಂಗಳಿಗೇ ಎರಡು ಲಕ್ಷ ಖರ್ಚು ಮಾಡ್ತಾ ಇದ್ದಾರೆ, ಗೊತ್ತೇನ್ರೆ,” ಎಂದು ಬೀಗಿದಳು. ಕೇಳುತ್ತಿದ್ದವರಲ್ಲಿ ಒಬ್ಬಳು ತರಲೆ,” ಲೆ ಜ್ಯೋತಿ,ನಿಮ್ ಬಾತ್ರೂಮ್ನಲ್ಲಿ ಏನು ಮೇಲೆ ಕೆಳಗೆ,ಅಕ್ಕ ಪಕ್ಕ ಎಲ್ಲಾ ಬರೀ ಮಿರರ್ ವರ್ಕ್ ಅಂತೆ,ಹೌದೇನೆ!” ಎಂದಾಗ,ಕೇಳುತ್ತಿದ್ದ  ಎಲ್ಲರೂ ಮುಸಿ ಮುಸಿ ನಕ್ಕು,ಜ್ಯೋತಿ ಮುನಿಸಿಕೊಂಡು ಒಂದು ವಾರ ಮಾತನಾಡಿಸದೆ ತಿರುಗಿದ್ದಳು.

ಚಿಕ್ಕಂದಿನಲ್ಲಿ ಇದ್ದ ಬೇರೆ ಬೇರೆ ಬಾಡಿಗೆ, ಕ್ವಾರ್ಟಸ್ ಮನೆಗಳಲ್ಲಿ  ಒಂದೇ ತರಹ ಇದ್ದ ಕೋಣೆ ಅಂದ್ರೆ ನೀರುಮನೆ ಮಾತ್ರ.ಒಲೆ ಉರಿಸಲು ಮಾತ್ರ ತೆಂಗಿನ ಸೌದೆ ಸಿಗ್ತಾ ಇರ್ಲಿಲ್ಲ ಬದಲಿಗೆ ಕಟ್ಟಿಗೆ ಸೌದೆ,ಬೆರಣಿ,ಮರದ ಸಾಮಿಲ್ ನಿಂದ ತಂದ ಹೊಟ್ಟು,ಬತ್ತದ ಚಿಬ್ಬಲು,ಮನೆಯಲ್ಲಿ ಕಾಯಿ ತುರಿದು ಉಳಿದ ಕಂಟಗಳ ಬಳಸ್ತಾ ಇದ್ರು.

ಅಮ್ಮ ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದು, ನೀರೊಲೆ ಉರಿಸಿ,ನೀರು ಗಣ ಗಣ ಕಾಯಿಸುತ್ತಿದ್ದರು.ನಂತರ ಹಂಡೆ ಒಲೆ ಪಕ್ಕದಲ್ಲೇ  ಇರುತ್ತಿದ್ದ ತಣ್ಣೀರ ತೊಟ್ಟಿಯಿಂದ ತಣ್ಣೀರು ಬಕೆಟ್ಗೆ  ತೋಡಿಕೊಂಡು , ಬಿಸಿ ನೀರು, ತಣ್ಣೀರು ಚೆನ್ನಾಗಿ ಹದ ಬಿಸಿ ಬರುವಂತೆ ಮಿಶ್ರ ಮಾಡಿಕೊಂಡು ಸ್ನಾನ ಮಾಡಬೇಕಿತ್ತು.ಸೌದೆ ಉರಿದಾದ ಮೇಲೆ ಉಳಿವ ನೀರೊಲೆ ಬೂದಿ ಪಾತ್ರೆ ತಿಕ್ಕಲು ತೊಗೊಂಡ್ರೆ, ನೀರೊಲೆ ಕೆಂಡ ಮಕ್ಕಳಿಗೆ ಸೋಕು ತೆಗೆಯಲು. ಈ ನೀರೊಲೆ ಕೆಂಡ ಯಾವತ್ತೂ ಆರುತ್ತಿರಲಿಲ್ಲ.

ಆಕಸ್ಮಾತ್ ಆರಿ ಹೋಗಿದ್ದರೆ ಒಂದು ತೆಂಗಿನ ಕಾಯಿ ಒಣ ಸಿಪ್ಪೆ ತೆಗೆದುಕೊಂಡು ಹೋಗಿ ಪಕ್ಕದ ಮನೆಯ ಒಲೆಯಿಂದ ಕೆಂಡ ತೆಗೆದುಕೊಂಡು ಬರ್ಬೇಕಿತ್ತು. ಇದರಿಂದಾಗಿ ಎಲ್ಲರ ಸ್ನಾನವಾದ ಬಳಿಕವೂ ಯಾವಾಗಲೂ ಬೆಚ್ಚನೆಯ ನೀರು ಹಂಡೆಯಲ್ಲಿ ತುಂಬಿದ್ದು,ಸಂಜೆ ಶಾಲೆಯಿಂದ ಬಂದ ಮೇಲೆ ಕೈ ಕಾಲು ಮುಖ ತೊಳೆದುಕೊಳ್ಳಲು ಆಗುತ್ತಿತ್ತು. ಕಾಲ ಕ್ರಮೇಣ,ವರುಷಗಳು ಸರಿದಂತೆ ಹಂಡೆ ಒಲೆ ಅದು ಹೇಗೆ ನೀರುಮನೆಯಿಂದ ಕಣ್ಮರೆಯಾಯಿತೊ  ತಿಳಿಯದು.

ನೀರಿನ ತೊಟ್ಟಿಗೆ, ಹಂಡೆಗೆ ನೀರು ತುಂಬುವುದು,ಒಲೆಗೆ ಸೌದೆ ತುಂಬಿ ಉರಿಸುವುದು,ಸೌದೆ ಖಾಲಿಯಾದಾಗ ಕೊಂಡು ಕೊಂಡು ಬರುತ್ತಾ ಇದ್ದದ್ದು ಅದ್ಯಾವಾಗ ಹೆಚ್ಚಿನ ಶ್ರಮ ಬೇಡುವ ಕೆಲಸ ಅಂತ ಆಗಿಬಿಟ್ಟಿತು? ತಿಳಿಯದು.ಕೆಲಸ ಸುಲಭ ಮಾಡುವ ಸಲುವಾಗಿ ಮೊದಮೊದಲು ಕಾಯಿಲ್ಗಳು, ನಂತರ ಬಾಯ್ಲರ್ಗಳು, ಬಳಿಕ ಸೋಲಾರ್ ಹೀಟರ್ ಗಳು,ಓವರ್ ಹೆಡ್ ಟ್ಯಾಂಕ್ ಗಳು, ನಿಧನಿಧಾನವಾಗಿ ಹಂಡೆ ಒಲೆ, ತಣ್ಣೀರು ತೊಟ್ಟಿಗಳನ್ನು  ನೀರುಮನೆಯಿಂದ  ಹೊರ ತಳ್ಳಿಬಿಟ್ಟವು.

ಈಗಿನ ಬಾತ್ ರೂಮ್ ಗಳ ವೈಭವ ನೋಡಲು ಎರಡು ಕಣ್ಣುಸಾಲವು ಅಂದ್ರೆ ಸಾಲವು.ಈಗ ಸ್ನಾನ ,ಶೌಚ ಎಲ್ಲಾ ಮಲಗುವ ಕೋಣೆ ಸೇರಿಕೊಂಡು ಬಿಟ್ಟಿವೆ. ಮನೆಯಲ್ಲಿ ಎಷ್ಟು ಜನರಿರುತ್ತಾರೋ ಅಷ್ಟೂ ಜನಕ್ಕೆ ಪ್ರತ್ಯೇಕ ರೂಂಗಳು, ಪ್ರತೀ ರೂಂಗೂ ಸೇರಿಹೋದ ಸ್ನಾನದ, ಶೌಚದ ಕೊಠಡಿ.ಅಗತ್ಯವೋ ಅನಗತ್ಯವೋ ಯೋಚಿಸುವವರು ಯಾರು?ಎಲ್ಲಾ ಮಾಡ್ತರೆ ಅಂತ ತಾವೂ ಮಾಡೋದೇ.  ಬಾತ್ರೂಮ್ ಗಳಿಗೆ ಹಾಕುವ ಗ್ರಾನೈಟ್, ಮಾರ್ಬಲ್ ಚಪ್ಪಡಿಗಳು, ಥಣಥಣಗುಟ್ಟುವ ಬಾತ್ ರೂಂ ಫಿಟ್ಟಿಂಗ್ ಗಳಿಗೆ ಮಾಡೋ ಖರ್ಚಲ್ಲಿ ಬಡವರ ಒಂದು ಮನೆ ಕಟ್ಟಿಸಿಬಿಡಬಹುದು. 

ಈಗಿನ ಬಾತ್ರೂಮ್ ಗಳಲ್ಲಿ  ನಲ್ಲಿ ತಿರುಗಿಸಿದರೆ ಸಾಕು ಸೋಲಾರ್ ಹೀಟರ್ ಇಲ್ಲವೇ ಗೀಸರ್ ನ ಮಹಿಮೆಯಿಂದ ಬೇಕಾದ ಹಾಗಿನ ಬಿಸಿಯ ನೀರು ಸುರಿದು ಹೋಗುತ್ತದೆ. ಆದರೆ ಮಳೆಗಾಲ, ಚಳಿಗಾಲಗಳಲ್ಲಿ , ಕರೆಂಟ್  ಇಲ್ಲದಿದ್ದಾಗ  ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುವಾಗ ಒಂದು ಹಂಡೆ ಒಲೆ  ಹಾಕಿಸಿಕೊಳ್ಳಬೇಕಿತ್ತು ಅಂತ ಯಾವಾಗಲೂ ಅನ್ನಿಸುತ್ತೆ. ಬಾತ್ ಟಬ್ಬಿನ ಸುಖ ಹೇಗಿರುತ್ತದೆ ಎಂದು ಕಾಣುವಷ್ಟು ದುಡ್ಡು ಇನ್ನೂ ಮಾಡಿಲ್ಲ. ಷವರ್  ಕೆಳಗೆ ನಿಂತು ಸ್ನಾನ ಮಾಡಿದರೆ ಮಳೆಯಲ್ಲಿ ನೆನೆದ ಹಾಗೆ ಅನ್ನಿಸುತ್ತದೆಯೇ ಹೊರತು ಸ್ನಾನ ಮಾಡಿದ ಸಮಾಧಾನ ಸಿಗುವುದಿಲ್ಲ.

ಆದರೆ ಈಗಿನ ಬಾತ್ ರೂಮ್ ಗಳಲ್ಲಿ ಕುಳಿತು ಬಕೆಟ್ನಿಂದ ಎಷ್ಟೇ ನೀರು ಹುಯ್ದುಕೊಂಡರೂ,ಚಿಕ್ಕಂದಿನಲ್ಲಿ ನೀರುಮನೆಯಲ್ಲಿ ಮಣೆ ಮೇಲೆ ಕುಳಿತು ಹಂಡೆಯಿಂದ ಮೊಗೆ ಮೊಗೆದು, ಸುಡು ಸುಡು ನೀರೆರೆಸಿಕೊಳ್ಳುತ್ತಿದ್ದ ಸುಖಕ್ಕೆ ಎಂದಿಗೂ ಸಮನಾಗದು. ಅದೂ ಅಲ್ಲದೆ ಈಗೀಗ ಬೆನ್ನುಜ್ಜಲು, ಉಜ್ಜಿಸಿಕೊಳ್ಳಲು ಯಾರನ್ನು ಹುಡುಕೋದು? ಮನೇಲಿ ಇರೋ ಗಂಡ ಹೆಂಡತಿ,ಇಬ್ಬರು ಮಕ್ಕಳ ಸಂಸಾರದಲ್ಲಿ ಎಲ್ಲರೂ ಬ್ಯುಸಿ. ಮಕ್ಕಳಿಗೆ” ತಲೆ,ಬೆನ್ನು ಉಜ್ಜಿ ಕೊಡುವೆ” ಎಂದರೆ, “ಅಮ್ಮ, ಏನಿದು, ಪ್ರೈವಸಿ ಬೇಡ್ವಾ ನಮ್ಗೆ,” ಅಂತ ಜಗಳಕ್ಕೆ ಬರ್ತವೆ.

ಉದ್ದನೆಯ ಪ್ಲಾಸ್ಟಿಕ್ ಬ್ರಷ್ ನಲ್ಲೆ ಸರ್ಕಸ್ ಮಾಡಿಕೊಂಡು ಉಜ್ಜಿಕೊಂಡು ಬರಬೇಕಷ್ಟೆ. ಮನುಷ್ಯನಿಗೆ ಸ್ನಾನದ ಸಮಯದಲ್ಲಿ ಸಿಗುವ ಏಕಾಂತದ ನೆಮ್ಮದಿ ಬಹುಶಃ ಬೇರೆಲ್ಲೂ ಸಿಗದೆನೋ.  ಹಾಗೆಯೇ ಸ್ನಾನದ ಬಗ್ಗೆ ಒಂದು ವಿಚಿತ್ರ ಕಥೆ ಚಿಕ್ಕಂದಿನಲ್ಲಿ ಕೇಳಿದ್ದೆ. ರಾವಣನಿಗೆ ಪ್ರಪಂಚದಲ್ಲಿರುವ ಎಲ್ಲಾ ರೀತಿಯ ಸುಖ ಸಿಕ್ಕಿತ್ತಂತೆ.ಆತ ಸ್ನಾನದ ಸಮಯದಲ್ಲಿ ಮಾತ್ರ ತುರಿ ಕಜ್ಜಿ ಏಳುವಂತೆ ವರ  ಪಡೆದಿದ್ದನಂತೆ.ತುರಿಸಿಕೊಳ್ಳುತ್ತಾ ಬಿಸಿ ನೀರು ಹುಯ್ದುಕೊಳ್ಳೋದು ಒಂದು ಪರಮ ಸುಖವಂತೆ. ಈ ಕಥೆ ಕೇಳಿದಾಗ ಮಾತ್ರ ರಾವಣನನ್ನು ಸುಖ ಪುರುಷನೆಂದು ಸುಮ್ಮನೆ ಕರೆಯೋದಿಲ್ಲ ಅಂತ ಅನ್ನಿಸಿತ್ತು.ಬರೀ ಸುಖ ಮಾತ್ರ ಸ್ನಾನದೊಂದಿಗೆ ತಳುಕು ಹಾಕಿ ಕೊಂಡಿಲ್ಲ.

ಯಾರಾದರೂ ತೀರಿಕೊಂಡಾಗ ಅವರಿಗೆ ಅಂತಿಮವಾಗಿ ಸ್ನಾನ ಮಾಡಿಸುವಾಗ ಆಗುವ ನೋವು ಭರಿಸಲಸಾಧ್ಯ.ಆಗ ಅವರನ್ನು ಕಳಿಸಿಕೊಡುವ ಕೆಲಸ ಶುರು ಎಂದರ್ಥ. ಅದಕ್ಕಿಂತ ನೋವಿನ ಸ್ನಾನ ಬೇರೊಂದಿಲ್ಲ. ಮೊದಲ ಸ್ನಾನ ಬೇರೆಯವರ ಕಾಲುಗಳ ಮೇಲೆ ಮಲಗಿಕೊಂಡು ಮಾಡಿಸಿಕೊಂಡು, ಅಂತಿಮ ಸ್ನಾನದಲ್ಲಿ ಹತ್ತಿರದವರ  ಕೈಗಳಿಂದ ಎರೆಸಿಕೊಂಡು ಹೊರಟು ಹೋಗುವ ನಡುವಿನ ಈ ಜೀವನದಲ್ಲಿ, ಮೈ ಕೊಳೆ ತೊಳೆದುಕೊಳ್ಳುವಷ್ಟು ಸುಲಭವಾಗಿ ಮನಸ್ಸಿನ ಕೊಳೆಯನ್ನೂ ತೊಳೆದುಕೊಳ್ಳುವ ಹಾಗಿದ್ದಿದ್ದರೆ…

‍ಲೇಖಕರು Admin

June 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಚೆಂದನೆಯ ಲೇಖನ ಸಮತಾ ಶ್ರೀ ಕುವೆಂಪು ಅವರ ಅಜ್ಜಯ್ಯನ ಅಭ್ಯಂಜನ ನೆನಪಾಯ್ತು . ಹಳೆಯ ಕಾಲದ ನೆನಪೇ ಸವಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: