ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿಯ ಮೆರವಣಿಗೆ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಇತಿಹಾಸ ತಜ್ಞರೊಬ್ಬರ ಜೊತೆ ಚರ್ಚಿಸುವಾಗ ಒಂದು ಮಾತು ಬಂತು. ಅಷ್ಟೊಂದು ಸಾವಿರಗಟ್ಟಲೆ ಸೈನಿಕರ ಬಗ್ಗೆ ದಾಖಲೆಗಳಿವೆಯಲ್ಲಾ ಅದು ನಿಜವಾ? ಅಷ್ಟು ಜನರು ಯುದ್ಧದಲ್ಲಿ ಸತ್ತಿರುವಾಗ ಅವರ ಅಸ್ತಿಗಳು ಏನಾದವು, ಕುರುಕ್ಷೇತ್ರದಲ್ಲಿ ಸತ್ತ ಅಷ್ಟು ಅಕ್ಷೋಹಿಣಿ ಸೈನ್ಯದ ಕುರುಹುಗಳು ಏನಾದವು ಇತ್ಯಾದಿ. ನಂತರ ವಿಚಾರಿಸಿದಾಗ ತಿಳಿದಿದ್ದು ಮೂಳೆಗಳೂ ಸಹ ಮಣ್ಣಿನಲ್ಲಿ ಕರಗಿಬಿಡುತ್ತವೆ, ಇನ್ನೂರು ವರ್ಷಗಳಲ್ಲಿ ಎಲ್ಲವೂ ಮಣ್ಣಾಗಿ ಬಿಡುತ್ತವೆ ಹಾಗಾಗಿ ಅಷ್ಟೊಂದು ದೊಡ್ಡ ಸೈನ್ಯದ ಅಸ್ತಿ ಅವಶೇಷ ಸಿಗುವ ಸಾಧ್ಯತೆ ಇಲ್ಲ. 

ಇನ್ನೊಬ್ಬರು ವ್ಯಕ್ತಪಡಿಸಿದ ಅನುಮಾನವೂ ಸಹ ನಿಜವಾಗಿಯೂ ಹೈದರನ ಸೈನ್ಯ ಅಷ್ಟು ದೊಡ್ಡದಿತ್ತೇ? ಚೆನ್ನೈನ ಸೆಂಟ್ ಫೋರ್ಟ್ ಜಾರ್ಜ್ ಪುರಾತನ ದಾಖಲೆಗಳನ್ನು ನೋಡಿದಾಗ ಹೈದರನ ಸೈನ್ಯದ ಸಂಖ್ಯೆಯ ದಾಖಲೆಗಳು ನಿಖರವಾಗಿ ಕಾಲಾಳು, ಅಶ್ವದಳ, ಆನೆ, ಫಿರಂಗಿ, ಬಂದೂಕು, ಗಾಡಿಗಳು, ಹಸು ಎತ್ತು, ಡೇರೆ ಎಲ್ಲದರ ಲೆಕ್ಕ ಕೊಡುತ್ತವೆ. 

ಹೈದರನೂ ಸಹ ಕೊನೆಯಲ್ಲಿ ತನ್ನ ಸಮಸ್ತ ಆಸ್ತಿ ಪಾಸ್ತಿಗಳ ಲೆಕ್ಕ ಬರೆದಿಡಲು ಹೇಳಿದಾಗ ಲೆಕ್ಕಿಗರು ದಾಖಲಿಸಿರುವ ಮೂಲ ವಿವರಗಳು ಸಿಗುತ್ತವೆ. ಹೈದರನ ಒಂದು ಮೆರವಣಿಗೆ ಹೇಗಿತ್ತು ಎನ್ನುವುದನ್ನು ದೆ ಲ ತೂರ್ ವರ್ಣಿಸಿದ್ದಾನೆ. ಅದನ್ನು ಅವನ ಮಾತಿನಲ್ಲೇ ಅನುವಾದಿಸಿ ಕೊಡುತ್ತೇನೆ. 

‘ಟ್ರಾವಂಕೂರ್ ಯುದ್ಧದಲ್ಲಿ ನಿರತನಾಗಿದ್ದ ಹೈದರ್ ದೀರ್ಘ ಕಾಲ ತನ್ನ ರಾಜ್ಯದಿಂದ ದೂರವಾಗಿದ್ದ. ಸಾಮಾನ್ಯ ಪ್ರಜೆಯಾಗಿದ್ದ ಹೈದರ್ ಮರಳಿ ಶ್ರೀರಂಗಪಟ್ಟಣಕ್ಕೆ ಹೊರಟಾಗ ಭಾರತದ ಮಹಾನ್ ರಾಜರುಗಳಲ್ಲಿ ಒಬ್ಬನೆಂದು ಗುರುತಿಸುವಂತೆ ಹೊರಟ. ತನ್ನ ಸ್ಥಾನಕ್ಕೆ ತಕ್ಕಂತೆ ಸಕಲ ವಿಜೃಂಭಣೆ ಆಡಂಬರಗಳೊಂದಿಗೆ ರಾಜಧಾನಿಗೆ ಮರಳಬೇಕೆನ್ನುವುದು ಹೈದರನ ಇಚ್ಚೆಯಾಗಿತ್ತು. ಅದ್ಭುತ ರೀತಿಯಲ್ಲಿ ಪುರಪ್ರವೇಶ ಮಾಡುವ ಭರದಲ್ಲಿ ಆತನ ಸವಾರಿ ಹೊರಟಿತು. ಆತನ ಸವಾರಿಯೇ ವಿಜಯದ ಸಂಕೇತವಾಗಿತ್ತು. ಇಲ್ಲಿ ನಾನು ಕೊಡುವ ವರ್ಣನೆ ಓದುಗರ ಮನ ಒಲಿಸುವುದರಲ್ಲಿ ಸಂದೇಹವಿಲ್ಲ ಏಕೆಂದರೆ ಏಷಿಯಾದ ಮೆರವಣಿಗೆಯ ಭವ್ಯತೆಯನ್ನು ಅದು ಹೊರಗಿನವರಿಗೆ ಪರಿಚಯಿಸುತ್ತದೆ.’ 

‘ಹೈದರ್ ಐವತ್ತು ಸಾವಿರ ಸೈನಿಕರ ಅತ್ಯುತ್ತಮ ಸೈನ್ಯದೊಡನೆ ಹೊರಟ. ಅದರಲ್ಲಿ ಇಪ್ಪತ್ತು ಸಾವಿರ ಅಶ್ವಾರೋಹಿಗಳು, ಅತ್ಯುತ್ತಮ ಕುದುರೆಗಳ ಸವಾರರು, ಮೂವತ್ತು ಸಾವಿರ ಸಿಪಾಯಿಗಳು, ನಾಲ್ಕು ಸಾವಿರ ತೋಪುದಾರರು, ಎಲ್ಲರೂ ಸಮವಸ್ತ್ರ ಧರಿಸಿದ್ದರು.’  

ಪ್ರತಿದಿನ ಮೆರವಣಿಗೆಯಲ್ಲಿ ಹೈದರ್ ಮತ್ತು ಆತನ ಸೇವಕರು ಸಾಗುವ ರಸ್ತೆಯ ಬಲಬದಿಯಲ್ಲಿ ಅಶ್ವಾರೋಹಿಗಳು ಸಾಲುಗಟ್ಟಿ ನಿಲ್ಲುತ್ತಿದ್ದರು. ಹೈದರನು ಆನೆ ಹತ್ತುವಾಗ ಎಲ್ಲಾ ಅಧಿಕಾರಿಗಳು ಮತ್ತು ಇತರರು ಸಲಾಮು ನೀಡುತ್ತಿದ್ದರು. ಎಲ್ಲಾ ಉನ್ನತ ವ್ಯಕ್ತಿಗಳು ಆನೆಗಳನ್ನು ಹತ್ತಿದ ಮೇಲೆ ಮೆರವಣಿಗೆ ತೊಡಗಿದಂತೆ ಅಶ್ವಾರೋಹಿಗಳ ಒಂದು ಪಡೆ ಮುಂದೆ ಅತ್ಯಂತ ವೇಗವಾಗಿ ಓಡಿ ರಸ್ತೆಬದಿಯ ಸಾಲಿನ ಮುಂದುವರಿಕೆಯಾಗಿ ನಿಲ್ಲುತ್ತಿತ್ತು.

ಹೀಗೆ ಕುದುರೆ ಸವಾರರ ಪಡೆ ಸರದಿ ಪ್ರಕಾರ ಸಾಲನ್ನು ಮುಂದುವರಿಸುತ್ತಿತ್ತು. ಹುಸ್ಸಾರ್ ಗಳ ಎರಡು ಪಡೆ – ಒಂದು ಯುರೋಪಿಯನ್ ಅಶ್ವಾರೋಹಿಗಳ ಸಂಪೂರ್ಣ ಪಡೆ ಡ್ರಾಗನ್ ಅತಿ ಗೌರವದ ಸ್ಥಾನದಲ್ಲಿ ನಿಂತು (ಪೋಸ್ಟ್ ಆಫ್ ಆನರ್) ನವಾಬನಿಗೆ ಮೊದಲ ಸಲ್ಯೂಟ್ ಕೊಡುತ್ತಿತ್ತು. ನಂತರ ಅದು ಮೆರವಣಿಗೆ ಮುಂಚೂಣಿಯಲ್ಲಿ ನಿಲ್ಲುತ್ತಿತ್ತು. ಅವರ ಹಿಂದೆ ಐನೂರು ಸಾಗಾಣಿಕೆಗಾರರು (ಕೊರಿಯರ್ಸ್) ಉತ್ತಮ ಸಮವಸ್ತ್ರ ಧರಿಸಿ ಒಂಟೆಯ ಪಡೆಯಾಗಿ ನಿಲ್ಲುತ್ತಿದ್ದರು. ಅವರ ಹಿಂದೆ ಲಾಂಛನ ಸಹಿತ ನೀಲಿ ಮಕಮಲ್ಲಿನ ಮೇಲೆ ಜರತಾರಿ ಕಸೂತಿ ಮಾಡಿದ ಹೊದಿಕೆ ಹೊದ್ದ ಎರಡು ಆನೆಗಳು.

ಒಂದರ ಹೊದಿಕೆಯಲ್ಲಿ ಸೂರ್ಯ ಇನ್ನೊಂದು ಚಂದ್ರ ಮತ್ತು ನಕ್ಷತ್ರಗಳು ಮಿನುಗುತ್ತಿದ್ದವು. ಆ ಎರಡು ಆನೆಗಳ ಹಿಂದೆ ನಗಾರಿಗಳನ್ನು ಹೊತ್ತ ಎರಡು ಆನೆಗಳು. ಸವಾರಿ ಪೂರ್ಣಗೊಳ್ಳುವವರೆಗೆ ನಗಾರಿ ಬಾರಿಸುತ್ತಲೇ ಇದ್ದು ಬಹುದೂರದವರೆಗೆ – ಗಾವುದ ದೂರ – ಕೇಳಿಸುತ್ತಿತ್ತು. ಸದ್ದಿಗೊಂದು ರಾಜ ಗಾಂಭೀರ್ಯ ಇರುತ್ತಿತ್ತು. ಇದರ ಹಿಂದೆ ನಾಲ್ಕು ಆನೆಗಳು ಸಂಗೀತಗಾರರನ್ನು ಹೊತ್ತು ಬರುತ್ತಿತ್ತು.

ಒಟ್ಟು ಮೂವತ್ತಎರಡು ವಾದ್ಯಗಾರರು ಕೊಂಬು ಕಹಳೆ ಕಂಚಿನ ತಾಳ, ಢಕ್ಕೆ ಇತ್ಯಾದಿಗಳನ್ನು ನುಡಿಸುತ್ತಿದ್ದರು. ಇವುಗಳ ಹಿಂದೆ ಯುದ್ಧ ಆನೆಗಳೆಂದು ಗುರುತಿಸಲಾಗುವ ಐದು ಆನೆಗಳು. ಇವುಗಳಿಗೆ ಚಿನ್ನದ ಅಂಬಾರಿಗಳನ್ನು ಕಟ್ಟಿದ್ದು ಅವುಗಳಲ್ಲಿ ಒಂದೊಂದರಲ್ಲಿ ಆರು ಯುದ್ಧ ವೀರರು ಸಂಪೂರ್ಣ ಯುದ್ಧ ರಕ್ಷಾಕವಚಗಳನ್ನು ಧರಿಸಿ ಕೂರುತ್ತಿದ್ದರು. ಒಂದೇ ಬಾರಿಗೆ ಆರು ಗುಂಡುಗಳನ್ನು ಹಾರಿಸುವ ವಿಶೇಷ ಯುದ್ಧ ಶಸ್ತ್ರವನ್ನು ಹಿಡಿದಿರುತ್ತಿದ್ದರು. ಈ ಆನೆಗಳಲ್ಲಿ ಒಂದು ನವಾಬನಿಗಾಗಿ ಮೀಸಲು ಆದರೆ ಹೈದರ್ ಅಪರೂಪವಾಗಿ ಈ ಆನೆಯನ್ನು ಏರುತ್ತಿದ್ದ.

ಆನೆಗಳ ಸವಾರಿಯ ನಂತರ ಎರಡು ಪಡೆಗಳ ಹಿಂದೆ ಕಪ್ಪು ಕುಳ್ಳ ಕುದುರೆಗಳ ಪಡೆ. ಸವಾರರು ಸಂಪೂರ್ಣವಾಗಿ ಶಸ್ತ್ರಸಹಿತರಾಗಿ, ತಮ್ಮ ಶಿರಸ್ತ್ರಾಣದ ಮೇಲೆ ದೊಡ್ಡ ಆಸ್ಟ್ರಿಚ್ ಹಕ್ಕಿಯ ಪುಕ್ಕಗಳನ್ನು ಧರಿಸಿರುತ್ತಿದ್ದರು. ಪುಕ್ಕಗಳು ಅವರ ಬೆನ್ನ ಮೇಲೆ ತೂಗಾಡುತ್ತಿದ್ದವು. ಅವರು ಕೈಯಲ್ಲಿ ಉದ್ದವಾದ, ಹೊಳೆಯುವ ಉಕ್ಕಿನ ಭರ್ಜಿಗಳನ್ನು ಹಿಡಿದಿರುತ್ತಿದ್ದರು. ಅವರ ಕುದುರೆಗಳ ಜೀನು ಕೆಂಪು ವರ್ಣದ್ದಾಗಿದ್ದು ಅದಕ್ಕೆ ಕಪ್ಪು ರೇಷ್ಮೆಯ ಕುಚ್ಚುಗಳು ತೊಂಗುತ್ತಿದ್ದವು. ಅಶ್ವಾರೋಹಿಗಳ ಪಡೆಯ ಹಿಂದೆ ಕಾಲಾಳುಗಳು ತೊಡೆಯವರೆಗೆ ಬರುವ ಡ್ರಾಯರ್ ಮೇಲೆ ರೇಷ್ಮೆಯ ದೊಡ್ಡ ಸ್ಕಾರ್ಫ್ ಕಟ್ಟಿಕೊಂಡಿರುತ್ತಿದ್ದರು.

ಉದ್ದವಾದ ಭರ್ಜಿಗಳನ್ನು ಹಿಡಿದು ಅದರ ತುದಿಗೆ ಕಟ್ಟಿದ ಆಸ್ಟ್ರಿಚ್ ಪುಕ್ಕ ಮತ್ತು ಸಣ್ಣ ಗಂಟೆಗಳು ಅವರು ನಡೆದಂತೆ ತೂಗುತ್ತಾ ಸದ್ದು ಮಾಡುತ್ತಿದ್ದವು. ಅವರ ಹಿಂದೆ ಬೆಳ್ಳಿ ಅಂಚಿನ ಮಣ್ಣಿನ ಬಣ್ಣದ ಬಾವುಟಗಳನ್ನು ಹಿಡಿದ ಪಡೆ ಬರುತ್ತಿತ್ತು. ಸಾಮಾನ್ಯವಾಗಿ ಭರ್ಜಿದಾರರು ಯುವರಾಜನ ಜೊತೆ ಬೇಟೆಗೆ ಹೋಗುತ್ತಾರೆ. ಬೆಟ್ಟ ಗುಡ್ಡಗಳು ಕಾಡುಗಳಲ್ಲಿ  ಸುಲಭವಾಗಿ ಸಾಗುವ ಪರಿಣತಿ ಹೊಂದಿರುತ್ತಾರೆ. ಇವರಲ್ಲಿ ಚಿಕ್ಕ ಲಾಂಛನಗಳನ್ನು ಹಿಡಿದವರನ್ನು ನಗರಗಳು, ಹಳ್ಳಿಗಳು ಮತ್ತು ಕೋಟೆಗಳಲ್ಲಿ ಕಾವಲುಗಾರರಂತೆ ನೇಮಿಸಲಾಗುತ್ತದೆ. ಈ ಬಾವುಟ ಹಿಡಿದವರನ್ನು ನೋಡಿದ ಕೂಡಲೇ ಯಾರಿಗೆ ಆದರೂ ಪ್ರವೇಶ ಪರವಾನಗಿ ಇಲ್ಲದೆ ಸಾಧ್ಯವಿಲ್ಲ ಎನ್ನುವ ಕುರುಹು. ಇವರು ಕೇಳಿದ ಪರವಾನಗಿ ಪತ್ರವನ್ನು ತೋರಿಸಲೇ ಬೇಕು. 

ಈ ಕಾಲಾಳು ಪಡೆ ಸಾಗಿದ ಮೇಲೆ ಇವರ ಹಿಂದೆ ದರ್ಬಾರಿನ ಉನ್ನತ ವ್ಯಕ್ತಿಗಳು ಸಾಗುತ್ತಾರೆ. ಇವರಿಗೆ ಯಾವುದೇ ನಿರ್ಬಂಧವಿಲ್ಲ, ಇಷ್ಟ ಬಂದಂತೆ ಸಾಗಬಹುದು. ಬಹಾದ್ದೂರ್ ಗಳು, ಸೇನಾಪತಿಗಳು, ಯುವರಾಜರು ಸಹ ಈ ಗುಂಪಿನಲ್ಲಿರುತ್ತಾರೆ. ಇವರ ನೆರವಿಗೆ ಸೇವಕರು ಇವರ ಜೊತೆಗೆ ಸಾಗುತ್ತಾರೆ. ಈ ಗುಂಪು ಅತ್ಯಂತ ಆಕರ್ಷಕವಾಗಿರುತ್ತದೆ. ತಲೆಯಿಂದ ಕಾಲಿನವರೆಗೆ ಕವಚಗಳನ್ನು ಧರಿಸಿ ಅತ್ಯುತ್ತಮ ಕುದುರೆಗಳ ಮೇಲೆ ಸವಾರಿ ಮಾಡುತ್ತಾರೇ. ಅವರ ಶಸ್ತ್ರಗಳನ್ನು ಚಿನ್ನ ಮತ್ತು ಬೆಳ್ಳಿಯ ರೇಕುಗಳ ಕಸೂತಿ ಹೊಂದಿದ ಡಮಾಸ್ಕಸ್ ಬಟ್ಟೆಯಲ್ಲಿ ಮುಚ್ಚಲಾಗಿರುತ್ತದೆ.

ಅನೇಕರು ತಮ್ಮ ಶಿರಸ್ತ್ರಾಣಗಳನ್ನು ಬಿಳಿಯ ಪುಕ್ಕ, ಮುತ್ತುರತ್ನಗಳಿಂದ ಸಿಂಗರಿಸಿಕೊಂಡಿರುತ್ತಾರೆ. ಹೆಚ್ಚಿನವರು ಜರತಾರಿಯ ಮುತ್ತುರತ್ನಗಳು ಹೊಲಿದ ಕೋಟ್ ಗಳನ್ನು ತೊಟ್ಟಿರುತ್ತಾರೆ. ಅವರ ಕುದುರೆಗಳಿಗೂ ರೇಷ್ಮೆ ಮುತ್ತು ರತ್ನಗಳ ಜೀನು ಹೊದಿಕೆಗಳನ್ನು ತೊಡಿಸಿರುತ್ತಾರೆ. ಈ ಗುಂಪಿನ ಸಂಖ್ಯೆ ಇಷ್ಟೇ ಎಂದು ನಿಖರವಾಗಿಲ್ಲ ಏಕೆಂದರೆ ಇದು ಸ್ವಯಂ ಇಚ್ಛೆಯಿಂದ ಬರುವ ಗುಂಪು. ಸಾಮಾನ್ಯವಾಗಿ ಇದು ಆರು ನೂರಕ್ಕಿಂತ ಕಡಿಮೆ ಇರುವುದಿಲ್ಲ. ಇವರೆಲ್ಲರಿಗೂ ಅವರವರದೆ ಆದ ಲಾಂಛನಗಳು ಇದ್ದು ಅವುಗಳನ್ನು ಹೊತ್ತುಕೊಂಡು ಸೇವಕರು ಸಾಗುತ್ತಾರೆ. ಇವರ ಹಿಂದೆ ನವಾಬನ ಆಪ್ತರಾದ ಎಂಟು ರಾಜಪರಿವಾರದವರು ಇರುತ್ತಾರೆ.

ಅತ್ಯುತ್ತಮ ಕುದುರೆಗಳನ್ನು ಏರಿ ಬರುತ್ತಾರೆ. ಅವರ ಜೊತೆಗೆ ಹನ್ನೆರಡು ಕಾಲಾಳುಗಳು ಕುದುರೆಯ ಜೀನು ಹಿಡಿದು ಲೀಡ್ ಮಾಡುತ್ತಾರೆ. ಆ ಕುದುರೆಗಳ ಅಲಂಕಾರ ಅದ್ಭುತವಾಗಿರುತ್ತದೆ. ಇವುಗಳಲ್ಲಿ ಮೊದಲನೆಯ ಕುದುರೆ ಮರಾಠ ಸೇನಾಧಿಪತಿ ಹೈದರನಿಗೆ ಕೊಟ್ಟ ಕಾಣಿಕೆ.  ಬೂದು ಬಣ್ಣದ್ದಾಗಿದ್ದು ಅತ್ಯಂತ ಅಪರೂಪದ ತಳಿಯ ಕುದುರೆ. ಅದರ ಕೂದಲು ಹೊಳೆಯುವ ಬೆಳ್ಳಿ ಬಣ್ಣದ್ದಾಗಿದ್ದು ದಟ್ಟವಾಗಿ ನೆಲದವರೆಗೆ ಇಳಿಬಿದ್ದಿರುತ್ತದೆ. ಅದಕ್ಕೆ ತಕ್ಕಂಥ ಬಾಲದ ಚೆಲುವು. ಸುಂದರವಾದ ಹೂಗಳನ್ನು ಪೇಂಟ್ ಮಾಡಿದ ಹೊದಿಸಲಾಗಿರುತ್ತದೆ. 

ಈ ಕುದುರೆಗಳ ಹಿಂದೆ ಓಡುವ ಕಾಲಾಳುಗಳ ಪಡೆ ಚಿನ್ನದ ತುದಿಯ ಕಪ್ಪು ಕೋಲುಗಳನ್ನು ಹಿಡಿದು ಬರುತ್ತಾರೆ. ಅವರ ಹಿಂದೆ ಹನ್ನೆರಡು ಸೈನಿಕರು ಚಿನ್ನ ಮತ್ತು ಬೆಳ್ಳಿಯ ಗದೆಗಳನ್ನು ಹಿಡಿದು ಕುದುರೆ ಸವಾರರಾಗಿ ಬರುತ್ತಾರೆ. ಇವರ ಹಿಂದೆ ದರ್ಬಾರಿನ ವಿವಿಧ ವಿಭಾಗಗಳ ಅಧಿಕಾರಿಗಳು ಬರುತ್ತಾರೆ. ಅವರವರ ಸ್ಥಾನ ಮತ್ತು ಇಲಾಖೆಗೆ ತಕ್ಕಂತೆ ಚಿನ್ನದ ಸರಗಳು ಮತ್ತು ಪದಕಗಳನ್ನು ಧರಿಸಿರುತ್ತಾರೆ. ಇವರ ಹಿಂದೆ ಹಸಿರು ರೇಷ್ಮೆ ಹೊದಿಕೆಯ ಆನೆಯ ಮೇಲೆ ಬೊಕ್ಕಸದ ಅಧಿಕಾರಿ ಬರುತ್ತಾನೆ. ಅವನ ಹಿಂದೆ ನವಾಬನ ಆನೆ ಬರುತ್ತದೆ. ಅದು ಐರಾವತವೆಂದು ಹೆಸರಾಗಿದ್ದ ಬಿಳಿ ಆನೆ. ಅದರ ಕಾಲುಗಳಿಗೆ ಬೆಳ್ಳಿಯ ಸರಪಳಿಗಳ ಆಭರಣ ಇರುತ್ತದೆ.

ಇದು ಇತರ ಆನೆಗಳಿಗೆ ಹೋಲಿಸಿದರೆ ಅತ್ಯಂತ ಅಪೂರ್ವ ಎನ್ನಿಸಿಕೊಂಡಿದ್ದು ಎತ್ತರ ಮತ್ತು ಗಾಂಭೀರ್ಯದಲ್ಲಿ ಎಲ್ಲವನ್ನೂ ಮೀರಿಸುವಂತಿದೆ. ಅದಕ್ಕೆ ರಾಜರ ಹಳದಿ ರೇಷ್ಮೆ ವಸ್ತ್ರವನ್ನು ಜೋಡಿಸಲಾಗಿರುತ್ತದೆ. ಇದರ ಮೇಲೆ ಅಂಬಾರಿ, ನಾಲ್ಕು ಸಣ್ಣ ಬೆಳ್ಳಿಯ ಗೋಪುರಗಳನ್ನು ಹೊಂದಿದ್ದು ಒಂದು ಕಡೆ ಬೆಳ್ಳಿಯ ಸರಪಳಿಗೆ ತೂಗುಬಿಟ್ಟ ಸಣ್ಣ ಬೆಳ್ಳಿಯ ಕೊಡಲಿಗಳಿರುತ್ತವೆ. ಇದು ತಾವು ಸೋಲಿಸಿದ ರಾಜರುಗಳ ಕುರುಹಾಗಿ ಭಾರತೀಯ ರಾಜರುಗಳು ಪ್ರದರ್ಶಿಸುತ್ತಾರೆ. ಆನೆಯ ಹಣೆಯ ಮೇಲೆ ಚಿನ್ನದ ಸೂರ್ಯನ ಲಾಂಛನವಿದೆ. ಅದಕ್ಕೆ ಇಬ್ಬರು ಮಾವುತರು. ಅಂಬಾರಿಯಲ್ಲಿ ನವಾಬನ ಹಿಂದೆ ಎಲೆಅಡಿಕೆ ಹಿಡಿದ ಹಡಪದವನಿರುತ್ತಾನೆ. ಅದರ ಅಕ್ಕಪಕ್ಕದಲ್ಲಿ ಸಣ್ಣ ಪಾದ ಅಟ್ಟಣೆಯ ಮೇಲೆ ನಿಂತು ಇಬ್ಬರು ಚಾಮರ ಬೀಸುತ್ತಿರುತ್ತಾರೆ. ಬಿಳಿ ನವಿಲಿನ ಪುಕ್ಕಗಳಿಂದ ಮಾಡಿದ ಚಾಮರವನ್ನು ಆಕರ್ಷಕವಾಗಿ ವೃತ್ತಾಕಾರವಾಗಿ ಬೀಸುತ್ತಿರುತ್ತಾರೆ.

ನವಾಬನ ಆನೆಯ ಹಿಂದೆ ಇನ್ನೂರು ಆನೆಗಳು ಬರುತ್ತವೆ. ಎರಡೆರಡು ಸಾಲಾಗಿ ಸಾಗುತ್ತವೆ. ಅವುಗಳಲ್ಲಿ ಹೈದರನ ಮಕ್ಕಳು ಮತ್ತು ಉನ್ನತ ಅಧಿಕಾರಿಗಳು ಇರುತ್ತಾರೆ. ಅವುಗಳ ಹೊದಿಕೆ ಮತ್ತು ಅಂಬಾರಿಗಳು ಆಕರ್ಷಕ ಬಣ್ಣಗಳಲ್ಲಿ ವಿಧವಿಧವಾಗಿರುತ್ತವೆ. ಕೆಲವು ಬೆಳ್ಳಿಯವಾಗಿದ್ದು ರತ್ನಖಚಿತವಾಗಿರುತ್ತವೆ. ಹೈದರನ ಮಕ್ಕಳು ಹೈದರನ ಎಡಬದಿಗೆ ಸಾಗುತ್ತಾರೆ. ಬಲಬದಿಯಲ್ಲಿ ರಾಝ ಸಾಹೇಬ್ ಇರುತ್ತಾನೆ. ಆ ಯಾವ ಆನೆಗಳೂ ಹೈದರನ ಆನೆಗಿಂತ ಎತ್ತರವಾಗಿರುವುದಿಲ್ಲ. 

ಈ ಎಲ್ಲ ಆನೆಗಳು ಸಾಗಿದ ಮೇಲೆ ಅವುಗಳ ಹಿಂದೆ ಲಾಂಚನಗಳನ್ನು ಹೊತ್ತ ಆನೆಗಳು ಬರುತ್ತವೆ. ಮೊದಲ ಆನೆಯ ಮೇಲೆ ಚಿಕ್ಕದೊಂದು ಚಿನ್ನದ ಮಸೀದಿಯ ಪ್ರತಿಕೃತಿ ಇದ್ದು ಅದರ ಮೇಲೆ ಬಿಳಿಯ ಸ್ಯಾಟಿನ್ ಬಟ್ಟೆ ಜೋಡಿಸಲಾಗಿರುತ್ತದೆ. ಯಾವುದೇ ನಗರ ಪ್ರವೇಶಿಸಿದಾಗ ಹೊದಿಕೆಯನ್ನು ತೆಗೆಯಲಾಗುತ್ತದೆ.  ಎರಡನೆಯ ಆನೆಯ ಮೇಲೆ ಕೂತವನ ಕೈಯಲ್ಲಿ ಉದ್ದವಾದ ಕೆಂಪಗಿನ ಕೋಲಿನ ತುದಿಯಲ್ಲಿ ರತ್ನ ಖಚಿತ ಮೀನಿನ ತಲೆ ಮತ್ತು ನೀಳವಾದ ಕುದುರೆಯ ಬಾಲ ಕಟ್ಟಲಾಗಿರುತ್ತದೆ.

ಮೂರನೆಯ ಆನೆಯ ಮೇಲೆ ಬಿಳಿಯ ಮೇಣ ತುಂಬಿದ  ಚಿನ್ನದ ದೊಡ್ಡ ಭರಣಿ ಹೊತ್ತು ಒಬ್ಬ ಕೂತಿರುತ್ತಾನೆ. ನಾಲ್ಕನೆಯದರಲ್ಲಿ ತುದಿಗೆ ಚಿಕ್ಕ ಚಿನ್ನದ ಚೊಂಬುಗಳನ್ನು ಕಟ್ಟಿದ ಉದ್ದವಾದ ಕೆಂಪು ಕೋಲು ಹಿಡಿದು ಒಬ್ಬ ಕೂತಿರುತ್ತಾನೆ. ಐದನೆಯ ಆನೆಯ ಮೇಲೆ ಚಿನ್ನದ ಕುಸುರಿ ಕೆಲಸ ಮಾಡಿದ ದಂತದ ಕುರ್ಚಿ ಇರುತ್ತದೆ. ಇವೆಲ್ಲವೂ ರಾಜ ಚಿಹ್ನೆಗಳು. ಈ ಆನೆಗಳ ಹಿಂದೆ ಮೊದಲು ಹೋದ ಪಡೆಯಂತೆಯೇ ಕಪ್ಪು ಕುಳ್ಳ ಕುದುರೆಗಳ ಎರಡು ಪಡೆ ಬರುತ್ತದೆ. ಇವರ ಹಿಂದೆ ಇನ್ನೂರು ಕಾಲಾಳುಗಳು ಕತ್ತಿ ಹಿಡಿದು ಬರುತ್ತಾರೆ. ಬೆಳ್ಳಿಯ ಅಂಚಿನ ಕೆಂಪು ಬಣ್ಣದ ಅಂಗಿ ತೊಟ್ಟಿರುತ್ತಾರೆ. 

ಇಡೀ ಮೆರವಣಿಗೆಯ ಸುತ್ತ ಬಿಳಿ ರೇಷ್ಮೆ ಉಡುಪು ತೊಟ್ಟ, ಹದಿನಾಲ್ಕು ಅಡಿ ಎತ್ತರದ ಭರ್ಜಿಗಳನ್ನು ಹಿಡಿದ ಪಡೆ ಬರುತ್ತದೆ. ಭರ್ಜಿಯ ತುದಿಯಲ್ಲಿ ಬೆಳ್ಳಿಯ ಮತ್ತು ಕೆಂಪು ರೇಷ್ಮೆಯ ಕುಚ್ಚುಗಳನ್ನು ಕಟ್ಟಿರಲಾಗುತ್ತದೆ. ಇವರು ಹೇಗೆ ಸಾಗುತ್ತಾರೆ ಅಂದರೆ ಭರ್ಜಿಯನ್ನು ಪರಸ್ಪರ ತಾಗಿಸಿಕೊಂಡು ಮೆರವಣಿಗೆಗೆ ಆವರಣ ಕಟ್ಟಿಕೊಡುವಂತೆ ಸಾಗುತ್ತಾರೆ.

ಇಡೀ ಮೆರವಣಿಗೆ ಸಾಗಿ ಬರುವಾಗ ಜನರು ಜಯಘೋಷವನ್ನು ಸಂಭ್ರಮದಿಂದ ಕೂಗುತ್ತಾರೆ. ದಾರಿಯ ಪ್ರತಿಯೊಂದು ಹಳ್ಳಿ ನಗರಗಳನ್ನು ತೋರಣ ಕಟ್ಟಿ ಸಿಂಗರಿಸಲಾಗುತ್ತದೆ. ಅಲ್ಲಲ್ಲಿ ಸ್ವಾಗತ ಕಮಾನುಗಳನ್ನು ಕಟ್ಟಲಾಗಿರುತ್ತದೆ. ದಾರಿಯ ಬದಿಯ ಮನೆಗಳಿಗೆ ಸುಣ್ಣ ಬಣ್ಣ ಮಾಡಲಾಗಿರುತ್ತದೆ. ದಾರಿಯುದ್ದಕ್ಕೂ ಜನ ಹೂ  ಮತ್ತು ಪನ್ನೀರನ್ನು ಎರಚುತ್ತಾರೆ. ಸ್ವಾಗತಕ್ಕೆ ಹಾರಿಸಿದ ತೋಪುಗಳ ಸದ್ದು ಹತ್ತು ದಿಕ್ಕಿನಲ್ಲಿ ಪ್ರತಿಧ್ವನಿಸುತ್ತದೆ.’

ಇದು ಹೈದರನ ಶಾಂತ ಯಾತ್ರೆಯ ವರ್ಣನೆ. ಯುದ್ಧಕ್ಕೆ ಸಾಗುವ ಸೈನಿದ ವರ್ಣನೆ ಇದಕ್ಕಿಂತ ತುಂಬಾ ಭಿನ್ನವಾಗಿದೆ. ಅದು ಮುಂದೆ.

‍ಲೇಖಕರು Admin

August 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: