ಪ್ರತಿಭಾ ನಂದಕುಮಾರ್ ಅಂಕಣ- ಯುರೋಪಿಯನ್ನರೇ ಮೆಚ್ಚಿ ಹೊಗಳಿ ಕೊಂಡಾಡಿದ ಹೈದರನ ಸೈನ್ಯ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

‘ಹೈದರಾಲಿ ಏನು ಮಾಡುತ್ತಾನೆ ಎಂದು ನೋಡಲು ಸ್ಮಿತ್ ನ ಸೇನಾಧಿಕಾರಿ ಕೋಟೆ ಗೋಡೆಯ ಮೇಲೆ ಸಣ್ಣ ಟೆಂಟ್ ನಲ್ಲಿ ಕೂತು ವಿಸ್ಕಿ ಕುಡಿಯುತ್ತಾ ಕಾಯುತ್ತಿದ್ದ. ಅವನು ನೋಡುತ್ತಿದ್ದಾನೆ ಎನ್ನುವುದರ ಅರಿವಿದ್ದ ಹೈದರ್ ಸೈನ್ಯ ಅವನ ಗಮನವನ್ನು ಬೇರೆಡೆಗೆ ತಿರುಗಿಸಲು ಮೊದಲು ಎಂಟು ಫಿರಂಗಿಗಳನ್ನು ಕೋಟೆಯ ಕಂದರದವರೆಗೂ ಸಾಗಿಸಿಕೊಂಡು ಹೋದರು. ಬ್ರಿಟಿಷ್ ಫಿರಂಗಿಗಳು ಕೋಟೆಯ ಒಳಗೆ ಹೋಗಿದ್ದು ಮೂರು  ಫಿರಂಗಿಗಳು ಮಾತ್ರ ಕೋಟೆಯ ಮೇಲಿದ್ದವು. ಅದರಿಂದ ಹೈದರ್ ಫಿರಂಗಿಗಳ ಮೇಲೆ ಗುಂಡು ಹಾರಿಸುವಷ್ಟರಲ್ಲಿ ಆ ಎಂಟು ಫಿರಂಗಿಗಳು ಧಾಳಿ ಮಾಡಿ ಕೋಟೆಯ ಮೇಲಿನ ಟೆಂಟ್ ಅನ್ನು ಚಿಂದಿ ಮಾಡಿದವು. ಫಿರಂಗಿಗಳ ಜೊತೆ ಸಾಗಿದ ಕಾಲಾಳುಗಳು ಕಂದರದ ಪಕ್ಕದಲ್ಲಿ ಗೋಡೆಗೆ ಅಂಟಿಕೊಂಡಂತೆ ನೆಲದಲ್ಲಿ ಮಲಗಿ ಗುಂಡೇಟು ತಪ್ಪಿಸಿಕೊಂಡರು. ಅದು ಸಾಧ್ಯವಾಗಲಿದ್ದು ಹೇಗೆಂದರೆ ಪಾಲಾರ್ ನದಿ ಕೋಟೆಯ ಕಂದರವನ್ನು ಸುತ್ತಿ ಹರಿದರೂ ಕೆಲವು ಕಡೆ ಹೆಚ್ಚು ಆಳವಿಲ್ಲದೆ ನಡೆದೇ ದಾಟಬಹುದಾಗಿತ್ತು.  ಈ ಧಾಳಿ ನಡೆದಿದ್ದು ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ. 

ಬ್ರಿಟಿಷ್ ಸೈನ್ಯ ಅಂದುಕೊಂಡಿದ್ದು ಕೋಟೆ ಗೋಡೆಯ ಬಿರುಕಿನ ಮೂಲಕ ಹೈದರ್ ಸೈನ್ಯ ಒಳಗೆ ಬರಲು ಯತ್ನಿಸುತ್ತದೆ. ಮೊದಲು ಅಲ್ಲಿ ತಡೆ ಒಡ್ಡಿ ರಾತ್ರಿಯ ಹೊತ್ತಿಗೆ ಕೋಟೆಯ ಒಳಗಡೆ ಬಂದುಬಿಡಬಹುದು ಎಂದು. ಆದರೆ ಎಂಟು ಫಿರಂಗಿಗಳು ಗುಂಡು ಹಾರಿಸಿ ಸೂಚನೆ ಕೊಟ್ಟ ಕೂಡಲೇ ಹದಿನೆಂಟರಿಂದ ಇಪ್ಪತ್ತು ಸಾವಿರ ಸೈನಿಕರು ಏಕ ಕಾಲದಲ್ಲಿ ಕೋಟೆಯನ್ನು ಸುತ್ತುವರಿದು ಜೋರಾಗಿ ಚೀತ್ಕರಿಸುತ್ತಾ ಧಾಳಿ ಪ್ರಾರಂಭಿಸಿದರು. ಕೆಲವರು ಏಣಿಗಳನ್ನು ಇತ್ತು ಕೋಟೆಯ ಗೋಡೆ ಹತ್ತಲು ತೊಡಗಿದರು. ಕೆಲವರು ಕೋಟೆ ಬಾಗಿಲನ್ನು ಕೊಡಲಿಯಿಂದ ಹೊಡೆಯಲು ಪ್ರಾರಂಭಿಸಿದರು. ಬ್ರಿಟಿಷ್ ಸೈನ್ಯದ ದಿಗ್ಭ್ರಾಂತಿ ನೋಡಿ ಹೈದರನ ಸೈನ್ಯಕ್ಕೆ ಇನ್ನಷ್ಟು ಉನ್ಮಾದ ಹೆಚ್ಚಾಯಿತು. ಶತ್ರುಗಳನ್ನು ಎದುರಿಸುವ ಬದಲು ಸ್ಮಿತ್ ನ ಸೈನ್ಯ ವೇಗವಾಗಿ ಕೋಟೆಯ ಒಳಗೆ ಓಡಿ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿತ್ತು. ಈ ಯತ್ನದಲ್ಲಿ ಅವರು ಕೇವಲ ಐವತ್ತು ಹೈದರನ ಸೈನಿಕರನ್ನು, ಒಬ್ಬ ಯುರೋಪಿಯನ್ ಅಧಿಕಾರಿಯನ್ನು ಒಬ್ಬ ಭಾರತೀಯ ಅಧಿಕಾರಿಯನ್ನು ಕೊಂದು ಹಾಕಿದರು.  

ಆ ರಾತ್ರಿ ಇಪ್ಪತ್ತನಾಲ್ಕು ಪೌಂಡುಗಳ ಇಪ್ಪತ್ತು ಫಿರಂಗಿಗಳನ್ನು ಒಟ್ಟುಗೂಡಿಸಿ ಬೆಳಗಿನ ಆರು ಗಂಟೆಗೆ ಪೂರ್ಣ ಬಲದೊಂದಿಗೆ ಗುಂಡು ಹಾರಿಸಿದಾಗ ಕೋಟೆಯಲ್ಲಿ ಬಿರುಕು ಕಾಣಿಸಿತು.’

ಇಲ್ಲಿ ಬ್ಯಾಟರಿಯನ್ನು ‘ಕಟ್ಟಲಾಯಿತು’ (ಕನ್ಸ್ಟ್ರಕ್ಷನ್) ಎನ್ನುವ ಪ್ರಯೋಗವಿದೆ. ಅದೇನೆಂದು ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಬ್ಯಾಟರಿ ಅಂದರೆ ಫಿರಂಗಿಯ ಗುಂಪು. 

‘ಬ್ಯಾಟರಿಯನ್ನು ಕಟ್ಟಲು ಎತ್ತರದ ಪ್ರದೇಶದಲ್ಲಿನ ಒಂದು ದೊಡ್ಡ ಮನೆಯ ಗೋಡೆ ಅನುಕೂಲ ಮಾಡಿಕೊಟ್ಟಿತು. ಬ್ರಿಟಿಷರು ಆ ಮನೆಗೆ ಬೆಂಕಿ ಹಾಕಿದ್ದರಿಂದ ಅದರ ತಾರಸಿ ಸುಟ್ಟುಹೋಗಿತ್ತು ಆದರೆ ಗೋಡೆ ಹಾಗೆ ನಿಂತಿತ್ತು. ಅದರ ಹಿಂದೆ ಈ ಬ್ಯಾಟರಿಯನ್ನು ಕಟ್ಟಲಾಯಿತು’ ಎನ್ನುತ್ತಾನೆ. ಇರಲಿ. 

‘ಹೈದರನ ಸೈನ್ಯದಲ್ಲಿ ಬ್ಯಾಟರಿಗಾಗಿ (ಅಂದರೆ ಫಿರಂಗಿಯ ಗುಂಪಿಗಾಗಿ) ಮರದ ಅಟ್ಟಣೆಯನ್ನು ಕಟ್ಟುವುದು ಬಹಳ ಸುಲಭದ ಕೆಲಸ. ನೆಲ ಸಾಕಷ್ಟು ಭದ್ರವಾಗಿತ್ತು. ಮಳೆಗಾಲವಲ್ಲದ ಕಾರಣ ಹವಾಮಾನದ ವೈಪರೀತ್ಯವೇನು ಇರಲಿಲ್ಲ. ಪಿರಂಗಿ ತೋಪುಗಳನ್ನು ಅವುಗಳ ಕ್ಯಾರಿಯೇಜ್ ಮೇಲೆ ಮೌಂಟ್ ಮಾಡಲಾಗುತ್ತಿತ್ತು. ಅದನ್ನು ಬ್ಯಾಟರಿಯಲ್ಲಿ ಸಿಡಿಯಲು ಸಿದ್ಧವಾಗಿ ಸ್ಥಾನಗೊಳಿಸಲಾಗುತ್ತಿತ್ತು.  

ಫಿರಂಗಿ ಗಾಡಿಯ ಚಕ್ರಗಳು ಅಗಲವಾಗಿದ್ದ ಕಾರಣ ನೆಲದಲ್ಲಿ ಹೂತುಹೋಗುತ್ತಿರಲಿಲ್ಲ. 

ಇನ್ನೊಂದು ನಂಬಬೇಕಾದ ಮಾತೆಂದರೆ,  ಸಣ್ಣ ಮಟ್ಟದ ಧಾಳಿಯಲ್ಲಿ ಮತ್ತು ತೋಪುಗಳ ಸದ್ದು ಮರೆಮಾಡಿ ಶತ್ರುಗಳನ್ನು ವಂಚಿಸುವಲ್ಲಿ ಹೈದರನಿಗಿದ್ದ ಅಸಹನೆ (ಇಮ್ ಪೇಶೆನ್ಸ್) ಯಿಂದಾಗಿ ಅನುಭವಿ ಸೇನಾಧಿಕಾರಿಗಳು ನೆಲ ಭದ್ರವಾಗಿರುವುದರ ಭರವಸೆ ಕೊಡುತ್ತಾರೆ. ಆದರೆ ಆಶ್ಚರ್ಯಕರವಾದ ಮತ್ತು ನಂಬಲಾಗದ ಸಂಗತಿ ಎಂದರೆ ಹೈದರ ಸೈನ್ಯ ಕಟ್ಟಿದ ಈ ಫಿರಂಗಿಗಳು ಜನರಲ್ ಸ್ಮಿತ್ ನ ಸೈನ್ಯದ ಫಿರಂಗಿಗಳ ಮಾದರಿಯಲ್ಲೇ ಕಟ್ಟಲಾಗಿದ್ದವು. (ಸುದೀರ್ಘ ವರ್ಣನೆ ಇದೆ) 

ಒಟ್ಟಿನಲ್ಲಿ ಹೈದರನ ಸೈನಿಕರು ಅದ್ಭುತ ಗುರಿಕಾರರಾಗಿದ್ದು ಅವರು ಹಾರಿಸಿದ ತೋಪುಗಳು ಎಷ್ಟು ನಿಖರವಾಗಿತ್ತೆಂದರೆ ಒಂದು ಗಂಟೆಯೊಳಗಾಗಿ ಕೋಟೆಯ ಕಡೆಯಿಂದ ನಿಶ್ಯಬ್ಧ ಆವರಿಸಿತು. ಹೈದರನ ಸೈನ್ಯದ ಮೊದಲ ತೋಪಿನಲ್ಲೇ ಸ್ಮಿತ್ ನ ಸೈನ್ಯದ ಹತ್ತು ಅಥವಾ ಹನ್ನೆರಡು ತೋಪು ಸೇನಾನಿಗಳು ಮತ್ತು ಹಲವಾರು ಸೈನಿಕರು ಸತ್ತಿದ್ದರು. ಹಾಗಾಗಿ ಬ್ರಿಟಿಷರ ಅಧಿಕಾರಿಗಳು ಕೋಟೆ ಗೋಡೆಯ ಮೇಲೆ ಕಾಣಿಸಿಕೊಳ್ಳಲು ಹಿಂಜರಿದರು. ಜೊತೆಗೆ ಸಿಪಾಯಿಗಳನ್ನು ಕಳಿಸಲೂ ಅಸರ್ಮಥರಾದರು. 

ಆಚೆ ಕಡೆಯಿಂದ ಹಾರಿ ಬರುತ್ತಿದ್ದ ಒಂದೊಂದು ತೋಪು ಈಚೆ ಕಡೆಯ ಸೈನಿಕರನ್ನು ಕೊಲ್ಲುತ್ತಿತ್ತು. ಇದರ ವರದಿಯನ್ನು ಬ್ರಿಟಿಷ್ ಸೇನಾಧಿಕಾರಿಗಳು ತಮ್ಮ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮೂರು ಗಂಟೆಯ ಕದನದ ನಂತರ ಕೊನೆಗೆ ಬೆಳಗಿನ ಆರು ಗಂಟೆಯ ಹೊತ್ತಿಗೆ ಅನಿವಾರ್ಯವಾಗಿ ಬ್ರಿಟಿಷ್ ಸೈನ್ಯಾಧಿಕಾರಿ ಬಿಳಿ ಬಾವುಟವನ್ನು ಕಾಣಿಸಿದ. ಹೈದರಾಲಿಗೆ ಎಷ್ಟು ಆಶ್ಚರ್ಯವಾಯಿತೆಂದರೆ ನಿಜವಾಗಿಯೂ ಬಿಳಿ ಬಾವುಟ ಕಾಣಿಸುತ್ತಿದೆಯೇ ಎಂದು ನೋಡಲು ಆತ ತನ್ನ ಡೇರೆಯಿಂದ ಹೊರಗೆ ಬಂದು ಸ್ವಲ್ಪ ಎತ್ತರದ ಸ್ಥಳಕ್ಕೆ ಹೋಗಿ ನೋಡಿದ. ನಿಜ ಎಂದು ಖಾತರಿಯಾದ ಮೇಲೆ ತನ್ನ ಕಮಾಂಡಿಂಗ್ ಅಧಿಕಾರಿಯನ್ನು ಕಳಿಸಿ ಬ್ರಿಟಿಷರಿಗೆ ಅವಮಾನವಾಗುವಂತೆ ಸೋತವರ ಎಲ್ಲಾ ಕೋರಿಕೆಯನ್ನು ಒಪ್ಪಿಕೊಂಡು ಬರಲು ಅಪ್ಪಣೆ ಮಾಡಿದ.

ಇದರ ಪರಿಣಾಮವಾಗಿ ಬ್ರಿಟಿಷ್ ಕ್ಯಾಪ್ಟನ್ ತಾನು ಮತ್ತು ತನ್ನ ಸೈನ್ಯ ಗೌರವಯುತವಾಗಿ ಊರು ಬಿಡುವುದು, ಯುರೋಪಿಯನ್ನರು ತಿರುಪತ್ತೂರ್, ವೆಲ್ಲೂರು, ಆರ್ಕಾಟ್ ಮಾರ್ಗವಾಗಿ ಮದ್ರಾಸಿಗೆ ಹೋಗುವುದು, ಸಿಪಾಯಿಗಳು ತಮಗೆ ಇಷ್ಟಬಂದ ಕಡೆಗೆ ಹೋಗುವುದು ಅಥವಾ ಇಷ್ಟಪಟ್ಟಲ್ಲಿ ಅವರು ಹೈದರಾಲಿಯ ಸೈನ್ಯ ಸೇರುವುದು, ಅಧಿಕಾರಿಗಳು ತಮ್ಮ ಸ್ವಂತದ ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ಆದರೆ ಇಂಗ್ಲೆಂಡ್, ಈಸ್ಟ್ ಇಂಡಿಯಾ ಕಂಪನಿ ಮತ್ತು ಮಹಮದ್ ಅಲಿಗೆ ಸೇರಿದ ಶಾಸ್ತ್ರಗಳು, ಬಂದೂಕು, ಪಿರಂಗಿ ಮದ್ದುಗುಂಡು, ಕುದುರೆಗಳು ಇತ್ಯಾದಿಗಳನ್ನು ಹೈದರಾಲಿಯ ವಶಕ್ಕೆ ಕೊಡುವುದು ಎಂದು ಮಾತಾಯಿತು. ಸಿಪಾಯಿಗಳಲ್ಲಿ ಹೆಚ್ಚಿನವರು, ಅದರಲ್ಲೂ ಅಶ್ವಾರೋಹಿಗಳು, ಹೈದರನ ಸೈನ್ಯ ಸೇರಿದರು. 

ಈ ಎಲ್ಲ ಕೋರಿಕೆಗಳನ್ನು ಹೈದರಾಲಿ ಯಾವ ತಕರಾರೂ ಇಲ್ಲದೇ ಒಪ್ಪಿಕೊಂಡಿದ್ದರಿಂದ ಬ್ರಿಟಿಷರ ಕ್ಯಾಪ್ಟನ್ ಸ್ವಲ್ಪ ಧೈರ್ಯ ಮಾಡಿ ತನ್ನ ಸೈನ್ಯಕ್ಕೆ ದಿನಸಿ ಇತ್ಯಾದಿಗಳನ್ನು ತಾನು ಸ್ವಂತ ಖರ್ಚಿನಲ್ಲಿ ಖರೀದಿಸಿದ್ದನೆಂದು, ಅದನ್ನು ಮದ್ರಾಸಿನ ಗವರ್ನರ್ ತಿರುಗಿ ಕೊಡುವ ಬಗ್ಗೆ ಸಂದೇಹವಿದೆಯೆಂದು ಹೇಳಿ ದಾರಿಯ ಊಟದ ಖರ್ಚಿಗೆ ಹೈದರಾಲಿ ಹಣ ಕೊಡಬೇಕೆಂದು ಕೋರಿದ. ಈ ಕೋರಿಕೆ ಸಿಕ್ಕಾಪಟ್ಟೆ ಅಸಂಬದ್ಧವಾಗಿತ್ತು ಏಕೆಂದರೆ ಬ್ರಿಟಿಷರ ಸೈನ್ಯ ತಮಗೆ ಬೇಕಾದ ಎಲ್ಲಾ ದಿನಸಿ ಮಾಂಸ ಇತ್ಯಾದಿಗಳನ್ನು ಸ್ಥಳೀಯರನ್ನು ದೋಚಿ ತೆಗೆದುಕೊಂಡಿದ್ದರು. ಆದರೂ ಕ್ಯಾಪ್ಟನ್ ಅದಕ್ಕೆ ಬಿಲ್ ಸಲ್ಲಿಸಿ ಬ್ರಿಟಿಷ್ ಸರ್ಕಾರದಿಂದ ಹಣ ಪಡೆಯುತ್ತಿದ್ದ. ಎಲ್ಲವನ್ನೂ ಬಲ್ಲ ಹೈದರ್ ನಕ್ಕು ದಾರಿಯ ಊಟದ ಖರ್ಚಿಗೆ ಅವರಿಗೆ ಸ್ವಲ್ಪ ಹಣ ಕೊಟ್ಟ!’

‘ಹೀಗೆ ಹೈದರ್ ಕಾವೇರಿಪಟ್ಟಣವನ್ನು ವಶಪಡಿಸಿಕೊಂಡು ಇಂಗ್ಲಿಷ್ ಸೈನ್ಯ ಅಲ್ಲಿಂದ ಎತ್ತಂಗಡಿ ಆಗುವಂತೆ ಮಾಡಿದ ಮೇಲೆ, ತನ್ನ ಸೈನ್ಯವನ್ನು ಮಾರನೆಯ ದಿನ ಮುಂಜಾನೆ ಎರಡು ಗಂಟೆಯಲ್ಲಿ ಭಾರಿ ಸಂಭ್ರಮದಿಂದ ಮಾರ್ಚ್ ಮಾಡಿಸಿಕೊಂಡು ಬಂದ. ಮಧ್ಯಾಹ್ನ ಪಾಲೇರ್ ನದಿಯ ದಡದಲ್ಲಿ ಬೀಡು ಬಿಟ್ಟ. ಅಲ್ಲಿಂದ ಉಳಿದ ಸೈನ್ಯದ ತುಕಡಿ ಸಹಿತ ನದಿಯನ್ನು ದಾಟಿ ಅನೇಕ ಪಡೆಗಳಾಗಿ ಮುಂದೆ ಅಶ್ವಾರೋಹಿಗಳು ಸಾಗುತ್ತಿರಲು ಹಿಂದೆ ಶಸ್ತ್ರಾಸ್ತ್ರಗಳು, ತೋಪಿನವರು, ಹಿಂದೆ ಸಾವಿರಾರು ಕಾಲಾಳುಗಳ ಸಹಿತ ಸಾಗಿದರು.

ಅಂದು ರಾತ್ರಿ ಹತ್ತು ಗಂಟೆಯವರೆಗೆ ನಡೆದು ಸೈನ್ಯ ಹುರಳಿಯ ಹೊಲದಲ್ಲಿ ತಂಗಿ ವಿಶ್ರಾಂತಿ ಪಡೆಯಿತು.  ರಾತ್ರಿ ಹುಣ್ಣಿಮೆ ಚಂದ್ರ ಪ್ರಕಾಶಮಾನನಾದ ಮೇಲೆ ಸೈನ್ಯ ಮತ್ತೆ ಸಾಗಿ ಬೆಳಗಿನ ಜಾವದಲ್ಲಿ ಮಖ್ದುಂನ ಸೇನೆಯ ಜೊತೆ ಸೇರಿಕೊಂಡಿತು. ಈ ಹುಸಾರ್ ಗಳು ಮತ್ತು ಯುರೋಪಿಯನ್ ಪಡೆಗಳು ಏಳು ದಿನಗಳಿಂದ ಡೇರೆ ಇಲ್ಲದೇ  ಬಿಸಿಲು ಚಳಿಯಲ್ಲಿ ಸಾಗಿ ಬಂದಿತ್ತು. ಹೈದರನ ಸೈನ್ಯ ಎಷ್ಟರಮಟ್ಟಿಗೆ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಅನ್ನುವುದಕ್ಕೆ ಇದು ಸಾಕ್ಷಿ. ಐದು ಸಾವಿರ ಗ್ರೆನೇಡಿಯರ್ ಗಳು ಅಶ್ವಾರೋಹಿಗಳು ಅವರ ಹಿಂದೆ ಶಸ್ತ್ರಾಸ್ತ್ರ ಪಡೆ, ನಡುವೆ ನಾಲ್ಕು ಗಂಟೆಗಳ ವಿಶ್ರಾಂತಿ ಮಾತ್ರ ಪಡೆದು ಇಪ್ಪತ್ತೆಂಟು ಗಂಟೆಗಳಲ್ಲಿ ಹದಿನೇಳು ಗಾವುದ ದೂರ ಸವೆಸಿ ಬಂದು ತಲುಪಿತ್ತು. ಅಂತಹ ಕಷ್ಟಕರ ಸ್ಥಿತಿಯನ್ನು ಎದುರಿಸಲು ತಕ್ಕಂತೆ ಹೈದರ್ ತನ್ನ ಸೈನ್ಯವನ್ನು ತಯಾರು ಮಾಡಿದ್ದ. 

‘ಇಷ್ಟು ದೊಡ್ಡ ಸೈನ್ಯದ ಜೊತೆಜೊತೆಗೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಸಾಗುವ ಎತ್ತಿನ ಗಾಡಿಗಳು ಸಾಗುವ ವೇಗದ ಬಗ್ಗೆ ಮೆಚ್ಚುಗೆ ಹೇಳಲೇಬೇಕು. ಭಾರತದ ಎತ್ತುಗಳು ಎಷ್ಟು ಬಲಶಾಲಿ ಎನ್ನುವುದು ಗೊತ್ತಾ ದಾಗ ಆಶ್ಚರ್ಯ ಇಲ್ಲವಾಗುತ್ತದೆ.  ಎತ್ತುಗಳನ್ನು ನಾಗಾಲೋಟದಲ್ಲಿ ಓಡಲು ತರಬೇತಿ ನೀಡಲಾಗಿರುತ್ತದೆ. ಜೊತೆಗೆ ‘ಶೂರ್ ಫುಟೇಡ್’ ಅಂದರೆ ಸಧೃಢ ಕಾಲುಗಳು. ಅಗತ್ಯ ಬಿದ್ದಲ್ಲಿ ಆನೆಗಳನ್ನು ಬಳಸಲಾಗುತ್ತದೆ. ಇದರ ಜೊತೆಗೆ ಬೃಹತ್ ಸಂಖ್ಯೆಯ ಅನುಭವಿಗಳು ಮುಂದೆ ದಾರಿ ಮಾಡಿಕೊಂಡು ಸಾಗಿ ಸೈನ್ಯ ಸಾಗಲು ಸುಲಭ ಮಾಡಿಕೊಡುತ್ತಾರೆ.

ಅತ್ತ ಜನರಲ್ ಸ್ಮಿತ್, ಕರ್ನಲ್ ವುಡ್ ಬರುವವರೆಗೂ ತಾನು ಸಿಂಗುಮನ್ ನಲ್ಲಿ ಯಾವುದೇ ತೊಂದರೆ ಇಲ್ಲದೇ ಇರಬಹುದು ಎಂದು ಭಾವಿಸಿದ್ದವನು, ಕಾವೇರಿಪಟ್ನಮನ್ನು ವಶಪಡಿಸಿಕೊಳ್ಳಲು ತಾನು ಹೆಣಗಾಡಿದಷ್ಟೇ ಹೈದರ್ ಕೂಡಾ ಸೆಣೆಸಾಡಬೇಕಾಗುತ್ತದೆ ಎನ್ನುವ ಭ್ರಾಂತಿಯಲ್ಲಿದ್ದವನು ಹೈದರ್ ಅದನ್ನು ವಶಪಡಿಸಿಕೊಂಡಾಗ ಅಲ್ಲಿಂದ ಅಷ್ಟು ಶೀಘ್ರವಾಗಿ ಹೊರಡಲಾರ ಎಂದು ಭಾವಿಸಿದ್ದವನು,  ನೋಡನೋಡುತ್ತಿದ್ದಂತೆಯೇ ತನ್ನ ಸೈನ್ಯದೊಡನೆ ಅಷ್ಟು ಹತ್ತಿರ ಬಂದುಬಿಟ್ಟ ಸುದ್ದಿ ಕೇಳಿ ತಬ್ಬಿಬ್ಬಾಗಿ ಹೋದ.

ವಾಸ್ತವವಾಗಿ ಸಿಂಗುಮನ್ ಮತ್ತು ತಿರುವಣ್ಣಾಮಲೈ ನಡುವಿನ ಮೈದಾನದಲ್ಲಿ ತನ್ನ ಉಳಿದ ಸೈನ್ಯ ಎಷ್ಟು ಹೊತ್ತಿಗೆ ಬಂದು ಬೀಡು ಬಿಡಬೇಕು ಎನ್ನುವುದನ್ನು ಹೈದರ್ ಮೊದಲೇ ಹೇಳಿಟ್ಟಿದ್ದ. ಅದೂ ಎಂತಹ ಪ್ರದೇಶದಲ್ಲಿ ಬಂದು ನಿಂತಿದ್ದ ಅಂದರೆ ಜನರಲ್ ಸ್ಮಿತ್ ತಿರುವಣ್ಣಾಮಲೈ ಗೆ ಹೋಗಬೇಕಾದರೆ ನದಿಯನ್ನು ದಾಟಲೇ ಬೇಕಾದಂತಹ ಇಕ್ಕಟ್ಟಿಗೆ ಸಿಕ್ಕಿಸಿದ್ದ. ಜೊತೆಗೆ ಎರಡು ಇಂಗ್ಲಿಷ್ ಸೈನ್ಯಗಳು (ಸ್ಮಿತ್ ಸೈನ್ಯ ಒಂದು ಮದ್ರಾಸಿನಿಂದ ಬರಬೇಕಾಗಿದ್ದ ಕ್ಯಾಪ್ಟನ್ ವುಡ್ ಸೈನ್ಯ ಇನ್ನೊಂದು) ಪರಸ್ಪರ ಭೇಟಿಯಾಗದ ಹಾಗೆ ಯೋಜಿಸಿದ್ದ. ಇದು ಸ್ಮಿತ್ ಗೆ ತುಂಬಾ ಮುಜುಗರಕ್ಕೆ ಸಿಕ್ಕಿಸುತ್ತಿತ್ತು ಏಕೆಂದರೆ ಅವನು ತಿರುಪತ್ತೂರ್, ಆರಣಿ ಮತ್ತು ಆರ್ಕಾಟ್ ಮಾರ್ಗವನ್ನು ಹಾದುಹೋಗಬೇಕಾಗುತ್ತಿತ್ತು ಮತ್ತು ಅಲ್ಲಿ ಉದ್ದಕ್ಕೂ ಹೈದರನ ಸೈನ್ಯ ಕಾದು ನಿಂತಿತ್ತು. ಹೈದರನ ಬಾಮೈದ ಮಖ್ದುಮ್ ಎಷ್ಟು ಅದ್ಭುತವಾಗಿ ಸೇನೆಯನ್ನು ಹಂಚಿ ಸ್ಥಾನಗೊಳಿಸಿದ್ದ ಎಂದರೆ ಬ್ರಿಟಿಷರು ಯಾವ ದಾರಿಯಿಂದಲೂ ತಪ್ಪಿಸಿಕೊಂಡು ಹೋಗುವುದು ಅಸಾಧ್ಯವಾಗಿತ್ತು.

ಇಲ್ಲಿಂದ ಮುಂದೆ ನಡೆದ ಸಂಗತಿಗಳ ವಿವರಗಳು ಅತಿ ದೀರ್ಘವಾಗಿವೆ. ಅತ್ಯಂತ ಪ್ರತಿಕೂಲ ಪ್ರದೇಶದಲ್ಲಿ ಹೈದರನ ಸೈನ್ಯ ಕಾದಿದ ರೀತಿಯ ಬಗ್ಗೆ ಬ್ರಿಟಿಷರ ವರದಿಗಳಲ್ಲಿ ಮನತುಂಬಿ ಹೊಗಳಲಾಗಿದೆ. ಭಾರತದ ಸೈನ್ಯದ ಬಗ್ಗೆ ಸದಾ ತುಚ್ಛವಾಗಿ ನೋಡುತ್ತಿದ್ದ ಯುರೋಪಿಯನ್ನರು ದಂಗಾಗಿ ಸ್ಥಂಭೀಭೂತರಾದರೆಂದು ದಾಖಲೆಯಾಗಿದೆ. 

ಜನರಲ್ ಸ್ಮಿತ್ ಸ್ವತಃ ತನ್ನ ದೊಡ್ಡ ಯುದ್ಧಗಳನ್ನು ಮಾಡಿದ ಅನುಭವೀ ಸಮರ್ಥ ಸೈನಿಕರು ಗುಡ್ಡದ ಮೇಲಿದ್ದುಕೊಂಡು, ಕೆಸರು ಗುಡ್ಡವನ್ನು ಹತ್ತಿ ಬರುತ್ತಿದ್ದ ಸಾವಿರಾರು ಹೈದರನ ಸೈನಿಕರನ್ನು ಗುಂಡಿಕ್ಕಿ ಕೊಲ್ಲಲು ಅಸಮರ್ಥರಾದರೆಂದು ಹೇಳಿದ್ದಾನೆ. 

ಆದರೂ ಈ ಯುದ್ಧದಲ್ಲಿ ಹೈದರನ ಅತ್ಯುತ್ತಮ 900 ಸೈನಿಕರು ಪ್ರಾಣ ತೆತ್ತರು. ಆತನ ಭಕ್ಷಿ ಫಿರಂಗಿಯ ಗುಂಡು ತಾಕಿ ಪ್ರಾಣ ಬಿಟ್ಟ. 

ರಾತ್ರಿ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಬ್ರಿಟಿಷ್ ಗನ್ನುಗಳು ಮೌನವಾದವು. ಎಡಬಿಡದೆ ವೀರಾವೇಶದಿಂದ ಕಾದಾಡಿದ ತನ್ನ ಸಿಪಾಯಿಗಳಿಗೆ ಸ್ವಲ್ಪ ವಿಶ್ರಾಂತಿ ನೀಡಲು ಹೈದರ್ ನಿರ್ಧರಿಸಿ ಅಪ್ಪಣೆ ಮಾಡಿದ. ರಾತ್ರಿ ಎಲ್ಲರು ನಿದ್ದೆ ಮಾಡಿದರು. 

ಬೆಳಗಾಗೆದ್ದು ನೋಡಿದರೆ ಬ್ರಿಟಿಷ್ ಸೈನ್ಯ ತಮ್ಮ ಸಾಮಾನು ಸರಂಜಾಮು ಬಿಟ್ಟು ಗಾಯಗೊಂಡ ತಮ್ಮ  ಸೈನಿಕರನ್ನು ಹೊತ್ತು ಜಾಗ ಖಾಲಿಮಾಡಿದ್ದರು. ಜನರಲ್ ಸ್ಮಿತ್ ನ ಅಡಿಗೆ ಸಾಮಾನು ಇದ್ದ ಗಾಡಿ, ಮೇಜರ್ ಬೋಂಜೋರ್ ಗೆ ಸೇರಿದ ಎರಡು ಅಮೂಲ್ಯ ವಸ್ತುಗಳುಳ್ಳ ಟ್ರಂಕು ಇತ್ಯಾದಿಗಳನ್ನು ಹೈದರನ ಸೈನಿಕರು ತೆಗೆದುಕೊಂಡರು. ಬ್ರಿಟಿಷರು ನದಿಯಲ್ಲಿ ಎಸೆದು ಹೋಗಿದ್ದ ಮದ್ದುಗುಂಡುಗಳನ್ನು ಮತ್ತು ಅಕ್ಕಿಯ ಮೂಟೆಗಳನ್ನು ಸಹ ಸೈನಿಕರು ರಕ್ಷಿಸಿದರು. ಹೋಗುವ ಅವಸರದಲ್ಲಿ ಸತ್ತವರನ್ನು ಸರಿಯಾಗಿ ಹೂಳದೆ ಹೋಗಿದ್ದರಿಂದ ಆ ಹೆಣಗಳನ್ನು ಸುತ್ತಿದ್ದ ಬಟ್ಟೆ ಇತ್ಯಾದಿಗಳನ್ನೂ ಲೂಟಿಮಾಡಿದರು. 

ಬ್ರಿಟಿಷರನ್ನು ಓಡಿಸುವಂತೆ ಮಾಡಿದ್ದರಿಂದ ಹೈದರ್ ತುಂಬಾ ಸಂತೋಷಪಟ್ಟು ತಿರುವಣ್ಣಾಮಲೈನಿಂದ ಒಂದೂವರೆ ಗಾವುದ ದೂರದಲ್ಲಿ ಬೃಹತ್ ಬಂಡೆಗಳ ಗುಡ್ಡಗಳ ಮರೆಯಲ್ಲಿ ಬೀಡುಬಿಟ್ಟ. ಅಲ್ಲಿಗೆ ಟೀಪು ತನ್ನ ಸೈನ್ಯ ಸಮೇತ ಬಂದು ಕೂಡಿಕೊಂಡ.

‍ಲೇಖಕರು Admin

September 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜೋಶಿ ಎಸ್ ಆರ್

    ಹೈದರ್ ನ ಒಂದು ನೋಟ ಅಷ್ಟೆ ಇದು. ಅವನ ಕ್ರೂರತನ, ಲಂಪಟತೆ,ಮುತ್ಸದ್ದಿತನವಿಲ್ಲದ ಕುಟಿಲತೆ,ತನ್ನ ಧರ್ಮಕ್ಕೆ ಎಲ್ಲರನ್ನೂ ಮತಾಂತರಗೊಳಿಸುತ್ತಿದ್ದುದು……..ಹೀಗೆ ಹತ್ತಾರು ನ್ಯೂನತೆಗಳು ತುಂಬಿರುವ ಇವನಲ್ಲಿ ಅದಾವ ಶೌರ್ಯವಿದ್ದರೂ ಏನುಪಯೋಗ, ಲೇಖಕಿಗೆ ಅದ್ಹೇಗೆ ಇವನ ಶೌರ್ಯ ಸೆಳೆಯಿತೋ?!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: