ಪಿ ಪಿ ಉಪಾಧ್ಯ ಸರಣಿ ಕಥೆ 57- ಆದಿ ಮತ್ತು ಅಂತ್ಯ ಇಬ್ಬರಲ್ಲೂ ಹೊಸ ಹುರುಪು…

ಪಿ ಪಿ ಉಪಾಧ್ಯ

ಅಮ್ಮ ಮೊದಲಿನಂತಾದಳು ಎನ್ನುವ ಸಮಾಧಾನದಲ್ಲಿ ಆದಿತ್ಯ ಮತ್ತ ಅಂತ್ಯ ಇಬ್ಬರೂ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದರು. ತೀರ ದೊಡ್ಡ ಸಮಸ್ಯೆಯೊಂದು ಇಷ್ಟು ಸುಲಭದಲ್ಲಿ ಬಗೆಹರಿಯಿತಲ್ಲ ಎನ್ನುವ ತೃಪ್ತಿಯಲ್ಲಿ ಅವರು ಮಾತಾಡಿಕೊಳ್ಳುವಾಗ ನಡುವೆ ಅನಂತನ ಸುದ್ದಿ ಕೆಲವೊಮ್ಮೆ ಬರುತ್ತದೆ. ಅವನ ನಡವಳಿಕೆಯಿಂದ ಮೊದಲಿನಿಂದಲೇ ಬೇಸತ್ತಿದ್ದ ಅವರಿಬ್ಬರಿಗೂ ಅವನ ಈಗಿನ ವರ್ತನೆ ಅಂತಹ ಆಶ್ಚರ್ಯವನ್ನು ತರದಿದ್ದರೂ ಅಮ್ಮ ಮತ್ತು ಅಪ್ಪನನ್ನು ಕಡೆಗಣಿಸಿದ್ದು ಮಾತ್ರ ತೀರಾ ಹಿಂಸೆಯನ್ನು ಕೊಡುತ್ತಿದೆ. ಮಾತಾಡುವಾಗ ಆ ವಿಷಯ ಬಂದಾಗ ಅವರಿಬ್ಬರ ಸ್ವರವೂ ತುಸು ಏರುತ್ತದೆ. ಅಂತಹ ಸಂದರ್ಭದಲ್ಲಿ ಅವರು ಮೊದಲು ಮಾಡುವ ಕೆಲಸ ಅಮ್ಮ ಹತ್ತಿರದಲ್ಲಿ ಎಲ್ಲೂ ಇಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವುದು. ಈಗಿನ ಮಟ್ಟಿಗೆ ಅಮ್ಮ ಸರಿಯಾದಳು ಎನ್ನುವ ಸಮಾಧಾನವಿದ್ದರೂ ಅನಂತನ ಬಗ್ಗೆ ಕೇಳಿಸಿಕೊಂಡು ಪುನಃ ಅವನ ಬಗ್ಗೆ ಚಿಂತೆ ಹಚ್ಚಿಕೊಂಡು ಅದೇ ತೆರನಲ್ಲಿ ಆಡಲು ಸುರು ಮಾಡಿದರೆ ಎನ್ನುವ ಹೆದರಿಕೆ ಅವರಿಗೆ.

‘ಅಲ್ಲ ಮಾರಾಯ ಆ ಅನಂತ ಹೀಗೆ ಮಾಡುವುದೇ’ ಅದೆಷ್ಟನೆಯ ಬಾರಿಗೋ ಅಂತ್ಯ ಅಣ್ಣನೊಂದಿಗೆ ಕೇಳುತ್ತಾನೆ.

`ಅಲ್ಲ ಅದೇನು ನಿನಗೆ ಹೊಸತೇನೋ.. ಅವನು ಹೀಗಿದ್ದೇ ಏನಾದರೂ ಮಾಡಿಕೊಳ್ಳುತ್ತಾನೆ ಎಂದು ನನಗೆಂದೋ ಅನ್ನಿಸಿತ್ತು. ನಿನಗೂ ತಿಳಿಯದ್ದೇನೂ ಅಲ್ಲ ಅದು. ಅವ ಅಮೆರಿಕಕ್ಕೆ ಹೋದ ಮೇಲೆ ನಮ್ಮ ಯಾರ ಸಂಪರ್ಕದಲ್ಲಿಯಾದರೂ ಇದ್ದನಾ.. ನಮ್ಮೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಬಿಡು. ಅಪ್ಪ ಅಮ್ಮನ ಬಗ್ಗೆ ಸಹ ತಿಳಿದುಕೊಳ್ಳುವ ಆಸಕ್ತಿಯನ್ನೂ ತೋರಿಸದ ಅವನ ಬಗ್ಗೆ ಏನು ಹೇಳುವುದು’

‘ಅದು ಸರಿ ಅಣ್ಣ. ಅಪ್ಪ ಅಮ್ಮನ ಬಗ್ಗೆ ವಿಚಾರಿಸಬೇಕು. ತನ್ನ ಬಗ್ಗೆ, ತನ್ನ ಅಲ್ಲಿನ ಬದುಕಿನ ಬಗ್ಗೆ ಅವರಿಗೆ ಹೇಳಬೇಕು ಎಂದು ಮನಸಿಗೆ ಬರುವುದೇ ಇಲ್ಲವೇ. ಅದು ಬಿಡು. ನಾನೇ ಅಲ್ಲಿಗೆ ಹೋದಾಗಲೂ ನನ್ನನ್ನು ನೋಡಲು ಬರಬೇಕು ಎಂದೂ ಅನ್ನಿಸದವನಿಗೆ ಏನು ಹೇಳುವುದು ಹೇಳು’ ಆ ವಿಷಯ ಮಾತಾಡುವಾಗಲೆಲ್ಲ ಅಂತ್ಯನ ಕಂಠ ಗದ್ಗದವಾಗುತ್ತದೆ. ಆಗ ತಾನೆಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದೆ. ಅನಂತಣ್ಣ ಬರುತ್ತಾನೆ.

ಪ್ರದರ್ಶನದಲ್ಲಿ ನನ್ನ ಪಾತ್ರವನ್ನು ಮತ್ತು ಮತ್ತು ತಂಡದಲ್ಲಿ ಉಳಿದವರು – ಮೇಷ್ಟ್ರು ಸೇರಿದಂತೆ- ತನಗೆ ಮರ್ಯಾದೆ ಕೊಡುವುದನ್ನು ಕಂಡು ಹೆಮ್ಮೆ ಪಡುತ್ತಾನೆ ಎಂದು ಎಷ್ಟೆಲ್ಲ ನಿರೀಕ್ಷೆಯನ್ನಿಟ್ಟು ಕೊಂಡಿದ್ದೆ. ಅದೆಲ್ಲವನ್ನೂ ಹುಸಿ ಮಾಡಿದ್ದಷ್ಟೇ ಅಲ್ಲ ಉಳಿದವರ ದೃಷ್ಟಿಯಲ್ಲಿ ತಾನು ಎಷ್ಟು ಸಣ್ಣವನಾಗುವಂತೆ ಮಾಡಿದನಲ್ಲ ಎನ್ನುವ ನೋವು ಮರುಕಳಿಸುತ್ತದೆ. 

‘ಹೋಗಲಿ ಬಿಡು ಅಂತ್ಯ. ಅವನು ಹೀಗೇ ಎಂದು ನಮಗೆ ಮೊದಲಿನಿಂದಲೇ ಗೊತ್ತಿತ್ತು ಅಲ್ಲವೇ. ಹೈಸ್ಕೂಲಿಗೆ ಹೋಗುವಾಗಿನಿಂದಲೂ ಅವನು ಹಾಗೇ ಇದ್ದುದಲ್ಲವೆ..’

ಒಮ್ಮೆಯಂತೂ ಇವರ ಎಲ್ಲ ಜಾಗ್ರತೆಯ ಹೊರತಾಗಿಯೂ ಇವರು ಮಾತಾಡಿಕೊಳ್ಳುತ್ತಿರುವುದನ್ನು ಅಮ್ಮ ಕೇಳಿಸಿಕೊಂಡವಳು ನೇರವಾಗಿ ಇವರು ಮಾತಾಡುತ್ತಿದ್ದಲ್ಲಿಗೇ ಬಂದು `ಅಲ್ಲ ಮಕ್ಕಳೇ ನಾನು ಅಂದೇ ಹೇಳಿದ್ದೆನಲ್ಲವೇ ನನಗೆ ನೀವಿಬ್ಬರೇ ಮಕ್ಕಳು ಎಂದು. ಇನ್ನೂ ಯಾಕೆ ಅವನ ಬಗ್ಗೆ ಮಾತಾಡಿ ಮಂಡೆ ಹಾಳು ಮಾಡಿಕೊಳ್ಳುತ್ತೀರಿ’ ಎಂದಳು. ಇವರಿಬ್ಬರಿಗೂ ಗಾಬರಿ. ಅದನ್ನು ಗಮನಿಸಿದ ಆಕೆ ‘ಊಟ ರೆಡಿಯಾಗಿದೆ. ಎಲ್ಲರೂ ಒಟ್ಟಿಗೆ ಊಟ ಮಾಡುವ ಎಂದು ಕರೆಯಲು ಬಂದೆ. ನೀವಾಡುತ್ತಿದ್ದ ಮಾತು ಕಿವಿಯ ಮೇಲೆ ಬಿತ್ತು ಅಷ್ಟೆ. ನೀವೇನೂ ಚಿಂತೆ ಮಾಡಬೇಡಿ. ನಾನು ಸರಿಯಾಗಿಯೇ ಇದ್ದೇನೆ’ ಎಂದವಳನ್ನು ಇಬ್ಬರೂ ಹಿಂಬಾಲಿಸಿದ್ದರು.

ಅವಳೇ ಹೇಳಿದಂತೆ ಅಮ್ಮ ಇವರೆಂದುದನ್ನು ಕೇಳಿಸಿಕೊಂಡೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅದೇ ಮಕ್ಕಳಿಬ್ಬರಿಗೂ ದೊಡ್ಡ ಸಮಾಧಾನದ ವಿಷಯ. ಅಪ್ಪನೊಂದಿಗೂ ಅದನ್ನು ಹೇಳಿಕೊಂಡರು. ಅವರೂ ಅದನ್ನೇ ಹೇಳಿದವರು ‘ಏನೂ ತೊಂದರೆಯಿಲ್ಲ. ಅವಳು ಪೂರ್ತಿಯಾಗಿ ಸರಿಯಾಗಿದ್ದಾಳೆ ಈಗ. ಆದರೂ ಅನಂತನ ಸುದ್ದಿ ಮಾತಾಡುವಾಗ ಮಾತ್ರ ಸ್ವಲ್ಪ ಜಾಗ್ರತೆ ಮಾಡಿ. ಸಾಧ್ಯವಾದಷ್ಟು ಅವಳ ಕಿವಿಯ ಮೇಲೆ ಬೀಳದಿರುವುದೇ ಒಳ್ಳೆಯದು’ ಎಂದೂ ಸೇರಿಸಿದರು.

ಅಮ್ಮ ಸರಿಯಾದದ್ದು ಆದಿ ಮತ್ತು ಅಂತ್ಯ ಇಬ್ಬರಲ್ಲೂ ಹೊಸ ಹುರುಪು ಮೂಡಿಸಿತು. ತಮ್ಮ ಮಾಮೂಲಿ ಚಟುವಟಿಕೆಗಳಲ್ಲಿ ಪುನಃ ಉತ್ಸಾಹದಿಂದ ತೊಡಗಿಕೊಂಡರು. ಆದಿಯದ್ದು ಅದೇ. ಸಮಾಜ ಸೇವೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ಇವನೆಡೆಗೆ ಬೇಕೆಂದು ಬಂದವರು ಯಾರೂ ಖಾಲಿ ಕೈಯ್ಯಲ್ಲಿ ತಿರುಗಿ ಹೋಗದಂತೆ ನೋಡಿಕೊಳ್ಳುವುದು. ಹಾಗೆಯೇ ಊರಿನಲ್ಲಿನ ಉಳಿದ ಉತ್ಸಾಹಿಗಳ ಜೊತೆ ಸೇರಿಕೊಂಡು ಊರಿಗೆ ಒಳಿತಾಗುವಂತಹ ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುವುದು. ಹಣ ಸಹಾಯಕ್ಕೆ ಸಹಜವಾಗಿಯೇ ಜನರ ಹತ್ತಿರ ಕೇಳುವುದು ಇದ್ದೇ ಇದೆಯಲ್ಲ. ಮನಸ್ಸಿದ್ದವರು ಕೊಡುತ್ತಾರೆ. ಇನ್ನು ಕೆಲವರು ಆದಿ ಬಂದಿದ್ದಾನಲ್ಲ ಎಂದೂ ಕೊಡುತ್ತಾರೆ. ಮುಂದೊ೦ದು ದಿನ ತಮಗೆ ತೀರ ಅಗತ್ಯಕ್ಕೆ ಒದಗುವವನು ಅವನೇ ಎನ್ನುವುದನ್ನು ಯಾವತ್ತೋ ಕಂಡುಕೊ೦ಡವರು ಅವರು. ಇಷ್ಟೆಲ್ಲ ಆಗಿಯೂ ಎಲ್ಲಿಯಾದರೂ ಹಣ ಸಾಲದೆ ಬಂದರೆ ಆದಿಯಂತೂ ಇದ್ದೇ ಇದ್ದಾನಲ್ಲ. ಯಾವತ್ತೂ ಹಮ್ಮಿಕೊಂಡ ಚಟುವಟಿಕೆ ಹಣದ ಕೊರತೆಯಿಂದ ಅರ್ಧಕ್ಕೇ ನಿಲ್ಲಲು ಬಿಟ್ಟವನೇ ಅಲ್ಲ ಅವನು. ಸ್ವಂತ ಕಿಸೆಯಿಂದ ಎಷ್ಟು ಹೋಗುತ್ತದೆ ಎಂದು ಲೆಕ್ಕ ಇಟ್ಟವನೂ ಅಲ್ಲ. ಈಗೀಗ ಅವನ ಚಟುವಟಿಕೆಯ ಹರಹನ್ನು ಕಂಡ ಅಪ್ಪನೂ ಮಾತನಾಡುವುದಿಲ್ಲ.

ಅಂತ್ಯನೂ ಅಷ್ಟೆ. ತಾನು ಮುಗಿಸಬೇಕಿದ್ದ ಪುಸ್ತಕದ ಬಗ್ಗೆ ಗಂಭೀರವಾಗಿ ಗಮನ ಹರಿಸಲು ಪ್ರಾರಂಭಿಸಿದ. ವಾರಾಂತ್ಯಕ್ಕೆ ಮನೆಗೆ ಬಂದರೂ ಅಮ್ಮನೊಂದಿಗೆ ಒಂದಿಷ್ಟು ಮಾತನಾಡಿದ್ದು ಆಯಿತೆಂದರೆ ಮತ್ತೆ ಆ ಪುಸ್ತಕದಲ್ಲಿಯೇ ಮುಳುಗಿ ಬಿಡುತ್ತಿದ್ದ. ಊಟಕ್ಕೂ ಅಮ್ಮ ಹೋಗಿ ಎಬ್ಬಿಸಬೇಕಿತ್ತು. ಶಾಸ್ತ್ರೀಗಳು ಮತ್ತು ಮಂಗಳೂರಿನ ಪ್ರೊಫೆಸರರೇ ಮೆಚ್ಚಿ ಹೊಗಳಿದ್ದರೂ ಅವನೇ ಈಗ ಪುನಃ ಪುನಃ ಓದಿ ಕೆಲ ಅಧ್ಯಾಯಗಳನ್ನು ತಿದ್ದಿ ಸರಿಪಡಿಸಲು ಪ್ರಾರಂಭಿಸಿದ. ಹಾಗೆಯೇ ಆ ಎಲ್ಲ ಬದಲಾವಣೆಗಳನ್ನೂ ಮಧ್ಯ ಮಧ್ಯ ಶಾಸ್ತ್ರೀಗಳಿಗೆ ಮತ್ತು ಆಗಾಗ ಭೇಟಿ ನೀಡುತ್ತಿದ್ದ ಪ್ರೊಫೆಸರರಿಗೆ ತೋರಿಸುವುದನ್ನು ಮಾತ್ರ ಬಿಡಲಿಲ್ಲ. ಹಾಗೆ ಪ್ರತಿಯೊಂದು ಬದಲಾವಣೆಯನ್ನು ನೋಡಿದ ಇಬ್ಬರೂ ಮೆಚ್ಚಿಗೆಯ ಹೊನಲನ್ನೇ ಹರಿಸುತ್ತಿದ್ದರು. ಒಂದು ಬಾರಿಯಂತೂ ಪ್ರೊಫೆಸರರು ‘ಅಂತ್ಯ ಹೀಗೇ ಮುಂದುವರಿದರೆ ರಾಷ್ಟ್ರ ಮಟ್ಟದ ಖ್ಯಾತಿಗಳಿಸುವುದಂತೂ ಖಂಡಿತ’ ಎಂದೇ ಬಿಟ್ಟರು.

ಅಂತ್ಯನಿಗೆ ಹೆಸರು ಗಳಿಸುವ ಬಯಕೆ ಅಷ್ಟು ತೀವ್ರವಾಗಿಲ್ಲದಿದ್ದರೂ ಮಾಡಿದ ಕೆಲಸ ಶ್ರೇಷ್ಠವಾಗಬೇಕೆನ್ನುವ ತುಡಿತ ಮಾತ್ರ ಹೆಚ್ಚಾಗಿಯೇ ಇದೆ.

। ಇನ್ನು ನಾಳೆಗೆ ।

‍ಲೇಖಕರು Admin

June 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: