‘ಮುದ್ರಾ ರಾಕ್ಷಸ’ ಸೃಷ್ಟಿಸುವ ಅವಾಂತರಗಳು…

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

|ಕಳೆದ ಸಂಚಿಕೆಯಿಂದ|

ಮುದ್ರಣ ಸಮಯದಲ್ಲಿ ತಪ್ಪುಗಳು ಹೇಗಾಗುತ್ತವೆ?

ಪುಸ್ತಕದ ಅಕ್ಷರ ಸಂಯೋಜನೆ, ವಿನ್ಯಾಸ, ಕರಡು ತಿದ್ದುವುದನ್ನು ಗ್ರಾಹಕರೇ ಮಾಡಿಕೊಂಡು ಅಂತಿಮವಾಗಿ ಮುದ್ರಣಕ್ಕೆ ತಂದಾಗಲೂ ಬೇರೊಂದು ಕಂಪ್ಯೂಟರ್ ನಲ್ಲಿ ಅಂತಿಮವಾದ ವಿಷಯವನ್ನು ಮುದ್ರಣಾಲಯಗಳ ಕಂಪ್ಯೂಟರ್ ಗೆ ವರ್ಗಾಯಿಸಿಕೊಂಡಾಗ ಅವರ ಬಳಿ ಇದ್ದ ಅಕ್ಷರ ತಂತ್ರಾಂಶಕ್ಕೂ (Fonts) ಇಲ್ಲಿನ ತಂತ್ರಾಂಶಕ್ಕೂ ಹೊಂದಾಣಿಕೆಯಾಗದಿದ್ದರೆ ಕನ್ನಡ ಅಕ್ಷರಗಳ ನಡುವೆ ಇರುವ ಇಂಗ್ಲಿಷ್ ಅಕ್ಷರಗಳು ಪೈಶಾಚಿಕ ಭಾಷೆಯ ಲಿಪಿಗಳಂತೆ ಗೋಚರಿಸಿಬಿಡುತ್ತವೆ. ಇನ್ನು ಕೆಲವು ಬಾರಿ ಒಂದು ಅಕ್ಷರವೋ, ಒತ್ತಕ್ಷರವೋ ಅಥವಾ ಶೀರ್ಷಿಕೆಗಳೋ ಮಾಯವಾಗಿಬಿಡುವ ಸಂಭವವಿರುತ್ತದೆ. ಉದಾಹರಣೆಗೆ ‘ಸಂಸ್ಕೃತಿ’ ಎಂಬ ಪದ ಎಲ್ಲೆಲ್ಲಿ ಇರುತ್ತದೋ ಆ ಪದ ‘ಸಂಸತಿ’ ಎಂದಾಗಿಬಿಟ್ಟಿರುತ್ತದೆ.

ಒಮ್ಮೆ ಅಂಕಿತ ಪುಸ್ತಕ ಪ್ರಕಟ ಮಾಡಿದ ಮಹಾಬಲ ಸೀತಾಳಭಾವಿ ಅವರ ಚಾಟು ಕವಿತೆಗೆ ಚುಟುಕು ಕತೆ ಪುಸ್ತಕ ಮುದ್ರಣ ಸಮಯದಲ್ಲಿ ಅನೇಕ ಕಡೆ ಒಂದು ಒತ್ತಕ್ಷರ ಮಾಯವಾಗಿ, ಅದು ನಮ್ಮ ಅರಿವಿಗೆ ಬರುವಷ್ಟರಲ್ಲಿ ಮುದ್ರಣವಾದ ಅನೇಕ ಪುಸ್ತಕಗಳು ಮಾರಾಟವಾಗಿಬಿಟ್ಟಿದ್ದವು. ಪುಸ್ತಕದಲ್ಲಿ ವಿಷಯ, ವಿನ್ಯಾಸ, ಕಾಗದ, ಮುದ್ರಣಕ್ಕೆ ಕೊಡುವ ಮಹತ್ವಕ್ಕಿಂತ ಹೆಚ್ಚು ಮಹತ್ವ ಕರಡು ತಿದ್ದಲು ಕೊಡುವ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ದಂಪತಿಗಳನ್ನು ಮುಜುಗರಕ್ಕೀಡುಮಾಡಿ ಭಾರೀ ನಷ್ಟದೊಂದಿಗೆ ಮತ್ತೆ ಸರಿಪಡಿಸಿ ಮುದ್ರಿಸಬೇಕಾಯಿತು.

ಕೆಲವು ಬಾರಿ ಶೀರ್ಷಿಕೆಗಳ ಜೊತೆ ಪುಟದ ಚೆಲುವನ್ನು ಹೆಚ್ಚಿಸಲು ಬಳಸಿದ ಹೂಗಳ ಚಿತ್ರಗಳು ಮುದ್ರಣ ಸಮಯದಲ್ಲಿ ಬಿಟ್‍ಮ್ಯಾಪ್ ಮಾಡಿ, ಪೇಜ್ ಡೌನ್ ಮಾಡುವಾಗ ಶೀರ್ಷಿಕೆಯ ಮೇಲೆ ಚಿತ್ರಗಳು ಬಂದು ಅಸ್ಪಷ್ಟವಾಗಿ ಬಿಡುತ್ತವೆ. ಒಳಪುಟಗಳನ್ನು ವಿನ್ಯಾಸ ಮಾಡುವಾಗ ಪ್ಯಾರಾದ ಕೊನೆಯ ಸಾಲು ಮುಂದಿನ ಪುಟದಲ್ಲೋ ಅಥವಾ ಪ್ಯಾರಾದ ಮೊದಲನೇ ಸಾಲು ಹಿಂದಿನ ಪುಟದಲ್ಲೋ ಬಂದರೆ ಇಂತಹ ಸಾಲುಗಳು ಅನಾಥ ಸಾಲು (Orphan lines) ಆಗಿಬಿಡುತ್ತವೆ, ಹೀಗಾಗದಂತೆ ಎಚ್ಚರಿಕೆ ವಹಿಸಬೇಕು.

ಪುಸ್ತಕದ ಹೆಸರುಗಳು (Titles), ಅಲಂಕರಿಸಿದ ಪಂಕ್ತಿಗಳು (Displayed lines), ಪ್ರಕರಣ ಶಿರೋನಾಮೆಗಳು (Chapter Heads), ಪುಟ ಶಿರೋನಾಮೆಗಳು (Page Heads), ತಾರೀಕು, ನಾಟಕಗಳಲ್ಲಿ ಪಾತ್ರಗಳ ಹೆಸರುಗಳು ಪ್ರತ್ಯೇಕವಾದ ಪಂಕ್ತಿಗಳಲ್ಲಿ ಬರಬೇಕು. ಇವುಗಳಿಗೆ ಬೇರೆಬೇರೆ ಅಳತೆಯ ಫಾಂಟ್ ಬಳಸಬೇಕಾಗುತ್ತದೆ. ಅಡಿಟಿಪ್ಪಣಿಯ ಭಾಗವನ್ನು ಸೂಚಿಸಲು ಮೇಲಿನ ಅಂಕಿಗಳನ್ನು (Superior Figures) ಬಳಸಿ, ಅದೇ ಪುಟದಲ್ಲಿ ಅಡಿಟಿಪ್ಪಣಿಯು ಚಿಕ್ಕ ಅಳತೆಯ ಫಾಂಟ್‍ನಲ್ಲಿ ಇರುವಂತೆ ನೋಡಿಕೊಳ್ಳುವುದು ಬಹು ಮುಖ್ಯ ಅಂಶ. 

ಪುಸ್ತಕದ ಅಳತೆಗೆ ತಕ್ಕಂತೆ ಮಿತ ಸ್ಥಳಾವಕಾಶದಲ್ಲಿ ಬರಹವನ್ನು ಮತ್ತು ಚಿತ್ರಗಳಿದ್ದಲ್ಲಿ ಅವುಗಳೊಂದಿಗೆ ಅಚ್ಚುಕಟ್ಟಾಗಿ, ಕಲಾತ್ಮಕವಾಗಿ ಪುಟ ವಿನ್ಯಾಸಗೊಳಿಸಲು ಪಳಗಿದ ಪುಟ ವಿನ್ಯಾಸಕರಿಂದ ಮಾತ್ರ ಸಾಧ್ಯ. ಪುಸ್ತಕದ ಘನಸ್ತಿಕೆಯನ್ನು ಹೆಚ್ಚಿಸುವ ಪುಟವಿನ್ಯಾಸ ಒಂದು ಸರಸ ಸುಂದರ ಕಲೆ, ಅದು ಪುಸ್ತಕಕ್ಕೆ ಶಿರೋಭೂಷಣವಿದ್ದಂತೆ.

ಕೇವಲ ಹೂರಣದ ಜೊತೆಯ ಸಂಬಂಧ ಮಾತ್ರವಲ್ಲ ಸ್ಪರ್ಶ, ಬಣ್ಣ, ವಿನ್ಯಾಸ, ಕಾಗದ, ಮುದ್ರಣ ಹೀಗೆ ಪ್ರತಿಯೊಂದಕ್ಕೂ ಬರಹಗಳಿಗೆ ಕೊಡುವ ಮಹತ್ವವನ್ನೇ ಕೊಡಬೇಕಾಗುತ್ತದೆ. ಪುಸ್ತಕ ಹೊದಿಕೆಯಿಂದ ಹಿಡಿದು ಒಳಗಿನ ವಿವರಗಳವರೆಗೆ, ಕಾಗದದಿಂದ ಹಿಡಿದು ಉಪಯೋಗಿಸುವ ಬಣ್ಣದವರೆಗೆ ಪ್ರತಿಯೊಂದೂ ಅದರಲ್ಲಿ ಮುಖ್ಯವೇ ಎಂದು ಭಾವಿಸಿ ಕೌತುಕದ ಅನುಭವವನ್ನು ಕೊಡುವಂತೆ ಮುದ್ರಿಸಬೇಕು.

ಹಸ್ತಪ್ರತಿಯ ತಿದ್ದುಪಡಿಗಳೆಲ್ಲ ಮುಗಿದು ಅಂತಿಮವಾಗಿ ಸಿದ್ಧಗೊಂಡ ಡಿಟಿಪಿ ಬರಹವನ್ನು ಆರಂಭದಿಂದ ಅಂತ್ಯದವರೆಗೂ ಚಿತ್ರಗಳೊಂದಿಗೆ ಒಪ್ಪವಾಗಿ ಸಂಯೋಜಿಸುವ ಅಭಿರುಚಿ, ತಾಳ್ಮೆಯ ಕೌಶಲವನ್ನು ವಿನ್ಯಾಸಗಾರರು ಸಿದ್ಧಿಸಿಕೊಂಡಿರಬೇಕು. ಬಾಕ್ಸ್ ಬರಹಗಳ ನಡುವೆ ಸ್ಕ್ರೀನ್ ಎಷ್ಟು ದಟ್ಟವಾಗಿರಬೇಕು ಎಂದು ತಾಳೆಹಾಕುವ ಲೆಕ್ಕಾಚಾರದಲ್ಲೂ, ಪುಟಗಳಲ್ಲಿ ಇವನ್ನೆಲ್ಲ ಸರಿದೂಗಿಸುವ ಕಲಾವಂತಿಕೆಯಲ್ಲೂ ಚಾಣಾಕ್ಷತೆ ಬೇಕಾಗುತ್ತದೆ.

ಸ್ಕ್ರೀನ್ ಲೆಕ್ಕಾಚಾರದಲ್ಲಿ ಎಡವಟ್ಟಾದರೆ ಮುದ್ರಣದಲ್ಲಿ ಅದರ ಮೇಲಿನ ಅಕ್ಷರಗಳು ಮುದ್ದೆ ಮುದ್ದೆಯಂತಾಗಿ ಮಸುಕಾಗಿಬಿಡುತ್ತವೆ. ಕೆಲವು ಬಾರಿ ವರ್ಣದ ರಗಳೆಯೇ ಇಲ್ಲದೆ ಕಪ್ಪು ಬಿಳುಪಿನಲ್ಲಿಯೇ ಕೊಂಚ ತಾಂತ್ರಿಕ ನೈಪುಣ್ಯತೆಯಿಂದ ಪುಟ ವಿನ್ಯಾಸ ಮಾಡಿಯೋ ಅಥವಾ ಎರಡು ಬಣ್ಣಗಳನ್ನು ಬಳಸಿ ನಾಲ್ಕು ಬಣ್ಣದ ಪರಿಣಾಮ ತಂದೋ ಒಳಪುಟಗಳಲ್ಲಿ ಚೆಲುವೊಡೆಯುವಂತೆ ಮಾಡುವ ಕೌಶಲ್ಯ ಬೇಕಾಗುತ್ತದೆ.

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಪೀಠಾರೋಹಣ ಬೆಳ್ಳಿಹಬ್ಬದ ಕಾರ್ಯಕ್ರಮದ ಹಿಂದಿನ ಕೆಲವು ದಿನಗಳವರೆಗೆ ಬಂದ ಅನೇಕ ಲೇಖನಗಳನ್ನು ಟೈಪ್ ಮಾಡಿಸಿ, ಕರಡು ತಿದ್ದಿ, ಅತ್ಯಂತ ಹಳೆಯ ಫೋಟೋಗಳನ್ನೆಲ್ಲ ಸೇರಿಸಿ ವಿನ್ಯಾಸಗೊಳಿಸಿ, ಕಾರ್ಯಕ್ರಮದ ಹಿಂದಿನ ದಿನ ಸಂಜೆ ಪುಸ್ತಕಗಳನ್ನು ಸಿದ್ಧಪಡಿಸಿ, ಸಂಪಾದಕರಾದ ಚಂದ್ರಯ್ಯ ನಾಯ್ಡು ಅವರ ಕೈಗೆ ಕೊಟ್ಟೆವು. ಅವರು ವಿನ್ಯಾಸ, ಮುದ್ರಣ, ಬೈಂಡಿಂಗ್ ಎಲ್ಲಾ ನೋಡಿ ಬಹಳ ಸಂತೋಷಪಡುತ್ತಿದ್ದರು. ಆದರೆ ಅವರ ಆ ಸಂತೋಷ ಬಹಳ ಹೊತ್ತು ಉಳಿಯಲಿಲ್ಲ.

ಪುಟಗಳನ್ನು ತಿರುವಿಹಾಕಿ ನೋಡುತ್ತಾ ಮುಖ ಕಿವುಚಿಕೊಂಡರು. “ಛೆ.. ಛೆ.. ಛೆ..” ಎಂಬ ಶಬ್ದದೊಂದಿಗೆ ಪುಸ್ತಕವನ್ನು ತಿರುವಿ ತಿರುವಿ ನೋಡಲು ಪ್ರಾರಂಭಿಸಿದರು. ನಮಗೆ ಗಾಬರಿ. “ಯಾಕೆ ಸರ್, ಏನಾಗಿದೆ” ಎಂದರೂ, ಅವರಿಂದ ಏನೂ ಮಾತೇ ಇಲ್ಲ..! ಮೌನವಾಗಿ ಕುಳಿತುಬಿಟ್ಟರು. ಸ್ವಲ್ಪ ಸಮಯದ ನಂತರ “ಕಿಟ್ಟಿ ಎಂಥ ಅಚಾತುರ್ಯ ನಡೆದುಹೋಗಿದೆ..!!” ಎಂದರು. ನಾನು ಗಾಬರಿಯಲ್ಲಿ “ಏನು, ಏನಾಗಿದೆ ಹೇಳಿ” ಎಂದಾಗ, ನಾನು ‘‘ಕರಡು ದೋಷಗಳನ್ನು (ಕರೆಕ್ಷನ್ಸ್) ನಾನೇ ಕೂತು ಕಂಪ್ಯೂಟರ್‌ ನಲ್ಲಿ ಸರಿಪಡಿಸಿದ್ದೆ, ಆದರೆ ತಪ್ಪುಗಳು ಎಲ್ಲ ಹಾಗೇ ಉಳಿದಿವೆ. ಏನಿದು? ಯಾಕೆ ಹೀಗಾಗಿದೆ?” ಎಂದರು.

ನಾವು ಪ್ರೂಫ್ ಹಿಡಿದು ಕಂಪ್ಯೂಟರ್ ನ ಫೈಲ್ ಓಪನ್ ಮಾಡಿ ನೋಡಿದರೆ, ಅದೇ ಗ್ರಂಥದ ಎರಡು ಫೈಲ್ ಗಳಿದ್ದವು. (ಕೆಲವು ಬಾರಿ ದೊಡ್ಡ ದೊಡ್ಡ ಪುಸ್ತಕಗಳನ್ನು ವಿನ್ಯಾಸ ಮಾಡುವಾಗ ಫೈಲ್ ಗಳಿಗೆ ತೊಂದರೆಯಾಗಿ ಫೈಲ್ ಗಳು ಓಪನ್ ಆಗದಿರಬಹುದೆಂದು ಅದೇ ಫೈಲನ್ನು ಇನ್ನೊಂದು ಫೈಲ್ ನಲ್ಲೋ, ಕಂಪ್ಯೂಟರ್ ನಲ್ಲೋ ಸೇವ್ ಮಾಡಿಟ್ಟುಕೊಳ್ಳುವುದು ವಾಡಿಕೆ.) ಒಂದು ಫೈಲ್ ನಲ್ಲಿ ಕರೆಕ್ಷನ್ಸ್ ಆಗಿದೆ, ಇನ್ನೊಂದರಲ್ಲಿ ಕರೆಕ್ಷನ್ಸ್ ಆಗಿಲ್ಲ. ಅಂತಿಮವಾಗಿ ಮುದ್ರಣಕ್ಕೆ ಹೋಗುವಾಗ ಹಗಲು ರಾತ್ರಿಯೆನ್ನದೆ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾವು ಸರಿಯಾಗಿ ಗಮನಿಸದೆ, ಕರೆಕ್ಷನ್ಸ್ ಆಗದೇ ಇರುವ ಫೈಲ್ ಮುದ್ರಣವಾಗಿ ಬಿಟ್ಟಿದೆ. ಮುಂದೆ ಬಹಳ ಕಡಿಮೆ ಸಮಯ ಹಾಗೂ ಒತ್ತಡಗಳ ನಡುವೆ ಪುಸ್ತಕವನ್ನು ಮರು ಮುದ್ರಿಸಿಕೊಟ್ಟೆವಾದರೂ, ಈ ಪ್ರಸಂಗದಿಂದ ನಮ್ಮ ಮುದ್ರಣಾಲಯ ಭಾರೀ ನಷ್ಟ ಅನುಭವಿಸಬೇಕಾಯಿತು.

ಮುಖಪುಟದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಬಳಸುವ ಚಿತ್ರಗಳು ಹಾಗೂ ಶೀರ್ಷಿಕೆಗಳು ಚೆನ್ನಾಗಿದ್ದರೆ ಸಾಲದು ಅವು ವಿಷಯಕ್ಕೆ ಒತ್ತುಕೊಡುವಂತೆ, ವಿಷಯದ ಮೇಲೆ ಬೆಳಕು ಚೆಲ್ಲುವಂತೆ ಇದ್ದರೆ ಚೆಂದ. ಅದು ಓದುಗರು ಮೊದಲ ನೋಟಕ್ಕೇ ಪುಸ್ತಕವನ್ನು ಕೈಗೆತ್ತಿಕೊಂಡು ನೋಡಲು ಪ್ರಚೋದಿಸುವಂತೆ ಇರಬೇಕು. ಪುಸ್ತಕದ ಅಂಗಡಿಗಳಲ್ಲಿ ಸಾಹಿತ್ಯಾಸಕ್ತರು ಸಾವಿರಾರು ಪುಸ್ತಕಗಳ ನಡುವೆ ಪುಸ್ತಕಗಳ ಶೀರ್ಷಿಕೆ, ಮುಖಪುಟದ ಆಕರ್ಷಣೆಗೆ ಮನಸೋತು ಪುಸ್ತಕವನ್ನು ಕೈಗೆತ್ತಿಕೊಂಡರೆ ಸಾಕು, ಪ್ರಕಾಶಕರ ಅರ್ಧ ಪುಸ್ತಕಗಳು ಮಾರಾಟವಾದಂತೆ.

ಒಳ್ಳೆಯ ಗುಣಮಟ್ಟದ ಮುದ್ರಣದ ಪುಸ್ತಕಗಳಿಗೆ ಗ್ರಾಹಕರು ಸ್ವಲ್ಪ ಹೆಚ್ಚಿನ ಬೆಲೆಯನ್ನು ಕೊಡಲು ಹಿಂಜರಿಯುವುದಿಲ್ಲ. ಕೆಲವು ಬಾರಿ ಮುದ್ರಣಾಲಯಗಳಲ್ಲಿ ಒಟ್ಟೊಟ್ಟಿಗೆ ಬೇರೆಬೇರೆಯವರ ಹತ್ತಾರು ಪುಸ್ತಕಗಳನ್ನು ಮುದ್ರಿಸುವಾಗ ಮುಖಪುಟದ ಬೆನ್ನುಡಿಯೋ, ಬೆನ್ನಿನ ಮೇಲಿರುವ ಪುಸ್ತಕದ ಶೀರ್ಷಿಕೆಯೋ ಅದಲು ಬದಲಾಗುವ ಸಂಭವವಿರುತ್ತದೆ. ಕೆಲವು ಬಾರಿ ಮುಖಪುಟ ವಿನ್ಯಾಸ ಮಾಡುವಾಗ ತಾತ್ಕಾಲಿಕವಾಗಿ ಹಾಕಿದ ಬೆಲೆಯು ಅಂತಿಮವಾಗಿ ಹಾಗೆಯೇ ಮುದ್ರಣವಾಗಿ ಕೊನೆಯಲ್ಲಿ ಮುಖಪುಟದಲ್ಲಿ ಒಂದು ಬೆಲೆ, ಒಳಪುಟಗಳಲ್ಲಿ ಒಂದು ಬೆಲೆ ಅಚ್ಚಾಗಿ ಗೊಂದಲಕ್ಕೀಡುಮಾಡಿಬಿಡುತ್ತದೆ.

ಕಲಾವಿದರು ವಿನ್ಯಾಸ ಮಾಡುವಾಗ ಬಳಸಿದ ಬಣ್ಣಗಳನ್ನು ಯಥಾವತ್ ಮುದ್ರಣ ಮಾಡಿ ಅವರನ್ನು ಒಪ್ಪಿಸುವುದು ತುಸು ಕಷ್ಟದ ಕೆಲಸ. ಅಂತಿಮವಾಗಿ ಮುದ್ರಣಕ್ಕೆ ಸಿದ್ಧಮಾಡಲು ಬಣ್ಣಗಳನ್ನು ಆರ್.ಜಿ.ಬಿ.ಯಿಂದ ಸಿ.ಎಂ.ವೈ.ಕೆ. ಗೆ ಅಳವಡಿಸಿ, ಬಿಟ್‍ಮ್ಯಾಪ್ ಮಾಡಿ, ಪ್ಲೇಟ್‍ಮಾಡಿ, ಮುದ್ರಣ ಮಾಡುವಾಗ ಕಂಪ್ಯೂಟರ್ ಪರದೆಯ ಮೇಲೆ ನೋಡಿದ ಬಣ್ಣಕ್ಕಿಂತ ಶೇಕಡ 20 ವ್ಯತ್ಯಾಸ ಬಂದೇ ಬರುತ್ತದೆ. ಕೆಲವು ಬಾರಿ ಪುಟಗಳಲ್ಲಿ ಬಳಸಿದ ಚಿತ್ರಗಳು ಉಲ್ಟಾ ಪಲ್ಟಾ ಆಗಿಬಿಟ್ಟಿರುತ್ತವೆ ಅಥವಾ ಚಿತ್ರದ ಶೀರ್ಷಿಕೆಗಳೇ ಅದಲುಬದಲಾಗಿರುತ್ತವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಮುದ್ರಿಸಬೇಕಾಗುತ್ತದೆ.

ಮುದ್ರಣ ಸಮಯದಲ್ಲಿ ಮಸಿ (Ink) ಪ್ರತಿ ಪುಟದಲ್ಲಿ ಸಮತೋಲನವಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಶೀರ್ಷಿಕೆ ಪುಟ (Title page), ತಾಂತ್ರಿಕ ಪುಟ (Technical page), ಮಧ್ಯೆಮಧ್ಯೆ ಬರುವ ಖಾಲಿ ಪುಟಗಳಲ್ಲಿ, ಅರ್ಪಣೆ ಪುಟಗಳಲ್ಲಿ, ಪೂರ್ಣಪುಟ ಚಿತ್ರಗಳಿದ್ದಾಗ ಪುಟಸಂಖ್ಯೆ ಮತ್ತು ಫೋಲಿಯೊ ತೆಗೆದು ಮುದ್ರಿಸಿದರೆ ಪುಟದ ಅಂದ ಇನ್ನಷ್ಟು ಹೆಚ್ಚುತ್ತದೆ.

ಬೈಂಡಿಂಗ್ ಸಮಯದಲ್ಲಿ ಪುಟಗಳ ನಡುವೆ ದಿಢೀರನೆ ಖಾಲಿ ಪುಟಗಳು, ಮಸಿ ಹತ್ತಿದ ಪುಟಗಳು ಜೋಡಣೆಯಾಗದಂತೆ ಅಥವಾ ಪುಟ ಸಂಖ್ಯೆಗಳು ಹಿಂದುಮುಂದಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಗ್ರಾಹಕರು ಪುಸ್ತಕವನ್ನು ಕೊಂಡು ಆಸಕ್ತಿಯಿಂದ ಓದುವಾಗ ನಡುವೆ ದಿಢೀರನೆ ಅನಾಹುತಗಳು ಕಂಡುಬಂದರೆ ಹಿಂದಿನ ವಿಷಯಕ್ಕೂ ಮುಂದಿನ ವಿಷಯಕ್ಕೂ ಕೊಂಡಿ ಕಳಚಿದಂತಾಗಿ ಮುಂದಿನ ಓದಿನಲ್ಲಿ ನಿರಾಸಕ್ತಿ ಮೂಡಿಬಿಡುತ್ತದೆ. ಬಿಡುವಿಲ್ಲದ ಸಮಯದ ಒತ್ತಡದಲ್ಲಿ ಕೊರಿಯರ್, ಅಂಚೆ, ಟ್ರಾಪಿಕ್‍ನ ಜಂಜಾಟದ ನಡುವೆ ಬಹುದೂರದಿಂದ ತರಿಸಿಕೊಂಡ ಇಷ್ಟದ ಪುಸ್ತಕಗಳಲ್ಲಿ ದೋಷಗಳು ಕಂಡು ಬದಲಾವಣೆ ಮಾಡಲಾಗದೆ ಪರಿತಪಿಸುವಂತಾಗುತ್ತದೆ.

ಕೊನೆ ಹಂತದಲ್ಲಿ ಪುಸ್ತಕವನ್ನು ಕತ್ತರಿಸುವಾಗ ಬರುವ ಜಲ್ಲಿ ಆಸೆಗೆ ಒಳಗಾಗದೆ (ಪುಸ್ತಕ ಕತ್ತರಿಸಿದಾಗ ಬರುವ ತುಂಡು ಕಾಗದವನ್ನು ಮರುಬಳಕೆಗಾಗಿ ಒಂದು ನಿರ್ದಿಷ್ಟ ಬೆಲೆಗೆ ಕೊಂಡುಕೊಳ್ಳುತ್ತಾರೆ.) ನಿಗದಿತ ಅಳತೆಗೆ ತಕ್ಕಂತೆ ಕತ್ತರಿಸಿದರೆ ಒಳಿತು. ತುಸು ಹೆಚ್ಚು ಕಡಿಮೆ ಕತ್ತರಿಸಿದರೆ ಅದರ ಅಂದ ಕೆಡುವುದರ ಜೊತೆಗೆ ಆ ಪುಸ್ತಕವನ್ನು ಬೇರೆ ಪುಸ್ತಕಗಳೊಂದಿಗೆ ಕಪಾಟಿನಲ್ಲಿ ಜೋಡಿಸಿದಾಗ ಅಲ್ಲಿರುವ ಪುಸ್ತಕಗಳೊಂದಿಗೆ ಹೊಂದಿಕೊಳ್ಳದೆ ನೋಡಲು ಚೆನ್ನಾಗಿ ಕಾಣುವುದಿಲ್ಲ.

ಕೆಲವು ಬಾರಿ ಪುಸ್ತಕವೆಲ್ಲ ಸಿದ್ಧವಾಗಿ ಪುಸ್ತಕ ಬಿಡುಗಡೆ ಸಮಯದಲ್ಲಿ ವೇದಿಕೆ ಮೇಲೆ ಪುಸ್ತಕ ಅದಲು ಬದಲು ಆಗುವ ಸಂಭವವಿರುತ್ತದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆ ಪುಸ್ತಕಗಳು ಅದಲುಬದಲಾಗಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದೆವು. ಸಮಯಾವಧಾನದಿಂದ ಹೆಚ್ಚಿನ ಅನಾಹುತವೇನೂ ಆಗದಿದ್ದರೂ ವೇದಿಕೆ ಮೇಲಿನ ಅತಿಥಿಗಳ ಮುಂದೆ ತಲೆತಗ್ಗಿಸುವಂತಾಗಿತ್ತು.

ಹೊರ ಊರಿನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಪುಸ್ತಕಗಳನ್ನು ಪಾರ್ಸಲ್ ಮುಖಾಂತರ ಕಳುಹಿಸಿದಾಗ ನಡುದಾರಿಯಲ್ಲಿ ವಾಹನ ಕೆಟ್ಟು ಪ್ರಮಾದ ಉಂಟಾಗುವ ಸಾಧ್ಯತೆಯೂ ಇದೆ. ಹಂಪಿಯ ಸುಂದರ ಹಾಗೂ ವಿಭಿನ್ನ ಪರಿಸರವನ್ನು ತಮ್ಮ ಕ್ಯಾಮರಾ ಕಣ್ಣಿನಿಂದ ವಿಶ್ವವಿಖ್ಯಾತಗೊಳಿಸಿದ ಶಿವಶಂಕರ್ ಬಣಗಾರ್ ಅವರ ಸ್ನೇಹಿತರ ಪುಸ್ತಕವನ್ನು ಅವರೇ ಕಂಪ್ಯೂಟರ್ ಮುಂದೆ ತಡರಾತ್ರಿವರೆಗೂ ಕೂತು ವಿನ್ಯಾಸವನ್ನು ಅಂತಿಮಗೊಳಿಸಿ “ನಾಳೆ ಮುದ್ರಿಸಿ, ಬಸ್ಸಿನಲ್ಲಿ ಕಳಿಸಿಕೊಡಿ” ಎಂದು ಹೋಗಿದ್ದರು. ಅದರಂತೆ ಮಾರನೇ ದಿನ ಪುಸ್ತಕ ಮುದ್ರಣ ಮಾಡಿ ಹೊಸಪೇಟೆಗೆ ಹೊರಡುವ ಕೊನೆಯ ಬಸ್ಸಿನಲ್ಲಿ ಇಟ್ಟು ಕಳಿಸಿಕೊಟ್ಟಿದ್ದೆವು. ಮಾರನೇ ದಿನ ಬೆಳಗ್ಗೆ ಬಸ್ ನಿಲ್ದಾಣಕ್ಕೆ ಬಸ್ಸು ನಿಗದಿತ ಸಮಯಕ್ಕೆ ಬಾರದೆ ಒತ್ತಡ ನಿರ್ಮಾಣವಾಗಿ ಸಂಬಂಧಪಟ್ಟವರನ್ನು ವಿಚಾರಿಸಿದಾಗ ಮಾರ್ಗ ಮಧ್ಯದಲ್ಲೇ ಬಸ್ಸು ಕೆಟ್ಟುನಿಂತಿರುವ ವಿಷಯ ತಿಳಿದು ಆಘಾತಗೊಂಡಿದ್ದರು.

ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವಿದ್ದುದ್ದರಿಂದ ಒಂದು ಕಾರ್ ಮಾಡಿಕೊಂಡು ಬಸ್ಸು ಕೆಟ್ಟುನಿಂತ ಸ್ಥಳಕ್ಕೆ ಹೋಗಿ ಪುಸ್ತಕಗಳನ್ನು ತೆಗೆದುಕೊಂಡು ಕಾರ್ಯಕ್ರಮದ ವೇದಿಯಲ್ಲಿ ಲೋಕಾರ್ಪಣೆಗೊಳಿಸಿದಾಗ ಮಧ್ಯಾಹ್ನ 12.30 ಆಗಿತ್ತು. ಹೀಗೆ ಕಾರ್ಯಕ್ರಮ ಆಯೋಜಕರು ಆತಂಕಕ್ಕೊಳಗಾಗಿ ಅತಿಥಿಗಳ ಮುಂದೆ ಮುಜುಗರ ಪಡುವಂತಾಗಿತ್ತು.    

ಇತ್ತೀಚಿನ ದಿನಗಳಲ್ಲಿ ಮುದ್ರಣ ಕ್ಷೇತ್ರದ ಎಲ್ಲಾ ವಿಭಾಗಗಳಿಗೂ ಗಣಕೀಕೃತ ಯಂತ್ರಗಳು ಪ್ರವೇಶಿಸಿ ಕೆಲಸಗಾರರ ಸಂಖ್ಯೆಯನ್ನು ತಗ್ಗಿಸಿ, ಬಹುಪಾಲು ಯಂತ್ರಗಳೇ ಕಾರ್ಯನಿರ್ವಹಿಸುವಂತಾಗಿ, ಮನುಷ್ಯರಿಂದ ಆಗುತ್ತಿದ್ದ ತಪ್ಪುಗಳು ಬಹುತೇಕ ಕಡಿಮೆಯಾಗುತ್ತಿವೆ.

ಲೇಖನ, ಚಿತ್ರ ವಿನ್ಯಾಸ ಇವು ಮಾತ್ರ ಚೆನ್ನಾಗಿದ್ದರೆ ಸಾಲದು, ಉತ್ತಮ ಕಾಗದ ಮತ್ತು ಉತ್ತಮ ಮುದ್ರಣ ಇದ್ದರೆ ಮಾತ್ರ ಫಲಿತಾಂಶವೂ ಅದ್ಭುತವಾಗಿರುತ್ತದೆ. ಮುದ್ರಣದ ಬಗ್ಗೆ ತಿಳಿವಳಿಕೆ ಇರುವ ಪ್ರತಿಭಾವಂತ ವಿನ್ಯಾಸಕಾರ ಮತ್ತು ಮುದ್ರಕ ಒಟ್ಟಿಗೆ ಸೇರಿದರೆ ಒಂದು ಪುಸ್ತಕವನ್ನು ಅದ್ಭುತವಾಗಿ ಮುದ್ರಿಸುವುದಕ್ಕೆ ತುಂಬಾ ಹೆಚ್ಚಿನ ಹಣದ ಅಗತ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿ ತೋರಿಸಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

November 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: