ಜಿ ಎನ್ ನಾಗರಾಜ್ ಅಂಕಣ- ಹಜ್ ಎಂಬ ಶಬರಿಮಲೆ ಯಾತ್ರೆ, ಅಲ್ಲಾ ಎಂಬ ಸಾರ್ವತ್ರಿಕ ದೇವರು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

34

ಯಾರೂ ಬಣ್ಣದ ಬಟ್ಟೆ, ಹೊಲಿಗೆ ಹಾಕಿದ ಬಟ್ಟೆ ಧರಿಸುವಂತಿಲ್ಲ; ಗಡ್ಡ ,ಇತರ ಕೂದಲು,ಉಗುರುಗಳನ್ನೂ ಕತ್ತರಿಸುವಂತಿಲ್ಲ; ಮಾಂಸ,ಮದ್ಯ ಸೇವಿಸುವಂತಿಲ್ಲ; ಸಿಗರೇಟ್,ಬೀಡಿ ಸೇದುವಂತಿಲ್ಲ; ಯಾರನ್ನೂ ಬೈಯುವಂತಿಲ್ಲ; ಪವಿತ್ರ ಭೂಮಿಯ ಒಳಗಿನ ಯಾವ ಮರ,ಗಿಡಗಳಿಗೆ ಹಾನಿ ಮಾಡುವಂತಿಲ್ಲ; ಯಾವುದೇ ಪ್ರಾಣಿ, ಪಕ್ಷಿ, ಹುಳು ಹುಪ್ಪಟೆಗಳನ್ನು ಕೊಲ್ಲುವಂತಿಲ್ಲ; ಯಾವುದೇ ಕೀಟ,ಸಣ್ಣ ಪ್ತಾಣಿಗಳನ್ನು ಆಕಸ್ಮಿಕವಾಗಿ ಕೊಂದರೆ ದಂಡ ತೆರಬೇಕು; ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತಿಲ್ಲ, ಲೈಂಗಿಕ ಸನ್ನೆ, ಮಾತುಗಳೂ ನಿಷೇಧ ; ಮದುವೆ ಮಾಡುವಂತಿಲ್ಲ,ಮದುವೆಯ ಮಾತುಕತೆಯೂ ಮಾಡುವಂತಿಲ್ಲ; 

ಸೆಂಟ್ ಇತ್ಯಾದಿಗಳನ್ನು ಹಾಕುವಂತಿಲ್ಲ.

ಹೀಗೆ ಹಲವು ನಿಷೇಧಗಳು,ಕಟ್ಟಲೆಗಳು.

ಈ ನಿಷೇಧಗಳು ಅಯ್ಯಪ್ಪನ ಭಕ್ತರದಲ್ಲ ಅಥವಾ ಮರುಗನ,ಶ್ರೀಶೈಲದ, ಪಂಡರಾಪುರದ ಭಕ್ತರದೂ ಅಲ್ಲ. ಇವು ಮೆಕ್ಕಾಕ್ಕೆ ಹೋಗುವ ಮುಸ್ಲಿಮ್ ಯಾತ್ರಿಗಳದ್ದು. ಅಯ್ಯಪ್ಪನ ಭಕ್ತರದು ಇವರಿಗಿಂತ ಸ್ವಲ್ಪ ಕಠೋರ ನಿಜ ಏಕೆಂದರೆ ಅವರದು 41 ದಿನಗಳ ದೀರ್ಘ ಕಾಲದ್ದು. ಮೆಕ್ಕಾ ಯಾತ್ರಿಗಳದ್ದು ಸೀಮಿತವಾದ್ದು. ಅವರು ಯಾವುದೇ ದಿಕ್ಕಿನಿಂದ ಮೆಕ್ಕಾದ ಪವಿತ್ರ ಭೂಮಿಯ ಗಡಿಯನ್ನು ಪ್ರವೇಶಿಸುವ ಮೊದಲು ಈ ಕಟ್ಟಲೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಧುನಿಕ ಕಾಲದ ಸಾರಿಗೆ ಸೌಲಭ್ಯಗಳಿಗೆ ಮೊದಲು ಈ ಗಡಿಗಳಿಂದ ಮೆಕ್ಕಾದ ಕೇಂದ್ರ ಪವಿತ್ರ ಮಸೀದಿಯಾದ ಕಾಬಾಕ್ಕೆ ನಡಿಗೆಯಲ್ಲಿ ತಲುಪಲು ನಾಲ್ಕಾರು ದಿನಗಳಿಂದ ಮೂರು ವಾರಗಳವರೆಗೂ ಬೇಕಾಗುತ್ತಿತ್ತು. ಅಷ್ಟೂ ಅವಧಿಯೂ ಇಹ್ರಮ್ ಎಂಬ ನಿಷೇಧಗಳಿಗೆ ಪ್ರತಿ ಹಜ್ ಯಾತ್ರಿಯೂ ಒಳಗಾಗಬೇಕಾಗಿತ್ತು. ಈ ನಿಷೇಧಗಳಲ್ಲಿ ಸ್ವಲ್ಪ ಆಚೀಚೆಯಾದರೂ ಕೂಡಾ ಹಜ್ ಯಾತ್ರೆಯ ಫಲ ದಕ್ಕುವುದಿಲ್ಲ. ಮತ್ತೊಂದು ಬಾರಿ ಹಜ್‌ಗೆ ಹೋಗಬೇಕಾಗುತ್ತದೆ. 

ಈ ಯಾತ್ರೆಯಲ್ಲಿ ಪ್ರತಿಯೊಬ್ಬರೂ ಈ ಕೆಳಗಿನ ಆಚರಣೆಗಳನ್ನು ಕಡ್ಡಾಯವಾಗಿ ಪೂರ್ತಿಗೊಳಿಸಬೇಕು. 

* ಕಾಬಾ ಎಂಬ ಪವಿತ್ರ ಮಸೀದಿಯನ್ನು  ಏಳು ಸುತ್ತು ಅಪ್ರದಕ್ಷಿಣವಾಗಿ ಎಡಗಡೆಯಿಂದ ಸುತ್ತಬೇಕು.

* ಅಲ್ಲಿರುವ ಸಫಾ ಮತ್ತು ಮರ್ವಾ ಎಂಬ ಎರಡು ಬೆಟ್ಟಗಳ ನಡುವೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಏಳು ಬಾರಿ ವೇಗವಾಗಿ ನಡೆಯಬೇಕು.

* ಅಲ್ಲಿರುವ ಝಮ್‌ಝಮ್ ಎಂಬ ಭಾವಿಯಿಂದ  ನೀರು ಕುಡಿಯಬೇಕು.

* ಕಾಬಾದಿಂದ 21 ಕಿಮಿ ದೂರವಿರುವ ಕರುಣೆಯ ಬೆಟ್ಟ ಎಂಬ ಹೆಸರಿರುವ ಅರಾಫತ್ ಬೆಟ್ಟಕ್ಕೆ ಹೋಗಿ ಇಡೀ ಹಗಲು ಅಲ್ಲಾನ ಪ್ರಾರ್ಥನೆ ಮಾಡುತ್ತಾ ತಮ್ಮ ತಪ್ಪುಗಳಿಗಾಗಿ ಕ್ಷಮೆ ಕೇಳುತ್ತಾ ಕಳೆಯಬೇಕು. ಈ ಬೆಟ್ಟ ಎರಡು ಕಾರಣಗಳಿಗಾಗಿ ಬಹಳ ಮುಖ್ಯ. ಒಂದು ಆದಂ ಮತ್ತು ಈವ್ ತಾವು ಪ್ರೀತಿ ಮಾಡಿದ ತಪ್ಪಿಗಾಗಿ ಸ್ವರ್ಗದಿಂದ ಹೊರದೂಡಲ್ಪಟ್ಟ ಮೇಲೆ ಮರಳಿ ಒಂದಾದ ಸ್ಥಳವಂತೆ ಈ ಬೆಟ್ಟ. ಮತ್ತೊಂದು ಮಹಮ್ಮದ್ ಪೈಗಂಬರ್‌ರವರು ತಮ್ಮ ಜೀವನದ ಕೊನೆಯಲ್ಲಿ ಹಜ್ ಯಾತ್ರೆ ಕೈಗೊಂಡಾಗ ಕೊನೆಯ ಉಪದೇಶ ನೀಡಿದ ಸ್ಥಳವಂತೆ. 

* ನಂತರ ಮುಜ್ದಲೀಫಾ ಎಂಬ ಬಯಲಿನಲ್ಲಿ ರಾತ್ರಿ ಕಳೆಯಬೇಕು.

* ಸೈತಾನನು ಪ್ರವಾದಿ ಇಬ್ರಾಹಿಮನಿಗೆ ದಾರಿ ತಪ್ಪಿಸಲು ಪ್ರಯತ್ನಿಸಿದಾಗ ಸೈತಾನ ಮೇಲೆ ಕಲ್ಲು ಬೀರಿ ಓಡಿಸಿದನಂತೆ (ವಿವರಗಳು ಕೆಳಗೆ). ಇಂದು ಆ ಜಾಗದಲ್ಲಿರುವ ಮೂರು ಕಂಬಗಳಿಗೆ  ಹಜ್ ಪ್ರವಾಸಿಗಳು ಕೂಡಾ ಈದ್ ಹಬ್ಬದ ದಿನ ಕಲ್ಲು ಹೊಡೆದು ಸೈತಾನನನ್ನು ಓಡಿಸಬೇಕು. 

*  ಒಂದು ಕುರಿ,ಆಡು ಇತ್ಯಾದಿ ಪ್ರಾಣಿಗಳನ್ನು ಬಲಿ ಕೊಡಬೇಕು. ಇದಕ್ಕೆ ಖುರ್ಬಾನಿ ಎನ್ನುತ್ತಾರೆ.

* ಬಲಿ ನೀಡಿದ ನಂತರ ತಲೆಕೂದಲು ಕೊಡಬೇಕು.

* ಇದಾದ ನಂತರ ಈದ್ ಅಲ್ ಅದಾ ಅಥವಾ ಬಕ್ರೀದ್ ಎಂದು ಹೆಸರಾದ ಹಬ್ಬ ನಾಲ್ಕು ದಿನಗಳ ಕಾಲ ಆಚರಿಸಲ್ಪಡುತ್ತದೆ. 

ಇಬ್ರಾಹಿಂ ಮತ್ತು ಇಸ್ಮಾಯಿಲರ ತ್ಯಾಗದ ಗುರುತು ಬಲಿ :

ಇಬ್ರಾಹಿಂ ಎಂಬ ಪ್ರವಾದಿಗೆ ಒಂದು ರಾತ್ರಿ ತನ್ನ ಮಗ ಇಸ್ಮಾಯಿಲನನ್ನು  ತಾನೇ ಅಲ್ಲಾನಿಗೆ ಬಲಿ ನೀಡಿದಂತೆ ಕನಸು ಬಿತ್ತು. ಅದರ ಬಗ್ಗೆ ಇಬ್ರಾಹಿಂ ಯೋಚಿಸಿ ಇದು ತನ್ನ ಮಗನನ್ನು ಬಲಿ ನೀಡಬೇಕೆಂದು ಅಲ್ಲಾನ ಆಜ್ಞೆ ಎಂದು ಭಾವಿಸಿ ತನ್ನ ಮಗನಿಗೆ ಅಲ್ಲಾನ‌ ನಿರ್ದೇಶನದ ಬಗ್ಗೆ ತಿಳಿಸುತ್ತಾನೆ. ಆಗ ಮಗ ಅಲ್ಲಾನ ಆಜ್ಞೆಯಂತೇ ಆಗಲಿ ಎಂದು ಹಿಂದು ಮುಂದೆ ನೋಡದೆ ತನ್ನನ್ನು ಬಲಿ ನೀಡುವುದಕ್ಕೆ ಒಪ್ಪಿಕೊಳ್ಳುತ್ತಾನೆ. ನಂತರ ಇಬ್ರಾಹಿಂ ಬಲಿ ನೀಡಲು ಹೊರಟಾಗ ಸೈತಾನನು ಅವನನ್ನು ತಡೆಯಲು ಯತ್ನಿಸುತ್ತಾನೆ. ಇಬ್ರಾಹಿಂ ಸೈತಾನ ತನ್ನ ದಾರಿ ತಪ್ಪಿಸಬಯಸುತ್ತಿರುವುದನ್ನು ತಿಳಿದು ಅವನ ಪ್ರಲೋಭನೆಗಳಿಗೆ ಜಗ್ಗದೆ ಅವನ ಮೇಲೆ ಕಲ್ಲು ಬೀರಿ ಓಡಿಸುತ್ತಾನೆ. 

ನಂತರ ಕಾಬಾದಲ್ಲಿ ಮಗನ ಬಲಿ ಕೊಡಲು ಹೊರಟಾಗ ದೇವತೆಯೊಬ್ಬಳು ಭೂಮಿಗಿಳಿದು ಅವನ ತ್ಯಾಗಕ್ಕೆ ಶ್ಲಾಘಿಸಿ ಕುರಿಯೊಂದನ್ನಿ ಬಲಿ ನೀಡಲು ತಿಳಿಸುತ್ತಾಳೆ. 

ಈ ತ್ಯಾಗದ ನೆನಪಾಗಿ ಪ್ರತಿ ಮುಸ್ಲಿಮನೂ ತನ್ನ ಪಾಪಗಳ ವಿಮುಕ್ತಿಗಾಗಿ ಬಲಿ ನೀಡುವುದೇ ಹಜ್ ಕೊನೆಯ ಬಲಿ ಮತ್ತು ನಂತರದ ಈದ್ ಅಲ್ ಉಲ್ ಅಝಹಾ ಹಬ್ಬ . 

 ಈ ಕತೆ ಕುರಾನಿನಲ್ಲಿ ಉಲ್ಲೇಖವಾಗಿದೆಯಾದರೂ ಇದರ ಮೂಲ ಟೋರಾ ಎಂಬ ಜ್ಯೂಗಳ ಗ್ರಂಥ. ಈ ಗ್ರಂಥ ಕ್ರಿಸ್ತ ಪೂರ್ವ ಆರನೇ ಶತಮಾನ ಎಂದರೆ ಕುರಾನಿಗಿಂತ ಸಾವಿರದ ಇನ್ನೂರು ವರ್ಷಗಳಿಗಿಂತ ಹಳೆಯದು. ಟೋರಾ ಧರ್ಮಗ್ರಂಥವೂ ಕೂಡಾ ಅದಕ್ಕಿಂತ ಮೊದಲೇ ಸಾವಿರಾರು ವರ್ಷಗಳಿಂದ ಪ್ರಚಲಿತವಾಗಿದ್ದ ಕತೆಗಳನ್ನು ಕ್ರಿ.ಪೂ ಆರನೇ ಶತಮಾನದಲ್ಲಿ ಲಿಖಿತ ರೂಪಕ್ಕೆ ತಂದದ್ದು. 

ಹೀಗೆ ಇಸ್ಲಾಂ ಧರ್ಮದ ಅನುಯಾಯಿಗಳು ಆ ಧರ್ಮವನ್ನು ಜನಪ್ರಿಯಗೊಳಿಸಲು ಅದಕ್ಕಿಂತ ಬಹಳ ಹಳೆಯ ಆಚರಣೆ ಮತ್ತು ನಂಬಿಕೆಗಳನ್ನು ಬಳಸಿಕೊಂಡಿದೆ ಎಂಬುದಕ್ಕೆ ಒಂದು ಪುರಾವೆ ಇದು. 

ಕಾಬಾ ಎಂಬ ಪವಿತ್ರ ಸ್ಥಳ- 

ಕಾಬಾ ಎಂಬುದು ಮಹಮ್ಮದ‌  ಪೈಗಂಬರರಿಗಿಂತ ಮುಂಚೆ ಒಂದು ದೇವಾಲಯ. ಹುಬಾಲ್ ಎಂಬ ದೇವತೆ ಅಲ್ಲಿಯ ಪ್ರಧಾನ ದೇವತೆ. ಆದರೆ ಆ ದೇವಾಲಯದ ಸುತ್ತ 360 ಕ್ಕಿಂತ ಹೆಚ್ಚು ದೇವರುಗಳ ಪ್ರತಿಮೆಗಳಿದ್ದವೆಂದು ಪ್ರತೀತಿ.  ಮರುಭೂಮಿ ದೇಶವಾದ ಅರೇಬಿಯಾ ಓಯಸಿಸ್ ಎಂಬ ನೀರಿನ ಕೊಳಗಳಿಂದ ಕೂಡಿದೆ. ಈ ಓಯಸಿಸ್‌ಗಳ ಬಳಿ ಜನ ವಸತಿಗಳಿದ್ದವು. ಓಯಸಿಸ್‌ಗಳಿದ್ದ ಪ್ರದೇಶದ ಭೌಗೋಳಿಕ, ವ್ಯಾವಹಾರಿಕ ಲಕ್ಷಣಗಳಿಗನುಗುಣವಾಗಿ ಅವುಗಳ ಆಸರೆಯಲ್ಲಿ ನಗರಗಳು,ಪಟ್ಟಣಗಳು, ಅಲೆಮಾರಿ ಕುರಿ,ಒಂಟೆ,ದನಗಳ ಸಾಕಾಣಿಕೆದಾರರ ಪಾಳೆಯಗಳು, ಖರ್ಜೂರ ಮೊದಲಾದವುಗಳ ಕೃಷಿ ಅಸ್ತಿತ್ವದಲ್ಲಿದ್ದವು. ಒಂದಕ್ಕೊಂದು ಬೇರೆ ಬೇರೆಯಾಗಿದ್ದ ಈ ಒಯಸಿಸ್‌ಗಳ ಬದುಕಿನಲ್ಲಿ ಹಲವಾರು ಬುಡಕಟ್ಟುಗಳು ಬೇರೆ ಬೇರೆಯಾಗಿ ಬದುಕು ರೂಪಿಸಿಕೊಂಡಿದ್ದವು.‌ ಈ ಓಯಸಿಸ್‌ ಆಧಾರಿತ ಜನ ವಸತಿಗಳ ನಡುವೆ ಒಂಟೆಗಳ ಮೇಲೆ ಸರಕುಗಳನ್ನು ಹೇರಿ ವ್ಯಾಪಾರ ಮಾಡುವ ಕಾರವಾನ್‌ಗಳು ಸಂಚರಿಸುತ್ತಿದ್ದವು. ದೂರ ದೂರದ ಊರುಗಳಿಗೆ, ಬೇರೆ ಬೇರೆ ದೇಶಗಳಿಗೆ ತಿಂಗಳುಗಟ್ಟಲೆ ಪ್ರಯಾಣ ಮಾಡುವ ಕಾರವಾನ್‌ಗಳೂ ಇದ್ದವು. ಇಂತಹ ವ್ಯಾಪಾರದ ಮಾರ್ಗಗಳಲ್ಲಿ ನಗರಗಳು,ಪಟ್ಟಣಗಳು ರೂಪುಗೊಂಡಿದ್ದವು.

  ಈ ಬುಡಕಟ್ಟುಗಳು/ ಕುಲಗಳು ಒಂದೊಂದೂ ಒಂದೊಂದು ದೇವರನ್ನು ಮುಖ್ಯ ದೇವತೆಯಾಗಿ ಪೂಜಿಸುವುದರ ಜೊತೆಗೆ ಇನ್ನೂ ಕೆಲವು ದೇವರುಗಳನ್ನು  ಪೂಜಿಸುತ್ತಿದ್ದರು. ಸೂರ್ಯನನ್ನೇ ಒಂದೊಂದು ಬುಡಕಟ್ಟು ಒಂದೊಂದು ಹೆಸರಿನಿಂದ ಪೂಜಿಸುತ್ತಿತ್ತು. ಒಂದು ಬುಡಕಟ್ಟಿಗೆ ಸೂರ್ಯ ಪುರುಷ ದೇವನಾದರೆ ಮತ್ತೊಂದಕ್ಕೆ ಅದೇ ಸೂರ್ಯ ಸ್ತ್ರೀ ದೇವತೆ. ಹಾಗೆಯೇ ಚಂದ್ರನೂ ಪುರುಷ ದೇವರಾಗಿ,ಸ್ತ್ರೀ ದೇವತೆಯಾಗಿ ಪೂಜೆಗೊಳ್ಳುತ್ತಿದ್ದರು. ಇನ್ನೂ ಕೆಲವು ಸ್ತ್ರೀ ದೇವತೆಗಳೂ ಇದ್ದರು. 

ಈ ಬುಡಕಟ್ಟುಗಳ ನಡುವೆ ಮೇಲಿಂದ ಮೇಲೆ ಜಗಳ,ಕದನಗಳಾಗುತ್ತಿದ್ದವು. ಕೆಲವೊಮ್ಮೆ ಒಂದು ಬುಡಕಟ್ಟು ಇತರ ಕೆಲವು ಬುಡಕಟ್ಟುಗಳ ಮೇಲೆ ಜಯ ಸಾಧಿಸಿ ಅರೇಬಿಯಾದ ಒಂದು ಭಾಗದಲ್ಲಿ ಒಂದು ಸಣ್ಣ ರಾಜ್ಯವನ್ನು ಸ್ಥಾಪಿಸುತ್ತಿದ್ದವು. 

ಇಂತಹ ರಾಜಕೀಯ ಪ್ರಕ್ರಿಯೆಯ ಪ್ರತಿಫಲನವಾಗಿ ಮತ್ತು ಈ ಕದನಗಳನ್ನು ತಪ್ಪಿಸಲು ಎರಡು ರೀತಿಯ ಧಾರ್ಮಿಕ ಪ್ರಕ್ರಿಯೆಗಳು ಆರಂಭವಾದವು.

ಒಂದು ವಿವಿಧ ಬುಡಕಟ್ಟುಗಳ ದೇವರುಗಳ ಮೂರ್ತಿಗಳನ್ನು ಒಂದೆಡೆ ಇಟ್ಟು ಪೂಜಿಸುವುದು. ಇವುಗಳ ಆರಾಧನೆಯ ಸಮಯದಲ್ಲಿ ಎಲ್ಲ ಬುಡಕಟ್ಟುಗಳೂ‌ ಶಸ್ತ್ರಗಳನ್ನು ಕೆಳಗಿಟ್ಟು ಶಾಂತಿ ಒಪ್ಪಂದವನ್ನು ಜಾರಿಗೊಳಿಸುವುದು.  ವಿವಿಧ ಬುಡಕಟ್ಟುಗಳ ಜನ ಒಂದೆಡೆ ಕಲೆತು ಜಾತ್ರೆ,ಹಬ್ಬ ಮಾಡಿ ಸಂತೋಷದಿಂದ ಕಾಲ ಕಳೆಯುವುದು. ಇಂತಹ ಸ್ಥಳದಲ್ಲಿ ಇತರ ಬುಡಕಟ್ಟು, ಕುಲಗಳಿಗಿಂತ ಕೈ ಮೇಲಾದ ಬುಡಕಟ್ಟಿನ ದೇವರಿಗೆ ಹೆಚ್ಚಿನ ಪ್ರಾಮುಖ್ಯತೆ. ಒಂದು ಮುಖ್ಯ ವ್ಯಾಪಾರಿ ಮಾರ್ಗದಲ್ಲಿದ್ದ ಮೆಕ್ಕಾದ ಬಳಿಯ ಕಾಬಾ ಅಂತಹುದೊಂದು ಸ್ಥಾನ. ಆದ್ದರಿಂದ ಸಾವಿರಾರು ವರ್ಷಗಳಿಂದ ಅಲ್ಲಿ ಹುಬಾಲ್ ಎಂಬುದು ಪ್ರಧಾನ ದೇವತೆಯಾದರೂ ವಿವಿಧ ದೇವತೆಗಳ ಆರಾಧನೆಯೂ ಇತ್ತು. 

ಮತ್ತೊಂದು ಪ್ರಕ್ರಿಯೆ ಎಂದರೆ ಅಲ್ಲಿ ರಾಜ್ಯಗಳು ಸ್ವಲ್ಪ ವಿಸ್ತಾರವಾದಂತೆ ಬುಡಕಟ್ಟುಗಳನ್ನು ಮಿತಿಯನ್ನು ಮೀರಿದ ಸಾರ್ವತ್ರಿಕ ದೇವರಾಗಿ ಅಲ್ಲಾನ ಕಲ್ಪನೆ ಮತ್ತು ಆರಾಧನೆಯ ಆರಂಭ. ಆದರೆ ಅರೇಬಿಯಾದೊಳಗಿನ ಕದನಗಳು ಯುದ್ಧಗಳಿಗೆ ತಡೆಯೇನೂ ಬಿದ್ದಿರಲಿಲ್ಲ. 

ಮಹಮ್ಮದ್ ಪೈಗಂಬರರು ಮತ್ತು‌ ಅಲ್ಲಾ 

ಇಂತಹ ಪರಿಸ್ಥಿತಿಯಲ್ಲಿ ಮಹಮ್ಮದ್ ಪೈಗಂಬರರು ಮುಖ್ಯ ವ್ಯಾಪಾರದ ಮಾರ್ಗವಾಗಿದ್ದ ಹಾಗೂ  ಪ್ರಬಲ ಕೇಂದ್ರವಾಗಿದ್ದ ಮೆಕ್ಕಾದಲ್ಲಿ ಜನಿಸಿದರು. ಬಾಲ್ಯದಿಂದಲೇ ಅವರನ್ನು ವ್ಯಾಪಾರದಲ್ಲಿ ತೊಡಗಿಸಲಾಯಿತು. ದೂರ ದೂರದ ನಗರ  ಪಟ್ಟಣಗಳಿಗೆ ವ್ಯಾಪಾರಕ್ಕಾಗಿ ಸಂಚರಿಸುವ ಕಾರವಾನ್‌ಗಳ ಭಾಗವಾಗಿ ಅಲ್ಲಿಯ ಅವರ ಜೀವನಾನುಭವ ಶ್ರೀಮಂತವಾಯಿತು.ಬೇರೆ ಬೇರೆ ಪ್ರದೇಶಗಳ ಧರ್ಮಗಳು,ವಿವಿಧ ಧಾರ್ಮಿಕ ಪಂಥಗಳ ವಿಚಾರಗಳ ಪರಿಚಯವೂ ಆಯಿತು. ತಮ್ಮ ಊರು, ಪ್ರದೇಶಗಳ ಬದುಕಿನ ಜೊತೆಗೆ ಇತರ ಪ್ರದೇಶಗಳ ಜೀವನ ವಿಧಾನಗಳನ್ನು ತುಲನೆ ಮಾಡುವ ಅವಕಾಶ ದೊರೆಯಿತು.

ಮೆಕ್ಕಾ ಮತ್ತು ಅಂತಹ ವ್ಯಾಪಾರ ಕೇಂದ್ರಗಳ ಶ್ರೀಮಂತ ವ್ಯಾಪಾರಿಗಳು ಇತರ ವ್ಯಾಪಾರಿಗಳ ಮೇಲೆ, ಪಶು ಸಾಕಾಣಿಕೆದಾರರು,ರೈತರುಗಳ ಮೇಲೆ ಸವಾರಿ ಮಾಡುವುದು , ಮರುಭೂಮಿಯಲ್ಲಿ  ಆಗಿಂದಾಗ್ಗೆ ಕಾಡುವ ಬರಗಾಲ, ಅಂತಹ ಸಮಯದಲ್ಲಿ ಜನರಿಗೆ ಬಡ್ಡಿ ಸಾಲ ನೀಡಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಪದ್ಧತಿ. ನೂರಾರು ಬುಡಕಟ್ಟುಗಳು,ಕುಲಗಳಲ್ಲಿ ಜನರು ಹಂಚಿ ಹೋಗಿದ್ದುದರಿಂದ ಮೂಡುವ ಅನೈಕ್ಯತೆ,ಇವುಗಳ ನಡುವೆ ಸಣ್ಣ ಸಣ್ಷ ಕಾರಣಗಳಿಗಾಗಿ ಪದೇ ಪದೇ ಆಗುತ್ತಿದ್ದ ಕದನಗಳು, ಅದರಿಂದಾಗುವ ಅಪಾರ ಹಾನಿ ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರು. ಈ ಕದನಗಳಿಂದ ವ್ಯಾಪಾರ ಮತ್ತು ಇತರ ವ್ಯವಹಾರಗಳು ಕುಂಠಿತವಾಗುತ್ತಿದ್ದವು. ಸಾಮಾನ್ಯ ಜನರ ಬದಕು ಅಲ್ಲೋಲ ಕಲ್ಲೋಲವಾಗುತ್ತಿತ್ತು.

ಮಹಮ್ಮದರು ಜನಿಸಿದ ಕ್ರಿ.ಶ. ಏಳನೇ ಶತಮಾನದ ವೇಳೆಗಾಗಲೇ ಅಲ್ಲಿ ಯಹೂದ್ಯ ಧರ್ಮ , ಕ್ರಿಶ್ಚಿಯನ್ ಧರ್ಮ ಹುಟ್ಟಿ ಹಲವು ಶತಮಾನಗಳಾಗಿತ್ತು. ರೋಮನ್ ಚಕ್ರಾಧಿಪತ್ಯದಲ್ಲಿ ಕ್ರಿಶ್ಚಿಯನ್ ಧರ್ಮ ಜನಪ್ರಿಯವಾಗಿ ಆ ಸಾಮ್ರಾಜ್ಯದ ಧರ್ಮವೇ ಆಗಿ ಬಿಟ್ಟಿತ್ತು. ಆದರೂ ಈ ಧರ್ಮಗಳು ಅರೇಬಿಯಾದ ಬುಡಕಟ್ಟುಗಳ ನಡುವೆ ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲ.

ಇಂತಹ ಹಿನ್ನೆಲೆಯಲ್ಲಿ  ಅವರಿಗೆ ವಿವಿಧ ಬುಡಕಟ್ಟುಗಳು,ಕುಲಗಳ ಪ್ರತ್ಯೇಕತೆಯ ಸಂಕೇತವಾದ ವಿವಿಧ ದೇವರುಗಳು ಮತ್ತವುಗಳ ವಿಗ್ರಹಾರಾಧನೆಯ ಬದಲಿಗೆ ಅಲ್ಲಾ ಎಂಬ ಸಾರ್ವತ್ರಿಕ ದೇವರನ್ನು ಕೇಂದ್ರವಾಗಿಟ್ಟುಕೊಂಡು ಒಗ್ಗಟ್ಟನ್ನು ಸಾಧಿಸುವ ವಿಚಾರ ಸ್ಫುರಿಸಿತು. 

 ಮೆಕ್ಕಾದ ಮತ್ತು ಸುತ್ತ ಮುತ್ತಲಿನ ಜನರ ನಡುವೆ ಇಬ್ರಾಹಿಂ ( ಯಹೂದ್ಯರ, ಕ್ರೈಸ್ತರ ನಡುವೆ ಅಬ್ರಹಾಂ ) ಮತ್ತು ಅವರ ಮಗನ ಬಲಿಯ ಕತೆ ಪ್ರಚಲಿತವಾಗಿದ್ದವು. ಇಬ್ರಾಹಿಮರ ವಿಚಾರಗಳಲ್ಲಿ ನಿರಾಕಾರ ದೇವರೂ ಒಂದು. 

 ಈ ಎಲ್ಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಹಮ್ಮದರು ಆಗಾಗ ಏಕಾಂಗಿಯಾಗಿ ತಮ್ಮ ಮನಸ್ಸಿನಲ್ಲೇ ಚಿಂತನ ಮಂಥನ ನಡೆಸುತ್ತಿದ್ದರು. ಇಂತಹ ಸಂದರ್ಭವೊಂದರಲ್ಲಿ ಎಲ್ಲ ಬುಡಕಟ್ಟುಗಳ ದೇವರಿಗಿಂತ ಮಿಗಿಲಾದ ಸರ್ವ ಸೃಷ್ಟಿಕರ್ತ ,ಸರ್ವ ಶಕ್ತ ದೇವರಾಗಿ ಅಲ್ಲಾನ ಸ್ವೀಕಾರ ಮತ್ತು ವಿಗ್ರಹಾರಾಧನೆಯ ‌ನಾಶದ ಪರಿಕಲ್ಪನೆ ಸ್ಫುರಿಸಿತು.

 ತಮ್ಮದೇ ಬುಡಕಟ್ಟಿನ ಜನರ ಅನೇಕ ವಿರೋಧಗಳ ನಡುವೆ ಈ ವಿಚಾರಗಳನ್ನು ಉಪದೇಶಗಳ ಮೂಲಕ ಹರಡತೊಡಗಿದರು. ಅಂದಿನ ವ್ಯವಸ್ಥೆಯಿಂದ ಬಾಧಿತರಾಗಿದ್ದ ಗುಲಾಮರು, ಸಾಮಾನ್ಯ ಜನರು ಇದರತ್ತ ಆಕರ್ಷಿತರಾಗತೊಡಗಿದರು.

ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದ್ದ , ಜನರಲ್ಲಿ ಬೇರೂರಿದ್ದ ಬುಡಕಟ್ಟು ಆರಾಧನಾ ವಿಧಾನಗಳನ್ನು ಮಾರ್ಪಡಿಸಿ ಅಳವಡಿಸಿಕೊಂಡು ಹೊಸ ‌ಧಾರ್ಮಿಕ ಆಚರಣೆಗಳನ್ನು ರೂಪಿಸಿದರು.

ಮೇಲೆ ವಿವರಿಸಲಾದ ಹಜ್ ಯಾತ್ರೆ ಮತ್ತು ಅದರ ಆಚರಣೆಗಳು, ಅವುಗಳಲ್ಲಿ ಹೊಲಿಗೆ ಹಾಕದ ಬಿಳಿ ಬಟ್ಟೆ, ತಲೆಗೂದಲು ಕೊಡುವುದು ಮುಂತಾದ ಆಚರಣೆಗಳು ಜಗತ್ತಿನಾದ್ಯಂತ ಬುಡಕಟ್ಟುಗಳಲ್ಲಿ ಪ್ರಚಲಿತವಾದ ನಂಬಿಕೆ, ಆಚರಣೆಗಳು. ತಮ್ಮ ಹಿಂದಿನ ಜೀವನ ಸುಖಮಯವಾಗಿತ್ತು. ಮತ್ತೆ ಅಂತಹ ಜೀವನವನ್ನು ಅನುಕರಿಸುವುದರಿಂದ ಮತ್ತೆ ಆ ಸುಖಮಯ ಜೀವನ ಪಡೆಯಬಹುದೆಂಬ ಆಶಾ ಭಾವನೆ ಇವುಗಳಲ್ಲಿ ಕಾಣುತ್ತದೆ.  ಕರುಣೆಯ ಬೆಟ್ಟದ ಕಲ್ಪನೆ, ನೀರೇ‌ ಸಿಗದ ಮರುಭೂಮಿಯಲ್ಲಿ ಝಮ್ ಝಮ್ ಬಾವಿ , ಎರಡು ಬೆಟ್ಟಗಳ ನಡುವೆ ಬಿರುಸಿನ ನಡಿಗೆ , ಪ್ರಾಣಿ ಬಲಿ ಇವೆಲ್ಲದರಲ್ಲಿ ಈ ಬುಡಕಟ್ಟು ಆಚರಣೆಗಳನ್ನು , ಅವುಗಳ ಬಗೆಗಿನ ಜನರ ನಂಬಿಕೆಯನ್ನು ಹೊಸ ಧರ್ಮದ ಜನಪ್ರಿಯತೆಗಾಗಿ ಬಳಸಿಕೊಂಡಿರುವುದನ್ನು ಕಾಣಬಹುದು.

 ಇವುಗಳಲ್ಲಿ ಮಹಮ್ಮದರಿಗಿಂತ ಮೊದಲಿನ ಪ್ರವಾದಿ ಮೂಸಾ ( ಮೋಸೆಸ್ ) ರ ನೆನಪಿಗಾಗಿ ಮಾಡುತ್ತಿದ್ದ ಉಪವಾಸ ವ್ರತ ಇಸ್ಲಾಂನಲ್ಲಿ ರಂಜಾನ್ ಉಪವಾಸದ ವ್ರತವಾಯಿತು. 

ಕೆಲವು ಕಾಲಾನಂತರ ಈ ವಿಚಾರಗಳು ಜನಪ್ರಿಯವಾಗಿ ಇಡೀ ಅರೇಬಿಯಾದ ಬುಡಕಟ್ಟುಗಳು ಮೊದಲ ಬಾರಿಗೆ ಒಂದು ಖಲೀಫರೆಂಬ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡರು. 

ಮುಂದಿನ ಖಲೀಫರು ತಮ್ಮ ಆಡಳಿತದ ಅಗತ್ಯಗನುಗುಣವಾಗಿ ಈ ಧಾರ್ಮಿಕ ಆಚರಣೆಗಳಲ್ಲಿ, ಹಬ್ಬಗಳಲ್ಲಿ  ಬದಲಾವಣೆಗಳನ್ನು ತಂದರು. 

ತಾನು ಮಹಮ್ಮದರ ಅತ್ಯಂತ ಪ್ರೀತಿ ಪಾತ್ರ ಅನುಯಾಯಿ ಎಂದು ತೋರಿಸಲು ,ಆ ಮೂಲಕ ಜನರನ್ನು ಮೆಚ್ವಿಸಲು ಮುಂದಿನ ಸಾಮ್ರಾಟನೊಬ್ಬ ಈದ್ ಮಿಲಾದ್ ಎಂಬ ಹೆಸರಿನಲ್ಲಿ ಮಹಮ್ಮದರ ಜಯಂತಿಯನ್ನು ಆಚರಣೆಗೆ ತಂದನು. 

ಹೀಗೆ ಜಗತ್ತಿನ ಧರ್ಮಗಳೆಲ್ಲವೂ ರಾಜ ಪ್ರಭುತ್ವಗಳು ಸ್ಥಾಪನೆಯಾದ ಕಾಲದಲ್ಲಿ ಬುಡಕಟ್ಟು ಆಚರಣೆಗಳನ್ನು ತಮ್ಮ ಧರ್ಮದ ಭಾಗವಾಗಿ ಮಾಡಿಕೊಂಡವು. ರಾಜ ಪ್ರಭುತ್ವದ ವಿರುದ್ಧ ಜನರ ಬದುಕಿನ ಬದಕಾವಣೆಗಾಗಿ ತಲೆ ಎತ್ತಿದ ಕ್ರೈಸ್ತ ,ಇಸ್ಲಾಂ ಧರ್ಮಗಳು ರಾಜ ಧರ್ಮಗಳಾಗಿ ರಾಜರ ರಾಜತನವನ್ನು ಸ್ಥಾಪಿಸಲು, ಅವರಿಗೆ ಜನರ ಮೆಚ್ಚಿಗೆ,ಒಪ್ಪಿಗೆ ಗಳಿಸಲು ಬುಡಕಟ್ಟುಗಳ ಜನಪ್ರಿಯ ಆಚರಣೆಗಳನ್ನು ಕ್ರಿಸ್ತೀಕರಿಸಿದವು ಅಥವಾ ಇಸ್ಲಾಮೀಕರಿಸಿದವು.

‍ಲೇಖಕರು Admin

November 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: