ಜಿ ಎನ್ ನಾಗರಾಜ್ ಅಂಕಣ- ಅಕ್ಕಿಯೊಳಗನ್ನವನು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

11

ಅಕ್ಕಿಯೊಳಗನ್ನವನು ಮೊದಲಾರು ಕಂಡವರು ! ಅಕ್ಕರದ ಬರಹಕ್ಕೆ ಮೊದಲಿಗನದಾರು !! ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ !! ದಕ್ಕುವುದೆ ಜಸ ನಿನಗೆ ಮಂಕುತಿಮ್ಮ !

ಡಿವಿಜಿಯವರ ಈ ಕಗ್ಗ ಭಾಗಶಃ ಮಾತ್ರ ನಿಜ. ಮಾನವರು ತಾವು ಭಾಷೆ ಎಂಬ ಮಹಾ ಸಾಧನವನ್ನು ಕಂಡರಿಸಿಕೊಂಡ ಅರಿವಿನ ಮೊದಲ ಸ್ಫೋಟದ ಆ 70- 30,000 ವರ್ಷಗಳ ಹಿಂದಿನಿಂದಲೇ  ತಮ್ಮ ಆದಿ ಬಂಧುಗಳನ್ನು ಲೆಕ್ಕವಿಡುವುದಕ್ಕೆ ಇನ್ನಿಲ್ಲದಂತೆ ಶ್ರಮಿಸಿವೆ. ತಮಗೆ ಬರಹವಿನ್ನೂ ದಕ್ಕದಿದ್ದರೂ ತಮ್ಮನ್ನು ಮುನ್ನಡೆಸಿದವರನ್ನು ನೆನಪಿನಲ್ಲಿಟ್ಟುಕೊಳ್ಳಲು ತಮ್ಮದೇ ವಿಧಾನಗಳನ್ನು ಕಂಡುಕೊಂಡಿವೆ.

ಈ ವಿಧಾನಗಳ ಬೆಡಗು ನಮ್ಮನ್ನು ಬೆರಗುವಡಿಸುತ್ತವೆ ! ಸುಮಾರು 75 ಸಹಸ್ರಮಾನಗಳನ್ನು ದಾಟಿ 21 ನೆಯ ಶತಮಾನದ ನಮ್ಮವರೆಗೂ ಆ ನೆನಪುಗಳನ್ನು ತಲುಪಿಸುವಂತಹ ಸಾಮರ್ಥ್ಯ ಅವುಗಳಿಗಿವೆ ಎಂದರೆ ಯೋಚಿಸಿ !   ಆದರೆ ಇತ್ತೀಚಿನ ಐದಾರು  ಸಹಸ್ರಮಾನಗಳಲ್ಲಿ ಈ ನೆನಪುಗಳನ್ನು ಅಳಿಸಿ ಹಾಕಲು ಬಹಳ ಪ್ರಯತ್ನ ನಡೆದಿದೆ. ಅಳಿದುಳಿದ‌ ಆ ನೆನಪುಗಳ ಮೇಲೆ ಟನ್‌ಗಟ್ಟಲೆ ಸುಳ್ಳುಗಳ, ಅರೆ ಸತ್ಯಗಳ ಬೂದಿ ಹೇರಿ ಹುದುಗಿಸಲಾಗಿದೆ. ಸಾಂಸ್ಖೃತಿಕ ಉತ್ಖನನವನ್ನು ನಡೆಸಿ, ಆ ಬೆಡಗುಗಳನ್ನು  ಬಿಡಿಸಿಕೊಳ್ಳುವುದು ಮಾನವ ಸಮಾಜದ ಮೂಲಭೂತ ಸತ್ಯಗಳ ಅರಿವನ್ನು ದಕ್ಕಿಸಿಕೊಳ್ಳುವ ಸಾಹಸದ ಒಂದು ಮುಖ್ಯ ಆಯಾಮ.

ಈ ಮಾಲೆಯ ಹಿಂದಿನ ಲೇಖನವೊಂದರಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ ದೇವದಾಸಿಗಳ ಬಗೆಗಿನ ಸತ್ಯ ಅಂತಹ ಒಂದು ಪ್ರಯತ್ನ.‌

ದ್ರಾಕ್ಷಿ ಕೃಷಿ ಕಲಿಸಿದ, ಗೋಧಿ, ಬಾರ್ಲಿ ಕಂಡುಹಿಡಿದ ದೇವತೆಗಳು :
ಈಜಿಪ್ಟಿನ ಜನಪ್ರಿಯ ದೇವತೆಗಳು ಐಸಿಸ್ ಎಂಬ ಅಮ್ಮ ದೇವತೆ ಮತ್ತು ಆಕೆಯ ಅಣ್ಣನೂ ಹಾಗೂ ಗಂಡನೂ ಆದ ಒಸೈರಿಸ್. ಈ ದೇವತೆಗಳಿಗೆ ವರ್ಷದಲ್ಲಿ ಮೂರು ನಾಲ್ಕು ಬಾರಿ ಹಬ್ಬವನ್ನು ಮಾಡಲಾಗುತ್ತದೆ.‌ ಐಸಿಸ್ ಗೋಧಿ ಮತ್ತು ಬಾರ್ಲಿಯನ್ನು ಮೊದಲು ಶೋಧಿಸಿದವಳು.‌ ಅದರಿಂದ ರೊಟ್ಟಿ ಮಾಡುವುದನ್ನು ಕಲಿಸಿದವಳು.‌ ಅವುಗಳಿಂದ ಬೀರ್ ಮೊದಲಾದ ಮದ್ಯಗಳನ್ನು ಮಾಡುವುದನ್ನೂ ಶೋಧಿಸಿದವಳು. ಅವಳ ಹಬ್ಬಗಳನ್ನು ಈ ಧಾನ್ಯಗಳ ತೆನೆಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವುದರ ಮೂಲಕ ಆಚರಿಸಲಾಗುತ್ತದೆ.

ಈ ದೇವತೆ ಹಸುಗಳನ್ನು ಸಾಕುವುದನ್ನು ಕಲಿಸಿದ ದೇವತೆಯೂ ಹೌದು.‌ ಈಕೆಯನ್ನು ಹಸುವಿನ‌ ಮುಖವುಳ್ಳ ಮಾನವ ದೇಹದ ಆಕಾರದಲ್ಲಿಯೂ ಪೂಜಿಸಲಾಗುತ್ತದೆ. ಈಕೆಗೆ ಇರುವ ಒಂದು ಸಾವಿರದಷ್ಟು ಹೆಸರುಗಳಲ್ಲಿ ರೊಟ್ಟಿಯ ದೇವತೆ, ಬೀರ್‌ನ ದೇವತೆ, ಸಮೃದ್ಧಿಯ ದೇವತೆ ಎಂದೆಲ್ಲಾ ಕರೆಯಲಾಗಿದೆ. ಫ್ರಾನ್ಸ್‌ನಲ್ಲಿ ಧಾನ್ಯಗಳ ದೇವತೆಯನ್ನು ಸೆರಿಸ್ ಎಂದು ಕರೆದು ಪೂಜಿಸುತ್ತಾರೆ. ಯುರೋಪಿನ ಹಲವು ಪ್ರದೇಶಗಳಲ್ಲಿ ಗೋಧಿ ಅಮ್ಮ, ಬಾರ್ಲಿ ಅಮ್ಮ, ಓಟ್ಸ್ ಅಮ್ಮ ಎಂದು ಬೇರೆ ಬೇರೆ ಧಾನ್ಯಗಳ ಹೆಸರಿನ ಅಮ್ಮಗಳನ್ನು ಪೂಜಿಸುವ ವಾಡಿಕೆ ಇದೆ. ಮೆಕ್ಸಿಕೊ ಮತ್ತು ದಕ್ಷಿಣ ಅಮೇರಿಕದ ದೇಶಗಳಲ್ಲಿ ಮುಸುಕಿನ‌ಜೋಳದ ಅಮ್ಮನನ್ನು ಪ್ರಾರ್ಥಿಸುತ್ತಾರೆ.

ಒಸೈರಿಸ್ ಮರಗಳಿಂದ ಮೊದಲು ಹಣ್ಣುಗಳನ್ನು ಕಿತ್ತವನು. ಹಣ್ಣಿನ‌ ಮರಗಳನ್ನು ಬೆಳೆಯುವುದನ್ನು ಕಲಿಸಿದವನು.‌ ಅದರಲ್ಲಿಯೂ ದ್ರಾಕ್ಷಿಯ ಬಳ್ಳಿಗಳನ್ನು ಹಬ್ಬಿಸಿವುದನ್ನು, ಅವುಗಳನ್ನು ಬೆಳೆಯುವುದನ್ನು ಕಲಿಸಿದವನು. ದ್ರಾಕ್ಷಿಯ ಹಣ್ಣುಗಳಿಂದ ವೈನ್‌ ತಯಾರಿಸುವುದನ್ನು ಕಂಡುಹಿಡಿದವನು. ಅವನ ಸೋದರಿ ಶೋಧಿಸಿದ ಗೋಧಿ, ಬಾರ್ಲಿ ಕೃಷಿಯನ್ನು ಪಸರಿಸಲು ವಿಶ್ವವನ್ನೆಲ್ಲಾ ಪ್ರವಾಸ ಮಾಡಿದವನು.‌ ಕ್ರಿಸ್ತಪೂರ್ವ 1550 ರ ದಾಖಲೆಯೊಂದರಲ್ಲಿ ಅವನ ದೇವಾಲಯದಲ್ಲಿ ಒಸೈರಿಸ್ ಸಿಂಹಾಸನದ ಮೇಲೆ ಕುಳಿತಿರುವಾಗ ಮಾಡಿನಿಂದ ದ್ರಾಕ್ಷಿಯ ಹಣ್ಣುಗಳ ಜೋತು ಬಿದ್ದ ಚಿತ್ರವನ್ನು ನೀಡಿದೆ.‌ ಇಂತಹ ಹಲವು‌ ದಾಖಲೆಗಳು ದೊರೆತಿವೆ.

ಅದೇ ರೀತಿ ಗ್ರೀಸ್‌ನಲ್ಲಿ ಡೈಯೋನಿಸಸ್ ಎಂಬ ದೇವತೆ ಸೇಬು ಮತ್ತು‌ ಅಂಜೂರದ ಮರಗಳನ್ನು ಶೋಧಿಸಿದವನು.‌ ಅವನನ್ನು ಸಾಮಾನ್ಯವಾಗಿ ಹಣ್ಣಿನ ತೋಟಗಳಲ್ಲಿ ಕಡಿದುಳಿದ ಮರದ ಬುಡದ ರೂಪದಲ್ಲಿ ಪೂಜಿಸುತ್ತಾರೆ. ಕೆಲವು ಕಡೆ ಡೈಯೋನಿಸಸ್‌ನ‌ ಮುಖವನ್ನು ಅಂಜೂರದ ಮರದ ಕಾಂಡದಿಂದ ಮಾಡಲಾಗುತ್ತದೆ. ಈ ದೇವತೆ  ಎಲ್ಲ ಹಣ್ಣಿನ ತೋಟದ ದೇವತೆಯೆಂದೂ, ದ್ರಾಕ್ಷಿಯ ಹಣ್ಣಿನ ದೇವತೆ ಎಂದೂ ಕೂಡಾ ಪೂಜಿಸಲಾಗುತ್ತದೆ.
ಅಷ್ಟೇ ಅಲ್ಲ ಈ ದೇವತೆ ನೇಗಿಲುಗಳಿಗೆ ಎತ್ತುಗಳನ್ನು ಕಟ್ಟಿ ಉಳುವುದನ್ನು, ಬಿತ್ತುವುದನ್ನು ತೋರಿಸಿದನಂತೆ. ಅದರಿಂದಾಗಿ ರೈತರಿಗೆ ಬಹು ಮೆಚ್ಚಿನ ದೇವತೆಯಂತೆ. ಅವನಜ ಹುಟ್ಟಿದ್ದು ಧಾನ್ಯಗಳನ್ನು ಕೇರುವ ಮೊರದಲ್ಲಂತೆ. ಧಾನ್ಯಗಳನ್ನು ಹೊಟ್ಟಿನಿಂದ ವಿಂಗಡಿಸುವ ವಿಧಾನವನ್ನೂ ಈ ದೇವತೆ ಕಂಡು ಹಿಡಿದನಂತೆ.

ಕುರಿಗಳನ್ನು ಸಾಕುವುದನ್ನು ಕಲಿಸಿದ,ಕುರಿಗಳನ್ನು ರೋಗಗಳಿಂದ ರಕ್ಷಿಸಿದ ಪಾನ್ ಎಂಬ ಗ್ರೀಕ್ ದೇವತೆಯ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆ. ಈ ದೇವತೆ ಕುರುಬರ ಒಂಟಿ ಜೀವನದ  ಬೇಸರ ಹೋಗಲಾಡಿಸಿಕೊಳ್ಳಲು ಸಂಗೀತದ ವಾದ್ಯವೊಂದನ್ನು ರೂಪಿಸಿಕೊಟ್ಟನಂತೆ ( ಕೃಷ್ಣನ ಕೊಳಲಿನ ಹಾಗೆ ).

ಕರ್ನಾಟಕದ ಕುರಿಗಾಹಿಗಳ ದೇವರಾದ ಬೀರಪ್ಪ, ಮೈಲಾರ,ಅಮೋಘಸಿದ್ಧ, ದನಗಾಹಿಗಳ ದೇವರಾದ ಜುಂಜಪ್ಪ ಮೊದಲಾದ ದೇವರುಗಳು ಕೂಡಾ ನಿರ್ದಿಷ್ಟ ಕುರಿತಳಿಗಳ ಸಂಗೋಪನೆ, ದನಗಳ ತಳಿಗಳ ಸಂಗೋಪನೆಯನ್ನು ಕಂಡುಕೊಂಡ,ಕಲಿಸಿದ ಶೋಧಕರು ದೇವರೆಂದು ಪರಿಗಣಿತವಾದಂತೆ ಕಾಣುತ್ತದೆ.

ಕಾಳಿ ,ಎಲ್ಲಮ್ಮ , ದೊಡ್ಡಮ್ಮ ಮೊದಲಾದ  ಸಂಶೋಧಕಿಯರು :

ಈಜಿಪ್ಟ್, ಮೆಸಪಟೋಮಿಯ, ಗ್ರೀಸ್,ರೋಮ್ ಮತ್ತಿತರ ಪ್ರಾಚೀನ ನಾಗರೀಕತೆಯ ಪ್ರದೇಶಗಳಲ್ಲಿ ಮಾನವ ಸಮುದಾಯದ ನೆಗೆತಕ್ಕೆ ಕಾರಣವಾದ ಮುಖ್ಯ ಬೆಳವಣಿಗೆಗಳನ್ನು ಕಂಡುಹಿಡಿದ ಶೋಧಕರುಗಳನ್ನು ದೇವತೆಗಳಾಗಿ ಪೂಜಿಸಿರುವ ವಿಷಯ ಮೇಲೆ ವಿವರಿಸಿದ ಸಂಗತಿಗಳಿಂದ ಸ್ಪಷ್ಟವಾಗಿದೆ. ಅವು ಇನ್ನೂ ಅಲ್ಲಿಯ ದೇವತೆಗಳ ಕತೆಗಳಲ್ಲಿ,,ಹಬ್ಬಗಳ ಆಚರಣೆಗಳ ವಿಧಾನಗಳ ಸೂಕ್ಷ್ಮ ಅವಲೋಕನದಲ್ಲಿ ಕಾಣಬರುತ್ತವೆ. ಆದರೆ ಭಾರತದಲ್ಲಿ ಸಾವಿರಾರು ವರ್ಷಗಳ ಪುರಾಣೀಕರಣ, ವೈದಿಕೀಕರಣಗಳಲ್ಲಿ ಹುದುಗಿ ಹೋಗಿವೆ.
ಇಲ್ಲಿ ಕೆಲವು ಉದಾಹರಣೆಗಳನ್ನು ಗಮನಿಸೋಣ.

ಕಮ್ಮಾರ,ಕಂಚುಗಾರ,ಚಿನಿವಾರ( ಅಕ್ಕಸಾಲಿಗ)ರಿಗೆಲ್ಲ ಕುಲುಮೆಯೇ ಕಾಳಿ. ಕಮ್ಮಾರರು  ಕಬ್ಬಿಣವನ್ನು ತಯಾರಿಸುವ ಮೂಲ ವಸ್ತುವಾದ ಅದಿರು ಮಹಾಕಾಳಿ , ಕಬ್ಬಿಣ ಕಾಳಿ ಎಂದು ಪರಿಗಣಿಸುತ್ತಾರೆ. ಪೂಜಿಸುತ್ತಾರೆ.‌ ಎಲ್ಲೆಲ್ಲಿ ಅಕ್ಕಸಾಲಿಗರು,ಕಮ್ಮಾರರು ಗಣನೀಯ ಸಂಖ್ಯೆಯಲ್ಲಿರುತ್ತಾರೋ ಅಲ್ಲೆಲ್ಲ ಕಾಳಿಯ ದೇವಾಲಯಗಳಿರುತ್ತವೆ. ಅದಕ್ಕೆ ಪೂಜಾರಿಗಳು ಸಾಮಾನ್ಯವಾಗಿ ಅಕ್ಕಸಾಲಿಗರೇ ಆಗಿರುತ್ತಾರೆ. ಕೆಲವೊಮ್ಮೆ ಕಮ್ಮಾರರೂ ಕೂಡಾ.‌
ಲೋಹಗಳ ತಯಾರಿಕೆಯ ಪ್ರತಿ ಹಂತದಲ್ಲಿಯೂ ಕಾಳಿಯ ಪಾತ್ರವನ್ನು‌ ಸ್ಮರಿಸುವ ಪೂಜೆಯ ಆಚರಣೆಗಳಿವೆ.

ಅದೇ ಸಮಯದಲ್ಲಿ  ಭಾರತವ್ಯಾಪಿಯಾಗಿರುವ ದೇವತೆಯಾದ ಕಾಳಿಗೆ ಸಂಬಂಧಪಟ್ಟ ಪುರಾಣಗಳು,ದೇವೀ ಮಹಾತ್ಮೆಗಳು,ಸ್ತುತಿಗಳು ಈ ಮುಖ್ಯ ವಿಷಯವನ್ನು ಪ್ರಸ್ತಾಪ ಕೂಡಾ ಮಾಡುವುದಿಲ್ಲ. ಕಾಳಿ,ದುರ್ಗೆ,ಚಾಮುಂಡಿ ಇತ್ಯಾದಿ ದೇವತೆಗಳೆಲ್ಲ ಒಬ್ಬಳೇ ದೇವತೆಯ ಬೇರೆ ಬೇರೆ ರೂಪಗಳು ಎಂಬಂತೆ ಪುರಾಣಗಳು ಚಿತ್ರಿಸಿವೆ. ಈ ದೇವತೆಗಳಂತೆ ಕಾಳಿಯನ್ನು ರಕ್ತ ಬೀಜಾಸುರನ ವಧೆ ಶುಂಭ,ನಿಶುಂಭ ಇತ್ಯಾದಿ ರಾಕ್ಷಸರ ವಧೆಯ ಕತೆಗಳೊಂದಿಗೆ ಜೋಡಿಸಲಾಗಿದೆ.‌ ಆದುದರಿಂದ ನಿಜವಾದ ಕಾಳಿಯ ಬಗ್ಗೆ ಈ ಕುಶಲಕರ್ಮಿ ಸಮುದಾಯಗಳು ತಮ್ಮ ಬಗ್ಗೆ, ತಮ್ಮ ಕುಶಲಕರ್ಮದ ಬಗ್ಗೆ ಕಟ್ಟಿಕೊಂಡ ಕತೆಗಳ ಕಡೆಗೆ ನೋಡಬೇಕಾಗಿದೆ.

ಕಮ್ಮಾರರಲ್ಲಿ ಎರಡು ಮುಖ್ಯ ಪಂಗಡಗಳು – ಕಬ್ಬಿಣದಿಂದ ವಿವಿಧ ಸಲಕರಣೆಗಳನ್ನು ಮಾಡುವ ಕಮ್ಮಾರರನ್ನು ಬಹಳ ಜನ ನೋಡಿದ್ದೇವೆ. ಆದರೆ ಕಬ್ಬಿಣವನ್ನೇ ತಯಾರಿಸುವವರು ಬಹಳ ಜನಕ್ಕೆ ಗೊತ್ತಿಲ್ಲ. ಭಾರತದಲ್ಲಿ ಕಬ್ಬಿಣದ ಅದಿರು ಹೆಚ್ಚಾಗಿ ಸಿಗುವ ಪ್ರದೇಶಗಳಲ್ಲಿ , ಆಧುನಿಕ ಗಣಿಗಾರಿಕೆ ಬರುವ ಮೊದಲು ಎರಡು ಸಾವಿರ ವರ್ಷಗಳ ಕಾಲ ಅದಿರನ್ನು ಕಬ್ಬಿಣವನ್ನಾಗಿ ಮಾಡುತ್ತಿದ್ದವರು ಇವರು.  ಸಂಡೂರು ಪ್ರದೇಶದಲ್ಲಿ ಮುದ್ದೆಗಮ್ಮಾರರು ಎಂಬ ಪಂಗಡ ಇದೆ. ಅವರು ಕಬ್ಬಿಣ ಯಥೇಚ್ಛವಾಗಿ ಸಿಗುವ ಈ ಪ್ರದೇಶದಲ್ಲಿ ಅವರು ಕಾಡಿಗೆ ಹೋಗಿ ಕಬ್ಬಿಣದ ಅದಿರನ್ನು ತಂದು ಸ್ವಚ್ಛಗೊಳಿಸಿ ಕುಲುಮೆಯಲ್ಲಿ 1500 ಡಿಗ್ರಿಯಷ್ಟು ಶಾಖದಲ್ಲಿ ಕರಗಿಸಿ ಕಬ್ಬಿಣವನ್ನು ತಯಾರಿಸುತ್ತಾರೆ. ಅವರಿಗೆ ಕಾಳಿ ದೇವಾಲಯಗಳಲ್ಲಿ ಪೂಜಿಸುವ ಮಾನವಾಕಾರಕ್ಕಿಂತ  ಮುದ್ದೆಯಾಗಿ ಕಾಣುತ್ತಾಳೆ. ಈಕೆಗೆ ಕೆಲವು ಪ್ರದೇಶಗಳಲ್ಲಿ ಮುದ್ದಮ್ಮನೆಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಕಾವ್ಯದಲ್ಲಿ ಬರುವ ಹಲಗೂರು ಕಮ್ಮಾರರು ಮತ್ತು‌ ಸಿದ್ದಪ್ಪಾಜಿಯ ನೀಲಿಗ್ಯಾನವನ್ನು ಗಮನಿಸಬೇಕು. ಅದರಲ್ಲಿ ಸಿದ್ಧಪ್ಪಾಜಿಯ ತಾಯಿ ಮುದ್ದಮ್ಮ. ತಂದೆ ನಿಂಗೋಜಿ (  ಲಿಂಗಪ್ಪ )
ಈ ಎಲ್ಲ ಸಂಗತಿಗಳು ಕಬ್ಬಿಣದ ತಯಾರಿಕೆ ಮತ್ತು ಕುಲುಮೆಯ ಆವಿಷ್ಕಾರಕ್ಕೂ ಕಾಳಿಗೂ ಇರುವ ಸಂಬಂಧದ ಬಗ್ಗೆ ಮುಖ್ಯವಾದದುನ್ನೇನೋ ಹೇಳುತ್ತಿವೆ.

ನಮಗೆ ಗೊತ್ತಿದ್ದಂತೆ ಮಾನವ ನಾಗರೀಕತೆ ಶಿಲಾಯುಧಗಳ ಹಂತದ ನಂತರ ವಿವಿಧ ಹಂತಗಳನ್ನು ಅವರು ತಯಾರಿಸುತ್ತಿದ್ದ ಮಡಕೆಯ ಸ್ವರೂಪದ ಆಧಾರದ ಮೇಲೆ ಗುರುತಿಸುತ್ತಾರೆ. ಮಡಕೆಯನ್ನು ತಯಾರಿಸಲು ಮೊದಲು ಆರಂಭಿಸಿದವಳು ಮಹಿಳೆ ಎಂಬುದೂ ಜನಜನಿತ. ಕುಂಬಾರಿಕೆಗೆ ಮಣ್ಣನ್ನು ತಂದು ಕಲೆಸಿ ಗೂಡಿನಲ್ಲಿಟ್ಟು ಬೇಯಿಸುವಾಗ ಕಬ್ಬಿಣದ ಅಂಶ ಹೊರಬಿದ್ದುದನ್ನು ಮತ್ತು ಅದರ ವಿಶೇಷ ಗುಣಗಳನ್ನು ಗುರುತಿಸಿ ಕಬ್ಬಿಣದ ತಯಾರಿಕೆಗೆ ನಾಂದಿ ಹಾಡಿದ್ದು ಕಾಳಿ ಎಂಬ ಮಹಿಳೆಯೇ ! ? ! ಮಾನವರ ಬದುಕಿನ ಕಷ್ಟಗಳಿಗೆ ವರದಾನವಾಗಿ ಶಿಲಾಯುಧಗಳಿಗೆ ಬದಲು ಕಬ್ಬಿಣದ ಆಯುಧಗಳ ತಯಾರಿಕೆಗೆ ಸಾಧನವಾದ ಕಬ್ಬಿಣವನ್ನು ಅದಿರಿನಿಂದ ತಯಾರಿಸುವುದು, ಅದಕ್ಕೆ ಅವಶ್ಯವಾದ ಅತಿ ಹೆಚ್ಚು ಶಾಖದ ಕುಲುಮೆಯನ್ನು, ಶಾಖವನ್ನು ಹೆಚ್ಚಿಸಲು ಗಾಳಿ ಊದುವ ತಿದಿ ಮುಂತಾದವುಗಳನ್ನು ರೂಪಿಸಿದ ಮಹಿಳೆಯನ್ನೇ ಕಾಳಿ ಎಂದು ನೆನಸಿಕೊಂಡು ಪೂಜಿಸಲಾಗುತ್ತಿದೆಯೇ ? ಈ ಅಂಶಗಳಿಗೆ ಗಮನ ನೀಡಿ ಸಂಶೋಧನೆಗಳು ನಡೆಯಬೇಕಾಗಿದೆ. ರಾಕ್ಷಸರನ್ನು ನಾಶ ಮಾಡಿದ ದೇವೀ ಮಹಾತ್ಮೆಗಳಿಂದ ಹೊರಗೆ ಯೋಚಿಸಬೇಕಾಗಿದೆ.

ಇದೇ ಸಮಯದಲ್ಲಿ ಮತ್ತೊಂದು ವಿಶೇಷ ಅಂಶವನ್ನು ಗಮನಕ್ಕೆ ತರಬೇಕಾಗಿದೆ. ಭಾರತದಲ್ಲಿ ಕಬ್ಬಿಣದ ತಯಾರಿಕೆಯ ಇತಿಹಾಸದ ಬಗ್ಗೆ ಸಂಶೋಧನೆ ಮಾಡಿರುವ ವಿಜ್ಞಾನಿಗಳು , ವೆರಿಯರ್ ಎಲ್ವಿನ್ನರಂತಹ ಮಾನವಶಾಸ್ತ್ರಜ್ಞರುಗಳು ಭಾರತದಲ್ಲಿ ಕಬ್ಬಿಣದ ತಯಾರಿಕೆ ಆರಂಭವಾದ ಕಾಲದಿಂದಲೂ ಅದನ್ನು ಕೈಗೊಂಡಿರುವವರು ಬುಡಕಟ್ಟು ಸಮುದಾಯಗಳೇ ಹೊರತು ನಗರಗಳ ಸಮುದಾಯಗಳಲ್ಲ.

ಚತ್ತೀಸಘಢ, ಜಾರ್ಖಂಡ್, ಒಡಿಶಾ, ಮೊದಲಾದ ಪ್ರದೇಶದ ಕಾಡುಗಳಲ್ಲಿ ವಾದವಿರುವ ಇನ್ನೂ ಕೂಡಾ ಆ ಆದಿಮ ತಂತ್ರಜ್ಞಾನವನ್ನೇ ಉಪಯೋಗಿಸಿ ಕಬ್ಬಿಣ ತಯಾರಿಸುವ ಬುಡಕಟ್ಟುಗಳು ಅಸುರ ಬುಡಕಟ್ಟುಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತವೆ. ಇವು ಅಗಾರಿಯಾ ಎಂಬ ಬುಡಕಟ್ಟುಗಳ ಒಂದು ವಿಭಾಗ. ಅಗಾರಿಯಾ ಎಂದರೆ ಅಗ್ನಿ ಮೂಲದವರು ಎಂದು ಅರ್ಥ. ಕಬ್ಬಿಣದ ಕುಲುಮೆಯ ಹೆಚ್ಚಿನ ತಾಪದಿಂದ ಈ ಹೆಸರು ಬಂದಿದೆಯಂತೆ.‌

ಈ ಅಸುರ ಬುಡಕಟ್ಟುಗಳ ಕಬ್ಬಿಣ ತಂತ್ರಜ್ಞಾನ ಮತ್ತು ಕಬ್ಬಿಣದ ಆಯುಧಗಳ ಲಭ್ಯತೆಯೇ ಪುರಾಣಗಳಲ್ಲಿ ಕಾಣುವ ವಿವಿಧ ಅಸುರರು ಇಂದ್ರಾದಿ ದೇವತೆಗಳನ್ನು ಹಲವು ಬಾರಿ ಸೋಲಿಸಿ ದೇವಲೋಕವನ್ನು ವಶಪಡಿಸಿಕೊಂಡ ಶಕ್ತಿಯ ಮೂಲ ಎಂದು ಕೆಲವು ಕಬ್ಬಿಣದ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆಂಬುದು ಗಮನಾರ್ಹ.‌

ಹಿಂದಿನ ಸಂಚಿಕೆಯೊಂದರಲ್ಲಿ ದೇವದಾಸಿ ಪದ್ಧತಿಯ ಸಂಬಂಧದಲ್ಲಿ ಪ್ರಸ್ತಾಪಿಸಲಾದ ಎಲ್ಲಮ್ಮ ದೇವತೆ ಚಮ್ಮಾರರ ಗಲ್ಲೇಬಾನಿಯ ದೇವತೆ. ಗಲ್ಲೇಬಾನಿ ಎಂದರೆ ಚರ್ಮವನ್ನು ಹದ ಮಾಡುವ ವಿಶಿಷ್ಟ ಮಡಕೆ. ಇದರ ನೀರು ಬಹಳ ಪವಿತ್ರ. ಬ್ರಾಹ್ಮಣರೂ ಕೂಡಾ ತಮ್ಮ ಕೆಲವೊಂದು ಮಂಗಳಕಾರ್ಯಗಳಲ್ಲಿ ಗಲ್ಲೇಬಾನಿಯ ನೀರು ತರಿಸಿ ಬಳಸಿಕೊಳ್ಳುತ್ತಾರೆ ಎಂಬ ಪ್ರತೀತಿಗಳಿವೆ. ಈ ನೀರು ರೋಗಗಳನ್ನು ಗುಣಪಡಿಸುತ್ತದಂತೆ. ಎಲ್ಕಮ್ಮನೂ ರೋಗ ಪರಿಹಾರ ಮಾಡುವವಳೂ, ರೋಗ ಬರಿಸುವವಳೂ ಆಗಿದ್ದಾಳೆ.

ಮುಖ್ಯವಾಗಿ ಕುಷ್ಟ ರೋಗದ ಜೊತೆಗೆ ಅವಳ ಸಂಬಂಧವನ್ನು ಜಾನಪದ ಕಾವ್ಯ ಜೋಡಿಸಿದೆ. ಜೊತೆಗೆ ವೈದ್ಯಕೀಯ ಗುಣದ ಬೇವಿನ ಮರ ಮತ್ತು  ಸೊಪ್ಪಿನೊಂದಿಗೆ ಕೂಡಾ ಬಹಳ ಗಾಢವಾದ ಸಂಬಂಧವನ್ನು ಹೆಣೆಯಲಾಗಿದೆ. ಕುಲುಮೆಯ ಜೊತೆ ಕಾಳಿಯ ಸಂಬಂಧದಂತೆ ಗಲ್ಲೇಬಾನಿಯ ಜೊತೆ ಎಲ್ಲಮ್ಮನ ಸಂಬಂಧ ಕಾಣುತ್ತದೆ. ಜೊತೆಗೆ ರೋಗಗಳ ಪರಿಹಾರದ ದಾರಿಗಳನ್ನು ಶೋಧಿಸಿದವಳಾಗಿ ಮುಂದಿನ ತಲೆಮಾರುಗಳ ನೆನಹಿಗೆ ಮತ್ತು  ಪೂಜೆಗೆ ಪಾತ್ರಳಾಗಿರುವ ಸಂಭವ ಹೆಚ್ಚಿದೆ.

ಹಾಗೆಯೇ ಸಿಡುಬು ಕಾಯಿಲೆಗೆ ನಮ್ಮ ಜಾನಪದರು ಕರೆಯುವುದೇ ದೊಡ್ಡಮ್ಮ ಎಂದು. ಸಿಡುಬು ಬಂದ ಮನೆಯಲ್ಲಿ ಮೈ ಮೇಲೆ ದೊಡ್ಡಮ್ಮ ಬಂದಿದ್ದಾಳೆ ಎಂದು ಬಹಳ ಭಯ ಭಕ್ತಿಯಿಂದ ನಡೆದುಕೊಳ್ಳುವುದು, ಹರಳೆಲೆ ಮೊದಲಾದ ಎಲೆಗಳ ಮೇಲೆ ರೋಗಿಯನ್ನು ಮಲಗಿಸುವುದು ಮಾರಮ್ಮನಿಗೆ ಹರಕೆ, ಪೂಜೆ ಸಲ್ಲಿಸುವುದು ಸಾಮಾನ್ಯವಾಗಿ ಆಧುನಿಕ ವೈದ್ಯಕೀಯ ಭಾರತಕ್ಕೆ ಕಾಲಿಡುವ ಮೊದಲು ಮಾಡುತ್ತಿದ್ದ ಪದ್ಧತಿ. ಮಾರಮ್ಮನ ಪೂಜೆಯ ಆಚರಣೆಗಳಿಗೂ ಸಿಡುಬು ರೋಗಕ್ಕೂ ಸಂಬಂಧವಿದೆಯೇ ಎಂಬುದು ಪರಿಶೀಲನೆ ಮಾಡಬೇಕಾದ ಸಂಗತಿ.

ಮೂವರು ರಾಮರೂ ಮೂರು ಆಯುಧಗಳೂ :
ಈ ವಿಷಯದ ಬಗ್ಗೆ ಮೊದಲೇ ಬರೆಯಬೇಕಾಗಿತ್ತು. ಆದರೆ ಹಲವು ಬಾರಿ ಈ ಬಗ್ಗೆ ಬರೆದಿರುವುದು ಮತ್ತು ನನ್ನ ಪುಸ್ತಕ ” ನಿಜ ರಾಮಾಯಣದ ಅನ್ವೇಷಣೆ” ಯಲ್ಲಿ ವಿವರವಾಗಿ ವಿಶ್ಲೇಸಿರುವುದರಿಂದ ಪುನರಾವರ್ತನೆ ಬೇಡವೆಂದು ಸಂಕ್ಷಿಪ್ತವಾಗಿ ನಿರೂಪಿಸಿದ್ದೇನೆ.

ನಮ್ಮ ಪುರಾಣ, ಮಹಾಕಾವ್ಯಗಳಲ್ಲಿ ಮೂವರು ರಾಮರು ಕಾಣಿಸಿಕೊಳ್ಳುತ್ತಾರೆ. ಪರಶುರಾಮ, ಬಲರಾಮ,ಕೋದಂಡರಾಮರು. ಒಬ್ಬ ರಾಮನ ಬಗ್ಗೆಯಂತೂ ಒಂದು ಇಡೀ ಕಾವ್ಯವನ್ನೇ ಬರೆಯಲಾಗಿದೆ. ಈ ಮೂರು ರಾಮರುಗಳೂ ಮಾನವ ನಾಗರೀಕತೆಯ ಬೆಳೆವಣಿಗೆಯಲ್ಲಿ ಮೈಲುಗಲ್ಲಾದ ಮೂರು ಸಾಧನಗಳೊಂದಿಗೆ ಜೋಡಿಸಲ್ಪಟ್ಟಿರುವುದು ಕಾಕತಾಳಿಯವಲ್ಲ. ಕೊಡಲಿಯ ಶೋಧ ಬೇಟೆಯಾಡಲು, ದಟ್ಟ ಕಾಡಿನೊಳಗೆ ಸಂಚರಿಸಲು, ಕಾಡನ್ನು ಕೃಷಿ ಭೂಮಿಯಾಗಿಸಲು, ಮತ್ತನೇಕ ನಿತ್ಯ ಬದುಕಿನ  ಕೆಲಸಗಳಲ್ಲಿ ಬಹಳವಾಗಿ ಉಪಯುಕ್ತ. ಪುರಾಣಗಳಲ್ಲಿ ನಮೂದಿರುವಂತೆ ಅದು ಯುದ್ಧೋಪಕರಣವಲ್ಲ.

ಇನ್ನು ಬಲರಾಮನ ಆಯುಧ ಹಲ ಅಥವಾ ನೇಗಿಲು. ಅದೂ ಕೂಡಾ ಯುದ್ಧೋಪಕರಣವೆಂಬಂತೆ ಚಿತ್ರಿಸಲಾಗಿದೆ. ಆದರೆ ಎಲ್ಲರಿಗೂ ಗೊತ್ತಿರುವಂತೆ ಬಲರಾಮನ ಯುದ್ಧ ಪ್ರಾವೀಣ್ಯ ಗದೆಯ ಮೂಲಕ. ಅದನ್ನೇ ಅವನು ಸುಯೋಧನನಿಗೆ ಕಲಿಸಿದ್ದು. ನೇಗಿಲು ಕೃಷಿಯನ್ನು ವ್ಯಾಪಕವಾಗಿಸಿ ಮಾನವರ ಹಸಿವನ್ನು ನೀಗಿಸಲು ಕಾರಣವಾದ ಉಪಕರಣ. ಇನ್ನು ಕೋದಂಡದ ಬಗ್ಗೆ ಹೇಳುವುದೇ ಬೇಕಿಲ್ಲ. ಅದು ಆರಂಭದಲ್ಲಿ ಮುಖ್ಯ ಬೇಟೆಯ ಉಪಕರಣವಾಗಿ ನಂತರ ಯುದ್ಧದ ಪ್ರಧಾನ ಸಾಧನವಾಯಿತು.

ಈ ಮೂವರು ರಾಮರೂ ಈ ಸಾಧನಗಳ ಶೋಧದ ನೆನಪಾಗಿ ದೇವರಾದವರಂತೆ ತೋರುತ್ತದೆ. ವಿಷ್ಣುವಿನ ದಶಾವತಾರಗಳಲ್ಲಿ ಮೂರು ಮನುಷ್ಯನಿಗೆ ಆಹಾರವಾದ ಪ್ರಾಣಿಗಳು, ಇನ್ನು ಎರಡು ಮನುಷ್ಯರ ಬದುಕಿಗೆ‌ ಬಹಳ ಸಹಾಯವಾದ ಉಪಕರಣಗಳಾದ ಪರಶು, ಬಿಲ್ಲುಗಳ ಧಾರಕರು ಎಂಬುದು, ಮತ್ತೊಂದು ಮುಖ್ಯ ಅವತಾರ ಕೃಷ್ಣ ದನಗಳ ಸಾಕಾಣಿಕೆಯ ಜೊತೆ ಗುರುತಿಸಲ್ಪಟ್ಟವನು ಎಂಬುದು ಒಂದು ವಿಶೇಷ ಸಂಗತಿ.‌ ಈ ಬಗ್ಗೆ ಮುಂದಿನ ಲೇಖನಗಳಲ್ಲಿ ವಿಶ್ಲೇಷಿಸಲಿದ್ದೇನೆ.


ನೀರಾವರಿಯ ಧೀರರು :

ಭಗೀರಥನ ಹೆಸರನ್ನು ಬಹಳ ಜನ ಕೇಳಿರುತ್ತೀರಿ.‌ ತಪಸ್ಸು‌ ಮಾಡಿ ಗಂಗೆಯನ್ನು ಭೂಮಿಗಿಳಿಸಿದವನು. ನದಿಯಾಗಿ ಹರಿಸಿದವನು. ಈ ಪ್ರಸಂಗದಲ್ಲಿಯೇ ಗಂಗೆ ಶಿವನ ಮುಡಿ ಸೇರಿದ್ದು ಮತ್ತು ಪಾರ್ವತಿಗೆ ಸವತಿಯಾಗಿದ್ದು.‌  ಚೆನ್ನೈ ಬಳಿಯ ಮಹಾಬಲಿಪುರಂ ಎಂಬ ದೇವಾಲಯ ಸಮುಚ್ಚಯದಲ್ಲಿ  ಅರ್ಜುನನ ತಪಸ್ಸು ಎಂದು ತಪ್ಪು ಹೆಸರು ಕೊಟ್ಟಿರುವ ಒಂದು ಬಂಡೆ ಕೆತ್ತನೆ ನಿಜವಾಗಿ ಭಗೀರಥನ‌ ತಪಸ್ಸು .‌ ಅದರಲ್ಲಿ ಸಕಲ ಜೀವ ಜಗತ್ತು ನೀರಿಲ್ಲದೆ ಅನುಭವಿಸುವ ಸಂಕಟ ಮತ್ತು ನೀರು ಸಿಕ್ಕಾಗ ಅವರ ಆನಂದವನ್ನು ಚಿತ್ರಿಸುತ್ತದೆ. ಹೀಗೆ ಕೆಲವು ದೇವಾಲಯಗಳ ಉಬ್ಬು ಶಿಲ್ಪಗಳಲ್ಲಿ ಭಗೀರಥನ ತಪಸ್ಸು ಕೂಡಾ ಸ್ಥಾನ‌ ಪಡೆದಿದೆ . ಭಗೀರಥನ ಈ ಪುರಾಣ ಜನರಿಗೆ ನೀರನ್ನು ಒದಗಿಸಲು ನದಿಯನ್ನು ತಿರುಗಿಸಿದ, ಅಣೆಕಟ್ಟು, ಕಾಲುವೆಗಳನ್ನು ನಿರ್ಮಿಸಿದ ಯಾವುದೋ ಮುಖ್ಯ ಕಾರ್ಯದ ಬಗ್ಗೆ  ಹೇಳುತ್ತಿರಬಹುದು.
ಬಲರಾಮನ ಬಗೆಗಿನ ಒಂದು ಕತೆಯಲ್ಲಿ ಅವನು ಯಮುನಾ ನದಿಯನ್ನೇ ನೀರಿಲ್ಲದ ತನ್ನೂರ ಬಳಿಗೆ ಸೆಳೆದು ತಂದ ಪ್ರಸಂಗ ಇದೆ.‌ ಅವನು ತನ್ನ ಆಯುಧವಾದ ನೇಗಿಲನ್ನೇ ಉಪಯೋಗಿಸಿ ನದಿಯ ದಡವನ್ನು ಎಳೆದಾಗ ಯಮುನೆ ಅವನು ಎಳೆದಲ್ಲಿಗೆಲ್ಲಾ ಬಂದಳಂತೆ. ಇದಂತೂ ಸ್ಪಷ್ಟವಾಗಿ ಕಾಲುವೆಯನ್ನು ನಿರ್ಮಾಣ ಮಾಡಿದ ಕಾರ್ಯವೇ ಎಂಬ ಬಗ್ಗೆ ಅನುಮಾನವಿಲ್ಲ.
ಹೀಗೆ ಸಾವಿರಾರು ಕೆರೆಗಳನ್ನು ನಿರ್ಮಿಸಲು  ಪ್ರಯತ್ನಿಸಿದವರನ್ನು, ಅದಕ್ಕೆ ಬಲಿ ಎಂದು ಪ್ರಾಣ ಮಹಿಳೆಯರನ್ನು ದೈವಗಳನ್ನಾಗಿ ಪರಿಗಣಿಸಿ ಜಾನಪದ ಹಾಡುಗಳು ಮತ್ತು ಸ್ಥಳೀಯ ದೇವತೆಗಳ ಪುರಾಣಗಳು ನೆನಪಿಸಿಕೊಂಡಿವೆ.
ಭಾರತದ ಬುಡಕಟ್ಟುಗಳು ತಮ್ಮ ಸಮುದಾಯದ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸಿದ ಬುಡಕಟ್ಟು ವೀರರನ್ನು ದೇವತೆಗಳಾಗಿ ಭಾವಿಸಿವೆ. ಇಂತಹ ದೇವರುಗಳ  ಸಂಖ್ಯೆಯಂತೂ ಅಧಿಕ. ತುಳು,ಕೊಡವ ಸಮುದಾಯಗಳ ದೈವಗಳು ಭಿನ್ನವಾಗಿ ಕಂಡರೂ ಇವರುಗಳು ಹಲವರು ಬುಡಕಟ್ಟು ವೀರರುಗಳು. ಹುಲಿ,ಚಿರತೆಗಳನ್ನು ಎದುರಿಸಿ ಜೀವಿಸಲು ಕಲಿಸಿದವರು ಅಥವಾ ಪ್ರಾಣ ತೆತ್ತವರು , ಒಂದು ಊರನ್ನು ಅಥವಾ ಹಟ್ಟಿ, ಪಾಳ್ಯವನ್ನು‌ ಸ್ಥಾಪಿಸಿದವರು ಕೂಡಾ ಪೂಜಿಸಲ್ಪಟ್ಟಿದ್ದಾರೆ.
ಹೀಗೆ ಆದಿಮ ಜನರು ತಮ್ಮ ಬದುಕಿಗೆ ನೆರವಾದವರನ್ನು ನೆನಪಿಸಿಕೊಳ್ಳಲು ಆರಿಸಿದ ದಾರಿ ಅವರನ್ನು ಪೂಜಿಸುವುದು ಮತ್ತು ಕೆಲ ಆಚರಣೆಗಳ ಮೂಲಕ ಅವರ ಕೊಡುಗೆಯನ್ನು‌ಮುಂದಿನ‌ ತಲೆಮಾರಿಗೆ ಮನವರಿಕೆ ಮಾಡುವುದು. ಈ ದೈವ,ದೇವತೆಗಳಲ್ಲಿ ಪ್ರಾಚೀನ ಸಂಶೋಧಕರು,ವಿಜ್ಞಾನಿಗಳು ಸೇರಿದ್ದಾರೆ ಎಂಬುದು ವಿಜ್ಞಾನಿಗಳು, ಸಂಶೋಧಕರ ಬಗ್ಗೆ ಅಧ್ಯಯನ ಮಾಡುವ 21 ನೆಯ ಶತಮಾನದ ನಮಗೆ ಸೋಜಿಗದಂತೆ ಕಾಣುವುದು ಸಹಜ.
ಭಾರತದ ಪುರಾಣಗಳು, ಮಹಾಕಾವ್ಯಗಳು, ಕುಲ ಪುರಾಣಗಳು, ಸ್ಥಳೀಯ ದೇವತೆಗಳ ಕತೆಗಳು, ಜಾನಪದ ಕಾವ್ಯವನ್ನು ಅಧ್ಯಯನ, ಮಾನವಶಾಸ್ತ್ರೀಯ  ವಿಶ್ಲೇಷಣೆಗಳಿಗೊಳಪಡಿಸಿದರೆ ಹಲವು ಆವಿಷ್ಕಾರಗಳನ್ನು ಶೋಧಿಸಿದವರ ಬಗ್ಗೆ ಮತ್ತು ಶೋಧಗಳ ಬಗ್ಗೆ ತಿಳಿದುಬರುತ್ತದೆ.

ಹಿಂದಿನ ಲೇಖನಗಳನ್ನು ಓದಿದ ಕೆಲವರು ಋಗ್ವೇದದ ದೇವತೆಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಕೇಳಿದರು. ಋಗ್ವೇದದಲ್ಲಿ ಇರುವ ದೇವರುಗಳೆಲ್ಲ ಮಾನವ ಬದುಕಿನ ಮುಖ್ಯ ಆಧಾರಗಳಾದ ಪ್ರಕೃತಿಯ ಅಂಗಗಳು ಎಂಬುದು ಎಲ್ಲರಿಗೂ ತಿಳಿದ ವಿಷಯ. ಮಳೆ, ನೀರು,ಬೆಂಕಿ,ಸೂರ್ಯ,ಗಾಳಿ ಇವುಗಳೇ ಅಲ್ಲವೇ. ಇದು ಕೇವಲ ಋಗ್ವೇದ ಮತ್ತು ಹಿಂದೂ ಧರ್ಮದ ಪ್ರಶ್ನೆಯಲ್ಲ. ಇಡೀ ಜಗತ್ತಿನ ಎಲ್ಲ ಸಮುದಾಯಗಳೂ ಕೂಡಾ ಬುಡಕಟ್ಟು ಜೀವನದ ಹಂತದಲ್ಲಿ ಪ್ರಕೃತಿಯ ಈ ಅಂಗಗಳನ್ನು ದೇವತೆಗಳೆಂದು ಭಾವಿಸಿದವು.‌ ನಂತರ ಬೇರೆ ಬೇರೆ ದೇವರುಗಳನ್ನು ಆವಿಷ್ಕಾರ ಮಾಡಿಕೊಂಡ ಮೇಲೆ ಇವು ಮರೆಯಾದವು ಅಥವಾ ಅಂಚಿಗೆ ಸರಿದವು. ಈ ಪ್ರಕ್ರಿಯೆ ಮುಂದಿನ ಲೇಖನಗಳಲ್ಲಿ ವಿವರಿಸಲಿದ್ದೇನೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

June 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: