ಮಧುಕರ್ ಬಳ್ಕೂರು ಸರಣಿ ಕಥೆ 21 – ಕ್ರಿಕೆಟ್ ಮ್ಯಾಚ್ ಗಳು ಬದುಕಿಗೆ ಬಹು ದೊಡ್ಡ ದಾರಿದೀಪ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

ಹಿಂದಿನ ಸಂಚಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

21

“ಸಚಿನ್ನಾ..ಬರೀ ರೆಕಾರ್ಡ್ ಗಳಿಗಷ್ಟೇ ಮಗಾ.. ದ್ರಾವಿಡಾ..ಬರೀ ಕುಟು ಕುಟು ಮಾಡ್ತಾನ್ ಮಗಾ..ಗಂಗೂಲಿನಾ… ಬರೀ ಆಫ್ ಸೈಡ್ ಅಷ್ಟೇ ಮಗಾ… ಲೆಗ್ ಸೈಡ್ ವೀಕೂ… ಸೆಹ್ವಾಗಾ..ಹೊಡೆದ್ರೆ ನೂರು ಮಗಾ.. ಇಲ್ಲಾಂದ್ರೆ ಜೀರೋ..ನಂಬಕ್ಕಾಗೋಲ್ಲ… ಇನ್ನು ಯುವರಾಜ್ ಸಿಂಗ್ ಬೆಟರ್ರೆ ಮಗಾ.. ಆದ್ರೆ ಟೆಸ್ಟ್ ನಲ್ಲಿ ಇಲ್ಲ ಮಗಾ.. ಇನ್ನು ಲಕ್ಷ್ಮಣ್ ಟೆಸ್ಟ್ ಗಷ್ಟೇ ಮಗಾ.. ಓನ್ ಡೇ ಗೆ ಅನ್ ಫೀಟ್…”
ಅಲ್ಲಿಗೆ ಇಂಡಿಯನ್ ಟೀಮ್ ನಲ್ಲಿರೋರು ಯಾರೂ ಸರಿ ಇಲ್ಲ ಮಗಾ….

ಕ್ರಿಕೆಟಿಗರೆಂದರೆ ಸೂಪರ್ ಹೀರೋ, ಪ್ರತ್ಯಕ್ಷ ದೇವರುಗಳೆಂದು ಭಾವಿಸಿದ ಆ ಬಾಲ್ಯದ ದಿನಗಳಿಂದ ಹಿಡಿದು ಟೀಮ್ ನಲ್ಲಿರೋ ಯಾರೂ ಸರಿ ಇಲ್ಲ ಮಗಾ ಅನ್ನುವಷ್ಟರ ಮಟ್ಟಿಗೆ ಮೆಂಟಾಲಿಟಿ ಬೆಳೆಯೋಕೆ ಕಾರಣ, ನಾವು ಅವರ ತರಹ ಆಗಲಿಲ್ಲ ಅನ್ನೋ ಅಸಮಾಧಾನಾನ? ಇಲ್ಲಾ ಒಳ್ಳೆ ಕೋಚ್, ಗಾಢ್ ಫಾದರ್ ಸಿಕ್ಕಿದಿದ್ರೆ ನಾವು ಕೂಡ ಅವರ ತರಹ ಆಗ್ತಿದ್ದೇವು ಅದರಲ್ಲೇನು ಮಹಾ ಅನ್ನುವ ಧೋರಣೆಯಾ..? ಗೊತ್ತಿಲ್ಲ. ಅಂತೂ ಮೀಸೆ ಬಲಿತು ಡಿಗ್ರಿ ಓದೋ ಹೊತ್ತಿಗೆ ಒಂಥರಾ ಎಲ್ಲವೂ ಇಷ್ಟೇ ಅಂತ ಅನ್ನಿಸಲಾರಂಭಿಸಿದ್ದಂತೂ ನಿಜ. ಇದಕ್ಕೆ ಸರಿಯಾಗಿ ಕ್ರಿಕೆಟ್ ಏನು ಕೂಳು ಹಾಕುತ್ತಾ.. ಬ್ಯಾಟ್ ಹಿಡಿದೋರೆಲ್ಲ ಸಚಿನ್ ಆಗೋಲ್ಲ.. ಸುಮ್ಮನೆ ದುಡಿಯೋ ದಾರಿ ನೋಡ್ಕೊ.. ಅನ್ನೋ ಡೈಲಾಗ್ ಗಳೆಲ್ಲ ಮನೆಯಲ್ಲಿ ಕೇಳಿ ಕೇಳಿ ಕ್ರಿಕೆಟ್ ಅನ್ನೋದು ಒಲ್ಲದ ದ್ರಾಕ್ಷಿ ಹುಳಿ ತರಾನೂ ಕಂಡಿರಬಹುದು.

ಹಾಗಿದ್ರೆ ಇಂಗ್ಲೀಷರ ಈ ಜಂಟಲ್ ಮ್ಯಾನ್ ಆಟ ಅಮೆರಿಕನ್ನರು ಹೇಳಿದಂತೆ ಮೂರ್ಖರ ಆಟವಾ..? ಇದನ್ನು ನೋಡುವವರೆಲ್ಲ ಮೂರ್ಖರಾ..? ದೊಡ್ಡವ್ರು ಹೇಳಿದಂತೆ ನಮ್ಮಂತ ಹುಡುಗರನ್ನೆಲ್ಲ ಹಾಳು ಮಾಡಿದ್ದು ಈ ಮೂರ್ಖರ ಆಟನೆನಾ…? ಹುಡುಗರೆಲ್ಲ ಹುಚ್ಚು ಹಿಡಿಸಿಕೊಂಡು ನೋಡುವ ಈ ಕ್ರಿಕೆಟಿಗರಿಂದ ಕಲಿಯುವಂತದ್ದು ಏನೂ ಇಲ್ಲವಾ…? ಹೀಗಂತ ಯೋಚಿಸಿದ್ರೆ ಯಾಕಿಲ್ಲ ಅಂತಲೇ ಕೇಳಬೇಕಾಗುತ್ತೆ. ಅಂತದ್ದೇನಿದೆಯಪ್ಪಾ ಕ್ರಿಕೆಟಿಗರಿಂದ ಕಲಿಯುವಂತದ್ದು ಅಂತ ನೋಡುತ್ತಾ ಹೋದರೆ ಸಾಕಷ್ಟು ಸಂಗತಿಗಳು ಸಿಗುತ್ವೆ.
ಮೊದಲಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿಂದಲೇ ಶುರುಮಾಡೋಣ.

“ಅಯ್ಯೋ ಅವರಿಗೇನು ಬಿಡಿ..? ಸಚಿನ್ ತನ್ನ ಜೀವನದಲ್ಲಿ ಎರಡೇ ನಿರ್ಧಾರ ಮಾಡಿರೋದು ಗೊತ್ತಾ.? ಒಂದು ಅವರು ಕ್ರಿಕೆಟ್ ಆಯ್ಕೆ ಮಾಡಿಕೊಂಡಿದ್ದು.. ಎರಡನೇದು ಅಂಜಲಿಯವರನ್ನು ಮದುವೆಯಾಗಿದ್ದು.. ಈ ಎರಡು ನಿರ್ಧಾರಗಳಿಂದ ಅವರೆಲ್ಲೋ ಹೋಗಿಬಿಟ್ಟರು. ಬಿಡಿ, ನಮಗೆಲ್ಲ ಅಂತಾ ಅದೃಷ್ಟ, ಯೋಗ ಎಲ್ಲಿದೆ” ಹಾಗಂತ ಆಡಿಕೊಳ್ಳುವವರನ್ನು ಕೇಳಿದ್ದೇನೆ. ಅಂತವರಿಗೆ ಒಂದ್ ಮಾತು. ಹಾಗೆ ಹನ್ನೊಂದನೇ ವಯಸ್ಸಿಗೆ ಮಾಡಿದ ನಿರ್ಧಾರವನ್ನು ಶಿಸ್ತು, ಶೃದ್ಧೆ, ಏಕಾಗ್ರತೆ, ನಿರಂತರ ಅಭ್ಯಾಸಗಳಿಂದ ಮೇಲಕ್ಕೆ ಬಂದು, ಯಶಸ್ಸಿನ ಕೀರ್ತಿ ಶಿಖರವನ್ನು ಚಿಕ್ಕ ವಯಸ್ಸಿನಲ್ಲೇ ಕಂಡರೂ ಅದರ ಅಮಲನ್ನು ಏರಿಸಿಕೊಳ್ಳದೆ, ಈಗಲೂ ಅದೇ ಸೌಜನ್ಯ ಉಳಿಸಿಕೊಂಡಿರುವ ಸಚಿನರ ಗುಣ, ಸಕ್ಸಸ್ ಆದ ಮೇಲೂ ಹೇಗೆ ಇರಬೇಕೆಂಬುದಕ್ಕೆ ಎಲ್ಲರಿಗೂ ಪಾಠ.

ತನ್ನ ಇಪ್ಪತ್ತನಾಲ್ಕು ವರುಷಗಳ ಕ್ರಿಕೆಟ್ ಕೆರಿಯರ್ ನಲ್ಲಿ ತೀರಾ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ, ಇರುಸು ಮುರುಸಾಗುವ ಸಂಧರ್ಭಗಳಲ್ಲೂ, ತನ್ನ ಸಹನೆ ಜಾಣ್ಮೆಗಳಿಂದ ತಾನಾಯಿತು ತನ್ನ ಆಟವಾಯಿತು ಅಂತ ಬರೀ ಆಟದ ಕಡೆಗಷ್ಟೇ ಫೋಕಸ್ ಮಾಡಿದ ಸಚಿನ್, ಕಠಿಣ ಸಂದರ್ಭಗಳಲ್ಲಿ ಯುವಕರು ಹೇಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಇರಬೇಕೆನ್ನುದಕ್ಕೆ ಬಹುದೊಡ್ಡ ಮಾದರಿ. ಸಚಿನ್ ಗಾಡ್ ಗಿಫ್ಟ್ ಕ್ರಿಕೆಟರ್ರೆ ಇರಬಹುದು. ಸಮಯ, ಅವಕಾಶಗಳು ಅವರಿಗೆ ಅನುಕೂಲಕರವಾಗೇ ಸಿಕ್ಕಿರಬಹುದು. ಆದರೆ ಅವರಲ್ಲಿನ ಮಹತ್ವಾಕಾಂಕ್ಷೆ, ಕೊನೆಯವರೆಗೂ ಉಳಿಸಿಕೊಂಡ ಆ ಬದ್ದತೆಯ ಗುಣವನ್ನು ವೃತ್ತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಹೊರಡುವ ಪ್ರತಿಯೊಬ್ಬರೂ ಅನುಸರಿಸಬಹುದು.

ಬಿಡಿ, ಎಲ್ಲರಿಗೂ ಸಚಿನ್ ಆಗಲು ಸಾಧ್ಯವಿಲ್ಲ. ಹಾಗೆಯೇ ಒಂದು ಟೀಮ್ ನಲ್ಲಿ ಎಲ್ಲರೂ ಸಚಿನ್ ತರಹ ಯೋಚಿಸಿದರದು ನಡೆಯುವುದೂ ಇಲ್ಲ. ಅಲ್ಲಿ ದ್ರಾವಿಡ್ ಮಾದರಿಯೂ ಬೇಕಾಗಿರುತ್ತೆ. ಅಂತದ್ದೊಂದು ಮಾದರಿ ಹುಟ್ಟುಹಾಕಿ, ಆ ಸ್ಥಾನವನ್ನು ತಾನೇ ತುಂಬಿ, ಭಾರತದ ತಡೆಗೋಡೆ ಅಂತಾ ಕರೆಸಿಕೊಂಡವರು ದ್ರಾವಿಡ್. ದೊಡ್ಡ ಸಂಸ್ಥೆಯಲ್ಲಿ ಘಟಾನುಘಟಿಗಳೆದುರು ನಾನೆಲ್ಲಿ ಐಡೆಂಟಿಟಿ ಕಂಡುಕೊಳ್ಳಲಿ ನಾನೇಗೆ ಅವರೆದುರು ಸ್ಪರ್ದಿಸಲಿ ಅಂತ ಯೋಚಿಸುವ ಯುವಕರು ದ್ರಾವಿಡ್ ರ ಈ ಗುಣವನ್ನು ಆದರ್ಶವಾಗಿ ತೆಗೆದುಕೊಂಡರೆ ಹೆಚ್ಚು ಸೂಕ್ತ. ತಂಡಕ್ಕಾಗಿ ಎಂತಹ ಪಾತ್ರ ನಿರ್ವಹಿಸೋದಕ್ಕೂ ಸಿದ್ದವಿದ್ದ ದ್ರಾವಿಡ್, ತಮಗೆ ಸಿಕ್ಕಿದ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ನಂಬಿಕೆಗೆ ಪಾತ್ರರಾಗುವುದರಲ್ಲಿ ಸದಾ ಮುಂದಿದ್ದರು ಅನ್ನೋದು ಅವರಿಗಿರುವ ಸಮರ್ಪಿತ ಭಾವ, ಕ್ಷಮತೆಯನ್ನು ಎತ್ತಿ ತೋರಿಸುತ್ತದೆ. ಈ ಗುಣ ಹೊಸ ಕಾರ್ಯಕ್ಷೇತ್ರದಲ್ಲಿ ನಾನು ಹೇಗೆ ಶುರುಮಾಡಲಿ ಅಂತ ಯೋಚಿಸುವ ಎಲ್ಲರಿಗೂ ಮಾದರಿ.

ಇನ್ನು ಕೆಲವರಲ್ಲಿ ಯಾರಲ್ಲಿಯೂ ಇರದ ಒಂದ್ ವಿಶೇಷ ಗುಣ ಇರುತ್ತೆ. ಅಂದರೆ ಯಾವತ್ತಿಗೂ ಯಾವುದೇ ನೀತಿ ನಿಬಂಧನೆಗಳಿಗೆ ಒಳಪಡದ, ಯಾರ ಅಂಕೆಗೂ ಸಿಕ್ಕದ ತಾನು ನಡದದ್ದೆ ದಾರಿ ಅನ್ನೋ ತರಾ ಇರುವವರು. ಅಂತವರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡರೆ ಅವರು ಕೂಡ ಅತ್ಯದ್ಭುತ ಆಸ್ತಿಯಾಗಬಲ್ಲರು ಎನ್ನುವುದಕ್ಕೆ ಡ್ಯಾಶಿಂಗ್ ಬ್ಯಾಟ್ಸ್ಮನ್ ಸೆಹ್ವಾಗ್ ಅವರನ್ನು ಗಂಗೂಲಿ ಓಪನರ್ ಆಗಿ ಬಳಸಿಕೊಂಡ ರೀತಿಯೇ ಸಾಕ್ಷಿ. ಸೆಹ್ವಾಗ್ ಅವರಲ್ಲಿರುವ ಸಹಜ ಸ್ವಭಾವದ ಗುಣವನ್ನು ಯಾವುದೇ ರೀತಿಯಲ್ಲೂ ಬಂಧಿಸದೇ, ಯಾವ ಹಂತದಲ್ಲೂ ನಿರ್ಲಕ್ಷಿಸದೆ ಅವರನ್ನು ಅವರಿರುವ ರೀತಿಯಲ್ಲಿಯೇ ಆಡಲು ಬಿಟ್ಟ ಗಂಗೂಲಿ ಸಾಕಷ್ಟು ಯಶಸ್ಸು ಕಂಡರು ಅನ್ನೋದನ್ನ ಇತಿಹಾಸವೇ ಹೇಳುತ್ತೆ. ಅದರಂತೆಯೇ ನೀವು ಕೂಡ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಪ್ಲಸ್ ಮೈನಸ್ ಪಾಯಿಂಟ್ ತಿಳಿದುಕೊಂಡು ಕಾರ್ಯ ನಿರ್ವಹಿಸಿದರೆ ಹೆಚ್ಚು ಮುನ್ನಡೆ ಕಾಣಬಹುದು. ಆದರೆ ಅದೇ ನೀವು ಸೆಹ್ವಾಗ್ ರೀತಿಯ ಮನಸ್ಥಿತಿಯವರಾದರೆ ನಿಮ್ಮತನವನ್ನು ಯಾವತ್ತಿಗೂ ಬಿಟ್ಟುಕೊಡದೆ ಪ್ರಾಮಾಣಿಕವಾಗಿ ನಿಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಆಗ ಒಂದಲ್ಲ ಒಂದು ದಿನ ನಿಮ್ಮತನಕ್ಕೆ ಮಾನ್ಯತೆ ದಕ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬಹುದು.

ತಾಳ್ಮೆ, ಸತತ ಪರಿಶ್ರಮ, ಆಶಾವಾದಿತನ ಇದ್ದರೆ ನಿಮಗೆ ಲಭ್ಯವಾಗಬೇಕಾಗಿರೋದು ತಡವಾಗಿಯಾದರೂ ಸಿಕ್ಕೆ ಸಿಗುತ್ತೆ ಎನ್ನುವುದಕ್ಕೆ ಅನಿಲ್ ಕುಂಬ್ಳೆ ನಾಯಕರಾಗಿದ್ದೆ ಸಾಕ್ಷಿ. ಎಲ್ಲಾ ಅರ್ಹತೆ ಇದ್ದರೂ ತಮಗಿಂತಲೂ ಕಿರಿಯರಾದ ಗಂಗೂಲಿ, ದ್ರಾವಿಡ್, ಧೋನಿಯ ನಾಯಕತ್ವದಡೀ ಯಾವುದೇ ವಿರೋಧ ಮುಜುಗರಗಳಿಲ್ಲದೆ ಆಡಿದ ಕುಂಬ್ಳೆ ಕೊನೆಗೂ ವೃತ್ತಿ ಬದುಕಿನ ಸಂಜೆಯಲ್ಲಿ ನಾಯಕತ್ವದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದದ್ದನ್ನ ನೋಡಿದರೆ ಕಾಯುವಿಕೆಗಿರುವ ಮಹತ್ವ ಗೊತ್ತಾಗುತ್ತೆ.

ಸಂಸ್ಥೆಯಲ್ಲಿ ಯಾವುದೇ ಕೆಲಸವಿರಲಿ ಯಾರು ಅದನ್ನು ಶುರುಮಾಡಿದರು ಅನ್ನೋದಕ್ಕಿಂತಲೂ ಯಾರು ಅದನ್ನು ಯಶಸ್ವಿಯಾಗಿ ಮುಗಿಸಿದರು ಅನ್ನೋದು ಮುಖ್ಯವಾಗುತ್ತದೆ. ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಅಂತಹ ಒಬ್ಬ ಮ್ಯಾಚ್ ಫಿನಿಶರ್ ಎಂದೇ ಹೇಳಬಹುದು. ಸಮಯಕ್ಕೆ ತಕ್ಕಂತೆ ತಾಳ್ಮೆ ಹಾಗೂ ಸ್ಪೋಟಗೊಳ್ಳುವ ಗುಣಗಳನ್ನು ತನ್ನ ಆಟದಲ್ಲಿ ಮೈಗೂಡಿಸಿಕೊಂಡಿರುವ ಧೋನಿ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತನ್ನದೆ ಆದ ವಿಶಿಷ್ಟ ಕಾರ್ಯತಂತ್ರದ ಮೂಲಕ ಚಾಕಚಕ್ಯತೆ ತೋರುವ ಹಾಗೂ ಹೋರಾಟ ರೂಪದಲ್ಲಿ ಅದನ್ನು ಕೊನೆಯವರೆಗೂ ಚಾಲ್ತಿಯಲ್ಲಿರಿಸುವ  ಸ್ವಭಾವದವರು. ಅವರ ಈ ಗುಣ ಕ್ಲೀಷ್ಟ ಸಂಧರ್ಭಗಳಲ್ಲಿ ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬಹುದೆಂಬುದನ್ನು ತಿಳಿಸಿ ಹೇಳುತ್ತೆ.

ಇನ್ನು ಕೆಲವರಿರುತ್ತಾರೆ. ಒಳ್ಳೆಯ ಕೆಲಸಗಾರರು ಅನ್ನೋದಕ್ಕಿಂತಲೂ ಲೀಡರ್ ಶಿಪ್ ಕ್ವಾಲಿಟಿಯೇ ಅವರಲ್ಲಿ ದೊಡ್ಡದಿರುತ್ತೆ. ಸಮಸ್ಯೆ ಎಂದರೆ ಆ ಕ್ವಾಲಿಟಿ ಎಲ್ಲರಿಗೂ ಕಾಣೋದು ಅವರು ಆ ಗದ್ದುಗೆ ಏರಿದಾಗಲೇ. ನಮ್ಮ ಸೌರವ್ ಗಂಗೂಲಿ ಕೂಡ ಬರೀ ಆಟಗಾರರಿದ್ದಾಗ ಸ್ಪೋರ್ಟಿವ್ ಪ್ಲೇಯರ್ ಆಗಿ ಯಾರಿಗೂ ಕಂಡವರಲ್ಲ. ಆದರೆ ಒಮ್ಮೆ ನಾಯಕತ್ವದ ಗದ್ದುಗೆ ಮೇಲೆ ಕೂತಿದ್ದೆ ಕೂತಿದ್ದು… ಅವರಲ್ಲಿರುವ ಆ ಕಮಾಂಡ್ ಮಾಡುವ ಗುಣ ಪ್ರಕಟಗೊಂಡೇ ಬಿಟ್ಟಿತು. ಇಷ್ಟಕ್ಕೂ ಗಂಗೂಲಿಗೆ ಕಪ್ತಾನಗಿರಿ ಒಲಿದು ಬಂದಿದ್ದು ಅನಿರೀಕ್ಷಿತವಾಗಿ… ಮ್ಯಾಚ್ ಫಿಕ್ಸಿಂಗ್ ಸ್ಕ್ಯಾಂಡಲ್ ನಿಂದ ಇಂಡಿಯನ್ ಕ್ರಿಕೆಟ್ ಹಾದಿ ಹಳಿ ತಪ್ಪಿದಾಗ, ಭವಿಷ್ಯದ ಕ್ಯಾಪ್ಟನ್ ಅಂತ ಹೆಸರಾಗಿದ್ದ ಅಜಯ್ ಜಡೇಜಾ ಫಿಕ್ಸಿಂಗ್ ಕರಿನೆರಳಿನಲ್ಲಿ ಸಿಲುಕಿದ್ದಾಗ, ಸಚಿನ್ ಬೇರೆ ತಾವಾಗಿಯೇ ಬೇಸತ್ತು ಆ ಗಾದಿಯಿಂದ ಇಳಿದಿದ್ದಾಗ, ಆಯ್ಕೆಗಾರರ ಕಣ್ಣಿಗೆ ಗಂಗೂಲಿ ಕಂಡಿದ್ದರು. ಅಂತಹ ಕಠಿಣ ಸಮಯದಲ್ಲಿ ತಂಡದ ಚುಕ್ಕಾಣಿ ಹಿಡಿದ ಗಂಗೂಲಿ ತನ್ನ ದಿಟ್ಟ ಹಾಗೂ ಚಾಣಕ್ಯ ಕಾರ್ಯತಂತ್ರಗಳಿಂದ ಭಾರತಕ್ಕೆ ಹೊಸ ದಿಕ್ಕು ತೋರುವಲ್ಲಿ ಯಶಸ್ವಿಯಾಗಿದ್ದರು. ಇದು ನಿಮಗೂ ಅನ್ವಯಿಸಬಹುದು. ಈಗ ನೀವೆನಾಗಿದ್ದೀರಿ ಅದು ನಿಜ ಅರ್ಥದ ನೀವಲ್ಲದೆ ಇರಬಹುದು. ಆದರೆ ಪ್ರತಿಯೊಬ್ಬರಿಗೂ ಅವರ ನೈಜ ಸಾಮರ್ಥ್ಯ ತೋರುವ ಒಂದು ಪ್ಲಾಟ್ ಫಾರಂ ಅನಿರೀಕ್ಷಿತವಾಗಿಯಾದರೂ ಸಿಕ್ಕೆ ಸಿಕ್ಕುತ್ತೆ. ಹಾಗೆ ಅದು ಸಿಕ್ಕಾಗ ಅದನ್ನು ಬಳಸಿಕೊಳ್ಳುವ ಛಾತಿ, ತೋರುವ ಧೈರ್ಯವನ್ನು ಗಂಗೂಲಿಯವರ ವ್ಯಕ್ತಿತ್ವದಿಂದ ಕಲಿಯಬಹುದು. ಅಧಿಕಾರ ಸಿಕ್ಕಾಗ ಹೇಗೆ ಗತ್ತು, ಗಾಂಭೀರ್ಯ, ದಿಟ್ಟತನದಿಂದ ಬಳಸಿಕೊಳ್ಳಬೇಕು ಎನ್ನುವುದಕ್ಕೆ ಗಂಗೂಲಿಗಿಂತ ಉತ್ತಮ ಉದಾಹರಣೆ ಇಲ್ಲ ಎನ್ನಬಹುದು.
ಇನ್ನು ಯುವರಾಜ್ ಸಿಂಗ್ ಮೈದಾನದಲ್ಲೂ ಹಾಗೂ ಜೀವನದಲ್ಲೂ ಫೈಟರ್ ಅನ್ನಿಸಿಕೊಂಡವರು. ಸದಾ ಧೈರ್ಯದಿಂದ ಮುನ್ನುಗ್ಗುವ ,ಹುಮ್ಮಸ್ಸಿನ ವ್ಯಕ್ತಿಯಾಗಿದ್ದ ಅವರು ನಿಜ ಅರ್ಥದಲ್ಲಿ ಯೂಥ್ ಐಕಾನ್ ಅಂತಲೇ ಅನ್ನಿಸಿಕೊಂಡವರು. ಮೈದಾನದಲ್ಲಿ ಇಂಪಾರ್ಟೆಂಟ್ ಸನ್ನಿವೇಶಗಳಲ್ಲೆ ಗಟ್ಟಿಯಾಗಿ ನಿಲ್ಲುತ್ತಿದ್ದ ಯುವರಾಜ್ ನಿಜ ಜೀವನದಲ್ಲೂ ತಮಗಂಟಿದ ಕ್ಯಾನ್ಸರ್ ವಿರುದ್ಧ ಅಷ್ಟೇ ಗಟ್ಟಿಯಾಗಿ ನಿಂತು ಗೆದ್ದುಬಿಟ್ಟವರು. ಯುವರಾಜ್ ಅವರ ಈ ಗುಣ ವೃತ್ತಿ ಜೀವನಕ್ಕಷ್ಟೇ ಅಲ್ಲದೇ ಜೀವನಕ್ಕೂ ಸ್ಪೂರ್ತಿ ಅಂತಲೇ ತಿಳಿಯಬಹುದು.

ಕ್ರಿಕೆಟ್ ನಲ್ಲಿ ಒಂದು ಮಾತಿದೆ. “ನೀವೊಂದು ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾದರೆ ಮೊದಲು ಕ್ರೀಸ್ ನಲ್ಲಿ ಗಟ್ಟಿಯಾಗಿ ತಳ ಊರಬೇಕು ಎಂಬುದು.” ಇದು ನಿಮ್ಮ ವೃತ್ತಿ ಜೀವನಕ್ಕೂ ಅನ್ವಯಿಸುತ್ತೆ. ಸಂಸ್ಥೆಯೊಂದರಲ್ಲಿ ನೀವೊಂದು ದೊಡ್ಡ ಹಂತಕ್ಕೆ ಹೋಗಬೇಕಾದರೆ ಅಲ್ಲಿ ನೀವೊಂದಿಷ್ಟು ದಿನ ಗಟ್ಟಿಯಾಗಿ ತಳಊರಲೇಬೇಕಾಗುತ್ತೆ. ಕ್ರಿಕೆಟ್ ನಲ್ಲಿ ಸುನಿಲ್ ಗವಾಸ್ಕರ್ ಇದಕ್ಕೆ ದೊಡ್ಡ ಮಾದರಿಯಾಗಿದ್ದರು ಅಂತ ಕೇಳಿದ್ದೇವೆ. ಆದರೆ ತೊಂಭತ್ತರ ದಶಕದ ಮಟ್ಟಿಗೆ ವಿವಿಎಸ್ ಲಕ್ಷ್ಮಣ್ ಅಂತಹ ಒಬ್ಬ ಕ್ರಿಕೆಟರ್ ಆಗಿದ್ದರೆನ್ನಬಹುದು.

ಲಕ್ಷ್ಮಣ್ ಕ್ರಿಸ್ ನಲ್ಲಿ ಗಟ್ಟಿಯಾಗಿ ನಿಂತು ದೊಡ್ಡ ಇನ್ನಿಂಗ್ಸ್ ಆಡಿದಾಗಲೆಲ್ಲ ಇಂಡಿಯಾ ಸೇಫಾಗಿ ದಡ ಮುಟ್ಟಿತ್ತು ಎಂಬುದನ್ನು ಮರೆಯುವಂತಿಲ್ಲ. ಐತಿಹಾಸಿಕ ಕೋಲ್ಕತ್ತಾ ಟೆಸ್ಟ್ ಅನ್ನೆ ತೆಗೆದುಕೊಂಡರೆ ದ್ರಾವಿಡ್ ರ ಜೊತೆಗೂಡಿ ಅವರಾಡಿದ ಆ ಇನ್ನಿಂಗ್ಸ್ ಭಾರತವನ್ನು ಅಚ್ಚರಿಯ ರೀತಿಯಲ್ಲಿ ಫಾಲೋ ಆನ್ ನಿಂದ ಪಾರುಮಾಡಿದ್ದು ಅಲ್ಲದೆ, ಮ್ಯಾಚ್ ಅನ್ನ ಮಿರಾಕಲ್ ರೀತಿಯಲ್ಲಿ ಗೆಲ್ಲುವಂತೆ ಮಾಡಿತ್ತು. ಇದು ಮನ‌ಸು ಮಾಡಿದ್ರೆ ಜೀವನದಲ್ಲಿ ಯಾವುದು ಕೂಡ ಅಸಾಧ್ಯವಲ್ಲ ಎಂಬ ಸಂದೇಶವನ್ನು ನಿಚ್ಚಳವಾಗಿ ಹೇಳುತ್ತೆ.

“ಡೊಂಟ್ ಲೂಸ್ ಹೋಪ್” ಇದು ಅಂದಿನ ದಿನಗಳಲ್ಲಿ ಕಪಿಲ್ ದೇವ್ ಕ್ರಿಸ್ ನಲ್ಲಿ ಇದ್ದಾಗ ಈಡೀ ಭಾರತೀಯರು ಹೇಳುತ್ತಿದ್ದ ಮಾತುಗಳಿವು. ತಮ್ಮನ್ನ ತಾವು ಯಾವತ್ತಿಗೂ ಎಂತಹ ಸಂಧರ್ಭದಲ್ಲೂ ಬಿಟ್ಟು ಕೊಡಬಾರದು ಎನ್ನುವ ನಿಲುವಿನ ಕಪಿಲ್ ದೇವ್, ತಮ್ಮ ಇಡೀ ವೃತ್ತಿ ಬದುಕಿನಲ್ಲಿ ಹಾಗೇ ಇದ್ದು ಕೋಟ್ಯಾಂತರ ಭಾರತೀಯರ ಭರವಸೆ ನಂಬಿಕೆಗಳಿಗೆ ಪಾತ್ರರಾಗಿದ್ದರು. ಇದನ್ನು ನೋಡಿದರೆ ಅವರ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಕಾನ್ಫಿಡೆನ್ಸ್ ಲೆವೆಲ್ ಎಂತದ್ದು ಅನ್ನುವುದರ ಅರಿವಾಗುತ್ತೆ. ನೀವು ಕೂಡ ನಿಮ್ಮ ಕಾರ್ಯಕ್ಷೇತ್ರದಲ್ಲಿ ಇಂತದ್ದೊಂದು ಮನೋಧರ್ಮವನ್ನು ಮೂಡಿಸಿಕೊಂಡು ಇತರರ ಭರವಸೆ, ನಂಬಿಕೆಗಳಿಗೆ ಪಾತ್ರರಾಗುವ ಜರೂರಿ ಖಂಡಿತಾ ಇರುತ್ತೆ.

ತನ್ನ ಸ್ಟೈಲಿಶ್ ಆದ ಬ್ಯಾಟಿಂಗ್ ನ ಜೊತೆಗೆ ಡೌನ್ ಟು ಅರ್ಥ್ ಸ್ವಭಾವದಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ತಣ್ಣಗೆ ಮನಸೂರೆಗೊಂಡವರು ಅಜರುದ್ದೀನ್. ಆದರೆ ಎಲ್ಲವೂ ಚೆನ್ನಾಗಿಯೇ ಸಾಗುತ್ತಿರುವಾಗ ಮಾಡಿಕೊಂಡ ತಪ್ಪುಗಳಿಂದ ಕ್ರಿಕೆಟ್ ಬದುಕಿನ ಸಂಜೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿಬಿಟ್ಟಿದ್ದು ಕೂಡ ಒಂದು ಪಾಠ. ನೀವು ಯಾವುದೇ ಕಾರ್ಯಕ್ಷೇತ್ರ ಆರಿಸಿಕೊಳ್ಳಿ. ನೀವು ಹೇಗೆ ಬಂದಿರಿ, ಯಾವ ರೀತಿಯಲ್ಲಿ ಗೌರವ, ಪ್ರೀತಿಯನ್ನು ಸಂಪಾದಿಸಿದ್ದೀರಿ, ಅದೇ ರೀತಿಯಲ್ಲಿಯೇ ನಿರ್ಗಮಿಸಬೇಕು. ಆಗಲೇ ನಿಮಗೆ ಮರ್ಯಾದೆ. ಇಲ್ಲದಿದ್ದರೆ ನಿಮ್ಮಲ್ಲೆನೇ ಸ್ಪೇಷಾಲಿಟಿಗಳಿದ್ದರೂ, ನೀವೆನೇ ಕಡಿದು ಗುಡ್ಡೆ ಹಾಕಿದ್ದರೂ ಕೊನೆಯಲ್ಲಿ ಅದೆಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ರೀತಿಯಲ್ಲಿಯೇ ವ್ಯರ್ಥ. ಅಜರುದ್ದೀನ್ ಕ್ರಿಕೆಟ್ ಕೆರಿಯರ್ ನಿಂದ ಇಂತದ್ದೊಂದು ಪಾಠವನ್ನು ಅವಶ್ಯವಾಗಿ ಕಲಿಯಬಹುದು.

ಭಾರತದಂತಹ ದೇಶದಲ್ಲಿ ಅಸಂಖ್ಯಾತ ಯುವಕರು ದೇಶದ ಪರ ಆಡುವ ಕನಸನ್ನು ಕಂಡೇ ಇರುತ್ತಾರೆ. ಅಷ್ಟೇ ಏಕೆ ತಮ್ಮ ಪ್ರತಿಭೆ ಒರೆಗೆ ಹಚ್ಚೊದಕ್ಕಾಗಿ ಸತತ ಪ್ರಯತ್ನ ಪಡುತ್ತಾ, ಅವಕಾಶಕ್ಕಾಗಿ ಕಾಯುತ್ತಾ ಸಾಕಷ್ಟು ಶ್ರಮಿಸಿಯೂ ಇರುತ್ತಾರೆ. ಆದರೆ ಎಲ್ಲೋ ಕೆಲವರಿಗಷ್ಟೇ ಹನ್ನೊಂದು ಜನರಿರುವ ಆ ತಂಡದಲ್ಲಿ ಅವಕಾಶದ ಬಾಗಿಲು ತೆರೆದು ಸಕ್ಸಸ್ ಅನ್ನೊದು ಸಿಕ್ಕಿರುತ್ತದೆ. ಹಾಗೆ ಸಿಕ್ಕ ಸಕ್ಸಸ್ ಅನ್ನ ತಲೆಗೇರಿಸಿಕೊಳ್ಳದೆ ಉಳಿಸಿಕೊಳ್ಳೊದು ಕೂಡ ಅಂತಹ ಪ್ಲೇಯರ್ ಗಳಿಗೆ ಬಹು ದೊಡ್ಡ ಸವಾಲಿನ ಕೆಲಸವಾಗಿರುತ್ತೆ.

ಬಹುಶಃ ಆ ಹಾದಿಯಲ್ಲಿ ಎಡವಿದವರು ಪ್ರತಿಭಾವಂತ ಕ್ರಿಕೆಟರ್ ವಿನೋದ್ ಕಾಂಬ್ಳಿ. ತಮ್ಮ ಅಶಿಸ್ತು, ಅನುಚಿತ ವರ್ತನೆಗಳಿಂದ ತಮಗೆ ಸಿಕ್ಕ ಸಕ್ಸಸ್ ಜನಪ್ರಿಯತೆಯನ್ನು ತಮ್ಮ ಕೈಯಾರೆ ಹಾಳುಮಾಡಿಕೊಂಡ ಕಾಂಬ್ಳಿ, ರಾಷ್ಟ್ರೀಯ ತಂಡದಲ್ಲಿ ಆಡುವ ಆ ಸ್ಥಾನದ ಬೆಲೆ ಅದಕ್ಕಿರುವ ಗೌರವದ ಅರಿವು ತಮಗಿಲ್ಲ ಅನ್ನುವಂತೆ ನಡೆದುಕೊಂಡರು. ಅವರಿಗೆ ಹೋಲಿಸಿದರೆ ಅಡಿಯಿಂದ ಮುಡಿಯವರೆಗೂ ಭಾರತದ ಪರ ಜೋಡೆತ್ತುಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ನಮ್ಮ ಜಾವಗಲ್ ಶ್ರೀನಾಥ್ ಹಾಗೂ ವೆಂಕಟೇಶ್ ಪ್ರಸಾದ್ ಅವರ ಬಗ್ಗೆ ಅತೀವ ಹೆಮ್ಮೆ ಪಡಬೇಕು. ಕ್ರಿಕೆಟಿನಿಂದ ನಿವೃತ್ತಿ ಪಡೆದರೂ ಮ್ಯಾಚ್ ರೆಫ್ರಿಯಾಗಿ, ಯುವ ಪ್ರತಿಭೆಗಳಿಗೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಾ ಈಗಲೂ ಬಹು ಬೇಡಿಕೆಯಲ್ಲಿರುವ ಇವರ ಸೇವಾಪರತೆ ಮನಸ್ಥಿತಿ ಎಲ್ಲಾ ಯುವಕರಿಗೂ ಮಾದರಿ ಎನ್ನಬಹುದು.

ಈಗ ಹೇಳಿ..? ತೊಂಭತ್ತರ ದಶಕದ ಭಾರತೀಯ ಕ್ರಿಕೆಟಿಗರಿಂದ ಏನೇನಲ್ಲ ಕಲಿಯಲಿಕ್ಕಿಲ್ಲ ಹೇಳಿ..? ಇಲ್ಲಿ ನವಜೋತ್ ಸಿಂಗ್ ಸಿದ್ದುವಿನಿಂದ ಹಿಡಿದು ರಾಬಿನ್ ಸಿಂಗ್ ತನಕ ಎಲ್ಲರಿಂದ ಕಲಿಯಲು ಸಾಕಷ್ಟು ಪಾಠವಿದೆ. ಇದೇ ಸಿದ್ದು ಅದೆಷ್ಟು ಬಾರಿ ಫಿಟ್ ನೆಸ್ ಸಮಸ್ಯೆಗಳಿಂದ ಹೊರಗುಳಿದು ವಾಪಾಸ್ ಬಂದಿಲ್ಲ. ರಾಬಿನ್ ಸಿಂಗ್ ಅವರಂತೂ ಏಳುವರೆ ವರ್ಷಗಳ ಬಳಿಕ ತಮ್ಮ ಮೂವತ್ತಾ ಮೂರನೇ ವಯಸ್ಸಿಗೆ ರೀ ಎಂಟ್ರಿ ಕೊಟ್ಟು ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಳ್ಳುವಂತೆ ಪರ್ಫಾರ್ಮೆನ್ಸ್ ಮಾಡಿದ್ದು ಕಡಿಮೆ ಸಾಧನೆಯಾ..? ಇಷ್ಟೇ ವಿಷಯ.

ಪ್ರತಿಯೊಬ್ಬ ಕ್ರಿಕೆಟಿಗನಲ್ಲೂ ಪ್ಲಸ್ ಅಂಡ್ ಮೈನಸ್ ಎರಡೂ ಇರುತ್ತೆ. ಒಬ್ಬರು ಹೀಗಿರಬೇಕು ಅನ್ನೋದಕ್ಕೆ ಹೆಚ್ಚು ಸ್ಪೂರ್ತಿ ಆದರೆ, ಇನ್ನು ಕೆಲವರು ಹೀಗಿರಬಾರದು ಅಂತ ಪರೋಕ್ಷವಾಗಿ ತೋರಿಸುತ್ತಾರೆ. ಅದೆಷ್ಟೇ ಸಾಧಾರಣ ಕ್ರಿಕೆಟರ್ ಆದರೂ ಅವರಲ್ಲಿ ಸಕಾರಾತ್ಮಕ ಸಂಗತಿಗಳು ಕಂಡರೆ ನಮ್ಮ ವೃತ್ತಿ ಬದುಕಿಗೂ ಅಳವಡಿಸಿಕೊಳ್ಳುವ, ನಕಾರಾತ್ಮಕ ಸಂಗತಿಗಳು ಅದೆಷ್ಟೇ ದೊಡ್ಡ ಸ್ಟಾರ್ ಆಟಗಾರನಲ್ಲಿದ್ದರೂ ಅದರಿಂದ ಯಾವುದೇ ಪ್ರೇರಣೆಗೊಳ್ಳದೆ ಇರುವ ಮನಸ್ಥಿತಿ ನಮ್ಮದಾದರೆ ಕ್ರಿಕೆಟಿಗರು, ಕ್ರಿಕೆಟ್ ಮ್ಯಾಚ್ ಗಳು ನಮ್ಮ ಬದುಕಿಗೆ ಬಹು ದೊಡ್ಡ ದಾರಿದೀಪವಾಗಬಲ್ಲದು.

ಬಿಡಿ, ಭಾರತೀಯರಿಗೆ ಕ್ರಿಕೆಟೇ ಉಸಿರಲ್ಲವಾ..?ಅದಲ್ಲದಿದ್ದರೆ ಬದುಕೊದುಂಟಾ..? ಕ್ರಿಕೆಟ್ ಎಂಬ ಆಕ್ಸಿಜನ್ ಅನ್ನ ಶುದ್ದವಾಗಿಟ್ಟುಕೊಳ್ಳೋದಷ್ಟೇ ನಮ್ಮ ಕೆಲಸವಲ್ಲವಾ.? ಏನಂತೀರಿ.?

| ಇನ್ನು ನಾಳೆಗೆ ।

‍ಲೇಖಕರು Admin

August 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: