ಸಿಹಿ-ಕಹಿ ಅನುಭವಗಳ ಉಯ್ಯಾಲೆಯಲ್ಲಿ

ಬಂಕಾಪುರಕ್ಕೆ ಬಂದು ಹತ್ತ-ಹತ್ರ ಐದು ವರ್ಷಗಳ ಮೇಲಾಗಿತ್ತು. ಈಗ ನಾವೂ ಆ ವಾತಾವರಣಕ್ಕೆ ಹೊಂದಿಕೊಂಡಾಗಿತ್ತು. ಅಲ್ಲಿಯ ಜನರ  ಜೀವನ ಶೈಲಿ ತುಂಬಾ ಸರಳ. ಏನು ಬೇಕಾದರೂ ಅಳುಕಿಲ್ಲದೇ, ಯಾವ ಭಿಡೆ ಇಲ್ದೇ ಕೇಳೋ ಜನ. ಹಾಗೇ ತಮ್ಮದನ್ನೂ ಹೇಳೋ ಜನ. ತಿಳಿಯದೇ ಬರುವ ಪ್ರಸಂಗಗಳಲ್ಲಿ ಕಣ್ಣೀರು ಸುರಿಸಿದ್ದೂ ಇದೆ. ಹಾಗೇ ಅವನ್ನು ಮರೆಸಿ ನಗು ಉಕ್ಕಿಸುವ ಪ್ರಸಂಗಗಳಿಗೂ ಬರ ಇರಲಿಲ್ಲ.

ಅದೊಂದು ಥರದ ಜೋಕಾಲಿಯಾಟವೇ ಸರಿ. ಇಲ್ಲಿಂದ ವರ್ಗವಾದರೆ ಇವರನ್ನೆಲ್ಲ ಬಿಟ್ಟು ಹೋಗುವುದ್ಹೇಗೆ ಎಂಬುದೊಂದು ಯಕ್ಷಪ್ರಶ್ನೆ ಆಗಿತ್ತು ನಂಗೆ. ಸಂಧ್ಯಾ (I CDS MO ಅವರ ಪತ್ನಿ) ಅವರ ಮೈದುನ ಅಲ್ಲಿಗೆ ಬಂದಾಗ ಒಮ್ಮೆ ಹೇಳಿದ ಮಾತು ನೆನಪಿಗೆ ಬಂತು ಈಗ- “ವೈನೀ ಬಂಕಾಪುರದಲ್ಲಿಯೇ ಇಷ್ಟು ವರ್ಷಗಳವರೆಗೆ ಇದ್ದೀರಿ ಅಂದ್ರ ಜಗತ್ತಿನ ಯಾವದs ಮೂಲೀಗೆ ಹೋದ್ರೂ ಅಗದೀ‌ ಆರಾಮ ಟಿಕಾಸ್ತೀರಿ (ಅಂದರೆ ಹೊಂದಿಕೊಂಡು ಹೋಗಬಲ್ರಿ) ನೀವು ಮತ್ತ ನಮ್ಮ ಸಂಧ್ಯಾ ವೈನಿ” ಅಂತ ಹೇಳಿದ್ರು. ಅಂಥ ಊರನ್ನೇ, ನನ್ನವರೇ ಎಂಬಂತಿದ್ದ ಆ ಜನರನ್ನು ಬಿಟ್ಟು ಹೋಗುವದ್ಹೇಗೆ ಎಂಬ ಹಂತಕ್ಕೆ ಮುಟ್ಟಿದ್ದೆ ನಾನು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಊರಿನಿಂದ ಒಂಚೂರು ದೂರಾನೇ ಇದ್ದದ್ದಕ್ಕೋ ನಮ್ಮ ಲೋಕದಲ್ಲೇ ನಾವು ಮುಳುಗಿ ಹೋಗಿದ್ದಕ್ಕೋ ನಮಗೆ ಊರಿನ ಸಂಪರ್ಕ ಅಷ್ಟಾಗಿ ಬರುತ್ತಿರಲಿಲ್ಲ. ಬರೀ ಅಲ್ಲಿಗೆ ಬರುವ ರೋಗಿಗಳದ್ದಷ್ಟೇ ನಮಗೆ ಗೊತ್ತು. ನಮ್ಮ ಆಸ್ಪತ್ರೆ ಆವರಣವೇ ನಮಗೆ ಬೇಕಾದಷ್ಟಾಗುತ್ತಿತ್ತು. ಒಂದು ಪುಟ್ಟ ಊರೇ ಸೃಷ್ಟಿಯಾಗಿತ್ತು ಅಲ್ಲಿ.

ಇಂದೊಬ್ಬರ ಮನೆಯಲ್ಲಿ ಹುಟ್ಟಿದ ಹಬ್ಬ, ನಾಳೆ ಒಬ್ಬರ ಮನೇಲಿ ಮದುವೆ, ಸತ್ಯನಾರಾಯಣ ಪೂಜೆ, ಮತ್ತೆ ನಾಮಕರಣ ಒಬ್ಬರಲ್ಲಿ – ಹೀಗೇ ನಡೆದಿತ್ತು ಜೀವನ. ಸಂಧ್ಯಾಗೆ ಎರಡನೇ ಮಗು ಹುಟ್ಟಿದ್ದು ಅಲ್ಲಿಯೇ. ಅವನಿಗೆ ಹೆಸರಿಡುವ ಸೋದರತ್ತೆ ನಾನೇ. ನಾವು ಬಂಕಾಪುರಕ್ಕೆ ಹೋದಾಗ ನನ್ನ ಚಿಕ್ಕ ಮಗ 6 ತಿಂಗಳ ಕೂಸು. ಆಗ  ಲೇಡಿ ಡಾಕ್ಟರ್ ಏಳು ತಿಂಗಳ ಗರ್ಭಿಣಿ – ಮೂರನೇ ಮಗುವಿನ ದಾರಿ ಕಾಯ್ತಿದ್ರು ಆಕೆ. ಅವರ ಮಗಳು ನನ್ನ ದೊಡ್ಡ ಮಗನ ವಯಸ್ಸೇ. ಅವಳು ಬಂದು ದಿನಾಲೂ ಮಗುವನ್ನು ಎತ್ತಿಕೊಂಡು ಆಡಿಸುವುದು ನಡೆದೇ ಇರ್ತಿತ್ತು.

ಆಕೆ ಮನೆಗೆ ಹೋಗಿ, ‘ಅಮ್ಮಾ, ನೀನೂ ಆಂಟೀ ಪಾಪೂನ ಹತ್ರ ವಾಸನೆ ಬರತದಲಾ ಅಂಥಾ ವಾಸನೆ ಇರೋ ಪಾಪೂನ್ನೇ ತಗೊಂಡು ಬಾ’ ಅಂತ ತಮ್ಮಮ್ಮನ  ಹತ್ರ ಹೇಳೋಳಂತೆ. ಒಂದಿನ ಲೇಡಿ ಡಾಕ್ಟರ್ ಬಂದು “ವೈನೀ ಎಲ್ರೀ ನಿಮ್ಮ ಪಾಪು? ನಾ ಎಂಥಾ ವಾಸನೆ ಅವನ ಹತ್ರ ಬರ್ತದೋ ನೋಡಬೇಕು” ಅಂದ್ರು. ‘ಯಾಕ್ರೀ ಏನಾಯ್ತು” ಅಂದೆ. ಅದಕ್ಕೆ ಆಕೆ ನಗುತ್ತಾ ತಮ್ಮ ಮಗಳು ಹೇಳಿದ್ದನ್ನು ಹೇಳಿದಾಗ ನಕ್ಕಿದ್ದೇ ನಕ್ಕಿದ್ದು. 

ನಾನು ಪಾಪುನ ಸ್ನಾನ ಮುಗಿಸಿ ನೆತ್ತಿಗೆ ಬಜೆಬೇರಿನ ಪುಡಿ ಒತ್ತಿ, ಲೋಬಾನ (ಸಾಂಬ್ರಾಣಿ) ಹೊಗೆಹಾಕಿ ಕಾಯಿಸ್ತಿದ್ದೆ. ಅದು ಒಂಥರಾ ಮೋಹಕ ಸುವಾಸನೆ ಪಾಪುನ ಸುತ್ತ. ಇದನ್ನೆಲ್ಲಾ ಈಗ ನೆನಪಿಸಿಕೊಂಡರೆ ಅದೇ ಥರದ ಮೋಹಕ ಆಹ್ಲಾದ ಮನತುಂಬ.

ಯಾವುದೇ ಹಬ್ಬ – ಹುಣ್ಣಿಮೆ ಬಂದ್ರೂ ಆಚರಣೆ ಒಟ್ಟಿಗೇನೇ. ಒಬ್ಬ ಮುಸ್ಲಿಂ ಸಿಸ್ಟರ್, ಇಬ್ಬರು ಕ್ರಿಶ್ಚಿಯನ್ ಸಿಸ್ಟರ್ಸ್ ಇದ್ರು ಆ ಕ್ಯಾಂಪಸ್ ನಲ್ಲಿ. ವರಮಹಾಲಕ್ಷ್ಮಿ ಹಬ್ಬದ ದಿನ, ಸಂಕ್ರಮಣದ ಭೋಗಿ ಹಬ್ಬದ ದಿನ, ಹೀಗೇ ಯಾವುದೇ ಸಮಾರಂಭಕ್ಕೆ ಕರೆದಾಗ ಬಂದು ಎಷ್ಟೂ ಹಿಂಜರಿಕೆ, ಅನುಮಾನ ಇಲ್ಲದೇ ವ್ಯವಸ್ಥಿತವಾಗಿ ಅರಿಶಿನ ಕುಂಕುಮ ಇಟ್ಟುಕೊಂಡು, ಹೂ ಮುಡಕೊಂಡು, ಉಡಿ ತುಂಬಿಸಿಕೊಂಡು ಹೋಗ್ತಿದ್ರು. ನಾವೂ ಎಲ್ಲಾ ಅಷ್ಟೇ- ಯಾವುದೇ ಏಚು ಪೇಚಿಲ್ಲದೇ, ಛಲ್ಲಾ ಸಿಸ್ಟರ್ ಕ್ರಿಸ್ಮಸ್, ಹೊಸಮನಿ ಸಿಸ್ಟರ್ ಈದ್ ಆಚರಣೆಯಲ್ಲಿ ಭಾಗವಹಿಸುತ್ತಿದ್ವಿ.

ಮಕ್ಕಳಿಗಂತೂ ವರ್ಷದ ಪ್ರತಿ ದಿನವೂ ಹಬ್ಬಾನೇ. ಕ್ರಿಸ್ಮಸ್ ಹಬ್ಬಕ್ಕೆ ಛಲ್ಲಾ ಸಿಸ್ಟರ್ ನಮಗೆ ರುಚಿಕರವಾದ ಎಗ್ ಲೆಸ್ ಕೇಕ್ ಮಾಡಿ ತಿನಿಸೋರು ತಮ್ಮ ಪ್ರೀತಿ ಬೆರೆಸಿ. ಹೊಸಮನಿ ಸಿಸ್ಟರ್ ಮಾಡೋ ಆ ಸುರಕುರಮಾ ಮರೆಯಲುಂಟೇ? ಮೊದ ಮೊದಲು ನಂಗೆ ಅದರಲ್ಲಿ ಏನಿರುತ್ತೋ ಅನ್ನಿಸೋದು. ಕೇಳೋದು ಹೇಗೆ? ಆದರೆ ಅದನ್ನರಿತಂತೆ ಹೊಸಮನಿ ಸಿಸ್ಟರ್ ನಕ್ಕು, ‘ಏನಿಲ್ಲ ವೈನೀ, ನಿಮ್ಮ ಶ್ಯಾವಿಗೆ ಖೀರ್ ಇರತದಲಾ ಹಂಗರೀ ಇದು ‌’ಅಂತ ಹೇಳೋರು.

ಈದ್ ದಿನ ಊರಿನ ಹೆಚ್ಚು ಕಡಿಮೆ ಪ್ರತೀ ಮುಸ್ಲಿಂ ಮನೆಯಿಂದ ಸುರಕುರಮಾ ಬರೋದು ನಮ್ಮನೆಗೆ. ಒಂದು ದೊಡ್ಡ ಪಾತ್ರೆಯಲ್ಲಿ ಅದನ್ನೆಲ್ಲ ಹಾಕಿ, ಆ ಪಾತ್ರೆ ತುಂಬ ಇದ್ದ ಸುರಕುರಮಾ ಆ ಮೇಲೆ ಎಲ್ಲರ ಮನೆಗೂ ಹಂಚೋದು ದೊಡ್ಡ ಕೆಲಸ ನಂಗೆ. ನಮ್ಮನೇಲಿ ಅಷ್ಟೆಲ್ಲಾ ತಿನ್ನೋರು ಯಾರು?

ನಮ್ಮಲ್ಲಿ ಸಂಕ್ರಮಣದ ಭೋಗಿ ಹಬ್ಬದ ದಿನ, ಒಬ್ಬ ಮುತ್ತೈದೆಗೆ ಮೊರದ ಬಾಗಿನದೊಂದಿಗೆ ಭೋಗಿ ಊಟದ ದಿನಸಿ ವಸ್ತುಗಳು, ತರಕಾರಿ ಬೆಣ್ಣೆ, ತುಪ್ಪ ಎಲ್ಲಾ ಕೊಡೋ ಪದ್ಧತಿ ಉಂಟು. ಅದರೊಂದಿಗೆ ಆ ಮುತ್ತೈದೆಗೆ ಉಡಿ ತುಂಬಬೇಕು. ಅದಕ್ಕೆ ನಾ ಎಂದೂ ಯಾವ ಬ್ರಾಹ್ಮಣ ಮುತ್ತೈದೆಯನ್ನು ಹುಡುಕಿಕೊಂಡು ಹೋಗಲಿಲ್ಲ. ಸೀತವ್ವನೇ  ನನಗೆ ಆ ಮುತ್ತೈದೆ. ಅವಳಿಗೇ ಮೊರದ ಬಾಗಿನ ಕೊಟ್ಟು, ಉಡಿ ತುಂಬಿ, ಹೊಟ್ಟೆ ತುಂಬ ಭೋಗಿ ಹಬ್ಬದ ಸೆಜ್ಜೆರೊಟ್ಟಿ, ಬದನೇಕಾಯಿ ಎಣ್ಣೆಗಾಯಿ ಪಲ್ಯ, ಹುಗ್ಗಿ-ಗೊಜ್ಜು (ಅಕ್ಕಿ- ಹೆಸರು ಬೇಳೆಯ ಖಾರದ ಪೊಂಗಲ್ ಗೆ ಹುಗ್ಗಿ ಅಂತಾರೆ ನಮ್ಮ ಅಂದರೆ ಉತ್ತರ ಕರ್ನಾಟಕದ ಕಡೆ), ಪಾಯಸ ಬಡಿಸಿ, ಅವಳ ಊಟ ಆದ ಮೇಲೆನೇ ನಾನು ಊಟ ಮಾಡೋದು. ಅದು ನನಗೆ ಅದಮ್ಯ ತೃಪ್ತಿ ಕೊಡೋದು.

ಹೊಟ್ಟೆ ತುಂಬಿದವರಿಗೇ ತಿನ್ನಿಸುವುದರಲ್ಲಿ ಯಾವ ಪುರುಷಾರ್ಥ ಇದೆ ಎಂಬ ಪ್ರಶ್ನೆ ನಂದು. ಯಾರೇನಂದ್ರೂ ಕ್ಯಾರೇ ಅಂದವಳಲ್ಲ ನಾ. ಈ ಎಲ್ಲ ಅನುಭವಗಳು ನನ್ನಲ್ಲಿ ಒಂದು ವಿಶಿಷ್ಟ ವಿಚಾರಧಾರೆಯನ್ನು ಹುಟ್ಟು ಹಾಕಿದವೋ ಏನೋ ಅನಕೋತೀನಿ ನಾನು. ನೆನೆದಷ್ಟೂ ಮುದ ನೀಡುವ, ಹಿತದ ಅಲೆ ಎಬ್ಬಿಸುವ ಅನರ್ಘ್ಯ ರತ್ನದಂಥ ಅಮೂಲ್ಯ ದಿನ ಗಳು ಅವು ನಂಗೆ. ಈಗಲೂ ಮನ ಹಂಬಲಿಸ್ತದೆ ಆ ದಿನಗಳಿಗಾಗಿ, ಎಲ್ಲಿ ಅವು ಅಂತ ಹುಡುಕುತ್ತಾ! 

ಒಂದೊಂದೂ  ಘಟನೆಗಳನ್ನು ಹೆಕ್ಕಿ ಹೆಕ್ಕಿ ಹಿಂಜಿದಷ್ಟೂ, ಅದರಲ್ಲಿ ಮುಳುಗಿ ಹೋಗ್ತೀನಿ ನಾ. ಇವನು ಅಟೆಂಡರ್ ಮಗ, ಇವಳು ಕಾಂಪೊಂಡರ್ ಮಗಳು, ಅವಳು ಸಿಸ್ಟರ್ ಮಗಳು, ಇವನು ಡಾಕ್ಟರ್ ಮಗ ಎಂಬ ಭೇದವೇ ಇಲ್ಲದೇ, ಅಂತಸ್ತಿನ ಗೋಜಲಿನಿಂದ ದೂರ ಇದ್ದು ಆ ಮಕ್ಕಳೆಲ್ಲ ಕ್ಯಾಂಪಸ್ ತುಂಬ ಓಡಾಡುವ, ಗಲಾಟೆ ಮಾಡುತ್ತಾ ಆಡುವ ನೋಟ ಕಣ್ಣಿಗೆ ಹಬ್ಬ, ಮನಕೆ ತಂಪು.

ತಮ್ಮ ತಮ್ಮ ಮನೆಗಳಿಂದ ತಂದ ಊಟಾನೇ, ನಮ್ಮ ಅಂಗಳ ತುಂಬ ಕೂತು ಹಂಚಿ ಊಟ ಮಾಡೋದನ್ನು ಕಂಡಾಗ ಅದೆಂಥದೋ ಹೇಳಲಾಗದ ಸಂತೃಪ್ತಿ, ಸಮಾಧಾನ ನಂಗೆ. ಹಾಗೇ ನಾವು ದೊಡ್ಡವರೂ ಎಲ್ಲ ಒಟ್ಟಿಗೇ ಸೇರಿ ನಮ್ಮ ಮನೆ ಅಂಗಳದಲ್ಲಿ ಊಟ ಮಾಡುತ್ತಿದ್ದದ್ದೂ ಇತ್ತು. ಊಟ ನಮ್ಮ ನಮ್ಮ ಮನೆಯಿಂದಲೇ ತಂದಿದ್ದಾದರೂ ಒಟ್ಟಿಗೇ ಉಣ್ಣುವ ಆ ಮಜವೇ ಬೇರೆ. ಹೇಗೆ ಮರೆತೇನು ನಾ‌ ಅದನ್ನೆಲ್ಲ?

ನಾ ಅಲ್ಲಿಯವರೆಗೂ ಒಂದೇ ಒಂದು ಬಾರಿಯೂ ಟೀ-ಕಾಫಿ ಕುಡಿದದ್ದಿಲ್ಲ. ಆದರೆ ಸಂಧ್ಯಾ (ICDSMO ಅವರ ಪತ್ನಿ) ನನ್ನ ಒಳ್ಳೇ ಸ್ನೇಹಿತೆ- ನನ್ನ ಸ್ನಾನ ಆಗುವ ದಾರೀನೇ ಕಾಯ್ತಾ ಕುಳಿತಿರೋರು. ನನ್ನ ಪತಿ ಬೆಳಗ್ಗೆ ಎಂಟು ಗಂಟೆಗೆಲ್ಲಾ  ಹೊರಟು ಬಿಡ್ತಿದ್ರು ಆಸ್ಪತ್ರೆಗೆ. ಮಕ್ಕಳು ಒಂಬತ್ತು ಗಂಟೆಗೆ ಸ್ಕೂಲ್ ಗೆ. ಆ ಮೇಲೆ ನಾ ಒಂಬತ್ತೂವರೆಗೆ  ಸಂಧ್ಯಾ ಅವರ ಮನೆಗೆ ಹೋಗಿ ಅರ್ಧ ಕಪ್ ಕಾಫಿ ಕುಡಿದು ಅವರ ಜೊತೆ ಮಾತಾಡಿಕೊಂಡು ಬರೋ ರೂಢಿ. ಆ ಮೇಲೆ ಸಂಧ್ಯಾ ಸಂಜೆ ಐದೂವರೆಗೆ ನನ್ನ ಕಡೆ ಬರೋರು. ಮಕ್ಕಳ ಆಟ, ನಮ್ಮ ಹರಟೆ, ಹಾಡು ಇತ್ಯಾದಿ ನಡೀತೀತ್ತು. ತಮ್ಮ ಆಸ್ಪತ್ರೆ ಕೆಲಸ ಮುಗಿಸಿ ಟೈಂ ಸಿಕ್ಕಿದ್ರೆ ಲೇಡಿ ಡಾಕ್ಟರ್ ನಮ್ಮ ಜೊತೆಗೂಡ್ತಿದ್ರು.

ಸಿಹಿ ಅನುಭವಗಳ ಮಧ್ಯೆ ಆಗಾಗ ಕಹಿ ಅನುಭವ, ಘಟನೆಗಳಾದರೂ ಸಿಹಿಯನ್ನು ಕಹಿ ಮಾಡುವ ಶಕ್ತಿ ಅವುಗಳಿಗಿರಲಿಲ್ಲ. ಸುರೇಶ ಬೆಳಗ್ಗೆ ತಿಂಡಿನೂ ತಿನ್ನದೇ ಹೊರಟು ಬಿಡ್ತಿದ್ರು ಒಂದೊಂದು ಬಾರಿ. ಆಗ ನನಗೂ ಏಕಾದಶಿನೇ ಗತಿ. ಸಂಧ್ಯಾನ ಕಾಫೀನೇ ಆಧಾರ ಆಗ. ಆ ಮೇಲೆ ಮಧ್ಯಾಹ್ನ ಮೂರೂವರೆ, ನಾಲ್ಕು ಗಂಟೆಗೆ ಬರೋದು, ಮತ್ತೆ ಆಗಲೂ ಅಷ್ಟೊತ್ನಲ್ಲಿ ಜೊತೆಗೆ ಯಾರಾದರೂ ಊಟಕ್ಕೆ! ಆಗಂತೂ ನನಗೆ ಅಳುವೇ ಬಂದು ಬಿಡ್ತಿತ್ತು. ಏನೂ ಮಾಡೋ ಹಾಗಿರಲಿಲ್ಲ. ಅವರದೆಲ್ಲ ಊಟ ಆದ ಮೇಲೆ ಅಷ್ಟೊತ್ತಿಗೆ ಊಟ ಬೇಡ ಅನ್ನಿಸಿ ಬಿಡೋದು, ಹೊಟ್ಟೆ ಭಾರ ಭಾರ, ಮನಸ್ಸಿನ ಜೊತೆಗೆ! 

ಇನ್ನೊಂದು ನನಗೆ ಅತೀ ನೋವುಂಟು ಮಾಡಿದ ಸಂಗತಿ, ಘಟನೆ ಹೇಳದಿದ್ದರೆ ಈ ಸರಣಿ ಅಪೂರ್ಣ ಖಂಡಿತವಾಗಲೂ! ಅದು ನೆನಪಾದ್ರೆ ಇಂದಿಗೂ ನನ್ನ ಕಣ್ಣನ್ನು ತಡೀಲಾರೆ ನಾ ಅದು ತುಂಬದಂತೆ. ಹೊಟ್ಟೆಯಲ್ಲಿ ತಳಮಳ, ಮನದ ತುಂಬ ವಿಚಿತ್ರ ನೋವು. ಬಂಕಾಪುರದಲ್ಲಿ ಬಾಳೇಹಣ್ಣು ಸಿಗ್ತಿತ್ತು ಯಾವಾಗಲೂ. ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾವಿನ ಹಣ್ಣು ಭರಪೂರ. ಅಪರೂಪ ರುಚಿ ಆ ಹಣ್ಣುಗಳಿಗೆ. ಅಂಥ ಮಾವಿನ ಹಣ್ಣೇ ತಿಂದಿಲ್ಲ ನಾ ಇಂದಿನ ವರೆಗೂ.

ಮೂಸಂಬಿ ಸಿಗ್ತಿತ್ತು ಕೆಲವೊಮ್ಮೆ. ಆದರೆ ಸೇಬು, ಕಿತ್ತಲೆ, ಚಿಕ್ಕು, ದ್ರಾಕ್ಷಿ ಇದೆಲ್ಲಾ ಕೊಂಚ ಸಿಗದ ವಸ್ತುಗಳೇ. ಹುಬ್ಬಳ್ಳಿಯಿಂದಲೇ ತರಬೇಕಾಗ್ತಿತ್ತು ನಾವು ಹೋದಾಗ; ಅಥವಾ ಇನ್ನಾರಾದ್ರೂ ಹೋದಾಗ ತರಿಸಿಕೋ ಬೇಕು. ಆ ದಿನ ನನ್ನ ಮಗಳಿಗೆ ಜ್ವರ. ಮುಸಂಬಿ ಸಿಗಲಿಲ್ಲ. ಸೇಬಿನದಂತೂ ಪ್ರಶ್ನೆಯೇ ಇರಲಿಲ್ಲ. ಗಂಜಿ ಬೇಡಾ ಅಂತಾ ಅವಳ ಹಟ. ಒಮ್ಮೆ ಹಾಲು ಕುಡಿದ ಮಗು ಇನ್ನೇನೂ ಬೇಡ ಅಂತ ಒಂದೇ ಹಟ. ಅವಳಿಗೆ ಸೇಬು ಬೇಕಾಗಿತ್ತು! ಹಾಗೇ ಮಲಗಿ ಬಿಡ್ತು ಕಂದಮ್ಮ! ಎಷ್ಟೆಷ್ಟೋ ಪ್ರಯತ್ನಿಸಿ ಕೊಂಚ ನಿಂಬೇಹಣ್ಣಿನ ಪಾನಕ ಕುಡಿಸಿದ್ದಾಯ್ತು. ಮುಖ ಬಾಡಿಸಿಕೊಂಡು, ಬಳಲಿ ಮಲಗಿದ ಮಗುವನ್ನು ನೋಡಿ ನನಗೆ ನಿಲ್ಲದ  ಅಳು. ರಾತ್ರಿ ಬಲು ದೀರ್ಘ ಅನ್ನಿಸ್ತಿತ್ತು. ಕೊನೆಗೊಮ್ಮೆ ಬೆಳಕು ಹರೀತು. ಬೆಳಗ್ಗೆ ಒಬ್ಬರನ್ನು ಹಾವೇರಿಗೆ ಕಳಿಸಿ ಸೇಬು, ಮೂಸಂಬಿ ತರಿಸಿದ್ದಾಯ್ತು. ಆದರೆ ಇಂದಿಗೂ, ವರುಷಗಳೇ ಉರುಳಿದ್ದರೂ ಅವ್ಯಕ್ತ ಸಂಕಟ ಉಂಟು ಮಾಡುವ ನೋವದು. 

ಬಂಕಾಪುರದ ಸೀಗೀಹುಣ್ಣಿಮೆ ಸಂಭ್ರಮ ಮರೀಲಾರದ್ದು ನನಗೆ. ಅಲ್ಲಿನ ಒಂದು ಕುಟುಂಬದವರು ಸೀಗೀಹುಣ್ಣಿಮೆ ಊಟಕ್ಕೆ ತಮ್ಮ ಹೊಲಕ್ಕೆ ಕರೆದೊಯ್ಯತಿದ್ರು ನಮ್ಮನ್ನು. ಆ ಮಂದ ಚಳಿಗಾಳಿ, ಹೊಲದ ಬಯಲು ಹವೆ, ತುಂಬಿ ನಿಂದ ಹಚ್ಚನೇ ಹಸಿರು ಪೈರು, ಹಿತವಾದ ಮಣ್ಣಿನ ವಾಸನೆಯ ಮಧುಮಯ ವಾತಾವರಣದಲ್ಲಿ ನಾನಾ ಬಗೆಯ ಭಕ್ಷ್ಯಗಳು! ಭೂತಾಯಿಯ ಬಯಕೆ ಊಟವೋ, ಸೀಮಂತವೋ ಎಂಬ ಭ್ರಮೆ ಹುಟ್ಟಿಸುವಂಥ ಹಸಿರು ಸೀರೆಯುಟ್ಟ ಮೈದುಂಬಿ ನಿಂದ ಧರಣಿ! ಆ ನೋಟವೇ ಹೊಟ್ಟೆ ತುಂಬಿಸಿ ಹಸಿವನ್ನು ಹಿಂಗಿಸಿ ಬಿಟ್ಟಾಗ ಯಾವುದೂ ಬೇಡ ಅನ್ನಿಸೋದು.

ಆದರೆ ಅವರ ಪ್ರೀತಿಯ ಉಪಚಾರ, ಆತ್ಮೀಯತೆ ತುಂಬಿದ ಮಾತುಗಳ ಮುಂದೆ ಏನೂ ಹೇಳಲಾಗ್ತಿರಲಿಲ್ಲ. ಆ ರುಚಿ ಕಟ್ಟಾದ ಊಟ ಅವರ ಮಮತೆ ಬೆರೆತು ಇನ್ನೂ ಸವಿಯಾಗಿ ಒಂದು ತುತ್ತು ಜಾಸ್ತೀನೇ ತಿನ್ನೋ ಹಾಗೆ ಮಾಡ್ತಿತ್ತು ಅನಸ್ತದೆ ನಂಗೆ. ಹಳ್ಳಿ ಜನ ಆತಿಥ್ಯ ಪ್ರಿಯರು. ಆ ಆತ್ಮೀಯತೆ ತುಂಬಿದ ಮಮತಾಮಯ ಪರಿಸರ ನಮ್ಮನ್ನು ಅಂತಹ ಕುಗ್ರಾಮದಲ್ಲೂ ಹತ್ರ ಹತ್ರ ಏಳು ವರ್ಷ ಇದ್ದದ್ದನ್ನು ಏಳು ಗಳಿಗೆ ಎನ್ನುವಂತೆ ಮಾಡಿತು ಅನ್ನುವಲ್ಲಿ ಎಳ್ಳಷ್ಟೂ ತಪ್ಪಿಲ್ಲ ಅನಕೋತೀನಿ ನಾನು. 

ಕೊನೆಗೂ ಆ  ದಿನ ಬಂದೇ ಬಂತು. ನಮಗೆ ಅಲ್ಲಿಂದ ತಿಳವಳ್ಳಿಗೆ ಟ್ರಾನ್ಸ್ಫರ್ ಆಯ್ತು. ಅದು ಹಾನಗಲ್ ತಾಲೂಕಿನ ಒಂದು ಗ್ರಾಮ. ಮಲೆನಾಡಿನೂರು ಅದು. ಆ ಊರನ್ನು ನೋಡಿಕೊಂಡು ಬರ್ತೀವಿ ಅಂತ ನನ್ನ ಪತಿ ಹಾಗೂ ICDS MO ಇಬ್ಬರೂ ಹೋದ್ರು. ಅವರು ಇಬ್ಬರೂ ತಿರುಗಿ ಬಂದಾಗ ಮುಂಜಾವಿನ ನಾಲ್ಕು ಗಂಟೆ!! ಬಂಕಾಪುರಕ್ಕಿಂತಲೂ ಅಧ್ವಾನ್ನ ಅದು! ರಾತ್ರಿ ಎಂಟು ಗಂಟೆಯ ನಂತರ ಯಾವ ಬಸ್ಸೂ ಇಲ್ಲ! ಅಂದರೆ ಅಲ್ಲಿಂದ ಹೊರ ಹೋಗಲು ದಾರಿಯೇ ಇಲ್ಲ! ಅದ್ಹೇಗೋ ಏನೋ ಲೇಟಾಗಿ ಬಂದ ಒಂದು ಬಸ್ಸು ಹಿಡಿದು ಅಲ್ಲಿಂದ ಹೊರ ಬಂದು, ಲಾರಿ ಹಿಡಿದು ಎಲ್ಲೆಲ್ಲಿಗೋ ಹೋಗಿ ಬಂಕಾಪುರ ಬಂದು ಮುಟ್ಟೋಷ್ಪ್ರಲ್ಲಿ ಇಷ್ಟು ವೇಳೆ ಆಗಿತ್ತು.

ಹೈವೇದಿಂದ ಆ ರಾತ್ರಿಯಲ್ಲಿ ಮೂರು ಕಿಮೀ. ನಡ್ಕೊಂಡು ಬಂದಿದ್ರು. ಅಲ್ಲಿ ತಿಳವಳ್ಳಿಯಲ್ಲಿ ಕ್ವಾರ್ಟರ್ಸ್ ಇರಲಿಲ್ಲ! ಬಾಡಿಗೆ ಮನೆಯಲ್ಲಿಯೇ ಇರಬೇಕು. ಕರೆಂಟ್ ಪರಿಸ್ಥಿತಿ ಅಂತೂ ಗೋವಿಂದ! ಆ ಹೊತ್ತಲ್ಲಿ ನನ್ನ ಪತಿ ಹೇಳಿದ್ದನ್ನೆಲ್ಲಾ ಕೇಳಿ ನನ್ನ ಮನದಲ್ಲಿ ಒಂದು ಚಿತ್ರ ಮೂಡಿತು ತನ್ನಿಂತಾನೇ, ನನಗೇ ಗೊತ್ತಿಲ್ಲದಂತೆ- ಒಂದು ಚಿಕ್ಕ ಹೆಂಚಿನ ಮನೆ, ಅದರ ಮಧ್ಯೆ ತೂಗು ಹಾಕಿದ ಒಂದು ಲಾಟೀನು! ಆ ಹೆಂಚುಗಳ ಸಂದೀಲಿ ಓಡಾಡೋ ಇಲಿಗಳು!! ಸಣ್ಣಗೆ ಮೈ ನಡುಗಿ, ಒಂದೂ ಮಾತಾಡದೆ ತಿರುಗಿ ಮಲಗಿದೆ ಬಾರದ ನಿದ್ದೆಗೆ ಕಾಯುತ್ತಾ, ತಿಳವಳ್ಳಿಯಲ್ಲಿಯ ನಮ್ಮ ಜೀವನ, ಅಲ್ಲಿ ಕಳೆಯಲಿರುವ ದಿನಗಳ ಬಗ್ಗೆ ಯೋಚಿಸುತ್ತ!  

ಬಂಕಾಪುರದ ಜನ ನಮ್ಮನ್ನು ಬಿಡಲು ತಯಾರಿಲ್ಲ! ನಮಗೆ ಹೊರಡದೆ ವಿಧಿಯಿಲ್ಲ! ಬಿಡಲಾರದೇ ಬಂಕಾಪುರ ಬಿಟ್ಟು, ಕಾಣದ, ಅರಿಯದ ತಿಳವಳ್ಳಿಯತ್ತ ಸಾಗಿತು, ಸಾಗಿತು ನಮ್ಮ ಪಯಣ!!

‍ಲೇಖಕರು Avadhi

November 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Vasanti Prabhakar Naik

    ವೈದ್ಯ ಪತ್ನಿ ಸರೋಜಿನಿ ಪಡಸಲಗಿಯವರ ನೆನಪಿನ ಸರಣಿ ಬರಹ ಗಳು ಬಹಳ ಚೆನ್ನಾಗಿ ವೆ ಅವರ ನೆನಪಿನ ಬುತ್ತಿ ಸ್ವಾರಸ್ಯ ಕ ರ ವಾಗಿದ್ದು ಸರಳ ಸುಂದರ ಶೈಲಿ ಆಪ್ತ ವಾಗಿದೆ ಅಂದಿನ ದಿನಗಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡುವವರ ನೈಜಚಿತ್ರಣ ಮನಮುಟ್ಟುತ್ತವೆ ನಾನೂ ಅದೇ ಹಾನಗಲ್ ದವಲಾಗಿದ್ದು ನಮ್ಮ ಕಳೆದ ನೆನಪುಗಳು ಹಸುರಗಿವೆ ಮಾನವೀಯತೆ ಯಲ್ಲಿ ಅದ್ದಿ ತೆಗೆದ ಅವರ ಲೇಖನಿ ಯಿಂದ ಇನ್ನಷ್ಟು ಲೇಖಗಳು ಮೂಡಿ ಬರಲಿ

    ಪ್ರತಿಕ್ರಿಯೆ
  2. Sarojini Padasalgi

    ನಿಮ್ಮ ಅಪರೂಪದ ಆಪ್ತತೆ ತುಂಬಿದ ಅನಿಸಿಕೆಗೆ ಧನ್ಯವಾದಗಳು ವಾಸಂತಿ ಯವರೇ!
    ಈ ಸರಣಿ ಪ್ರಕಟಿಸಿದ ಅವಧಿಗೆ ಅನಂತ ಧನ್ಯವಾದಗಳು!

    ಪ್ರತಿಕ್ರಿಯೆ
  3. Vidya gadagkar

    nimma anubhavagaLannu kaNNige kaTTuvante aaptavenusuvante barediddeeri. tappadE OduttEne. avadhigoo matti nimagoo dhanyavaadagaLu.

    ಪ್ರತಿಕ್ರಿಯೆ
  4. Shrivatsa Desai

    ಅಯ್ಯೋ ಮುಗಿದೇ ಹೋಯಿತೇ ಈ ನವರಸಭರಿತ ಸರಣಿ ಅಂತ ಅನಿಸಿತು. ಒಬ್ಬ ವೈದ್ಯನ ಪತ್ನಿಯ ನೆನಪುಗಳ ನೆಪದಲ್ಲಿ ಈ ಲೇಖಕಿ ಬದುಕಿನ ನೋವು ನಲಿವು ಉಲ್ಲಾಸಗಳಲ್ಲದೆ ಮೂರು ನಾಲ್ಕು ದಶಕಗಳ ಹಿಂದಿನ ಹಳ್ಳಿಯ ಬದುಕು, ಅದರ ಪಾತ್ರಗಳ ವೈವಿಧ್ಯಮಯ ಆಂತರಿಕ ಮತ್ತು ಬಾಹ್ಯ ಹೋರಾಟ, ಜೀವನದ ವಿವಿಧ ಮುಖಗಳಾದ , ಮಾರ್ದವತೆ, ಮಾನವೀಯತೆ ಅಲ್ಲದೆ ದುಷ್ಟಬುದ್ಧ್ಧಿ, ಅಜ್ಞಾನ ತಂದ ಬವಣೆ, ನೋವು, ಅಸಹಾಯಕತೆ —ಇವೆಲ್ಲ ಒಂದು ಕಾದಂಬರಿ ತುಂಬುವಷ್ಟು ಬರೆದಿದ್ದಾರೆ. ಅನನುಭವಿ ಗೃಹಿಣಿ ಒಮ್ಮೆಲೆ ಬೆಳೆದ ಇತಿಹಾಸವೂ ಇಲ್ಲಿದೆ. ವೈದ್ಯಕೀಯ ಘಟನೆಗಳ ಜೊತೆಗೆ. ನಾನು ದಶಕಗಳ ಹಿಂದೆ ಓದಿದ AJ Cronin ಅವರ The Citadel ಎನ್ನುವ ವೇಲ್ಸ್ ಪ್ರದೇಶದ ವೈದ್ಯನ ಅನುಭವ ಕಥನವನ್ನು ನೆನಪಿಸಿತು. ಅವಧಿಯಲ್ಲಿ ಅವರ ಮುಂದಿನ ಸರಣಿಯೂ ಬರಯಲಿ ಎಂದು ಆಶಿಸುವೆ.

    ಪ್ರತಿಕ್ರಿಯೆ
  5. Sarojini Padasalgi

    ಧನ್ಯವಾದಗಳು ವಿದ್ಯಾ ಅವರೇ ನನ್ನ ಅನುಭವಗಳ ಕಥನ ಓದಿದ್ದಕ್ಕೆ, ಅವು ನಿಮಗೆ ಆಪ್ತತೆಯ ಭಾವ ಮೂಡಿಸಿದ್ರೆ ನಾನು ಬರೆದದ್ದು ಸಾರ್ಥಕ.
    ಶ್ರೀವತ್ಸ ದೇಸಾಯಿ ಯವರೇ, ಅನಂತ ಧನ್ಯವಾದಗಳು ನಿಮಗೆ.ನನ್ನ ಬರಹಗಳನ್ನು ಓದಿ , ಅವುಗಳ ವಿಷಯವನ್ನು ವಿಶ್ಲೇಷಿಸಿ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ತಿಳಿಸಿದ್ದಕ್ಕೆ. ಇನ್ನೊಮ್ಮೆ ತುಂಬು ಹೃದಯದ ಧನ್ಯವಾದಗಳು ನಿಮಗೆ.
    ಈ ಅವಕಾಶ ಒದಗಿಸಿದ್ದಕ್ಕೆ ಅವಧಿಗೆ ಅನಂತ ಧನ್ಯವಾದಗಳು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: