ಮೆಹಬೂಬ್ ಮಠದ ಓದಿದ ‘ಡಾಕ್ಟರ್ ಹೆಂಡತಿ’

ಗ್ರಾಮೀಣ ಹಾಗೂ ಕೌಟುಂಬಿಕ ಸಂವೇದನೆಗಳ ಕಥನ

ಮೆಹಬೂಬ್ ಮಠದ


ಬದುಕೆಂಬುದು ಅನಿರೀಕ್ಷಿತಗಳ ಸರಮಾಲೆ. ಅದು ಯಾವ ಘಳಿಗೆಯಲ್ಲಿ ಏನನ್ನು ಕೊಡುತ್ತದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಕೆಲವೊಮ್ಮೆ ಸಾವಿರ ಕಿಲೊಮೀಟರುಗಳ ದಾಟಿದ ನಂತರವೇ ಸಿಗಬೇಕಾದದ್ದು ಇಲ್ಲೆ ಬೀದಿಯ ಕೊನೆಯ ತಿರುವಿನಲ್ಲಿ ಧುತ್ತನೆ ಎದುರಾಗುತ್ತದೆ, ಇನ್ನು ಕೆಲವೊಮ್ಮೆ ನಾಲ್ಕೇ ಹೆಜ್ಜೆಗೆ ಅಂಗೈ ಮೇಲೆ ಇರಬೇಕಾದದ್ದು ವಿಶ್ವಪರ್ಯಟನೆ ಮಾಡಿದರೂ ಸಿಗುವುದಿಲ್ಲ. ವೈದ್ಯ ಪತಿಯೊಂದಿಗೆ ಜೀವನದ ಹೊಸ ಅಧ್ಯಾಯ ಬರೆಯಬೇಕೆಂದು ಕನಸುಗಳ ಮೂಟೆಯೊಂದಿಗೆ ಹಳ್ಳಿಗೆ ಬರುವ ಲೇಖಕಿ ಅಲ್ಲಿಂದ ಅನೂಹ್ಯ ತಿರವು ಪಡೆದುಕೊಂಡ ತಮ್ಮ ಬದುಕಿನ ವಿವಿಧ ಮಜಲುಗಳ ಕುರಿತು ಬರೆದ ‘ಡಾಕ್ಟರ್ ಹೆಂಡತಿ’ ಎನ್ನುವ ಕೃತಿ ನನ್ನನ್ನು ಇನ್ನಿಲ್ಲದಂತೆ ಕಾಡಿದೆ.

ಲೇಖಕಿ ಸರೋಜಿನಿ ಪಡಸಲಗಿ ಅವರು ತಮ್ಮ ಪತಿ ಡಾ. ಸುರೇಶ ಅವರೊಂದಿಗೆ ಬಂಕಾಪುರ, ತಿಳುವಳ್ಳಿ, ಗರಗ ಮತ್ತು ಅವುಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ ಎಂಭತ್ತರ ದಶಕದ ಬದುಕಿನ ಬಗ್ಗೆ ಬರೆದುದನ್ನು ಓದುವಾಗ ಓದುಗರ ಮುಂದೇ ತಾವೇ ಕುಳತು ಹೇಳುತ್ತಿರುವಂತೆ ಭಾಸವಾಗುತ್ತದೆ. ಹೂ ಮತ್ತು ಪರಿಮಳ ಹೇಗೆ ಒಂದರೊಳಗೊಂದು ಬೆಸೆದುಕೊಂಡಿವೆಯೊ ಹಾಗೆ ಡಾಕ್ಟರ್ ಮತ್ತು ಅವರ ಹೆಂಡತಿಯ ಹಳ್ಳಿಯ ಸಮೃದ್ಧ ಅನುಭವಗಳು ಈ ಪುಸ್ತಕದಲ್ಲಿವೆ.

ಬಂಕಾಪುರಕ್ಕೆ ಬಂದ ಮೊದಲ ದಿನವೇ ದೀಪ ಬೆಳಗುದಕ್ಕಿಂತ ಮೊದಲೇ ಆಪರೇಶನ್ ಮಾಡಲು ಹೋದ ಪತಿಗೆ ಬಿಸಿ ನೀರು ಕಾಯಿಸುವ ಸಂದರ್ಭ ಬಂದಾಗ ಲೇಖಕಿಗೆ ತನ್ನ ಬದುಕಿನ ಮುಂದಿನ ಪುಟಗಳು ಕಣ್ಣಮುಂದೆ ಸರ ಸರನೇ ಸರಿಯುತ್ತವೆ ಅಲ್ಲಿಂದ ಮಾನಸಿಕವಾಗಿ ತಮ್ಮನ್ನು ತಾವು ತಯಾರು ಮಾಡಿಕೊಳ್ಳುತ್ತಾರೆ. ಹೊತ್ತುಗೊತಿಲ್ಲದೆ ಬರುವ ಅತಿಥಿಗಳಿಗೆ ಊಟ ತಯಾರಿಸುವಾಗಿನ ಗಡಿಬಿಡಿ ಆತಂಕದ ಸನ್ನಿವೇಶಗಳನ್ನು ಗೃಹಿಣಿಯೊಬ್ಬಳು ತನ್ನ ಜಾಣ್ಮೆಯಿಂದ ನಿಭಾಯಿಸುವದನ್ನು ಓದುವಾಗ ನಗು ಮತ್ತು ನೋವು ಒಟ್ಟಿಗೆ ಬರುತ್ತವೆ. ಸುರೇಶ ಡಾಕ್ಟುç ಅತೀವ ಒತ್ತಡದಲ್ಲಿಯೂ ತಮ್ಮ ಕರ್ತವ್ಯದೆಡೆಗೆ ತೋರುವ ಅಪಾರ ಹಾಗೂ ಅಸಾಧಾರಣ ಬದ್ಧತೆಯ ಹಿಂದಿನ ಪ್ರೇರಣೆಯಾಗಿ ಲೇಖಕಿ ಕೆಲಸ ಮಾಡುತ್ತಾರೆ.

ಗಡಗಡ ಸೀತವ್ವ, ಲೇಡಿ ಡಾಕ್ಟುç, ಕುಲಕರ್ಣಿ ಸಿಸ್ಟರ್, ದೊಡ್ಡ ಮನೆತನದ ನವವಿವಾಹಿತ ತರುಣಿ, ಛಲ್ಲಾ ಸಿಸ್ಟರ್, ಹೊಸಮನಿ ಸಿಸ್ಟರ್, ಪಕ್ಕದ ಮನೆ ಮಹಿಳೆ, ಅನಸೂಯ, ನಾನಿ, ಗಿರಿಜವ್ವ, ಇವರೆಲ್ಲಾ ಗ್ರಾಮೀಣ ಭಾರತವನ್ನು ಪ್ರತಿನಿಧಿಸುವ ಮಹಿಳೆಯರು. ಹಳ್ಳಿ ಬದುಕಿನಲ್ಲಿ ಜಾತಿ ಕುಲ ಗೋತ್ರ ಇವೆಲ್ಲ ಹೆಸರಿಗಷ್ಟೆ ಅಲ್ಲಿ ಏನಿದ್ದರೂ ಮಾನವೀಯತೆಯ ತಂತು ಸದಾ ಮೀಟುತ್ತಲೇ ಇರುತ್ತದೆ ಎನ್ನುವುದಕ್ಕೆ ಸಾಕಷ್ಟು ಸಂದರ್ಭಗಳು ಇಲ್ಲಿವೆ. ಸಂಪ್ರದಾಯದ ಪ್ರಕಾರ ‘ಮೊರದ ಬಾಗಿನ’ ವನ್ನು ಬ್ರಾಹ್ಮಣ ಮುತ್ತೈದೆಗೆ ಕೊಡಬೇಕು ಆದರೆ ಅಲ್ಲಿದ್ದ ಅಷ್ಟೂ ವರ್ಷಗಳ ಕಾಲ ಲೇಖಕಿ ಅದನ್ನು ತಮ್ಮ ಮನೆ ಕೆಲಸ ಮಾಡುವ ‘ಸೀತವ್ವ’ ಎನ್ನುವ ಮಹಿಳೆಗೆ ಕೊಡುತಾರೆ. ‘ಛಲ್ಲಾ ಸಿಸ್ಟರ್’ ಮನೆಯಲ್ಲಿ ಕ್ರಿಸ್ಮಸ್ ಆಚರಿಸುತ್ತಾರೆ. ‘ನಾನಿ’ ( ಮುಸ್ಲಿಂರು ಹೆಣ್ಣಜ್ಜಿಯನ್ನು ನಾನಿ ಎಂದು ಕರೆಯುತ್ತಾರೆ) ಯನ್ನು ತಮ್ಮ ಅವ್ವನಂತೆ ಕಾಣುತ್ತಾರೆ.

ಗರಗ ಎಂಬ ಊರಿಗೆ ವರ್ಗಾವಣೆಯಾದಾಗ ಸಾಮಾನು ಸರಂಜಾಮುಗಳನ್ನು ಹೊತ್ತ ಲಾರಿ ‘ತಿಳುವಳ್ಳಿ’ ಯಿಂದೆ ಇನ್ನೇನು ಹೊರಡುವ ಕೊನೆ ಕ್ಷಣದಲ್ಲಿ ದೀಪಕ ಎನ್ನುವಾತ ಓಡಿ ಬಂದು ಅಕ್ಕಾರ.. ಸಾಹೇಬ್ರ.. ಅಂತಾ ಗಾಬರಿಯಾಗಿ ಕೂಗುತ್ತಾನೆ ಅಲ್ಲಿ ಹೋಗಿ ನೋಡಿದರೆ ಲಾರಿ ಮುಂದೆ ಆ ಊರಿನ ಜನ ಸಾಲಾಗಿ ಮಲಗಿರುತ್ತಾರೆ ನೀವು ನಮ್ಮ ಊರು ಬಿಟ್ಟು ಹೋಗೋದಾದ್ರೆ ನಮ್ಮನ್ನು ದಾಟಿಕೊಂಡು ಹೋಗಿ ಎನ್ನುತ್ತಾರೆ. ಇದು ಅವರ ಪ್ರೀತಿ ಜೊತೆಗೆ ಅವರೊಂದಿಗಿನ ವೈದ್ಯ ದಂಪತಿಗಳ ಪ್ರೀತಿಯನ್ನು ಕೂಡ ತೋರಿಸುತ್ತದೆ. ಜನರ ಜೊತೆಗೆ ಅಲ್ಲಿನ ಮನೆಗಳು, ರಸ್ತೆಗಳು, ಹಾವು, ಕೋತಿ ಹಾಗೂ ಇಲಿಗಳೂ ಕೂಡ ಇಲ್ಲಿ ಮರೆಯದ ಪಾತ್ರಗಳಾಗಿ ಕಾಡುತ್ತವೆ.

ಈ ಎಲ್ಲಾ ಸಾಮಾಜಿಕ ಕೆಲಸಗಳ ನಡುವೆ ಲೇಖಕಿಯ ಕೌಟುಂಬಿಕ ಬದುಕು ತೆಗೆದುಕೊಂಡ ತಿರುವು, ಮಕ್ಕಳ ಜೊತೆ ಹಾಯಾಗಿ ಕಾಲ ಕಳೆಯಲಾಗದ ಸಂಕಟ, ದೊಡ್ಡ ಮಗನನ್ನು ದೂರದ ತೌರು ಮನೆಯಲ್ಲಿ ಬಿಟ್ಟಿದ್ದು, ಮಕ್ಕಳ ಅಡ್ಮಿಶನ್ ಗೂ ತಂದೆ ಬರಲಾಗದ ಸ್ಥಿತಿ, ಇನ್ನೂ ಸರಿಯಾಗಿ ಹೇಳುವುದಾದರೆ ಲೇಖಕಿಯವರು ತಮ್ಮ ಮಕ್ಕಳಿಗೆ ಸಮೃದ್ಧ ಬಾಲ್ಯವನ್ನು ಕೊಡಲಾಗದೇ ಅವರು ಅನುಭವಿಸುವ ಸಂಕಟ ನೆನೆದು ಯಾರಾದರೂ ಕಣ್ಣೀರಾಗುತ್ತಾರೆ. ಆದರೆ ಅವರು ಇದಕ್ಕಾಗಿ ಅವರ ಪತಿ ಸುರೇಶರನ್ನು ಒಮ್ಮೆಯೂ ದೂರುವುದಿಲ್ಲ.

ಹಳ್ಳಿಗರ ಮುಗ್ಧ ಪ್ರೇಮ, ಸಿನಿಕತನ, ಮೂಢನಂಬಿಕೆ ಜೊತೆಗೆ ಹಳ್ಳಿಯಲ್ಲಿನ ಕೆಲವು ಭಯಾನಕ ಸಂಗತಿಗಳೂ ಇಲ್ಲಿವೆ ಇನ್ನೂ ವಿಶೇಷ ಅಂದರೆ ಇಲ್ಲಿ ಕನ್ನಡ ಚಿತ್ರರಂಗದ ವಿಭಿನ್ನ ಮತ್ತು ಮಹತ್ವದ ನಿರ್ದೇಶಕರಾದ ಯೋಗರಾಜ್ ಭಟ್ಟರೂ ಇದ್ದಾರೆ!

ಗ್ರಾಮೀಣ ಭಾರತದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಹಾಗೂ ಕೌಟುಂಬಿಕ ಬದುಕಿನ ಚಿತ್ರಣವನ್ನು ಈ ಕೃತಿಯಲ್ಲಿ ಸರೋಜಿನಿ ಪಡಸಲಗಿ ಅವರು ತುಂಬಾ ರಚನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡದ ಓದುಗರಿಗೆ ಸದಾ ವಿಭಿನ್ನ ಅನುಭವಗಳನ್ನು ಕೊಡಲೆಂದೇ ಕೆಲಸ ಮಾಡುತ್ತಿರುವ ‘ಬಹುರೂಪಿ’ ಯ ಜಿ.ಎನ್. ಮೋಹನ್ ಸರ್ ಅವರು ಬಹಳ ವಿಶಿಷ್ಟ ಹಾಗೂ ಸುಂದರವಾಗಿ ಈ ಪುಸ್ತಕವನ್ನು ಹೊರ ತಂದಿದ್ದಾರೆ ಅಂದ ಹಾಗೆ ‘ವಿಶ್ವ ಪುಸ್ತಕ ದಿನಾಚರಣೆ’ ಯಂದೇ ಈ ಪುಸ್ತಕ ಬಿಡುಗಡೆ ಆಗಿದ್ದು ಮತ್ತೊಂದು ವಿಶೇಷ. ನಾನು ಕೂಡ ಅದಕ್ಕೆ ಸಾಕ್ಷಿ ಆಗಿದ್ದು ನನಗೆ ಮತ್ತಷ್ಟು ಖುಶಿ ನೀಡಿದೆ. ಹಳ್ಳಿ ಬದುಕನ್ನು ಮತ್ತೊಮ್ಮೆ ಆನಂದಿಸಬೇಕು ಎನ್ನುವವರು ಈ ಕೃತಿಯನ್ನು ಓದಲೇಬೇಕು.

ಕೊಳ್ಳಲು ಸಂಪರ್ಕಿಸಿ 70191 82729

https://bit.ly/3kiRfAy

ಪುಸ್ತಕ : ‘ಡಾಕ್ಟರ್ ಹೆಂಡತಿ’
ಲೇಖಕರು : ಸರೋಜಿನಿ ಪಡಸಲಗಿ
ಪ್ರಕಾಶಕರು : ಬಹುರೂಪಿ
ಬೆಲೆ : 180 ರೂ

‍ಲೇಖಕರು Admin

May 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ramesh pattan

    ಸಂಪ್ರದಾಯದ ಪ್ರಕಾರ ‘ಮೊರದ ಬಾಗಿನ’ ವನ್ನು ಬ್ರಾಹ್ಮಣ ಮುತ್ತೈದೆಗೆ ಕೊಡಬೇಕು ಆದರೆ ಅಲ್ಲಿದ್ದ ಅಷ್ಟೂ ವರ್ಷಗಳ ಕಾಲ ಲೇಖಕಿ ಅದನ್ನು ತಮ್ಮ ಮನೆ ಕೆಲಸ ಮಾಡುವ ‘ಸೀತವ್ವ’ ಎನ್ನುವ ಮಹಿಳೆಗೆ ಕೊಡುತಾರೆ. ‘ಛಲ್ಲಾ ಸಿಸ್ಟರ್’ ಮನೆಯಲ್ಲಿ ಕ್ರಿಸ್ಮಸ್ ಆಚರಿಸುತ್ತಾರೆ. ‘ನಾನಿ’ ( ಮುಸ್ಲಿಂರು ಹೆಣ್ಣಜ್ಜಿಯನ್ನು ನಾನಿ ಎಂದು ಕರೆಯುತ್ತಾರೆ) ಯನ್ನು ತಮ್ಮ ಅವ್ವನಂತೆ ಕಾಣುತ್ತಾರೆ.
    ಕ್ರೈಸ್ತ ,ಮುಸ್ಲಿಂರನ್ನು ಗೌರವಿಸುವ ಲೇಖಕಿ
    ಇಲ್ಲಿ ಬ್ರಾಹ್ಮಣರ ವಿರುದ್ಧ ಮಾತ್ರ ತಾರತಮ್ಯ ತೋರುತ್ತಾರೆ.
    – ರಮೇಶ ಪಟ್ಟಣ kalburgi

    ಪ್ರತಿಕ್ರಿಯೆ
  2. Sarojini Padasalgi

    ಧನ್ಯವಾದಗಳು ಮೆಹಬೂಬ್ ಮಠದ ಸರ್.

    ಪ್ರತಿಕ್ರಿಯೆ
  3. Sarojini Padasalgi

    ರಮೇಶ ಸರ್ ತಾವು ಡಾಕ್ಟರ್ ಹೆಂಡತಿ ಪುಸ್ತಕ ಓದಿದೀರಾ? ನಾವಿರುವ ಆಸ್ಪತ್ರೆ ಆವರಣಗಳಲ್ಲಿ ಜಾತಿ ಮತ ಗಳ ಭೇದಕ್ಕೆ, ನಮ್ಮವರು ನಿಮ್ಮವರು ಎಂಬುದನ್ನು ಮರೆತು ಒಂದಾಗಿ ಬಾಳಿದ ಸ್ಥಳಗಳವು. ಅಲ್ಲಿದ್ದ ಇನ್ನೊಬ್ಬ ಡಾಕ್ಟರ್ ಅವರ ಪತ್ನಿ ಗೆ ಮಗು ಆದಾಗ ಆ ಪಾಪುನ ಹೆಸರಿಟ್ಟ ಸೋದರತ್ತೆ ನಾನಾಗಿದ್ದೆ. ಅಲ್ಲಿದ್ದವರೆಲ್ಲ ಒಂದೇ ಕುಟುಂಬದವರಂತೆ ಇದ್ದ ಆ ಸಾಮರಸ್ಯದ ಸುಂದರ ಬದುಕಿನಲ್ಲಿ ದಯವಿಟ್ಟು ಜಾತಿ ಮತ ಗಳ. ರಗಳೆ ಬೇಡ. ನಾ ಅಂದೂ ಹಾಗೇ ಇದ್ದೆ; ಈಗಲೂ ಹಾಗೇ.ಮುಂದೂ ಹಾಗೇ.ಅಷ್ಟೇ.
    ಸರೋಜಿನಿ ಪಡಸಲಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: