ಮಂಡಲಗಿರಿ ಪ್ರಸನ್ನ ಮಕ್ಕಳ ಕಥೆ- ‘ಜನ ಅದೇಕೆ ಹೀಗೆ?’

ಮಂಡಲಗಿರಿ ಪ್ರಸನ್ನ

ತಾತ ಮತ್ತು ಮೊಮ್ಮಗ ಬೆಳಗಿನ ವಾಕಿಂಗ್ ಹೊರಟಿದ್ದರು. ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ ತಾತ ಮುಂದೆ ಮುಂದೆ ಸಾಗುತ್ತಿದ್ದರೆ, ಮೊಮ್ಮಗ ವಿಹಾನ್ ತಾತನ ಹಿಂದೆ ಜಿಗಿಯುತ್ತಾ, ನೆಗೆಯುತ್ತ, ಅವರ ಹೆಜ್ಜೆ ಸರಿಗಟ್ಟಲು ಓಡುತ್ತಿದ್ದ. ವಾಕಿಂಗ್ ಮಾಡಲು ಅವರಿಬ್ಬರೂ ಪ್ರತಿದಿನ ಹೋಗುತ್ತಿದ್ದುದು ಸಾರ್ವಜನಿಕ ಉದ್ಯಾನವನಕ್ಕೆ. ಅದು ಇದ್ದುದು ಮನೆಯಿಂದ ನೂರು ಅಡಿ ದೂರದಲ್ಲಿ.

ಆ ದಿನ, ಅದೇ ತಾನೆ ಸೂರ್ಯ ಪೂರ್ವದಲ್ಲಿ ತಲೆಯೆತ್ತಿ ನಿಂತಿದ್ದ. ಮನೆಯಿಂದ ಸ್ವಲ್ಪವೆ ದೂರದ ಪಾರ್ಕಿಗೆ ಹೊರಟವರಿಗೆ ಮೊದಲಿಗೆ ಸಿಕ್ಕದ್ದು, ಮನೆಯ ಮುಂದಿನ ರಸ್ತೆಯಲ್ಲಿ, ಹಿಂದಿನ ದಿನ ಸಂಜೆ ಹುಡುಗರು, ಕ್ರಿಕೇಟ್ ಆಟ ಆಡಿ ಹಾಗೆ ಬಿಟ್ಟು ಹೋಗಿದ್ದ ನಾಕೆಂಟು ಇಟ್ಟಿಗೆಗಳು! ನಡೆಯುವವರು, ಇಲ್ಲವೆ ವಾಹನ ಸವಾರರು ಆ ಇಟ್ಟಿಗೆಗಳನ್ನು ಎಡವಿದರೆ ಮುಗೀತು! ಸರಿ, ಅದನ್ನು ಗಮನಿಸಿದ ತಾತ ವಿಹಾನನ ಕೈಬೆರಳುಗಳನ್ನು ಮೆಲ್ಲಗೆ ಬಿಡಿಸಿಕೊಂಡು, “ಒಂದು ನಿಮಿಷ ಪುಟ್ಟ,” ಎಂದು ರಸ್ತೆಗೆ ಬಿದ್ದ ಅಷ್ಟೂ ಇಟ್ಟಿಗೆಗಳನ್ನು ಒಂದೊಂದಾಗಿ ರಸ್ತೆಯ ಪಕ್ಕಕ್ಕೆ ಇಟ್ಟು ಬರಲು ಶುರು ಮಾಡಿದರು. ವಿಹಾನ್‌ ತಾತನಿಗೆ ಸಹಾಯ ಮಾಡಿದ.

ನಂತರ, “ತಾತ, ಈ ಇಟ್ಟಿಗೆಗಳನ್ನೇಕೆ ರಸ್ತೆಗೆ ಹಾಕಿದ್ದಾರೆ?” ಎಂದು ಕೇಳಿದ. ಅವನಿಗೆ ಅವು ಎಸೆದದ್ದಲ್ಲ ಹುಡುಗರು ಆಡಲು ಇಟ್ಟದ್ದು ಎಂದು ಗೊತ್ತಿರಲಿಲ್ಲ. ಆಗ ತಾತ, “ನಿನ್ನೆ ಸಂಜೆ ಹುಡುಗರು ರಸ್ತೆಯಲ್ಲಿ ಕ್ರಿಕೆಟ್ ಆಟ ಆಡಿ…. ನಂತರ ಹಾಗೆ ಬಿಟ್ಟು ಹೋಗಿದ್ದಾರೆ. ಏನು ಮಾಡೋದು, ತುಂಟ ಹುಡುಗರು….ಸರಿ ಬಾ” ಎಂದು ಮುಂದೆ ಹೊರಟರು.

ಒಂದಷ್ಟು ದೂರ ನಡೆಯುತ್ತಿದ್ದಂತೆಯೆ ಪಾರ್ಕ ಬಂದೇ ಬಿಟ್ಟಿತು. ಪಾರ್ಕಿನಲ್ಲಿ ಎರಡು ಹೈಮಾಸ್ಟ್ ದೀಪಗಳು ಬೆಳಗಾದರೂ ಹಾಗೆ ಉರಿಯುತ್ತಲೇ ಇದ್ದವು. ಆ ದೀಪಗಳನ್ನು ಗಮನಿಸಿದ ತಾತ ದೀಪದ ಕಂಬದ ಹತ್ತಿರ ಹೋಗಿ ದೀಪಗಳ ಸ್ವಿಚ್ ಆಫ್ ಮಾಡಿಬಂದರು. ವಿಹಾನನಿಗೆ ಅಚ್ಚರಿಯಾಯಿತು, ಕೇಳಿಯೆ ಬಿಟ್ಟ, ‘ತಾತ ನೀವೇಕೆ ಲೈಟುಗಳ ಸ್ವಿಚ್ ಆಫ್ ಮಾಡಿದಿರಿ?’

ಆಗ ತಾತ “ಏನು ಮಾಡೋದು ಪುಟ್ಟ….ಎಲ್ಲರೂ ಬರಿ ನೋಡುವವರೆ. ಯಾರಿಗೂ ಲೈಟ್ಸ್ ಗಳನ್ನು ಸ್ವಿಚ್ ಆಫ್ ಮಾಡುವಷ್ಟು ವ್ಯವಧಾನವಿಲ್ಲ. ಪಾರ್ಕಿನಂತೆ ಅಲ್ಲಿನ ದೀಪಗಳು ಸಾರ್ವಜನಿಕ ಆಸ್ತಿ ಅಲ್ಲವೆ? ಅಂತಹವನ್ನು ತಪ್ಪಾಗಿ ಬಳಸುವುದು ಸರಿಯಾದ ಮಾರ್ಗವಲ್ಲ….ಇರಲಿ ಬಾ” ಎಂದು ಕೈಹಿಡಿದು ನಾಕೈದು ಸುತ್ತು ಪಾರ್ಕಿನಲ್ಲಿ ಹಾಕಿದ ನಂತರ, ದೂರದಲ್ಲಿ ಕಂಡ ಕಲ್ಲು ಬೆಂಚೊಂದರ ಮೇಲೆ ಕೂಡಲು ಹೊರಟರು.

ಹತ್ತಿರ ಹೋಗಿ ನೋಡಿದರೆ ಆ ಕಲ್ಲುಬೆಂಚಲ್ಲಿ ಯಾರೋ ಮಲಗಿಬಿಟ್ಟಿದ್ದಾರೆ! ಇನ್ನೊಂದು ಕಲ್ಲುಬೆಂಚನ್ನು ತೋರಿಸಿದ ವಿಹಾನ್, “ತಾತ ಆ ಕಲ್ಲುಬೆಂಚು ಖಾಲಿ ಇದೆ, ಬನ್ನಿ….ಅಲ್ಲಿ ಕೂಡೋಣ,” ಎಂದು ಕೈಹಿಡಿದು ಎಳೆದೊಯ್ದ. ಆದರೆ ಅಲ್ಲಿ ಹೋಗಿ ನೋಡಿದರೆ, ಆ ಕಲ್ಲುಬೆಂಚಿನ ತುಂಬಾ ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಸೆದು ಹೋಗಿದ್ದು ಕಂಡಿತು‌. ಅದನ್ನು ನೋಡಿ ತಾತ “ವಿಹಾನ್, ಅಲ್ಲೆಲ್ಲ ಗಲೀಜಾಗಿದೆ, ಬಾ ಇಲ್ಲಿ ಬೇಡ. ಅಲ್ಲಿ ಹುಲ್ಲಿನ ಮೇಲೆ ಕೂಡೋಣ,” ಎಂದು ಮೊಮ್ಮಗನನ್ನು ಕರೆದುಕೊಂಡು ಹಸಿರು ಹುಲ್ಲು ಹಾಸಿನ ಬಳಿ ನಡೆದರು.

ಜಿಗಿಯುತ್ತಾ ಹುಲ್ಲು ಹಾಸಿನ ಬಳಿ ಬಂದ ವಿಹಾನ್‌, “ತಾತ, ಇಲ್ಲಿಯೂ ಪ್ಲಾಸ್ಟಿಕ್ ಚೀಲ, ಬಾಟಲಿ, ಮತ್ತಿನ್ನೇನೋ ಎಸೆದು ಬಿಟ್ಟಿದ್ದಾರೆ ನೋಡಿ,” ಎಂದ. ಅದನ್ನು ನೋಡಿದ ತಾತ, “ಹೌದು ಪುಟ್ಟ ಏನು ಮಾಡೋದು? ಕೆಲ ಜನಕ್ಕೆ ನಾಗರಿಕ ಪ್ರಜ್ಞೆ ಎಂಬುದೇ ಇಲ್ಲ. ಸಾರ್ವಜನಿಕ ಸ್ಥಳಗಳಾದ ರಸ್ತೆ, ಪಾರ್ಕು, ಬಸ್ಸು, ರೈಲು, ಮತ್ತಿತರ ಕಡೆಗಳಲ್ಲಿ ಹೇಗಿರಬೇಕೆಂಬ ಅರಿವಿರಲಿ, ಸಾಮಾನ್ಯ ಜ್ಞಾನವೂ ಇರಲ್ಲ. ನಮ್ಮ ಮನೆ ಮುಂದೆ ಕಲ್ಲು ಎಸೆದಲ್ಲಿ, ಹೊಲಸು ಬಿದ್ದಲ್ಲಿ ಸುಮ್ಮನೆ ಇರ್ತೀವ? ನಮ್ಮ ಮನೆ ದೀಪಗಳನ್ನು ಬೇಕಾಬಿಟ್ಟಿ ಹಾಗೆ ಉರಿಸ್ತೀವ?” ಎಂದು ಮೊಮ್ಮಗನನ್ನೇ ಪ್ರಶ್ನಿಸಿದರು ತಾತ.

ಈಗ ಎಲ್ಲವೂ ಅರ್ಥವಾದಂತೆ ತಲೆ ಹಾಕಿದ ವಿಹಾನನಿಗೆ ಶಾಲೆಯಲ್ಲಿ ಇಂತಹ ಜವಾಬ್ದಾರಿಗಳನ್ನು ಸಮಾಜ ವಿಜ್ಞಾನದ ಮೇಷ್ಟ್ರು ‘ಸಾಮಾಜಿಕ ಹೊಣೆಗಾರಿಕೆ ಮತ್ತು ನಾಗರಿಕ ಪ್ರಜ್ಞೆ’ ಹೆಸರಿನಲ್ಲಿ ಹೇಳಿದ ಪಾಠವೊಂದರಲ್ಲಿ ಹೇಳಿದ್ದು ನೆನಪಾಗಿ, “ಹೌದು ತಾತ, ಸ್ವಲ್ಪವೂ ತಿಳುವಳಿಕೆ ಇಲ್ಲದಂತೆ ವರ್ತಿಸುತ್ತಾರೆ, ಜನರೇಕೆ ಹೀಗೆ?” ಎಂದು ಪ್ರಶ್ನಿಸಿದ. ಅದಕ್ಕೆ ತಾತ, “ಇವೆಲ್ಲ ನಿನಗೆ ಈಗ ತಿಳಿಯುವುದಿಲ್ಲ, ಇನ್ನಷ್ಟು ದೊಡ್ಡವನಾದ ಮೇಲೆ ಗೊತ್ತಾಗುತ್ತದೆ, ನಡಿ. ಆದರೂ ನಿನ್ನ ಹತ್ತಿರ ನಾಗರಿಕ ಪ್ರಜ್ಞೆ ಎಂಬುದು ಇದೆ. ಯಾಕೆಂದರೆ ನೀನು ಅಷ್ಟೊಂದು ಪ್ರಶ್ನೆಗಳನ್ನು ಕೇಳಿದೆ ನೋಡು” ಎಂದರು. ಇಬ್ಬರೂ ನಗು ನಗುತ್ತ ವಾಕಿಂಗ್ ಮುಗಿಸಿ ವಾಪಸ್ ಮನೆ ಕಡೆಗೆ ಹೆಜ್ಜೆ ಹಾಕಿದರು.

‍ಲೇಖಕರು Admin

November 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: