ಸರೋಜಿನಿ ಪಡಸಲಗಿ ಸರಣಿ – ಬಿಚ್ಚಿದ ಗಂಟು ಕಟ್ಟಿಡೋ ಸಮಯ ಈಗ

ಸರೋಜಿನಿ ಪಡಸಲಗಿ

8

ಜೀವನ ರಂಗು ರಂಗಿನ ಅನುಭವಗಳ ರಂಗಸಾಲೆ. ಒಂದೊಂದಕ್ಕೆ ಒಂದೊಂದು ವಿಶಿಷ್ಟತೆ. ತಮ್ಮದೇ ಆದ ರೂಪ – ಆಕಾರ. ಅವುಗಳ ಆಟ – ನೋಟನೂ ಅಷ್ಟೇ; ಒಂದು ನಗಿಸಿದರೆ, ಮತ್ತೊಂದು ಅಳಿಸೋದು. ಇನ್ನೊಂದು ಬೇಜಾರಿನ ದಪ್ಪ ಹೊದಿಕೆಯಡಿ ಹುದುಗಿಸೋದು. ಇನ್ನು ಕೆಲವು ನಮ್ಮಂತರಂಗವನ್ನೇ ಬಗೆದು ಒರೆಗೆ ಹಚ್ಚಿ ಸರಿ – ತಪ್ಪುಗಳ ಲೆಕ್ಕಾಚಾರದಲ್ಲೇ ನಮ್ಮನ್ನು ಮುಳುಗಿಸಿ ತಾವು ಹಾಯಾಗಿ ಒರಗೋದು. ಇವೆಲ್ಲವುಗಳ ಒಟ್ಟು ಮೊತ್ತವೇ ಈ ಬದುಕು ಅಲ್ವಾ?

ಈ ಊರೂರಿನ ತಿರುಗಾಟ ಅಲೆದಾಟ ನನ್ನ ಮಕ್ಕಳ ಆರೋಗ್ಯದ ಮೇಲೂ ಗಾಢ ಪರಿಣಾಮ ಬೀರತಿತ್ತು. ಒಂದು ಊರಿನ ಹವೆ – ನೀರು – ವಾತಾವರಣಕ್ಕೆ ಹೊಂದಿಕೊಂಡಿದ್ದ ಅವರಿಗೆ ಮತ್ತೊಂದು ಊರಿನ ಹವೆ – ನೀರು ಅಷ್ಟು ಸುಲಭವಾಗಿ ಹೊಂದುತ್ತಿರಲಿಲ್ಲ. ಅದು ಸಹಜವೂ ಹೌದು. ತಿಳವಳ್ಳಿಯಿಂದ ಗರಗಕ್ಕೆ ಬಂದ ಎರಡು ಮೂರು ದಿನ ಎಲ್ಲಾ ಸರಿಯಾಗೇ ಇತ್ತು. ಮನೆ ಹೊಂದಿಸೋದು ಸ್ಕೂಲ್ ಅಡ್ಮಿಷನ್ ಸಲುವಾಗಿ ಧಾರವಾಡ ಓಡಾಟ ಇವೆಲ್ಲದರ ದಣಿವೂ ಇದ್ದೀತು. ಯಾಕೋ ನನ್ನ ಚಿಕ್ಕ ಮಗನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡೇ ಬಿಡ್ತು.

ನೀರಿನ ಫಿಲ್ಟರ್ ಇದೆ ಅಂತ ನಾನೇ ಹಗುರಾಗಿ ತಗೊಂಡ್ನೋ, ಗಲಾಟೆಯಲ್ಲಿ ಮರೆತೆನೋ ಒಟ್ಟು ಕುಡಿಯುವ ನೀರನ್ನು ಕುದಿಸಿ ಇಡಲು ಮರೆತು ಬಿಟ್ಟೆ. ಎಂದೂ ಹಾಗೆ ಮಾಡಿರಲಿಲ್ಲ. ಯಾಕೆ ಹೀಗಾಯ್ತೋ! ಆದರೆ ನನ್ನ ನಿರ್ಲಕ್ಷ್ಯಕ್ಕೆ ನನ್ನ ಚಿಕ್ಕ ಮಗ ಕಷ್ಟಪಡಬೇಕಾಯ್ತು. ಆತಗೆ ಸ್ವಲ್ಪ ಹೊಟ್ಟೆ ನೋವು ಅಂತ ಶುರು ಆದದ್ದು ಮಾರನೇ ದಿನ ವಾಂತಿ, ಭೇದಿಯಾಗಿ ಜೋರು ಜ್ವರ. ತುಂಬಾ ಕಷ್ಟಪಟ್ತು ಮಗು. ಸಲಾಯಿನ್ ಮೇಲೆ ಇರಬೇಕಾಯ್ತು ಆತಗೆ ಒಂದೂವರೆ ದಿನ ಪೂರ್ತಿ.

ಮಾರನೇ ದಿನ ಧಾರವಾಡದಲ್ಲಿ ಅರ‍್ಜೆಂಟ್ ಕೆಲಸ ಇತ್ತು. ನನ್ನ ಮಗಳನ್ನು ಒಂದು ಸ್ಕಾಲರ್‌ ಶಿಪ್ ಪರೀಕ್ಷೆಗೆ ಕರಕೊಂಡು ಹೋಗಬೇಕಿತ್ತು. ಪರೀಕ್ಷಾ ಕೇಂದ್ರ ಸ್ವಲ್ಪ ದೂರ ಇತ್ತು, ಅಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ. ನನ್ನ ಪತಿಗೆ ಸಾಧ್ಯವೇ ಇರಲಿಲ್ಲ ಅವಳನ್ನು ಕರಕೊಂಡು ಹೋಗೋದು. ಏನು ಮಾಡೋದು ತಿಳೀಲಿಲ್ಲ. ಅವಳಿಗೂ ಧಾರವಾಡ ಇನ್ನೂ ಅಷ್ಟು ಪರಿಚಿತ ಆಗಿರಲಿಲ್ಲ. ಬರೀ ೩- ೪ ದಿನ ಆಗಿತ್ತು ಅಷ್ಟೇ ಹೋಗಲಾರಂಭಿಸಿ. ಆಮೇಲೆ ಅನಿವಾರ್ಯವಾಗಿ ಅಲ್ಲಿನ ಸಿಸ್ಟರ್ ಗೆ ಕೇಳಿಕೊಂಡೆ, ನಾ ಬರೋವರೆಗೂ ನನ್ನ ಮಗನ ಜೊತೆ ಇರಲು. ಅದಕ್ಕೆ ಅವರು ‘ಅಯ್ಯs ಅದಕೇನ್ರೀ ವೈನೀ? ನಾ ಇರ‍್ತೀನಿ ಅವನ ಜೋಡಿ. ಕಾಳಜಿ ಮಾಡಬ್ಯಾಡ್ರಿ. ಆರಾಮ ನಿಮ್ಮ ಕೆಲಸಾ ಮುಗಿಸ್ಕೊಂಡ ನೀವು ಬರೂತಂಕಾ ನಾ ಇರ‍್ತಿನಿ’ ಅಂದ್ರು. ಸ್ವಲ್ಪ ನಿರಾಳ ಆತು ನಂಗೆ.

ಇನ್ನೊಮ್ಮೆ ನಾವು ಬಂಕಾಪುರದಲ್ಲಿ ಇದ್ದಾಗಲೂ ಇಂಥದ್ದೊಂದು ಪರಿಸ್ಥಿತಿ ಎದುರಾಗಿತ್ತು. ನನ್ನ ಮಗಳು ಆಗ ಮೂರನೇ ಕ್ಲಾಸ್ ನಲ್ಲಿ ಇದ್ಲು. ಆ ಹೊತ್ತು ತುಂಬಾ ಜನ ಅತಿಥಿಗಳು ಮನೆ ತುಂಬಾ. ಆ ಗಲಾಟೆಯಲ್ಲಿ ನಾ ಮುಳುಗೀನಿ. ನನ್ನ ಮಗಳಿಗೆ ವೀಪರೀತ ಗಂಟಲು ನೋವು. ಉಗುಳು ನುಂಗಲೂ ಆಗದಷ್ಟು. ಅವಳು ನನಗೆ ಹೇಳೇ ಇಲ್ಲ, ನಾ ಗದ್ದಲದಲ್ಲಿದ್ದೆ ಅಂತ. ಹಿತ್ತಲಲ್ಲಿದ್ದ ಬಟ್ಟೆ ಒಗೆಯೋ ಕಲ್ಲಿನ ಮೇಲೆ ಕುಳಿತು ಆಚೆ ಮುಖ ಮಾಡಿ ಉಗಳ್ತಾ ಕೂತು ಬಿಟ್ಟಿದಾಳೆ. ನನಗೆ ಗೊತ್ತೇ ಆಗಿಲ್ಲ. ನನ್ನ ಮಗ ಬಂದು ಹೇಳಿದ. ಅತಿಥಿಗಳ ಊಟ ನಡೆದಿತ್ತು. ಅದನ್ನು ಹಾಗೇ ಅವರ ಜೊತೆ ಬಂದಿದ್ದ ನನ್ನ ಓರಗಿತ್ತಿಗೆ ಒಪ್ಪಿಸಿ ಅವಳ ಹತ್ರ ಹೋಗಿ ನೋಡಿದರೆ ಆಕೆ ಮುಖ ಎಲ್ಲಾ ಕೆಂಪು ಕೆಂಪು. ಕೆಂಡಾಮಂಡ ಜ್ವರ. ಹೇಗಿದ್ದೆನೋ ಹಾಗೇ ಅವಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋದೆ, ನನ್ನ ಪತಿಯ ಹತ್ರ. ಆಕೇನ್ನ ನೋಡಿ ಅವರೂ ಗಾಬರಿಯಾದ್ರು.

ಗಂಟಲಿನಲ್ಲಿ ಸ್ವಲ್ಪ ಬಿಳೇ ಪ್ಯಾಚಿಸ್ ಇದ್ವು. ಆಗಾಗ ಉಸಿರಾಡಲೂ ಕೊಂಚ ಕಷ್ಟ ಆಗ್ತಿತ್ತು. ಇನ್ನೊಬ್ಬ ಡಾಕ್ಟ್ರಿಗೆ ಎಲ್ಲಾ ಒಪ್ಪಿಸಿ ನಿಂತ ಕಾಲ ಮೇಲೆ ನಾವು ಹಾವೇರಿಗೆ ಚಿಕ್ಕ ಮಕ್ಕಳ ತಜ್ಞರ ಹತ್ರ ಹೋದ್ವಿ. ಅಲ್ಲಿ ಒಂದು ದಿನ ಇರಬೇಕಾಗಿ ಬಂತು. ಅವರೂ ಸುರೇಶ ಸ್ನೇಹಿತರು. ‘ಯಾಕ ಅವಳಿಗಷ್ಟು ತ್ರಾಸ ಆಗಲೀಕ್ಹತ್ತಿದ್ದು ಗೊತ್ತಾಗಲಿಲ್ಲ ಏನು ನಿಂಗ?’ ಅಂತ ಸಿಟ್ಟಿಗೆದ್ದ ನನ್ನ ಪತಿ ಕೇಳಿದಾಗ ಏನೂ ಮಾತಾಡಲು ತೋಚಲಿಲ್ಲ. ‘ ಎಷ್ಟ ಮಂದಿ ಬಂದಾರ ಮನ್ಯಾಗ ಗೊತ್ತದ ಏನ ನಿಮಗೆ?’ ಅಂದೆ. ಗಂಟಲು ಕಟ್ಟಿದಂತಾಗಿ ಸುಮ್ಮನಾದೆ. ಸಂಜೆ ಹೊತ್ತಿಗೆ ಸ್ವಲ್ಪ ಆರಾಮ ಆದ್ಲು ನನ್ನ ಮಗಳು. ಸುರೇಶ ಬಂಕಾಪುರಕ್ಕೆ ವಾಪಸ್ಸು ಹೋದರು. ನಾ ಮಾರನೇ ದಿನ ಅವಳನ್ನು ಕರಕೊಂಡು ನಾ ವಾಪಸ್ಸು ಬಂಕಾಪುರಕ್ಕೆ ಬಂದೆ. ಇಂತಹ ನಿರ್ಲಕ್ಷ್ಯದಿಂದಾಗುವ ತೊಂದರೆಗಳು ನನ್ನಲ್ಲಿ ಅಪರಾಧಿ ಭಾವ ಮೂಡಿಸ್ತಿದ್ದದ್ದಂತೂ ನಿಜ.

ನಾವು ಗರಗ ಬಿಟ್ಟು ಬಂದ ಮೇಲೆ ನನ್ನ ಪತಿ ಅಲ್ಲೇ ಇನ್ನೂ ಎರಡೂ ವರೆ ವರ್ಷ ಇದ್ರು. ವಾರಕ್ಕೊಮ್ಮೆ ಎರಡು ಸಲ ಬರ‍್ತಿದ್ರು. ಸ್ವಯಂ ಪಾಕ ನಡೆದಿತ್ತು. ಇಲ್ಲಿಂದ ಹೋಗುವಾಗ ಸ್ವಲ್ಪ ಚಪಾತಿ ಮಾಡಿ ಕೊಟ್ಟಿರತಿದ್ದೆ. ತೊಂದರೆ ಆಗ್ತಿತ್ತು. ಆದರೆ ಅಸಹಾಯಕರು ನಾವೆಲ್ಲ ಆಗ. ಆ ಮೇಲೆ ಅಲ್ಲಿಂದ ಕಿತ್ತೂರಿಗೆ ವರ್ಗ ಆಯ್ತು. ಆಗ ಮಾತ್ರ ಧಾರವಾದಿಂದಲೇ ಓಡಾಡ್ತಿದ್ರು. ಬೆಳಿಗ್ಗೆ ಎಲ್ರೂ ೮.೩೦ರ ಹೊತ್ತಿಗೆ ಊಟದ ಕ್ಯಾರಿಯರ್ ತಗೊಂಡು ಹೊರಟು ಬಿಡ್ತಿದ್ರು. ಸಾವಧಾನದಿಂದ ನಿಂತು ನೋಡಿದ್ರೆ ಧಾರವಾಡಕ್ಕೆ ಗಟ್ಟಿ ಮನಸ್ಸು ಮಾಡಿ ಬಂದುದರ ಸಾರ್ಥಕತೆ ಕಾಣುತ್ತಿತ್ತು. ಎಲ್ಲಾ ನಿಧಾನಕ್ಕೆ ಒಂದು ಹಂತಕ್ಕೆ ಬರುತ್ತಿತ್ತು. ದೊಡ್ಡ ಮಗನ ಇಂಜಿನಿಯರಿಂಗ್ ಮುಗಿದು ಬೆಂಗಳೂರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಅಂತ ಕೆಲಸ ಮಾಡ್ತಿದ್ದ. ಹಾಗೇ ಅಮೇರಿಕಾಕ್ಕೆ ಹೊರಡೋ ತಯಾರಿಯಲ್ಲಿದ್ದ. ಮಗಳದು ಡಿಗ್ರಿ ಮುಗಿದು M.Sc ಗೆ ಸೀಟು ಸಿಕ್ಕಿತ್ತು. ಚಿಕ್ಕವನೂ ಅಲ್ಲೇ ಧಾರವಾಡದಲ್ಲೇ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದ. ಈ ನಡುವೆ ನನ್ನ ಮಗಳ ಮದುವೆ ಗೊತ್ತಾಯ್ತು.

ಮಕ್ಕಳನ್ಯಾರನ್ನೂ ಮೆಡಿಕಲ್ ಗೆ ಸೇರಿಸಲಿಲ್ಲ. ಆ ಮೇಲೆ ಯಾಕೋ ತಪ್ಪಿತು ಲೆಕ್ಕ ಅನ್ನಿಸಲಾರಂಭಿಸ್ತು. ಆತುರದ ನಿರ್ಧಾರ, ಆಗಿನ ಕಷ್ಟಗಳು ಕೊಂಚ ಭಾವುಕ ನಿರ್ಧಾರದತ್ತ ದೂಡಿದ್ವೋ ಏನೋ ಎಂಬ ಭಾವ. ಅದೇ ಈಗ ಅಳಿಯನಾದ್ರೂ ಡಾಕ್ಟ್ರಿರಲಿ ಎಂಬಾಸೆ ಮೂಡಿಸ್ತು. ಹಾಗೇ ಆಯ್ತು. ಅಳಿಯ ಡಾಕ್ಟ್ರೇ – ಚಿಕ್ಕ ಮಕ್ಕಳ ತಜ್ಞ. ಅಲ್ಲಿಗೆ ಸ್ವಲ್ಪ ಮಟ್ಟಿಗೆ ಲೆಕ್ಕ ಸರಿ ಹೋದಂತೆನಿಸಿ ಕೊಂಚ ನಿರಾಳ ಭಾವ. ಈಗ ಮಗಳ ಮದುವೆ ಗೊತ್ತಾದ್ರೂ ನನ್ನ ಪತಿಗೆ ಪುರಸೊತ್ತು ಅಷ್ಟಕ್ಕಷ್ಟೇ. ಹೀಗಾಗಿ ಮದುವೆಯ ತಯಾರಿಯ ಇಂಚಿಂಚೂ ನನ್ನ ಹೆಗಲಿಗೇ. ನಾನು, ನನ್ನ ಮಗಳು ಇಬ್ರೇ ನಿಭಾಯಿಸಿದ್ವಿ. ಆಕೆಯ ಒಡವೆ ಎಲ್ಲ ಬೆಳಗಾವಿಯಲ್ಲಿ ಮಾಡಿಸಿದ್ದು. ಒಡವೆ ಮಾಡಿಸ ಹಾಕಲು ಹೋಗುವಾಗ ಸುರೇಶ ಬಂದಿದ್ರು ಜೊತೆಗೆ. ಅವು ತಯಾರಾದ ಮೇಲೆ ತರಲು ಮಾತ್ರ ನಾನು, ನನ್ನ ಮಗಳು ಇಬ್ರೇ ಹೋಗಿದ್ವಿ. ಆತ ಕೊಡಲು ಸ್ವಲ್ಪ ತಡ ಮಾಡಿದ.

ಹೀಗಾಗಿ ನಮಗ ಅಲ್ಲಿಂದ ಹೊರಡೋದು ತಡ ಆಯ್ತು. ಅಲ್ಲಿಂದ ೭.೩೦ ಕ್ಕೆ ಹೊರಟ್ವಿ. ಆಗ ನನ್ನ ಪತಿ ಇನ್ನೂ ಕಿತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಇದ್ರು. ಅದಕ್ಕೇ ಅವರೂ ನಾವಿದ್ದ ಬಸ್ಸಿನಲ್ಲೇ ಕಿತ್ತೂರನಲ್ಲಿ ಹತ್ತಿದ್ರೆ ಅನುಕೂಲ ಅಂತ ಹೊರಡೋ ಮೊದಲು ಕಿತ್ತೂರ ಆಸ್ಪತ್ರೆಗೆ ಫೋನ್ ಮಾಡಿದೆ. ನಾವು ಧಾರವಾಡ ತಲುಪಲು ಹತ್ತು ಗಂಟೆಯಾದರೂ ಆಗೋದು ಖಾತ್ರಿ ಇತ್ತು. ಆದರೆ ಅವರಾಗಲೇ ಹೊರಟಾಗಿತ್ತು. ಬಸ್ಸು ಗದ್ದಲ. ಸ್ವಲ್ಪ ಹೆದರಿಕೆಯಾದ್ರೂ ಯಾವ ವಿಶೇಷ ತೊಂದರೆ ಇಲ್ಲದೇ ಧಾರವಾಡ ತಲುಪಿದ್ದಾಯ್ತು.

ಧಾರವಾಡ ಮುಟ್ಟಿದಾಗ ರಾತ್ರಿ ಹತ್ತು ಗಂಟೆ ನಾ ಅಂದು ಕೊಂಡಂತೆ. ಹೀಗೇ ನಡೆದಿತ್ತು ಮದುವೆ ತಯಾರಿ. ಮದುವೆ ಆಮಂತ್ರಣ ಪತ್ರಿಕೆ ತಯಾರಾಗಿ ಬಂದ್ವು. ಆಗ ನನ್ನ ಮಗಳು ಒಂದು ಮಾತು ಹೇಳಿದ್ಲು . ಆ ಮಾತನ್ನು ನಗುವಿನಲ್ಲಿ ತೇಲಿಸಿದ್ರೂ, ನನ್ನ ಮನಸ್ಸಿನಲ್ಲಿ ನೂರು ಅಲೆಗಳನ್ನು ಎಬ್ಬಿಸಿದ ಮಾತು ಅದು – ‘ಅಮ್ಮಾ ಕಾಕಾಗೂ ( ನನ್ನ ಮಕ್ಕಳು ಅಪ್ಪನಿಗೆ ಕಾಕಾ ಅಂತಾರೆ) ಒಂದು ಮದುವೆ ಆಮಂತ್ರಣ ಪತ್ರಿಕೆ ಕಳಿಸಿ ಬಿಡು. ಮರೆತು-ಗಿರ್ತಾರು.’ ಇಂದಿಗೂ ನನ್ನ ಮನದಲ್ಲಿ ಆ ಮಾತು ರಿಂಗಣಿಸಿದಾಗ ನಾ ಕ್ಷಣ ಹೊತ್ತು ಮಾತು ಮರೆತು ಮೂಕಳಾಗಿ ಬಿಡ್ತೀನಿ ಎಲ್ಲೋ ಏನೋ ಅಳುಕಿದಂತಾಗಿ!

ಸಾಗಿ ಬಂದ ದಾರಿ ಬಲು ದೂರದ್ದು. ತಿರುಗಿ ನೋಡಿದಾಗ ಕಂಡ ಅಂಕು ಡೊಂಕು, ಏರಿಳಿವಿನ ಸಂದುಗಳಲ್ಲಿ ಅಡಗಿ ಕುಳಿತ ಸಾವಿರಾರು ಅನುಭವಗಳು, ಘಟನೆಗಳು ಎದ್ದೆದ್ದು ನಾ ಮುಂದು, ತಾ ಮುಂದು ಎಂದು ಕುಣೀತಿದ್ವು. ಅವುಗಳಲ್ಲಿ ಎಷ್ಟೋ ಘಟನೆಗಳು ಅಭಿಮಾನದಿಂದ, ಹೆಮ್ಮೆಯಿಂದ ಎದೆಯುಬ್ಬಿಸಿದ್ದಿದೆ, ಸರ‍್ಥಕತೆಯ ಭಾವ ಮೂಡಿಸಿದ್ದಿದೆ. ಅಳು ಹೊತ್ತು ಬಂದ ಮೊಗ ಇಷ್ಟಗಲ ಅರಳಿ ನಗು ನಗುತ್ತಾ ಹೋಗುವ ರೋಗಿಗಳನ್ನು ನೋಡಿದಾಗ ಧನ್ಯತೆಯ ಭಾವ ಮೂಡಿದ್ದಿದೆ. ಕಷ್ಟಕರ ಕೇಸುಗಳ ಜೊತೆ ನನ್ನ ಪತಿ ಹೆಣಗಾಡುವಾಗ ಆತಂಕದ ಕ್ಷಣಗಳನ್ನು ಎಣಿಸುತ್ತಾ ಕಳೆದದ್ದಿದೆ. ಅವರ ಮುಖ ಗಂಭೀರವಾಗಿದ್ದು ಕಂಡ್ರೆ ಮೌನದ ಮೊರೆ ಹೊಕ್ಕು ಕಾದದ್ದಿದೆ. ಬಸ್ಸು ಚಾರ್ಜಗೂ ದುಡ್ಡಿಲ್ಲದೇ ಬರುವ ರೋಗಿಗಳು ಮರುಕದ ಅಲೆ ಎಬ್ಬಿಸಿದರೂ ನನ್ನ ಪತಿ ದುಡ್ಡು ಕೊಟ್ಟು ಕಳಿಸಿದಾಗ ಆ ಜನರ ಕಣ್ಣಲ್ಲಿ ಸುಳಿದ ಕೃತಜ್ಞತೆಯ ಬೆಳಕಿನಲ್ಲಿ ನನ್ನ ಮನೆಯ ದೇವರ ಮುಂದಿನ ನಂದಾ ದೀಪದ ಮಿಂಚು ಕಂಡದ್ದಿದೆ. ಹಸಿದು ಬಂದ ರೋಗಿಗಳಿಗೆ, ಅವರ ಮಕ್ಕಳಿಗೆ ಊಟ ಕೊಟ್ಟರೆ ಕಾಲಿಗೆ ಬೀಳುವ ಅವರ ಮುಗ್ಧತೆಯ ನೆರಳು ತಂಪೆರಚಿದ್ದಿದೆ. ಒಂದೇ ಎರಡೇ! ಎಣಿಕೆಗೂ ನಿಲುಕದಷ್ಟು ಅವು! ಒಮ್ಮೊಮ್ಮೆ ಅಶಾಂತಿಯ ಅಲೆ ಎಬ್ಬಿಸಿ ನೋಯಿಸಿದ ಗಳಿಗೆಗಳಿಗೂ ಕಮ್ಮಿ ಇಲ್ಲ. ಆದರೆ ಅವು ಎಂದೂ ಈ ಸಾರ್ಥಕ್ಯದ ಭಾವಕ್ಕೆ ಧಕ್ಕೆ ತರಲಾರವು.

ವೈದ್ಯವೃತ್ತಿ ಎಲ್ಲ ವೃತ್ತಿ ಗಳಂತಲ್ಲ, ಅಲ್ಲಿ ಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆಯಬೇಕಾಗ್ತದೆ. ಮಾನವತೆ ತಾನೇ ತಾನಾಗಿ ಅಲ್ಲಿ ಅರಳ್ತದೆ. ದೇವರಲ್ಲದಿದ್ರೂ ದೈವಿಕತೆಯ ಬೆಳಕು ಅಲ್ಲಿರೋದ್ರಲ್ಲಿ ಎರಡು ಮಾತಿಲ್ಲ. ಇದು ನಾನು ಒಬ್ಬ ವೈದ್ಯನ ಪತ್ನಿಯಾಗಿ ಕಂಡು ಕೊಂಡ ಸತ್ಯ! ಇಲ್ಲಿ ನಾ ಮುಂದಿಟ್ಟ ಕೆಲವೇ ಕೆಲವು ಅನುಭವಗಳು ಒಬ್ಬ ಸರೋಜಿನಿ ಯವಲ್ಲ, ಸಾವಿರಾರು ಸರೋಜಿನಿಯರಿದ್ದಾರೆ ಅದರ ಹಿಂದೆ. ಪ್ರತಿ ವೈದ್ಯ ಕುಟುಂಬದ ಕತೆ ಇದು. ಆಗ ಕಷ್ಟವೋ ಸುಖವೋ ಎದುರಿಸಿದ್ರೂ ಅವು ನನಗೆ ಇಂದಿಗೂ ಅಮೂಲ್ಯ ಆಣಿಮುತ್ತುಗಳೇ. ಜೀವನವನ್ನೆದುರಿಸುವ ಗಟ್ಟಿತನವನ್ನು ತುಂಬಿ, ಆ ವೈದ್ಯ ವೃತ್ತಿಯ ಒಂದು ಅಂಶ ನಾನೂ ಎಂಬ ಗರ್ವ ಮೂಡಿಸಿದ ಅಪರೂಪದ ಅನುಭವಗಳು ಅವು! ಮನಸು ಹಗುರವಾದ ಭಾವ ಈಗ. ಹಾಗಾದ್ರೆ ಬಿಚ್ಚಿದ ಗಂಟು ಕಟ್ಟಿಟ್ಟು ಬಿಡ್ತೀನಿ ಈಗ. ಮತ್ತೆ ಅವಕಾಶ ಒದಗಿದ್ರೆ ಬಿಚ್ಚೋಣ ಅನ್ನೋ ಇರಾದೆ…

| ಮುಕ್ತಾಯ |

‍ಲೇಖಕರು Admin

September 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: