ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಧುಮಾಸ ಶರತ್ಕಾಲದ ಸಮೃದ್ಧ ಪ್ರೀತಿ…

ಹೇಮಲತಾ ಭಟ್ ಸಾಗರ

ಇವಳಿನ್ನೂ ಮಧುಮಾಸದೊಂದು ಹಗಲಿನ ಪುಟ್ಟ ಹಕ್ಕಿ. ಅವನೋ ಶರತ್ಕಾಲದ ಸಮೃದ್ಧತೆಯಿಂದ ತುಂಬಿದ ಸಿಹಿಯಾದ ಪರಿಪಕ್ವ ಹಣ್ಣು.
ಅದೆಲ್ಲಿಂದಲೋ ಇದ್ದಕ್ಕಿದ್ದಂತೆ ಥಟ್ಟನೆ
ಹಾರಿ ಬಂದ ಅವಳು ಅವನ ಒಲವಿನ ಹಣ್ಣ ಕುಕ್ಕಿ ಸವಿದಳು.
ಆಹಾ!
ಅದೆಂಥಾ ಸಿಹಿ !
ಮತ್ತೆ ಮತ್ತೆ ಸವಿಯುವಾಸೆ.
ಆದರದು ಸಾಧ್ಯವಾಗದು
ಬೇಟೆಗಾರರ ಹಾವಳಿಯಿಂದ ತಳಮಳ
ಎದೆಯೊಳಗೆ
ಈ ಪುಟ್ಟ ಹಕ್ಕಿಗೆ.
ಮಾಗಿದ ಹಣ್ಣು ಕೇಳಿತು ಇನ್ನೆಷ್ಟು ದಿನ ಹೀಗೆಯೇ ನಾನಿರಲು ಸಾಧ್ಯ ?!
ಪುಟ್ಟ ಹಕ್ಕಿ ಚಿಂತಾಕ್ರಾಂತವಾಯಿತು.
ನನ್ನ ಇವನ ಸ್ನೇಹ ಉಳಿಯಲು ಈ ಸವಿಯ ಉಳಿಸಿಕೊಳ್ಳಲು ದಾರಿ ಇದೆಯೇ ?
ಹಾರಾಡಿತು ಚೀರಾಡಿತು
ಅರಚಾಡಿತು
ಸುತ್ತಿ ಸುತ್ತಿ ಸುಸ್ತಾಯಿತು.
ದಾರಿ ಇದೆಯೇ ? ಸಿಕ್ಕ ಸಿಕ್ಕವರನ್ನೆಲ್ಲ ಕೇಳಿತು.


ಹಗುರಾಗಲೇ ಇಲ್ಲ ಈ ಪುಟ್ಟ ಹಕ್ಕಿ.
ಇನ್ನೇನು ಮಾಡಲಿ ?
ಕಾಲ ಅಷ್ಟೊಂದು ಕ್ರೂರಿಯೇನು?! ಎಲ್ಲರನೂ ಮಣ್ಣಿಗೆ ಉರುಳಿಸಿಬಿಡುವ ಈ ಕಾಲನನು ಅಡ್ಡಗಟ್ಟಿ ತಡೆಯುವುದಾದರೂ ಹೇಗೆ ?!
ಹೇಗೆ ಉಳಿಸಿಕೊಳ್ಳಲಿ
ಮಾಗಿದ ಹಣ್ಣಿನ
ಈ ಸವಿಯಾದ ಸ್ನೇಹ?!
ಭಾರವಾಯಿತು ಪುಟ್ಟ ಹಕ್ಕಿ.
ದಾರಿ ಕಾಣದೇ ಮರದಲ್ಲೇ ಮುದುಡಿ ಕುಳಿತಿತ್ತು ಚಿಂತಾಕ್ರಾಂತವಾಗಿ.
ಓ ಕಾಲವೇ ನನ್ನನೂ ಕೊಂಡೊಯ್ಯಿ ನಿನ್ನ ಪಾಶದೊಳು.
ಹಣ್ಣಿಲ್ಲದೆ ಇನ್ನೆಷ್ಟು ಕಾಲ ಹಸಿದಿರಲು ಸಾಧ್ಯ ಈ ಪುಟ್ಟ ಹಕ್ಕಿ?!
ಕ್ರೂರಿ ಕಾಲವೇ ನನ್ನನೂ ಕೊಂಡೊಯ್ಯಿ ಹಣ್ಣಿನೊಡನೆಯೇ .
ಇಲ್ಲವೇ ಬಿಟ್ಟು ಬಿಡು ನನಗೆ ಈ ಹಣ್ಣನು. ಪ್ರಾರ್ಥಿಸಿಸುವೆ.
ಅಷ್ಟು ಹೇಳಿ ಮೌನವಾಯಿತು ಪುಟ್ಟ ಹಕ್ಕಿ.

‍ಲೇಖಕರು Admin

28 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading