ಭುವನೇಶ್ವರಿ ಹೆಗಡೆ ಅಂಕಣ- ಬಾಗಿಲು ಹಾಕಿಕೊಂಡು ಪಾಠ ಮಾಡುತ್ತಿದ್ದರೆ!…

7

ನಿತ್ಯವೂ ಕ್ಲಾಸ್ ರೂಮಿನ ಬಾಗಿಲು ತೆರೆದಿಟ್ಟು ಪಾಠ ಮಾಡುತ್ತಿದ್ದರೆ ಅಭ್ಯಾಸ ಬಲದಿಂದ ದನ, ಕುರಿ, ಕೋಳಿಗಳೆಲ್ಲ ಎಗ್ಗಿಲ್ಲದೆ ನುಗ್ಗುತ್ತಿದ್ದವಾದ್ದರಿಂದ ಬಾಗಿಲು ಮುಚ್ಚಿ, ಮಕ್ಕಳೇ ಅರ್ಥಶಾಸ್ತ್ರವೆಂದರೆ… ಎಂದು ಪಾಠ ಮಾಡುತ್ತಿದ್ದೆ. ವಿಷಯವನ್ನು ಗ್ರಾಮೀಣ ಪ್ರದೇಶದ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳ ತಲೆಯೊಳಗೆ ತೂರಿಸಬೇಕೆಂಬ ಉಪಾಯ ನನ್ನದು. ಅದಕ್ಕೇ, ‘ಬೆಟ್ಟೇಗೌಡರು ಚೊಟ್ಟೇಗೌಡರ ಜೋಳವನ್ನು ಖರೀದಿಸುವಾಗ ಅದಕ್ಕೆ ಪ್ರತಿಯಾಗಿ ವಿನಿಮಯ ಮಾಡಲು ಉಪಯೋಗಿಸುವ ವಸ್ತು ಹಣ ಎನ್ನಿಸಿಕೊಳ್ಳುತ್ತದೆ’ – ಹೀಗೆಲ್ಲ ಅಲ್ಲಿಯವರದ್ದೇ ಹೆಸರು ಹೇಳಿ ಉದಾಹರಣೆ ನೀಡುತ್ತಿದ್ದೆ.

ಒಂದು ದಿನ ಪಾಠ ನಡೆದಿದ್ದಂತೆ ಬಾಗಿಲು ಟಕ ಟಕ ಎಂದಿತು. ಬಾಗಿಲು ತೆರೆದರೆ ಚೇರ್ಮನ್ನರ ಸೊಸೆ! ತನ್ನ ಐದು ವರ್ಷದ ಮಗನ ಕೈ ಹಿಡಿದು ನಿಂತಿದ್ದಾಳೆ. ತಲೆ ಮೇಲೆ ಸೆರಗು.

‘ಈ ಖೋಡೀನ್ನ ನೋಡ್ರಿ ಸಾಲಿಗ್ಹೋಗು ಅಂದ್ರ ಒಲ್ಲ್ಯಂತಾನ. ಜುಲ್ಹಂಮಿ ಮಾಡಿದ್ರೆ ಒದರಾಡ್ತಾನೆ. ಹಂಗಾರ ಕಾಲೇಜಿಗೆ ಹೊಕ್ಕೀಯೇನೋ ಅಂದ್ರ ಹೂಂ ಅಂದ. ಸ್ವಲ್ಪ ಹೊತ್ತು ನಿಮ್ ಈ ಖೋಲೀ ಒಳಗ ಕ್ಲಾಸ್ನಾಗ ಕುಂದರ್ಲೇಳ್ರಿ…’ ಎಂದಳು. ಖೋಡಿಯ ಕಡೆ ನೋಡಿದೆ. ಆಸಕ್ತಿಯಿಂದ ಪಿಳಿ ಪಿಳಿ ಕಣ್ಣು ಪಿಳುಕಿಸುತ್ತಿದೆ. ನನ್ನ ಶಿಷ್ಯ ಸಮೂಹದ ಕಡೆ ಅನುಮತಿಗೆಂಬಂತೆ ನೋಡಿದೆ – ‘ಬಾರೋ ಬಸ್ಯಾ ಇಲ್ಲೇ ಕುಂದರು’ ಎನ್ನುತ್ತಿದ್ದಾರೆ. ಅನ್ನ ನೀಡುವ ಧಣಿಯ ಮೊಮ್ಮಗ. ಇಲ್ಲವೆನ್ನಲಿ ಹೇಗೆ? ಎಲ್ಕೇಜಿ ಮಗುವಿಗೆ ಅರ್ಥಶಾಸ್ತ್ರ ಬೋಧಿಸಿದ ಕೀರ್ತಿಗೆ ಪಾತ್ರಳಾಗುವ ಅದೃಷ್ಟ ಆವತ್ತು ನನಗೊದಗಿಬಂತು.

ನಮ್ಮ ಸಹೋದ್ಯೋಗಿ ಕನ್ನಡದ ಮೇಷ್ಟ್ರು ಬಾಗಿಲು ಹಾಕಿಕೊಂಡು ಪಾಠ ಮಾಡುತ್ತಿದ್ದರೆ ಆಗಾಗ ಧಬ ಧಬ ಸಪ್ಪಳ ಕೇಳಿ ಬರುತ್ತಿತ್ತು.  ವಿದ್ಯಾರ್ಥಿಗಳಿಗೆ ಬಾರಿಸಿ ದಂಡಿಸುತ್ತಿದ್ದಾರೇನೋ ಎನ್ನಲೂ ಪುರಾವೆಯಿಲ್ಲ! ಆಗಾಗ ಹಾಡು ಸಹ ಜತೆಗೇ ಕೇಳಿ ಬರುತ್ತಿತ್ತು. ಮೇಷ್ಟ್ರನ್ನು ಕೇಳಿದರೆ ಮುಗುಳ್ನಗು ಮಾತ್ರ ಉತ್ತರ. ಕೊನೆಗೆ ವಿದ್ಯಾರ್ಥಿಗಳನ್ನೇ ಏನ್ರಪ್ಪಾ ವಿಷಯ ಎಂದು  ಕೇಳಿದೆ – ‘ಪಾಠ ಮುಗಿಸಿ ಸ್ವಲ್ಪ ಹೊತ್ತು ಯಕ್ಷಗಾನ ಕಲಿಸ್ತಾರ್ರೀ. ಭಾರೀ ಛಲೋ ರೀತಿ ಕುಣಿಯೂ ಹಂಗ ಆಗ್ತದ’ ಎನ್ನುತ್ತಾ,

‘ಕೋಮಲಾಂಗಿ ಕೇಳೇ ಮದಗಜಗಾಮಿನಿ ಪಾಂಚಾಲಿ….’ ಎಂದು ಭಾಗವತಿಕೆಯ ಒಂದು ಪದ್ಯ ಹಾಡಿಯೂ ತೋರಿಸಿದರು. ಕರಾವಳಿಯ ಆ ಉಪನ್ಯಾಸಕರ ಉತ್ಸಾಹ ಹಾಗಿತ್ತು. ಎಷ್ಟು ಕಲಿಸಿದರೂ ಕಲಿಯುವ ಹುಮ್ಮಸ್ಸು ಅಲ್ಲಿಯ ವಿದ್ಯಾರ್ಥಿಗಳಲ್ಲಿತ್ತು. ನಾವೂ ಅಷ್ಟೆ. ಏನು ಕಲಿತರೂ ಕಲಿಯಬಹುದಾದ ಸಮಯ ನಮಗಿತ್ತು. ಸಂಜೆ ಊರ ಹೆಂಗಸರ ಜತೆ ಆಗಾಗ ನಾನೂ ಜೋಳದ ಹೊಲದ ಕಡೆ ಹೋಗುತ್ತಿದ್ದೆ. ಯಲ್ಲವ್ವ, ಮಲ್ಲವ್ವ… ಅವರ ಕುಟುಂಬದ ಕಲಹಗಳು, ಪಾರವ್ವನ ಮಗಳ ಮದುವೆ ಕಥೆ… ಎಲ್ಲವನ್ನೂ ಹಳ್ಳಿಯ ಹೆಂಗಸರು ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. 

ಯಾರ ಕಥೆ ಬಿಚ್ಚಿಕೊಂಡರೂ ಅಲ್ಲೊಂದು ಕರುಣ ಕಥೆ ಇದ್ದೇ ಇರುತ್ತಿತ್ತು ಕುಡುಕ ಗಂಡ ಸೋಮಾರಿ ಮಗ ಹೇಳಿದ್ದು ಕೇಳದ ಮಗಳು ಇವುಗಳ ನಡುವೆಯೂ ಮುಖದಲ್ಲಿ ಸೋಲಿನ ಕಳೆ ಇಟ್ಟುಕೊಳ್ಳದೆ ಛಲದಿಂದ ದುಡಿಯುವ ಮಹಿಳಾ ವರ್ಗ. ಮಲೆನಾಡಿಗೆ ತೀರಾ ವಿರುದ್ಧವಾದ ವಿಭಿನ್ನ ರುಚಿಯ ಬಯಲುಸೀಮೆಯ ರೊಟ್ಟಿ ಪಲ್ಯಗಳ ಊಟ ಮೊದ ಮೊದಲು ವಿಚಿತ್ರ ಎನಿಸಿದರೂ ಅದರದ್ದೇ ಆದ ಒಂದು ಹದ ನನಗೆ ಪರಿಚಯವಾಗತೊಡಗಿತು. ನಾನೂ ಅವರಿಂದ ಜೋಳದ ಭಕ್ರಿ, ಪುಂಡಿಪಲ್ಲೆ, ಗುರೆಳ್ಳು ಚಟ್ನಿಪುಡಿ ಮಾಡುವುದನ್ನು ಕಲಿತೆ. ಸ್ವಚ್ಛತೆ, ಸ್ವಾವಲಂಬನೆ, ಶಿಕ್ಷಣ… ಅಂತ ಆಗಾಗ ಕಲಿಸಿಯೂ ಕಲಿಸಿದೆ. ಕೆಲವು ದೊಡ್ಡಾಟದ ಪದಗಳನ್ನೂ ಗೀಗೀ ಪದಗಳನ್ನೂ ಅವರು ನನಗೆ ಕಲಿಸಿದರು. ಅದರಲ್ಲಿ ಮಲ್ಲವ್ವನೆಂಬ ಕುಂಕುಮಧಾರಿಣಿ ಭಕ್ತೆಯೊಬ್ಬಳು ಮುಕ್ತ ಕಂಠದಲ್ಲಿ,

‘ಏಳು ಕೊಳ್ಳದಲಿ ಇರುವ ಯಲ್ಲಮ್ಮನ
ಜಾತ್ರೀಯ ನೋಡೋಣು ಬಾ
ಶಕ್ತಿ ಪಾದ ಪೂಜೆಯ ಮಾಡೋಣು ಬಾ
ಉಘೇ ಉಘೇ ಅನ್ನುತ್ತ ಹಾಡೋಣು
ಬಾ……ss’
ಎಂದು ಹಾಡುತ್ತ ಹೊಲದಲ್ಲಿ ನರ್ತಿಸುತ್ತಿದ್ದಾಗ ನನಗೂ ತಡೆದುಕೊಳ್ಳುವುದಾಗುತ್ತಿರಲಿಲ್ಲ. ನಾಲ್ಕು ಹೆಜ್ಜೆ ಹಾಕಿಯೇ ಹೋಗುತ್ತಿತ್ತು. ಆಗಿನ್ನೂ ನಮ್ಮೂರಲ್ಲಿ ಮಹಿಳಾ ಯಕ್ಷಗಾನ ದ ಪರಿಕಲ್ಪನೆ ಪ್ರಚಲಿತವಾಗಿರಲಿಲ್ಲ ನಮ್ಮ ಯಕ್ಷಗಾನ ಕುಣಿತದ ಹುಚ್ಚನ್ನು ನಮ್ಮ ನಮ್ಮ ಮನೆಗಳಲ್ಲಿ ಹಿರಿಯರ ಕಣ್ತಪ್ಪಿಸಿ ಬಲ್ಲವರಿಂದ ಕಲಿಯುತ್ತಿದ್ದೆವು. ಭಾಗವತಿಕೆ ಆದರೂ ಆದೀತು ಕುಣಿತ ಕೂಡದು ಎಂಬಂತಿದ್ದ  ಹಿರಿಯರು ಮನೆಮನೆಯಲ್ಲೂ ಇದ್ದರು. ಆದರಿಲ್ಲಿ ಬಯಲುಸೀಮೆಯ ತೆರೆದ ಗದ್ದೆಯ ಬಯಲಿನಲ್ಲಿ ಹಳ್ಳಿಯ ಮಹಿಳೆಯರ ಜತೆ ಹೆಜ್ಜೆ ಹಾಕಿ ಕುಣಿಯುವುದು ಬೊಬ್ಬೆಯಿಡುವುದು ನನಗಂತೂ ಆಪ್ಯಾಯಮಾನ ದಿನಚರಿಯಾಗಿ ಹೋಗಿತ್ತು ನಾನವರಿಗೆ ಕಲಿಸುವುದಕ್ಕಿಂತ ಅವರಿಂದ ನಾನು ಕಲಿತದ್ದು ಹೆಚ್ಚು ಅನಿಸತೊಡಗಿತ್ತು .ಎಲ್ಲಮ್ಮ ಮಲ್ಲಮ್ಮರಿಗೆ ನಾನು ಇಂಗ್ಲೀಷ್ ಕಲಿಸಿದ್ದೆ. 

ಒಂದು ದಿನ  ಮಲ್ಲಮ್ಮ ತನ್ನ ಗಂಡನ ಬಳಿ ಹಂಗ್ಯಾಕ ಮಂಗ್ಯಾನ್ಹಂಗ ಮಾಡಾಕತ್ತಿ ಸ್ವಲ್ಪ ಡೀಸೆಂಟ್ರಿ ಜೆಂಟ್ಲ್ ಮ್ಯಾನ್ ಆಗಿ ನೆಡ್ಕೋ ನೋಡೋಣು ಎಂದು ಪ್ರಯೋಗ ಮಾಡಿದ್ದು ಕಿವಿಮೇಲೆ ಬಿದ್ದು ಹುಳ್ಳ ಹುಳ್ಳಗೆ ಆಗಿತ್ತು. ಚೇರ್ಮನ್ನರ ಗದ್ದೆಯಲ್ಲಿ ಕಾಲು ಸೆಂಟು ಜಾಗ ಬಾಡಿಗೆಗೆ ಪಡೆದು ನಾನು ಟೊಮೆಟೋ ಹಸಿಮೆಣಸು ಬೆಳೆಸತೊಡಗಿದೆ. ಮಲೆನಾಡಿನ ನನ್ನ ಅಡಿಕೆ ತೋಟದ ಯಾಲಕ್ಕಿ ಕರಿಮೆಣಸುಗಳ ನೆನಪು ಸೆಳೆದಾಗೆಲ್ಲ ಹಸಿ ಮೆಣಸಿನ ಗಿಡ ಸವರಿ ತೃಪ್ತಿಪಟ್ಟುಕೊಳ್ಳುತ್ತಿದ್ದೆ. ಶನಿವಾರ ಭಾನುವಾರ ನನ್ನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೇಡವೆಂದರೂ ನನ್ನೊಂದಿಗೆ ಗದ್ದೆಗೆ ಬರುತ್ತಿದ್ದು ಆಚೀಚೆ ನೆಗೆದಾಡುವ ಮಕ್ಕಳು ಕ್ಷಣಮಾತ್ರದಲ್ಲಿ ಗಿಡ ನೆಡಲು ಅನುಕೂಲವಾಗುವ ಬದು ನಿರ್ಮಾಣ ಮಾಡುವುದು ಹುಲ್ಲು ಕತ್ತರಿಸಿ ಹೊರೆ ಕಟ್ಟುವುದು ಮೊದಲಾದ ಕೆಲಸಗಳನ್ನು ಲೀಲಾಜಾಲವಾಗಿ ಮಾಡಿ ಬಿಡುತ್ತಿದ್ದರು. ಅವುಗಳನ್ನು ಚೇರ್ಮನ್ ಅವರ ಮನೆಯ ಕೊಟ್ಟಿಗೆಗೆ ಸಾಗಿಸಿ ಕೃತಾರ್ಥಳಾಗುತ್ತಿದ್ದೆ.

‘ಆ ಹೆಣ್ಣು ಮಗಳಿಗೆ ಕೊಡುವ ಹಾಲಿಗೆ ರೊಕ್ಕಾ ತಗೊಳ್ಳೋ ಹಂಗಿಲ್ಲ’ ಎಂದು ಚೇರ್ಮನ್ನರು ಅಪ್ಪಣೆ ಮಾಡಿದ್ದರೆಂದು ಸೊಸೆ ಹೇಳಿದ್ದಳು. ಜೋಳದ ದಂಟನ್ನು ತಿಂದು ನೀರು ಕುಡಿಯುತ್ತಿದ್ದ ಎಮ್ಮೆಗಳು ನೀಡುತ್ತಿದ್ದ ಗಟ್ಟಿ ಹಾಲಿನಲ್ಲಿ ಮಾಡಿ ಕುಡಿಯುತ್ತಿದ್ದ ಕಾಫಿ ಇಂದಿಗೂ ನನ್ನ ಸ್ಮ್ರತಿ ಕೋಶದಲ್ಲಿ ಭದ್ರವಾಗಿ ಹಬೆಯಾಡುತ್ತಿದೆ. ಹೊಲದಲ್ಲಿಯೇ ಬೆಂಕಿ ಹಾಕಿ ಜೋಳದ ಕುಂಡಿಗೆಗಳನ್ನು ಕೆಂಡದಲ್ಲಿ ಸುಟ್ಟು ಅಲ್ಲೇ ಕೂತು ತಿನ್ನುವುದು ಅಭ್ಯಾಸವಾಗಿ ಹೋಯ್ತು. ಇನ್ನೂ ಕೆಲ ವರ್ಷ ಅದೇ ಹಳ್ಳಿಯಲ್ಲಿ ನಾನು ಅರ್ಥಶಾಸ್ತ್ರ ಬೋಧಿಸಿಕೊಂಡು ಇದ್ದಿದ್ದರೆ ಅಲ್ಲೇ ಪುಟ್ಟ ಜಮೀನು ಖರೀದಿಸಿ ಜೋಳ ಬೆಳೆಯಲು ಪ್ರಾರಂಭಿಸಿದರೂ ಆಶ್ಚರ್ಯವಿರಲಿಲ್ಲ. ದಿನಗಳು ಓಡಿದ್ದೇ ತಿಳಿಯುತ್ತಿರಲಿಲ್ಲ.

ಮಧ್ಯಾವಧಿ ಪರೀಕ್ಷೆ ಮಾಡಿ ನಮ್ಮ ಕಲಿಸುವಿಕೆಯ ಸತ್ತ್ವ ಪರೀಕ್ಷೆ ಮಾಡುವುದೆಂದಾಯ್ತು. ಉತ್ತರಗಳು ನಮ್ಮ ಎದೆಗೇ ಬಂದು ಒದ್ದಂತೆ ಬರೆಯಲ್ಪಟ್ಟಿದ್ದವು.

ಅರ್ಥಶಾಸ್ತ್ರವೆಂದರೇನು? ಅದರಲ್ಲಿ ಪ್ರಕಾರಗಳೆಷ್ಟು? ಎಂಬ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬನ ಉತ್ತರ ಹೀಗಿತ್ತು-

ಪ್ರತಿಯೊಂದು ಪದಕ್ಕೂ ಒಂದೊಂದು ಅರ್ಥವಿರುತ್ತದೆ. ಅ ಅರ್ಥವನ್ನು ತಿಳಿಸುವ ಶಾಸ್ತ್ರವೇ ಅರ್ಥಶಾಸ್ತ್ರ. ಇದರಲ್ಲಿ ಎರಡು ಪ್ರಕಾರ. ಅಪಾರ್ಥಶಾಸ್ತ್ರ ಹಾಗೂ ಅನರ್ಥ ಶಾಸ್ತ್ರ.

ಶಬ್ದಗಳಿಗೆ ತಪ್ಪು ಅರ್ಥಗಳು ಹುಟ್ಟಿ ತಪ್ಪು ಅಭಿಪ್ರಾಯಗಳು ಉಂಟಾದರೆ ಅಪಾರ್ಥ ಶಾಸ್ತ್ರವೆಂದು ಹೇಳುತ್ತಾರೆ. ಈ ಅಪಾರ್ಥದಿಂದ ವಿರಸ ಜಾಸ್ತಿಯಾಗಿ ಮಾರಾಮಾರಿಯಾದರೆ ಅದನ್ನ ಅನರ್ಥ ಶಾಸ್ತ್ರವೆನ್ನುತ್ತಾರೆ.

ಹಣವೆಂದರೇನು? ಎಂಬ ಪ್ರಶ್ನೆಗೆ ಹೆಚ್ಚಿನವರು, – ಬೆಟ್ಟೇಗೌಡರು ಚೊಟ್ಟೇಗೌಡರ ಬಳಿ ಜೋಳ ಖರೀದಿಸುವಾಗ ಪ್ರತಿಯಾಗಿ ಕೊಡುವ ಪದಾರ್ಥ ಎಂದು ಬರೆದಿದ್ದರೆ ಒಬ್ಬ ವಿದ್ಯಾರ್ಥಿ ಮಾತ್ರ.

‘ಹಣವೆಂದರೆ ಹೆಣ್ಣು ಕೊಟ್ಟ ಮಾವನನ್ನು ಹೆದರಿಸಿ ಅಲುಗಾಡಿಸಿದಾಗ ಉದುರುವ ಪದಾರ್ಥ’ ಎಂದು ಬರೆದು, ನನ್ನ ಮುಖಕ್ಕೆ ಮಂಗಳಾರತಿ ಹಿಡಿದಿದ್ದ.

ಇಂಥ ನಿಸರ್ಗದತ್ತ ಕಿರಿಯ ಕಾಲೇಜನ್ನು ಬಿಟ್ಟುಬಿಡಬೇಕಾದ ಸಂದರ್ಭ ಬಂದಾಗ ನನಗೇ ತುಂಬ ದುಃಖವಾಯಿತು. ನಗರವೊಂದರ ಪ್ರಥಮ ದರ್ಜೆ ಕಾಲೇಜಿಗೆ ನೇಮಕವಾಗಿದೆ. ನಾನಿನ್ನು ಇಲ್ಲಿರೋ ಹಂಗಿಲ್ಲ ಎಂದು ಎಲ್ಲಮ್ಮ, ಮಲ್ಲಮ್ಮರಲ್ಲಿ ಹೇಳಿದೆನಷ್ಟೆ. ಹೆಂಗಸರ ದಂಡೇ ಚೇರ್ಮನ್ನರ ಮನೆಗೆ ದಂಡು ಹೋಗಿ

‘ಆ ಹೆಣ್ಮಗಳಿಗೆ ಇನ್ನ ಸ್ವಲ್ಪ ಜಾಸ್ತಿ ಸಂಬಳಾ ಕೊಟ್ಟು ಇಲ್ಲೆ ಇಟ್ಕೊ ಬಾರ್ದೇನs? ಆಕಿ ಸಂಬಳಾ ಸಾಲದ್ದಕ್ಕ ಬಿಟ್ಟು ಹೊಂಟಾಳs’ – ಎಂದು ಜಬ್ಬರ್‍ದಸ್ತ್ ಮಾಡಿದರಂತೆ. ಆ ಹಳ್ಳಿಯಲ್ಲಿ ಸಿಕ್ಕ ಪ್ರೀತಿ, ಮುಗ್ಧ ಪ್ರೀತಿ ಮತ್ತೆ ನನಗೆ ಯಾವ ಸಂಬಳದಲ್ಲೂ ಪ್ರಮೋಶನ್‍ನಲ್ಲೂ ಸಿಕ್ಕಿಲ್ಲ.

ನಗರದ ಕಾಲೇಜಿನಲ್ಲಿ ಬಂದು ಸೇರಿಕೊಂಡ ದಿನವೇ ರೋಚಕ ಅನುಭವಗಳ ಸರಮಾಲೆ, ಮೊದಲ ಬಿ.ಎ.ಗೆ ಹೊಸದಾಗಿ ಬಂದು ಸೇರಿದ ಕ್ಲಾಸಿಗೆ ನಾನು ಹೋಗಬೇಕಿತ್ತು. ನಾನು ಆ ತರಗತಿಗೆ ಹೋಗುತ್ತಿರುವಷ್ಟರಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ದಂಡೇ ಬಂದು ಆ ರೂಮಿನಿಂದ ಹೊರಬಂದು ಓಡಿತು. ಒಳಗೆ ಹೋಗಿ ಇಡೀ ಕ್ಲಾಸನ್ನು ವೀಕ್ಷಿಸಿದಾಗ ಸಣ್ಣ ಭೂಕಂಪ ಆದಂತಾಯ್ತು.

ಇಡೀ ಕ್ಲಾಸಿನ ಬೆಂಚುಗಳ ತುಂಬಾ ಒಂದು ಹುಡುಗ ಒಂದು ಹುಡುಗಿಯಂತೆ ಜೋಡಿಯಾಗಿ, ಶಿಸ್ತಿನಿಂದ ಕೂತಿದ್ದಾರೆ.

ಹುಡುಗ, ಹುಡುಗಿಯರ ಭಯಮಿಶ್ರಿತ ಮುಖಗಳನ್ನು ಕಂಡಾಗಲೇ ಇದರಲ್ಲೇನೋ ಇರಬೇಕೆನ್ನಿಸಿತು. ನೀವೆಲ್ಲ ಇಲ್ಲಿಗೆ ಬರುವ ಮೊದಲೇ ಪರಿಚಿತರೇ? ಎಂದು ಕೇಳಿದೆ. ‘ಇಲ್ಲಾ ಮಿಸ್’ ಎಂದವು. ಮತ್ತೆ ಈ ರೀತಿ ಕೂತಿದ್ದು ಹೇಗೆ? ಎಂದು ಕೇಳಿದಾಗ ಪುನಃ ಒಂದು ಆಘಾತ.

‘ಈಗಷ್ಟೆ ಒಬ್ಬ ಟೈ ಕಟ್ಟಿಕೊಂಡ ಮೇಷ್ಟ್ರು ಬಂದಿದ್ದರು. ಇನ್ನು ಮೇಲೆ ಒಬ್ಬ ಹುಡುಗ, ಒಬ್ಬ ಹುಡುಗಿ ಹೀಗೇ ಕೂತಿರಬೇಕು ಎಂದು ರೂಲ್ಸ್ ಮಾಡಿದ್ದಾರಂತೆ. ಅವರ ಆದೇಶದಂತೆ ನಾವು ಹೀಗೆ ಕೂತಿದ್ದೇವೆ’ – ಎಂದರು. ನನಗೆ ನಿಚ್ಚಳವಾಗಿ ಹೋಯ್ತು. ಹಿರಿ ವಿದ್ಯಾರ್ಥಿಗಳ ದಂಡಿನಲ್ಲಿ ಒಬ್ಬ ದಡೂತಿ ಹುಡುಗನಿಗೇ ಟೈ ಕಟ್ಟಿ ಪ್ರೊಫೆಸರರ ಪಾತ್ರ ಹಾಕಲಾಗಿದೆ ಎಂದು. ಈ ತರದ ಕಿಡಿಗೇಡಿತನಕ್ಕೆ ರ್ಯಾಗಿಂಗ್ ಎನ್ನುತ್ತಾರೆ  ನೀವದರಿಂದ ಭಯಪಡಬೇಕಿಲ್ಲವೆಂದೂ ಹೇಳಿ ಹುಡುಗ ಹುಡುಗಿಯರನ್ನು ಬೇರೆ ಬೇರೆ ಕೂಡ್ರಿಸಿ ಇಂಗ್ಲೀಷಿನಲ್ಲಿ ಪಾಠಕ್ಕೆ ಮೊದಲಿಟ್ಟೆ.

ಇನ್ನೊಂದು ಹಳೆ ಹುಲಿಗಳೇ ಜಾಸ್ತಿಯಿದ್ದ ಕ್ಲಾಸು. ಆ ಕ್ಲಾಸಿನಲ್ಲಿ ಪಾಠ ಮಾಡುವುದೇ ಕಷ್ಟವೆಂದು ‘ಸೈಲೆನ್ಸ್’ ಎಂದು ಮೇಷ್ಟ್ರು ಹೇಳಿದರೆ, ಮೂಲೆಯಿಂದ ‘ಲೈಸೆನ್ಸ್’ ಎಂಬ ಸ್ವರ ಬರುತ್ತದೆಂದೂ ಸಹೋದ್ಯೋಗಿಗಳು ಎಚ್ಚರಿಸಿದ್ದರು. ಆ ತರಗತಿಗೆ ಪಾಠ ಮಾಡಲು ಸಿದ್ಧತೆ ಎಂದರೆ ಅವರನ್ನೆದುರಿಸಲು ಮಾನಸಿಕ ಸಿದ್ಧತೆ ಮಾಡಿಕೊಂಡೇ ತರಗತಿಗೆ ಹೋದೆ. ಪುಟು ಪುಟು ಜಿಗಿಯಲು ಸಿದ್ಧವಾದ ಉತ್ಸಾಹದ ಬುಗ್ಗೆಗಳು ಕಿಲಾಡಿ ಕಣ್ಣುಗಳು. ಆದರೂ ಪ್ರಥಮ ಭೆಟ್ಟಿಯ ಸಂಕೋಚ, ಸಿಡಿಯಲು ಸಿದ್ಧವಿದ್ಧ ಯುವಶಕ್ತಿಗೆ ಕಡಿವಾಣ ಹಾಕಿದ್ದು ಗೋಚರಿಸುತ್ತಿತ್ತು.

ಆ ದಿನ ನಾನು ಕಲಿಸಬೇಕಾದ ವಿಷಯದ ಸುದ್ದಿಯನ್ನೇ ಎತ್ತಲಿಲ್ಲ. ಬೋರ್ಡು, ಚಾಕ್‍ಪೀಸ್ ಏನನ್ನೂ ಬಳಸದೇ ಸೀದಾ ವಿದ್ಯಾರ್ಥಿಗಳು ಕೂತಿದ್ದ ಕಡೆಗೇ ಹೋಗಿ ಅವರ ನಡುವೆಯೇ ನಿಂತುಬಿಟ್ಟೆ. ಒಬ್ಬೊಬ್ಬರದೂ ವೈಯಕ್ತಿಕ ವಿವರ, ತಂದೆ-ತಾಯಿಗಳ ಹೆಸರು, ಉದ್ಯೋಗ ಎಲ್ಲ ಕೇಳುತ್ತಾ ತಪ್ಪಿಯು ಬೋರ್ಡಿಗೆ ಮುಖ ಮಾಡಿ ವಿದ್ಯಾರ್ಥಿಗಳಿಗೆ ಬೆನ್ನು ತೋರಿಸಲೇ ಇಲ್ಲ. ಸಿದ್ಧವಾಗಿದ್ದ ಕಾಗದದ ಬಾಣಗಳು ಅಲ್ಲಲ್ಲೇ ಚಡಪಡಿಸುತ್ತ ಒಳಸೇರಿದ್ದವು.

ನನ್ನ ವಿದ್ಯಾರ್ಥಿ ಜೀವನದಲ್ಲಿ ಕಂಡ ಮಾಷ್ಟ್ರುಗಳ ವೈಶಿಷ್ಟ್ಯಗಳನ್ನು ಅವರೆದುರು ಹೇಳಿದೆ. ಆಸಕ್ತಿಯಿಂದ ಕೇಳತೊಡಗಿದರು.

ನಮ್ಮ ಪ್ರೈಮರಿ ಸ್ಕೂಲ್ ಟೀಚರ್ ಎಂದರೆ ನಮ್ಮ ಹಳ್ಳಿ ಮನೆಯಲ್ಲಿಯೇ ಉಳಿದು ಮನೆಯ ಸದಸ್ಯರೇ ಆಗಿದ್ದರು. ಆಗಲ್ಲ, ಈಗಲೂ ಕೂಡ ನಮ್ಮ ಹಳ್ಳಿಯಲ್ಲಿ

ಬಾಡಿಗೆ ಮನೆ ಇರಲಿಲ್ಲ. ಮನೇಲೇ ಇರೋ ಮಾಷ್ಟ್ರಿಗೆ ನಾವು ಚೂರೂ ಹೆದರುತ್ತಿರಲಿಲ್ಲ. ಅದು ಏಕೋಪಾಧ್ಯಾಯ ಶಾಲೆ. (ಹಾಗೆಂದರೆ ಏಕೋ ಉಪಾಧ್ಯಾಯ ನಾದೆ ಎಂದು ಮೇಷ್ಟ್ರು ತಲೆ ಚೆಚ್ಚಿ ಕೊಳ್ಳಬಹುದಾದ ಶಾಲೆ ಎಂದಿರಬೇಕು ಅನ್ನಿಸುತ್ತದೆ) ಮಾಸ್ತರಿಲ್ಲದಾಗ ನಾವೇ ಮೇಷ್ಟ್ರು. ನಮಗಿಂತ ಕಿರಿಯ ಮಕ್ಕಳಿಗೆ ಓದಿಸಿ ಬರೆಸುವ ಅವಕಾಶ. ಮೇಷ್ಟ್ರನ್ನೆ ಅನುಕರಿಸಿ ಮಿಮಿಕ್ರಿ ಮಾಡುತ್ತಿದ್ದೆವು.

ಒಂದು ದಿನ ನಾನು ನಮ್ಮ ಮೇಷ್ಟ್ರ ಸ್ವರದಲ್ಲೇ ಅವರು ದಿನಾ ಹೇಳುವಂತೆ- 
ತಗಳಪ್ಪಾ ಎರಡು ಕೋಳಿ ಮೊಟ್ಟೆ. ನಿಂಗೊಂದು ನಿಮ್ಮ ಅಪ್ಪಂಗೊಂದು. ಎರಡಕ್ಕೆ ಎರಡು ಸೇರಿಸಿದರೆ 22 ಅಂತ ಬರೀತೀಯಲ್ಲ? ಎಂಥಾ ಸುಪುತ್ರನಯ್ಯಾ ನೀನು ಎಲ್ಲಾ ನನ್ನ ಪ್ರಾರಬ್ಧಕರ್ಮ – ಎನ್ನುತ್ತ ಹಣೆ ಚಚ್ಚಿಕೊಂಡು ಬಾಗಿಲ ಕಡೆ ನೋಡ್ತೇನೆ. ಶಾಲಾ ಇನ್ಸ್‍ಪೆಕ್ಟರ್ ಬಂದು ನಮ್ಮನ್ನೇ ನೋಡಿ ನಗುತ್ತಿದ್ದಾರೆ. ಆಮೇಲೇನಾಯ್ತೋ ನೆನಪಿಲ್ಲ. ಮೇಷ್ಟ್ರಿಗೆ ವರ್ಗವಾಗಿ ಹೋಗಿದ್ದೊಂದೇ ನೆನಪಿದೆ…

ಹೀಗೆ ಏನೋ ಹೇಳ ಹೋಗಿ ಆವತ್ತಿನ ಕ್ಲಾಸಿನಲ್ಲೇ ಆ ಮಕ್ಕಳು ನನ್ನ ಆತ್ಮೀಯ ವಿದ್ಯಾರ್ಥಿಗಳಾಗಿ ಬಿಟ್ಟರು. ಎಂದೂ ತುಂಟತನ ಮಾಡಲಿಲ್ಲ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: