ಮತ್ತೂರು ಸುಬ್ಬಣ್ಣ ಮಕ್ಕಳ ಕಥೆ – ಹುಟ್ಟುಹಬ್ಬಕ್ಕೆ ಬಂದವರು ಯಾರು?

ಮತ್ತೂರು ಸುಬ್ಬಣ್ಣ

‘ಅಮ್ಮ ನನ್ನ ಹ್ಯಾಪಿ ಬರ್ತ್ ಡೇ ಯಾವಾಗ?’, ಮುದ್ದು ಮುದ್ದಾಗಿ ಧೃತಿ ಅಮ್ಮನನ್ನು ಕೇಳಿದಳು. ಅಮ್ಮ ಸುಮ್ಮನಿದ್ದಾಗ ಮತ್ತೆ ಕೇಳಿದಳು,’ನನ್ನ ಹುಟ್ಟಿದ ಹಬ್ಬ ಬರೋದಕ್ಕೆ ಸೂರ್ಯಮಾಮ ಎಷ್ಟು ಸರ್ತಿ ಅವನ ಮನೆಗೆ ಹೋಗಿಬರಬೇಕಮ್ಮ?’ ಅಮ್ಮ ಹೇಳಿದಳು,’ನಿನ್ನ ಹುಟ್ಟಿದ ಹಬ್ಬ ಇನ್ನೂ ಒಂದು ತಿಂಗಳಿದೆ.’ ‘ಅ೦ದರೆೆ ಸೂರ್ಯಮಾಮ ಮೂವತ್ತು ಸರ್ತಿ ಮುಳುಗಿ ಏಳಬೇಕು ಅಲ್ಲವೇನಮ್ಮ?’ ಧೃತಿಯ ಜಾಣತನದ ಆಲೋಚನೆಗಳಿಗೆ ಅಮ್ಮ ನಕ್ಕರು. ‘ಅಮ್ಮ, ಈ ಸರ್ತಿ ನನ್ನ ಹುಟ್ಟು ಹಬ್ಬಕ್ಕೆ ಹೊಸ ಸ್ನೇಹಿತರನ್ನು ಕರಯಲೇನಮ್ಮ?’’ಹೊಸ ಸ್ನೇಹಿತರೇ, ಯಾರು?’ ಅಂದರು ಅಮ್ಮ. ‘ನಾನು ಈಗಲೇ ಹೇಳೋದಿಲ್ಲ! ಸರ್ ಪ್ರೈಸ್!!’ ಎನ್ನುತ್ತ ಧೃತಿ ಓಡಿಹೋದಳು.

ಮರುದಿನ. ಧೃತಿ ಅಮ್ಮನ ಬಳಿ ಓಡಿಬಂದಳು. ಅಮ್ಮ ಏನು ಅನ್ನುವಂತೆ ಧೃತಿಯತ್ತ ನೋಡಿದರು. ‘ಅಮ್ಮ ಬಾ ನನ್ನ ಜೊತೆ. ತಮಾಷೆ ತೋರಿಸ್ತೇನೆ.’ ಅಮ್ಮನ ಕೈ ಎಳೆದುಕೊಂಡು ಧೃತಿ ಮನೆಯ ಅಂಗಳಕ್ಕೆ ನಡೆದಳು. ‘ಅಮ್ಮ ಇಲ್ಲಿ ನೋಡಮ್ಮ, ಅವತ್ತು ನಾನು ಹಾಕಿದ ಬೀಜಗಳಿಂದ ಪುಟ್ಟ ಪುಟ್ಟ ಸಸಿಗಳು ಬಂದಿವೆ! ಎಷ್ಟು ಚನ್ನಾಗಿವೆ!’ ಅಮ್ಮನಿಗೂ ನೆನಪಾಯಿತು. ಒಂದುವಾರದ ಹಿಂದೆ ಧೃತಿಯ ಕೈಯಿಂದ ಒಂದು ಹೂಕುಂಡದಲ್ಲಿ ಕೆಲವು ಬೀಜಗಳನ್ನು ಹಾಕಿಸಿ, ಮಣ್ಣಿನಿಂದ ಮುಚ್ಚಿಸಿ ನೀರಿ ಹಾಕಿಸಿದ್ದರು. ಧೃತಿ ಗೊಬ್ಬರ ಹಾಕಿದ್ದಳು. ಒಂದೊ೦ದು ಅಂಗುಲವಿದ್ದ ಪುಟ್ಟ ಸಸಿಗಳನ್ನು ನೋಡಿ ಧೃತಿಯ ಸಂತೋಷಕ್ಕೆ ಪಾರವೇ ಇಲ್ಲ. ರಾತ್ರಿ ಊಟಮಾಡುತ್ತ ಧೃತಿ ಹೇಳಿದಳು,’ಅಮ್ಮ ನನ್ನ ಹುಟ್ಟು ಹಬ್ಬಕ್ಕೆ ಹೊಸ ಸ್ನೇಹಿತರನ್ನು ಕರೆಯಲೇನಮ್ಮ?’ ‘ಯಾರೆ ನಿನ್ನ ಹೊಸ ಸ್ನೇಹಿತರು?’ ‘ಸರ್‌ ಪ್ರೈಸ್’ ಎನ್ನುತ್ತ ಧೃತಿ ಓಡಿಹೋದಳು.

ಮತ್ತೊಂದು ದಿನ. ಮನೆಯ ಮುಸುರೆ ತೊಳೆಯುವ ಮುನಿಯಮ್ಮನೊಡನೆ ಧೃತಿ ಸಂಭಾಷಣೆಯಲ್ಲಿ ತೊಡಗಿದುದನ್ನು ಅಮ್ಮ ಕಂಡರು. ಧೃತಿಯ ಮಾತನ್ನು ಕೇಳಿಸಿಕೊಂಡರು. ‘ಮುನಿಯಮ್ಮಜ್ಜಿ, ನಿಮ್ಮ ಮೊಮ್ಮಗಳು ಇವತ್ತು ಯಾಕೆ ಬಂದಿಲ್ಲ? ಅವಳೂ ಶಾಲೆಗೆ ಹೋಗುತ್ತಾಳ? ಅವಳ ಹುಟ್ಟಿದ ಹಬ್ಬ ಯಾವಾಗ? ನನ್ನ ಹುಟ್ಟಿದ ಹಬ್ಬಕ್ಕೆ ಕರಕೊಂಡು ಬನ್ನಿ.’ ಹೊಸ ಸ್ನೇಹಿತರಲ್ಲಿ ಮುನಿಯಮ್ಮನ ಮೊಮ್ಮಗಳೂ ಒಬ್ಬಳೆಂದು ಅಮ್ಮ ಅಂದಾಜಿಸಿದರು.

ಒಂದು ವಾರ ಕಳೆದಿರಬಹುದು. ಧೃತಿ ಮನೆಯೊಳಗೆ ಕಾಣಲಿಲ್ಲ. ಎಲ್ಲೆಂದು ಅಮ್ಮ ಹುಡುಕಿದಾಗ, ಧೃತಿ ತಾನು ಸಸಿಗಳನ್ನು ಬೆಳೆಸಿದ್ದ ಹೂಕುಂಡದ ಬಳಿ ಇದ್ದಳು. ಅಮ್ಮ ದೂರದಿಂದಲೇ ಗಮನಿಸಿದರು. ಅಮ್ಮ ಧೃತಿಯ ಮಾತುಗಳನ್ನು ಕೇಳಿಸಿಕೊಂಡರು. ‘ಎಷ್ಟು ಚನ್ನಾಗಿ ಕಾಣಿಸ್ತಿದೀರ ನೀವೆಲ್ಲ! ಆಗಲೇ ಇಷ್ಟು ಎತ್ತರ ಬೆಳೆದು ಬಿಟ್ಟಿದ್ದೀರ!’ ಧೃತಿ ತನ್ನ ಪುಟ್ಟ ಕೈಗಳಿಂದ ಬೆಳೆದ ಸಸ್ಯಗಳನ್ನು ಅಳೆಯುತ್ತಿದ್ದಳು. ತನ್ನ ಸಸ್ಯಗಳೊಡನೆ ಸಂಭಾಷಣೆಯಲ್ಲಿ ತೊಡಗಿದ್ದಳು. ‘ನಿಮಗೂ ನಮ್ಮ ಹಾಗೆ ಆಹಾರ ಬೇಕು ಅಲ್ಲವ? ನೀವು ನಿಮ್ಮ ಆಹಾರ ಹೇಗೆ ತೆಗೋತೀರ? ನಮ್ಮ ಹಾಗೆ ಕೈಯಿಂದ ಮಾಡೋದಕ್ಕೆ ನಿಮಗೆ ಕೈಗಳೇ ಇಲ್ಲ! ನಂಗೊತ್ತು ನೀವು ಆಹಾರ ಹೇಗೆ ತೆಗೋತೀರ ಅಂತ.

ನಾವು ಹಾಕೊ ನೀರನ್ನ ನೀವು ನಿಮ್ಮ ಬೇರುಗಳ ಮೂಲಕ ಹೀರಿಕೊಳ್ಳುತ್ತೀರ, ಅಲ್ಲವ? ಅದು ಮೇಲಕ್ಕೆ ಹೋಗತ್ತೆ. ತುದಿ ಎಲೆಗೂ ಹೋಗತ್ತೆ. ಆದರೆ ನನ್ನ ಒಂದು ಪ್ರಶ್ನೆ, ನೀವೂ ಬರ್ತ್ ಡೇ ಮಾಡ್ತೀರ? ನಿಮ್ಮಮ್ಮ ಕೇಕು ಮಾಡ್ತಾರ?’ ಸಂಭಾಷಣೆಯ ಮಧ್ಯೆ ಅಮ್ಮನನ್ನು ನೋಡಿ ಕುತೂಹಲದಿಂದ ಧೃತಿ ಹೇಳಿದಳು, ‘ಅಮ್ಮ, ನೋಡಮ್ಮ ನನ್ನ ಗಿಡಗಳು ಎಷ್ಟು ಎತ್ತರ ಬೆಳೆದಿದ್ದಾವೆ! ಸಣ್ಣ ಸಣ್ಣ ಗಿಡಗಳಿಂದಲೇ ದೊಡ್ಡ ಮರಗಳಾಗುತ್ತವೆ ಅಲ್ಲವೇನಮ್ಮ? ಆದರೆ ನನಗೆ ಒಂದು ಅರ್ಥ ಆಗ್ತಿಲ್ಲ. ಸಣ್ಣ ಬೀಜದೊಳಗೆ ದೊಡ್ಡ ಮರ ಎಲ್ಲಿ ಅವಿತುಕೊಂಡಿರುತ್ತದೆ ಅಂತ. ನಾನೂ ಮರದ ಹಾಗೆ ಎತ್ತರ ಎತ್ತರ ಬೆಳೆಯಬೇಕಮ್ಮ.’ ಧೃತಿಯ ಮುದ್ದು ಮಾತುಗಳಿಗೆ ಅಮ್ಮ ನಕ್ಕರು, ಅಷ್ಟೆ.

ಇನ್ನೊಂದು ದಿನ. ಕಸಗುಡಿಸುವ ನಾರಾಯಣಮ್ಮ ಬೆಳಿಗ್ಗೆ ಕಸ ಆರಿಸಿಕೊಳ್ಳಲು ಬಂದಾಗ, ಧೃತಿ ಕೇಳಿದಳು, ‘ನಾರಾಯಣಮ್ಮತ್ತೆ, ನಿಮ್ಮ ಮಗಳೆಲ್ಲಿ? ಎದ್ದಿಲ್ಲವ? ಅವಳ ಹುಟ್ಟುಹಬ್ಬ ಯಾವಾಗ? ಹೊಸ ಲಂಗ ತೆಗೋತಾಳ?’ ಅಮ್ಮ ಧೃತಿಯ ಮಾತನ್ನು ಕೇಳಿಸಿಕೊಂಡು ನಕ್ಕಳು. ಹೊಸ ಸ್ನೇಹಿತರಲ್ಲಿ ಕಸ ಗುಡಿಸುವ ನಾರಾಯಣಮ್ಮನ ಮಗಳೂ ಸೇರಿಸಿದ್ದಾಳೆ ಎಂದು ತಮ್ಮಲ್ಲಿಯೇ ನಕ್ಕರು.

ಇನ್ನೊಂದು ವಾರ ಕಳೆದಿರಬಹುದು. ಧೃತಿ ಆಗಾಗ್ಗೆ ತನ್ನ ಗಿಡಗಳ ಬಳಿಗೆ ಹೋಗಿ ಸಮಯ ಕಳೆಯುತ್ತಿದ್ದುದನ್ನು ಅಮ್ಮ ಗಮನಿಸಿದ್ದರು. ಅವಳು ಗಿಡದ ಜೊತೆ ಆಡುತ್ತಿದ್ದಳು. ಮಾತಾಡಿಸುತ್ತಿದ್ದಳು. ತನ್ನ ಶಾಲೆಯ ಕಥೆ ಹೇಳುತ್ತಿದ್ದಳು. ಒಮ್ಮೊಮ್ಮೆ ಟೀಚರಾಗಿ ತನ್ನ ಪುಟ್ಟ ಪುಟ್ಟ ಗಿಡಗಳನ್ನೇ ತರಗತಿಯ ವಿದ್ಯಾರ್ಥಿಗಳಂತೆ ನಡೆಸಿಕೊಳ್ಳುತ್ತಿದ್ದಳು. ಪಾಠ ಮಾಡುತ್ತಿದ್ದಳು. ತನ್ನ ಟೀಚರು ಮಾಡುವಂತೆ ಬೆತ್ತವನ್ನು ಝಳಿಪಿಸುತ್ತಿದ್ದಳು. ಒಮ್ಮೆ ಸಿಟ್ಟು ತೋರಿಸಿದರೆ ಮರು ಕ್ಷಣದಲ್ಲಿ ಪ್ರೀತಿ ತೋರಿಸುತ್ತಿದ್ದಳು. ಒಮ್ಮೊಮ್ಮೆ ತಾನು ಬೆಳೆಸಿದ್ದ ಪುಟ್ಟ ಪುಟ್ಟ ಸಸಿಗಳೊಂದಿಗೆ ಜೋಕು ಮಾಡುತ್ತ ಮಾತಾಡುತ್ತಿರುವುದೂ ಕಂಡು ಬಂದಿತ್ತು.

ಒಂದು ದಿನವಂತು ಧೃತಿ ಕನಸಿನಲ್ಲಿಯೂ ಮಾತಾಡುವುದನ್ನು ಅಮ್ಮ ಗಮನಿಸಿದರು. ‘ನೀವು ಇಲ್ಲದೆ ಹೋಗಿದ್ರೆ ನಮಗೆಲ್ಲ ಎಷ್ಟು ಕಷ್ಟ ಆಗ್ತಾ ಇತ್ತು ಅಲ್ಲವ? ನಮಗೆ ಉಸಿರಾಡೋದಕ್ಕೆ ನೀವು ಸ್ವಚ್ಚಗಾಳಿ ಕೊಡ್ತೀರ. ಆದರೆ ನಮ್ಮ ಜನಕ್ಕೆ ಬುದ್ಧಿ ಇಲ್ಲ. ಮರಾನೆಲ್ಲ ಕಡಿದು ಹಾಕಿ ಬಿಡ್ತಾರೆ. ನಾನು ಮಾತ್ರ ಹಾಗೆ ಆಗೋದಕ್ಕೆ ಬಿಡೋದಿಲ್ಲ. ನನಗೆ ನೀವಂದ್ರೆ ಪ್ರಾಣ . ಹಸಿರು ಬಣ್ಣವಂತು ನನಗೆ ತುಂಬ ಇಷ್ಟ.’ ಮರುದಿನ ಅಮ್ಮ ಕೇಳಿದರು, `ಪುಟ್ಟಿ, ನಿನ್ನ ಕನಸಿನಲ್ಲಿ ನೆನ್ನೆ ಯಾರು ಬಂದಿದ್ರು? ಅವರಿಗೆ ನೀ ಏನಂದೆ?’ ಅಮ್ಮ ಅಷ್ಟು ಹೇಳಿದ್ದೇ ತಡ ಧೃತಿ ಪುಟ್ಟ ಭಾಷಣವನ್ನೇ ಮಾಡಿದಳು. ‘ನಮ್ಮ ಟೀಚರು ಹೇಳಿದ್ದಾರೆ. ಗಿಡಗಳನ್ನು ಸಾಯಿಸಬಾರದಂತೆ. ಗಿಡಗಳು ಸತ್ತರೆ ನಮಗೆ ಯಾರು ಗಾಳಿ ಕೊಡ್ತಾರೆ ? ಅಲ್ಲವ? ಗಿಡ ಮರ ಬಳ್ಳಿಗಳಿಗೂ ಜೀವ ಇದೆಯಂತೆ. ನಮಗೆ ಜಿಗುಟಿದರೆ ಪೆಟ್ಟಾಗುವಂತೆ ಅವಕ್ಕೂ ಆಗುತ್ತೆ ಅಲ್ಲವೇನಮ್ಮ. ಅಮ್ಮ, ಅಮ್ಮ ಗಿಡಗಳು ಯಾವಾಗ ಮಲಗುತ್ತವೆ? ಅವೂ ಹುಟ್ಟಿದ ಹಬ್ಬ ಆಚರಿಸಿಕೊಳ್ಳತ್ವ? ನನ್ನ ಹುಟ್ಟು ಹಬ್ಬಕ್ಕೆ ಅವನ್ನೂ… ಇಲ್ಲ ಇಲ್ಲ ಸುಮ್ನೆ ಅಂದೆ’ ಎಂದು ಹಾರಿಕೆಯ ಉತ್ತರ ಹೇಳುತ್ತ ಧೃತಿ ಓಡಿ ಹೋದಳು!

ಧೃತಿಯ ಹುಟ್ಟುಹಬ್ಬಕ್ಕೆ ಮೂರುದಿನ ಉಳಿಯಿತು. ಅವಳ ಸಂಭ್ರಮಕ್ಕೆ ಕೊನೆಯೇ ಇಲ್ಲ. ಆಮ್ಮ ಮಗಳಿಗೆ ಹೊಸ ಲಂಗ ಕೊಡಿಸಿದರು. ಅಪ್ಪ ದೊಡ್ಡ ಕೇಕಿಗೆ ಹೇಳಿ ಬಂದರು. ಅಮ್ಮ ಮನೆಯಲ್ಲೇ ಪಾಯಸ ಮಾಡಿದರು.

ಧೃತಿಯ ಹುಟ್ಟುಹಬ್ಬದ ದಿನ ಬಂದೇ ಬಿಟ್ಟಿತು. ಸ್ನೇಹಿತರನ್ನೆಲ್ಲ ಆರು ಗಂಟೆಗೆ ಬರಲು ಹೇಳಿದಳು ಧೃತಿ. ‘ನಿನ್ನ ಹೊಸ ಸ್ನೇಹಿತರನ್ನು ಕರೆದೆಯ?’ಎಂದು ಅಮ್ಮ ಕೇಳಿದರು. ಕೆನ್ನೆಯ ಗುಳಿಯೊಂದಿಗೆ ತುಂಟ ನಗೆ ಬೀರುತ್ತ ಧೃತಿ ಹೇಳಿದಳು. ‘ಸರ್‌ಪ್ರೆöÊಸ್!’

ಸಂಜೆ ಐದೂವರೆ. ಧೃತಿಯ ಹುಟ್ಟುಹಬ್ಬದ ಸಿದ್ಧತೆ ನಡೆಯಿತು. ಅಪ್ಪ ಬೇಕರಿಯಿಂದ ಕೇಕು ತಂದರು. ಹಾಲಿನ ಮಧ್ಯದಲ್ಲೊಂದು ಪುಟ್ಟ ಟೇಬಲ್ಲಿಟ್ಟರು. ಅದರ ಮೇಲೆ ಕೇಕು. ದೊಡ್ಡ ದೊಡ್ಡ ಬಲೂನುಗಳನ್ನು ಊದಲಾಯಿತು. ಬಣ್ಣ ಬಣ್ಣದ ಕಾಗದಗಳ ಮಾಲೆಗಳೂ ಕಾಣಿಸಿಕೊಂಡವು . ‘ಧೃತಿ ತಯಾರಾಗು’ಅಂದರು ಅಮ್ಮ. ಹಾಲಿಗೆ ಬಂದು ನೋಡಿದರು. ಧೃತಿ ಕಾಣಲಿಲ್ಲ. ಅತ್ತ ಇತ್ತ ನೋಡಿದರು. ಧೃತಿ ಕಾಣಲಿಲ್ಲ. ಅದೇ ವೇಳೆಗೆ ಅಪ್ಪ ಕೂಡ ಅಲ್ಲಿಗೆ ಬಂದರು. ಧೃತಿ ಯಾವುದೋ ಮುಖ್ಯಕೆಲಸದಲ್ಲಿ ನಿರತಳಾದಂತೆ ಕಂಡುಬAದಿತು. ಧೃತಿಗೆ ಕಾಣದಂತೆ ಮರೆಯಿಂದ ಅಪ್ಪ-ಅಮ್ಮ ಆಕೆಯನ್ನು ನೋಡಿದರು.

ಧೃತಿ ಕಷ್ಟಪಟ್ಟು ಇನ್ನೊಂದು ಚಿಕ್ಕ ಕುರ್ಚಿಯನ್ನು ರೂಮಿನಿಂದ ತಂದಳು. ಕೇಕಿಟ್ಟಿದ್ದ ಟೇಬಲ್ಲಿನ ಪಕ್ಕದಲ್ಲಿ ಇಟ್ಟಳು. ಅದಕ್ಕೊಂದು ಹಸಿರು ಹಾಸು ತಂದು ಹಾಕಿದಳು. ಧೃತಿಯ ಸ್ನೇಹಿತರೆಲ್ಲ ಒಬ್ಬೊಬ್ಬರಾಗಿ ಬರಲು ಆರಂಭಿಸಿದರು. ಅವರಲ್ಲಿ ಮುನಿಯಮ್ಮನ ಮೊಮ್ಮಗಳು ಹಾಗು ನಾರಾಯಣಮ್ಮನ ಮಗಳು ಹೊಸ ಲಂಗ ತೊಟ್ಟು ಕಾಣಿಸಿಕೊಂಡರು. ಅಪ್ಪ ಅಮ್ಮರಿಗೆ ಇನ್ನೊಂದು ಸೋಜಿಗ ಕಾದಿತ್ತು. ಹೊಸ ಲಂಗ ತೊಟ್ಟ ಧೃತಿ ತಾನು ಬೆಳೆಸಿದ್ದ ಪುಟ್ಟ ಪುಟ್ಟ ಸಸಿಗಳ ಹೂಕುಂಡವನ್ನು ಕಷ್ಟಪಟ್ಟು ಎತ್ತಿ ತಂದಳು.

ಅಮ್ಮ ಅಪ್ಪ ನೋಡುತ್ತಿದ್ದರು. ‘ಏನೇ ಧೃತಿ ಇದು’ ಅಂದರು ಅಮ್ಮ. ‘ನನ್ನ ಹೊಸ ಸ್ನೇಹಿತರು ಈ ಪುಟ್ಟ ಗಿಡಗಳಮ್ಮ. ಅವರ ಹುಟ್ಟುಹಬ್ಬಾನೂ ಆಚರಿಸಬೇಕಮ್ಮ. ಅವರ ಬರ್ತ್ ಡೇ ಯಾರು ಮಾಡ್ತಾರೆ? ಪಾಪ ಅಲ್ಲವ? ನನ್ನ ಹುಟ್ಟುಹಬ್ಬದ ಜೊತೆ ನನ್ನ ಹಸಿರು ಸಸಿಗಳ ಹುಟ್ಟುಹಬ್ಬಾನೂ ಆಚರಿಸೋಣ ಅಮ್ಮ, ಅಪ್ಪ.’ ಅಷ್ಟು ಹೊತ್ತಿಗೆ ಧೃತಿಯ ಸ್ನೇಹಿತರೆಲ್ಲ ಬಂದಿದ್ದರು. ದೊಡ್ಡ ಕೇಕಿನ ಪಕ್ಕದಲ್ಲಿ ಪುಟ್ಟ ಸಸಿಗಳನ್ನೂ ಒಪ್ಪವಾಗಿ ಇಡಲಾಯಿತು. ಧೃತಿ ಸಸಿಗಳನ್ನು ಬಾಚಿ ತಬ್ಬುತ್ತ ಹೇಳಿದಳು ‘ನನ್ನ ಹೊಸ ಸ್ನೇಹಿತರು ಇವರೇ! ಎಲ್ಲ ಬನ್ನಿ ಹುಟ್ಟುಹಬ್ಬದ ಹಾಡನ್ನು ಹಾಡೋಣ! ನನ್ನ ಹೊಸ ಸ್ನೇಹಿತರ ಹುಟ್ಟುಹಬ್ಬ ಆಚರಿಸೊಣ!!’ ಮಕ್ಕಳೆಲ್ಲ ಆಕಾಶಕ್ಕೆ ಕೇಳಿಸುವಂತೆ `ಹೋ ಎಂದು’ ಕೂಗಿದರು !!

‍ಲೇಖಕರು Admin

June 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: