ಚರಿತಾ ಮೈಸೂರು ನೋಡಿದ ‘ಡಾರ್ಲಿಂಗ್ಸ್’

ಚರಿತಾ ಮೈಸೂರು

ಮನುಷ್ಯ ಲೋಕದಲ್ಲಿನ ವಿಕೃತಿ, ಹಗೆ, ಸೇಡು, ರೋಗ, ದುಃಖಕ್ಕೆ ನೇರ ಅಥವಾ ಪರೋಕ್ಷ ಕಾರಣ: ಪ್ರೀತಿ ಮತ್ತು ಅಂತಃಕರಣದ ಕೊರತೆ.
ಇದು ಆಗಾಗ ನೆನಪಾಗುತ್ತೆ ನನಗೆ.
ಈ ಲೋಕ ಆಗಾಗ ಇದನ್ನು ನೆನಪಿಸುತ್ತೆ.
ನೆನ್ನೆ ‘Darlings’ ನೋಡಿದಾಗಲೂ ಇದು ನೆನಪಾಯ್ತು!

ಪ್ರೀತಿ, ಮದುವೆ, ಸಾಂಗತ್ಯ ಎಂಬುದು ಬಹಳ ಸಂಕೀರ್ಣ ವಿಷಯ. ಅದರಲ್ಲೂ ನಮ್ಮ ಪುರುಷಕೇಂದ್ರಿತ ಸಮಾಜದಲ್ಲಿ ಈ ಸಂಕೀರ್ಣತೆಗಳು ಮತ್ತಷ್ಟು ಜಟಿಲವಾಗಿರುತ್ತವೆ. ಕೆಳಮಧ್ಯಮ ವರ್ಗದ, ಸ್ವಾಭಿಮಾನಿ ಮುಸ್ಲಿಂ ಮಹಿಳೆಯರು, ಇಂಥ ಮದುವೆಯೆಂಬ ಸಂಕೀರ್ಣತೆಯನ್ನು ಎದುರುಗೊಳ್ಳುವ ಮತ್ತು ಇದಕ್ಕೆ ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಕಥಾಹಂದರ Darlings ಸಿನೆಮದಲ್ಲಿದೆ.

ಪ್ರತೀದಿನ ಕುಡುಕ ಗಂಡನಿಂದ ದೈಹಿಕ ಹಲ್ಲೆಗೆ ಒಳಗಾಗುವ ‘ಹೆಂಡತಿ’ಯ ಮನಸ್ಥಿತಿ ಎಂಥದ್ದಿರಬಹುದು ಎಂಬುದು ಸ್ವತಃ ಇದನ್ನು ಅನುಭವಿಸಿರುವ ಮಹಿಳೆಯರಿಗೆ ಚೆನ್ನಾಗಿ ಗೊತ್ತು! ಹಿಂಸೆ ಕೊಡುವ ಗಂಡ ತೀರಿಕೊಂಡ ನಂತರ, ಅಥವಾ ಡಿವೋರ್ಸ್ ಮೂಲಕ ಮದುವೆಯೆಬ ಹಿಂಸೆಯಿಂದ ಮುಕ್ತಿ ಪಡೆದ ನಂತರವೇ ಹಲವು ಮಹಿಳೆಯರ ಪಾಲಿಗೆ ನಿಜವಾದ ‘ಬದುಕು’ ಶುರುವಾಗೋದು! 

ಮದುವೆ ಸಂಬಂಧದಲ್ಲಿ ಇಂಥ ದೈಹಿಕ ಮತ್ತು ಮಾನಸಿಕ ಹಿಂಸೆ ಒಟ್ಟು ವ್ಯಕ್ತಿತ್ವವನ್ನೇ ಇಡಿಯಾಗಿ ಕೊಂದುಬಿಡಬಲ್ಲದು. ಇಂಥ Domestic violence ಗೆ ಮೇಲ್ವರ್ಗ, ಮಧ್ಯಮವರ್ಗ, ತಳವರ್ಗ ಎಂಬ ಭೇದವೇನೂ ಇಲ್ಲ! ಹಾಗಾಗಿ ಈ ಕಥೆಯೊಂದಿಗೆ ಬಹುತೇಕ ಎಲ್ಲಾ ವರ್ಗದ ಮತ್ತು ಎಲ್ಲಾ ಜಾತಿಯ ಮಹಿಳೆಯರೂ ತಮ್ಮನ್ನು ಕನೆಕ್ಟ್ ಮಾಡಿಕೊಳ್ಳಬಲ್ಲರು! ಹಾಗಾಗಿ ಇಲ್ಲಿ ಆಯ್ಕೆ ಮಾಡಿಕೊಂಡ ವಿಷಯ ಅತ್ಯಂತ ಗಂಭೀರ ಮತ್ತು ಸಕಾಲಿಕವಾದದ್ದು ಎಂಬ ಕಾರಣಕ್ಕೆ ಈ ಸಿನೆಮ ನಿರೀಕ್ಷೆ ಹುಟ್ಟಿಸಿತ್ತು.

ವಿಜಯ್ ವರ್ಮ, ಅಲಿಯಾ ಮತ್ತು ಶೆಫಾಲಿಯಂಥ ಅತ್ಯುತ್ತಮ ನಟರು ಮುಖ್ಯ ಪಾತ್ರದಲ್ಲಿದ್ದಾರೆ ಎಂಬ ಕಾರಣಕ್ಕೂ ಇದರ ಬಗ್ಗೆ ಹೆಚ್ಚು ನಿರೀಕ್ಷೆ ಇತ್ತು ನನಗೆ. ಆದರೆ, ಇಂಥ ಪಳಗಿದ ನಟರನ್ನು ಸರಿಯಾಗಿ ಬಳಸಿಕೊಂಡಿಲ್ಲ ಇಲ್ಲಿ. ಇಷ್ಟು ಡೀಪ್ ಮತ್ತು ಕಾಂಪ್ಲೆಕ್ಸ್ ಸ್ಟೋರಿಲೈನ್ ಇದ್ದಾಗ್ಯೂ, ಇದು ಆಳವಾದ ಪರಿಣಾಮ ಬೀರುವ ಸಿನೆಮ ಆಗದೆ ಹೋಗಿದೆ. ಹೀಗೆ ನೋಡಿ, ಇಷ್ಟು ನಕ್ಕು, ಹಾಗೇ ಮರೆತುಬಿಡಬಹುದಾದ ಒಂದು ಎಳೇ ಸಿನೆಮ ಅನಿಸಿತು. ಇಷ್ಟು ಮುಖ್ಯವಾದ ವಿಷಯವೊಂದನ್ನು ಸರಿಯಾಗಿ ನರೇಟ್ ಮಾಡದೆ, ಹೀಗೆ ‘ಮುಗಿಸಿಬಿಡುವುದು’ ನಿರಾಶೆ ಮೂಡಿಸಿತು.

Dark Comedy ಅಂದ್ರೆ, ತಲ್ಲಣದ ಜೊತೆಗೇ ನಗು ಉಕ್ಕಿಸಬಲ್ಲಂಥದ್ದು ಎಂಬರ್ಥ. ಅಂಥ ಹಲವು ಅವಕಾಶಗಳೂ ಇದರಲ್ಲಿತ್ತು. ಪ್ರೀತಿಯ ಹೆಸರಲ್ಲಿ ಮತ್ತೆ ಮತ್ತೆ ‘ಡಾರ್ಲಿಂಗ್ಸ್’ ಆಗಿಬಿಡುವ ಸ್ಯಾಡಿಸ್ಟ್ ಗಂಡ, ಪ್ರೀತಿಯ ಕಾರಣಕ್ಕೇ ಮತ್ತೆ ಮತ್ತೆ ಗಂಡನ ಹಿಂಸೆ ಮರೆತು ಹೊಸ ಆಸೆಗಳನ್ನು ಹೆಣೆದುಕೊಳ್ಳುವ ಮುಗ್ಧ ಹೆಂಡತಿ, ಪ್ರೀತಿಯ ನೆಪದಲ್ಲಿ ಬದುಕು ತಂದಿಡಬಹುದಾದ ಅಪಾಯಗಳನ್ನರಿತ ತಾಯಿ, ಅಮ್ಮನ ವಯಸ್ಸಿನವಳೊಂದಿಗೆ ಪ್ರೀತಿಗೆ ಬೀಳುವ ತರುಣ…ಹೀಗೆ ಪ್ರೀತಿ ಮತ್ತು ಬದುಕಿನ ವಿವಿಧ ಸಂಕೀರ್ಣತೆಗಳನ್ನು ಪ್ರತಿನಿಧಿಸುವ ಪಾತ್ರಗಳಿವೆ ಇಲ್ಲಿ. ಆದರೆ, ಈ ಪಾತ್ರಗಳ ಆಳವನ್ನು ಕಿಂಚಿತ್ತಾದರೂ ಮುಟ್ಟುವ ಪ್ರಯತ್ನವನ್ನು ನಿರ್ದೇಶಕಿ ಮಾಡದೇಹೋಗಿದ್ದಾರೆ. ಈ ಪಾತ್ರಗಳೆಲ್ಲ ಹುಟ್ಟಿಸಬಹುದಾದ ತಲ್ಲಣಗಳನ್ನು, ಮಾನಸಿಕ ತಳಮಳಗಳನ್ನು ಹಾಸ್ಯದೊಂದಿಗೇ ತೆರೆಯ ಮೇಲೆ ತರಲು ಸಾಧ್ಯವಾಗಿದ್ದಿದ್ದರೆ, ಬಹುಶಃ ಇದೊಂದು ನೆನಪಲ್ಲುಳಿಯುವ ಸಿನೆಮ ಆಗಬಹುದಾಗಿತ್ತು. ಆದರೆ, ಈ ಸಿನೆಮ ಹಲವು ಕಡೆಗಳಲ್ಲಿ ಆಭಾಸಕಾರಿ ದೃಶ್ಯ ಮತ್ತು ಅನವಶ್ಯಕ ತಮಾಷೆಗಳಿಂದ ಒಟ್ಟಾರೆ ಇರಬೇಕಾದ ಗಾಂಭೀರ್ಯಕ್ಕೂ ತತ್ವಾರ ತಂದಿದೆ. ಕೌಟುಂಬಿಕ ದೌರ್ಜನ್ಯವನ್ನು ಹಾಸ್ಯದ ಹೆಸರಲ್ಲಿ ಹಾಸ್ಯಾಸ್ಪದಗೊಳಿಸಲಾಗಿದೆ. 

ತಳಮಧ್ಯಮ ವರ್ಗದ ಮಧ್ಯವಯಸ್ಕ ಹೆಂಗಸೊಬ್ಬಳು ತನ್ನ ಮಗನ ವಯಸ್ಸಿನ ತರುಣನ ಪ್ರೀತಿಯನ್ನು ಬಿಂದಾಸಾಗಿ ಒಪ್ಪಿಕೊಳ್ಳಬಹುದಾದಷ್ಟು ಲಿಬರಲ್ ಇದೆಯ ನಮ್ಮ ಸಮಾಜ?! ಕದ್ದುಮಚ್ಚಿ ಇಂಥ ಸಂಬಂಧಗಳಿರಬಹುದೇ ಹೊರತು, ತನ್ನ ಮಗಳ ಮುಂದೆಯೇ ಆ ಹುಡುಗನಿಗೆ ಕಿಸ್ ಮಾಡುವ ದೃಶ್ಯ, ಮತ್ತು ಅದರ ಬಗ್ಗೆ ಏನೂ ತಕರಾರಿಲ್ಲದೆ ಸಮ್ಮತಿಸುವ ಮಗಳು…ಇಂಥ ದೃಶ್ಯಗಳು ಇಡೀ ಸಿನೆಮಾದ ಸಂಕೀರ್ಣತೆಯನ್ನೇ ಜಾಳುಜಾಳಾಗಿಸಬಲ್ಲದು. ತಳಮಧ್ಯಮ ವರ್ಗದಲ್ಲಿ ಸಂಬಂಧಗಳ ಕುರಿತಂತೆ ಇರುವ ಸಂಕೀರ್ಣತೆಗಳನ್ನು, ತಾಕಲಾಟಗಳನ್ನು ಸರಿಯಾಗಿ ಅಧ್ಯಯನ ಮಾಡದೆ ಹಾಸ್ಯದ ಹೆಸರಲ್ಲಿ ಇಂಥ ಆಭಾಸಗಳನ್ನು ತುರುಕಲಾಗಿದೆ. ಮದುವೆ/ಸಾಂಗತ್ಯ ಕುರಿತಂತೆ ನಿರ್ದೇಶಕರಿಗಿರುವ(ಜಸ್ಮೀತ್ ಕೆ ರೀನ್) ತೆಳು ಗ್ರಹಿಕೆಯಿಂದಾಗಿ, ಪ್ರಮುಖ ಸಿನೆಮ ಆಗಬಹುದಾಗಿದ್ದ ಅವಕಾಶವೊಂದು ಕೈತಪ್ಪಿ ಹೋದಂತಿದೆ. ಬಹುಶಃ ಇದೊಂದು ಕಾಮಿಡಿ ಸಿನೆಮ ಎಂಬ ಕಾರಣಕ್ಕೆ, ನೋಡಿ, ನಕ್ಕು ಸುಮ್ಮನಾಗಬೇಕಷ್ಟೆ! ಗಂಭೀರವಾಗಿಯೂ ನೆನಪಲ್ಲುಳಿಯುವ ಕಾಮಿಡಿ ಆಗಬಹುದಿತ್ತು ಇದು!

ಅಷ್ಟಿಷ್ಟು ನೆನಪಲ್ಲುಳಿಯುವಂಥದ್ದು:
ವಿಜಯ್ ಹಾಗೂ ಶೆಫಾಲಿಯ ನಟನೆ
(ಇವರಿಬ್ಬರ ಮುಂದೆ ಅಲಿಯಾ ಸಪ್ಪೆ ಅನಿಸಿದಳು)
ಮತ್ತು ಆಗಾಗ ಕಥೆಯ ಜೊತೆಗೆ ಸರಿಯಾಗಿ/ಸಿಂಬಾಲಿಕ್ಕಾಗಿ ಸಿಂಕ್ ಆಗುವ ಬ್ಯೂಟಿ ಪಾರ್ಲರ್ ದೃಶ್ಯಗಳು.

‍ಲೇಖಕರು Admin

August 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: