ಭುವನೇಶ್ವರಿ ಹೆಗಡೆ ಅಂಕಣ- ಮೇಷ್ಟ್ರು ವೃತ್ತಿಯ ಕೆಲವು ಭಾಗ್ಯಗಳು

6

ನಾವು ಜೀವನೋಪಾಯಕ್ಕಾಗಿ ಆರಿಸಿಕೊಳ್ಳುವ ವೃತ್ತಿಗಳು ಪೂರ್ವಜನ್ಮದಲ್ಲಿಯೇ ನಿಗದಿತವಾಗಿರುತ್ತವೆ ಎನ್ನಲು ನನ್ನ ಬಳಿ ಪುರಾವೆಗಳೇನೂ ಇಲ್ಲವಾದರೂ ನನಗೆ ಆ ಅನುಮಾನ ಮಾತ್ರ ಇದ್ದೇ ಇದೆ. ಸ್ಕೂಲ್ ಟೀಚರ್ ಆಗಬೇಕೆಂದಿದ್ದೆ, ಸಿನಿಮಾ ರಂಗ ಸೇರಿದೆ ಎನ್ನುವ ನಟ ನಟಿಯರು, ಏರ್ ಹೋಸ್ಪೆಸ್ ಆಗುವ ಆಸೆಯಿತ್ತು ಡಾಕ್ಟರ್ ಆದೆ ಎನ್ನುವವರು, ಐ ಎ ಎಸ್ ಬರೆದು ಅಧಿಕಾರಿಯಾಗಬೇಕೆಂದಿದ್ದೆ ನಟನೆ ಸೆಳೆಯಿತು. ಸಿನಿಮಾ ಸೇರಿದೆ ಎನ್ನುವವರು ನನ್ನೀ ಅನುಮಾನವನ್ನು ಪುಷ್ಟೀಕರಿಸುತ್ತಲೇ ಬಂದಿದ್ದಾರೆ.

ನಾನು ಅರ್ಥಶಾಸ್ತ್ರದ ಎಂ.ಎ. ಡಿಗ್ರಿ ಹಿಡಿದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಹೊರಬಂದಾಗ ಅದಕ್ಕೆ ಲಗತ್ತಾಗಿರುವ ಉಪನ್ಯಾಸಕ ಹುದ್ದೆಗೆ ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧಳಿದ್ದು ಅಷ್ಟ ದಿಕ್ಕುಗಳಿಗೂ ಅರ್ಜಿ ಗುಜರಾಯಿಸಿದ್ದೆ. ದಿಢೀರನೆ ಬಯಲು ಸೀಮೆಯ ಹಳ್ಳಿಯೊಂದರಿಂದ ಉಪನ್ಯಾಸಕ ಹುದ್ದೆಗೆ ಕರೆ ಬಂತು. ಸಂದರ್ಶನದ ದಿನ ಸಂಭ್ರಮದಿಂದ ಆ ಹಳ್ಳಿಗೆ ತಮ್ಮನೊಂದಿಗೆ ಹೋಗಿ ಇಳಿದೆ.

ಆ ಹಳ್ಳಿಯ ಚೇರ್ಮನ್ನರ ಪರಿಶ್ರಮದಿಂದ ಅಲ್ಲಿಗೊಂದು ಜ್ಯೂನಿಯರ್ ಕಾಲೇಜು ಹೇಗೋ ದೊರಕಿತ್ತು. ಊರ ಹೊರಗಿದ್ದ ಚೇರ್ಮನ್ನರ ಅಂಗಡಿಯನ್ನೇ ತೆರವುಗೊಳಿಸಿ ಕಾಲೇಜು ಬೋರ್ಡು ತೂಗಿಸಿದ್ದರು. ಬೇರೆ ಬೇರೆ ವಿಷಯಗಳಿಗೆ ನನ್ನಂತೆ ಈಗಿನ್ನೂ ಹೊಸದಾಗಿ ಸ್ನಾತಕೋತ್ತರ ಪದವಿ ಮುಗಿಸಿದ ಅನೇಕ ‘ಉಮೇದು’ವಾರರು ಬಂದಿದ್ದರು. ಸಂದರ್ಶನದಲ್ಲಿ ನನಗೆ ಕೇಳಲಾದ ಪ್ರಶ್ನೆಗಳು,

  • ಅಡಿಕೆಗೆ ಈಗ ರೇಟು ಎಷ್ಟಿದೆ?
  • ಗೋಕರ್ಣ ನಿಮ್ಮೂರಿಂದ ಎಷ್ಟು ದೂರ?
  • ಸಿರಸಿ ಕಡೆ ಮಾಡುವ ತೊಡದೇವು ಎಂಬ ಸಿಹಿತಿಂಡಿ ಮಾಡುವುದು ಹೇಗೆ?
  • ಹೆಗಡೆಗೂ ಪಗಡೆಗೂ ಏನಾದರೂ ಸಂಬಂಧವಿದೆಯೆ?

ನನ್ನ ಉತ್ತರ ಸರಿಯಿತ್ತು ಎನಿಸುತ್ತದೆ. ಹುದ್ದೆ ನನಗೇ ದೊರಕಿತ್ತು! ನಾನು ಮೇಷ್ಟ್ರು ವೃತ್ತಿಯನ್ನು ವರಿಸಿ ಆಗಿತ್ತು.

ನನಗೆ ಉದ್ಯೋಗ ಭಾಗ್ಯ ನೀಡಿದ ಆ ಹಳ್ಳಿಯ ಹೆಸರು ಕಾಕತಾಳೀಯವೆಂಬಂತೆ ‘ಭುವನಹಳ್ಳಿ’ ಎಂಬುದಾಗಿತ್ತು. (Sometimes facts are more interesting than fiction ಎಂದೊಂದು ಹೇಳಿಕೆ ಇದೆ) ಮರುದಿನ ನಮ್ಮ ಉದ್ಯೋಗದಾತರ ಆದ ಚೇರ್ಮನ್ನರು ಎಲ್ಲ ಹೊಸ ಉಪನ್ಯಾಸಕರಿಗೂ ಒಂದು ಕ್ಲಾಸ್ ತೆಗೆದುಕೊಂಡರು.

‘ನೋಡ್ರಿ ನೀವೆಲ್ಲ ಇನ್ನೂ ಹೊಸ ಉಮೇದಿನ ಗ್ರ್ಯಾಜ್ಯುವೇಟ್ಸ್ ಇದ್ದೀರಿ ಹೌದಲ್ಲೋ? ಹೊಸದಾಗಿ ಶುರುವಾಗಿರೋ ನಮ್ಹಳ್ಳಿ ಕಾಲೇಜ್ನಾಗ ಛಲೋತ್ನಾಗಿ ಪಾಠ ಮಾಡಿ ಕಾಲೇಜಿಗೆ ಒಳ್ಳೇ ಹೆಸರು ಬಂತಂದ್ರ ನಿಮಗೆಲ್ಲ ಮುಂದ ಸಂಬಳಾ ಜಾಸ್ತೀ ಮಾಡೋಣು ಈಗ ಸದ್ಯಕ್ಕೆ ಇಷ್ಟು ಮಾತ್ರ ಕೊಡಲು ಸಾಧ್ಯ ಎಂದು ತುಂಬಾ ಕಡಿಮೆ ಮೊತ್ತದ 1ಆಫರ್ ನೀಡಿದರು ಉಳಿದವರೆಲ್ಲ ಮುಖ ಚಿಕ್ಕದು ಮಾಡಿದರೂ ಕನ್ನಡ ಪತ್ರಿಕೆಗಳಲ್ಲಿ ಬರೆದು ಹತ್ತು ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನನಗೆ ಅದೇನು ಅಷ್ಟು ಕನಿಷ್ಠ ಎನ್ನಿಸಲಿಲ್ಲ’ – ಮುಂದೆ ಸಂಬಳ ಹೆಚ್ಚಿಸೋಣ ಎಂದು ಚೇರ್ಮನ್ನರು ಆಸೆ ಬೇರೆ ತೋರಿಸಿದ್ದರಲ್ಲ. ಎಲ್ಲರೂ ಜೈ ಎಂದು ಬಿಟ್ಟೆವು.

ನನಗೆ ಉಳಿಯಲು ಗಂಗವ್ವನೆಂಬ ಪಂಚಾಯ್ತಿ ಸದಸ್ಯೆಯ ಮನೆಯಲ್ಲಿ ಒಂದು ಖೋಲಿ ಕೊಡಿಸಿದರು. ಮಲೆನಾಡಿನ ಹಳ್ಳಿಯ ದೊಡ್ಡ ಮನೆಗಳ ವ್ಯವಸ್ಥೆಗೂ ಬಯಲುಸೀಮೆಯ ಹಳ್ಳಿಗಳ ಮನೆಗಳ ವ್ಯವಸ್ಥೆ ಗೂ ಅಂತರ ತಿಳಿದಾಗ ನನ್ನ ನೌಕರಿಯ ಉಮೇದು ಜರ್ರಂತ ಇಳಿದದ್ದು ಸತ್ಯವಾದರೂ ಜೀವನದ ಪರಮ ಗುರಿಯಾದ ಕಾಲೇಜು ಉಪನ್ಯಾಸಕಿಯಾಗಬೇಕೆಂಬ ನಿರ್ಧಾರ ಅದರಿಂದ ವಿಚಲಿತವಾಗಲು ಬಿಡಲಿಲ್ಲ.

ಒಂದು ದಿನ ಕಾಲೇಜು ಕಟ್ಟಡದ ಹೊಸ್ತಿಲಿಗೆ ಕಾಯಿ ಒಡೆದು ಕ್ಲಾಸು ಶುರು ಮಾಡುವುದೆಂದಾಯ್ತು. ಕಾಲೇಜೆಂದರೆ ಒಂದು ಉದ್ದದ ಹಾಲ್ ಅಷ್ಟೆ. ಅದರ ಒಂದು ಮೂಲೆಯಲ್ಲಿ ಗೋಡೆಗಾನಿಸಿಟ್ಟ ಒಂದು ಬೋರ್ಡು, ಒಂದು ಕುರ್ಚಿ ನಾಲ್ಕಾರು ಬೆಂಚುಗಳು ಇದ್ದವು. ಹಾಲಿನ ಇನ್ನೊಂದು ಮೂಲೆಯಲ್ಲಿ ಪ್ರಿನ್ಸಿಪಾಲರ ಕುರ್ಚಿ ಟೇಬಲ್ ಇಡಲ್ಪಟ್ಟಿತ್ತು. ವಿದ್ಯಾರ್ಥಿಗಳನ್ನು ಎದುರಿಟ್ಟುಕೊಂಡು ಪಾಠ ಮಾಡುವಾಗ ತೀರಾ ಪ್ರಿನ್ಸಿಪಾಲರ ಮುಖವೂ ಅನತಿ ದೂರದಲ್ಲಿಯೇ ಕಾಣುತ್ತಿದ್ದರೆ ಚೆನ್ನಾಗಿರೋದಿಲ್ಲವೆಂದು ಚೇರ್ಮನ್ನರ ಬಳಿ ನಾವು ಮೇಷ್ಟ್ರುಗಳೆಲ್ಲ ಅಹವಾಲು ಕೊಟ್ಟೆವು.

ಮರುದಿನ ಕಾಲೇಜಿಗೆ ಹೋಗುವಷ್ಟರಲ್ಲಿ ಒಂದು ಅದ್ಭುತ ಯೋಜನೆ ಜಾರಿಯಲ್ಲಿ ಬಂದಿತ್ತು. ಪ್ರಿನ್ಸಿಪಾಲರ ಟೇಬಲ್ಲಿನ ಎದುರು ಯಕ್ಷಗಾನದ ಪ್ರಮುಖ ಪಾತ್ರಧಾರಿಗಳಿಗೆ ತೆರೆ ಹಿಡಿಯುವಂತೆ ಒಂದು ಕಂಬಳಿಯ ತೆರೆ ಕಟ್ಟಲಾಗಿದೆ. ಅದರ ಕೆಳಭಾಗದಲ್ಲಿ ಪ್ರಿನ್ಸಿಪಾಲರ ಕಾಲು, ಬೂಟು ಅವುಗಳ ಅಲುಗಾಟ ಎಲ್ಲ ಕಾಣುತ್ತಿದೆ.

‘ಕಾಲ್ಪನಿಕ ತೆರೆಯಾಚೆ ವಾಸ್ತವದ ಮೇಲಧಿಕಾರಿ!’ ವಿದ್ಯಾರ್ಥಿಗಳ ಮುಂದೆ ನಗು ನಿಯಂತ್ರಿಸಿಕೊಂಡು ಪಾಠ ಮಾಡುವುದೇ ಕಷ್ಟವಾಗಿತ್ತು. ತಾನು ಕುಳಿತ ಟೇಬಲ್ಲಿಗೇ ಹೀಗೆ ತೆರೆ ಕಟ್ಟಿದರೆ ಅದರೊಳಗೆ ಕೂತವರಾದರೂ ಕತ್ತಲು ಮಂಕು ಬಡಿದಂತೆ ಪಾಪ ಹೇಗಿದ್ದಾರು? ಮರುದಿನ ಪ್ರಿನ್ಸಿಪಾಲರ ಉಸ್ತುವಾರಿಯಲ್ಲಿ ಆ ಹಾಲಿಗೆ ತಾಗಿದ್ದ ಚೂರು ಜಾಗದಲ್ಲಿ ಶೆಡ್ ತಡಿಕೆಗಳ ಚೇಂಬರ್ ಒಂದು ರೆಡಿ ಆಯ್ತು. ಉಪನ್ಯಾಸಕರು ಕ್ಲಾಸಿಲ್ಲದಾಗ ಕೂತಿರಲು ಒಂದು ಬೆಂಚು ಅಲ್ಲೇ ಹಾಕಿದ್ದರು.

ಹೊಸದಾಗಿ ಪ್ರಾರಂಭವಾದ ಕಾಲೇಜಿಗೆ ದಿನಾ ಎರಡು ಮೂರು ವಿದ್ಯಾರ್ಥಿಗಳು ಬಂದು ಸೇರುತ್ತಿದ್ದರು. ನೇರವಾಗಿ ಹೊಲದಿಂದ, ಮಿಲ್ಲುಗಳಿಂದ, ಕೆಲಸಗಳಿಂದ ಬಿಟ್ಟು ಬಂದ ಹುಡುಗರು ವಿದ್ಯಾರ್ಥಿಗಳ ಹಾಗೆ ಕಾಣುತ್ತಿರಲಿಲ್ಲ. ಸಿಲೇಬಸ್ಸ್, ಪಠ್ಯಪುಸ್ತಕ ಯಾವುದೂ ಬಂದಿರಲಿಲ್ಲ. ವಾರಗಟ್ಟಲೆ ಪೀಠಿಕೆ ಹಾಕಿಯೇ ಹಾಕಿದೆವು. ರಿಟೈರ್ಡ್ ಹೈಸ್ಕೂಲ್ ಹೆಡ್ಮಾಸ್ಟ್ರೊಬ್ಬರಿಗೆ ಪ್ರಿನ್ಸಿಪಾಲ ಪದವಿ ಕೊಟ್ಟಿದ್ದರಾದರೂ ಅವರು ಒಂದೆರಡು ಕ್ಲಾಸು ತೆಗೆಯಬೇಕಿತ್ತು. ಆದರೆ ಅವರಿಗೆ ವಿಷಯ ಯಾವುದೆಂದು ಹಂಚಿಕೆ ಇರಲಿಲ್ಲ. ಇದ್ದ ಇಪ್ಪತ್ತು ಮಕ್ಕಳಿಗೆ ದಿನಾ ಅರ್ಧಗಂಟೆ ಅವರು ಹೀಗೆ ಪಾಠ ಮಾಡುತ್ತಿದ್ದರು.

‘ನೋಡ್ರಪ್ಪಾ ಮಕ್ಕಳು ದಿನಾಸೂರ್ಯ ಮೂಡುವುದರೊಳಗೆ ಎದ್ದುಬಿಡಬೇಕು ಯಾಕಪ್ಪಾ ಎದ್ದುಬಿಡಬೇಕು ಅಂದ್ರೆ ಆ ಕಾಲ ಬಲು ಪ್ರಶಸ್ತವಾದ ನಸುಕಿನ್ನೂ ಹರಿಯದ ಸುಂದರ ಕಾಲ. ವಾತಾವರಣದಲ್ಲಿ ಆಕ್ಸಿಜನ್ ತುಂಬಿರುವ ಸಮಯ. ದಿನಾ ಬೆಳಗ್ಗೆದ್ದು ಬಾಯಿ ಮುಕ್ಕಳಿಸಿ ಹಲ್ಲುಜ್ಜಬೇಕು. ಹಲ್ಲುಜ್ಜುದು ಯಾಕಪ್ಪಾಂದ್ರೆ ಬಾಯಿ ಹಲ್ಲು ಸ್ವಚ್ಛವಾಗಿರ್ಬೇಕು. ಬಾಯಿ ಹಲ್ಲು ಯಾಕಪಾ ಸ್ವಚ್ಛವಾಗಿರ್ಬೇಕು ಅಂದ್ರ ಮುಂದ ಹಲ್ಲು ಹುಳಕ ಆಗ್ತಾವ ಕಾಯಿಲೆ ಬರ್ತಾವ. ಕಾಯಿಲೆ ಬಂದ್ರ ಏನಪಾ ಆಗ್ತದ ಅಂದ್ರ…. ದಿನವೂ ಈ ಪಾಠ ಕೇಳಿಸಿಕೊಳ್ಳುತ್ತಿದ್ದ ನನಗೆ ನಾನೂ ಒಂದು ದಿನ ಅರ್ಥಶಾಸ್ತ್ರ ಬಿಟ್ಟು ‘ಸ್ವಚ್ಛತಾ ಶಾಸ್ತ್ರ’ದ ಕುರಿತು ಪಾಠ ಮಾಡಬೇಕೆಂಬ ಆಸೆ ಹುಟ್ಟಿಬಿಟ್ಟಿತು. (ಅರ್ಥ ಶಾಸ್ತ್ರದ ಪರಿಭಾಷೆಯಲ್ಲಿ ಇದನ್ನು ಡೆಮಾನಸ್ಟೇಶನ್ ಎಫೆಕ್ಟ್ ಅನ್ನುತ್ತಾರೆ) ಶುರು ಹಚ್ಕೊಂಡೆ.

‘ನೋಡ್ರಪ್ಪಾ ದಿನಾಲು ನಾವು ಸ್ನಾನ ಮಾಡಲೇ ಬೇಕು. ಈ ಸ್ನಾನ ಯಾಕಪಾಂದ್ರ ನಮ್ಮ ಮೈ ನಮ್ಗ ವಾಸ್ನಿ ಬರ್ಬಾರ್ದು. ವಾಸನೆ ಬಂದ್ರ ಏನಪಾ ಆಗ್ತದಂದ್ರೆ…’ ಎಂದು ಶುರು ಮಾಡಿದ್ದೆ. ಹುಡುಗರ ಮುಖ ಯಾಕೋ ಹುಳ್ಳ ಹುಳ್ಳಗೆ ಕಾಣಿಸ್ಲಿಕ್ಕೆ ಶುರುವಾಯ್ತು. ಪಾಠ ನಿಲ್ಲಿಸಿ ಕಾರಣ ಕೇಳಿದೆ. ಮೊದಲು ಸಂಕೋಚಪಟ್ಟರೂ ನಿಧಾನಕ್ಕೆ ಅವುಗಳು ಹೇಳಿದ್ದೇನೆಂದರೆ –

‘ನಮ್ಮನೀ ಒಳ್ಗ ದಿನಾ ಜಳಕ ಮಾಡೂದಿಲ್ರಿ. ವಾರದಾಗ ಒಂದು ಎರಡು ಸಲ ಮಾಡ್ತೇವೆ’- ನನಗೆ ಶಾಕ್ ಆದರೂ ತೋರಿಸಿಕೊಳ್ಳದೇ ಸ್ನಾನದ ಮಹತ್ವದ ಕುರಿತು ನಿಜವಾಗಿಯೂ ತಿಳಿಸಿ ಹೇಳಿ, ‘ಕಾಲೇಜು ಮಕ್ಕಳು ನೀವೀಗ. ಸ್ಕೂಲ್ ಮಕ್ಕಳಲ್ಲ. ನಿಮ್ಮ ಹಿರಿಯರಿಗೂ ಹೇಳಿ ಸ್ನಾನ ಮಾಡಿಸಿ….’ ಎಂದು ಹೇಳಿ ಬೆವರೊರೆಸಿಕೊಂಡೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗುರುಪ್ರಸಾದ ಕುರ್ತಕೋಟಿ

    ಚೆನ್ನಾಗಿದೆ‌‌ ಭುವನಕ್ಕ! Interview ಪ್ರಸಂಗ ಓದಿ‌ ನಕ್ಕೆ .. 🙂 ಬಯಲುಸೀಮೆಯ ವಾರಕ್ಕೊಮ್ಮೆ‌ ಸ್ನಾನ‌ದ ರೂಢಿಗೆ ಅಲ್ಲಿನ‌ ನೀರಿನ‌ ಸಮಸ್ಯೆಯೂ ಒಂದು ಕಾರಣ ಅನ್ಸುತ್ತೆ..‌

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: