ಮಂಜುಳಾ ಸುಬ್ರಹ್ಮಣ್ಯ ಎಂಬ ನಾದದ ನದಿ..

ಮಂಜುಳಾ ಸುಬ್ರಹ್ಮಣ್ಯ ಅಂದ್ರೆ ಹಾಗೇನೇ.. ಸದಾ ಹೊಸ ಪ್ರಯೋಗಗಳಿಗೆ ತುಡಿವ ಮನ. ನಾಟಕ, ನೃತ್ಯ, ಟೆಲಿವಿಷನ್, ಓದು…ಎಲ್ಲದರಲ್ಲೂ ಆಕೆಯದ್ದು ಭಿನ್ನ ಹೆಜ್ಜೆಯೇ. ‘ನಾಲ್ಕು ಜನ ಏನಂದುಕೊಳ್ತಾರೆ’ ಎನ್ನುವ ಮಾತು ಹೊಸಕಿಹಾಕಿದಷ್ಟು ಕನಸನ್ನ, ಪ್ರಯೋಗವನ್ನ ಇನ್ನೇನೂ ಹೊಸಕಿ ಹಾಕಲು ಸಾಧ್ಯವಿಲ್ಲವೇನೋ? ಹಾಗಿರುವಾಗ ‘ಜನ ಏನೆಂದುಕೊಂಡಾರು’ ಎನ್ನುವುದನ್ನು ನಯವಾಗಿಯೇ ಪಕ್ಕಕ್ಕಿಟ್ಟು ಹೊಸ ಪ್ರಯೋಗಗಳತ್ತ ಹೆಜ್ಜೆ ಹಾಕಿದವರು ಮಂಜುಳಾ ಸುಬ್ರಹ್ಮಣ್ಯ.

ಕರಾವಳಿಯ ತೀರದಲ್ಲಿ ಇಂದು ನೃತ್ಯ ಜಡ್ಡುಗಟ್ಟಿಲ್ಲದಿದ್ದರೆ ಅದರಲ್ಲಿ ಒಂದು ಪಾಲು ಮಂಜುಳಾಗೂ ಸಿಗಬೇಕು. ಕರಾವಳಿಯ ರಂಗಭೂಮಿಯಲ್ಲೂ ಈಕೆ ಮುಖ್ಯ ಹೆಸರು. ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಜರುಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಶದ ಅತಿರಥ ಮಹಾರಥ ಕಲಾವಿದರು ಬರುತ್ತಿದ್ದರು. ಮಂಜುಳಾ ಒಳಗೆ ಒಬ್ಬ ನೃತ್ಯಗಾತಿ, ಒಬ್ಬ ರಂಗಕರ್ಮಿ ಮೊಳಕೆಯೊಡೆದದ್ದೇ ಆಗ.

ಅಲ್ಲಿಂದ ಇಲ್ಲಿಯವರೆಗೂ ಮಂಜುಳಾ ತಿರುಗಿನೋಡಿಲ್ಲ. ಇಂದು ವಿದುಷಿ ಶಾರದಾಮಣಿ ಶೇಖರ್ ಅವರಿಂದ ಕಲಿತ ಭರತನಾಟ್ಯ, ಕೇರಳದ ಗುರು ಗೋಪಿನಾಥ್ ಅವರಿಂದ ಕಲಿತ ಕಳರಿ, ಮಂಗಳೂರಿನಲ್ಲಿ ಹಲವು ತಂಡಗಳಿಂದ ಬಳುವಳಿಯಾಗಿ ಪಡೆದ ರಂಗದ ನೆಳಲು ಬೆಳಕು ಎಲ್ಲವೂ ಮುಪ್ಪರಿಗೊಂದು ಇಂದಿನ ಪ್ರಯೋಗಶೀಲೆ ಮೂಡಿದ್ದಾಳೆ.

‘ರಾಧಾ’ ಏಕವ್ಯಕ್ತಿ ಪ್ರದರ್ಶನ ಸುಧಾ ಆಡುಕಳ ಹಾಗೂ ಶ್ರೀಪಾದ ಭಟ್ಟರ ಕಣ್ಗಾವಲಿನಲ್ಲಿ ಸಾಕಷ್ಟು ಹೆಸರು ಮಾಡಿತು. ಮಂಜುಳಾ ಒಳಗಿರುವ ನೃತ್ಯಗಾತಿ, ಕಲಾವಿದೆ ಸಮರ್ಥವಾಗಿ ಹೊರಗೆ ಬಂದರು. ಮಂಜುಳಾ ಒಳಗೆ ಒಬ್ಬ ಸಮರ್ಥ ಬರಹಗಾರ್ತಿಯಿದ್ದಾಳೆ, ಒಬ್ಬ ಸಂಶೋಧಕಿಯಿದ್ದಾಳೆ, ಹಾಗಾಗಿಯೇ ತುಳುನಾಡಿನ ಜಾನಪದ ಕುಣಿತಗಳನ್ನು ಇಂದಿನ ನೃತ್ಯದೊಂದಿಗಿಟ್ಟು ನೋಡುವ ಅವರ ಉತ್ಸಾಹಕ್ಕೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಫೆಲೋಶಿಪ್ ನೀಡಿ ಬೆನ್ನು ತಟ್ಟಿತು. ಕನ್ನಡ ಎಂ ಎ ಪದವೀಧರೆಯಾದ ಈಕೆ ತಾನು ‘ನೃತ್ಯ, ರಂಗಭೂಮಿಯಲ್ಲಿ ಭಿನ್ನ ಹೆಜ್ಜೆ ಹಾಕಲು ನನ್ನ ಓದೂ ಸಹಾ ಸಾಕಷ್ಟು ಕಾರಣ’ ಎನ್ನುತ್ತಾರೆ.

ಸಂಕೋಚದ ಈ ಹುಡುಗಿ ಈಗ ತನ್ನ ಪುತ್ತೂರಿನಲ್ಲಿ ‘ನಾಟ್ಯರಂಗ’ ಸ್ಥಾಪಿಸಿ ಹಲವು ಪ್ರಯೋಗಗಳಿಗೆ ಕಾರಣಕರ್ತಳಾಗಿದ್ದಾಳೆ

ಅದಿರಲಿ, ‘ಅವಧಿ’ಗೆ ಮಂಜುಳಾ ಮನಸ್ಸು ಹೊಕ್ಕಿದ್ದು ಆಕೆಯ ಫೇಸ್ ಬುಕ್ ಖಾತೆಯಲ್ಲಿ ಕಂಡ ರಸ್ತೆಯಲ್ಲಿ ಆಕೆ ಭರತನಾಟ್ಯ ಮಾಡುತ್ತಿದ್ದ ಫೋಟೋದಿಂದ. ಆ ಫೋಟೋ ಬೆನ್ನತ್ತಿ ಮಂಜುಳಾರನ್ನು ಸಂಪರ್ಕಿಸಿದಾಗ ಆಕೆ ಬಿಚ್ಚಿಟ್ಟ ಪ್ರಸಂಗ ಇಲ್ಲಿದೆ.

ಸುಧಾಕರ ಜೈನ್ ಇಂದಿನ ಭರವಸೆಯ ಛಾಯಾಗ್ರಾಹಕ. ಆನೆ ನಡೆದದ್ದೇ ದಾರಿ ಎನ್ನುವಂತೆ ಇತರ ಛಾಯಾಗ್ರಾಹಕರದ್ದು ಒಂದು ದಾರಿಯಾದರೆ ಸುಧಾಕರ್ ದು ತಾವು ನಡೆದದ್ದೇ ದಾರಿ ಎನ್ನುವಂತೆ ಪ್ರತಿಯೊಂದನ್ನೂ ಭಿನ್ನ ನೋಟದಿಂದ ಕಟ್ಟಿಕೊಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರೊಳಗಿರುವ ಯಕ್ಷಗಾನದ ತುಡಿತ.

ಯಕ್ಷಗಾನವನ್ನು ಯು ಟ್ಯೂಬ್ ನಲ್ಲಿ ನೋಡಿಕೊಂಡೆ ತಾವು ಯಕ್ಷಗಾನದ ಪ್ರೋತ್ಸಾಹಕರು ಎಂದು ನಂಬಿಸಿಕೊಂಡುಬಿಟ್ಟಿರುವ ಕಾಲದಲ್ಲಿ ಸುಧಾಕರ್ ಜೈನ್ ಭಿನ್ನ. ಯಕ್ಷಗಾನ ನೋಡುವುದಲ್ಲದೆ, ಚಂಡೆ ಪೆಟ್ಟಿಗೆ ಸರಿಯಾಗಿ ಹೆಜ್ಜೆ ಹಾಕುವುದನ್ನೂ ಕಲಿತಿದ್ದಾರೆ. ಅಷ್ಟೇ ಅಲ್ಲ ತನ್ನಂತೆಯೇ ಯಕ್ಷಗಾನದ ಗುಂಗಿನಲ್ಲಿರುವವರನ್ನು ಗುಡ್ಡೆ ಹಾಕಿಕೊಂಡು ಯಕ್ಷಗಾನವನ್ನು ರಂಗಕ್ಕೇರಿಸುತ್ತಾರೆ.

ಇಂತಹ ಉತ್ಸಾಹಿ ಸುಧಾಕರ್, ಪ್ರಯೋಗಶೀಲ ಮನಸ್ಸಿನ ಮಂಜುಳಾ ಬೆಂಗಳೂರು ಬೀದಿಯಲ್ಲಿ ಸಿಕ್ಕಾಗ ಏನಾಯಿತು ಮಂಜುಳಾ ಮಾತಿನಲ್ಲಿಯೇ ಕೇಳೋಣ-

ಹೀಗೆ ಹಿಂದೆ ಒಂದಿನ ನೃತ್ಯ ಅಭ್ಯಾಸ (ಬೆಂಗಳೂರಿನಲ್ಲಿ) ಮುಗಿಸ್ಕೊಂಡು ಬರ್ತಾ ಇದ್ದೆ. ಬರ್ಬೇಕಾದ್ರೆ ಫೋಟೋ ಜರ್ನಲಿಸ್ಟ್ ಗೆಳೆಯ ಸುಧಾಕರ್ ಜೈನ್ ಹೊಸಬೆಟ್ಟುಗುತ್ತು ಸಿಕ್ಕಿದ್ರು. ಫೋಟೋಗ್ರಾಫರ್ ಅಂದ್ಮೇಲೆ ಆತನ‌ ಕೈಯಲ್ಲಿ ಕ್ಯಾಮರ ಇದ್ದೇ ಇರುತ್ತಲ್ವಾ.. ಸರಿ ಶುರು ಮಾಡ್ದೆ.. ಫೋಟೋ ತೆಗೀರಿ ನಂದು ಅಂತ . ಆತ ಹಿಂದೆ ಕಂಡಾಗ, ಮಾತಾಡಿದಾಗೆಲ್ಲಾ ನಾನು ಹೇಳ್ತಾ ಇರುದು ಮಾಮೂಲೇ. ಆತನಿಗೂ ಈಕೆಯ ಕಿರಿಕಿರಿ ಒಮ್ಮೆ ಮುಗೀಲಿ‌ ಅನ್ಸಿತೇನೋ ಅಲ್ಲೇ ಸೈಡಲ್ಲಿ ಗಾಡಿ ನಿಲ್ಲಿಸಿ ಶುರು ಮಾಡೇ ಬಿಟ್ರು. ಮಾರ್ಗ ಮಧ್ಯೆಯೆ ನೃತ್ಯ ಪ್ರದರ್ಶನವನ್ನೇ ಮಾಡಿದ ಅನುಭವ. ಹಾಗಂತ ಆತ ನಾನು ಕಂಡ ಬ್ರಿಲಿಯಂಟ್ ಫೋಟೋಗ್ರಾಫರ್. ಹಿಂದೆ ನನ್ನ ರಾಧಾ ಹಾಗೂ ನೃತ್ಯ ನೃತ್ಯಪ್ರದರ್ಶನದ ಚಂದದ ಫೋಟೋಗಳನ್ನೇ ಕ್ಲಿಕ್ಕಿಸಿಕೊಟ್ಟಿದ್ದಾರೆ. .

ಇಲ್ಲೂ‌ ಸುಂದರ ಅನುಭವ. ಅಕ್ಕಪಕ್ಕದ ಸಣ್ಣಪುಟ್ಟ ಮನೆಯವರಿಗೆ ನನ್ನ ನೋಡಿ ಸಂಭ್ರಮ. ವ್ಹಾವ್ ನೀವು ಭರತನಾಟ್ಯ ಮಾಡೋರಾ. ಅದು ರಸ್ತೇಲೂ ಮಾಡ್ತೀರ ಅಂತ ಪ್ರಶ್ನೆ. ಜೊತೆಗೆ ಆಕಡೆ ಈಕಡೇ ಓಡಾಡೋರ ಮಧ್ಯೆಯೆ ನಮ್ಮ ನೃತ್ಯ, ಫೋಟೊ. ನೋಡ್ತಾ ನೋಡ್ತಾ ಎಲ್ಲರೂ ಸುಧಾಕರ್ ಕ್ಯಾಮೆರಾದಲ್ಲಿ ಸೆರೆಯಾಗಿಯೇ ಬಿಟ್ರು. ನಾನು ರಸ್ತೆ ಒಂದು ಬದಿ, ಫೋಟೊಗ್ರಾಫರ್ ಇನ್ನೊಂದು ಬದಿ. ಅದು ಓಡಾಡೋರಲ್ಲಿ‌ ಕುತೂಹಲ ಹುಟ್ಟಿಸ್ತಿತ್ತು. ಈಕೆ ಯಾಕೆ ಒಬ್ಳೇ ನೃತ್ಯ ಮಾಡ್ತಿದ್ದಾಳೆ ಅಂತ.

ಹೌದು ಕಲಾವಿದೆ ಆಗಿದ್ದಾಗ ಗುಡ್ಡ ಆದರೇನು ರಸ್ತೆಯಾದರೇನು,ಗೌರವದಿಂದ, ಪ್ರೀತಿಯಿಂದ ನಮ್ಮನ್ನು ಕಾಣ್ತಾರೆ ಅಂದ್ರೆ ಎಲ್ಲವೂ ವೇದಿಕೆಯಾಗಬಹುದಲ್ವೇ ಅಂತ ಆಕ್ಷಣಕ್ಕೆ ಅನ್ನಿಸಿದ್ದು ಸಹಜವೇ. ಹಾಗಾಗಿ ಸಹಜವೇ ಎಂಬಂತೆ ನಾನೂ ಸುಧಾಕರ್ ನಾಟ್ಯಫೋಟೋಶೂಟ್ ಮುಗ್ಸಿದೆವು.

ನಮ್ಮನ್ನು ಮತ್ತಷ್ಟು ಚಂದ ಕಾಣಿಸಿ ಕೊಳ್ಳಲು ಸಾಧ್ಯವಾಗೋದು ಚಂದವಾದ ಛಾಯಾಚಿತ್ರ ತೆಗೆಯೋದ್ರ ಮೂಲಕ ಅಂತಾರೆ. ಆದ್ರೆ ಇಲ್ಲಿಯ ಅನುಭವ ಆ ವಾತಾವರಣವೇ ಮುದನೀಡುತ್ತಿತ್ತು. ಹಾಗಿರುವಾಗ ಫೋಟೋ ಆಪ್ತ ವಾಗದೆ ಇರೋದು ಹೇಗೆ ಸಾಧ್ಯ.

ನಾಟ್ಯವೇ ಹಾಗೆ ಅದು ದೇಹ‌ಚಲನೆಯ ಭಾಷೆ. ಕಣ್ಣಿನ ಮೂಲ‌ಕಮಾತು, ಕೈ, ಕಾಲು, ಬೆರಳು ಹೀಗೆ ದೇಹದ ಪ್ರತಿ ಅಂಗಾಗಂಗಳು ಪ್ರೇಕ್ಷಕರ ಜೊತೆ ಸಂವಹನ ಮಾಡೋದು ಆಗಿದೆ. ಇಲ್ಲಿ ಫೋಟೊ ಆ ದೇಹ ಭಾಷೆಯನ್ನು ಸ್ಥಿರವಾಗಿಟ್ಟು ನಿಮ್ಮ ಜೊತೆ ಮಾತನಾಡಿದೆ.

 

‍ಲೇಖಕರು avadhi

July 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Krishna Prakasha Ulithaya

    ಸುಧಾಕ ಜೈನ್ ವಿಕಟಕವಿ ಹೃದಯದ ಸಹೃದಯ ಯಕ್ಷಗಾನ ಕಲಾವಿದ, ಕಲಾ ಪ್ರೇಮಿ ಮತ್ತು ಅತ್ಯಂತ ಆಳವಾದ ಸಂವೇದನೆಯ ಬರಹಗಾರ. ಇವರ ಫೋಟೋಗಳಲ್ಲಿ ಕಾವ್ಯ ಇಣುಕುತ್ತೆ. ಅವಧಿಗೆ ಅಭಿನಂದನೆಗಳು. ಮಂಜುಳಾ ಸುಬ್ರಹ್ಮಣ್ಯ ಅವರೂ ನಮ್ಮೂರಿನ ಅನನ್ಯ ಪ್ರತಿಭೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: