ಮತ್ತೆ ನಾಟಕ…

ಪ್ರಸನ್ನ

ಹೆಚ್ಚೂ ಕಡಿಮೆ ಎರಡು ದಶಕಗಳ ನಂತರ ನಾನು ಮತ್ತೆ ರಂಗಭೂಮಿಗೆ ಹಿಂದಿರುಗಿದ್ದೇನೆ. ಕೆಲವು ಯುವಗೆಳೆಯರ ಜೊತೆ ಸೇರಿಕೊಂಡು ಒಂದು ವೃತ್ತಿಪರ ರಂಗತಂಡವನ್ನು ಮೈಸೂರಿನಲ್ಲಿ ಆರಂಭಿಸಿದ್ದೇನೆ. ರಾಮಾಯಣವನ್ನು ಆಧರಿಸಿದ ‘ಅಯೋಧ್ಯಾ ಕಾಂಡ’ ಎಂಬ ನಾಟಕದ ಮೊದಲ ಪ್ರದರ್ಶನವು ಮೇ 5 ರಿಂದ ಮೂಡಿ ಬರಲಿದೆ. ತಂಡಕ್ಕೆ ನವೋದಯ ಎಂದು ಹೆಸರಿಟ್ಟತಿದ್ದೇವೆ. ವಚನ ಚಳುವಳಿ ಹಾಗೂ ದಾಸಚಳುವಳಿಗಳ ನಂತರದಲ್ಲಿ ಕನ್ನಡಭಾಷೆ ಸಮಾಜ ಹಾಗೂ ಸಂಸ್ಕೃತಿಗಳನ್ನು ಸಮೃದ್ಧಗೊಳಿಸಿದ ಮಹತ್ವದ ಚಳುವಳಿ ನವೋದಯ.

ಪೂರ್ವಸೂರಿಗಳಾದ ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ಮಧುರಚೆನ್ನ, ಹೀಗೆ ಹಲವು ಹಿರಿಯರು ಆ ಕಾಲದಲ್ಲಿ ಸಮನ್ವಯ ಸಿದ್ಧಾಂತದ ಮೂಲಕ ಚಳುವಳಿ ಕಟ್ಟಿದರು. ಆಧುನಿಕತೆಯ ಒಳ್ಳೆಯ ಗುಣಗಳನ್ನು ಸ್ವೀಕರಿಸಿದರು, ದುರ್ಗುಣಗಳನ್ನು ನಯವಾಗಿ ತಿರಸ್ಕರಿಸಿದರು. ಪರಂಪರೆಯ ಒಳ್ಳೆಯ ಗುಣಗಳನ್ನು ಸ್ವೀಕರಿಸಿದರು, ದುರ್ಗುಣಗಳನ್ನು ನಯವಾಗಿ ತಿರಸ್ಕರಿಸಿದರು. ಜಾತಿವ್ಯವಸ್ಥೆ ಇರಬಹುದು, ವರ್ಗವ್ಯವಸ್ಥೆ ಇರಬಹುದು, ಇಂಗ್ಲೀಷ್‌ಹೇರಿಕೆ ಇರಬಹುದು ಅಥವಾ ಯಂತ್ರನಾಗರೀಕತೆ ಇರಬಹುದು ಇವುಗಳನ್ನು ನಯವಾಗಿ ತಿರಸ್ಕರಿಸುತ್ತಲೇ, ಅಸಾಧಾರಣ ಸಾಹಿತ್ಯಸೃಷ್ಟಿ ಮಾಡಿದ ಚಳಿವಳಿ ನವೋದಯ. ನವೋದಯವನ್ನು ಈ ಬಾರಿ ರಂಗಭೂಮಿಯ ಮೂಲಕ ಸಾಧಿಸಬೇಕು ಎಂಬುದು ನಮ್ಮ ಆಶಯವಾಗಿದೆ.

ಕನ್ನಡಸಂಸ್ಕೃತಿ ಒಡೆದು ಚೂರಾಗುವ ಅಪಾಯ ಎದುರಿಸುತ್ತಿದೆ. ಆಧುನಿಕತೆ ಅತಿರೇಕಕ್ಕೆ ತಿರುಗಿದೆ. ಒಂದು ಅತಿರೇಕವನ್ನು ಮತ್ತೊಂದು ಅತಿರೇಕದ ಮೂಲಕ ಸರಿಪಡಿಸುತ್ತೇವೆ ಎಂದು ಹೊರಟಿರುವ ಜನರು ಪರಂಪರೆಯನ್ನು ವಿಪರೀತಕ್ಕೆ ಕೊಂಡೊಯ್ದಿದ್ದಾರೆ. ಕೇವಲ ಸಂಕೇತಗಳ ಆರಾಧನೆ ಮಾಡುತ್ತ ಮಂದಿರ ಮಸೀದಿ ಚರ್ಚುಗಳನ್ನ ದೇವರ ಮರೆತಿದ್ದಾರೆ ಬರಿದೆ ಜಗಳಗಂಟರಾಗಿದ್ದಾರೆ. ನಾವು ಹತಾಶರಾಗಿ ಕುಳಿತಿದ್ದೇವೆ. ರಂಗಭೂಮಿ ಸಮೂಹಸೃಷ್ಟಿ.

ಒಟ್ಟಾಗಿ ಕೆಲಸಮಾಡದೆ ಹೋದರೆ ರಂಗಭೂಮಿ ಸಾದ್ಯವಾಗುವುದಿಲ್ಲ. ಒಗ್ಗಟ್ಟು ಇಲ್ಲಿನ ಮೂಲಅಗತ್ಯ. ಜೊತೆಗೆ ಮೂಲತಃ ಕುಶಲಕರ್ಮಿಗಳು ನಾವು ಕೈ-ಉತ್ಪಾದಕರು. ವಚನಕಾರರ ಹಾಗೆಯೇ ಅನುಭಾವವೆಂದರೆ ಶ್ರಮವೂ ಹೌದು, ಕಲೆಯೂ ಹೌದು ನಮಗೆ. ಒಬ್ಬ ನಟ ರಂಗದ ಮೇಲೆ ನಿಂತಾಗ ಇಡೀ ಪ್ರೇಕ್ಷಕರಿಗಾಗಿ ನಾಟಕ ಮಾಡಬೇಕೇ ಹೊರತು ಆ ಪ್ರೇಕ್ಷಕಗಣವನ್ನು ಒಡೆಯಬಾರದು, ಅತಿರೇಕ ಮಾಡಬಾರದು, ಎಂದು ನಂಬುತ್ತದೆ ರಂಗಭೂಮಿ.

ನಮ್ಮ ಪ್ರದರ್ಶನಕ್ಕಾಗಿ ನಾವು ಆಯ್ಕೆ ಮಾಡಿಕೊಂಡಿರುವುದು ರಾಮಾಯಣದ ಪ್ರಸಂಗವನ್ನು. ರಾಷ್ಟ್ರಕವಿ ಕುವೆಂಪು ಹೇಳುವಂತೆ ‘ರಾಮ ದೊಡ್ಡವನು, ಆದರೆ ರಾಮಾಯಣ ರಾಮನಿಗಿಂತ ದೊಡ್ಡದು’ ರಾಮಾಯಣ ಹಾಗೂ ರಾಮರಾಜ್ಯಗಳ ಪರಿಕಲ್ಪನೆಯನ್ನು ಕಡೆಗಣಿಸಿರುವ ನಾವು ರಾಮ, ಏಸು,ಪೈಗಂಬರರು ಎಲ್ಲರ ದುರ್ಬಳಕೆಮಾಡುತ್ತಿದ್ದೇವೆ. ರಾಮಾಯಣದಿಂದ ನಾವು ಆಯ್ದುಕೊಂಡಿರುವ ಪ್ರಸಂಗವು ಜಗಳ ಅಸಹನೆ ಅಧಿಕಾರ ವ್ಯಾಮೋಹ ಇತ್ಯಾದಿಗಳ ದುರಂತವನ್ನು ತುಂಬ ಮಾರ್ಮಿಕವಾಗಿ ಚಿತ್ರಿಸುತ್ತದೆ. ರಾಮ ಸೀತೆ ಲಕ್ಷ್ಮಣರು ಅಸಹನೆಗೆ ತದ್ವಿರುದ್ದವಾದ ನಿಲುವು ತಾಳುತ್ತಾರೆ. ಆಶ್ರಮಗಳಿರುವ ಹಾಗೂ ಶ್ರಮಜೀವಿಗಳು ಬದುಕಿರುವ ಹಳ್ಳಿಗಾಡಿಗೆ ನಡೆದು ನಾವೂ ನಡೆಯಬೇಕಿರುವ ಹಾದಿಯ ಸೂಚನೆ ನೀಡುತ್ತಾರೆ.

‍ಲೇಖಕರು Admin

May 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vijayavaman

    ನವೋದಯದ ಮಾರ್ಗ ಹಿಡಿದದ್ದು ತುಂಬಾ ಸಂತೋಷ. ಪ್ರಸನ್ನ ಅವರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: