ಡಾ ಕೆ ಎಸ್ ಚೈತ್ರಾ ಅಂಕಣ– ಹೆಲ್ತಿ ಮತ್ತು ಕೂಲ್ ಬೋಂಡ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

6

ಮಣಿಪಾಲದ ಕ್ಯಾಂಪಸ್‌ನಲ್ಲಿ ನಡೆದಾಡಿದರೆ ಸಾಕು ಭಿನ್ನ ಚಹರೆಯ ವಿದ್ಯಾರ್ಥಿಗಳನ್ನು ನೋಡಬಹುದು, ಕಿವಿಗೊಟ್ಟು ಕೇಳಿದರೆ ಬೇರೆ ಬೇರೆ ಭಾಷೆಗಳನ್ನೂ ಕೇಳಬಹುದು. ಕನ್ನಡ, ಇಂಗ್ಲೀಷ್, ಕೊಂಕಣಿ, ತುಳುವಂತೂ ಸರಿ..ಅದರೊಂದಿಗೇ ಮಲೆಯಾಳಂ, ಹಿಂದಿ, ಮ್ಯಾಂಡರಿನ್, ಅರಾಬಿಕ್, ನೇಪಾಳಿ, ತೆಲುಗು, ತಮಿಳು, ಮಲೈ ಹೀಗೆ ಅದೊಂದು ವಿಶ್ವಗ್ರಾಮ ಎಂದರೆ ತಪ್ಪಾಗಲಾರದು. ಅದೆಷ್ಟು ಭಾಷೆಗಳಿವೆ ಈ ಜಗತ್ತಿನಲ್ಲಿ ಎಂದು ಆಶ್ಚರ್ಯಪಟ್ಟಿದ್ದಾಯ್ತು.ಆದರೆ ನಮ್ಮ ಮಾತೃಭಾಷೆ ಕನ್ನಡದಲ್ಲಿಯೇ ಎಷ್ಟೊಂದು ಬಗೆ ಎಂದು ಅರಿವಾದದ್ದು ಅಲ್ಲಿಯೇ.

ಕುಂದಾಪ್ರ ಕನ್ನಡ, ಮಂಗಳೂರು ಕನ್ನಡ, ಮೈಸೂರು ಕನ್ನಡ, ಧಾರವಾಡ ಕನ್ನಡ, ಬಿಜಾಪುರ ಕನ್ನಡ ಹೀಗೆ ಪಟ್ಟಿ ಸಾಕಷ್ಟು ಉದ್ದವೇ! ಆದರೂ ದಿನನಿತ್ಯದ ವ್ಯವಹಾರಕ್ಕೆ ಮತ್ತು ಬರುತ್ತಿದ್ದ ರೋಗಿಗಳ ಜತೆ ಮಾತನಾಡಲು ಅತ್ಯಂತ ಹೆಚ್ಚು ಬಳಕೆಯಾಗುತ್ತಿದ್ದದ್ದು ಸ್ಥಳೀಯವಾಗಿ ಬಳಕೆಯಲ್ಲಿದ್ದ ಮಂಗಳೂರು ಕನ್ನಡ. ನಮಗೆ ನಾವು ಕನ್ನಡದವರು ಎಂಬ ಹೆಮ್ಮೆ ಜತೆ ಎಲ್ಲವೂ ಅರ್ಥವಾಗುತ್ತೆ ಎಂಬ ಜಂಭವೂ ಸೇರಿತ್ತು. ಆದರೆ ಒಂದೇ ರೀತಿ ಧ್ವನಿಸುವ ಶಬ್ದಗಳ/ ಒಂದೇ ಶಬ್ದದ, ಅರ್ಥ ಹೇಗೆ ಬೇರೆಯಾಗಬಹುದು ತಿಳಿದಿರಲಿಲ್ಲ. ಅದರಿಂದ ಪೂರ್ತಿ ಪೆಚ್ಚಾಗುವ ಸಂದರ್ಭಗಳು ಹಲವು.

ಕೂಲ್ ಬೋಂಡ
ಮಣಿಪಾಲದಲ್ಲಿದ್ದಾಗ ಉಡುಪಿಯ ಸುಂದರ ಬೀಚ್‌ಗಳು ದೊಡ್ಡ ಆಕರ್ಷಣೆ. ಹೊಸದರಲ್ಲಿ ಹಾಗೊಮ್ಮೆ ಬೀಚಿಗೆ ಎಲ್ಲರೂ ಗುಂಪಾಗಿ ಹೊರಟಿದ್ದೆವು. ಸಂಜೆ ಎಂದರೂ ಅಲ್ಲಿ ಬಿಸಿಲು (ಉಡುಪಿ-ಮಣಿಪಾಲದಲ್ಲಿ ಎರಡೇ ಕಾಲ; ಬೇಸಿಗೆ, ಬಿರು ಬೇಸಿಗೆ ಎನ್ನುವ ಮಾತು ಚಾಲ್ತಿಯಲ್ಲಿದೆ!) ಬೆಳಿಗ್ಗೆಯಿಂದ ಕ್ಲಾಸ್ ಮುಗಿಸಿ, ಮತ್ತೆ ಬಸ್ ಹತ್ತಿ ಈ ಬೀಚಿಗೆ ಬರುವಾಗ ಹಸಿವು-ಬಾಯಾರಿಕೆ ಸುಸ್ತು ಎಲ್ಲವೂ ಆಗಿತ್ತು. ಹಾಗೆಂದಿದ್ದೇ ನಮ್ಮ ಕ್ಲಾಸಿನ ಹುಡುಗರು ‘ಬೊಂಡ ತೆಗೆದುಕೊಳ್ಳುವನಾ? ಬಾರೀ ಹೆಲ್ತಿ ಮತ್ತು ಕೂಲ್ ! ಅಗೋ ಅಲ್ಲಿ ಒಳ್ಳೆ ಸಿಗ್ತದೆ ’ ಎಂದರು. ನನಗೆ ಬೋಂಡ ಸಿಗುವುದು ಆಶ್ಚರ್ಯವೆನಿಸಲಿಲ್ಲ, ಆದರೆ ಈ ಭಾರೀ ಹೆಲ್ತಿ ಮತ್ತು ಕೂಲ್ ಖುಷಿ ಕೊಟ್ಟಿತು. ನಮ್ಮಲ್ಲಿ ಸಣ್ಣಂದಿ ದಲೂ ಎಣ್ಣೆ ಪದಾರ್ಥ ಬೇಡ, ಗಂಟಲು ಕಟ್ಟುತ್ತೆ ಹಾಗೆ ಹೀಗೆ ಎಂದು ಬೈಯ್ಯುವುದೇ ಹೆಚ್ಚು. ಇಲ್ಲಿ ನೋಡಿದರೆ ಇಂಥ ಬಿಸಿಲಲ್ಲಿ, ಎಣ್ಣೆಯಲ್ಲಿ ಕರಿದ ಬೋಂಡ ಕೂಲ್ ಮತ್ತು ಒಳ್ಳೆಯದು ಎನ್ನುತ್ತಾರಲ್ಲ; ಜಾಣರ ಜಿಲ್ಲೆ ಇದು ಎಂದು ಹೆಮ್ಮೆಯಾಯಿತು.

ಕುರುಕಲು ತಿಂಡಿ ಎಂದರೆ ಪ್ರಾಣ ಬಿಡುವ ನನ್ನ ಗೆಳತಿಯಂತೂ ಕಣ್ಣು ಬಾಯಿ ಅರಳಿಸಿ ನಿಂತಿದ್ದಳು. ಅಂತೂ ಎಲ್ಲರಿಗೆ ಬೋಂಡ ತರಲು ಹೊರಟ ಗೆಳೆಯರು ತಲೆಗೊಂದರಂತೆ ಲೆಕ್ಕ ಹಾಕುತ್ತಿದ್ದರು. ‘ಇಲ್ಲೆಲ್ಲಾ ಬೊಂಡ ಸೈಜ್ ದೊಡ್ಡದು ಇರ್ತದೆ‘ ಎಂಬ ಹೊಗಳಿಕೆ ಬೇರೆ. ಒಂದು ಪ್ಲೇಟಿನಲ್ಲಿ ಎಷ್ಟು ಇರ್ತದೆ ಎಂದು ಬಾಯಿತುದಿಗೆ ಬಂದ ಪ್ರಶ್ನೆ ನುಂಗಿಕೊಂಡು ನಾವಿಬ್ಬರೂ ನಮಗೆ ಎರಡು ಎಂದೆವು. ‘ನಂಗೆ ಡೌಟು ಎರಡು ಹೆಚ್ಚು ಆಗ್ತದಾ ಅಂತ?’ ಎಂಬ ಅನುಮಾನದ ನುಡಿ ಗೆಳೆಯನಿಂದ. ನಮಗೆ ಸಿಟ್ಟೇ ಬಂದು ‘ನೀವು ನಮ್ಮನ್ನು ಅಂಡರ್‌ಎಸ್ಟಿಮೇಟ್ ಮಾಡ್ತಾ ಇದ್ದೀರಿ; ಅಥವಾ ದುಡ್ಡು ಖರ್ಚು ಮಾಡದಷ್ಟು ಕಂಜೂಸ್ ಇದ್ದೀರಿ’ ಎಂದೆಲ್ಲಾ ಬೈದ ಹೊಡೆತಕ್ಕೆ ಅವರು ಕಂಗಾಲಾಗಿ ಹೇಳಿದಷ್ಟು ತರಲು ಹೋದರು.

ನಾವು ಬರಲಿರುವ ಬಿಸಿ ಬಿಸಿ ಬೋಂಡಾಕ್ಕೆ ಬೀಚ್ ಮೇಲಿದ್ದ ಬೆಂಚ್‌ನಲ್ಲಿ ಕುಳಿತು ಕಾಯತೊಡಗಿದೆವು. ಸ್ವಲ್ಪ ಸಮಯದ ನಂತರ ಹುಡುಗರು ಬಂದರು ಕೈತುಂಬಾ ಹೊತ್ತು! ಅವರು ತಂದದ್ದು ಎಳನೀರು..ಬೋಂಡಾ ಕಾಣಲಿಲ್ಲ. ಬೋಂಡಾ ಜತೆ ಎಳನೀರಲ್ಲ, ಟೀ-ಕಾಫಿ ಒಳ್ಳೆ ಕಾಂಬಿನೇಶನ್ ಎನ್ನಬೇಕೆನಿಸಿದರೂ ಪಾಪ ಅಷ್ಟು ದೂರದಿಂದ ಹೊತ್ತು ತಂದಿದ್ದಾರಲ್ಲ ಎಂದು ಸುಮ್ಮನಾದೆವು. ನಮ್ಮ ಕೈಗೆ ಎರಡೆರಡು ದೊಡ್ಡ ಎಳನೀರು ಕೊಟ್ಟಾಗ ಒಂದು ಕುಡಿದರೇ ದೊಡ್ಡದು; ಎರಡು ಬೇಡಪ್ಪಾ ಎಂದು ನಿರಾಕರಿಸಿದೆವು. ಹುಡುಗರು ತಿರುಗಿ ಬಿದ್ದರು.. ಮತ್ತೆಂತಕ್ಕೆ ಎರಡು ಬೇಕೇ ಬೇಕು ಅಂತ ರಂಪ ಮಾಡಿದ್ದು? ಅರೆ, ನಾವು ಹೇಳಿದ್ದು ಬೋಂಡ, ಎಳನೀರಲ್ಲ ಅಂತ ನಮ್ಮ ಗಲಾಟೆ. ಕಡೆಗೆ ತಿಳಿಯಿತು ಅದು ನಮ್ಮ ಬಿಸಿ ಬಿಸಿ ಎಣ್ಣೆಯಲ್ಲಿ ಕರಿದ ಬೋಂಡ ಅಲ್ಲ, ಎಳನೀರು ಬೊಂಡ! ಎಳನೀರು ಬರೀ ಜಾಣರ ಜಿಲ್ಲೆಯಲ್ಲಿ ಮಾತ್ರವಲ್ಲ ನಮ್ಮಲ್ಲೂ ಹೆಲ್ತಿಯೇ. ಹೇಳಿದ ತಪ್ಪಿಗೆ ಎರಡೆರಡು ಬೊಂಡ ಕುಡಿದಿದ್ದಾಯ್ತು!!

ಖುದಾಗವಾದಲ್ಲಿ ಕೂಗು!
ವಿದ್ಯಾರ್ಥಿಗಳಾಗಿದ್ದ ನಮಗೆ ಆಗೆಲ್ಲಾ ಸಿಗುತ್ತಿದ್ದದ್ದು ಒಂದೇ ರಜೆ; ಭಾನುವಾರ. ಹಬ್ಬ-ಹರಿದಿನಕ್ಕೂ ರಜೆ ಇರುತ್ತಿರಲಿಲ್ಲ. ಭಾನುವಾರ ಬೆಳಿಗ್ಗೆ ಹಾಸ್ಟೆಲ್ ರೂಂ ಕಸ ಗುಡಿಸಿ ಒರೆಸುವುದು, ಎಣ್ಣೆ ಹಚ್ಚಿಕೊಂಡು ತಲೆ ಸ್ನಾನ, ಬಕೆಟ್ ತುಂಬಾ ಬಟ್ಟೆ ನೆನೆಸಿಟ್ಟು ತೊಳೆಯುವುದು ಹೀಗೆ ಬಿಡುವಿಲ್ಲದ ಕೆಲಸಗಳು. ಮಧ್ಯಾಹ್ನ ಭರ್ಜರಿ ಊಟ ಮಾಡಿ ಕೋನ್ ಐಸ್ ಕ್ರೀಮ್ ತಿಂದು ಮಲಗಿದರೆ ಸಂಜೆ ಹೊರಗೆ ಹೋಗುವ ಸಂಭ್ರಮ. ಎಂಡ್ ಪಾಂಯಿಂಟ್, ವೇಣುಗೋಪಾಲಸ್ವಾಮಿ ದೇವಸ್ಥಾನ, ರಥಬೀದಿ ಮತ್ತು ಅಪರೂಪಕ್ಕೊಮ್ಮೆ ಉಡುಪಿಯಲ್ಲಿ ಸಿನಿಮಾ.

ಮಣಿಪಾಲದ ಬಂದ ಹೊಸತರಲ್ಲಿಯೇ ಅಮಿತಾಭ್ ಮತ್ತು ಶ್ರೀದೇವಿಯ ಖುದಾಗವಾ ಸಿನಿಮಾ ಬಂದಿತ್ತು. ಇಬ್ಬರೂ ನಮ್ಮಿಷ್ಟದ ತಾರೆಯರು. ಹೋಗುವ ಪ್ಲಾನ್ ಮಾಡಿದ್ದಾಯ್ತು. ಆದರೆ ಹುಡುಗರು ಹಿಂದಿ ಸಿನಿಮಾ ಅದೂ ಉಡುಪಿಗೆ ಹೋಗಬೇಕು ಎಂದು ಅಷ್ಟು ಆಸಕ್ತಿ ತೋರಿಸಲಿಲ್ಲ. ಆದರೆ ಗೆಳೆಯ ರಾಜೇಶ್ ಮಾತ್ರ ‘ನನಗೆ ಸಿನಿಮಾ ಇಷ್ಟವುಂಟು. ಆದ್ರೆ ಹುಡುಗಿಯರ ಜತೆ ಹೋಗುವುದು ಇಷ್ಟವಿಲ್ಲ. ನನ್ನ ತಂಗಿ ಮತ್ತೆ ಅವಳ ಫ್ರೆಂಡ್ಸ್ ಜತೆ ಹೋಗಿ ಸಾಕಾಗಿದೆ ಮಾರಾಯ! ಇಡೀ ಸಿನಿಮಾ ಉದ್ದಕೆ ಎಲ್ಲರೂ ಕೂಗುವುದು..ನನಗೆ ನಾಚಿಗೆ ಆಯ್ತು’ ಎಂದು ಖಡಾಖಂಡಿತವಾಗಿ ನಿರಾಕರಿಸಿದ. ಅವನ ತಂಗಿ ಆಗಿರಲಿ ಮತ್ತೊಬ್ಬರಿರಲಿ ಒಟ್ಟಿನಲ್ಲಿ ಹುಡುಗಿಯರ ಜತೆ ಹೋಗಲು ಇಷ್ಟವಿಲ್ಲ, ಅದೂ ಕೂಗುತ್ತಾರೆ ಎಂಬ ಕಾರಣಕ್ಕೆ ಎನ್ನುವುದು ಸರಿಯೇ ? ನಮಗೆ ಎಲ್ಲಿಲ್ಲದ ಸಿಟ್ಟು ಬಂತು. ಪಾಪ ಹೈಸ್ಕೂಲಿನ ಹುಡುಗಿಯರು ಒಟ್ಟಿಗೇ ಸೇರಿ ಸಿನಿಮಾಕ್ಕೆ ಹೋದಾಗ ಖುಷಿಯಿಂದ ಕೂಗಿ ಕಿರಿಚಿ ಕುಣಿದಾಡಿರಬಹುದು. ಹೇಳಿ ಕೇಳಿ ಈ ಹುಡುಗರೆಲ್ಲಾ ಗುಮ್ಮನಗುಸುಕರು; ಅದಕ್ಕೇ ಇವನು ಹೀಗೆ ಹೇಳುತ್ತಾನೆ ಅನಿಸುವುದರ ಜತೆ ಹುಡುಗಿಯರು ಕೂಗುತ್ತಾರೆ ಎಂಬ ಇವನ ನಿರ್ಧಾರ ಸುಳ್ಳು ಮಾಡುವ ಜವಾಬ್ದಾರಿಯೂ ನಮಗಿದೆ ಎನ್ನಿಸಿತು. ಎಲ್ಲರನ್ನೂ ಕಷ್ಟಪಟ್ಟು ಒಪ್ಪಿಸಿ ಅವನಿಗೂ ನಾವು ಎಲ್ಲರ ಹಾಗಲ್ಲ, ಕೂಗುವುದಿಲ್ಲ ಎಂದು ಆಶ್ವ್ವಾಸನೆ ಕೊಟ್ಟು ಸಿನಿಮಾಕ್ಕೆ ಹೊರಡಿಸಿದೆವು.

ಸಿನಿಮಾ ಶುರುವಾಯ್ತು. ರಾಜೇಶ್ ಆಗಾಗ್ಗೆ ಕೂಗಬಾರದು ಎಂದು ಎಚ್ಚರಿಸಿದ್ದರಿಂದ ನಾವು ಆದಷ್ಟೂ ನಮ್ಮ ದನಿಯನ್ನು ತಗ್ಗಿಸಿಯೇ ಮಾತನಾಡುತ್ತಿದ್ದೆವು. ಸಿನಿಮಾ ಚೆನ್ನಾಗಿತ್ತು. ಬಾದ್‌ಶಾಖಾನ್ (ಅಮಿತಾಭ್) ಬೆನಜೀರ್‌ಳ (ಶ್ರೀದೇವಿ) ತಂದೆಯ ಕೊಲೆಗಾರನನ್ನು ಹುಡುಕಲು ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೋಗುವುದು, ಅಲ್ಲಿ ಷಡ್ಯಂತ್ರಕ್ಕೆ ಬಲಿಯಾಗಿ ಜೈಲಿನಲ್ಲಿ ಇರುವುದು, ಪ್ರೇಮಿಗಳ ವಿರಹ, ತಂದೆಯನ್ನು ಕಾಣದ ಮಗಳು ಹೀಗೆ ಸಾಕಷ್ಟು ಕಣ್ಣೀರು ತರಿಸುವ ದೃಶ್ಯಗಳು. ನಾನು ಆಗಾಗ್ಗೆ ಕಣ್ಣೀರು ಒರೆಸಿಕೊಂಡರೆ, ಗೆಳತಿ ಸಂಪೂರ್ಣ ತನ್ಮಯಳಾಗಿ ಸಶಬ್ದವಾಗಿಯೇ ಅಳುತ್ತಿದ್ದಳು. ಆದರೆ ಅಂಥಹ ಸಂದರ್ಭದಲ್ಲೂ ಇಡೀ ಸಿನಿಮಾದಲ್ಲಿ ಎಲ್ಲಿಯೂ ದನಿ ಎತ್ತರಿಸದೇ ಗುಸುಗುಸು ಎಂದು ಮಾತನಾಡಿ ದುಃಖ ಹಂಚಿಕೊಂಡಿದ್ದೆವು. ಏಕೆಂದರೆ ರಾಜೇಶ್‌ಗೆ ಮತ್ತು ಆ ಮೂಲಕ ಹುಡುಗರಿಗೆ ಹುಡುಗಿಯರು ಕೂಗುವುದಿಲ್ಲ ಎಂಬ ಅರಿವು ಮೂಡಿಸುವ ಪ್ರಯತ್ನ ನೆನಪಿನಲ್ಲಿತ್ತು. ಅಂತೂ ಸಿನಿಮಾ ಮುಗಿದು ಹೊರಗೆ ಬರುವಾಗ ನಮ್ಮ ಕಣ್ಣು-ಮೂಗು ಎಲ್ಲಾ ಕೆಂಪು, ಕರ್ಚೀಫ್ ಒದ್ದೆ.

ಹುಡುಗರು ‘ಎಂಥ ಸಾವಾ ಇದು; ಈ ರೀತಿ ಕೂಗುವುದು! ಜನ ಎಲ್ಲಾ ನೆಗಾಡಿ ನಮ್ಮ ಮರ್ಯಾದೆ ಲಗಾಡಿಯಾಯ್ತು. ಯಾರಾದರೂ ನೋಡಿದರೆ ಎಂತ ಎಣಿಸಿಯಾರು? ಅಲ್ಲಿ ಒಂದು ಸಿನಿಮಾ ಆದ್ರೆ ಇವರದ್ದು ಮತ್ತೊಂದು ಸಿನಿಮಾ ಇಲ್ಲಿ; ಅಂವ ಹೇಳಿದ್ದು ಕರೆಕ್ಟ್ ಉಂಟು..’ ಎಂದು ಮಾತನಾಡುತ್ತಿದ್ದರು. ಅರೆ, ಏರಿದ ದನಿಯಿರಲಿ ಜೋರಾಗಿ ಉಸಿರಾಡಲೂ ಹೆದರಿ ನಮ್ಮ ಪಾಡಿಗೆ ನಾವು ಕುಳಿತು ಸಿನಿಮಾ ನೋಡಿದ್ದಲ್ಲದೇ ಈ ಮಾತು ಕೇಳಬೇಕೇ? ಕೂಗುವುದು ಎಂದರೆ ಏನೆಂದು ತಿಳಿದಿದ್ದಾರೆ ಇವರು ಎಂದು ಆ ಅಳು ಮುಖದಲ್ಲೇ ವಿಚಾರಿಸಿದೆವು. ಆಮೇಲೆ ತಿಳಿಯಿತು ಅವರ ಕೂಗುವುದು ಎಂದರೆ ನಮ್ಮ ಅಳುವುದು ! ಅಂತೂ ಖುದಾಗವಾ ಸಿನಿಮಾ ನೋಡಿ ಅತ್ತು, ಆಮೇಲೆ ಈ ಕೂಗಾಟ ಕೇಳಿ ನಕ್ಕು ಹಾಸ್ಟೆಲ್ಲಿಗೆ ಬಂದಿದ್ದಾಯ್ತು. ಆಮೇಲೆ ‘ಕೂಗುವ’ ಸೀನ್ ಇರುವ ಸಿನಿಮಾ ಇದ್ದರೆ ಒಟ್ಟಿಗೆ ಹೋಗದೇ ಬರೀ ಕಾಮೆಡಿಗೆ ಹೋಗುವ ತೀರ್ಮಾನಕ್ಕೆ ಬಂದೆವು.

ಕನ್ನಡದಲ್ಲಿಯೇ ಈ ಎಲ್ಲಾ ಪ್ರಾದೇಶಿಕ ವೈಶಿಷ್ಟ್ಯಗಳ ಅರಿವು ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಅರಿಯುವಲ್ಲಿ ಸಹಾಯ ಮಾಡಿತು. ಅದರೊಂದಿಗೇ ಬರುತ್ತಿದ್ದ ರೋಗಿಗಳ ಜತೆ ಸುಲಭ ಸಂವಹನಕ್ಕೆ ಸಹಾಯಕವಾಗಿತ್ತು. ತೊಂದರೆ ಏನೇ ಇರಲಿ ದಂತವೈದ್ಯರ ಬಳಿ ಬರುವ ರೋಗಿಗಳು ಒಂದು ರೀತಿ ಆತಂಕದಲ್ಲಿರುತ್ತಾರೆ. ಹೀಗಿರುವಾಗ ತಮ್ಮ ಭಾಷೆ ಗೊತ್ತಿದೆ ಎಂದರೆ ಎಷ್ಟೋ ಸಮಾಧಾನ. ಅದರಲ್ಲಿಯೂ ಅವರದ್ದೇ ಶಬ್ದ ಉಪಯೋಗಿಸಿದರೆ ಮತ್ತಷ್ಟು ನಿರಾಳ. ‘ಹೋಯ್, ನೀವ್ ಇಲ್ಲಿಯವರಾ ಮರ‍್ರೆ, ಎಂತ ಗೊತ್ತುಂಟಾ? ನಂಗೆ ಚೂರು ನೋವುಂಟು, ರಪ್ಪ ಫಿಲ್ಲಿಂಗ್ ಮಾಡಿ ಕಳಿಸಿಬಿಡಿ, ಆಯ್ತಾ’ ಹೀಗೆ ಮಾತು-ಚಿಕಿತ್ಸೆ ಸುಲಭ. ಹೀಗಾಗಿ ಒಂದಷ್ಟು ಮಂಗಳೂರು ಕನ್ನಡದ ಜತೆ ತುಳು, ಮಲಯಾಳಂ, ಕೊಂಕಣಿಯ ಒಂದಿಷ್ಟು ಪದ/ ವಾಕ್ಯಗಳನ್ನೂ ಕಲಿತೆವು. ಚಿಕಿತ್ಸೆ ಏನೇ ಇರಲಿ ನಮ್ಮ ಜನ, ನಮ್ಮ ಭಾಷೆ ಎನ್ನುವ ಭಾವನೆ ಕೊಡುವ ಧೈರ್ಯ, ಮೂಡಿಸುವ ಪ್ರೀತಿ ದೊಡ್ಡದು!

‍ಲೇಖಕರು Admin

May 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ತಮ್ಮಣ್ಣ ಬೀಗಾರ

    ಕೂಗುವುದು, ಬೋಂಡಾ ಎರಡೂ ಸಂದರ್ಭ ಚನ್ನಾಗಿದೆ. ಓದಲು ಕುತೂಹಲ ಉಂಟುಮಾಡುವುದಲ್ಲದೆ‌ ಖುಷಿ ನೀಡುತ್ತದೆ. ಅಭಿನಂದನೆಗಳು ಮೇಡಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: