ಸುರೇಶ ಮುದ್ದಾರ ಓದಿದ ‘ವೈದ್ಯ ಅರಿತ ಬದುಕಿನ ಸತ್ಯಗಳು’

ಡಾ. ಟಿ. ವಿ. ಚಂದ್ರಶೇಖರ್ ಅವರ ಹೊಸ ಕೃತಿಯನ್ನು ಪಂಚಮಿ ಪ್ರಕಾಶನ ಪ್ರಕಟಿಸಿದೆ.

ಈ ಕೃತಿಯನ್ನು ಕೊಳ್ಳಲು- 9739561334 ಗೆ ಸಂಪರ್ಕಿಸಿ

ಈ ಕೃತಿಗೆ ವಿಮರ್ಶಕ ಪ್ರೊ ಸುರೇಶ ಮುದ್ದಾರ ಬರೆದ ಮುನ್ನುಡಿ ಇಲ್ಲಿದೆ-

ಪ್ರೊ ಸುರೇಶ ಮುದ್ದಾರ

‘The man who has daily inured himself to habits of concentrated attention, energetic volition and self-denial will stand like a tower when everything rocks around him and when his softer fellow mortals are winnowed like chaff in the blas’
William James

ಡಾ. ಟಿ. ವಿ. ಚಂದ್ರಶೇಖರ್ ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದ ಇವರು ಜೀವನದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಛಲ ಬಲ ಹಂಬಲದೊಂದಿಗೆ ವಿಜ್ಞಾನ, ಕಾನೂನು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆದವರು. ಇವರು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ (ಪಿಸಿಎಮ್) ಪಾಸು ಮಾಡಿ, ಆ ನಂತರ ಗವರ್ನಮೆಂಟ್ ಲಾ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಲಾ (ಬಿಎಲ್) ಪಡೆದರು.

ಆ ನಂತರ ತಾಯಿಯ ಪ್ರೇರಣೆ ಹಾಗೂ ಒತ್ತಾಸೆಯ ಮೇರೆಗೆ ಆದರ್ಶ ವೈದ್ಯರಾಗಬೇಕೆಂಬ ಸಂಕಲ್ಪದೊಂದಿಗೆ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದರು. ತಮ್ಮ ವೈದ್ಯಕೀಯ ಪದವಿಯ ನಂತರ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಕೆಲವು ವರ್ಷಗಳ ಕಾಲ ವೈದ್ಯರಾಗಿಯು ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. ಆ ನಂತರ ವೈದ್ಯಕೀಯ ಶಾಸ್ಟ್ರದಲ್ಲೇ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಗುರಿಯಿಂದ ೧೯೭೦ರ ದಶಕದಲ್ಲಿ ಡಾ. ಕಮಲಾ ಎಂಬುವರನ್ನು ವಿವಾಹವಾಗಿ ಅವರ ಜೊತೆ ಇಂಗ್ಲೆಂಡ್ ದೇಶಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಎಫ್‌ಎಫ್‌ಎಆರ್‌ಸಿಎಸ್‌ಐ ಪದವಿಗಳನ್ನು ಪಡೆದು ಬ್ರಿಟನ್‌ನಲ್ಲಿಯೇ ನೆಲೆ ನಿಂತು ಅಲ್ಲಿಯ ನಾಗರೀಕರಾದರು.

ಈ ನಡುವೆ ಸೌದಿ ಅರೇಬಿಯಾದಲ್ಲಿ ಹನ್ನೆರಡು ವರ್ಷಗಳ ಕಾಲ ಕನ್ಸಲ್ಟೆಂಟ್ ಅನಸ್ಥೆಸ್ಟ್ ಆಗಿ ಕೆಲಸ ಮಾಡಿದರು. ಅಲ್ಲಿ ಡಯಾಲಿಸಿಸ್ ಹಾಗೂ ಅರಿವಳಿಕೆಯಲ್ಲಿ ಹೆಚ್ಚಿನ ಅನುಭವ ಗಳಿಸಿ ಉತ್ತಮ ಸೇವೆ ಮಾಡಿದರು. ಇವರು ವಿದೇಶಗಳಲ್ಲಿ ಉನ್ನತ ಅಧ್ಯಯನ ಮಾಡಿ ಅಲ್ಲಿಯೇ ವೈದ್ಯರಾಗಿ, ಅರಿವಳಿಕೆ ತಜ್ಞರಾಗಿ ಕೆಲಸ ಮಾಡಿ, ತಮ್ಮ ಅಗಾಧ ಜ್ಞಾನವನ್ನು ಅಲ್ಲಿನ ನೂರಾರು ವೈದ್ಯರಿಗೆ ಧಾರೆ ಎರೆದರು. ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿಯೇ ಅಧ್ಯಾಪನ, ಸಂಶೋಧನೆಯ ಜೊತೆಗೆ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ ಬಹುದೊಡ್ಡ ಸಾಧನೆ ಇವರದ್ದು.

ಡಾ. ಟಿ. ವಿ. ಚಂದ್ರಶೇಖರ್ ಅವರು ಸುಮಾರು ಮೂರು ದಶಕಗಳ ಕಾಲ ಇಂಗ್ಲೆಂಡ್, ಸೌದಿ ಅರೇಬಿಯಾ ದೇಶಗಳಲ್ಲಿ ಅರಿವಳಿಕೆ ವೈದ್ಯರಾಗಿ ಸೇವೆ ಸಲ್ಲಿಸಿ, ಬೆಂಗಳೂರಿಗೆ ಬಂದು ಇಲ್ಲಿನ ನಾರಾಯಣ ಹೃದಯಾಲಯ, ರಾಮಯ್ಯ ಮೆಡಿಕಲ್ ಕಾಲೇಜ್‌ಗಳಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದರು. ರಂಗಾದೊರೆ ಆಸ್ಪತ್ರೆ, ಕಾವೇರಿ ಮೆಡಿಕಲ್ ಸೆಂಟರ್ ಆಸ್ಪತ್ರೆಗಳನ್ನು ಪ್ರಾರಂಭಿಸಿ ಪುನಶ್ಚೇತನಗೊಳಿಸಿದರು. ಇವರು ಕರ್ನಾಟಕ ಬಾರ್ ಅಸೋಸಿಯೇಷನ್ (ಕಾನೂನು) ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಸಕ್ರಿಯ ಸದಸ್ಯರಾಗಿದ್ದಾರೆ.

ವಿದೇಶದಲ್ಲೇ ಇವರು ಹೆಚ್ಚು ಕಾಲ ಇದ್ದರೂ ತಮ್ಮ ತಾಯ್ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದವರ ಜೊತೆ ನಿಕಟವಾದ ಸಂಬಂಧವನ್ನು ಇಟ್ಟುಕೊಂಡಿದ್ದರು. ಕರ್ನಾಟಕದಿಂದ ಕಲೆ, ಸಾಹಿತ್ಯ ಕ್ಷೇತ್ರದ ಯಾವುದೇ ಸಾಧಕರು ಯುಕೆಗೆ ಹೋದರೆ ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಅವರ ಆತಿಥ್ಯವನ್ನು ನೋಡಿಕೊಳ್ಳುತ್ತಿದ್ದರು. ೧೯೮೧ರಲ್ಲಿ ನಾಟಿಂಗ್‌ಹ್ಯಾಮ್ (ಯುಕೆ) ಕನ್ನಡ ಸಂಘ ಪ್ರಾರಂಭವಾದಾಗ ಅದರ ಉದ್ಘಾಟನಾ ಸಮಾರಂಭಕ್ಕೆ ಹಿರಿಯ ಸಾಹಿತಿ ಡಾ.ಎಸ್‌ಎಲ್ ಭೈರಪ್ಪ ಅವರನ್ನು ಸಮನ್ವಯ ಮಾಡಿದ್ದರು. ಯುಕೆ ದೇಶದ ಕನ್ನಡ ಸಂಘಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಇಂದಿಗೂ ಹೊಂದಿದ್ದಾರೆ. ತಮ್ಮ ವೃತ್ತಿಯ ಹೊರತಾಗಿ ಸಾಹಿತ್ಯದ ಓದು, ಬರವಣಿಗೆ, ಸಂಗೀತ ಇವರ ನೆಚ್ಚಿನ ಇತರ ಆಸಕ್ತಿಗಳು.

ಡಾ. ಟಿ.ವಿ.ಚಂದ್ರಶೇಖರ್ ಅವರು ಸದ್ಯ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಹೆಚ್ಚು ಮಗ್ನರಾಗಿದ್ದು ತಮ್ಮ ತುಂಬು ಜೀವನದ ಅನುಭವ ಕಥನಗಳನ್ನು ಚಿಂತನಶೀಲ ನುಡಿಗಳನ್ನಾಗಿ ರಚಿಸಿದ್ದು, ಈಗ ಅದು ಪುಸ್ತಕವಾಗಿ ರೂಪುಗೊಂಡಿದೆ. ‘ವೈದ್ಯ ಅರಿತ ಬದುಕಿನ ಸತ್ಯಗಳು’ ಅವರ ಮೊದಲ ಸಾಹಿತ್ಯಿಕ ಕೃತಿ.

ಗುರು ಸಮಾನರು ಮತ್ತು ಶ್ರೇಷ್ಠ ವೈದ್ಯರಾದ ಡಾ. ಟಿ. ವಿ. ಚಂದ್ರಶೇಖರ ಅವರ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಕೃತಿಗೆ ಮುನ್ನುಡಿ ಬರೆದಿರುವುದು ನನ್ನಲ್ಲಿ ಅತೀವ ಸಂತಸವನ್ನುಂಟುಮಾಡಿದ್ದರೂ ಇದೊಂದು ಸವಾಲಿನ ಕೆಲಸ. ಜೊತೆಗೆ ನನ್ನ ಸೌಭಾಗ್ಯವೆಂದೆ ಭಾವಿಸಿರುವೆ.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಆದಿಯಾಗಿ ಎಲ್ಲ ಶಿವಶರಣರು ತಾವು ಮಾಡುವ ಕಾಯಕದೊಂದಿಗೆ ಸುತ್ತಲಿನ ಸಮಾಜವನ್ನು ಬಹು ಸೂಕ್ಷ್ಮವಾಗಿ ಅವಲೋಕಿಸುತ್ತ ಅದರಲ್ಲಿನ ಒಳಿತು ಕೆಡುಕುಗಳನ್ನು ಅರಿತುಕೊಂಡು ಅವುಗಳನ್ನು ಜನಸಾಮಾನ್ಯರಿಗೆ ಅರ್ಥಮಾಡಿಸುವ ಹಿನ್ನಲೆಯಲ್ಲಿ ‘ವಚನ ಸಾಹಿತ್ಯ’ ಎಂಬ ಸರಳ ಭಾಷೆಯ ಮಾಧ್ಯಮವನ್ನು ಬಳಸಿಕೊಂಡು ಜನಸಾಮಾನ್ಯರು ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರೇಪಿಸಿರುವುದು ನೈಜ ಇತಿಹಾಸ.

ಕನ್ನಡದಲ್ಲಿ ಅನುಭಾವ ಸಾಹಿತ್ಯ ಅತ್ಯಂತ ಶ್ರೇಷ್ಠ ಮತ್ತು ವಿಶಿಷ್ಟವಾದುದು. ಶರಣರ ವಚನಗಳು, ದಾಸರ ಕೀರ್ತನೆಗಳು, ಬಸವ, ಅಲ್ಲಮ, ಮಹಾದೇವಿಯಕ್ಕ, ಪುರಂದರದಾಸರು, ಕನಕದಾಸರು, ಸರ್ವಜ್ಞ ಮುಂತಾದ ಅನುಭಾವಿಗಳಿಂದ ರಚಿಸಲ್ಪಟ್ಟ ಅನುಭಾವ ಸಾಹಿತ್ಯ ಜನಮಾನಸದ ಮೇಲೆ ಅತ್ಯಂತ ಗಾಢವಾದ ಪ್ರಭಾವ ಬೀರಿ ಇಂದಿಗೂ ಪ್ರಸ್ತುತವೆನಿಸಿದೆ. ಅದರ ಪ್ರಭಾವದಿಂದ ಆಧುನಿಕ ಸಾಹಿತ್ಯದ ಪ್ರಮುಖ ಪ್ರಕಾರಗಳೆನಿಸಿದ ಕಥೆ, ಕಾವ್ಯ, ಕಾದಂಬರಿ ಮುಂತಾದವುಗಳು ಹುಲುಸಾಗಿ ಬೆಳೆಯುತ್ತಿರುವ ಕಾಲಘಟ್ಟದಲ್ಲೂ ಅನುಭಾವ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡು ಸಹೃದಯರ ಮನಸ್ಸನ್ನು ಸೆಳೆಯುತ್ತಿರುವುದು ಅದರ ಗಟ್ಟಿತನವನ್ನು ಎತ್ತಿಹಿಡಿಯುತ್ತದೆ. ಆ ನಿಟ್ಟನಲ್ಲಿ ಡಾ. ಟಿ. ವಿ. ಚಂದ್ರಶೇಖರ ಅವರ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎಂಬ ಕೃತಿ ವಿಶಿಷ್ಟವೆನಿಸುತ್ತದೆ.    

‘ಆ ನೋ ಭದ್ರಾ ಕೃತವೋ ಯಂತು ವಿಶ್ವತಃ’ ಎಂಬ ಋಗ್ವೇದದ ಉಕ್ತಿ ಡಾ. ಟಿ. ವಿ. ಚಂದ್ರಶೇಖರ ಅವರ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎಂಬ ಅನುಭಾವ ಕೃತಿಗೆ ಪುಷ್ಟಿ ನೀಡುವಂತಿದೆ. ಮಗು ಜನಿಸಿದಾಗ ಕೇವಲ ರಕ್ತ ಮಾಂಸಗಳ ಮುದ್ದೆಯಾಗಿರುತ್ತದೆ. ಆನಂತರ ಬೆಳೆಯುತ್ತ ವಿಕಾಸವಾಗುತ್ತ ಒಂದು ರಚನಾತ್ಮಕ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತದೆ. ಆ ವ್ಯಕ್ತಿತ್ವವನ್ನು ಪಡೆದುಕೊಳ್ಳುವ ಪ್ರಕ್ರಿಯೆ ಇಡೀ ಜೀವನ ಪರ್ಯಂತ ನಡೆಯುತ್ತಲೇ ಇರುತ್ತದೆ. ಅದೇ ಅನುಭವ ಜೀವಾನುಭವ ಎನಿಸಿಕೊಳ್ಳುತ್ತದೆ.

‘ಬಡತನದ ಬದುಕು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು.’ ಕಡು ಬಡತನದಲ್ಲಿ ಹುಟ್ಟಿ, ಸತತ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿ ತಮ್ಮ ಜ್ಞಾನಚಕ್ಷುವಿನಿಂದ ಲೋಕಜ್ಞಾನವನ್ನು ಪಡೆದುಕೊಂಡು ಬದುಕನ್ನು ಸ್ಪಷ್ಟವಾಗಿ ಅರ್ಥೈಸುವುದು. ಆ ಮೂಲಕ ವಿಶ್ವದ ಯಾವುದೋ ಮೂಲೆಯ ಊರಿನಲ್ಲಿ ಹುಟ್ಟಿ ಎಲ್ಲವುಗಳಿಂದಲೂ ವಂಚಿತವಾಗಿರುವ ಒಂದು ಮಗುವಿಗೆ ನಿರಾಸೆಯಿಂದ ಹೊರ ಬಂದು ಉನ್ನತ ಸಾಧನೆಗೈಯಲು ಈ ಕೃತಿ ಸ್ಫೂರ್ತಿದಾಯಕವಾಗಿದೆ.

ವೃತ್ತಿಯಿಂದ ವೈದ್ಯರಾಗಿದ್ದುಕೊಂಡು ವೈದ್ಯಕೀಯ ಬದುಕನ್ನು ಆಳವಾಗಿ ಗ್ರಹಿಸುವುದು ಸುಲಭ ಮತ್ತು ಸಹಜ. ಆದರೆ ಈ ಕೃತಿಯನ್ನು ಓದುತ್ತ ಹೋದಂತೆಲ್ಲ, ಒಬ್ಬ ವೈದ್ಯ ತನ್ನ ವೃತ್ತಿಯ ಬದುಕನ್ನಷ್ಟೇ ಅಲ್ಲದೇ ಇಡೀ ಮಾನವನ ಬದುಕನ್ನು ಅತ್ಯಂತ ಆಳವಾಗಿ ಗ್ರಹಿಸಿಕೊಂಡು ಬದುಕಿನ ಸತ್ಯಗಳನ್ನು ಹೇಳುವುದಿದೆಯಲ್ಲ ಅದು ಸಾಮಾನ್ಯರಿಗೆ ಅಸಾಧ್ಯವಾದುದು. ಅದು ಬಡತನದ ಬವಣೆಯಲ್ಲಿ ಬೆಂದು ಬಂದ ಡಾ| ಟಿ. ವಿ. ಚಂದ್ರಶೇಖರ ಅವರಂಥ ಗಟ್ಟಿ ಜೀವನಾನುಭವದಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ಪ್ರಸ್ತುತ ಕೃತಿಯು ಅತ್ಯಂತ ವಸ್ತುನಿಷ್ಠವಾಗಿ ಹೇಳುತ್ತ ಸಾಗುತ್ತದೆ.

‘ಸರ್ವಜ್ಞನೆಂಬುವನು ಗರ್ವದಿಂದಾದವನೆ? ಸರ್ವರೊಳೊಂದೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ’ ಎಂದು ಸರ್ವಜ್ಞ ಕವಿ ಹೇಳಿರುವಂತೆ, ಡಾ. ಟಿ. ವಿ. ಚಂದ್ರಶೇಖರ ಅವರು ತಮ್ಮ ಜೀವನದಲ್ಲಿ ಕಂಡುಂಡ ಅನೇಕ ಸಂಗತಿಗಳು ಅವರ ಜೀವನಾನುಭವಗಳಾಗಿ, ಶ್ರೇಷ್ಠ ಉಕ್ತಿಗಳಾಗಿ, ಸತ್ಯ ಮಾತುಗಳಾಗಿ, ವೇದ ವಚನಗಳಾಗಿ ಪ್ರಸ್ತುತ ಕೃತಿಯಲ್ಲಿ ಮೂಡಿಬಂದಿವೆ. ಸಾಮಾನ್ಯವಾಗಿ ಸಾಹಿತ್ಯವನ್ನು, ‘ರಸಾನುಭವದ ಸುಂದರವಾದ ಅಭಿವ್ಯಕ್ತಿತ್ವ’ ಎಂದು ವ್ಯಾಖ್ಯಾನಿಸುತ್ತೇವೆ. ಆದರೆ ‘ವೈದ್ಯ ಅರಿತ ಬದುಕಿನ ಸತ್ಯಗಳು’ ಕೃತಿಯನ್ನು ಗಮನಿಸಿದಾಗ ಜೀವನಾನುಭವದ ಅಮೃತವಾಣಿಗಳ ಅಭಿವ್ಯಕ್ತಿಯನ್ನೂ ಕೂಡ ಸಾಹಿತ್ಯ ಎನ್ನಬಹುದು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿ ನಿಲ್ಲುತ್ತದೆ. 

ಬದುಕು ನಿಂತ ನೀರಲ್ಲ. ಅದು ಸದಾ ಪ್ರವಹಿಸುತ್ತಿರುವ ಚೈತನ್ಯ ಶಕ್ತಿ. ಕುವೆಂಪುರವರು ಹೇಳಿರುವಂತೆ, ‘ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ನೀನ್ ಅನಂತವಾಗಿರು’ ‘ಕೋಶ ಓದು; ಇಲ್ಲವೇ ದೇಶ ಸುತ್ತು’ ಇಂಥ ಉಕ್ತಿಗಳು ಬದುಕು ಗಟ್ಟಿಗೊಳ್ಳಲಿಕ್ಕೆ  ಪ್ರೇರೇಪಣೆ ನೀಡುತ್ತವೆ. ಈ ಹಿನ್ನೆಲೆಯಲ್ಲಿಯೇ ಇಲ್ಲಿನ ಉಕ್ತಿಗಳು ಜೀವನದ ಎಲ್ಲ ಮಗ್ಗಲುಗಳನ್ನು ಆಳವಾಗಿ ಅವಲೋಕಿಸಿ, ಅನುಭವಿಸಿ ಬದುಕಿನ ಸತ್ವವನ್ನು, ತಿರುಳನ್ನು ಸಮರ್ಥವಾಗಿ ಅರಿತುಕೊಂಡು ಹೇಳಿರುವ ಅನುಭಾವದ ಅಮೃತವಾಣಿಗಳಾಗಿವೆ.

ಪ್ರಸ್ತುತ ಕೃತಿ ಕೇವಲ ಬದುಕಿನ ಯಾವುದೋ ಒಂದು ಕ್ಷೇತ್ರಕ್ಕೆ ಸೀಮಿತವಾದುದಲ್ಲ. ಇದು ಬದುಕು ಮತ್ತು ಬದುಕಿನಾಚೆಗಿನ ಸತ್ವಯುತ ಸತ್ಯಗಳನ್ನು ಬಿಚ್ಚಿಡುವ ಸೃಜನಶೀಲ ಕೃತಿಯಾಗಿದೆ. ಇದರಲ್ಲಿ ಹುಟ್ಟು, ಸಾವಿನ ಮಧ್ಯದಲ್ಲಿನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಎಲ್ಲ ಪೌಷ್ಟಿಕಾಂಶಗಳ ಸತ್ವ ತುಂಬಿಕೊಂಡಿದೆ.

ಗಂಡು ಹೆಣ್ಣು, ಬಡವ ಶ್ರೀಮಂತ, ಉಚ್ಚ ನೀಚ, ಶೀಲ ಅಶ್ಲೀಲ, ಅವಮಾನ ಬಹುಮಾನ, ವಿದ್ಯೆ ಅವಿದ್ಯೆ, ಅಂತರಂಗ ಬಹಿರಂಗ, ಶುದ್ಧ ಅಶುದ್ಧ, ಇತ್ಯಾದಿಗಳ ತೊಳಲಾಟದ ಸತ್ಯಾಂಶಗಳು ಮತ್ತು ದೇವರು, ಪ್ರಕೃತಿ ಮತ್ತು ಮಾನವನ ನಡುವಿನ ಪರಸ್ಪರ ಸಂಬಂಧ, ಪ್ರಕೃತಿ ವ್ಯಾಪಾರಕ್ಕೂ ಮಾನವನ ಬದುಕಿನ ವ್ಯಾಪಾರಕ್ಕೂ ನಡೆಯುವ ವೈರುಧ್ಯಗಳು. ಹೀಗೆ ಬದುಕು, ಬದುಕಿನಾಚೆಗಳೆರಡನ್ನು ಅನುಭವಕ್ಕೆ ತರುವ ಆ ಮೂಲಕ ಆಲೋಚನೆಗೆ ಹಚ್ಚುವ ಶ್ರೇಷ್ಠ ಕೃತಿಯಾಗಿದೆ.

ಹೀಗೆ ಜೀವನವನ್ನು ವೈವಿಧ್ಯಮಯವಾಗಿ ಗ್ರಹಿಸುತ್ತ ತಾತ್ವಿಕವಾಗಿ ಮತ್ತು ಮನೋವೈಜ್ಞಾನಿಕವಾಗಿ ಆಲೋಚಿಸುತ್ತ ಬದುಕಿನ ಅನೇಕ ಸಮಸ್ಯೆಗಳಿಗೆ, ವೈಪರಿತ್ಯಗಳಿಗೆ ಮನುಷ್ಯನ ಮನಸ್ಸೆ ಕಾರಣ ಎಂಬ ಸತ್ಯ ಈ ಕೃತಿಯನ್ನು ಓದುವ ಪ್ರತಿಯೊಬ್ಬ ಓದುಗನ ಗ್ರಹಿಕೆಗೆ ಬರದೆ ಇರದು.

ಈ ಮಾತಿಗೆ ಪುಷ್ಠಿ ಎಂಬಂತೆ, ಈ ಕೃತಿಯೊಳಗಿನ ನಾಲ್ಕಾರು ಉಕ್ತಿಗಳನ್ನು ಉದಾಹರಣೆಗಾಗಿ ನೋಡುವುದಾದರೆ…

‘ಒಂದು ಸಣ್ಣ ಬೆಳಕಿಗೆ ದೊಡ್ಡ ಕತ್ತಲೆಯ ಕೋಣೆಯನ್ನು ನುಂಗುವ ಶಕ್ತಿಯಿದೆ. ಅದೇ ರೀತಿ ಯಶಸ್ಸು ಅನೇಕ ವರ್ಷಗಳ ಸೋಲುಗಳನ್ನು ಮರೆಸಿಬಿಡುತ್ತದೆ.’

‘ಆಚಾರವಂತನಿಗೆ ಅವನ ನಾಲಿಗೆಯೇ ಮೊದಲ ಶಿಕ್ಷಕ. ವಿಚಾರವಂತನಿಗೆ ಆತನ ಮನಸ್ಸೇ ಮೊದಲ ಶತ್ರು. ಸತ್ಯವಂತನಿಗೆ ಆತ್ಮಸಾಕ್ಷಿಯೇ ಅವನೊಳಗಿನ ಮೊದಲ ನ್ಯಾಯಾಲಯ.’

‘ಕಮ್ಮಾರನ ಕುಲುಮೆ ಉರಿಯಬೇಕಾದರೆ, ತಿದಿಯೊಳಗೆ ಗಾಳಿ ತುಂಬಿರಬೇಕು. ಅಂತೆಯೇ ಭಾಷಣ ಪ್ರವಚನ ಮಾಡುವವರಿಗೆ ವಿಷಯ ಕಲೆಯ ಸುಜ್ಞಾನವು ತುಂಬಿರಲೇಬೇಕು. ಹೀಗಾದಾಗ ಮಾತ್ರ ವಿಚಾರವಂತರ ಮಾತು ಪ್ರವಚನಗಳು ಅಂತಹ ಪ್ರಖರತೆಯಿಂದ ಕೂಡಿರುತ್ತವೆ.’

‘ಸರ‍್ಯನ ರಶ್ಮಿ, ಪರಿಶುದ್ಧ ಗಾಳಿ, ಶುಭ್ರ ನೀರು, ಪ್ರಶಾಂತ ವಾತಾವರಣ ಹಾಗೂ ಪೌಷ್ಠಿಕ ಆಹಾರ. ಇವು ಹಿಂದಿನ ಕಾಲದಲ್ಲಿ ಔಷಧಿಯನ್ನು ಕಂಡು ಹಿಡಿಯುವ ಮೊದಲು ನಮ್ಮ ಹಿರಿಯರು ಅನುಸರಿಸುತ್ತಿದ್ದ ನೈಸರ್ಗಿಕ ಚಿಕಿತ್ಸೆಗಳು.’

‘ಒಬ್ಬ ಆದರ್ಶ ವೈದ್ಯನಿಗೆ ರೋಗಿಯೊಂದಿಗಿನ ಅನುಭವವೇ ಚಿನ್ನದ ಗಣಿ. ಆತ ಆಳಕ್ಕೆ ಇಳಿದಷ್ಟು ರೋಗಿಯ ಆರೋಗ್ಯಕ್ಕೆ ಕ್ಷೇಮ. ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತಿಗೆ ಅರ್ಥ ಸಿಗುತ್ತದೆ.’

‘ಆತ್ಮಸ್ತುತಿಯು ದುರ್ಗುಣದ ಪ್ರತಿರೂಪ; ಸಾಧನೆಗೆ ಕಂಟಕ. ತೋರಾಣಿಕೆಯ ಬದುಕು ನ್ಯಾಯಸಮ್ಮತವಲ್ಲ. ಹಿಂಬಾಲಿಕರ ಅತಿಪ್ರಶಂಸೆಯು ಅಪಾಯಕರ.’

ಹೀಗೆ ಈ ಮೇಲಿನ ಉಕ್ತಿಗಳು ಓದುಗರನ್ನು ತಮ್ಮತ್ತ ಸೆಳೆದು ಅವರನ್ನು ಒಂದಿಷ್ಟು ಆಲೋಚನೆಗೆ ಹಚ್ಚುವುದರ ಜೊತೆಗೆ ಅವರ ಜೀವನಕ್ಕೂ ಈ ಉಕ್ತಿಗಳು ಸಂಬಂಧಪಟ್ಟಂತೆ ಗೋಚರವಾಗುತ್ತದೆ. ಇವು ಪ್ರತಿ ಓದುಗನಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಆ ಮೂಲಕ ಅವನ ಅಂತಃಶಕ್ತಿಯನ್ನು ಜಾಗೃತಗೊಳಿಸುವ ಪ್ರೇರಕ ಶಕ್ತಿ ಈ ಕೃತಿಯಲ್ಲಿ ಅಡಗಿರುವುದರೊಂದಿಗೆ ಇದು ಓದದವರನ್ನು ಓದುಗರನ್ನಾಗಿ, ಸೋಮಾರಿಗಳನ್ನು ಕ್ರಿಯಾಶೀಲರನ್ನಾಗಿ, ನಿರುತ್ಸಾಹಿಗಳನ್ನು ಉತ್ಸಾಹಿಗಳನ್ನಾಗಿ, ಅವಿವೇಕಿಗಳನ್ನು ವಿವೇಕಿಗಳನ್ನಾಗಿ ನಿರ್ಮಾಣ ಮಾಡುವುದರೊಂದಿಗೆ ಬದುಕಿನ ಬಗೆಗೆ ಭರವಸೆಯನ್ನು ಹುಟ್ಟಿಸುವ ಮಹತ್ಕೃತಿಯಾಗಿದೆ.

ಈ ಕೃತಿಯ ಇನ್ನೊಂದು ವಿಶೇಷತೆಯೆಂದರೆ, ಲೇಖಕರು ಈ ಕೃತಿಯನ್ನು ತಮ್ಮ ತಾಯಿಗೆ ಮತ್ತು ಮೊಮ್ಮಗನಿಗೆ ಅರ್ಪಿಸಿದ್ದಾರೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ‘ಹಳೆ ಬೇರು ಹೊಸ ಚಿಗುರು ಮೂಡಿರಲು ಮರದ ಸೊಬಗು’ ಎನ್ನುವ ಹಾಗೆ ತಾಯಿ ಮತ್ತು ಮೊಮ್ಮಗ ಮನುಷ್ಯ ಜೀವನದ ಎರಡು ಶೃಂಗಗಳು. ಇವೆರಡರ ನಡುವೆ ಸುಂದರವಾದ ಬದುಕಿದೆ ಅದನ್ನು ಅರಸಬೇಕು ಮತ್ತು ಅರಿಯಬೇಕು. ಆಗ ಬದುಕು ಸುಂದರವಾಗುತ್ತದೆ ಎಂಬ ಸಂದೇಶ ಅರ್ಪಣೆಯಲ್ಲಿ ಅಡಗಿದೆ ಎಂಬುದು ನನ್ನ ಭಾವನೆ.

ಡಾ. ಟಿ. ವಿ. ಚಂದ್ರಶೇಖರರು ಬಡತನದಲ್ಲಿ ಹುಟ್ಟಿ ಬೆಳೆದು ಅದನ್ನೆ ಮೆಟ್ಟಿಲನ್ನಾಗಿ ಮಾಡಿಕೊಂಡು ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ ಎರಡರಲ್ಲೂ ನಿಷ್ಣಾತರಾಗಿ ತಮ್ಮ ಜೀವನದುದ್ದಕ್ಕೂ ಕಂಡುಂಡ ಅನುಭವಗಳನ್ನು ‘ವೈದ್ಯ ಅರಿತ ಬದುಕಿನ ಸತ್ಯಗಳು’ ಎಂಬ ಶೀರ್ಷಿಕೆಯ ತಮ್ಮ ಚೊಚ್ಚಲ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೊಂದು ಹೊಸ ಬಗೆಯ ಪ್ರಯೋಗಶೀಲ ಕೃತಿಯಾಗಿದ್ದು, ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದುವ ಕೃತಿಯಾಗಿದೆ.

ವೈದ್ಯ ಗುರುಗಳಾದ ಡಾ. ಟಿ. ವಿ. ಚಂದ್ರಶೇಖರ ಅವರ ಅನುಭವದ ಕುಲುಮೆಯಿಂದ ಮತ್ತಷ್ಟು ಹೊಸ ಹೊಸ ಕೃತಿಗಳು ರಚನೆಗೊಂಡು ಕನ್ನಡ ಸಾರಸ್ವತ ಲೋಕದಲ್ಲಿ ರಾರಾಜಿಸಲಿ ಎಂಬ ಸದಾಶಯದೊಂದಿಗೆ ಗುರುಗಳಿಗೆ ಅಭಿನಂದಿಸುತ್ತ ಶುಭ ಹಾರೈಸುತ್ತೇನೆ.

‍ಲೇಖಕರು Admin

August 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: