ಧರ್ಮಯುದ್ದ: ನಂಬಿಕೆಯ ರಾಜಕಾರಣದ ಅನಾವರಣ…

ಹಳೆಮನೆ ರಾಜಶೇಖರ

ಕನ್ನಡ ಜಗತ್ತಿಗೆ ಸೀತಾಪುರ ಎಂಬ ಗ್ರಾಮವನ್ನು ತಮ್ಮ ಕಥನದ ಮೂಲಕ ಕಟ್ಟಿಕೊಟ್ಟವರು ನಾ.ಮೊಗಸಾಲೆಯವರು. ಸೀತಾಪುರ ಬದಲಾಗುತ್ತಲೇ ಇದೆ. ಅವರ ಕಥನವು ಹೊಸ ಸ್ವರೂಪವನ್ನು ಪಡೆಯುತ್ತಿದೆ. ಸೀತಾಪುರ ಎಂಬುದು ಭಾರತದ ಗ್ರಾಮಜಗತ್ತಿನ ರೂಪಕ. ಇಲ್ಲಿ ಸಂಭವಿಸುವ ಜೀವನ ಸ್ಥಿತ್ಯಂತರಗಳು ಇಡೀ ಭಾರತದ ಸ್ಥಿತ್ಯಂತರಗಳಾಗಿ ಕಾಣುತ್ತವೆ. ವಾಸ್ತವತೆಯನ್ನು ಕಟ್ಟಿಕೊಡುವುದು ಅವರ ಉದ್ದೇಶ. ಅವರು ಅಪ್ಪಟ ವಾಸ್ತವವಾದಿ ಕಥನಕಾರರು.

ಭಾರತೀಯ ಪರಂಪರೆಯ ನೇರನುಡಿಯ ಕಥನ ಮಾದರಿಯಲ್ಲಿ ಅವರಿಗೆ ನಂಬಿಕೆ. ಸರಳ ಮತ್ತು ಜೀವನ ಸೌಂದರ್ಯದ ನೆಲೆಯಲ್ಲಿ ಅವರು ಗ್ರಾಮ ಜಗತ್ತಿನ ಪಲ್ಲಟಗಳನ್ನು ಗ್ರಹಿಸುತ್ತಾರೆ. ಮಾನವೀಯ ಸೂಕ್ಷ್ಮ ಸಂವೇದನೆಯಿಂದ ಬದುಕನ್ನು ಕಾಣುವುದು ಅವರ ಕಥನದ ವಿಶೇಷ. ಮನುಷ್ಯನ ಕೇಡನ್ನು ಮುಖಾಮುಖಿ ಮಾಡುತ್ತಲೆ ನೈತಿಕ ಅಸಹಾಯಕತೆ ಅವರ ಕಥನದಲ್ಲಿ ಕಾಣಿಸಿಕೊಳ್ಳುತ್ತದೆ. ಆ ಅಸಹಾಯಕತೆ ಅತ್ಯಂತ ದುರ್ಬಲ ಸಂಗತಿಯಾಗಿ ಮೇಲ್ನೋಟಕ್ಕೆ ಕಂಡರೂ, ಅದುವೆ ಶಕ್ತಿಯುತವಾಗಿ ಓದುಗನಲ್ಲಿ ಕಾಣಿಸಿಕೊಳ್ಳುತ್ತದೆ.

ಅವರ ಧರ್ಮಯುದ್ಧ ಕಾದಂಬರಿ ಪ್ರಸ್ತುತ ಸಂದರ್ಭದ ವಿಷಯವನ್ನು ವಸ್ತುವಾಗಿಸಿಕೊಂಡು ಬದಲಾಗುತ್ತಿರುವ ಗ್ರಾಮವನ್ನು ಅನಾವರಣಗೊಳಿಸುತ್ತಾರೆ. ‘ಬ್ರಹ್ಮಕಲಸೋತ್ಸವ’ ಬಹುದೊಡ್ಡ ಧಾರ್ಮಿಕ ನಂಬಿಕೆಯಾಗಿ ಕರಾವಳಿ ಕರ್ನಾಕದಲ್ಲಿ ಬೆಳೆಯುತ್ತಿದೆ. ಇದು ದೇವರನ್ನು ಶುದ್ದಿಗೊಳಿಸುವ ಕಾರ್ಯ. ಜನರಲ್ಲಿ ದೈವಿಕ ನಂಬಿಕೆಯನ್ನು ಬಲಗೊಳಿಸುವ, ಊರೊಟ್ಟಿನ ಸಂಬಂಧವನ್ನು ಗಟ್ಟಿಗೊಳಿಸುವ, ಊರಿಗೊದಗುವ ಅಪಾಯಗಳಿಂದ ಪಾರಾಗುವ ನಂಬುಗೆಯಾಗಿ ನಿಂತಿದೆ.

ಪ್ರತಿಯೊಂದು ಸಮುದಾಯವು ತನ್ನ ದ್ವಂದ್ವಗಳನ್ನು ಮೀರಲು ದೈವದ ಮೊರೆ ಹೋಗುವುದು ಸಾಮಾನ್ಯ. ಅದು ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿದೆ. ಆದರೆ ಈ ನಂಬಿಕೆಯನ್ನು ರಾಜಕಾರಣ ತನ್ನ ಸ್ವಾರ್ಥಕ್ಕೆ, ಅಧಿಕಾರಕ್ಕೆ ಬಳಸಿಕೊಂಡಾಗ ಆ ನಂಬಿಕೆಯು ಆತ್ಮಶುದ್ದಿಯನ್ನು ಕಳೆದುಕೊಳ್ಳುತ್ತದೆ. ಮನುಷ್ಯನ ಪರಿಶದ್ದ ನಂಬಿಕೆಯು ಕೂಡ ರಾಜಕಾರಣದ ದಾಳವಾಗಿಬಿಡುತ್ತದೆಂಬ ಆತಂಕವನ್ನು ಕಾದಂಬರಿ ಧ್ವನಿಸುತ್ತದೆ.

ದೈವಿಕ ನಂಬಿಕೆಯನ್ನು ಎಲ್ಲಿಯೂ ಕಾದಂಬರಿ ಪ್ರಶ್ನಿಸುವದಿಲ್ಲ. ತರ್ಕಕ್ಕೆ ಒಡ್ಡುವದಿಲ್ಲ. ಅದು ಅಧಕಾರಸ್ಥರ ಕಳ್ಳ ವ್ಯಾಪಾರಿಗಳ ಸ್ವತ್ತಾಗಬಾರದೆಂಬುದು ಕಾದಂಬರಿಯ ಕಾಳಜಿ. ಆದ್ದರಿಂದ ಸೀತಾಪುರದಲ್ಲಿ ನಡೆಯುವ ಬ್ರಹ್ಮಕಲಸೋತ್ಸವ ಧಾರ್ಮಿಕ ನಂಬಿಕೆಯಾಗದೆ ಉಳ್ಳವರ ಅಸ್ತಿತ್ವದ ಪ್ರಶ್ನೆಯಾಗುವುದು. ಅದನ್ನು ಒಡೆದು ಮುಗ್ದ ಜನರ ನಂಬಿಕೆಯನ್ನು ಜೀವಂತಗೊಳಿಸುವುದು ಕಾದಂಬರಿಯ ತಿರುಳು. ಕಾದಂಬರಿಯ ಪ್ರಧಾನ ಪಾತ್ರವಾಗಿರುವ ವೆಂಕಪ್ಪ ಮೇಷ್ಟ್ರು ಕಾಯಕಯೋಗಿಗಳು, ವೃತ್ತಿನಿಷ್ಠೆಯುಳ್ಳವರು. ಸೀತಾಪುರದ ಎಲ್ಲಾರ ಗೌರವ ಆದರಗಳಿಗೆ ಪಾತ್ರರಾದವರು.

ಸೀತಾಪುರದಲ್ಲಿ ನಡೆಯುವ ಎಲ್ಲಾ ದೈನಂದಿನ ವ್ಯಾಪಾರಗಳಿಗೆ ಸಾಕ್ಷಿಯಾದವರು. ಒಳ್ಳೆಯದೆ ಇರಲಿ ಕೆಟ್ಟದೆ ಇರಲಿ ಸರಿದೂಗಿಸಿಕೊಂಡು ಹೋಗುವ ವ್ಯಕ್ತಿತ್ವ ಅವರದು. ಬ್ರಹ್ಮಕಲಸೋತ್ಸವ ನಡೆಸುವ ಸಂದರ್ಭದಲ್ಲಿ ಅವರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಮಾಡುವುದು ಗ್ರಾಮ ಜಗತ್ತು ನೈತಿಕತೆಯನ್ನು ಕಳೆದುಕೊಳ್ಳುತ್ತಿರುವದರ ಪ್ರತೀಕಾಗಿದೆ. ಗ್ರಾಮದ ಅರಿವು ರೂಪಗೊಳ್ಳುವುದು ಶಿಕ್ಷಕರ ಮೂಲಕ. ಆದರೆ ಅಂತಹ ಶಿಕ್ಷಕರನ್ನೇ ಅಧಿಕಾರ, ಹಣ ಹೇಗೆ ಅಪಮೌಲ್ಯಗೊಳಿಸುತ್ತಿದೆ ಎಂಬುದರ ಚಿಂತನೆಯನ್ನು ಕಾದಂಬರಿ ಮಾಡುತ್ತದೆ.

ಜಯರಾಮ ಹೆಗ್ಡೆ ಸೀತಾಪುರದ ಅಭಿವೃದ್ದಿಗೆ ಪರಿಶ್ರಮಿಸಿದ ಸರಳ ಸಜ್ಜಿನಿಕೆಯ ರಾಜಕಾರಣಿ. ವಾಸ್ತವತೆಯಿಂದ ಸಮಾಜವನ್ನು ನೋಡುವವರು. ಒಳತಿನಲ್ಲಿ ನಂಬಿಕೆ ಇಟ್ಟವರು. ದೇವರನ್ನು ಜನರ ಒಳತಿಗಾಗಿ ನಂಬುವವರು. ಎಲ್ಲವನ್ನು ದೇವರೇ ಮಾಡುತ್ತಾರೆ ಎಂದು ಕೈಕಟ್ಟಿ ಕುಳಿತುಕೊಳ್ಳುವವರಲ್ಲ. ಅಧಿಕಾರ, ಹಣ ಇರುವದು ದುರ್ಬಲರ ಏಳಿಗೆಗಾಗಿ ಎಂಬ ಧೋರಣೆಯನ್ನು ಪ್ರತಿಪಾದಿಸುವವರು.

ಜನರು ಕೂಡ ಅವರನ್ನು ತಮ್ಮ ನಾಯಕರೆಂದು ಒಪ್ಪುತ್ತಾ ಬಂದವರು. ಇಂತ ಮೌಲ್ಯಯುತ ವ್ಯಕ್ತಿತ್ವಗಳು ಇಂದಿನ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು. ಹೊಸ ತಲೆಮಾರಿನ ರಾಜಕಾರಣ ಅನೀತಿಯನ್ನು ಪ್ರತಿಪಾದಿಸುತ್ತದೆ. ಅದನ್ನೇ ನೀತಿ ಎಂದು ಜನ ನಂಬುವ ವಾತವರಣವನ್ನು ಸೃಷ್ಟಿಸುತ್ತದೆ. ಮತದಾನವನ್ನೇ ಅಡ್ಡದಾರಿ ಇಡಿಯುವಂತೆ ಮಾಡುತ್ತದೆ. ಇವರ ಅನೈತಿಕ ಧೋರಣೆಗಳನ್ನು ಸಜ್ಜನರು ಎದುರಿಸುವುದು ಕಷ್ಟ ಎಂಬ ಸತ್ಯವನ್ನು ಕಾದಂಬರಿ ಅನಾವರಣ ಮಾಡುತ್ತದೆ.

ಹೊಸ ತಲೆಮಾರಿನ ರಾಜಕಾರಣ ಜನರ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಮುನ್ನಡೆಯುತ್ತದೆ. ಅವರಿಗೆ ಸಾಮಾಜಿಕ ಅಭಿವೃದ್ಧಿ, ನ್ಯಾಯ, ನೀತಿ, ಆದರ್ಶ ಯಾವುವು ಮುಖ್ಯವಲ್ಲ. ಅಧಿಕಾರ ಕೇಂದ್ರವನ್ನು ತಮ್ಮ ಕೈವಶ ಮಾಡಿಕೊಳ್ಳುವದಷ್ಟೆ ಮುಖ್ಯ. ಅದಕ್ಕಾಗಿ ಯಾವ ಮಾರ್ಗವನ್ನು ತುಳಿಯಲು ಸಿದ್ದರಿದ್ದಾರೆ. ಯುವ ಸಮುದಾಯವನ್ನು ಭ್ರಮೆಯಲ್ಲಿ ತೇಲಿಸಿ ತಮ್ಮ ಪರವಾಗಿ ಪರಿವರ್ತಿಸಿಕೊಳ್ಳುತ್ತಾರೆ. ಇವರು ಜನರನ್ನು ಅರಿವಿನೆಡೆಗೆ ಒಯ್ಯುವ ಬದಲು ಅಂಧಕಾರದೆಡೆಗೆ ಒಯ್ಯುತ್ತಾರೆ. ಇಂತಹ ಸ್ಥಿತಿಯನ್ನು ಸುಕ್ಕನ ಮೂಲಕ ಕಾದಂಬರಿ ಸೂಕ್ಷ್ಮವಾಗಿ ತೆರೆದಿಡುತ್ತದೆ.

ಕಾದಂಬರಿಯ ಪ್ರಧಾನ ಪಾತ್ರಗಳಾಗಿರುವ ಸೇಸಪ್ಪ, ಸಂಕಪ್ಪ, ಕೋಟೆ, ಸುಕ್ಕ, ಕೇಳು ಪಂಡಿತ, ಸುಕ್ಕಣ್ಣ, ಸುಕ್ಕ, ಎಂ.ಎಲ್. ಎ. ಮಂಜುನಾಥಯ್ಯ ಅವರು ಸೀತಾಪುರವನ್ನು ಒಂದಲ್ಲಾ ಒಂದು ರೀತಿಯಿಂದ ಆವರಿಸಿಕೊಂಡವರು. ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಗತಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವರು. ಇವರಿಗೆ ಗ್ರಾಮದ ಉದ್ದಾರಕ್ಕಿಂತ ತಮ್ಮ ಉದ್ದಾರವೆ ಮುಖ್ಯವಾಗುತ್ತದೆ. ಸೀತಾಪುರದ ಗ್ರಾಮ ಪಂಚಾಯಿತಿಯ ಅಧಿಕಾರ ಹಿಡಿಯಲು ಇವರು ಪರಸ್ಪರ ಒಂದಾಗಿ ಸಜ್ಜನ ಜನಾನುರಾಗಿ ಜಯರಾಮ ಹೆಗ್ಡೆಯವರನ್ನು ಮೂಲೆಗುಂಪು ಮಾಡುವ ಸಂಚು ಮಾಡುತ್ತಾರೆ. ಅದಕ್ಕೆ ವೇದಿಕೆಯಾಗಿ ಒದಗುವುದು ಪಂಜುರ್ಲಿ ದೈವದ ಬ್ರಹ್ಮ ಕಲಸೋತ್ಸವ.

ಸುಕ್ಕ ಊರಿನ ಯುವ ರಾಜಕಾರಣಿ, ಉದ್ಯಮಿ, ಕಳ್ಳ ವ್ಯವಹಾರ ಮಾಡುವವನು. ಈತ ಬ್ರಹ್ಮ ಕಲಸೋತ್ಸವವನ್ನು ತನ್ನ ಅಧಿಕಾರ ಲಾಲಸೆಗೆ ಬಳಸಿಕೊಳ್ಳುತ್ತಾನೆ. ಅದಕ್ಕೆ ಬೇಕಾದ ಸಮಪನ್ಮೂಲವನ್ನು ತನ್ನ ಕೈಯಿಂದ ಕೊಡಲು ಮುಂದಾಗುತ್ತಾನೆ. ಆ ಮೂಲಕ ಗ್ರಾಮದ ಯುವಕರನ್ನು ಒಗ್ಗೂಡಿಸಲು ಪ್ರಯತ್ನ ಮಾಡುತ್ತಾನೆ. ಭಾವನಾತ್ಮವಾಗಿ ದೇವರ ಹೆಸರಲ್ಲಿ ಗ್ರಾಮದ ಜನರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಾನೆ. ಕಾಡಿನಲ್ಲಿ ಇಲ್ಲದ ದೇವರನ್ನು ಸೃಷ್ಟಿ ಮಾಡಿ, ಕಾಡಿನಲ್ಲಿರುವ ಮರಗಳನ್ನು ಕಳ್ಳ ವ್ಯಾಪಾರ ಮಾಡುತ್ತಾನೆ. ಇದೆಲ್ಲವೂ ಗ್ರಾಮದವರಿಗೆ ಗೊತ್ತಿದ್ದರೂ ಯಾವ ಪ್ರಜ್ಞೆ ಇಲ್ಲದೆ ಸಹಸಿಕೊಂಡು ಇರುತ್ತಾರೆ. ಇದು ನಮ್ಮ ಭಾರತದ ವಾಸ್ತವ ರಾಜಕಾರಣವನ್ನು ಸೂಚಿಸುತ್ತದೆ.

ಕಾದಂಬರಿಯ ವಿಶೇಷತೆ ಇರುವುದು ರಾಗಣ್ಣನ ಪಾತ್ರದಲ್ಲಿ. ರಾಗಣ್ಣ ಕಾದಂಬರಿಯಲ್ಲಿ ಅಸಮ್ಮತಿಯ ಅಸಹಾಕಾರದ ಪ್ರತೀಕವಾಗಿ ಬರುತ್ತಾನೆ. ಪಂಜುರ್ಲಿ ದೈವದ ಬ್ರಹ್ಮ ಕಲಸೋತ್ಸವದ ಸುತ್ತ ನಡೆಯುವ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅದನ್ನು ಎದುರಿಸಲಾರದೆ ಹುಚ್ಚನ ಸ್ಥಿತಿಯನ್ನು ಹೊಂದುತ್ತಾನೆ. ಇವನು ಮೇಲ್ನೋಟಕ್ಕೆ ಹುಚ್ಚನಂತೆ ಕಂಡರೂ ವ್ಯವಸ್ಥೆಯನ್ನು ಸರಿ ಮಾಡುವ ಪ್ರಜ್ಞಾವಂತ. ಪ್ರಜ್ಞಾವಂತರನ್ನೆಲ್ಲಾ ಇಂದಿನ ವ್ಯವಸ್ಥೆ ಹುಚ್ಚರಂತೆ ನೋಡುತ್ತಿದೆ. ಒಂಟಿಯಾಗಿ ಮಾಡುತ್ತಿದೆ. ಆದರೆ ವ್ಯವಸ್ಥೆಯನ್ನು ಸರಿ ಮಾಡುವ ಸಾಮರ್ಥ್ಯ ಹೊಂದಿದವರು ರಾಗಣ್ಣ, ವೆಂಕಪ್ಪ ಮಾಸ್ತಾರ, ಜಯರಾಮ ಹೆಗ್ಡೆಯಂತವರು.

ಕೊನೆಗೆ ಜೇನುಗುಡಿಗೆ ಕಲ್ಲು ಹೊಡೆಯುವ ಪ್ರಸಂಗ ಸಾಂಕೇತಿಕವಾಗಿದೆ. ಯಾರು ವ್ಯವಸ್ಥೆಯನ್ನು ಕುಲಗೆಡಿಸುವರೋ ಅವರನ್ನು ಎಚ್ಚರಿಸಿ ಸರಿ ದಾರಿಗೆ ತರುವ ವಿವೇಚನೆ ಜನರಿಗಿರುವುದು ಎಂಬ ನಿಲುವನ್ನು ಕಾದಂಬರಿ ಧ್ವನಿಸುತ್ತದೆ. ದುಡಿದು ಸಿಹಿ ನೀಡುವ ಜೇನುನೊಣದಂತಹ ಜನಗಳು ದುಷ್ಟ ರಾಜಕಾರಣವನ್ನು ಸರಿ ಮಾಡುವ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕು. ಅದರ ಪ್ರತೀಕವಾಗಿಯೇ ಕಾದಂಬರಿಯಲ್ಲಿ ಜೇನು ನೊಣಗಳು ಪಂಜುರ್ಲಿ ದೈವದ ಬ್ರಹ್ಮ ಕಲಸೋತ್ಸವದಲ್ಲಿ ಪಾಲ್ಗೊಂಡವರಿಗೆಲ್ಲಾ ಕಚ್ಚುವುದು. ನಿಜ ದೈವದ ದರ್ಶನವನ್ನು ಕಾಣುವ ದಾರಿಯನ್ನು ಇಂದು ಕಂಡುಕೊಳ್ಳುವ ಅಗತ್ಯವಿದೆಯೆಂಬ ಕನಸನ್ನು ಕಾದಂಬರಿ ಬಿತ್ತುತ್ತದೆ.

ಕನ್ನಡದಲ್ಲಿ ಬಂದ ಅಪರೂಪದ ಕಾದಂಬರಿ ಇದು. ವಸ್ತು ವಿನೂತನ ಮತ್ತು ವಾಸ್ತವವಾದುದು. ಈ ವಸ್ತುವನ್ನು ಯಾರು ಇಲ್ಲಿವರೆಗೆ ಆಯ್ಕೆ ಮಾಡಿಕೊಂಡಿಲ್ಲ. ಇದು ಬಹಳ ಸೂಕ್ಷ್ಮವಾದುದು. ಇದನ್ನು ಬಹಳ ಸಮರ್ಥವಾಗಿ ಎಲ್ಲಿಯೂ ವಾಚ್ಯವಾಗದಂತೆ ಕಾದಂಬರಿ ಹೆಣೆದಿದ್ದಾರೆ. ಭಾಷೆ ಅಷ್ಟೇ ಸುಲಿತವಾಗಿ ಹರಿದು ಬಂದಿದೆ. ಸೀತಾಪುರ ನೈತಿಕತೆಯನ್ನು ಕಳೆದುಕೊಳ್ಳುವುದು ಜೂಜು ಮತ್ತು ಕುಡಿತದಿಂದ. ಈ ಸಂಗತಿಗಳು ಕಾದಂಬರಿಯಲ್ಲಿ ಅಂರ್ಗತವಾಗಿ ಬರುತ್ತವೆ.

ಈ ವ್ಯವಹಾರ ಮಾಡುವವರೆ ರಾಜಕಾರಣದಲ್ಲಿ ಮುಂದೆ ಬರುವವರು. ಇವರಿಂದ ಮತ್ತೇನನ್ನೂ ನಿರೀಕ್ಷೆ ಮಾಡಲು ಸಾದ್ಯವಾಗುತ್ತದೆ ಎಂಬ ವಿವೇಚನೆಯನ್ನು ಓದುಗರಿಗೆ ಬಿಡುತ್ತದೆ. ಆಳದಲ್ಲಿ ನಿಜ ಧಾರ್ಮಿಕ ಪ್ರಜ್ಞೆ ಮತ್ತು ರಾಜಕಾರಣದ ಪ್ರಜ್ಞೆಯನ್ನು ಮೂಡಿಸುತ್ತದೆ. ಕಾದಂಬರಿಗೆ ಪೂರಕವಾಗಿ ಗ್ರಾಮದ ಸಾಂಸ್ಕೃತಿಕ ವಿವರಗಳು ಬರುತ್ತವೆ. ಧರ್ಮ ಹಾಗೂ ರಾಜಕಾರಣಗಳು ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ಹೋಗುವ ಅಗತ್ಯವನ್ನು ಕಾದಂಬರಿ ಧ್ವನಿಪೂರ್ಣವಾಗಿ ಪ್ರತಿಪಾದಿಸುತ್ತದೆ.

‍ಲೇಖಕರು Admin

August 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: