–ನಾಗರಾಜ ಬಿ ನಾಯ್ಕ
ಮಣ್ಣಿಗೇನು ಗೊತ್ತು
ಹಣತೆ ಆಗುವೆ ಎಂದು
ಕತ್ತಲೆಯ ಬಾಗಿಲಲ್ಲಿ
ಬೆಳಕಾಗಿ ನಿಲ್ಲುವೆ
ಯಾರದೋ ಮುಖದಿ
ಮಂದಹಾಸ ಮೂಡಿ
ಬೆಳದಿಂಗಳ ಸೇರಿ
ನಕ್ಷತ್ರ ಸೇರುವೆ ಎಂದು
ಬೆಳಕಿನ ನೆರಳಿಗೆ
ಕತ್ತಲೆಯ ಒಗಟು
ಹಣತೆ ಹಚ್ಚಿದ
ಕರಗಳಲಿ ಬೆಳಕು
ಹರಡಿದ ಖುಷಿ
ಅರಳಿದ ಮೊಗಕ್ಕೊಂದು
ಮಲ್ಲಿಗೆಯ ನಸುನಗು
ಮಲ್ಲಿಗೆಯೂ ಮಣ್ಣಿನ
ಗುರುತೇ ಆದಂತೆ
ಬಳ್ಳಿಯೊಳಗೆ ಚಿಗುರು
ಮಣ್ಣಿನ ಬೇರು
ಹೊಸ ಎಳೆಗೆ
ಹೂವಿನ ಮೆರಗು
ಹೂವಿನ ಚಿಟ್ಟೆಗೆ
ಮಣ್ಣಿನ ಅಡಿಪಾಯ
ಹೂವಿನ ಒಳಗೆ
ಹಸಿವೆಗೆ ಆಸರೆ
ನೆಲದಿ ಒರಗಿದ್ದ
ಜೀವಕೆ ಅಂಗೈಅಗಲದ
ಆಗಸದ ಬಾನಂಚು
ಬೆವರಿನ ಹನಿಗೆ
ಮುತ್ತಾಗುವ ಮೌನ
ಒಂದು ನೂರಾಗುವ
ಭತ್ತದ ಕಾಳು
ನೆಲದ ಕವಿತೆಯೇ
ಬೆಳಕಾಗುವ ಒರತೆ
ಮತ್ತೆ ಮಣ್ಣಾಗುವ
ಉಸಿರಿನ ಜೀವವೂ
ಮಣ್ಣಿನ ಹಣತೆ
ಉಳಿದಷ್ಟು ದಿನ
ಬೆಳಕಿನ ನೆರಳು
ಹಣತೆ ಹಕ್ಕಿ
ಹಸಿರಿನ ಹಾಡಂತೆ.






0 Comments