ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ : ಅದನ್ನೇ ನಂಬಿದವರ ನಾಕ ನರಕ

ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ 

[email protected] ಗೆ ಕಳಿಸಿಕೊಡಿ 

ಪ್ರಸಾದ್ ರಕ್ಷಿದಿ 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನೇಕ ರಂಗ ಸಂಸ್ಥೆಗಳಿಗೆ ಕೊಡುವ ಅನುದಾನವನ್ನು ಯಾವುದೇ ವಿವೇಚನೆ ಇಲ್ಲದೆ ಕಡಿತಗೊಳಿಸಿದೆ ಎಂಬ ದೂರು ಮತ್ತು ಬಗ್ಗೆ ಹಲವರ ಸಿಟ್ಟು, ನಿರಾಶೆ ಪ್ರತಿರೋಧ ಎಲ್ಲವೂ ವ್ಯಕ್ತವಾಗುತ್ತಿವೆ. ಹೌದು ನಿಜವಾಗಿಯೂ ಅನುದಾನಗಳನ್ನೇ ನಂಬಿ ಕೆಲಸ ಮಾಡುತ್ತಿರುವ ಹಲವಾರು ಸಂಸ್ಥೆಗಳಿಗೆ ಕಷ್ಟವಾಗಿದೆ.

ನನ್ನಂತ ಹಲವಾರು ಜನ ರಂಗಜೀವಿಗಳಿಗೆ ಈ ಅನುದಾನಗಳ ಬಗ್ಗೆ ಜ್ಞಾನ ಕಡಿಮೆ ಇರುವುದರಿಂದ ಈ ವರ್ಷವೂ ಸೇರಿದಂತೆ ಕಳೆದ ಹತ್ತು ವರ್ಷಗಳ ಕಾಲ ಯಾವ ಯಾವ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಎಷ್ಟೆಷ್ಟು ಅನುದಾನವನ್ನು ನೀಡಲಾಗಿದೆ ಎಂಬ ಸಮಗ್ರ ಮಾಹಿತಿಯನ್ನು ಸರ್ಕಾರ ಪ್ರಕಟಿಸುವುದು ಒಳ್ಳೆಯದು. ಇದರಿಂದ ಅನೇಕ ಗೊಂದಲಗಳು ನಿವಾರಣೆಯಾಗುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಅದು ಕೇಂದ್ರ ಮತ್ತು ರಾಜ್ಯವಿರಲಿ ಸರ್ಕಾರಗಳು ಕೊಡುತ್ತಿರುವ ಅನುದಾನ/ ಸಹಾಯಧನ ಇತ್ಯಾದಿಗಳು ಹಲವು ಪಟ್ಟು ಹೆಚ್ಚಿರುವುದಂತೂ ನಿಜ. ಅದರಿಂದ ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿರುವುದೂ ನಿಜ ಹಾಗೇ ಅದನ್ನೇ ಅವಲಂಬಿಸಿ ಬದುಕುತ್ತಿರುವವರು ಕೂಡಾ ಇದ್ದಾರೆ. ಇವೆಲ್ಲವನ್ನೂ ಮೀರಿ ಫೈಲುಗಳನ್ನು ಪೇರಿಸಿ ನುಂಗುವವರೂ ಇದ್ದಾರೆ. ಇದು ಎಲ್ಲರಿಗೂ ತಿಳಿದ ವಿಷಯವೇ. ಇದನ್ನು ಸರಿಪಡಿಸಲು ಯಾರ ತಕರಾರು ಇರಬಾರದು. ಇದನ್ನು ಅನೇಕರು ಖಂಡಿತ ಒಪ್ಪುತ್ತಾರೆ ಎಂದೂ ನಂಬಿದ್ದೇನೆ.

ಆದರೆ ಒಂದು ಕ್ಷಣ ಎಪ್ಪತ್ತು, ಎಂಬತ್ತರ ದಶಕವನ್ನು ಮತ್ತು ಆಗ ನಡೆದಂತಹ ರಂಗ ಚಟುವಟಿಕೆಗಳನ್ಣೂ ನೆನಪಿಸಿಕೊಳ್ಳೋಣ. ಆಗ ಸರ್ಕಾರದ ಅನುದಾನವೆಂಬುದು ಗೌಣವಾಗಿತ್ತು. ಆದರೆ ರಂಗಭೂಮಿ ಜನಪರವಾಗಿತ್ತು. ಆಗ ಪ್ರದರ್ಶನವಾದಂತಹ “ಹಲ್ಲಾ ಬೋಲ್”, “ಬೆಲ್ಚಿ” ಯಂತಹ ನಾಟಕಗಳು ಈಗ ಅಂತದ್ದೇ ಘಟನೆಗಳು ನಡೆಯುತ್ತಿದ್ದರೂ ಯಾಕೆ ಪ್ರದರ್ಶನವಾಗುತ್ತಿಲ್ಲ? ಹೋಗಲಿ ಸರ್ಕಾರೀ ಅನುದಾನ ಬಳಿಸಿಕೊಂಡು ಈಗ, “ಚೂರಿ ಕಟ್ಟೆ” ಯಂತಹ ನಾಟಕವನ್ನೋ ಅಥವಾ ನಮ್ಮದೇ ತಂಡ 91ರಲ್ಲಿ ಆಡಿದ್ದ “ಇಂಡಿಯಾ 1991” ಎಂಬ ನಾಟಕವನ್ನಾಗಲೀ ಆಡಲು ಸಾಧ್ಯವೆ?

ಇವತ್ತು ರಂಗ ಚಟುವಟಿಕೆ ಹೆಚ್ಚಿದೆ. ಅದರ ಹಿಂದೆ ಖಂಡಿತ ಸರ್ಕಾರಗಳ ಅನುದಾನವಿದೆ. ಆದರೆ ಹೆಚ್ಚಿನ ರಂಗ ತಂಡಗಳೂ ವಸ್ತುವಿನಲ್ಲಿ ಒಂದು ರೀತಿಯ ಹಗ್ಗದ ಮೇಲಿನ ನಡಿಗೆಯನ್ನೂ ಪ್ರದರ್ಶನಗಳಲ್ಲಿ “ತಟಸ್ಥ” ಎನ್ನಿಸುವಂತ ಚಾಲಾಕಿತನವನ್ನೋ ಪ್ರದರ್ಶಿಸುತ್ತಿವೆ ಅನ್ನಿಸುತ್ತಿಲ್ಲವೇ.? ಹೆಚ್ಚಿನ ಸಂದರ್ಭದಲ್ಲಿ ಪುರಾಣ, ಇತಿಹಾಸಗಳ ಕಥಾನಕಗಳ ಮರುವ್ಯಾಖ್ಯಾನವೆಂಬ ಗುರಾಣಿ ಹಿಡಿದು ಬರುತ್ತಿರುವುದು ಕಾಣುತ್ತಿಲ್ಲವೇ.? ನೇರ ಸಾಮಾಜಿಕ ಸಮಸ್ಯೆಗಳಿದ್ದಾಗಲೂ ಆಳುವವರಿಗೆ ಕಿರಿಕಿರಿಯಾಗದಷ್ಟು ಎಚ್ಚರಿಕೆ ವಹಿಸುತ್ತಿರುವುದು ಹೌದಲ್ಲವೇ. ಇದರ ಹಿಂದೆ ಸರ್ಕಾರದ ಅನುದಾನದ ಕರಿನೆರಳು ಇದೆ.

ಸರ್ಕಾರಗಳ ಅನುದಾನಗಳು ಜನರ ಪ್ರತಿಭಟನೆಯ ಶಕ್ತಿಯನ್ನು, ಮತ್ತು ಸೃಜನಾತ್ಮಕತೆಯನ್ನು ಮೊಂಡಾಗಿಸುವುದು ಹೀಗೆ. ಇದು ಸಾಂಸ್ಕೃತಿಕ ರಾಜಕಾರಣ, ಹೌದು ನನಗೆ ಗೊತ್ತಿದೆ ಸರ್ಕಾರಗಳ ಅನುದಾನ ಬೇಡವೆನ್ನುವ ಅನೇಕ “ದೊಡ್ಡವರು” ಕಾರ್ಪೋರೇಟ್” ವಲಯವನ್ನು ಆಶ್ರಯಿಸಬಲ್ಲರು ಪರಿಣಾಮ ಇನ್ನೂ ಭೀಕರ.

ಸ್ವತಂತ್ರ ಪತ್ರಿಕೋದ್ಯಮ ಬೇಕೆನ್ನುವ ನಮಗೆ ಸ್ವತಂತ್ರ ರಂಗಭೂಮಿಯೂ ಬೇಕು. ಈ ಬಗ್ಗೆ ಗಂಭೀರವಾಗಿ ಯೋಚಿಸವ ಕಾಲ ಬಂದಿದೆ.

ಸಾಸ್ವೆಹಳ್ಳಿ ಸತೀಶ್ ಅವರು ಸರ್ಕಾರ ಸಾಂಸ್ಕೃತಿಕ ಸಂಸ್ಥೆಗಳಿಗೆ ಕೊಟ್ಟ ಸಹಾಯಧನದ ಪಟ್ಟಿಯನ್ನು ಕೊಟ್ಟರು. ಅದನ್ನು ನೋಡಿ ಜಿಲ್ಲಾವಾರು ಅನುದಾನದ ಪಟ್ಟಿಯನ್ನು ತಯಾರಿಸಿಕೊಂಡೆ. ಇದು ಒಂದು ಅವಗಾಹನೆಗಾಗಿ ಮಾತ್ರ. ಇದರಿಂದ ಒಂದು ವಿಚಾರ ಸ್ಪಷ್ಟವಾಗುತ್ತದೆ. ಒಟ್ಟು ಬಿಡುಗಡೆಯಾದ ಹಣದಲ್ಲಿ ಸೇ 45 ಬೆಂಗಳೂರು ನಗರದ ಪಾಲಾಗಿದೆ. ಇನ್ನು ಕೆಲವು ಜಿಲ್ಲೆಗಳಿಗೆ ಒಂದಷ್ಟು ಹೆಚ್ಚಿನ ಹಣ ದೊರತಂತೆ ಕಂಡರೂ ಅಲ್ಲಿನ ಕೆಲವು ಪ್ರಭಾವಿ ಸಂಸ್ಥೆಗಳು ಅದರಲ್ಲಿ ದೊಡ್ಡ ಪಾಲು ಪಡೆದಿವೆ. ಹಾಸನ ಮತ್ತು ದಾವಣಗೆರೆ ಜಿಲ್ಲೆಯ ಹೆಸರೇ ಪಟ್ಟಿಯಲ್ಲಿಲ್ಲ.

ನಾನು ಹೇಳಬೇಕೆಂದಿರುವುದು ಇಷ್ಟೇ. ಸರ್ಕಾರಿ ಅನುದಾನ ಪಡೆಯಬೇಕೆ ಬೇಡವೇ ಎನ್ನುವುದು ವೈಯಕ್ತಿಕ ಮತ್ತು ಆಯಾ ಸಂಸ್ಥೆಗಳಿಗೆ ಬಿಟ್ಟ ವಿಚಾರ. ಸರ್ಕಾರ ಕೊಡುವುದು ಎಂದು ತೀರ್ಮಾನ ಮಾಡಿದಮೇಲೆ ಅದರ ಹಂಚಿಕೆ ನ್ಯಾಯಬದ್ಧವಾಗಿ ಮತ್ತು ಪಾರದರ್ಶಕವಾಗಿ ಇರಬೇಕಾದದ್ದು ಅಗತ್ಯ. ಅದರೆ ಇದರಲ್ಲಿ ನಮ್ಮ ತಪ್ಪೂ ಇಲ್ಲವೇ?

ಪ್ರತಿವರ್ಷವೂ ಈ ಪ್ರಕ್ರಿಯೆ ಪಾರದರ್ಶಕವಾಗಿ ಮುಕ್ತವಾಗಿ ಇರುವಂತೆ ನೋಡಿಕೊಳ್ಳುವಲ್ಲಿ ನಮ್ಮ ಪಾಲೂ ಇದೆ. ಹೌದು ಅನೇಕರು ಇಲಾಖೆಯನ್ನು ನಂಬಿ ಹಣ ಖರ್ಚು ಮಾಡಿಕೊಂಡಿದ್ದಾರೆ.

ಮೊದಲನೆಯದ್ದೆಂದರೆ ಸರ್ಕಾರಿ ಇಲಾಖೆಗಳ “ಮಾತನ್ನು” ನಂಬಿ ಖರ್ಚು ಮಾಡುವುದು. ಸರ್ಕಾರಕ್ಕೆ ಒಂದು ಯೋಜನೆಯನ್ನು ಸಲ್ಲಿಸಿದ ನಂತರ ಅದಕ್ಕೆ ಒಪ್ಪಿಗೆ ದೊರೆತ ನಂತರವೇ ಕೆಲಸ ಮಾಡುವಂತಾಗಬೇಕು. ಮತ್ತು ಅರ್ಧ ಹಣವನ್ನು ಬಿಡುಗಡೆ ಮಾಡಬೇಕು. ಒಮ್ಮೆ ಒಪ್ಪಿಗೆ ಕೊಟ್ಟ ನಂತರ ಕಾರ್ಯಕ್ರಮ ನಡೆದಿದೆಯೇ ಇಲ್ಲವೇ ಎಂದು ಪರಿಶೀಲಿಸಿ ಮುಂದಿನ ಹಣವನ್ನು ಬಿಡುಗಡೆ ಮಾಡಬಹುದು. ಅದರಲ್ಲೇನಾದರೂ ತಪ್ಪುಗಳಿದ್ದಲ್ಲಿ ಮುಂದಿನ ಎರಡು ವರ್ಷ ಸಂಸ್ಥೆಗೆ ಹಣ ಕೊಡಬಾರದು.

ಒಮ್ಮೆ ಆಯ್ಕೆ ಸಮಿತಿ ತೀರ್ಮಾನ ಮಾಡಿದ ನಂತರ ಯಾವ ಕಾರಣಕ್ಕೂ ಅದನ್ನು ಅಧಿಕಾರಿಗಳು ಬದಲಾಯಿಸಬಾರದು. ಆಯ್ಕೆ ಸಮಿತಿ ಸಭೆಯಲ್ಲೇ ಆಧಿಕಾರಿಗಳು ಅನುಮೋದನೆ ಕೊಡಬೇಕು. ಇದರಿಂದ ಈಗ ಆದಂತಹ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾಗಬಹುದು.

ನಾವು ಎಲ್ಲರೂ ಸೇರಿ ಇಂಥ ಯಾವುದಾದರೂ ವ್ಯವಸ್ಥೆಗೆ ಒತ್ತಾಯಿಸಬೇಕು. ಇಲ್ಲದಿದ್ದರೆ ಪ್ರತಿವರ್ಷವೂ ಇದು ಹಣ ಸಿಗದಿರುವವರ ದೂರು ಎಂದು ತಳ್ಳಿಹಾಕಲು ಸರ್ಕಾರಕ್ಕೂ ಸುಲಭವಾಗುತ್ತದೆ.

ಇದಲ್ಲದೆ ಇನ್ನೂ ಒಂದು ಪ್ರಶ್ನೆ ಹಾಗೇ ಉಳಿಯುತ್ತದೆ. ಈಗ ಅನೇಕ ರಂಗ ಸಂಸ್ಥೆಗಳು ಕಲಾಸಂಸ್ಥೆಗಳು ಕೆಲಸಮಾಡುತ್ತಿವೆ. ಪ್ರತಿ ವರ್ಷ ನೂರಾರು ಜನ ಕಲಾಪ್ರಂಪಂಚದಲ್ಲಿ ತೊಡಗಿಕೊಳ್ಳುತ್ತಾರೆ. ಸರ್ಕಾರಿ ಅನುದಾನದ ಬೇಡಿಕೆ ಪ್ರತಿ ವರ್ಷ ಏರುತ್ತಲೇ ಇದೆ.  ಈ ಅನುದಾನಗಳಿಂದ ಗ್ರಾಮೀಣ ಹವ್ಯಾಸಿ ರಂಗಭೂಮಿಯ ಮೇಲಾದ ಪರಿಣಾಮಗಳನ್ನು. ಮತ್ತು ರಂಗ ಸಂಘಟಕರ ಮೇಲೆ ಹೆಚ್ಚಿದ ಒತ್ತಡವನ್ನೂ ಯೋಚಿಸಬೇಕು.

ಇತ್ತಿಚೆಗೆ ಕನಿಷ್ಟ ಇಪ್ಪತ್ತು ರಂಗ ತಂಡಗಳು ನಮ್ಮಲ್ಲಿ “ತಮ್ಮ ತಂಡದ ನಾಟಕ ಪ್ರದರ್ಶನ ಮಾಡಿಸಿ” ಎಂದು ಬೇಡಿಕೆ ಇಡುತ್ತವೆ. ನಾಟಕ ಸಿದ್ಧಪಡಿಸಿಕೊಂಡು ಪ್ರದರ್ಶನಕ್ಕೆ ತಯಾರಾಗುವ ತಂಡಗಳು ಹುಟ್ಟಿಕೊಳ್ಳುತ್ತಿವೆ ಹೊರತು ಅದಕ್ಕೆ ಸಮನಾಗಿ ಹೋಗಲಿ ಇರುವ ರಂಗ ಸಂಘಟಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದೆಲ್ಲವನ್ನೂತಿಳಿದೂ ಹಾಗೇ ಮುಂದುವರಿಯುತ್ತ ಇದ್ದೇವೆ. ಸಮ್ಮೇಳನಗಳನ್ನು ಮಾಡುತ್ತ ನಿರ್ಣಯಗಳನ್ನು ಮಾಡುತ್ತ ಕುಳಿತಿದ್ದೇವೆ. ಸರ್ಕಾರಗಳು ತಮಗೇನು ಬೇಕೋ ಅದನ್ನು ಮಾಡುತ್ತಿವೆ ಅಷ್ಟೆ.

‍ಲೇಖಕರು avadhi

July 25, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: