ಭುವನೇಶ್ವರಿ ಹೆಗಡೆ ಅಂಕಣ- ಮೆಲು ಮಾತಿನಲ್ಲಿ ಪ್ರಾರಂಭವಾದ ಆಪ್ತ ನಿವೇದನೆ..

10

ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ನಮ್ಮ ಸಂಜೆಯ ಎನರ್ಜಿ ಡ್ರಿಂಕ್ಸ್ ಕರಾವಳಿಯ ಕಷಾಯ ಕುಡಿದು ಮನೆಯ ಎದುರಿನ ತೆಂಗಿನ ತೋಟದ ಕಲ್ಲು ಬೆಂಚುಗಳ ಮೇಲೆ ನಮ್ಮ ಬೈಠಕ್ ಪ್ರಾರಂಭವಾಯಿತು. ಅಲ್ಲಿ ಎಲ್ಲ ಇಪ್ಪತ್ತೈದು ಯುವ ಲೇಖಕಿಯರಿಗೂ ತಮ್ಮ ಪರಿಚಯ, ಅನುಭವ, ತಾವು ಮಾಡಿದ ಪ್ರಯೋಗಗಳು ಇತ್ಯಾದಿಗಳ ಕುರಿತು ಮಾತನಾಡಲು ಇಪ್ಪತ್ತು ನಿಮಿಷ ನೀಡಿ ಕಿವಿಯಾಗಿ ಕುಳಿತೆವು. ನಮ್ಮ ಯುವತಿಯರು ಎಂತೆಂತಹ ಅನುಭವಗಳನ್ನು ಹಂಚಿಕೊಂಡರೆಂದರೆ ಮೆಲು ಮಾತಿನಲ್ಲಿ ಪ್ರಾರಂಭವಾದ ಆಪ್ತ ನಿವೇದನೆ ಪಿಸು ಮಾತಿನಲ್ಲಿ ಗೆಳತಿಯರೊಂದಿಗೆ ಹಂಚಿಕೊಂಡ ಒಡಲ ನೋವಾಗಿತ್ತು.

ಶಿಬಿರಕ್ಕೆ ನೀಡಲಾದ ಹೆಸರು ‘ಕೇಳು ಸಖಿ’. ತೆರೆಯ ಭೋರ್ಗರೆತದ ನಡುವೆ ಪಿಸುಮಾತಿನ ವಿನಿಮಯ ಶಿಬಿರಕ್ಕೆ ಒಂದು ಆಪ್ತತೆಯ ವಾತಾರಣವನ್ನು ನಿರ್ಮಿಸಿಕೊಟ್ಟಿತ್ತು. ಅನೇಕ ಗ್ರಾಮೀಣ ಯುವತಿಯರಿಗೆ ಕೂತು ಬರೆಯಲು ಏಕಾಂತವೇ ಇಲ್ಲದ ಪರಿಸ್ಥಿತಿ, ಅಪಾರ ಸಾಹಿತ್ಯಾಸಕ್ತಿ ಇದ್ದರೂ ಮದುವೆಯಾಗಿ ಹತ್ತು ವರ್ಷ ಒಂದಕ್ಷರ ಬರೆಯಲಾಗದ ಸಾಂಸಾರಿಕ ಕಟ್ಟುಪಾಡುಗಳು, ಕುಟುಂಬದವರ ಮುಖ್ಯವಾಗಿ ಗಂಡನ ಅಸಹಕಾರ, ಅಷ್ಟಾಗಿಯೂ ತಮ್ಮೊಳಗಿನ ಸಾಹಿತ್ಯದ ಆಸೆಯನ್ನು ಕಾಪಾಡಿಕೊಂಡು ಬಂದು ಈಗ ಬರೆಯುತ್ತಿರುವವರ ಸಂಖ್ಯೆ ಹೆಚ್ಚಿತ್ತು.

ಹಳ್ಳಿಯ ಕಥೆಗಾರ್ತಿಯರ ಸವಾಲುಗಳು ಬೇರೆಯಾದರೆ ನಗರದ ಯುವತಿಯರ ಸಂಕೀರ್ಣ ಸಮಸ್ಯೆಗಳು ಭಿನ್ನವಾಗಿದ್ದವು. ಅವರೆಲ್ಲರೂ ತಮ್ಮ ದೈಹಿಕ ಮಾನಸಿಕ ಕಟ್ಟುಪಾಡುಗಳನ್ನು ಸಮಸ್ಯೆಗಳನ್ನು ಎದುರಿಸುವ ಹಾಗೂ ಅವುಗಳನ್ನು ಕಥೆಯಾಗಿಸಿ ಹಗುರಾಗುವ ಸವಾಲನ್ನು ದಿಟ್ಟವಾಗಿ ಸ್ವೀಕರಿಸಿದ್ದು ಕಂಡುಬರುತ್ತಿತ್ತು. ವೈದೇಹಿಯರ ಅನೇಕ ಪಾತ್ರಗಳು ನೋವಿನ ನಡುವೆಯೇ ಎದ್ದು ಬಂದ ದಿಟ್ಟತನ, ಬಂಧನಗಳನ್ನು ಹರಿದೊಗೆಯದೇ ಅವುಗಳ ಜತೆಗೆ ಅನುಸಂಧಾನ ಮಾಡಿ ಬದುಕು ಕಟ್ಟಿಕೊಳ್ಳುವ ಕುರಿತಾದ ಚರ್ಚೆ ಎಲ್ಲವೂ ಫಲಪ್ರದವಾಗಿ ನಡೆಯಿತು. 

ಕೆಲವು ಯುವತಿಯರು ತಾವು ಮನೆ ಬಿಟ್ಟು ಹೊರಗೆ ಬಂದುದೇ ಇಲ್ಲ. ನಿನ್ನೆ ಶಿಬಿರಕ್ಕಾಗಿ ಹೊರಡಲು ಪ್ಯಾಕ್ ಮಾಡುವಾಗ ಉಂಟಾದ ಸಂಭ್ರಮ  ವಿದ್ಯಾರ್ಥಿ ಜೀವನವನ್ನು ನೆನಪಿಸಿತ್ತು ಎಂದರು. ಕೆಲವರಿಗೆ ತಮ್ಮ ನೋವಿನ ಕಥೆಗಳನ್ನು ಬಿಡಿಸಿಡುವಾಗ ಕಣ್ಣೀರು ಬಂದು ಗದ್ಗದಿತರಾದರು. ಅವರನ್ನು ಸೂಕ್ತ ಬಗೆಯಲ್ಲಿ ಸಂತೈಸುವ ಹೊಣೆ ನಮ್ಮದಾಗಿತ್ತು. ನಿಮ್ಮೆಲ್ಲ ಬಗೆಯ ಒಳಗುದಿಗಳಿಗೆ ಬರಹದ ರೂಪ ಕೊಟ್ಟು ‘ಬರೆದು ಹಗುರಾಗಿ’  ಎಂಬುದೊಂದು ಸೂಚ್ಯ ಸಲಹೆ ಅಗತ್ಯವಿತ್ತು. ರಾತ್ರಿ ಊಟಕ್ಕೆ ಏಳುವ ಸಮಯಕ್ಕಾಗಲೇ ಎಲ್ಲರಲ್ಲೂ ಸ್ನೇಹದ ಒಂದು ಬೆಸುಗೆ ಬಿಗಿಯಲ್ಪಟ್ಟಿತ್ತು. ರಾತ್ರಿ ಊಟದ ಬಳಿಕ ಕರಾವಳಿಯ ಕೆಲ ಯುವತಿಯರು ಯಕ್ಷಗಾನದ ತುಣುಕುಗಳನ್ನು ಹಾಡು ಕುಣಿತಗಳೊಂದಿಗೆ ಪ್ರದರ್ಶಿಸಿದರೆ, ಏಕವ್ಯಕ್ತಿ ಪ್ರದರ್ಶನ ಪ್ರತಿಭೆಯ ಪೂರ್ಣಿಮಾ ಸುರೇಶ್ ‘ಸತ್ಯನಾಪುರದ ಸಿರಿ’ ಎಂಬ ತುಳುನಾಡಿನ ನೈಜ ಕಥಾನಕವನ್ನು ಪ್ರದರ್ಶಿಸಿದರು.

ಸ್ವಾಭಿಮಾನಕ್ಕಾಗಿ ಸತ್ಯಕ್ಕಾಗಿ ಹೋರಾಟ ನಡೆಸಿ, ಅನೇಕರನ್ನು ಎದುರು ಹಾಕಿಕೊಂಡೂ ಸ್ವಾಭಿಮಾನದಿಂದ ಪ್ರಜ್ವಲಿಸುತ್ತ ಸತ್ಯದ ದಾರಿಯಲ್ಲಿ ಸಾಗಿ ಜನಮನ್ನಣೆ ಗಳಿಸಿ ದೈವತ್ವಕ್ಕೇರಿದ ಸಿರಿಯ ಕಥೆ ತುಳುನಾಡಿನಲ್ಲಿ ತುಂಬಾ ಪ್ರಚಲಿತವಾದ ಜಾನಪದ ಸತ್ಯಕಥೆ. ಅದನ್ನು ಅಭಿನಯಿಸಿ ತೋರಿಸಿದ್ದ ಪೂರ್ಣಿಮಾ ಸುರೇಶ್ ತನ್ನ ಒಳಗೆ ಸಿರಿಯನ್ನು ಆಹ್ವಾನಿಸಿ ಕೊಂಡ ಪರಿ ಎಲ್ಲರನ್ನು ಮೂಕವಾಗಿಸಿತ್ತು. ಮನೆಯ ಮೇಲುಸ್ತುವಾರಿಗಾಗಿ ನೇಮಿಸಲ್ಪಟ್ಟ ಸಿಬ್ಬಂದಿಯ ಕುಟುಂಬ ವರ್ಗದವರು ಸಹ ಕೂತು ಏಕವ್ಯಕ್ತಿ ಪ್ರದರ್ಶನವನ್ನು ನೋಡಿ ಆನಂದಿಸಿದರು.

ನಮ್ಮೆಲ್ಲರ ಊಟ ತಿಂಡಿ ಅನುಕೂಲತೆಗಳ ವ್ಯವಸ್ಥೆಯನ್ನು ಪೂರೈಸಿದ ಪೃಥ್ವಿ ಮತ್ತವರ ಗೆಳೆಯರು ಹೊರಟು ಹೋದರು. ಬರಿಯ ಪ್ರಮೀಳಾ ಸಾಮ್ರಾಜ್ಯ. ಇಡೀ ಬಂಗಲೆಯಲ್ಲಿ ಕಲಕಲ ಮಾತು. ಯುವತಿಯರು ಮಲಗುವ ಲಕ್ಷಣ ತೋರಿ ಬರದಿದ್ದಾಗ ನಾನು ಸೀಟಿ ಹಾಕಿ ಗುಡ್ ನೈಟ್ ಹೇಳಬೇಕಾಯಿತು. ಮಾಳಿಗೆಯ ಮೇಲಿನ ಮಂಚದಲ್ಲಿ ಮಲಗಿದರೆ ಸಮುದ್ರದ ನೊರೆ ನೊರೆಯಾದ ತೆರೆ ಕಾಣುತ್ತಿತ್ತು. ನಾನು ಹಾಗೂ ವೈದೇಹಿ ಒಂದು ರೂಮಿನಲ್ಲಿ ಮಲಗಿದ್ದೆವು. ಎಲ್ಲ ವಯಸ್ಸಿನವರೊಂದಿಗೆ ಸ್ನೇಹಮಯವಾಗಿ ಬೆರೆಯಬಲ್ಲ ಕನ್ನಡದ ಹೆಮ್ಮೆಯ ಕವಯಿತ್ರಿ    ಬರಹಗಾರ್ತಿಯ ಜತೆಗೆ ಸ್ವಲ್ಪ ಹೊತ್ತು ಮಾತನಾಡುತ್ತಿದ್ದಂತೆ ವೈದೇಹಿಗೆ ನಿದ್ದೆ ಬಂದುಬಿಟ್ಟಿತ್ತು. 

ಹೊರಗಿನ ಹಾಲಿನಲ್ಲಿ ನಮ್ಮ ರೂಮಿನ ಬಾಗಿಲಿಗೆ ತಾಗಿದ ಪಲ್ಲಂಗಗಳಲ್ಲಿ ಪವಡಿಸಿದ್ದ ಇಬ್ಬರು ಅದೇನೋ ಮಾತುಕತೆ ನಡೆಸಿಯೇ ಇದ್ದರು. ನಾನು ಮೆಲ್ಲನೆ ಹೊರಬಂದೆ. ನಾನೂ ಸೇರಿಕೊಳ್ಳಲೆ ಎಂದಾಗ ‘ಬನ್ನಿ ಬನ್ನಿ ಭುವನಕ್ಕ’ ಎಂದವಳು ಸುಧಾ ಆಡುಕಳ. ಓ ಇವಳೇ? ಆಯ್ತು ಇವತ್ತು ನಿನಗೆ ಯಕ್ಷಗಾನ ತೋರಿಸಿಯೇ ಬಿಡುತ್ತಾಳೆ ಎನ್ನುತ್ತ ಎದುರಿದ್ದವಳನ್ನು ನೋಡಿದರೆ ಬೆಡ್ ಶೀಟ್ ಮುಚ್ಚಿ ಕಣ್ಣು ಮಾತ್ರ ತೆಗೆದು ಕೂತವಳು ಡಾಕ್ಟರ್ ರಶ್ಮಿ ಕುಂದಾಪುರ. 

ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಬೆಸೆದಿರುವ ಯಕ್ಷಗಾನ, ಸುಧಾ ಕಂಡ ಕರುಣೆಯ ಕಥೆಗಳು ಪಾತ್ರಗಳು, ರಶ್ಮಿಯ ಡಾಕ್ಟರಿಕೆ ವೃತ್ತಿ ತೆರೆದು ತೋರಿಸಿದ ನಿಗಿನಿಗಿ ಅನುಭವಗಳು ಅದನ್ನವಳು ಭಾವುಕಳಾಗದೆ ಹೊರಗೆ ನಿಂತು ಬೆರಗು ಹುಟ್ಟಿಸುವಂತೆ ನಿಭಾಯಿಸಿದ ರೀತಿ ಎಲ್ಲವನ್ನು ಕೇಳುತ್ತ ಕೂತ ನನಗೆ ಎದೆಯೊಳಗಿನ ಭಾರ ಕಳೆದುಕೊಳ್ಳಲು ಸಮಾನ ಆಸಕ್ತರ ಸಾಂಗತ್ಯಕ್ಕಿಂತ ಮಿಗಿಲಾದುದಿಲ್ಲ ಅನ್ನಿಸಿದ್ದು ನಿಜ. ಈ ಒಂದುರಾತ್ರಿ ಯಾತಕ್ಕೂ ಸಾಲದು ಎನ್ನಿಸಿತ್ತು. ಮಹಡಿಯ ಮೇಲೆ ಮಲಗಿದ ಹುಡುಗಿಯರಲ್ಲೂ ದೂರದಲ್ಲಿ ಎಂಬಂತೆ ಗುಸುಗುಸು ಮಾತುಗಳನ್ನು ವಿನಿಮಯ ಮಾಡಿಕೊಳ್ಳುವುದು ನಡೆದೇ ಇತ್ತು.

ಹೆಚ್ಚಿನ ಹುಡುಗಿಯರು ಬೆಳಗಿನ ಜಾವದ ತನಕವೂ ತಮ್ಮ ತಮ್ಮೊಳಗೆ ಗುನುಗುನು ಮಾಡುತ್ತಿದ್ದು ಬೆಳಗಾದಾಗ ಪುನಃ ಸಮುದ್ರ ದಡದಲ್ಲಿ ವಿಹಾರ ನಡೆಸಿದೆವು. ಏಕಾಂತ ಹಾಗೂ ಪ್ರಕೃತಿಯ ಒಡನಾಟ ಹೊಚ್ಚ ಹೊಸ ಉತ್ಸಾಹವನ್ನು ಎಲ್ಲರಲ್ಲೂ ಪಡಿ ಮೂಡಿಸಿತ್ತು. ವೈದೇಹಿಯವರು  ಎಳೆ ಬಿಸಿಲಿನಲ್ಲಿ ತಿಳಿನಗೆಯೊಂದಿಗೆ ಎಲ್ಲರ ಸೆಲ್ಫಿಗೂ ಮುಖವೊಡ್ಡಿ ನಗುತ್ತಿದ್ದರು. ನನ್ನ ಕಾಲು ನೋವಿನಿಂದಾದ ಕುಂಟು ಮರೆತು ಹೋಗಿತ್ತು .  ಕಾಲೇಜುಗಳ ಎನ್ಎಸ್ಎಸ್ ಶಿಬಿರದಲ್ಲಿ ಕಂಡು ಬರುವ ಹುಡುಗಾಟಿಕೆ ಸ್ನೇಹ ಹುರುಪು ಬಾಂಧವ್ಯ ಎಲ್ಲವೂ ಈ ಸಾಹಿತ್ಯಿಕ ಶಿಬಿರದಲ್ಲಿ ದೊರಕಿದ್ದು ಯುವತಿಯರು ತಮಗಾದ ಲಾಭಗಳನ್ನು ಹೇಳಿಕೊಳ್ಳುತ್ತಿದ್ದರು.   

ಮತ್ತದೇ ಕರಾವಳಿ ಖಾದ್ಯದ ಸವಿಯಾದ ಬೆಳಗಿನ ಉಪಾಹಾರ ಸರಿಯುತ್ತಿದ್ದಂತೆ ಲಕ್ಷ್ಮೀಶ ತೋಳ್ಪಾಡಿ ದಂಪತಿಗಳು ನಮ್ಮ ಜೊತೆ ಸೇರಿಕೊಂಡರು. ಮತ್ತೆ ಒಂದಿಷ್ಟು ಚರ್ಚೆ ಕಥೆಗಳ ಪ್ರಬಂಧಗಳ ಕುರಿತಾದ ಹೊಸ ಹೊಸ ಒಳನೋಟಗಳು ಭಿನ್ನವಾದ ಪ್ರಯೋಗಗಳು ಯುವತಿಯರು ಆರಿಸಿ ಕೊಳ್ಳಬಹುದಾದ ಮಾರ್ಗಗಳು ಇತ್ಯಾದಿ ಒಂದು ಸುತ್ತಿನ ಮಾತುಕತೆ ಮುಗಿಯುತ್ತಿದ್ದಂತೆ ಎಲ್ಲರೂ  ಕೋಟದಲ್ಲಿರುವ ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯಲಿರುವ ತುಷಾರ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ‘ಕೇಳು ಸಖಿ’ ಶಿಬಿರದ ಸಮಾರೋಪ ಸಮಾರಂಭಕ್ಕಾಗಿ ಬಸ್ಸು ಏರಬೇಕಾಯಿತು. ಎರಡು ದಿನದ ಆಶ್ರಯ ನೀಡಿದ ಕಡಲ ಮನೆಯನ್ನೂ ಸಂತೈಸಿ ಸಂಭ್ರಮಿಸಿದ ಸಮುದ್ರದ ತೆರೆಗಳನ್ನು ಅಗಲಿ ಹೊರಡುವಾಗ ಮತ್ತೊಂದು ವಿದಾಯದ ನೋವು ಎಲ್ಲರನ್ನೂ ಬಾಧಿಸಿದ್ದು ನಿಜ. ಶಿವರಾಮ ಕಾರಂತ  ಸಭಾಂಗಣದಲ್ಲಿ ಡಾ ಸಂಧ್ಯಾ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಶಿಬಿರಕ್ಕೆ ಸಮಾರೋಪ ಬರೆಯಿತು. ಅಭ್ಯರ್ಥಿಗಳ ಅನಿಸಿಕೆಗೆ ಅವಕಾಶ ಮಾಡಿಕೊಟ್ಟರೆ ನಮ್ಮ ಕಿರು ಟಿಪ್ಪಣಿ ಮಂಡಿಸಿದೆವು.

ಕ್ಯಾಲಿಫೋರ್ನಿಯಾದಿಂದ ಬಂದ ನಾಗ ಐತಾಳ ದಂಪತಿಗಳನ್ನು ಸನ್ಮಾನಿಸಲಾಯಿತು. ಅವರ ಸಾಹಿತ್ಯಾಂಜಲಿ ನೀಡುವ ತುಷಾರ ಕಥಾ ಬಹುಮಾನ ಗಳನ್ನು ನೀಡಲಾಯಿತು. ಪತ್ರಿಕೆಯೊಂದು ಮನಸ್ಸು ಮಾಡಿದರೆ ಈ ಬಗೆಯ ತರಬೇತಿ ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ಬರವಣಿಗೆಯಲ್ಲಿ ತೊಡಗಿಕೊಂಡವರನ್ನು ಹೇಗೆ ಉತ್ತೇಜಿಸಬಹುದೆಂಬುದಕ್ಕೆ ಈ ಶಿಬಿರ ನಿದರ್ಶನವಾಯಿತು. ಮತ್ತು ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ವಾಟ್ಸಾಪ ಟ್ವಿಟ್ಟರ್ ಗಳಲ್ಲಿ ಕಳೆದು ಹೋಗಬಹುದಾದ ಯುವ ಪ್ರತಿಭೆಗಳನ್ನು ಮುಖಾಮುಖಿಯಾಗಿಸಿ ರಚನಾತ್ಮಕ ಬರವಣಿಗೆಯತ್ತ ಸೆಳೆದದ್ದು ವಿಶೇಷ. ‘ಕೇಳು ಸಖಿ’ ಶಿಬಿರದಲ್ಲಿ ಪುಷ್ಟಿಗೊಂಡ ಆಂತರ್ಯದಿಂದ ನಮ್ಮ ಯುವತಿಯರು ಹೊಸ ಕಥೆಗಳನ್ನು ಪ್ರಬಂಧಗಳನ್ನು ಸೃಷ್ಠಿಸಿಯಾರೆಂಬ ನಿರೀಕ್ಷೆಯಲ್ಲಿದ್ದೇನೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: