ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಮ್ಮ ತಂದೆಯವರ ಉನ್ನತ ಆದರ್ಶಗಳು: ರಮಾಕಾಂತ್ ಮತ್ತು ರತ್ನಮಾಲಾ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

15

ನಮ್ಮ ತಂದೆಯವರ ಉನ್ನತ ಆದರ್ಶಗಳು: ರಮಾಕಾಂತ್ ಮತ್ತು ರತ್ನಮಾಲಾ…


ಶ್ರೀಕಂಠನ್ ಮತ್ತು ಮೈತ್ರೇಯಮ್ಮನವರ ಹಿರಿಯ ಪುತ್ರ ರಮಾಕಾಂತ್ ಸ್ವತಂತ್ರವಾಗಿ ಕಛೇರಿ ನೀಡುವ ಸಂಗೀತಗಾರರಾಗಿ ವಿಕಸನಗೊಂಡರು. ಕಳೆದ ನಾಲ್ಕು ದಶಕಗಳಲ್ಲಿ ಅವರು ತಮ್ಮ ತಂದೆಯ ಬಹುತೇಕ ಕಛೇರಿಗಳಲ್ಲಿ, ಅವರ ಜೊತೆಯಲ್ಲಿ ‘ಕಂಠಸಹಕಾರ ಆರ್.ಎಸ್. ರಮಾಕಾಂತ್’ ಎಂದಲ್ಲ, ಅದು ದ್ವಂದ್ವಗಾಯನ ಎನಿಸುವಂತೆ ಹಾಡಿದ್ದಾರೆ. ವೇದಿಕೆಯ ಮೇಲೆ ಕಂಡುಬರುವ ಈ ಜೋಡಿ ಕೇವಲ ತಂದೆ-ಮಗನದಲ್ಲ, ಗುರು-ಶಿಷ್ಯರದಲ್ಲ. ಅದು, ತಂದೆಗೆ ಸದೃಶವಾದ ಕಂಠಸಿರಿ ಮತ್ತು ಸೃಜನಶೀಲತೆಯನ್ನು ಹೊಂದಿರುವ ಮಗ ತಂದೆಯ ಜೊತೆಗೂಡಿ, ಅವರ ಹಾಡಿಕೆಯನ್ನೇ ಮಾರ್ದನಿಸುವಂಥದ್ದೇನನ್ನೋ ಸೃಷ್ಟಿಸುವ ಜೋಡಿ.

ಮೈತ್ರೇಯಮ್ಮ ಹೇಳುತ್ತಾರೆ: “ಮನೆಯಲ್ಲಿ ನಡೆಯುವ ಸಂಗೀತದ ಎಲ್ಲ ತರಗತಿಗಳಲ್ಲಿ ನಾನು ರಮಾಕಾಂತ್ ಮತ್ತು ರತ್ನಮಾಲಾರನ್ನು ಕೂರಿಸುತ್ತಿದ್ದೆ. ಆಗ ಅವರಿಬ್ಬರೂ ಇನ್ನೂ ತುಂಟತನ ತುಂಬಿದ್ದ ಚಿಣ್ಣರು. ಸಂಗೀತವನ್ನು ಕೇಳುವ ತಾಳ್ಮೆಯಾಗಲೀ, ಅಭ್ಯಾಸ ಮಾಡುವ ಪಕ್ವತೆಯಾಗಲೀ ಅವರಲ್ಲಿಲ್ಲದ ಆ ದಿನಗಳಲ್ಲಿ ನಾನು ಅವರಿಬ್ಬರನ್ನೂ ಕಿಟಕಿಯ ಗೂಡಿನಲ್ಲಿ ಕೂರಿಸಿ, ಕೋಣೆಯೊಳಗೆ ವಿದ್ಯಾರ್ಥಿಗಳು ಹಾಡುತ್ತಿರುವುದನ್ನು ಕೇಳುವಂತೆ ಮಾಡುತ್ತಿದ್ದೆ. ರಮಾಕಾಂತ್ ಇನ್ನೂ ಆರು ವರ್ಷದವನಾಗಿರುವಾಗಲೇ ವಿದ್ಯಾರ್ಥಿಗಳು ಹಾಡುತ್ತಿದ್ದ ಕೆಲವು ಸಾಲುಗಳನ್ನು ಗುನುಗಿಕೊಳ್ಳುತ್ತಿದ್ದ. ಅವನೊಳಗೆ ಸಂಗೀತ ತುಂಬಿತ್ತು. ಅವನು ತನ್ನ ದೊಡ್ಡಪ್ಪ ವೆಂಕಟರಾಮಾಶಾಸ್ತ್ರೀಗಳಿ೦ದ ಮತ್ತು ತನ್ನ ತಂದೆಯಿ೦ದ ಸಂಗೀತ ಶಿಕ್ಷಣ ಪಡೆಯುವ ಮೊದಲೇ, ಎಂಟು ವರ್ಷದವನಾಗಿರುವಾಗಲೇ ಸ್ವತಂತ್ರವಾಗಿ ಹಾಡುತ್ತಿದ್ದ.

ದಂತಕಥೆ ಖ್ಯಾತಿಯ ಒಬ್ಬ ಸಂಗೀತಗಾರನಿರುವ ಮನೆಯಲ್ಲಿ ಬೆಳೆಯುವ ಅನುಭವ ಹೇಗಿತ್ತು? ರಮಾಕಾಂತ್ ಹೇಳುತ್ತಾರೆ, “ಪ್ರಸಿದ್ಧ ಕವಿಗಳು ಮತ್ತು ಸಾಹಿತಿಗಳಿಂದ ಅತಿ ದೊಡ್ಡ ಸಂಗೀತಗಾರರು ಮತ್ತು ಸಭಾ ಸಂಘಟಕರವರೆಗೆ ದೇಶದ ವಿವಿಧ ಮೂಲೆಗಳಿಂದ ನಮ್ಮ ಮನೆಗೆ ಅತಿಥಿಗಳು ನಿರಂತರವಾಗಿ ಬರುತ್ತಿದ್ದರು. ಆದರೆ ನಮ್ಮ ತಂದೆ ತಮ್ಮ ಜೀವನಶೈಲಿಯನ್ನು ಮಾತ್ರ ಬದಲಾಯಿಸಲಿಲ್ಲ. ಅವರು ಎಂದಿನ೦ತೆ ತಮ್ಮ ಬೇರುಗಳೊಂದಿಗೆ ಸಂಪರ್ಕವನ್ನಿರಿಸಿಕೊ೦ಡು ಸರಳವಾಗಿಯೇ ಇದ್ದುಬಿಟ್ಟರು. ಇಸ್ರೋದ ಉನ್ನತಾಧಿಕಾರಿಗಳಾದ ಶ್ರೀ ರಾಧಾಕೃಷ್ಣನ್ ರವರೇ ಮನೆಗೆ ಪಾಠಕ್ಕೆ ಬರಲಿ, ಪ್ರೌಢಪಾಠಗಳಿಗಾಗಿ ಪ್ರಸಿದ್ಧ ಗಾಯಕರೇ ಬರಲಿ, ಕರ್ನಾಟಕ ಸಂಗೀತ ಲೋಕದ ದಿಗ್ಗಜರು ‘ಅಣ್ಣ’ನನ್ನು ನೋಡಲೆಂದು ಬರಲಿ, ಆರ್.ಕೆ.ಎಸ್ ತಾವು ಐವತ್ತು ವರ್ಷಗಳ ಹಿಂದೆ ಶೇಷಾದ್ರಿಪುರದಲ್ಲಿ ಕಟ್ಟಿಸಿದ ಮನೆಗೇ ಅಂಟಿಕೊಡಿದ್ದುಬಿಟ್ಟರು. ಒಂದು ಮಟ್ಟವನ್ನು ಮೀರಿ ಅಲ್ಲಿನ ಕಿರಿದಾದ ಕೋಣೆಗಳ ಬಗ್ಗೆ ನಮಗೂ ಚಿಂತೆ ಎನಿಸಲಿಲ್ಲ!”

“ನಮ್ಮ ತಂದೆಗೆ ಎಲ್ಲರ ಮತ್ತು ಎಲ್ಲದರ ಕುರಿತು ಇದ್ದ ಸಮಾಧಾನಪರ ಧೋರಣೆ, ಅವರ ಶಾಂತ ಮನೋಭಾವ, ತಾವು ಗಳಿಸಿದ ಪ್ರಸಿದ್ಧಿಯಿಂದ ವಿಚಲಿತಗೊಳ್ಳದ ಸಭ್ಯ ಮುಖಮುದ್ರೆ ಮತ್ತು ಎಂದೂ ಉದ್ವಿಗ್ನಗೊಳ್ಳದ ಚಿತ್ತವೃತ್ತಿ ನಮ್ಮೆಲ್ಲರ ಮೇಲೂ ಪ್ರಭಾವ ಬೀರಿದೆ. ಹೆಸರು, ಕೀರ್ತಿ ಮತ್ತು ಮನ್ನಣೆಗಳನ್ನು ಅವರು ಸಮಭಾವದಿಂದ ನಿರ್ವಹಿಸಿದರು.”

ತಮ್ಮ ತಂದೆಯೊಡನೆ ಹಾಡುವುದು ದಿನಚರಿಯೇ ಆದರೂ, ಜೊತೆಜೊತೆಯಲ್ಲಿ ರಮಾಕಾಂತ್ ದೇಶವಿದೇಶಗಳ ಪ್ರಮುಖ ಸಭೆಗಳ ಆಶ್ರಯದಲ್ಲಿ ನೀಡುತ್ತಿದ್ದ ಸ್ವತಂತ್ರ ಕಛೇರಿಗಳು ಅವರಿಗೆ ತಮ್ಮದೇ ಆದ ಕೀರ್ತಿಯನ್ನು ತಂದುಕೊಡಲು ಸಹಕಾರಿಯಾದವು. “ಶ್ರೀಕಂಠನ್ ರವರ ಪುತ್ರನಾಗಿರುವುದು ವರದಾನವೇ ಸರಿ. ನಾನು ಸಾಧಿಸಿದ್ದೆಲ್ಲವೂ ಇಲ್ಲಿಂದಲೇ ಪ್ರಾರಂಭಗೊ೦ಡದ್ದು ಎನ್ನುವುದೂ ನಿಜ. ಆದರೆ ಇದಕ್ಕಿರುವ ಮತ್ತೊಂದು ಆಯಾಮ ಎಂದರೆ, ನನ್ನಿಂದ ಜನ ಬಹಳ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ನಮ್ಮ ತಂದೆಯವರು ನನ್ನಲ್ಲಿಟ್ಟಿರುವ ನಂಬಿಕೆಗೆ ಮತ್ತು ನನ್ನಲ್ಲಿ ನಮ್ಮ ತಂದೆಯವರನ್ನು ಕಾಣಲು ಬಯಸುವ ಜನರ ಭರವಸೆಗೆ ಸರಿದೂಗುವಂತೆ ಹಾಡುವುದು ನಿಜಕ್ಕೂ ಒಂದು ಸವಾಲು” ಎನ್ನುತ್ತಾರೆ ರಮಾಕಾಂತ್.

ರಮಾಕಾ೦ತ್ ಕರ್ನಾಟಕ ಸರ್ಕಾರ ಮೈಸೂರು ಅರಮನೆಯ ದರ್ಬಾರ್ ಹಾಲಿನಲ್ಲಿ ನಡೆಸುವ ದಸರಾ ಸಂಗೀತೋತ್ಸವದಲ್ಲಿ, ಕರ್ನಾಟಕದ ಕನ್ನಡ ಸಂಸ್ಕೃತಿ ಇಲಾಖೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದೊ೦ದಿಗೆ ಜಂಟಿಯಾಗಿ ಪ್ರಾಯೋಜಿಸುವ ಸೋಮನಾಥಪುರ ದೇವಸ್ಥಾನದ ವಾರ್ಷಿಕ ಸಾಂಸ್ಕೃತಿಕ ಉತ್ಸವದಲ್ಲಿ, ಸಾರ್ಕ್ ಉತ್ಸವದಲ್ಲಿ, ಸೂರ್ಯ ಉತ್ಸವದಲ್ಲಿ, ಇನ್ನಿತರ ಸಂಗೀತೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಸ್ವತಂತ್ರ ಗಾಯಕರಾಗಿ ಅವರು ಯು.ಕೆ, ಸ್ವಿಟ್ಜರ್‌ಲ್ಯಾಂಡ್, ಯು.ಎಸ್, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಭೇಟಿ ನೀಡಿದ್ದಾರೆ. ತಮ್ಮ ತಂದೆಯವರೊ೦ದಿಗೆ ಮಾಡುವ ಸಹಗಾಯನ ಅವರನ್ನು ಇನ್ನಿತರ ಸ್ಥಳಗಳಿಗೆ ಮತ್ತು ದೇಶಗಳಿಗೂ ಕಂಡೊಯ್ದಿದೆ. ರಮಾಕಾಂತ್ ಎ-ಟಾಪ್ ಕಲಾವಿದರಾಗಿ ಆಕಾಶವಾಣಿ ದಕ್ಷಿಣವಲಯ ಸಂಗೀತ ಕಛೇರಿಯಲ್ಲಿ, ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮತ್ತು ರೇಡಿಯೋ ಸಂಗೀತ ಸಮ್ಮೇಳನ ಕಛೇರಿಗಳಲ್ಲಿ ಹಾಡಿದ್ದಾರೆ. ಅವರನ್ನರಸಿ ಬಂದ ಹಲವು ಪ್ರಶಸ್ತಿಗಳಲ್ಲಿ, ೧೯೭೫ರಲ್ಲಿ ಲಭಿಸಿದ ಬೆಂಗಳೂರು ಗಾಯನ ಸಮಾಜದ ‘ಅತ್ಯುತ್ತಮ ಸಂಗೀತಗಾರ ಪ್ರಶಸ್ತಿ’ ಮತ್ತು ೧೯೯೨ರಲ್ಲಿ ಮ್ಯೂಸಿಕ್ ಅಕಾಡೆಮಿಯಿಂದ ಅತ್ಯುತ್ತಮ ರಾಗಾಲಾಪನೆಗಾಗಿ ಲಭಿಸಿದ ಶ್ರೀಪಾದ ಪಿನಾಕಪಾಣಿ ಪ್ರಶಸ್ತಿಗಳು ಮುಖ್ಯವಾದವು.

ಅಂತರರಾಷ್ಟ್ರೀಯ ಯುವ ವರ್ಷದಲ್ಲಿ ಬೆಂಗಳೂರಿನ ಮೂರು ಸಂಸ್ಥೆಗಳು ‘ಸಂಗೀತ ಕಲಾ ಪ್ರವೀಣ’, ‘ಸ್ವರ ಲಯ ಶೃಂಗ’ (ಸುಸ್ವರಲಯ ಸಭೆ) ಮತ್ತು ಆಸ್ಥಾನ ವಿದ್ವಾನ್ (ಕಂಚಿ ಕಾಮಕೋಟಿಪೀಠ) ಎಂಬ ಬಿರುದುಗಳನ್ನು ನೀಡಿ ಪುರಸ್ಕರಿಸಿವೆ.

ಶ್ರೀಕಂಠನ್ ರವರ ಮಗನಾಗಿ ರಮಾಕಾಂತ್ ರವರು ಕೇವಲ ಸಂಗೀತದಲ್ಲಿ ಪ್ರವೀಣರಲ್ಲ. ಶ್ರೀಕಂಠನ್ ತಮ್ಮ ಮಕ್ಕಳಿಗೆ ಅಧ್ಯಯನ ಮತ್ತು ಉದ್ಯೋಗದಲ್ಲಿ ಅತ್ಯುತ್ತಮ ಅವಕಾಶಗಳು ದೊರೆಯುವಂತೆ ಕಾಳಜಿ ವಹಿಸಿದರು. ರಮಾಕಾಂತ್ ಎಂ.ಎಸ್ಸಿ. ಪದವಿ ಪಡೆದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಹಿರಿಯ ರಿಸರ್ಚ್ ಫೆಲೋ ಆಗಿ ಸೇವೆ ಸಲ್ಲಿಸಿದ್ದಲ್ಲದೆ, ಜೊತೆಜೊತೆಗೆ ಕಾಲೇಜೊಂದರಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ೨೦೦೭ರಲ್ಲಿ ನಿವೃತ್ತಿ ಹೊಂದಿದರು.

ರಮಾಕಾ೦ತ್ ಯಾವುದನ್ನು ತಮಗೆ ಸಂದ ವಿಶೇಷ ಗೌರವ ಎಂದು ಪರಿಗಣಿಸುತ್ತಾರೆ- ಇಷ್ಟು ವರ್ಷಗಳ ಕಾಲ ತಮ್ಮ ತಂದೆಯವರ ಜೊತೆ ಹಾಡಿದುದನ್ನೋ ಅಥವಾ ‘ಶ್ರೀಕಂಠನ್ ಪದ್ಧತಿ’ಗೆ ಬದ್ಧರಾಗಿರುವುದನ್ನೋ? “ಎರಡೂ ಕೂಡ ನಿತ್ರಾಣಕರವೂ ಹೌದು, ಆಹ್ಲಾದಕರವೂ ಹೌದು. ಶ್ರೀಕಂಠನ್ ರವರ ಪುತ್ರನಾಗಿರುವುದು ನನ್ನ ವಿಷಯದಲ್ಲಿ ಸಕಾರಾತ್ಮಕವಾಗಿಯೂ ನಕಾರಾತ್ಮಕವಾಗಿಯೂ ಸಮಪ್ರಮಾಣದಲ್ಲಿ ಕೆಲಸ ಮಾಡಿದೆ. ನಮ್ಮ ಮನೆತನದ ಮತ್ತು ನಮ್ಮ ತಂದೆಯವರ ಮೌಲ್ಯಗಳಿಗೆ ಹಾಗೂ ಸಮಕಾಲೀನ ಬೇಡಿಕೆಗಳಿಗೆ ಬದ್ಧನಾಗಿರುವುದು ಸದಾ ನನ್ನ ಪಾಲಿಗೆ ದ್ವಂದ್ವ ಎನಿಸಿದೆ ಮತ್ತು ಕ್ಲಿಷ್ಟಕರ ಸನ್ನಿವೇಶವನ್ನು, ಪರೀಕ್ಷೆಯನ್ನು ನನ್ನ ಮುಂದೊಡ್ಡಿದೆ.

ಈ ಉದಾಹರಣೆಯನ್ನು ತೆಗೆದುಕೊಳ್ಳಿ. ಶ್ರೀಕಂಠನ್ ರವರು ಹೇಳುವಂತೆ ತುಂಬು ಕಂಠದ ಗಾಯನಕ್ಕೆ ಅದರದೇ ಆದ ಲಾಭಗಳಿವೆಯಾದರೂ ಅದು ತನ್ನ ಶಾರೀರಕ್ಕೆ ಹೊಂದುವುದಿಲ್ಲ’ ಎನ್ನುವುದು ರಮಾಕಾಂತ್ ರವರ ನಂಬಿಕೆ. ತುಂಬು ಕಂಠದ ಗಾಯನವನ್ನು ಇಂದಿನ ಶ್ರೋತೃಗಳು ಇಷ್ಟಪಡಲಾರರು. ಅವರೆನ್ನುತ್ತಾರೆ: “ಸಂಗೀತಕ್ಕೆ ಸಂಬ೦ಧಪಟ್ಟ೦ತೆ ನಾನು ನನ್ನ ಮನೆತನದ ಚಿರಕಾಲದ ಮೌಲ್ಯಗಳಿಂದ ಜೀವಶಕ್ತಿಯನ್ನು ಹೀರಿಕೊಂಡಿದ್ದೇನೆ. ಆದರೆ ನನ್ನ ಶೈಲಿಗೆ ಮತ್ತು ಕಛೇರಿ ಹಾಡಿಕೆಗೆ ಆಧುನಿಕತೆಯ ಸ್ಪರ್ಶವನ್ನೂ ಕೊಟ್ಟಿದ್ದೇನೆ. ೧೯೬೫ರಿಂದ ನಾನು ಸ್ವತಂತ್ರವಾಗಿ ಕಛೇರಿಗಳನ್ನು ನೀಡುತ್ತಿದ್ದೇನೆ.”ಎಂದು.

ಆದರೆ ತಮ್ಮ ನಂಬಿಕೆಗಳನ್ನು ಜನರಿಗೆ ತಲುಪಿಸುವಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ? ರಮಾಕಾಂತ್ ನುಡಿಯುತ್ತಾರೆ: “ನಿಜ ಹೇಳಬೇಕೆಂದರೆ, ನಾನು ನಮ್ಮ ತಂದೆಯವರ ಜೊತೆಯಲ್ಲಿ ಹಾಡುವಾಗ ಗಾಯನದಲ್ಲಿ ತರುವ ಸೂಕ್ಷ್ಮಗಳು ಎದ್ದುಕಾಣುವಂಥವಲ್ಲ. ನಂತರ ಸಿಗುವ ಪ್ರತಿಕ್ರಿಯೆಗಳು ಹಾಗೂ ಹೇಳಿಕೆಗಳು, ನಾನು ಪ್ರಸಿದ್ಧರಾದ ನಮ್ಮ ತಂದೆಯವರ ನೆರಳಿನಲ್ಲಿ ಹುದುಗಿರುವ ಸಂಗೀತ ವಿದ್ವಾಂಸ ಎಂದೇ ಅಭಿಪ್ರಾಯವನ್ನೇ ಧ್ವನಿಸುತ್ತವೆ. ಎಷ್ಟೋ ಸಾರಿ ನಾನು “ನಿಮ್ಮ ಭೈರವಿ ಬಹಳ ಚೆನ್ನಾಗಿತ್ತು. ಹೇಳಿಕೇಳಿ ನೀವು ಶ್ರೀಕಂಠನ್ ಅವರ ಮಗ!” ಎಂದು ಜನ ಹೇಳುವಂತಹ ಪರಿಸ್ಥಿತಿಯಲ್ಲಿ ವಿನೋದಕರವಾಗಿ ಸಿಲುಕಿಕೊಂಡುಬಿಡುತ್ತೇನೆ ಎನಿಸುತ್ತದೆ”

ನವಿರಾದ ಹಾಸ್ಯ ಶ್ರೀಕಂಠನ್ ರವರ ಸಮಾಧಾನದ ಮನೋವೃತ್ತಿಯೊಳಗಿಂದ ಇಣುಕುತ್ತದೆ: “ಎಲ್ಲಿವರೆಗೆ ಅವನು fusion ಮಾಡಲು ಹೋಗಿ ಹೆಚ್ಚು confusion ಅನ್ನು ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸುವುದಿಲ್ಲವೋ, ಅಲ್ಲಿಯವರೆಗೆ ನಾನು ಅವನ ನಂಬಿಕೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನನ್ನೊಂದಿಗೆ ವೇದಿಕೆಯ ಮೇಲೆ ಹಾಡುವಾಗ ಅವನು ಸಾಮಾನ್ಯವಾಗಿ ಬಹಳ ಎಚ್ಚರವಾಗಿರುತ್ತಾನೆ.”

ಫೋಟೋಗ್ರಫಿಯನ್ನು ೧೯೮೫ರಲ್ಲಿ ಪ್ರಾರಂಭಿಸಿದ ರಮಾಕಾಂತ್ ವನ್ಯಜೀವಿಗಳ ಮತ್ತು ಪ್ರಾಕೃತಿಕ ದೃಶ್ಯಗಳ ಓರ್ವ ಪ್ರಸಿದ್ಧ ಛಾಯಾಚಿತ್ರಗ್ರಾಹಕ. ಅವರು Associate of Royal Photographic Society, U.K., (ARPS), Associate of International Federation of Art Photography, France (AFIAP) ಳಂಥ ಅನೇಕ ಪ್ರಶಸ್ತಿಗಳನ್ನು ಹೆಗಲಿಗೆ ಏರಿಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ.

ಸುಮ್ಮನೆ ಹೀಗೊಂದು ಲಹರಿ…
ಮಗಳು ರತ್ನಮಾಲಾ ಶ್ರೀಕಂಠನ್ ರವರ ಬಳಿ ಸಂಗೀತಾಭ್ಯಾಸ ಪ್ರಾರಂಭಿಸಿದ್ದೇನೋ ಹೌದು. ಆದರೆ ಕ್ರಮೇಣ ಅವರು ಸಾರಯುತವೂ ಪದಲಾಲಿತ್ಯದ ಖನಿಯೂ ಆದ ಸುಗಮ ಸಂಗೀತದತ್ತ ತೇಲಿಹೋಗಿ, ಆ ಕ್ಷೇತ್ರದ ಮುಂಚೂಣಿಯಲ್ಲಿರುವ ಉತ್ತಮ ಕಲಾವಿದೆ ಎನಿಸಿಕೊಂಡರು. ಇದಕ್ಕೆ ಶ್ರೀಕಂಠನ್ ರವರ ಪ್ರೋತ್ಸಾಹ ಸದಾ ಇದ್ದೇ ಇತ್ತು. “ಅವಳು ಸುಗಮ ಸಂಗೀತವನ್ನು ಆರಿಸಿಕೊಂಡರೆ, ಒಬ್ಬ ಶಾಸ್ತ್ರೀಯ ಸಂಗೀತಗಾರನಾಗಿ ನಾನೇಕೆ ಅಸಮಾಧಾನ ಪಡೆಬೇಕು? ಜನ ಸಾಮಾನ್ಯವಾಗಿ ಈ ಪ್ರಶ್ನೆಯನ್ನು ಕೇಳುತ್ತಾರೆ. ಅವಳ ಪ್ರೀತಿಕರವೂ ಸಂಚಾರಸೌಲಭ್ಯವುಳ್ಳದ್ದೂ ಆದ ದನಿಯನ್ನು ಆಲಿಸುತ್ತ, ಪ್ರಸಿದ್ಧ ಕವಿಗಳಾದ ನಿಸಾರ್ ಅಹಮದ್, ಡಿ.ವಿ.ಜಿ, ಜಿ.ಎಸ್.ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್ಟ, ಚಂದ್ರಶೇಖರ ಕಂಬಾರರ ಅರ್ಥಗರ್ಭಿತವಾದ ಸಾಹಿತ್ಯದ ಭಾವಲೋಕವನ್ನು ಪ್ರವೇಶಿಸಿದರೆ, ಅದು ಶಾಸ್ತ್ರೀಯ ಸಂಗೀತಕ್ಕಿ೦ತ ಭಿನ್ನ ಎಂದು ನಿಮಗನಿಸುವುದೇ ಇಲ್ಲ. ಅದು ವಿಭಿನ್ನವಾದ ಒಂದು ಸಂಗೀತ ಪದ್ಧತಿ.ಸರಾಗವಾಗಿ ವಿಶಿಷ್ಟ ರೀತಿಯಲ್ಲಿ ಪ್ರವಹಿಸುವ ಸಂಗೀತವನ್ನು ಆಸ್ವಾದಿಸಲು ನಿಮ್ಮ ಇಂದ್ರಿಯಗಳನ್ನು ಉದ್ಯುಕ್ತಗೊಳಿಸಬೇಕಷ್ಟೆ. ರತ್ನಮಾಲಾಳ ಭಾಗ್ಯದೇವತೆ ಅವಳನ್ನು ಸುಗಮ ಸಂಗೀತದತ್ತ ಕರೆದೊಯ್ದರೆ, ಯಥಾರ್ಥ ಸಂಗೀತಗಾರನಾದ ನಾನೇಕೆಅಸಂತುಷ್ಟನಾಗಬೇಕು?” ಎನ್ನುತ್ತಾರೆ ಶ್ರೀಕಂಠನ್.

ತನ್ನ ಆಸಕ್ತಿಯ ದಾರಿಯನ್ನು ಆರಿಸಿಕೊಳ್ಳುವಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟ ತಂದೆತಾಯಿಯರ ಬಗ್ಗೆ ರತ್ನಮಾಲಾ ಅವರಿಗೂ ಬಹಳ ಹೆಮ್ಮೆ. ತಾನು ಮತ್ತು ತನ್ನ ಸೋದರಸೋದರಿಯರು ತಮ್ಮತಮ್ಮ ಗುರಿಗಳನ್ನು ಸಾಧಿಸುವಲ್ಲಿ ತಮ್ಮ ತಂದೆತಾಯಿಯರು ನೀಡಿದ ಏಕಮನದ ಒತ್ತಾಸೆ-ಸಹಾಯಗಳ ಕುರಿತು ಅವರು ಭಾವುಕರಾಗಿ ಗಂಟೆಗಟ್ಟಲೆ ಮಾತನಾಡುತ್ತಾರೆ.

ರತ್ನಮಾಲಾರ ಕೆಲವು ಸುಗಮ ಸಂಗೀತದ ಧ್ವನಿಮುದ್ರಣಗಳು ಥಟ್ಟನೆ ಮನಸ್ಸನ್ನು ತಟ್ಟಿದರೆ, ಇನ್ನು ಕೆಲವು ಅತ್ಯಂತ ಜನಪ್ರಿಯಾವಾಗಿವೆ. ನಿತ್ಯೋತ್ಸವ (ನಿಸಾರ್ ಅಹಮದ್), ಅಂತಃಪುರಗೀತೆ (ಡಿ.ವಿ.ಗುಂಡಪ್ಪ), ಭಾವಸಂಗಮ (ಬೇರೆಬೇರೆ ಕನ್ನಡ ಕವಿಗಳು), ಮೈಸೂರು ಮಲ್ಲಿಗೆ (ಕೆ.ಎಸ್.ನರಸಿಂಹಸ್ವಾಮಿ), ನವೋದಯ (ಜಿ.ಎಸ್.ಶಿವರುದ್ರಪ್ಪ) ಮತ್ತು ಕೆಂದಾವರೆಯೇ (ಗೋಪಾಲಕೃಷ್ಣ ಅಡಿಗ)ದಂತಹ ಕೆಲವು ರೆಕಾರ್ಡಿಂಗ್‌ಗಳು ಜನಾನುರಾಗದ ನಿಚ್ಚಣಿಕೆಯಲ್ಲಿ ಉತ್ತುಂಗಕ್ಕೇರಿವೆ.

ಹೆಸರಾಂತ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಪ್ರಭಾತ್ ಕಲಾವಿದರ ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಬ್ಯಾಲೆಗಳಲ್ಲಿ ರತ್ನಮಾಲಾ ಹಾಡಿದ್ದಾರೆ. ಅವರು ಕಂಠದಾನ ಮಾಡಿರುವ ಜನಪ್ರಿಯ ಚಿತ್ರಗಳೆಂದರೆ ಒಂದು ಮುತ್ತಿನ ಕಥೆ, ಕರಿಮಾಯೀ ಮತ್ತು ಗುರಿ.

ಪಂಡಿತ್ ರವಿಶಂಕರ್ ರವರ ಆಹ್ವಾನದ ಮೇರೆಗೆ ಅವರು ೧೯೯೮ರಲ್ಲಿ ಯುಎಸ್‌ಎಸ್‌ಆರ್‌ನಲ್ಲಿ ನಡೆದ ಭಾರತ ಉತ್ಸವದಲ್ಲಿ ಹಾಡಿದ್ದು, ಅವರ ಸಂಗೀತ ಪಯಣದ ಮತ್ತೊಂದು ಮೈಲಿಗಲ್ಲು. ಬೆಂಗಳೂರಿನ ದೂರದರ್ಶನ ಕೇಂದ್ರದ ‘ಬೇಲೂರು-ಹಳೇಬೀಡು’ ಕುರಿತ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರದಲ್ಲಿ ಅವರು ಹಾಡಿದ ಗೀತೆಗಳು ಮತ್ತು ಶ್ಲೋಕಗಳು ತುಂಬ ಜನಪ್ರೀತಿಯನ್ನು ಗಳಿಸಿವೆ. ಇವೆಲವ್ಲೂ ಶಾಸ್ತ್ರೀಯ ಸಂಗೀತ ಕ್ಷೇತ್ರದ ವರೇಣ್ಯರ ಈ ಪುತ್ರಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪಡೆಯಲು ಎಡೆ ಮಾಡಿಕೊಟ್ಟಿವೆ. “ನಮ್ಮ ಮನೆ ‘ಗಂಭೀರ’ ಮತ್ತು ‘ಲಘು’ಗಳ ಸಂಗಮ. ಪ್ರತಿಯೊಂದು ಪದ್ಧತಿಯ ಶ್ರೀಮಂತಿಕೆಯನ್ನು ಮೆಚ್ಚುವುದರಲ್ಲಿ ಈ ಸಮ್ಮಿಲನದ ಸಾರ್ಥಕತೆ ಇದೆ” ಎನ್ನುತ್ತಾರೆ ರತ್ನಮಾಲಾ.

೧೯೭೫ರಲ್ಲಿ ಶ್ರೀಕಂಠನ್ ರವರ ಪುತ್ರ ರಮಾಕಾಂತ್ ಬೆಂಗಳೂರು ಆಕಾಶವಾಣಿಯಲ್ಲಿ ಸಂಗೀತದ ಆಡಿಷನ್‌ಗಾಗಿ ಹೋದಾಗ, ಅವರಿಗೆ ಬಿ-ಹೈ ಶ್ರೇಣಿ ದೊರೆಯಿತು. ಎ.ಐ.ಆರ್ ನಲ್ಲಿ ಕೆಲಸ ಮಾಡುತ್ತಿದ್ದ ದೊರೆಸ್ವಾಮಿ ಐಯ್ಯಂಗಾರರು, ಈ ಆಡಿಷನ್‌ನಲ್ಲಿ ರಮಾಕಾಂತ್ ಭಾಗವಹಿಸುವ ಬಗ್ಗೆ ಮೊದಲೇ ತಮಗೇಕೆ ತಿಳಿಸಿರಲಿಲ್ಲ ಎಂದು ಕೇಳಿದರು. ಆದರೆ ಸದಾ ಆದರ್ಶಗಳಿಗೆ ಬದ್ಧರಾಗಿರುವ ಶ್ರೀಕಂಠನ್ ಹೇಳಿದರು: “ಅವನು ತನ್ನ ಯೋಗ್ಯತೆಯನ್ನು ಸಾಬೀತುಪಡಿಸಿ, ಅದಕ್ಕೆ ತಕ್ಕ ಶ್ರೇಣಿಯನ್ನು ಪಡೆಯಲಿ. ಬಿತ್ತಿದಂತೆ ಬೆಳೆ” ಎಂದು.

ಮುಖಾರಿ, ಆಹಿರಿ, ವರಾಳಿ, ಮಧ್ಯಮಾವತಿ, ಸುರುಟಿಗಳಂಥ ಕೆಲವು ರಾಗಗಳು ಪಯಣದ ಅಂತ್ಯವನ್ನು ಸೂಸಿಸುವುದರಿಂದ, ಶಾಸ್ತ್ರರೀತ್ಯಾ ಇವನ್ನು ಗುರುಗಳು ಹೇಳಿಕೊಡುವಂತಿಲ್ಲ. ಸಂಪ್ರದಾಯಕ್ಕೆ ಅನುಸಾರವಾಗಿ, ಒಂದು ಸ್ತರಕ್ಕೇರಿದ ನಂತರ ವಿದ್ಯಾರ್ಥಿಗಳು ಇವನ್ನು ತಾವಾಗಿ ಕಲಿತುಕೊಳ್ಳತಕ್ಕದ್ದು. ಆದರೆ ಶ್ರೀಕಂಠನ್ ಹೇಳುತ್ತಾರೆ, “ಇದು ಹಠಮಾರಿತನದಿಂದ ಕೂಡಿದ ಸಂಪ್ರದಾಯಶರಣತೆ. ನಾವು ಪ್ರಗತಿಶೀಲರಾಗಿ ಪ್ರತಿಯೊಂದು ಆರೋಹಣ-ಅವರೋಹಣಗಳೂ ನಾದದ ವಿಗ್ರಹರೂಪ ಎನ್ನುವುದನ್ನು ತಿಳಿದುಕೊಳ್ಳಬೇಡವೆ?” ಎಂದು.

೧೯೮೦ರ ದಶಕದ ಪೂರ್ವಭಾಗದಲ್ಲಿ, ಅಂದಿನ ಸುಪ್ರಸಿದ್ಧ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿಯವರನ್ನು ‘ಸಂಪೂರ್ಣವಾಗಿ ದಾಸರ ಕೃತಿಗಳುಳ್ಳ ಕಛೇರಿ’ ನೀಡುವಂತೆ ಭಾರತೀಯ ವಿದ್ಯಾಭವನ ಕೇಳಿಕೊಂಡಿತು. ಅವರು ಭವನದ ಅಧಿಕಾರಿಗಳಿಗೆ ಹೇಳಿದರು, “ದಾಸರಪದಗಳ ಕುರಿತು ಆಧಿಕಾರಿತೆಯುಳ್ಳ ಶ್ರೀಕಂಠನ್ ಅವರಂಥವರು ಇರುವಾಗ, ನಾನೇಕೆ ಭಯಪಡಲಿ?” ಎಂದು. ಶ್ರೀಕಂಠನ್ ಹೇಳುತ್ತಾರೆ, “ನಾನು ಅವರಿಗೆ ೧೨ ಪದಗಳನ್ನು ಹೇಳಿಕೊಟ್ಟೆ. ಪುರಂದರದಾಸರ ‘ನಾರಾಯಣ ನಿನ್ನ ನಾಮದ ಸ್ಮರಣೆಯ” ಎನ್ನುವುದು ಇವುಗಳಲ್ಲಿ ಒಂದು. ಇದಕ್ಕೆ ನಾನು ಶುದ್ಧಧನ್ಯಾಸಿ ರಾಗವನ್ನು ಸಂಯೋಜಿಸಿದ್ದೆ. ಎಂ.ಎಸ್. ಅವರು ಈ ಕೃತಿಯನ್ನು ತಮ್ಮ ಕಛೇರಿಗಳಲ್ಲಿ ಹಾಡಿದೊಡನೆ, ಇದು ಬಹಳ ಜನಪ್ರಿಯವಾಗಿಬಿಟ್ಟಿತು!” ಎಂದು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: