ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶೌಚಸುಖ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

4

ವಿದ್ಯಾರ್ಥಿಗಳ ಆಯಾ ವಸತಿ ನಿಲಯಗಳಿಗೆ ನಿಗಧಿಯಾದ ಪ್ರತ್ಯೇಕ ಕಕ್ಕಸುಗಳಿದ್ದವು. ನಮ್ಮ ಜಯ ನಿಲಯಕ್ಕೆಂದೇ ಮೀಸಲಿದ್ದ ಸುಮಾರು ಹದಿನೈದು ಕಕ್ಕಸು ರೂಮುಗಳು ನಿಲಯದ ಹಿಂದೆ ತಗ್ಗಿನಲ್ಲಿದ್ದವು. ಎಲ್ಲೆಡೆ ಇದ್ದಂತೆ ಅಲ್ಲಿಯೂ ಬೆಳಗ್ಗೆ ಐದರಿಂದ ಎಂಟರವರೆಗೂ ನೂಕು ನುಗ್ಗಲು, ಪೈಪೋಟಿ! ಇನ್ನು ಸ್ನಾನಕ್ಕೆ ಪ್ರತ್ಯೇಕವಾಗಿ ಕಟ್ಟಿದ ಸ್ನಾನ ಗೃಹಗಳಂತ ಏನೂ ಇಲ್ಲ. ಒಂದರ ಪಕ್ಕ ಒಂದರಂತೆ ಹದಿನೈದಿಪ್ಪತ್ತು ನಲ್ಲಿಗಳು.

ಸರತಿಯ ಸಾಲಿನಲ್ಲಿ ನಿಂತು ಬಕೀಟಿನಲ್ಲಿ ನೀರು ಹಿಡಿದುಕೊಂಡು ಹಿಂದೆ ಬಂದು ಸಿಮೆಂಟಿನ ನೆಲದ ಮೇಲೆ ಅಲಲ್ಲಿ ನಿಂತು ಸ್ನಾನ ಮಾಡುವ ವ್ಯವಸ್ಥೆ. ಬಲಿಷ್ಠರಾದ ಕೆಲ ಉಡಾಳ ಹುಡುಗರು ತಲೆ ಮೈಗೆಲ್ಲಾ ಸೋಪು ತಿಕ್ಕಿ ನಲ್ಲಿಗೇ ಮೈಯೊಡ್ಡಿ ಶೌಚ ಸುಖ ಅನುಭವಿಸುತ್ತಿದ್ದುದೂ ಊಂಟು. ಸರತಿಯ ಸಾಲಿನಲ್ಲಿದ್ದವರು ಆಗ ಹಾಗೇ ಗೊಣಗಾಡುತ್ತಾ ನಿಲ್ಲುತ್ತಿದ್ದರು. ಹತ್ತು ಗಂಟೆಯ ಬೆಳಗಿನ ಊಟ ಶುರುವಾಗುವವರೆಗೂ ಸ್ನಾನ ಘಟ್ಟಗಳಲ್ಲಿ ಚಟುವಟಿಕೆ ಇದ್ದೇ ಇರುತ್ತಿತ್ತು. ಶೆಟ್ಟಿ ಹಾಗೂ ಇತರ ಸ್ನೇಹಿತರ ನೆರವಿನಿಂದಾಗಿ ನಾನು ಮಠದ ವಾತಾವರಣಕ್ಕೆ ಹೊಂದಿಕೊಳ್ಳ ತೊಡಗಿದೆ.

ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತೂ ಕಾಳಿನ ಸಾರಿನೊಂದಿಗೆ ಎರಡೆರಡು ಮುದ್ದೆ ಮುಗಿಸಿ ಜೊತೆಗೆ ಒಂದೊಂದು ಹಿಡಿ ಅನ್ನವನ್ನು ಪೂರೈಸುವಂತಾಗಿದ್ದೆ. ಕರುಳು ತುಂಬಾ ಉಣ್ಣುತ್ತಿದ್ದ ನನ್ನನ್ನು ಬಹಿರ್ದೆಸೆಯ ಒತ್ತಡ ಬೆಳಗ್ಗೆ ಬೇಗ ಎಚ್ಚರಿಸುತ್ತಿತ್ತು. ತಡವಾಗಿ ಏಳುತ್ತಿದ್ದ ದೊಡ್ಡ ಹುಡುಗರೊಂದಿಗೆ ಪೈಪೋಟಿ ನಡೆಸಲಾರದ ನಾನು ಸಣ್ಣ ಬಕೆಟಿನಲ್ಲಿ ನೀರು ಹಿಡಿದು ಯಾವುದಾದರೊಂದು ಕಕ್ಕಸು ರೂಮಿನ ಮುಂದೆ ಸರತಿಯ ಸಾಲಿನಲ್ಲಿ ಬೇಗನೆ ನಿಂತು ಬಿಡುತ್ತಿದ್ದೆ. ಅವತ್ತೂ ಸಹ ಬೆಳಗ್ಗೆ ಸರತಿಯ ಸಾಲಿನಲ್ಲಿ ನಿಂತಿದ್ದೆ. ನಾನು ನಿಂತ ಸಾಲಿನಲ್ಲಿ ನನ್ನ ಮುಂದೆ ಹತ್ತು ಹದಿನೈದು ಹುಡುಗರಿದ್ದರು. ನನಗೆ ಹೊಟ್ಟೆಯೊಳಗೆ ಒತ್ತಡ ಜೋರಾಗಿತ್ತು. ಒತ್ತಡವನ್ನು ಸಹಿಸಿಕೊಳ್ಳುತ್ತಾ ಒಬ್ಬೊಬ್ಬರೇ ಒಳಹೋಗಿ ತಮ್ಮ ಕೆಲಸ ಮುಗಿಸಿ ಹೊರ ಬರುವುದನ್ನು ಕಾತರದಿಂದ ಗಮನಿಸುತ್ತಿದ್ದೆ. ಯಾಕೋ ಅವರೆಲ್ಲಾ ಬೇಕೆಂತಲೇ ತಡ ಮಾಡುತ್ತಿದ್ದಾರೆ ಎನಿಸಿ ಅಸಹನೆಗೊಳಗಾಗುತ್ತಿದ್ದೆ. ಯಾರೂ ಅನವಶ್ಯಕವಾಗಿ ತಡ ಮಾಡುತ್ತಿರಲಿಲ್ಲ. ತಡೆದುಕೊಂಡಿದ್ದ ಒತ್ತಡವನ್ನು ಬೇಗನೇ ಕಳೆದು ಹೊರ ಬರುತ್ತಿದ್ದರು.

ಸರತಿಯ ಸಾಲು ಕರಗುತ್ತಾ ಬಂದಿತ್ತು. ನನ್ನ ಮುಂದಿದ್ದವನು ಒಳಹೋಗಿ ಬಾಗಿಲು ಹಾಕಿಕೊಂಡ ನನ್ನ ಒತ್ತಡ ಕಳೆಯಲು ಇನ್ನೇನು ಕೆಲವೇ ಕ್ಷಣ ಬಾಕಿ ಎನಿಸಿ ಹೊಟ್ಟೆಯ ತಳ ಮಳ ಹೆಚ್ಚಾಗಿತ್ತು. ಅಷ್ಟರಲ್ಲಿ ಒಬ್ಬ ಧಡೂತಿ ಹುಡುಗ ಹಿಂದಿನಿಂದ ನನ್ನ ಬಳಿಗೆ ನುಗ್ಗಿ ಬಂದ. ಈ ಕಡೆ ಬಾರ್ಲ, ನನಗೆ ಅರ್ಜೆಂಟ್‌ ಆಗಿದೆ ಎನ್ನುತ್ತಾ ನನ್ನ ರಟ್ಟೆ ಹಿಡಿದು ಎಳೆದು ಹಿಂದಕ್ಕೆ ಬಿಟ್ಟ. ಬಾಗಿಲು ತೆರೆದುಕೊಂಡ ಕೂಡಲೇ ಒಳನುಗ್ಗಿ ಧಡಾರನೆ ಬಾಗಿಲು ಹಾಕಿಕೊಂಡು ಬಿಟ್ಟ. ʼಯಾಕೆ ಅವನಿಗೆ ಜಾಗ ಬಿಟ್ಟು ಕೊಟ್ಟೆʼ ಎಂದು ನನ್ನ ಹಿಂದಿದ್ದವರು ನನ್ನನ್ನು ಮೂದಲಿಸತೊಡಗಿದರು. ನಾನು ಒತ್ತಡವನ್ನು ಒಂದು ಕ್ಷಣವೂ ತಾಳಲಾರದಾದೆ. ಅಳು ಬಂದಿತು. ಕೈಲಿದ್ದ ಬಕೀಟಿನ ನೀರನ್ನು ತುಳಕಿಸುತ್ತಾ ಎರಡು ಫರ್ಲಾಂಗ್‌ ದೂರದಲ್ಲಿದ್ದ ಮಾವಿನ ತೋಪಿನ ಕಡೆ ಓಡತೊಡಗಿದೆ. ನನ್ನಂತೆಯೇ ಪೈಪೋಟಿ ಎದುರಿಸಲಾರದವರು ಎಂದು ಕಾಣುತ್ತದೆ. ದಾರಿಯ ಬದಿಯಲ್ಲೆ ಅಲಲ್ಲಿ ಕೆಲವರು ಕುಳಿತಿದ್ದರು. ಓಡುತ್ತೋಡುತ್ತಲೆ ನೆಲಕ್ಕೆ ಬಕೆಟ್‌ ಕುಕ್ಕಿ ಚಡ್ಡಿ ಜಾರಿಸಿ ಕುಳಿತೇ ಬಿಟ್ಟೆ.

ಒಂದೇ ಕ್ಷಣದಲ್ಲಿ ಕ್ರಿಯೆ ಮುಗಿದುಹೋಯಿತು. ಮನಸ್ಸು ನಿರುಮ್ಮಳವಾಗಿ ಒಂದು ಬಗೆಯ ಸುಖದ ಛಾಯೆ ಆವರಿಸಿತು. ಹಿಂತಿರುಗಿ ಹೊರಟವನು ಒಳ್ಳೆಯ ಲಹರಿಯಲ್ಲಿದ್ದೆ. ಖಾಲಿಯಾದ ಬಕೆಟನ್ನು ಗಾಳಿಯಲ್ಲಿ ತೂಗಾಡಿಸುತ್ತಾ ಖುಷಿ ಖುಷಿಯಾಗಿ ಎರಡು ಫರ್ಲಾಂಗ್‌ ನಡೆದು ಬಂದೆ. ನಮ್ಮ ಸ್ನಾನಘಟ್ಟ ತುಂಬಿ ತುಳುಕುತ್ತಿತ್ತು. ಆಗಲೇ ತಡವಾಗಿದ್ದರಿಂದ ʼಲೇಟ್‌ ಲತೀಫ್‌ಗಳೂʼ ಸಹಾ ಬಂದು ನೆರೆದಿದ್ದರು. ಸ್ನಾನಘಟ್ಟದ ತುಂಬಾ ಕೆಲವರು ಅಲ್ಲಲ್ಲಿ ಬಕೆಟಿನಲ್ಲಿ ನೀರಿಟ್ಟುಕೊಂಡು ಸ್ನಾನಕ್ಕೆ ತೊಡಗಿದ್ದರೆ.

ಇನ್ನೂ ಕೆಲವರು ನಲ್ಲಿಗೇ ಮೈಯೊಡ್ಡಿ ತಣ್ಣೀರ ಸ್ನಾನದ ಸುಖ ಅನುಭವಿಸುತ್ತಿದ್ದರು.ಆ ಪರಿಸ್ಥಿತಿಯಲ್ಲಿ ಅಲ್ಲಿ ಸ್ನಾನ ಪೂರೈಸುವುದು ಕಷ್ಟ ಸಾಧ್ಯವೆಂದು ತೋರಿತು. ತಡವಾದರೆ ಊಟಕ್ಕೆ ಖೋತಾ. ತರಗತಿಯೂ ತಪ್ಪಿ ಹೋಗುತ್ತದೆ. ಏನು ಮಾಡುವುದು? ಆಲೋಚಿಸಿದೆ. ಅಲ್ಲಿಂದ ಒಂದೆರಡು ಫರ್ಲಾಂಗ್‌ ದೂರದಲ್ಲಿ ದೇವರಾಯನ ದುರ್ಗದ ರಸ್ತೆಯಲ್ಲಿ ಹತ್ತಾರು ನಲ್ಲಿಗಳ ಒಂದು ಸ್ನಾನ ಘಟ್ಟವಿತ್ತು. ಅದು ಯಾವುದೇ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ನಿಗಧಿಯಾಗಿರಲಿಲ್ಲ. ಇಲ್ಲಿ ರಷ್‌ ಇದ್ದಾಗ ಪೈಪೋಟಿ ಮಾಡಲಾಗದ ಸಣ್ಣ ಪುಟ್ಟ ಹುಡುಗರು ಆ ಕಡೆ ಹೋಗುತ್ತಿದ್ದರು. ನಾನೂ ಒಂದೆರಡು ಬಾರಿ ಹೋಗಿ ಅಲ್ಲಿ ಸ್ನಾನ ಮಾಡಿ ಬಂದಿದ್ದೆ. ಅಲ್ಲಿಗೇ ಹೋಗುವುದು ಸೂಕ್ತವೆನಿಸಿತು.

ಜಯನಿಲಯದ ರೂಮಿಗೆ ಬಂದೆ. ಬ್ರಷ್ಷಿಗೆ ಪೇಸ್ಟ್‌ ಹಾಕಿಕೊಂಡೆ. ಟವಲ್‌ ಹಾಗೂ ಸೋಪ್‌ ಬಾಕ್ಸನ್ನು ಸ್ನಾನದ ಬಕೀಟಿನೊಳಗೆ ಹಾಕಿಕೊಂಡು ದೇವರಾಯನ ದುರ್ಗ ರಸ್ತೆಯ ಕಡೆಗೆ ಅವಸರವಾಗಿ ಹೆಜ್ಜೆ ಹಾಕಿದೆ.ಅಲ್ಲಿನ ಸ್ನಾನ ಘಟ್ಟದಲ್ಲೂ ರಷ್‌ ಇದ್ದಂತೆ ತೋರುತ್ತಿತ್ತು. ಸಣ್ಣ ಮಕ್ಕಳ ಕಲವರ ದೂರದಿಂದಲೇ ಕೇಳುತ್ತಿತ್ತು. ಅವರೆಲ್ಲಾ ಪ್ರೈಮರಿ, ಮಿಡ್ಲ್‌ ಸ್ಕೂಲಿನ ಮಕ್ಕಳು. ಮಠದೊಳಗಿನ ತಮ್ಮ ಸ್ನಾನ ಘಟ್ಟದಲ್ಲಿ ಸಂದಣಿ ಜಾಸ್ತಿಯಾಗಿ ಪೈಪೋಟಿ ಎದುರಿಸಲಾಗದೆ ಅಲ್ಲಿ ಬಂದಿದ್ದರೆಂದು ತೋರುತ್ತದೆ. ಅಲ್ಲಿಗಿಂತ ಅವರಿಗೆ ಇಲ್ಲಿ ಸ್ವಾತಂತ್ರ್ಯ. ಸ್ವಚ್ಛಂದವಾಗಿ ಶೌಚ ಸುಖ ಅನುಭವಿಸುತ್ತಿದ್ದರು. ಕೆಲವರು ತುಂಬಿದ ಬಕೆಟ್‌ ಇಟ್ಟುಕೊಂಡು ನೆಲದ ಮೇಲೆ ಕುಳಿತು ಮೈ ತಿಕ್ಕಿ ಕೊಳ್ಳುತ್ತಿದ್ದರೆ, ಇನ್ನು ಕೆಲವರು ನೇರವಾಗಿ ನಲ್ಲಿಗೆ ಮೈಯೊಡ್ಡಿಕೊಂಡು ಕುಣಿದಾಡುತ್ತಿದ್ದರು.

ನಾನು ಒಂದು ನಲ್ಲಿಯ ಬಳಿ ಹೋಗಿ ಅಲ್ಲಿನ ಹುಡುನನ್ನು ಸರಿಸಿ ಬಾಗಿ ನಿಂತು ಬಕೆಟಿಗೆ ನೀರು ತುಂಬಿಕೊಳ್ಳ ತೊಡಗಿದೆ.ಸಸ್ಯಾಹಾರಿ ಪ್ರಾಣಿಗಳ ಹಿಂಡಿನ ಕಡೆಗೆ ಯಾವುದೋ ಕ್ರೂರ ಪ್ರಾಣಿ ಬೇಟೆಗೆ ಬರುತ್ತಿರುವಂತೆ ವಿದ್ಯಾರ್ಥಿಗಳ ಸಮೂಹ ಸ್ತಬ್ಧವಾಯಿತು. ಅಚ್ಚರಿಯಿಂದ ಹಿಂತಿರುಗಿ ನೋಡಿದೆ.ನಮ್ಮದೇ ತರಗತಿಯ ತಿಮ್ಮೇಗೌಡ. ಸೊಂಟಕ್ಕೆ ಟವಲ್‌ ಸುತ್ತಿಕೊಂಡು ಬಲಗೈಲಿ ಬಕೆಟ್‌ ಹಿಡಿದು ದೂರದಲ್ಲಿ ಬರುತ್ತಿದ್ದಾನೆ. ಬಲಿಷ್ಠವಾದ ಬತ್ತಲೆ ದೇಹ ಬಯಲಿಗೆ ತೆರೆದುಕೊಂಡಿದೆ. ಕಡು ಕಪ್ಪು ಬಣ್ಣದ ಅವನನ್ನು ತರಗತಿಯವರು ʼನೀಗ್ರೋʼ ಎಂದು ತಮಾಷೆ ಮಾಡುತ್ತಿದ್ದರು. ಅವನ ಬೆತ್ತಲೆಯಾದ ಸ್ನಾಯು ಭರಿತ ಕಪ್ಪು ದೇಹ ನಮ್ಮೆದುರಿಗೆ ತೆರೆದುಕೊಂಡು ಹುಡುಗರಿಟ್ಟ ಹೆಸರು ಅನ್ವರ್ಥವೆನಿಸಿತು.

ಹುಡುಗರು ಗಾಬರಿ ಕಣ್ಣುಗಳಿಂದ ಅವನನ್ನೇ ತದೇಕವಾಗಿ ನೋಡುತ್ತಿದ್ದರು. ಸ್ನಾನಘಟ್ಟ ಸಮೀಪಿಸಿದ ಅವನಿಗೆ ,ಗಾಬರಿಗೊಂಡ ಹುಡುಗರ ಗುಂಪು ನೋಡಿ ಇನ್ನಷ್ಟು ತಮಾಷೆ ಮಾಡಿ ಮೋಜನುಭವಿಸಬೇಕು ಏನಿಸಿತೋ ಏನೋ, ಸೊಂಟದ ಟವೆಲ್‌ ಉದುರಿಸಿ ಸಂಪೂರ್ಣ ಬೆತ್ತಲಾದ. ತನ್ನ ಬಲಿಷ್ಠ ಶಿಶ್ನವನ್ನು ಝಳಪಿಸುವವನಂತೆ ಕುಣಿಯುತ್ತಾ ʼಹೇಯ್‌ʼ ಎಂದು ಅಬ್ಬರಿಸುತ್ತಾ ಹುಡುಗರ ಗುಂಪಿನೊಳಗೆ ನುಗ್ಗಿದ. ತೋಳ ನುಗ್ಗಿದ ಕುರಿ ಹಿಡಿನಂತೆ ಹುಡುಗರು ಅತ್ತಿತ್ತ ಚದುರಿ ಹೋಗಿ ದೂರದಿಂದ ಅವನನ್ನೇ ಬೆರಗುಗಣ್ಣಿನಿಂದ ನೋಡುತ್ತಾ ನಿಂತುಕೊಂಡರು.

ಮಧ್ಯದ ಒಂದು ನಲ್ಲಿಯ ಬಳಿ ಹೋದ ತಿಮ್ಮೇಗೌಡ ಚಕ್ಕಳ ಬಕ್ಕಳ ಹಾಕಿ ಕುಳಿತು ನಲ್ಲಿ ತಿರುಗಿಸಿ ತಲೆಯೊಡ್ಡಿದ. ನೆಂದ ತಲೆಗೆ ಸೋಪು ತಿಕ್ಕಿ ಚೆನ್ನಾಗಿ ನೊರೆ ಬರುವಂತೆ ಉಜ್ಜಿದ. ತಲೆ ತೊಳೆದುಕೊಂಡವನು ಮೈಗೆಲ್ಲಾ ಸೋಪು ತಿಕ್ಕಿ ತನ್ನ ಬಳಿಯಿದ್ದ ಸಣ್ಣ ಚಪ್ಪಟೆ ಕಲ್ಲಿನಿಂದ ಮೈಯನ್ನೆಲ್ಲಾ ಗಸಗಸನೆ ಉಜ್ಜಿಕೊಂಡ ನಂತರ ಒಬ್ಬ ಹುಡುಗನನ್ನು ಸನ್ನೆ ಮಾಡಿ ಬಳಿಗೆ ಕರೆದ. ಅವನು ಭಯದಿಂದ ಅದುರುತ್ತಾ ಹತ್ತಿರ ಬಂದ. ಅವನ ಕೈಗೆ ಕಲ್ಲು ಕೊಟ್ಟು ʼಬೆನ್ನುಜ್ಜುʼ ಎನ್ನುತ್ತಾ ಬಗ್ಗಿ ಕುಳಿತ. ನಂತರ ಹಾಗೆಯೇ ಮುಂದಕ್ಕೆ ಕಾಲು ಚಾಚಿ ಹಿಮ್ಮಡಿಗಳನ್ನು ಸಿಮೆಂಟ್‌ ನೆಲಕ್ಕೆ ಉಜ್ಜಿ ಹೊಳಪು ಮಾಡಿಕೊಂಡ. ನಲ್ಲಿಯ ಮುಂದೆ ಬಾಗಿ ನಿಂತು ಸುರಿಯುವ ನೀರಿನಿಂದ ಮೈ ಕೈಯನ್ನೆಲ್ಲಾ ಉಜ್ಜಿಕೊಳ್ಳುತ್ತಾ ಸ್ವಲ್ಪ ಹೊತ್ತು ಶೌಚ ಸುಖ ಅನುಭವಿಸಿ, ಒದ್ದೆ ಮೈಯನ್ನು ಚೆನ್ನಾಗಿ ಒರೆಸಿಕೊಂಡ ಅವನು ತನ್ನ ಪೈಲ್ವಾನ್‌ ದೇಹಕ್ಕೆ ಚಡ್ಡಿ ಏರಿಸುತ್ತಾ ಅಂಚಿನಲ್ಲಿ ನಿಂತ ಹುಡುಗರ ಗುಂಪನ್ನುದ್ದೇಶಿಸಿ ʼಏಯ್‌ ಬನ್ರೋ, ಮಾಡ್ಕಳಿ ಊಟಕ್ಕೆ ಲೇಟಾಗುತ್ತೆʼ ಎಂದ ಬಹಳ ಕನಿಕರದಿಂದೆಂಬಂತೆ.

ಹುಡುಗರು ಬಿದ್ದು ಹೋಗಿದ್ದ ಮಗ್ಗುಗಳನ್ನಾಯ್ದುಕೊಂಡು ತಮ್ಮ ತಮ್ಮ ಬಕೇಟುಗಳ ಬಳಿಗೆ ಬರತೊಡಗಿದರು. ಸ್ನಾನಕ್ಕೆಂದು ನೀರು ತುಂಬಿಕೊಂಡಿದ್ದ ನಾನು ಪ್ರಹಸನವನ್ನು ನೋಡುವವನಂತೆ ಹಾಗೆಯೇ ನಿಂತಿದ್ದೆ. ತನ್ನ ಬಕೆಟನ್ನು ಕೈಯಲ್ಲಿ ಹಿಡಿದ ತಿಮ್ಮೇಗೌಡ ಸುಮ್ಮನೇ ನಿಂತಿದ್ದ ನನ್ನೆಡೆಗೆ ತಿರುಗಿ ದೃಷ್ಟಿ ನೆಟ್ಟು ನೋಡಿದ. ʼನೀನೇನ್ಲಾ? ಮಿಡ್ಲ್‌ ಸ್ಕೂಲ್‌ ಮಕ್ಕಳಂಗೆ ಇವರ ಜೊತೆ ಬಂದು ಸೇರ್ಕಂಡಿದೀಯಾ! ಹೋಗು ಸ್ನಾನ ಮಾಡ್ಹೋಗು. ಕ್ಲಾಸಿಗೆ ಲೇಟಾಗುತ್ತದೆʼ ಎನ್ನುತ್ತಾ ನನ್ನ ಬೆನ್ನು ತಟ್ಟಿ ನಮ್ಮೆಡೆಗೆ ಬೆನ್ನು ತಿರುಗಿಸಿ ಹೊರಟೇ ಹೋದ.

‍ಲೇಖಕರು Admin

August 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: