ಪ್ರತಿಭಾ ನಂದಕುಮಾರ್ ಅಂಕಣ- ಎರಡು ಕುತೂಹಲಕಾರೀ ಪ್ರಸಂಗಗಳು

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಬ್ರಿಟಿಷರಿಗೆ ಹೈದರನ ಬಗ್ಗೆ ಭಯ, ಮೆಚ್ಚುಗೆ, ಆತಂಕ ಎಲ್ಲವೂ ಇದ್ದವು. ಅವಕಾಶವಾದಾಗಲೆಲ್ಲ ಅವರು ಹೈದರನನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುತ್ತಲೇ ಇದ್ದರು. ಆದರೆ ಹೈದರನಿಗೆ ಬ್ರಿಟಿಷರ ಬುದ್ಧಿ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ಸದಾ ತನ್ನ ಸೈನ್ಯಕ್ಕೆ ಬ್ರಿಟಿಷರ ವಿರುದ್ಧ ಯುದ್ಧಸನ್ನದ್ಧರಾಗಿರಲು ಎಚ್ಚರಿಕೆ ಕೊಟ್ಟಿದ್ದ. ತನ್ನ ಸೈನ್ಯದಲ್ಲಿ ಹೆಚ್ಚು ಸಂಖ್ಯೆಯ ವಿದೇಶಿಯರನ್ನು ನೇಮಿಸಿಕೊಂಡು ಅವರಿಗೆ ಉನ್ನತ ಸ್ಥಾನಗಳನ್ನು ಕೊಟ್ಟಿದ್ದರೂ ಸಹ ಸದಾ ಅವರ ಬಗ್ಗೆ ಒಂದು ಎಚ್ಚರಿಕೆಯ ಕಣ್ಣಿಟ್ಟೇ ಇದ್ದ. ಅದಕ್ಕೆ ತಕ್ಕಂತೆ ಅನೇಕ ಸಂದರ್ಭಗಳಲ್ಲಿ ಬ್ರಿಟಿಷ್ ಮಿಲಿಟರಿ ವ್ಯಕ್ತಿಗಳು ಅವನಿಗೆ ಮೋಸ ಮಾಡಲು ಹೋಗಿ ಸಿಕ್ಕಿ ಬೀಳುತ್ತಿದ್ದರು.

ಹೈದರನ ಸೈನ್ಯದಲ್ಲಿ ಟರ್ನರ್ ಎನ್ನುವ ಐರಿಷ್ ಅಧಿಕಾರಿ ಇದ್ದ. ಅವನನ್ನು ನೇಮಿಸಿಕೊಳ್ಳಲು ಕಾರಣ ಗವರ್ನರ್ ಬಾಷಿಯರ್ ಅವನ ಬಗ್ಗೆ ಒಳ್ಳೆಯ ಶಿಫಾರಸ್ಸಿನ ಪತ್ರ ಕೊಟ್ಟಿದ್ದ. ಟರ್ನರ್ ಒಬ್ಬ ಉತ್ತಮ ಸೈನಿಕನಿಗೆ ಅಗತ್ಯವಾದ ಎಲ್ಲ ಲಕ್ಷಣಗಳನ್ನು ಹೊಂದಿದ್ದ. ಬೇಗನೇ ಬಹಳ ಚೆನ್ನಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದ. ಯುದ್ಧ ತಂತ್ರಗಳಲ್ಲಿ ಅತಿನಿಪುಣ. ಒಳ್ಳೆಯ ಸೈನಿಕರು ವೀರರನ್ನು ಕಂಡರೆ ಹೈದರನಿಗೆ ಬಹಳ ಪ್ರೀತಿ ಆದರ. ಹಾಗಾಗಿ ಟರ್ನರ್ ಬಗ್ಗೆಯೂ ಹೈದರ್ ವಿಶ್ವಾಸ ಇಟ್ಟುಕೊಂಡ. ಹೈದರ್ ಒಪ್ಪಿಸಿದ ಕೆಲವು ಕೆಲಸಗಳನ್ನು ಟರ್ನರ್ ತುಂಬಾ ಚೆನ್ನಾಗಿ ನಿರ್ವಹಿಸಿದ.  ಹಾಗಾಗಿ  ಹೈದರ್ ಅವನಿಗೆ ತೋಪಾಸಿಗಳ ಒಂದು ಪಡೆಗೆ ಮುಖ್ಯಸ್ಥನನ್ನಾಗಿ ಮಾಡಿದ. ಅಂದರೆ ಐದು ಸಾವಿರ ಸೈನಿಕರ ಪಡೆಗೆ ಜನರಲ್ ಥರ.

ಅಂದಿನ ಪರಿಸ್ಥಿತಿಯಲ್ಲಿ ಬ್ರಿಟಿಷ್ ಗವರ್ನರ್ ಶಿಫಾರಸು ಮಾಡಿದ ವ್ಯಕ್ತಿಯ ಮೇಲೆ ನಂಬಿಕೆ ಇಡುವುದು ಸ್ವಲ್ಪ ಅಪಾಯವೇ ಆಗಿತ್ತು. ಆದರೆ ಈ ಮನುಷ್ಯನ ನಡವಳಿಕೆ ನಂಬಿಕೆಗೆ ಅರ್ಹವಾಗಿತ್ತು. ಅದರಲ್ಲೂ ಹೈದರಾಲಿಯ ಮಲಬಾರ್ ಯುದ್ಧದ ಸಮಯದಲ್ಲಿ ಟರ್ನರ್ ಬಹಳ ಚೆನ್ನಾಗಿ ಎಲ್ಲಾ ಸೇನಾಧಿಕಾರಿಗಳ ನಂಬಿಕೆ ಗಳಿಸಿಕೊಂಡಿದ್ದ. ಎಲ್ಲರೂ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುವಾಗ ಅವನು ತನ್ನ ನಿಜ ಬುದ್ಧಿ ತೋರಿಸಿದ. 

ಪ್ರತಿ ತಿಂಗಳು ಐದನೇ ತಾರೀಕು ಸೈನ್ಯಕ್ಕೆ ಸಂಬಳದ ದಿನ. ಪಡೆಯ ಸೈನಿಕರ ಸಂಬಳವನ್ನು ಆಯಾ ಮುಖ್ಯಸ್ಥರಿಗೆ ನೀಡಲಾಗುತ್ತಿತ್ತು. ಅವರು ಸೈನಿಕರಿಗೆ ಅದನ್ನು ವಿತರಿಸಬೇಕಿತ್ತು. ಆ ತಿಂಗಳು ಅವನಿಗೆ ಅವನ ಮತ್ತು ಐದು ಸಾವಿರ ಸೈನಿಕರ ಸಂಬಳ ಸಿಕ್ಕಿದ ತಕ್ಷಣ ಅವನು ದುಡ್ಡನ್ನೆಲ್ಲ ಎತ್ತಿಕೊಂಡು ತನ್ನ ಕ್ವಾಟರ್ಸ್ ಗೆ ಬಂದ. 

ಅವನಿಗೆ ಕೊಟ್ಟಿದ್ದ ಕ್ವಾಟರ್ಸ್ ಕೋಯಿಂಬತ್ತೂರಿಗೆ ಗಾವುದ ದೂರದಲ್ಲಿತ್ತು. ಅವನ ಪಡೆಯ ಸೈನಿಕರು ಮತ್ತು ಕೈಕೆಳಗಿನ ಅಧಿಕಾರಿಗಳು ಸಂಬಳಕ್ಕಾಗಿ ಕಾದರು. ಅವನು ತನ್ನ ಕಾರ್ಯದರ್ಶಿ ರಜೆಯಲ್ಲಿರುವುದರಿಂದ ಮಾರನೆಯ ದಿನ ಪಾವತಿ ಮಾಡುವುದಾಗಿ ಹೇಳಿದ. ಅವರು ಒಂದು ದಿನ ತಡ ತಾನೇ ಎಂದು ಸರಿ ಎಂದರು.  ಅವತ್ತು ರಾತ್ರಿ ಅವನು ತನ್ನ ಸೇವಕರಿಗೆ ಕೋಯಿಂಬತ್ತೂರಿನ ಕಮಾಂಡೆಂಟ್ ಜನರಲ್ ಮನೆಗೆ ರಾತ್ರಿ ಊಟಕ್ಕೆ ಹೋಗುತ್ತಿರುವುದಾಗಿ ಹೇಳಿದ. ಅವನಿಗೊಬ್ಬ ಸ್ವೀಡಿಷ್ ಸಹಾಯಕನಿದ್ದ. ಅವನಿಗೆ ತನ್ನ ಯೋಜನೆಯನ್ನು ಮೊದಲೇ ಹೇಳಿ ಸ್ವಲ್ಪ ಹಣದ ಆಮಿಷ ಒಡ್ಡಿ ಬುಟ್ಟಿಗೆ ಹಾಕಿಕೊಂಡಿದ್ದ. ರಾತ್ರಿ ತನ್ನ ಎಲ್ಲಾ ಅಮೂಲ್ಯ ವಸ್ತುಗಳು ಮತ್ತು ಸಂಬಳದ ಹಣ ಎಲ್ಲವನ್ನು ತೆಗೆದುಕೊಂಡು ಸ್ವೀಡಿಷ್ ಸಹಾಯಕನ ಜೊತೆ ಕುದುರೆ ಏರಿ ಹೊರಟು ಹೋದ. 

ಅದು ಬೇಸಿಗೆಯ ಕಾಲವಾಗಿತ್ತು, ವಿಪರೀತ ಸೆಕೆ ಇತ್ತು. ಅಂದೆಲ್ಲಾ ಬೇಸಿಗೆಯ ರಾತ್ರಿಗಳಲ್ಲಿ ಜನರು ಹೊರಗೆ ಅಂಗಳಗಳಲ್ಲಿ ಗಾಳಿಗೆ ಕೂರುತ್ತಿದ್ದರು. ಬಹಳ ಹೊತ್ತಿನ ತನಕ ಹರಟೆ ಹೊಡೆದು ಅಲ್ಲೇ ಮಲಗುತ್ತಿದ್ದರು. ಕೆಲವು ಅಧಿಕಾರಿಗಳು ಟರ್ನರ್ ನ ಕ್ವಾಟರ್ಸ್ ಗೆ ಹರಟೆ ಹೊಡೆಯಲು ಬಂದರು. ಸೇವಕ ಅವನು ಕೋಯಿಂಬತ್ತೂರಿಗೆ ಡಿನ್ನರ್ ಗೆ ಹೋಗಿದ್ದಾರೆ ಎಂದು ಹೇಳಿದ. ಟರ್ನರ್ ಒಳ್ಳೆಯ ಶಿಕಾರಿ ಆಗಿದ್ದರಿಂದ ಅವನು ಬೇಟೆಯ ಪಾರ್ಟಿಗೆ ಹೋಗಿದ್ದಾನೆ ಎಂದು ಅವರು ಅಂದುಕೊಂಡರು. 

ತಮಗೆ ಹೇಳದೆ ಹೋಗಿದ್ದಾನಲ್ಲಾ, ನಾವೂ ಹೋಗಿ ಬೇಟೆಗೆ ಸೇರಿಕೊಳ್ಳೋಣಾ, ಅವನಿಗೆ ಆಶ್ಚರ್ಯಪಡಿಸೋಣಾ ಎಂದು ಅವರು ಮಾತಾಡಿಕೊಂಡು ತಮ್ಮ ತಮ್ಮ ಕುದುರೆಗಳನ್ನೇರಿ ಕಮಾಂಡೆಂಟ್ ಜನರಲ್ ಮನೆ ಕಡೆಗೆ ಹೊರಟರು. ಅಲ್ಲಿಗೆ ಅವರು ತಲುಪುವಷ್ಟರಲ್ಲಿ ಮಧ್ಯರಾತ್ರಿ ಆಗಿತ್ತು. ಅಲ್ಲಿ ಹೋಗಿ ನೋಡಿದರೆ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು, ಬೇಟೆ ಇಲ್ಲ ಏನಿಲ್ಲ. ಟರ್ನರ್ ಬಗ್ಗೆ ಕೇಳಿದರೆ ಅವನು ಅಲ್ಲಿಗೆ ಬಂದಿಲ್ಲ ಎಂದು ಗೊತ್ತಾಯಿತು. ಇದೇನಿದು ಎಂದುಕೊಂಡು ಕೊನೆಗೆ ಅವರು ಕಮಾಂಡೆಂಟ್ ಜನರಲ್ ಅವರನ್ನು ಎಬ್ಬಿಸಿ ಸುದ್ದಿ ತಿಳಿಸಿದರು. ತಮ್ಮ ಅಧಿಕಾರಿಯೊಬ್ಬ ಕಾಣೆಯಾಗಿದ್ದಾನೆ ಎಂದು  ಕಮಾಂಡೆಂಟ್ ಎಂಟ್ರಿ ಗೇಟಿನ ಗಾರ್ಡ್ ಗಳನ್ನು ವಿಚಾರಿಸಿದ. ರಹದಾರಿ ಪಾಸ್ ಇಲ್ಲದೆ ಯಾರೂ ಒಳ ಹೊರಗೆ ಹೋಗುವಂತಿರಲಿಲ್ಲ ಎಂದು ಮೊದಲೇ ಹೇಳಿದ್ದೆನಲ್ಲಾ. 

ಯಾರಾದರೂ ರಾತ್ರಿ ಕ್ಯಾಂಪ್ ನಿಂದ ಹೊರಗೆ ಹೋದರೇ ಎಂದು ವಿಚಾರಿಸಿದರು. ಮೂರೂ ಗಂಟೆಯ ಮೊದಲು ಇಬ್ಬರು ಯುರೋಪಿಯನ್ ಅಧಿಕಾರಿಗಳು ಹೊರಗೆ ಹೋದರು ಎಂದು ಗಾರ್ಡ್ ತಿಳಿಸಿದ. ತಕ್ಷಣ ಟರ್ನರ್ ನ ಪಡೆಯ ಮಿನರ್ವ ಎನ್ನುವ ಐರಿಷ್ ಫಸ್ಟ್ ಕ್ಯಾಪ್ಟನ್ ತಾನು ಐವತ್ತು ಯುರೋಪಿಯನ್ ಸೈನಿಕರ ಜೊತೆ ಹೋಗಿ ನೋಡಿಕೊಂಡು ಬರುತ್ತೇನೆ ಎಂದು ಹೇಳಿದ. ಕಮಾಂಡೆಂಟ್ ಒಪ್ಪಿದ. ಬೆಳಗಿನ ಜಾವ ಎರಡು ಗಂಟೆಯಲ್ಲಿ ಆ ಗುಂಪು ತೆರಳಿತು. ಬೆಳಗಿನ ಎಂಟು ಗಂಟೆಯ ಹೊತ್ತಿಗೆ ಆ ಗುಂಪು ಆರು ಗಾವುದ ಹುಡುಕುತ್ತಾ ಕೊಚಿನ್ ರಾಜ್ಯದ ಗಡಿಗೆ ಬಂದು ತಲುಪಿದರು. ವಿಚಾರಿಸುತ್ತಾ ಸಾಗಿ ಮೊದಲು ಎರಡು ಕುದುರೆಗಳನ್ನು ಕಂಡುಹಿಡಿದು ನಂತರ ಅವರು ತಂಗಿದ್ದ ಮನೆ ತಲುಪಿದರು. ಅಲ್ಲಿ ಹೋಗಿ ನೋಡಿದರೆ ಇಬ್ಬರೂ ಗಾಢ ನಿದ್ದೆಯಲ್ಲಿದ್ದರು. ಸೈನಿಕರ ಗುಂಪು ಇಬ್ಬರನ್ನೂ ಎತ್ತಿಹಾಕಿಕೊಂಡು ಬಂದರು. 

ಅಷ್ಟರಲ್ಲಿ ಹೈದರನಿಗೆ ವಿಷಯ ತಲುಪಿತ್ತು. ಅವನು ಆ ಇಬ್ಬರನ್ನೂ ಯೂರೋಪಿನ ಕೋರ್ಟ್ ಮಾದರಿಯಲ್ಲೇ ವಿಚಾರಣೆಗೆ ಗುರಿಪಡಿಸುವಂತೆ ಕಮಾಂಡೆಂಟ್ ಗೆ ಅಪ್ಪಣೆ ಮಾಡಿದ. ಅದಕ್ಕೆ ಅನುಸಾರವಾಗಿ ಕೋರ್ಟ್ ಮಾರ್ಷಲ್ ನಡೆದು ಇಬ್ಬರನ್ನೂ ವಿಚಾರಣೆಗೆ ಗುರಿಪಡಿಸಲಾಯಿತು. ಸೈನಿಕರ ಸಂಬಳವನ್ನು ಕದ್ದುಕೊಂಡು ಹೋದ ಅಪರಾಧ ಸಾಬೀತಾಗಿ ಅವರಿಬ್ಬರಿಗೂ ಮರಣದಂಡನೆ ವಿಧಿಸಲಾಯಿತು. ಹೆದ್ದಾರಿಯಲ್ಲಿ ಮರಕ್ಕೆ ಅವರನ್ನು ಗಲ್ಲಿಗೇರಿಸಿ ಹೋಗಬರುವವರು ನೋಡಲೆಂದು ಹೆಣವನ್ನು ಅಲ್ಲೇ ನೇತಾಡುವಂತೆ ಬಿಡಲು ಆದೇಶ ಹೊರಟಿತು.

ಆದರೆ ವಿಚಾರಣೆ ನಡೆಸಿದ ಕೌನ್ಸಿಲ್ ಗಳು ಸ್ವೀಡಿಷ್ ಸಹಾಯಕ ತನ್ನ ಅಧಿಕಾರಿಯ ಅಪ್ಪಣೆಯನ್ನು ಪಾಲಿಸಿದ್ದಾನೆ, ರಜೆ ಪಡೆದುಕೊಳ್ಳದೇ ಹೋದ ತಪ್ಪು ಬಿಟ್ಟರೆ ಘೋರ ಅಪರಾಧವನ್ನೇನು ಮಾಡಿಲ್ಲ ಎಂದು ಅವನ ಬಗ್ಗೆ ಸ್ವಲ್ಪ ಕರುಣೆ ತೋರಿಸಿತು. ಅವರು ಹೋಗಿ ಹೈದರನಿಗೆ ತಮ್ಮ ಅಭಿಪ್ರಾಯ ತಿಳಿಸಿ ಅಂತಿಮ ತೀರ್ಪು ಅವನಿಗೇ ಬಿಟ್ಟರು. ಎಲ್ಲವನ್ನೂ ಕೇಳಿಕೊಂಡ ಹೈದರ್ ಅವನ ಶಿಕ್ಷೆಯನ್ನು ಮರಣದಂಡನೆಗೆ ಬದಲಾಗಿ ಜೈಲು ಶಿಕ್ಷೆಗೆ ಬದಲಿಸಿದ. ಆದರೆ ಟರ್ನರ್ ಕುರಿತಂತೆ ಶಿಕ್ಷೆ ಬದಲಿಸಲಿಲ್ಲ. ಅವನನ್ನು ಗಲ್ಲಿಗೇರಿಸುವ ಸ್ಥಳಕ್ಕೆ ಕರೆದುಕೊಂಡು ಹೋದಾಗ ಬ್ರಿಟಿಷರು ನಿಜಾಮ್ ಅಲಿ ಖಾನ್ ಜೊತೆಗೂಡಿ ಹೈದರನ ಮೇಲೆ ಅಟ್ಯಾಕ್ ಮಾಡಲು ಪ್ಲಾನ್ ಮಾಡಿದ್ದಾಗಿ ತಿಳಿದುಬಂತು. ಟರ್ನರ್ ತನ್ನ ಅಪರಾಧವನ್ನು ಒಪ್ಪಿಕೊಂಡ. ತಾನು ಮದ್ರಾಸು ಸರ್ಕಾರದಲ್ಲಿ ಕೆಲಸಕ್ಕಿರುವ ಸಿಪಾಯಿ ಎಂದೂ, ಇಷ್ಟು ಕಾಲ ಹೈದರಾಲಿಯ ನಂಬಿಕೆಗೆ ದ್ರೋಹ ಮಾಡಿದ್ದು ತಪ್ಪೆಂದೂ, ತಾನು ಹಣ ಎತ್ತಿಕೊಂಡು ಓಡಿಹೋಗಿದ್ದು ಅಪರಾಧವೆಂದೂ ಒಪ್ಪಿಕೊಂಡು ಕ್ಷಮಾಪಣೆ ಕೇಳಿದ.

ಜೊತೆಗೆ ತನ್ನನ್ನು ಬಾಂಬೆ ರೆಜಿಮೆಂಟಿನಲ್ಲಿ ಮೇಜರ್ ಆಗಿ ಅದೇ ತಾನೇ ಬಡ್ತಿ ಸಿಕ್ಕಿದೆ ಎಂದೂ ಹೇಳಿ, ಮೇಜರ್ ಆದ ತನ್ನನ್ನು ನೇಣು ಹಾಕಿ ಅವಮಾನ ಮಾಡಬಾರದೆಂದು ಕೇಳಿಕೊಂಡ! ಮರಣದಂಡನೆಯನ್ನು ಜಾರಿಗೊಳಿಸಲು ಗುಂಡಿಕ್ಕಿ ತನ್ನನ್ನು ಕೊಳ್ಳಬೇಕೆಂದು ಕೋರಿಕೊಂಡ. ಹೈದರಾಲಿ ಅವನ ಕೋರಿಕೆಯನ್ನು ಒಪ್ಪಿಕೊಂಡ! ಗಲ್ಲಿಗೇರುವ ಮೊದಲು ಅವನು ಎಲ್ಲಾ ಸೈನಿಕರಿಗೂ ಸಂಬಳವನ್ನು ಹಂಚಿದ. ತನ್ನ ಖಡ್ಗ ಮತ್ತು ವಾಚನ್ನು ಸ್ವೀಡಿಷ್ ಸಹಾಯಕ ಮಿನರ್ವ ಗೆ ಕೊಟ್ಟ. ಅವನನ್ನು ಹೆದ್ದಾರಿಯಲ್ಲಿ ಮರಕ್ಕೆ ನೇಣು ಹಾಕಲಾಯಿತು. ನಂತರ ಸಾರ್ವಜನಿಕರು ನೋಡಲೆಂದು ಸ್ವಲ್ಪ ದಿನಗಳ ಕಾಲ ಹಾಗೇ  ನೇತಾಡಲು ಬಿಡಲಾಯಿತು.

ಈ ಪ್ರಸಂಗ ಯಾಕೆ ಮಹತ್ವದ್ದು ಅಂದರೆ ತಕ್ಷಣ ಹೈದರ್ ಬ್ರಿಟಿಷರ ಉದ್ದೇಶವನ್ನು ತಿಳಿದು ಟ್ರಾವಂಕೂರಿಗೆ ಯುದ್ಧಕ್ಕೆ ಹೊರಟಿದ್ದ ತನ್ನ ಸೈನ್ಯವನ್ನು ತಡೆದು ನಿಲ್ಲಿಸಿದ. ಕ್ಷಣವೂ ತಡಮಾಡದೇ ಮಫುಸ್ ಖಾನನನ್ನು ಹೈದರಾಬಾದಿಗೆ ರಾಯಭಾರಿಯಾಗಿ ಕಳಿಸಿ ಅಲ್ಲಿರುವ ಬಸೌಲತ್ ಜಂಗ್ ಮತ್ತಿತರ ಮಿತ್ರರು ಮತ್ತು ಹಿತೈಷಿಗಳನ್ನು ಒಲಿಸಿಕೊಂಡು ಅಲ್ಲಿಂದ ಧಾಳಿಯನ್ನು ನಿಲ್ಲಿಸಲು ಏರ್ಪಾಟು ಮಾಡಿದ. ಜೊತೆಗೇ ತನ್ನ ಸುತ್ತಲ ರಕ್ಷಣೆಯನ್ನು ಬಲಪಡಿಸಿದ. ಸೈನಿಕರಿಗೆ ಇನ್ನಷ್ಟು ತೀವ್ರ ತರಬೇತಿ ಕೊಟ್ಟು ಇಡೀ ಭಾರತದ ರಾಜರುಗಳಲ್ಲೇ ಬೇರೆ ಯಾರೂ ಇಟ್ಟಿರದಿದ್ದಂತಹ ಸೈನ್ಯವನ್ನು ಸಿದ್ಧಮಾಡಿದ.  

ಹೈದರಾಲಿ ಕೋಯಿಂಬತ್ತೂರಿನಲ್ಲಿದ್ದಾಗ ಹಲವಾರು ವಿಚಿತ್ರ ಸಂಗತಿಗಳು ನಡೆದವು. ಅದರಲ್ಲಿ ಒಂದು ಗೋವಾದಿಂದ ಬಂದು ಮೈಸೂರಿ ಸಂಸ್ಥಾನದಲ್ಲಿ ತಂಗಿದ್ದ ಪೋರ್ಚುಗಲ್ಲಿನ ಕ್ರಿಶ್ಚಿಯನ್ ಪಾದ್ರಿಯ ವಿಚಾರಣೆ ನಡೆದಿದ್ದು. ಈತ ಮೇಡಂ ಮೆಕ್ವಿನೆಜ್ ಎನ್ನುವ ಒಬ್ಬಳು ಪೋರ್ಚುಗೀಸ್ ಮಹಿಳೆಗೆ ಒಂದು ಪತ್ರ ಬರೆದ. ಆಕೆ, ಹೈದರಾಲಿಯ ಸೈನ್ಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿ ಮರಾಠರ ವಿರುದ್ಧದ ಯುದ್ಧದಲ್ಲಿ ವೀರ ಮರಣ ಹೊಂದಿದ್ದ ಪೋರ್ಚುಗೀಸ್ ಅಧಿಕಾರಿಯ ಹೆಂಡತಿ.

ವೀರರನ್ನು ಕಂಡರೆ ಸದಾ ಇಷ್ಟಪಡುವ ಹೈದರ್ ಆತನ ಹೆಂಡತಿಗೆ ನೆರವಾಗಬೇಕೆಂದು ಅವಳ ಗಂಡನ ತೋಪಾಸಿಗಳ ರೆಜಿಮೆಂಟಿನ ಒಡೆತನವನ್ನು ಕೊಟ್ಟಿದ್ದ. ಅವಳ ಚಿಕ್ಕವಯಸ್ಸಿನ ಮಗ ಪ್ರೌಢನಾಗುವವರೆಗೆ ನೋಡಿಕೊಳ್ಳಲು ಒಬ್ಬ ಕರ್ನಲನನ್ನು ನೇಮಿಸಿ,ಮಗ ವಯಸ್ಸಿಗೆ ಬಂದ ಮೇಲೆ ಆ ಪಡೆಯ ಮುಖ್ಯಸ್ಥನ ಹುದ್ದೆ ಅವನಿಗೆ ಮೀಸಲೆಂದು ಆದೇಶ ಮಾಡಿದ್ದ. ಈ ಹೆಂಗಸು ತನ್ನ ರೆಜಿಮೆಂಟಿನ ಜೊತೆಜೊತೆಗೇ ಪ್ರಯಾಣ ಮಾಡುತ್ತಿದ್ದಳು. ಅವಳಿಗೆ ಸಂಬಳ ಕೂಡಾ ಕೊಡಲಾಗುತ್ತಿತ್ತು. ಮತ್ತು ರೆಜಿಮೆಂಟಿನ ಬಾವುಟವನ್ನು ಮನೆಯ ಮುಂದೆ ಹಾರಿಸಲು ಅನುಮತಿ ಕೊಡಲಾಗಿತ್ತು. 

ವಿಷಯ ಏನೆಂದರೆ ಅವಳು ತನ್ನ ಒಡವೆ ಹಣ ಇತ್ಯಾದಿಗಳನ್ನು ಒಬ್ಬ ಪಾದ್ರಿಯ ಬಳಿ ಠೇವಣಿ ಇಟ್ಟಿದ್ದಳು. ಅಂದಿನ ಕಾಲದಲ್ಲಿ ಪಾದ್ರಿಗಳ ಬಳಿ ಠೇವಣಿ ಇಡುವುದು ಸಾಮಾನ್ಯವಾಗಿತ್ತು. ಆ ಪಾದ್ರಿ ಅದನ್ನೆಲ್ಲ ಇನ್ನೊಬ್ಬ ಪಾದ್ರಿಗೆ ವಹಿಸಿಕೊಡಲಾಗಿದೆ ಎಂದು ಪತ್ರ ಬರೆದಿದ್ದ. ಈಕೆ ಅವನ ಬಳಿ ಕೇಳಿದಾಗ ಅಂತಹ ಯಾವ ಹಣ ಮತ್ತು ಒಡವೆಯೂ ತನ್ನ ಬಳಿಗೆ ಯಾರೂ ಕೊಟ್ಟಿಲ್ಲ ಎಂದ. ಆಕೆ ಹೈದರನ ಅಧಿಕಾರಿಯ ಬಳಿಗೆ ಬಂದು ದೂರು ಕೊಟ್ಟಳು. 

ತಕ್ಷಣ ಹೈದರ್ ಸಿಪಾಯಿಗಳನ್ನು ಕಳಿಸಿ ಪಾದ್ರಿಗಳನ್ನು ಹಿಡಿಸಿ ತರಿಸಿದ. ಆದರೆ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂದು ಕಟ್ಟಪ್ಪಣೆ ಮಾಡಿದ. ನಂತರ ಒಬ್ಬ ಫ್ರೆಂಚ್ ಅಧಿಕಾರಿಗೆ ಈ ಕೇಸಿನ ವಿಚಾರಣೆ ನಡೆಸಲು ಆದೇಶಿಸಿದ. 

ವಿಚಾರಣೆಯಲ್ಲಿ ಮೇಡಂ ಮೆಕ್ವಿನೆಜ್ ಜೋರಾಗಿ ಕಿರುಚಾಡಿ ಅತ್ತು ಕರೆದು ರಂಪ ಮಾಡಿದಳು. ಯಾರಿಗೇ ಆದರೂ ಪಾಪ ಅವಳಿಗೆ ಅನ್ಯಾಯ ಆಗಿದೆ ಎನ್ನುವಂತಿತ್ತು. ಆ ವಯಸ್ಸಾದ ಪಾದ್ರಿ ಮೆತ್ತಗಿದ್ದ. ಕೊನೆಗೆ ಅವನು ಆ ಫ್ರೆಂಚ್ ಅಧಿಕಾರಿಗೆ ತನ್ನನ್ನು ಏಕಾಂತದಲ್ಲಿ ಪ್ರಶ್ನಿಸಿದರೆ ಉತ್ತರ ಹೇಳುವುದಾಗಿ ಹೇಳಿದ. ಸರಿ ಅಧಿಕಾರಿ ಎಲ್ಲರನ್ನೂ ಹೊರಗೆ ಕಳಿಸಿ ಪಾದ್ರಿಯನ್ನು ವಿಚಾರಿಸಿದ. ಚಿಕ್ಕದಾಗಿ ಹೇಳಬೇಕೆಂದರೆ ಮೆಕ್ವಿನೆಜ್ ತನ್ನೆಲ್ಲ ಹಣವನ್ನು ಹಿಂದಕ್ಕೆ ತೆಗೆದುಕೊಂಡಿದ್ದಳು. ಆದರೆ ದುರಾಸೆಯಿಂದ ಸುಳ್ಳು ಹೇಳಿ ಇನ್ನಷ್ಟು ಕೀಳಬೇಕೆಂದು ಉಪಾಯ ಹೂಡಿದ್ದಳು. 

ಅಧಿಕಾರಿ ಸರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ. ಮಾರನೆಯ ದಿನ ಮೆಕ್ವಿನೆಜ್ ಕಚೇರಿಗೆ ಬಂದಾಗ  ಮತ್ತೆ ಗಲಾಟೆ ಮಾಡತೊಡಗಿದಾಗ ಅಧಿಕಾರಿ ಪಾದ್ರಿ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ, ನೀವು ಖಾಸಗಿಯಾಗಿ ಒಂದು ಹೇಳಿಕೆ ಕೊಟ್ಟರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದ. ಅವಳು ಓಹೋ ತಾನಂ ಉಪಾಯ ಫಲಿಸಿತು ಎಂದುಕೊಂಡು ಒಪ್ಪಿದಳು. 

ಅಧಿಕಾರಿ ಹೇಳಿದ ಕಾಗದ ಪತ್ರಗಳು ಹೈದರಾಲಿಯ ಬಳಿಗೆ ಹೋಗಿದೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ನೀನು ನಿಜ ಹೇಳಿದರೆ ಒಳ್ಳೆಯದು ಇಲ್ಲದಿದ್ದರೆ ತೊಂದರೆ ಆಗುತ್ತದೆ, ಹೈದರಾಲಿ ಇದರ ಬುಡಕ್ಕೆ ಹೋಗುವವರೆಗೆ ಬಿಡುವುದಿಲ್ಲ. 

ಹೆದರಿದ ಮೆಕ್ವಿನೆಜ್ ಅವನ ಕಾಲಿಗೆ ಬಿದ್ದು ಇದೆಲ್ಲ ಆ ಪಾದ್ರಿಯ ಉಪಾಯವೆಂದೂ ತಾನು ಮುಗ್ಧಳೆಂದೂ ಹೇಳಿ ಕ್ಷಮೆ ಕೇಳಿದಳು. ಅಧಿಕಾರಿ ಇದರ ಪೂರ್ತಿ ವಿವರಗಳನ್ನು ಹೈದರಾಲಿಗೆ ಹೇಳಿದರೆ ಮೆಕ್ವಿನೆಜ್ ಗೆ ತುಂಬಾ ತೊಂದರೆ ಆಗುತ್ತದೆ ಎಂದು ತಿಳಿದು ಬರಿ ಸಮಸ್ಯೆ ಪರಿಹಾರವಾಯಿತು ಎಂದು ಮಾತ್ರ ಹೇಳಿದ. 

ಹೈದರಾಲಿ ಹೌದಾ, ಒಳ್ಳೆಯದಾಯಿತು, ಪಾಪ ಮೆಕ್ವಿನೆಜ್ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾಳೆ ಅವಳಿಗೊಂದು ದಾರಿಮಾಡಬೇಕು ಎಂದುಕೊಂಡು ಜೈಲಿನಲ್ಲಿ ಟರ್ನರ್ ನ ಆ ಸ್ವೀಡಿಷ್ ಸಹಾಯಕ ಇದ್ದನಲ್ಲಾ ಅವನನ್ನು ಕರೆದು ಈ ಹೆಂಗಸನ್ನು ಮಾಡುವೆ ಮಾಡಿಕೊಂಡರೆ ನಿನ್ನ ಶಿಕ್ಷೆ ಮಾಫಿ ಮಾಡುತ್ತೇನೆ ಎಂದ. ಅವಳಿಗಿಂತ ಆರು ವರ್ಷ ಚಿಕ್ಕವನಾಗಿದ್ದ 28 ವರ್ಷದ ಆತ ಅವಳನ್ನು ಮದುವೆಯಾಗುವುದಕ್ಕಿಂತ ಜೈಲಿನಲ್ಲಿರುವುದೇ ಒಳ್ಳೆಯದು ಎಂದು ನಿರಾಕರಿಸಿದ. ಯಾಕೆ ಎಂದು ಹೈದರ್ ಕೇಳಿದಾಗ ಆಕೆ ಆ ತೋಪಾಸಿಗಳ ಪಡೆಯ ಎಲ್ಲ ಸೈನಿಕರ ಜೊತೆ ಮಲಗಿದ್ದಾಳೆ ಅಂತಹವಳನ್ನು ತಾನು ಮದುವೆಯಾಗಲಾರೆ ಎಂದು ಹೇಳಿಬಿಟ್ಟ. ಹೈದರ್ ನಕ್ಕು ಸುಮ್ಮನಾದ. 

ಆದರೆ ಸ್ವಲ್ಪ ಕಾಲದಲ್ಲೇ ಆಕೆ ಪೋರ್ಚುಗೀಸ್ ಕೆಲಸದವನೊಬ್ಬನನ್ನು ಪ್ರೇಮಿಸಿ ಮದುವೆಯಾದಳು. ಮರುತಿಂಗಳು ತನ್ನ ಸಂಬಳ ಪಡೆದುಕೊಳ್ಳಲು ಹೋದಾಗ ಭಕ್ಷಿ ಅರ್ಧ ಸಂಬಳ ಕೊಟ್ಟ. ಕೇಳಿದಾಗ ಹೈದರನ ಪ್ರೀತಿಯ ಸೈನಿಕನ ವಿಧವೆಯಾಗಿ ಆಕೆ ತನ್ನ ಅಂತಸ್ಥನ್ನು ಕೆಳಗಿಳಿಸಿಕೊಂಡು ಅವನ ಹೆಸರಿಗೆ ಮಸಿ ಬಳಿದಿದ್ದಳೆಂಬ ಕಾರಣಕ್ಕೆ ಹೈದರ್ ಅವಳ ಸಂಬಳವನ್ನು ಕಡಿತ ಮಾಡಿದ್ದ ಎಂದು ಆಕೆಗೆ ತಿಳಿಸಲಾಯಿತು.

‍ಲೇಖಕರು Admin

August 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಾಸುದೇವ ಶರ್ಮಾ

    ಆಸಕ್ತದಾಯಕವಾಗಿದೆ.
    ಆದರೆ ಆಕೆ ಮದುವೆಯಾದಳು ಎಂಬ ಕಾರಣಕ್ಕೆ ಅರ್ಧ ಸಂಬಳ ಮತ್ತು ಈ ದೊಡ್ಡವನ ಮರ್ಯಾದೆಗೆ ಕಮ್ಮಿಯಾಯಿತು ಎನ್ನುವ ಹೈದರನ ಧೋರಣೆ ಇಷ್ಟವಾಗಲಿಲ್ಲ. ಗಂಡು ದೊಡ್ಡಸ್ತಿಕೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: