ಲೇಖಕಿ ಆರ್ ಸುನಂದಮ್ಮ ಅವರ ಕಾದಂಬರಿ ‘ಭರತಕಲ್ಪ’
ಈ ಕೃತಿಯನ್ನು ‘ಸಪ್ನ ಬುಕ್ ಹೌಸ್’ ಪ್ರಕಟಿಸಿದೆ.
ಈ ಕೃತಿಯ ಕುರಿತ ವನಜಾ ಕೊಳಗಿ ಅವರ ಅನಿಸಿಕೆ ಇಲ್ಲಿದೆ.
-ವನಜಾ ಕೊಳಗಿ
ಅಧ್ಯಯನ, ವಿಶ್ಲೇಷಣ, ಪರಿಶ್ರಮ-ಮೂರೂ ವಿಶೇಷತೆಗಳೂ ಸಮವಾಗಿ ತಮ್ಮ ತಮ್ಮ ಜವಾಬ್ದಾರಿಗಳು ಕಾಡಿದ ಕನಸಿನ ಜಾಡನ್ನು ಬೇಧಿಸುತ್ತಲೇ ವಾಸ್ತವದ ನೆಲೆಗಟ್ಟಿನ ಎಳೆ ಎಳೆಯನ್ನು ನೇಯುತ್ತ ಅದಕೊಪ್ಪುವ ಬಣ್ಣಗಳ ಹಿತವಾದ ಮಿಶ್ರಣದಲ್ಲಿ ಅದ್ದಿ, ಒಣಗಿಸಿ; ಕೊನೆಯಲ್ಲಿ ಅಂಚು ಸೆರಗುಳ್ಳ ಚೆಂದನೆಯ ಸೀರೆಯನ್ನಾಗಿ ನೇಯ್ದು ಓದುಗರಿಗೆ ಕೊಟ್ಟ ಲೇಖಕಿ ಆರ್ ಸುನಂದಮ್ಮ ನವರಿಗೆ ನಮಸ್ಕಾರಗಳು.
ತಟ್ಟೆಯಲ್ಲಿನ ಬಡಿಸಿದ ಅಷ್ಟೂ ಪದಾರ್ಥಗಳನ್ನು ಒಂದೇ ಗುಕ್ಕಿನಲ್ಲಿ ಉಣ್ಣುವ ರುಚಿಯಾದ ಊಟದಂತೆ ಎಡಬಿಡದೆ ಓದಿಸಿಕೊಂಡು ಹೋದ ‘ಭರತಕಲ್ಪ’ ಕಾದಂಬರಿ ಮುಗಿಸಿ, ಕೆಳಗಿಡುವಾಗ ಗೃಂಥ ಕರ್ತೆಯ ಕುರಿತು ಮನಸಿನಲ್ಲಿ ಕೃತಜ್ಣತೆಯು ಅಕ್ಷರ ರೂಪ ಪಡೆಯಲು ಒದ್ದಾಡುತ್ತಿತ್ತು.
ಈ ಕಾದಂಬರಿ ಹಲವಾರು ಕಾರಣಗಳಿಗಾಗಿ ಇಷ್ಟವಾಗುತ್ತವೆ.
ಸಮನ್ವಯತೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುವ ಇಡೀ ಕಾದಂಬರಿಯ ಓಟ ಮನಸ್ಸಿಗೆ ಹಿತವೆನಿಸುತ್ತದೆ.
ರಾಜನಲ್ಲದ ರಾಜ ಭರತ ಈ ಕಾದಂಬರಿಯ ಕೇಂದ್ರಬಿಂದುವಾದರೂ; ಎಲ್ಲಾ ಪಾತ್ರಗಳ ಚಿತ್ರಣವೂ ವೈವಿಧ್ಯ ಹಾಗೂ ತಮ್ಮ ತಮ್ಮ ಕಕ್ಷೆಯಲ್ಲಿ ಕೇಂದ್ರಬಿಂದುವಾಗಿರುತ್ತ, ಭರತನ ಪಾತ್ರದಷ್ಟೇ ಗಟ್ಟಿಯಾಗಿ ಮೈತಾಳಿದೆ.
ಉದಾ: ಶರ್ತುಘ್ನ, ಊರ್ಮಿಳೆ,ಮಾಂಡವಿ, ಶತಕೀರ್ತಿ -ಇತ್ಯಾದಿ.
‘ಥಾರು, ವೈರುಣಿಕ, ಕಲಷ್ ‘-ಹೀಗೆ ಬುಡಕಟ್ಟು ಜನಾಂಗಗಳು, ‘ವಾಯ್ ‘ ಅಂತ ಉಪ ಪಂಗಡಗಳು , ಅವರ ಆಚಾರ ವಿಚಾರಗಳು, ಹೆಣ್ಣು-ಗಂಡು ಭೇಧವಿಲ್ಲದ ಜೀವನ, ಅವರ ಆಯ್ಕೆಯಲ್ಲಿ ಅವರಿಗಿರುವ ಸ್ವಾತಂತ್ರ್ಯ, ಹೆಣ್ಣುಗಂಡು ಭೇದವಿಲ್ಲದೆ ; ತಮ್ಮದೇ ದುಡಿಮೆಯಿಂದಲೇ ಬದುಕುವ ರೀತಿ-ಇತ್ಯಾದಿ.
ಊರ್ಮಿಳೆಯ ಪಾತ್ರ ತುಂಬ ಧನಾತ್ಮಕವಾಗಿ ಮೂಡಿಬಂದಿದೆ. ಅಪ್ಪನಿಂದ ಕಲಿತ ಕೃಷಿಯನ್ನು ಲಕ್ಷ್ಮಣನ ಅನುಪ ಸ್ಥಿತಿಯಲ್ಲಿ ಪುನ ಪ್ರಾರಂಬಿಸುತ್ತಾಳೆ. ಲಕ್ಷ್ಮಣ ಅಣ್ಣನೊಡನೆ ಕಾಡಿಗೆ ಹೋಗುವಾಗ ತನಗೆ ಒಂದು ಮಾತು ಹೇಳಿ ಹೋಗಿದ್ದರೆ ಬಹುಷ ಅವನಿಂದ ದೂರವಿರುವ ದೀರ್ಘಾವಧಿಯ ನೋವನ್ನು ತಡೆಯಲು ಸಹಾಯವಾಗುತ್ತಿತ್ತು ಎನ್ನುವುದು ಅವಳ ಅಂತರಂಗದ ಮಿಡಿತ. ಕಾಣದ ಅಂತರಂಗದ ನೋವು ಬಹಿರಂಗದಲ್ಲಿ ಅರಮನೆಯನ್ನು ಬಿಟ್ಟು, ಹಳ್ಳಿಯೊಂದರಲ್ಲಿ ತನ್ನ ಸಖಿಯೊಡನೆ ಕೃಷಿ ಜೀವನ ನಡೆಸುವ ಅವಳ ಇಶ್ಛಾಶಕ್ತಿ ಹಾಗೂ ಧಾಷ್ಟ್ಯ-ಚೈತನ್ಯಗಳು ನಿರಂತರವಾಗಿ
ಕಾದಂಬರಿಯಯದ್ದಕ್ಕೂ ಜೀವಂತವಾಗಿ ಸಾಗುತ್ತವೆ.
ತಾನು ಕೃಷಿ ಮಾಡುವುದಷ್ಟೇ ಅಲ್ಲದೇ ಸುತ್ತಲಿನ ಜನರನ್ನೂ ಆ ದಿಕ್ಕಿನಲ್ಲಿ ಕರೆದೊಯ್ಯುತ್ತ, ಕೃಷಿಕ ಸಮುದಾಯದ ಬೆಳವಣಿಗೆಗೆ ಕಾರಣಾಗುವದಷ್ಟೇ ಅಲ್ಲದೇ ಬೆಳೆದ ಬೆಳೆಯ ವಿಲೇವಾರಿಯಿಂದ ಸಂಗ್ರಹವಾದ ದ್ರವ್ಯದಲ್ಲಿ ತಮಗೆ ಬೇಕಾದಷ್ಟನ್ನ ಮಾತ್ರ ಇಟ್ಟುಕೊಂಡು; ಹೆಚ್ಚಾದ ದ್ರವ್ಯವನ್ನು ರಾಜ್ಯದ ಬೊಕ್ಕಸಕ್ಕೆ ನೀಡುವ ಮೂಲಕ ರಾಜ್ಯದ ಭಂಡಾರವನ್ನು ಹೆಚ್ಚಿಸುತ್ತಾಳೆ. ಈ ನಿಟ್ಟಿನಲ್ಲಿ ಅವಳ ಸಾಮುದಾಯಿಕ ಪ್ರಯತ್ನ ಇಂದಿನ ವಾಸ್ತವತೆಯ ಬದುಕಿಗೊಂದು ಸಂಪನ್ಮೂಲ ಕೀಲಿಕೈ ಯಾಗುತ್ತದೆ. ಅವಳ ಈ ದೀರ್ಘ ಪ್ರಯತ್ನಕ್ಕೆ ಅಗತ್ಯವಿರುವಾಗಷ್ಟೇ ಮೈದಂದಿರಾದ ಭರತ-ಶತ್ರುಘ್ನರ ಪ್ರೋತ್ಹಾಹವು ಕೂಡು ಕುಟುಂಬದ ಪರಿಕಲ್ಪನೆಗೆ ಒತ್ತು ನೀಡುತ್ತ, ಮತ್ತಷ್ಟು ನಿಚ್ಛಳವಾಗಿ ಮುದ ನೀಡುತ್ತದೆ.
ಕಸೂತಿ ಕಲೆಯಲ್ಲಿನಿಷ್ಣಾತಳಾಗಿರುವ ಶತ್ರುಘ್ನನ ಮಡದಿ ಶತಕೀರ್ತಿ ಭರತ ಹಾಗೂ ಶತ್ರುಘ್ನರ ಬೆಂಬಲದಿಂದ ರಾಜ್ಯದ ಆಸಕ್ತ ಹೆಣ್ಣುಮಕ್ಕಳಿಗೆ ಕಲೆಯನ್ನು ಕಲಿಸುವ ಸಂಪನ್ಮೂಲ ವ್ಯಕ್ತಿಯಾಗಿದ್ದಲ್ಲದೇ ; ಆ ಕಸೂತಿಯಿಂದ ತಯಾರು ಮಾಡಿದ ದಿರಸುಗಳನ್ನು ಅರಮನೆಯ ಪರಿವಾರದವರು ಧರಿಸುವದಷ್ಟೇ ಅಲ್ಲದೇ ಉಳಿದ ದಿರಸುಗಳ ಮಾರಾಟದಿಂದ ಬಂದ ದ್ರವ್ಯಗಳನ್ನು ರಾಜ ಭಂಢಾರಕ್ಕೆ ತುಂಬುವಲ್ಲಿನ ಸಂಗತಿಗಳು ಚೇತೋಹಾರಿಯಾಗಷ್ಟೇ ಉಳಿಯುವುದಿಲ್ಲ. ಬದಲು ಅತ್ಯಂತ ಆಕರ್ಷಕವಾದ ಸೂಕ್ಷ್ಮ ಕಲೆಯೊಂದು ಹೇಗೆ ಸಾವಿರಾರು ಜನರ ಬದುಕಿಗೆ ದಾರಿ ಆಗುವುದಷ್ಟೇ ಅಲ್ಲದೇ ರಾಜ್ಯಬೊಕ್ಕಸವನ್ನೂ ತುಂಬುವ ಸಾಧ್ಯತೆಯ ಪರಿಕಲ್ಪನೆ ಇಂದಿನ ಬ್ಯುಸಿನೆಸ್ ನಾರಿಯರ ಪ್ರಪಂಚ ಮಾತ್ರವಲ್ಲ. ಅಂದಿನಿಂದಲೇ ಅದೇ ನಾರಿಯದೂ ಆಗಿತ್ತಲ್ಲ ಎನ್ನುವ ಉಧ್ಗಾರವೂ ಬರದಿರದು.
ಇಕ್ವಾಂಶು ವಂಶದ ಪಿತೃಸಂತತಿಯಿರುವ ಅಯೋಧ್ಯಾ ನಗರದಲ್ಲಿ ರಾಮನಿಗೆ ಲಕ್ಷ್ಮಣ ಜೊತೆಯಾದರೆ ;ಮಾತೃ ಸಂತತಿಯಿರುವ ಕೈಕೇಯದಲ್ಲಿ ಬೆಳೆಯುತ್ತಿರುವ ಭರತನಿಗೆ ಜೊತೆಯಾದವ ಶರ್ತುಘ್ನ. ಅವೆರಡರ ಬದಲಾವಣೆಯ ಆಲೋಚನಾಕ್ರಮ, ನಡುವಳಿಕೆಗಳು ಕಾದಂಬರಿಯುದ್ದಕ್ಕೂ ಕಾಣಿಸಿಕೊಳ್ಳುವಲ್ಲಿ ಸಹಜತೆ ಇದೆ.
ಅಣ್ಣನ ಜೊತೆಗೇ ಬಾಳಬೇಕೆನ್ನುವ ಲಕ್ಷ್ಮಣನ ಹಾಗೂ ಸ್ವತಂತ್ರವಾಗಿ ತಮ್ಮದೇ ರಾಜ್ಯವಾಳಬೇಕೆನ್ನುವ ಆಕಾಂಕ್ಷೆಗೆ ಅಣ್ಣನ ಒಪ್ಪಿಗೆ ಪಡೆಯಬೇಕೆನ್ನುವ ವಿಧೆಯತೆ ಯ ಮನಸು ಭರತ-ಶತ್ರುಘ್ನರದ್ದು. ಅಯೋದ್ಯೆಗೆ ಸಂಭಂಧಿಸಿದರೂ ಅಲ್ಲಿ ರಾಜ್ಯದ ಆಡಳಿತವಿರದೇ ; ಕೇವಲ ಬುಡಕಟ್ಟು ಜನಾಂಗಗಳ ಬೇರೆ ಬೇರೆ ಪಂಗಡಗಳು ತಮ್ಮ ನಾಯಕರ ಅಧೀನದಲ್ಲಿ ಬದುಕುತ್ತಿರುವ ಪ್ರದೇಶಗಳಲ್ಲಿ ಸುವ್ಯವಸ್ಥಿತವಾದ ರಾಜ್ಯ ಕಟ್ಟಿ, ಅದರಲ್ಲಿ ಬರುವ ಕಂದಾಯದ ರೂಪದ ದ್ರವ್ಯ ಹಾಗೂ ದವಸ-ಧಾನ್ಯಗಳನ್ನು ಅಯೋಧ್ಯೆಯ ಭಂಡಾರಕ್ಕೆ ಬರುವಂತೆ ಮಾಡಿದ ಅವರಿಬ್ಬರ ಪ್ರಯತ್ನ ಇಂದಿನ ರಾಜಕೀಯ ಸ್ಥಿತಿಯಲ್ಲಿ ತುಂಬ ಬೆಲೆಬಾಳುವ ವಿಷಯವಾಗುತ್ತದೆ. ಅಂಥಹ ಮಹತ್ವದ ವಿಷಯಗಳಿಗೆ ಕಾರಣೀಭೂತರಾದ ಊರ್ಮಿಳೆ ಹಾಗೂ ಶತಕೀರ್ತಿಯವರ ಬೆಂಬಲದಲ್ಲಿ ಅರಳಿದ ಸಾಮಾನ್ಯ ಜನರಲ್ಲಿ ಹಾಗೂ ನಗರದ ಅಭಿವೃದ್ಧಿಗಾಗಿ(ರಸ್ತೆ, ಚರಂಡಿ, ಕೆರೆ, ಕಾಲುವೆ -ಇತ್ಯಾದಿ) ತಮ್ಮ ಪರಿಶ್ರಮವನ್ನು ಮನಸ್ಸಿನಿಂದ ಮಾಡಿದ ಸೈನಿಕರನ್ನು ಹುಡುಕಿ, ಅವರನ್ನು ಸನ್ಮಾನಿಸುವ ಮೂಲಕ ನಗರದ ಸಾಂಸ್ಕ್ರತಿಕ ವೈಭವವನ್ನು ಹೆಚ್ಚಿಸುವಲ್ಲಿಯೂ ಅವರಿಬ್ಬರೂ ಕಾರಣರಾಗುತ್ತಾರೆ. ತಮ್ಮೆಲ್ಲಾ ಯೋಚನೆಗಳನ್ನು ಗುರು-ಹಿರಿಯರು ಮಾತೆಯರೊಂದಿಗೆ ಪ್ರಸ್ತಾಪಿಸಿ, ಅವರ ಸಲಹೆ-ಸೂಚನೆಗಳಿಗೂ ಆಧ್ಯತೆ ನೀಡುವ ಮುಕ್ತ ಮನಸ್ಸು ಪ್ರತಿಯೊಂದು ಹಂತದಲ್ಲಿಯೂ ಕಾಣುತ್ತದೆ. ರಾಜ್ಯದ ಮಂತ್ರಿಯವರ ನಿರ್ಲಕ್ಷ , ಕೆಲಸ ಮಾಡದೇ ಪಡೆಯುತ್ತಿರುವ ಅಧಿಕ ದ್ರವ್ಯ, ಹಾಗೂ ಸರಪಂಚ, ಪಂಚರು ಹಳ್ಳಿಗಳಲ್ಲಿ ಜನರಿಗೆ ಹಾಗೂ ರಾಜಭಂಡಾರಕ್ಕೆ ಗೊತ್ತಿಲ್ಲದಂತೆ ಕಂದಾಯದ ಹೆಸರಿನಲ್ಲಿ ಪಡೆಯುವ ದವಸ-ಧಾನ್ಯ ಹಾಗೂ ದ್ರವ್ಯಗಳ ಮೊತ್ತವನ್ನು ಕಂಡುಹಿಡಿದು; ಎಲ್ಲಿಯೂ ಅವರು ದ್ವೇಷಿಸಲು ಅವಕಾಶ ನೀಡದೇ; ಅವರ ತಪ್ಪುಗಳನ್ನ ಸಾಕ್ಷೀಸಮೇತವಾಗಿ ಅವರಿಗೇ ಮನವರಿಕೆ ಮಾಡುವ ಪರಿ ಅತ್ಯಧ್ಬುತವಾಗಿದೆ.
ಚಿಕ್ಕ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಬಂದ ತೊಂದರೆಗಳಿಗೆ ತಲೆಯೊಡ್ಡಿ,ಅರಮನೆಯ ಪಾರುಪತ್ಯ ಹಾಗೂ ಮೂವರು ಅತ್ತೆಯಂದಿರ ಯೋಗಕ್ಷೇಮದ ಜವಾಬ್ದಾರಿಯನ್ನು ನಿರ್ವಹಿಸುವದಲ್ಲದೇ; ಭರತನಿಗೂ ಸಂಪನ್ಮೂಲ ವ್ಯಕ್ತಿಯಾಗಿ ತನ್ನ ಕರ್ತವ್ಯವನ್ನೂ ಸಮರ್ಥವಾಗಿ ನಿರ್ವಹಿಸಿದ ಮಾಂಡವಿಯ ಚಿತ್ರಣ ಪ್ರತಿಯೊಬ್ಬ ಅತ್ತೆ-ಮಾವಂದಿರು ತಮಗೂ ಇಂಥ ಸೊಸೆ ಮಗಳಾಗಿ ಬರಬೇಕೆನ್ನುವ ಹಾಗೂ ಪುರುಷರಿಗೆ ಒಮ್ಮೆಯಾದರೂ ಇಂಥ ಹೆಂಡತಿಯು ತನಗೆ ಇರಬೇಕೆನ್ನುವ ಯೋಚನೆಯು ಬರಬಹುದೆನ್ನುವ ಹಾಗೂ ಅಂಥ ಅಗತ್ಯತೆಯನ್ನು ಪ್ರತಿಬಿಂಬಿಸುತ್ತದೆ.
ತನ್ನ ತಪ್ಪನ್ನು ಅರಿತ ಕೈಕೇಯಿ ಹಾಗೂ ಅವಳ ತಪ್ಪನ್ನು ಕ್ಷಮಿಸಿ, ತಮ್ಮೊಳಗೆ ಒಂದಾಗಿಸಿಕೊಳ್ಳುವ ಸವತಿಯರು(ಕೌಸಲ್ಯ, ಸುಮಿತ್ರೆ) ಹಾಗೂ ಗುರು-ಹಿರಿಯರ ಚಿತ್ರಣವೂ ಸಹಜವಾಗಿ ಮೂಡಿದೆ.
ಈ ಕಾದಂಬರಿ ಪ್ರಾಚೀನ ಕತೆಯನ್ನ ಆಧರಿಸಿದರೂ; ಆಧುನಿಕ ಬದುಕಿನ ವಾಸ್ತವ ಸ್ಥಿತಿಯಲ್ಲಿ ಮಹಿಳೆಯು ತನ್ನನ್ನು ತಾನೇ ಸಾಕ್ಷಾತ್ಕರಿಸಿಕೊಳ್ಳುವ ಭರವಸೆಯ ಎಳೆಯನ್ನು ನಮ್ಮೆದುರು ಬಿಚ್ಚಿಡುತ್ತದೆ.
ರಾಮಾಯಣ ಹಾಗೂ ಮಹಾಭಾರಗಳಂಥ ಶ್ರೇಷ್ಟ ಕಾವ್ಯಗಳು ಜನಮಾನಸದಲ್ಲಿ ಯಾವುದೇ ರೂಪದಲ್ಲಿ ಅರಳಿದರೂ; ಮೂಲ ಕೃತಿಗೆ ಧಕ್ಕೆ ಬರದಂತೆ ಹಾಗೂ ಮತ್ತಷ್ಟು ಕೃತಿಯನ್ನು ವಿಸ್ತರಿಸುವಂಥ ಆಲೋಚನಾಕ್ರಮವನ್ನು ಸಮಾಜಕ್ಕೆ ನೀಡುತ್ತದೆ ಎನ್ನುವ ಪ್ರಭುದ್ಧ ಸಂದೇಶಗಳ ‘ನಾಡಿಮಿಡಿತ ‘-ಈ ಭರತಕಲ್ಪ.






0 Comments