‘ಮತ್ತೊಮ್ಮೆ ಮೇಘ ಮಾಯ್ಕಾರನ ಮೋಡಿಯಲ್ಲಿ…’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

|ಕಳೆದ ಸಂಚಿಕೆಯಿಂದ|

”ನಾನು ಪತ್ರಕರ್ತರ ಕಂಪೆನಿಯನ್ನು ಎಂಜಾಯ್ ಮಾಡುತ್ತೇನೆ. ಆದರೆ ತೀರಾ ಅಂಟಿಕೊಂಡುಬಿಟ್ಟರೆ ಮಾತ್ರ ಸುಮ್ಮನೆ ಜಾರಿಕೊಳ್ಳುತ್ತೇನೆ. ಈ ಹುಡುಗ ಪರವಾಗಿಲ್ಲ…”

ಎನ್ನುತ್ತಿದ್ದ ಬಾದಲ್ ರವರ ಮಾತನ್ನು ಕೇಳಿದ ನಾವೆಲ್ಲರೂ ಗೊಳ್ಳನೆ ನಕ್ಕೆವು. ನಾನೊಬ್ಬ ಪತ್ರಕರ್ತನೆಂದು ಮನೆಗೆ ಬಂದ ವ್ಯಕ್ತಿಯೊಬ್ಬರಿಗೆ ಬಾದಲ್ ಚಿತ್ರಕಾರ್ ಪರಿಚಯಿಸುತ್ತಿದ್ದರು. ನಾನು ಪತ್ರಕರ್ತನೇನಲ್ಲ, ಹವ್ಯಾಸಿ ಬರಹಗಾರನಷ್ಟೇ ಎಂದು ನಾನು ಸಮಜಾಯಿಷಿ ನೀಡುತ್ತಿದ್ದೆ. ಒಂದು ಕಾಲದಲ್ಲಿ ತನ್ನ ಬಗ್ಗೆ ಸಾಕಷ್ಟು ಬರೆದಿದ್ದ ಪತ್ರಕರ್ತರ ಬಗ್ಗೆ ಅವರಿಗೆ ಪ್ರೀತಿಯಿದೆ. ಜೊತೆಗೇ ಕೆಲ ಎಡವಟ್ಟು ಪತ್ರಕರ್ತರ ಬಗ್ಗೆ ಕಿರಿಕಿರಿಯೂ ಇದೆ. ಪತ್ರಕರ್ತರ ಬಗ್ಗೆ, ಪತ್ರಿಕೋದ್ಯಮದ ಬಗ್ಗೆ ಅವರ ಬಳಿ ಸಾಕಷ್ಟು ಸ್ವಾರಸ್ಯಕರ ಕತೆಗಳಿವೆ. ಬಾದಲ್ ಚಿತ್ರಕಾರ್ ಎಂದರೆ ಅನುಭವಗಳ ಮೂಸೆ.

ಒಮ್ಮೆ ಹೀಗಾಯಿತಂತೆ. ದಿಲ್ಲಿಯ ಕಾರ್ಯಕ್ರಮವೊಂದಕ್ಕೆ ಆಗಿನ ಪ್ರಧಾನಮಂತ್ರಿಯಾಗಿದ್ದ ಪಿ ವಿ ನರಸಿಂಹರಾವ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಬಾದಲ್ ರವರು ಬಹುವಾಗಿ ಮೆಚ್ಚಿಕೊಂಡ ಕಾಂಗ್ರೆಸ್ ನಾಯಕರಲ್ಲಿ ರಾವ್ ಕೂಡ ಒಬ್ಬರು. ಅವರನ್ನೊಮ್ಮೆ ಭೇಟಿ ಮಾಡಬೇಕಿತ್ತಲ್ವಾ ಎಂದು ತನ್ನ ಪತ್ರಕರ್ತ ಗೆಳೆಯನೊಬ್ಬನೊಂದಿಗೆ ಸುಮ್ಮನೆ ಮಾತಿಗೆ ಹೇಳಿದ್ದಷ್ಟೇ. ಕೊನೆಯ ಘಳಿಗೆಯಲ್ಲಿ ತನ್ನ ಪ್ರೆಸ್ ಐ ಡಿ ಕಾರ್ಡನ್ನು ಪತ್ರಕರ್ತ ಗೆಳೆಯ ಇವರ ಕೊರಳಿಗೆ ಹಾಕಿ ರಂಗಸ್ಥಳಕ್ಕೆ ನೂಕಿದ್ದ.

ಇವೆಲ್ಲಾ ಅದೆಷ್ಟು ಗಡಿಬಿಡಿಯಲ್ಲಿ ಆಗಿತ್ತೆಂದರೆ ಪ್ರಧಾನಮಂತ್ರಿ ನರಸಿಂಹ ರಾವ್ ಆಗಷ್ಟೇ ಮೆಟ್ಟಿಲಿಳಿದು ಬಂದು ನೆರೆದಿದ್ದ ಪತ್ರಕರ್ತರನ್ನು ಇನ್ನೇನು ಭೇಟಿಯಾಗಲಿದ್ದರು. ತನ್ನ ಪತ್ರಕರ್ತ ಗೆಳೆಯ ಒತ್ತಾಯದಲ್ಲಿ ಒಳನೂಕಿದ್ದಕ್ಕೂ, ಪ್ರಧಾನಿಯ ಆಗಮನದ ನಿರೀಕ್ಷೆಯಲ್ಲಿ ನಿಂತಿದ್ದ ಪತ್ರಕರ್ತರ ಸಾಲಿನಲ್ಲಿ ಬಾದಲ್ ಮೊದಲನೆಯವರಾಗಿ ಆಕಸ್ಮಿಕವಾಗಿ ಬಂದು ನಿಂತಿದ್ದಕ್ಕೂ ಸರಿಹೋಗಿತ್ತು. ರಾವ್ ಮೆಟ್ಟಿಲಿಳಿದು ಬಂದವರೇ ಬಾದಲ್ ರವರ ಕೈಕುಲುಕಿ ಕುಶಲೋಪರಿಯನ್ನು ವಿಚಾರಿಸಿದ್ದರು. ಮರುದಿನದ ಪತ್ರಿಕೆಗಳಲ್ಲಿ ಇಬ್ಬರ ಚಿತ್ರವೂ ದೊಡ್ಡದಾಗಿ ಪ್ರಕಟವಾಗಿತ್ತಂತೆ.

ಇಂತಹ ಘಟನೆಗಳು ಬಾದಲ್ ರವರಿಗೆ ಹೊಸತೇನಲ್ಲ. ಚಿತ್ರಕಲಾ ಪ್ರದರ್ಶನವೊಂದರಲ್ಲಿ ಇವರ ಬುದ್ಧನ ಕಲಾಕೃತಿಯೊಂದು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂರಿಗೆ ಅದೆಷ್ಟು ಪ್ರಿಯವಾಗಿತ್ತೆಂದರೆ ಅದನ್ನು ರಾಷ್ಟ್ರಪತಿ ಭವನಕ್ಕೆ ತರಿಸಿ ಇಟ್ಟುಕೊಂಡಿದ್ದೂ ಆಯಿತು. ನಂತರ ಕಲಾಂರವರು ಬಾದಲ್ ರನ್ನು ರಾಷ್ಟ್ರಪತಿ ಭವನಕ್ಕೆ ಖಾಸಗಿಯಾಗಿ ಆಹ್ವಾನಿಸಿ ಅವರ ಜೊತೆ ಭೋಜನವನ್ನೂ ಸವಿದಿದ್ದರು. ಬಾದಲ್ ಚಿತ್ರಕಾರ್ ಆಪ್ತವಾಗಿ ನೆನೆಸಿಕೊಳ್ಳುವ ಹಲವು ಘಟನೆಗಳಲ್ಲಿ ಇದೂ ಒಂದು. ”ಕಲಾಂರವರ ಟೇಸ್ಟೇ ಡಿಫರೆಂಟು ಕಣ್ರೀ. ಅಷ್ಟು ವಿದ್ವತ್ತಿದ್ದರೂ, ರಾಷ್ಟ್ರದ ಅತ್ಯುನ್ನತ ಹುದ್ದೆಯಲ್ಲಿದ್ದರೂ ಬಹಳ ಸರಳವಾಗಿದ್ದ ವ್ಯಕ್ತಿ”, ಎಂದು ಕಲಾಂರವರನ್ನು ನೆನೆಸಿಕೊಳ್ಳುತ್ತಾರೆ ಬಾದಲ್ ಚಿತ್ರಕಾರ್.

ಕಲಾಂ ಜೊತೆಗಿನ ಅವರ ಮತ್ತೊಂದು ನೆನಪೂ ತಮಾಷೆಯದ್ದು. ಒಮ್ಮೆ ಪುಟ್ಟ ಸಮಾರಂಭವೊಂದರ ಪ್ರಯುಕ್ತ ಹಲವು ಸಾಧಕರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲಾಗಿತ್ತು. ಬಾದಲ್ ತಮ್ಮ ಪತ್ನಿ ರಾಧಾರೊಂದಿಗೆ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದ್ದರು. ಆಹ್ವಾನಿತರೆಲ್ಲರೂ ನಿಗದಿತ ಸಮಯಕ್ಕೆ ಬಂದು ರಾಷ್ಟ್ರಪತಿ ಕಲಾಂರವರ ಆಗಮನಕ್ಕಾಗಿ ಕಾಯುತ್ತಿದ್ದರಂತೆ. ಕೆಲ ನಿಮಿಷಗಳ ನಂತರ ಹೊರಬಂದ ಕಲಾಂ ದೂರದಿಂದಲೇ ಬಾದಲ್ ರವರನ್ನು ನೋಡಿ ”ಅರೇ ಬಾದಲ್” ಎಂದು ಖುಷಿಯಿಂದ ಕೈಬೀಸಿದ್ದರಂತೆ. ನೆರೆದಿದ್ದ ಅಷ್ಟೂ ಆಹ್ವಾನಿತರ ಕಣ್ಣುಗಳು ಆಗ ಕಲಾಂರನ್ನು ಆಕರ್ಷಿಸಿದ್ದ ಬಾದಲ್ ಎಂಬ ವ್ಯಕ್ತಿಯನ್ನು ಅಚಾನಕ್ಕಾಗಿ ಹುಡುಕತೊಡಗಿದ್ದವು. ಇತ್ತ ಕೈಮುಗಿದು ವಿನೀತಭಾವದೊಂದಿಗೆ ನಿಂತಿದ್ದ ಬಾದಲ್ ಕಲಾಂರವರ ಕರೆಗೆ ಘನತೆಯಿಂದಲೇ ಓಗೊಟ್ಟಿದ್ದರು.

ಸಮಾರಂಭವನ್ನು ಮುಗಿಸಿ ಮನೆಗೆ ಬಂದ ಬಾದಲ್ ತಮ್ಮ ಪತ್ನಿ ರಾಧಾರೊಂದಿಗೆ ಈ ಬಗ್ಗೆ ಪ್ರಸ್ತಾಪಿಸುತ್ತಾ ಹೆಮ್ಮೆಪಟ್ಟರಂತೆ. ”ಅವರದ್ದೂ ಉದ್ದ, ಬಿಳಿಕೂದಲು. ನಿಮ್ಮದೂ ಉದ್ದ, ಬಿಳಿಕೂದಲು. ಜಾತ್ರೆಯಲ್ಲಿ ಆಕಸ್ಮಿಕವಾಗಿ ಕಳೆದುಹೋದ ತನ್ನ ತಮ್ಮನಂತೆ ಅವರಿಗೆ ಅನ್ನಿಸಿರಬಹುದು. ಹೀಗಾಗಿಯೇ ನಿಮ್ಮನ್ನು ಕರೆದರು”, ಎಂದರಂತೆ ರಾಧಾ. ಪ್ರಪಂಚವೇ ಮುಳುಗಿಹೋದರೂ ಈ ಒಂದು ಜೋಕ್ ಮಾತ್ರ ಹಳತಾಗುವುದಿಲ್ಲ ಎಂದು ಹೊಟ್ಟೆತುಂಬಾ ನಗುತ್ತಾರೆ ಬಾದಲ್ ಚಿತ್ರಕಾರ್. ”ಹೌದ್ರೀ, ಅದಕ್ಕೇ ಕಲಾಂ ಸಾಬ್ ಅಂದು ನಿಮ್ಮನ್ನು ಕರೆದಿದ್ದು, ಇನ್ನೇನೂ ಮಹಾಕಾರಣವಿಲ್ಲ”, ಎಂದು ಇವತ್ತಿಗೂ ಮುಗುಳ್ನಗುತ್ತಾರೆ ರಾಧಾ.

ಬಾದಲ್ ಈ ದೇಶದ ಹಲವು ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರಿಂದ ಸನ್ಮಾನಿತರಾದವರಲ್ಲದೆ, ಅವರೊಂದಿಗೆ ಖಾಸಗಿಯಾಗಿಯೂ ಬೆರೆತವರು. ಆದರೆ ಯಾರ ಬಗ್ಗೆಯೂ ಅವರಿಗೆ ಆರಾಧನಾ ಭಾವವಿಲ್ಲ. ನಿಮ್ಮ ಮೆಚ್ಚಿನ ಫುಲ್ ಟೈಂ ರಾಜಕಾರಣಿ ಯಾರು ಎಂಬ ನನ್ನ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ಅಧಿಕಾರದ ಹುದ್ದೆಯಲ್ಲಿದ್ದವರು ಸದಾ ಸುತ್ತಮುತ್ತಲಿದ್ದರೂ, ಅವರಿಂದ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳುತ್ತಾ ಬಂದವರು ಬಾದಲ್ ಚಿತ್ರಕಾರ್. ಹೀಗಾಗಿ ಓಲೈಕೆ, ಮುಖಸ್ತುತಿಯಂತಹ ಚಿಲ್ಲರೆ ಅಂಶಗಳು ಅವರನ್ನೆಂದೂ ಕಟ್ಟಿಹಾಕಲಿಲ್ಲ. ಅಧಿಕಾರದಲ್ಲಿದ್ದವರ ಹಂಗೂ ಇವರಿಗೆ ಬೇಕಾಗಲಿಲ್ಲ.

ಬಾದಲ್ ರವರಲ್ಲಿ ಇಂದಿಗೂ ಜಾಗೃತವಾಗಿರುವ ರಾಜಕೀಯ ಪ್ರಜ್ಞೆ, ಅವುಗಳಲ್ಲಿರುವ ಸ್ಪಷ್ಟತೆ-ನಿರ್ಭಿಡತೆಗಳನ್ನು ಕಂಡಾಗ ಇದೊಂದು ವಿಚಿತ್ರವೆಂಬಂತೆ ಭಾಸವಾಗುವುದು ಸಹಜ. ಬಾದಲ್ ರನ್ನು ಈ ದೃಷ್ಟಿಕೋನದಲ್ಲಿ ಕಂಡಾಗ ನನಗೆ ಅಚಾನಕ್ಕಾಗಿ ನೆನಪಾಗಿದ್ದು ದಿಲ್ಲಿಯವನೇ ಆಗಿದ್ದ ಮಹಾಕವಿ ಆಮಿರ್ ಖುಸ್ರೋ. ಖುಸ್ರೋ ಒಂದೆಡೆ ಸಂತನಾಗಿದ್ದ ನಿಜಾಮುದ್ದೀನ್ ಔಲಿಯಾರಿಗೂ, ಇನ್ನೊಂದೆಡೆ ಮಹಮ್ಮದ್ ಘಜನಿಯಂತಹ ಸುಲ್ತಾನರಿಗೂ ಏಕಕಾಲದಲ್ಲಿ ಪ್ರಿಯವಾಗಿದ್ದವನು. ಒಂದು ಸನ್ಯಾಸದ ಧ್ರುವವಾದರೆ, ಮತ್ತೊಂದು ಸಂಪತ್ತಿನ ಧ್ರುವ. ಆದರೆ ಸುಲ್ತಾನರ ಸಂಪತ್ತು ಖುಸ್ರೋನನ್ನು ಯಾವತ್ತೂ ಭ್ರಷ್ಟನಾಗಿಸಲಿಲ್ಲ. ಖುಸ್ರೋ ಕೊನೆಯುಸಿರೆಳೆದಿದ್ದೂ ಕೂಡ ತನ್ನ ಗುರುವಾಗಿದ್ದ ಔಲಿಯಾರ ನೆನಪಿನಲ್ಲೇ! 

”ಇದ್ಯಾರ ಜೊತೆ ನೀವಿದ್ದೀರಿ?”, ಕಪ್ಪುಬಿಳುಪು ಚಿತ್ರವೊಂದನ್ನು ನೋಡುತ್ತಾ ನಾನು ಬಾದಲ್ ರವರಲ್ಲಿ ಕೇಳಿದ್ದೆ. ಅದು ನೀರಜ್ ಎಂದರು ಅವರು. ಲಿಖೇ ಜೋ ಖತ್ ತುಝೇ, ಏ ಭಾಯ್ ಝರಾ ದೇಖ್ ಕೇ ಚಲೋ… ಇತ್ಯಾದಿ ಅಜರಾಮರ ಚಿತ್ರಗೀತೆಗಳನ್ನು ಬರೆದಿದ್ದ ಖ್ಯಾತ ಗೀತಕಾರ ನೀರಜ್. ನನ್ನಂತಹ ಫಿಲ್ಮಿಪ್ರಿಯರು ಇಂದಿಗೂ ಆಪ್ತವಾಗಿ ನೆನಪಿಸಿಕೊಳ್ಳುವ ಪ್ರತಿಭಾವಂತ ಕವಿ.

ದಿಲ್ಲಿಯ ಒಂದು ಕಡೆ ವರ್ಷಂಪ್ರತಿ ನಡೆಸಲಾಗುತ್ತಿದ್ದ ಮುಶಾಯಿರಾಕ್ಕೆ (ಕವಿಗೋಷ್ಠಿ) ನೀರಜ್ ತಪ್ಪದೆ ಬರುತ್ತಿದ್ದರಂತೆ. ಆಗ ಅವರಿಗಾಗಿ ಡ್ರಿಂಕ್ ಸಿದ್ಧಪಡಿಸುವ ಕೆಲಸವು ಇವರದ್ದಾಗಿತ್ತು. ಆ ದಿನಗಳಲ್ಲಿ ಗೀತಕಾರ ನೀರಜ್ ರೊಂದಿಗೆ ತಾಸುಗಟ್ಟಲೆ ಹರಟುತ್ತಿದ್ದ ಅವರ ನೆನಪುಗಳು ಇವತ್ತಿಗೂ ಹಸಿರು.

ಕಲಾಂರವರಂತೆ ಚಿತ್ರರಂಗವೂ ಬಾದಲ್ ಚಿತ್ರಕಾರರನ್ನು ಕೈಬೀಸಿ ಕರೆದಿತ್ತು. ಆದರೆ ಚಿತ್ರರಂಗದ ಚಮಕ್-ಧಮಕ್ ಭ್ರಮಾಲೋಕಕ್ಕೂ, ನೈಜ ಪರಿಸ್ಥಿತಿಗೂ ತಾಳೆಯಾಗದ್ದನ್ನು ಕಂಡ ಬಾದಲ್ ಚಿತ್ರಕಾರ್ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟರು. ವಿಶೇಷವೆಂದರೆ ಇಂದು ಅವರ ಹಲವು ವಿದ್ಯಾರ್ಥಿಗಳು ಆರ್ಟ್ ಡೈರೆಕ್ಟರ್ ನಂತಹ ಹುದ್ದೆಗಳಲ್ಲಿದ್ದು, ಹಿಂದಿ ಸೇರಿದಂತೆ ಹಲವು ಭಾಷೆಗಳ ಮುಖ್ಯವಾಹಿನಿಯ ಸಿನೆಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ಹೀಗೆ ನೀರಜ್ ರವರ ನೆಪದಲ್ಲಿ ಸಾಹಿರ್ ಲೂಧಿಯಾನ್ವಿ, ಅಮೃತಾ ಪ್ರೀತಂ, ಗುರುದತ್, ಶೈಲೇಂದರ್… ಹೀಗೆ ಹಲವರ ಪ್ರಸ್ತಾಪಗಳೂ ನಮ್ಮ ಮಾತುಗಳಲ್ಲಿ ತೇಲಿ ಬರುತ್ತಿದ್ದವು. ಜೊತೆಗೇ ಖ್ಯಾತನಾಮರಾದ ಅಮೃತಾ ಶೆರ್ಗಿಲ್, ಖುಷ್ವಂತ್ ಸಿಂಗ್ ಮತ್ತು ಇಮ್ರೋಝ್ ರವರ ನೆನಪುಗಳೂ ಕೂಡ.

ಹಲವು ಕ್ಷೇತ್ರಗಳ ಸಾಧಕರನ್ನು ಹತ್ತಿರದಿಂದ ಬಲ್ಲವರಾಗಿ ಬಾದಲ್ ಚಿತ್ರಕಾರ್ ಕಥೆ ಹೇಳುತ್ತಿದ್ದರೆ, ನಾನೋರ್ವ ವಿಧೇಯ ಶ್ರೋತೃವೆಂಬಂತೆ ಅವರ ಸವಿನೆನಪುಗಳ ಮೆರವಣಿಗೆಯನ್ನು ಆಸ್ವಾದಿಸುತ್ತಿದ್ದೆ. ದಾಖಲಿಸಲು ಹೊರಟರೆ ಸಂಕಷ್ಟಗಳದ್ದೂ, ಸಾಧನೆಯದ್ದೂ ಅದೆಂಥಾ ಸಾರ್ಥಕ ಪಯಣ! 

ಮನೆಯೊಡತಿ ರಾಧಾರವರು ಸಿದ್ಧಪಡಿಸಿದ ಖಿಚಡಿಯನ್ನು ಮೂವರೂ ಜೊತೆಯಾಗಿ ಸವಿದ ನಂತರ ಮತ್ತದೇ ‘ವಾಕ್ ಆಂಡ್ ಟಾಕ್’. ನಿಮ್ಮನ್ನು ಭೇಟಿಯಾಗುವ ಮುನ್ನವೇ ನನ್ನನ್ನು ಹಿಡಿದಿಟ್ಟ ಸಂಗತಿಯೆಂದರೆ ಗಲ್ಲಿಯಾಚೆಗಿರುವ ವೃದ್ಧ ಸನ್ಯಾಸಿಯ ಮೂರ್ತಿ ಎಂದೆ ನಾನು.

ಕಲಾಂರವರಿಂದ ಪ್ರಶಂಸೆಗೊಳಗಾದ ಬುದ್ಧನ ಚಿತ್ರವನ್ನು ಮತ್ತೆ ದೊಡ್ಡ ಗಾತ್ರದ ಮೂರ್ತಿಯಾಗಿಸಿ ಮನೆಯ ಹೊರಭಾಗದ ಗೋಡೆಯನ್ನು ಸಿಂಗರಿಸಿದ್ದರು ಬಾದಲ್ ಚಿತ್ರಕಾರ್. ಶ್ರೀ ರಾಮ್ ಸುತಾರ್ ತನಗೆ ಶಿಲ್ಪಕಲೆಯನ್ನು ಕಲಿಸಿದ ಗುರುಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಬಾದಲ್. ರಾಮ್ ಸುತಾರ್ ಈ ದೇಶ ಕಂಡ ಮಹಾನ್ ಶಿಲ್ಪಿ. ಈಚೆಗೆ ಗುಜರಾತಿನಲ್ಲಿ ಎದ್ದು ನಿಂತ ಸರ್ದಾರ್ ವಲ್ಲಭಭಾಯಿವರ ಮೂರ್ತಿಯನ್ನು (ಸ್ಟಾಚ್ಯೂ ಆಫ್ ಯುನಿಟಿ) ನಿರ್ಮಿಸಿದವರೂ ಕೂಡ ರಾಮ್ ಸುತಾರ್.

ಹೀಗೆ ಬಾದಲ್ ಚಿತ್ರಕಾರರೊಂದಿಗೆ ಮಾತಿಗಿಳಿದರೆ ಹೆಜ್ಜೆಹೆಜ್ಜೆಗೂ ದಂತಕಥೆಗಳದ್ದೇ ಪ್ರಸ್ತಾಪ. ಬದುಕಿದರೆ ಹೀಗೆ ಬದುಕಬೇಕು ಎನ್ನುವಷ್ಟಿನ ಸಾರ್ಥಕತೆ.

”ನಾನು ಹೆಚ್ಚೇನೂ ಓದಿಕೊಂಡವನಲ್ಲ. ಆದರೆ ನನ್ನ ಕೆಲಸವನ್ನು ಬಹುವಾಗಿ ಪ್ರೀತಿಸಿದೆ. ಖ್ಯಾತಿ, ಯಶಸ್ಸು, ಸಂಪತ್ತು ಇತ್ಯಾದಿಗಳು ತನ್ನಷ್ಟಕ್ಕೆ ತಾನೇ ಬಂದೊದಗಿದವು”, ಎನ್ನುವ ಬಾದಲ್ ಚಿತ್ರಕಾರರಿಗೆ ಪ್ರಶಸ್ತಿ-ಪುರಸ್ಕಾರಗಳ ಬಗೆಗಿನ ಮೋಹವು ಕಳೆದುಹೋಗಿದೆ. ಇಂದು ಅವರ ಮನೆಯ ಗೋಡೆಗಳಲ್ಲಿ ಅವರ ಚಿತ್ರಗಳು, ವಿದ್ಯಾರ್ಥಿಗಳ ಪತ್ರಗಳು, ಬೆರಳೆಣಿಕೆಯ ಅಪರೂಪದ ಛಾಯಾಚಿತ್ರಗಳನ್ನು ಕಾಣಬಹುದೇ ಹೊರತು ಪ್ರಶಸ್ತಿಫಲಕಗಳಲ್ಲ. ಅವೆಲ್ಲವೂ ಹಳೆಯ ಡಬ್ಬವೊಂದರ ಪಾಲಾಗಿ ಮೂಲೆ ಸೇರಿವೆ. ”ನಾವಿರುವಷ್ಟು ದಿನ ಇವೆಲ್ಲವನ್ನು ಎತ್ತಿಕೊಂಡು ಮೆರೆದಾಡುತ್ತೇವೆ. ಸತ್ತ ನಂತರ ಇವೆಲ್ಲಾ ಬರೀ ಕಸ. ಎಸೆಯಲಷ್ಟೇ ಲಾಯಕ್ಕು. ಬದುಕು ಇಷ್ಟೇನೇ”, ಎನ್ನುವ ಅವರ ಮಾತುಗಳಲ್ಲಿ ಪ್ರಾಮಾಣಿಕತೆಯಿದೆ.

ಬಾದಲ್ ಚಿತ್ರಕಾರ್ ಸ್ವತಃ ಹೇಳುವಂತೆ ಅವರು ಯಾವತ್ತೂ ಸಂಪತ್ತನ್ನು ಕೂಡಿಡಲಿಲ್ಲ. ತಮಗೆ ಅವಶ್ಯಕವೆನಿಸುವಷ್ಟನ್ನು ಮಾತ್ರ ಬಳಸಿ ಉಳಿದದ್ದು ತಮ್ಮದಲ್ಲವೆಂದು ತಿಳಿದು ಸುಮ್ಮನೆ ಉಳಿದುಬಿಟ್ಟರು. ಹಕ್ಕಿಗೂಡಿನಂತಿರುವ ಅವರ ಪುಟ್ಟ ಮನೆ-ಸ್ಟುಡಿಯೋ ಇದಕ್ಕೆ ಸಾಕ್ಷಿ.

ದುರಾಸೆಯ ಭೂತವು ಮೈಮನಸ್ಸುಗಳಿಗೆ ಆವರಿಸದಿದ್ದ ಪರಿಣಾಮವಾಗಿ ಅವರು ಇಂದಿಗೂ ಸುಖಿ ಮತ್ತು ಸದಾ ಹಸನ್ಮುಖಿ. ಪುಟ್ಟ ಮಗುವಿನಂತೆ ಹೊಸ ವಿಚಾರಗಳಿಗೆ ಹುಮ್ಮಸ್ಸಿನಲ್ಲಿ ತೆರೆದುಕೊಳ್ಳುವ ಅವರ ಮನೋಭಾವ, ಈ ಕ್ಷಣವನ್ನು ಇಡಿಇಡಿಯಾಗಿ ಜೀವಿಸುವ ಅವರ ಜೀವನಪ್ರೀತಿ, ಹೊರಗಿನ ಆಡಂಬರಕ್ಕಿಂತ ತನ್ನೊಳಗನ್ನು ಆಳವಾಗಿ ಅವಲೋಕಿಸುವ ಅವರ ಯೋಚನಾಲಹರಿಗಳು ಅವರನ್ನು ಇಳಿವಯಸ್ಸಿನಲ್ಲೂ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಲವಲವಿಕೆಯಿಂದಿರಿಸಿವೆ.

‘ಬಾದಲ್ ಚಿತ್ರಕಾರ್ ಈ ಜಗತ್ತನ್ನೇ ಖುಷಿಯಾಗಿಟ್ಟರು. ಅವರಿಂದ ಯಾರಾದರೂ ದುಃಖಿತರಾಗಿದ್ದರೆ ಅದು ಅವರ ಪತ್ನಿ ರಾಧಾ ಮಾತ್ರ’ ಎಂದು ಹಿಂದಿ ಪತ್ರಿಕಾವರದಿಯೊಂದು ಇಡೀ ಪ್ಯಾರಾಗ್ರಾಫ್ ಬರೆದಿತ್ತು. ಆದರೆ ಇಂತಹ ಕೀಟಲೆಯ ವರದಿಗಳನ್ನು ತಾನಾಗಿಯೇ ಪ್ರಸ್ತಾಪಿಸುತ್ತಾ, ತನ್ನನ್ನು ತಾನು ಲೇವಡಿ ಮಾಡಿಕೊಳ್ಳುತ್ತಾ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ ಬಾದಲ್ ಚಿತ್ರಕಾರ್. ಕುರ್ತಾ ಪೈಜಾಮಾ ಮತ್ತು ಚಪ್ಪಲಿಗಳ ಪುಟ್ಟ ಸಂಗ್ರಹವೊಂದನ್ನು ಬಿಟ್ಟರೆ ಅವರಿಗೆ ಹೇಳಿಕೊಳ್ಳುವಂಥಾ ಶೋಕಿಗಳಿಲ್ಲ.

ಅದರಲ್ಲೂ ಬಹುತೇಕ ಕುರ್ತಾಗಳು ಅವರಿಂದಲೇ ವಿನ್ಯಾಸಗೊಳಿಸಲ್ಪಟ್ಟಿದ್ದು, ಸ್ವತಃ ನೇಯ್ದುಕೊಂಡಿರುವಂಥವುಗಳು. ಫ್ಯಾಷನ್ ಡಿಸೈನಿಂಗ್ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ಕಲಾಪ್ರಕಾರಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸುವ ಬಾದಲ್ ಚಿತ್ರಕಾರ್ ಬತ್ತದ ಜೀವನಪ್ರೀತಿಗೊಂದು ಪ್ರೇರಣಾತ್ಮಕ, ಅನುಕರಣೀಯ ನಿದರ್ಶನ.

ತನ್ನ ಮುಂಜಾನೆಯ ಎರಡು ತಾಸು ಮತ್ತು ಸಾಯಂಕಾಲದ ಎರಡು ತಾಸುಗಳನ್ನು ಕಾಲ್ನಡಿಗೆಗಾಗಿ ಮೀಸಲಿಟ್ಟಿರುವ ಬಾದಲ್ ಚಿತ್ರಕಾರ್ ಎಂಭತ್ತರ ವಯಸ್ಸಿನಲ್ಲೂ ಸೂಪರ್ ಫಿಟ್ ವ್ಯಕ್ತಿ. ಅವರೇ ಹೇಳುವಂತೆ ಯಾವ ರೀತಿಯ ವ್ಯಸನಗಳೂ ಅವರನ್ನು ಈವರೆಗೆ ಸೋಕಿಲ್ಲ. ಹಲವು ವರ್ಷಗಳ ಹಿಂದೆ ಐವತ್ತೊಂದು ದಿನಗಳ ಉಪವಾಸ ಕಾಲದಲ್ಲಿ ಕೇವಲ ಹಾಲನ್ನು ಮಾತ್ರ ಸೇವಿಸುತ್ತಾ, ಹದಿನಾಲ್ಕು ಗಾಂಧಿ ಕಲಾಕೃತಿಗಳನ್ನು ಸಿದ್ಧಪಡಿಸಿದ ಬಾದಲ್ ಚಿತ್ರಕಾರರನ್ನು ಗಾಂಧಿತತ್ವಗಳು ಮತ್ತಷ್ಟು ಮಾಗಿಸಿವೆ. ತಮ್ಮ ತುಂಬು ಕುಟುಂಬ, ಕುಂಚ-ಕ್ಯಾನ್ವಾಸು, ವಿದ್ಯಾರ್ಥಿಗಳು, ಪತ್ರಕರ್ತ ಮಿತ್ರರು, ಕಲಾಸಕ್ತರು… ಹೀಗೆ ತಮ್ಮದೇ ಆದ ಪುಟ್ಟ ಜಗತ್ತಿನಲ್ಲಿ ಅವರು ಸಂತೃಪ್ತರು.

ತನ್ನ ಸ್ಟುಡಿಯೋದಲ್ಲಿ ಇರಿಸಲಾಗಿರುವ ಪುಟ್ಟ ಮಂಚವೊಂದರಲ್ಲಿ ಪವಡಿಸುತ್ತಾ ಕೋಣೆಯ ಸೀಲಿಂಗಿನತ್ತ ನೋಡುತ್ತಾರೆ ಬಾದಲ್. ತಲೆಯ ಮೇಲಿರುವ ಸೀಲಿಂಗಿನಲ್ಲೂ ಒಂದು ಮ್ಯೂರಲ್ ಅನ್ನು ಮಾಡಿರಿಸಲಾಗಿದೆ ಎಂದು ನಮಗೆ ಗೊತ್ತಾಗುವುದೇ ಆಗ. ಉದ್ದನೆಯ ಪೈಪಿನಂತೆ ಹೋಗುವ ಆ ವ್ಯವಸ್ಥೆಯಲ್ಲಿ ವಿವಿಧ ಬಗೆಯ ತಂತಿಗಳಿವೆ.

ಹೊಸತು, ಹಳೆಯದು, ಮುರಿದದ್ದು, ತುಕ್ಕು ಹಿಡಿದದ್ದು, ಗೋಜಲು ಗೋಜಲಾಗಿದ್ದು, ಮುರಿದು ನೇತಾಡುವಂತಿರುವಂಥದ್ದು, ಬಲೆ ಹಿಡಿದದ್ದು… ಹೀಗೆ ಎಲ್ಲವೂ ಅದರಲ್ಲಿವೆ. ಇವುಗಳು ಮನುಷ್ಯನ ಸಂಕೀರ್ಣ ಆಲೋಚನೆಗಳನ್ನು ಪ್ರತಿಬಿಂಬಿಸುತ್ತವೆ ನೋಡಿ ಎನ್ನುತ್ತಾರೆ ಬಾದಲ್. ಕಲೆಯು ಅವರ ಬದುಕಿನಲ್ಲಿ ಅದೆಷ್ಟು ಹಾಸುಹೊಕ್ಕಾಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆಯು ಬೇರೊಂದಿರಲಿಕ್ಕಿಲ್ಲ.  

ತನ್ನಿಷ್ಟದಂತೆ ಬದುಕುವ ಸ್ವಾತಂತ್ರ್ಯವು ಅಷ್ಟು ಸುಲಭವಾಗಿ ಸಿಗುವಂಥದ್ದಲ್ಲ ಎಂದಿದ್ದರು ಪೂರ್ಣಚಂದ್ರ ತೇಜಸ್ವಿ. ಬಾದಲ್ ತಮ್ಮ ಜೀವನದುದ್ದಕ್ಕೂ ತಮ್ಮಿಷ್ಟದಂತೆ ಬದುಕಿದವರು. ಹೀಗಾಗಿಯೇ ಅವರ ಸರಳ ಜೀವನವು ಉಳಿದವರಿಗೆ ಹುಚ್ಚಾಟವೆಂಬಂತೆ ಕಂಡಿತು. ಅವರ ವಿಪರೀತವೆಂಬಷ್ಟಿನ ಕಲಾಪ್ರೀತಿ ಮತ್ತು ಜೀವನಪ್ರೀತಿಗಳು ಉಳಿದವರಿಗೆ ವಿಕ್ಷಿಪ್ತತೆಯಂತೆ ಕಂಡವು.

ಬಾದಲ್ ರಚಿಸಿದ್ದ ನ್ಯೂಡ್ ಕಲಾಕೃತಿಗಳು ಅವರ ಆಪ್ತವಲಯದ ಮಂದಿಗೇ ಅಷ್ಟಾಗಿ ಪ್ರಿಯವಾಗಿರಲಿಲ್ಲ. ”ನಿನ್ನೊಳಗೊಬ್ಬ ಮಹಾರಸಿಕ ಓಶೋ ಇದ್ದಾನಪ್ಪಾ”, ಎಂಬ ಟೀಕೆಯನ್ನೂ ಇದರಿಂದಾಗಿ ಅವರು ಕೇಳಿಸಿಕೊಳ್ಳಬೇಕಾಗಿ ಬಂದಿತ್ತು. ಆದರೆ ನಮ್ಮ ಪುಣ್ಯಕ್ಕೆ ಬಾದಲ್ ಚಿತ್ರಕಾರ್ ಬದಲಾಗಲಿಲ್ಲ. ಒಂದು ಪಕ್ಷ ಬದಲಾಗಿದ್ದರೆ ಬಾದಲ್ ಚಿತ್ರಕಾರ್ ಗುಂಪಿನಲ್ಲಿ ಗೋವಿಂದನಾಗಿ ಉಳಿಯುತ್ತಿದ್ದರೇ ಹೊರತು, ಸದಾ ನೆನಪಿನಲ್ಲುಳಿಯುವ ಚಿತ್ರಕಲಾವಿದನಾಗುತ್ತಲೇ ಇರಲಿಲ್ಲ. 

ಕಳೆದುಹೋದ ಖುಷಿಯ ದಿನಗಳಲ್ಲಿ ಮೈಮರೆಯದೆ, ಮುಂಬರುವ ದಿನಗಳ ಬಗ್ಗೆ ವೃಥಾ ಆತಂಕಪಡದೆ ಈಗಿರುವ ಪ್ರತೀ ಕ್ಷಣವನ್ನೂ ಮೊಗೆಮೊಗೆದು ಬದುಕುತ್ತಿದ್ದಾರೆ ಬಾದಲ್ ಚಿತ್ರಕಾರ್. ಒತ್ತಡವನ್ನೇ ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿರುವ, ಕೂಡಿಟ್ಟಷ್ಟೂ ಸಾಲುತ್ತಿಲ್ಲವೆಂದು ಗೊಣಗುವ ನಮ್ಮಂತಹ ಬಹುತೇಕರಿಗೆ ಖುಷಿಖುಷಿಯಾಗಿ ಬದುಕುವುದು ಹೇಗೆ ಎಂಬುದನ್ನು ಬಾದಲ್ ರಂತಹ ಮಹನೀಯರು ಕಲಿಸುತ್ತಿದ್ದಾರೆ. ನನಗನ್ನಿಸಿರುವಂತೆ ನಮ್ಮ ತಲೆಮಾರಿಗಿರುವ ದೊಡ್ಡ ತುರ್ತೆಂದರೆ ಇದುವೇ!

ಸ್ವತಃ ಗಾಂಧಿ ಹೇಳಿರುವಂತೆ ದೊಡ್ಡವರು ಬದುಕಿದ ರೀತಿಯೇ ನಮ್ಮೆಲ್ಲರಿಗೊಂದು ಪಾಠ.

November 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: