ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರೂ ಸಿಂಧೂ ಕಣಿವೆ ನಾಗರಿಕತೆಯೂ…

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

23

ಪಾಕಿಸ್ತಾನದಲ್ಲಿ ಕೊರ್ಕೈ, ವಂಜಿ, ತೊಂಡಿ, ಮಾತ್ರೈ, ಊರೈ, ಕೂಡಲ್ ಕಟ್, ಕೋಳಿ ಎಂಬ ತಮಿಳು ಹೆಸರುಗಳ ಊರುಗಳಿವೆ. ಅದೇ ರೀತಿಯಲ್ಲಿ ಅಫ್ಘಾನಿಸ್ತಾನದಲ್ಲೂ ಕೊರ್ಕೈ, ಪೂಂಪೂಗಾರ್ ಎಂಬ ಹೆಸರುಗಳ ಊರುಗಳಿವೆ ಎಂದು ಐ.ಏ.ಎಸ್ ಅಧಿಕಾರಿ ಆರ್. ಬಾಲಕೃಷ್ಣನ್ ಹೇಳುತ್ತಾರೆ. 

ತಮಿಳು ಸಾಹಿತ್ಯವನ್ನು ಓದಿಕೊಂಡಿರುವ ಬಾಲಕೃಷ್ಣನ್, ಭಾರತದ ಚುನಾವಣಾ ಆಯುಕ್ತರಾಗಿ ಕೆಲಸ ಮಾಡಿದವರು. ಶ್ರೇಷ್ಟ ತಮಿಳು ತಜ್ಞರು. ಇವರ ‘ಸಿಂಧೂ ಕಣಿವೆ ನಾಗರಿಕತೆಯೂ ಸಂಗಮ್ ಸಾಹಿತ್ಯವೂ’ ಎಂಬ ಅಂಕಣ, ಸಿಂಧೂ ಕಣಿವೆಯಲ್ಲಿ ಬಳಸಿದ ಭಾಷೆಯ ಕುರಿತೂ, ಸಂಗಮ್ ಕಾಲದ ಸಂಸ್ಕೃತಿಯೊಂದಿಗೆ ಸಿಂಧೂ ಕಣಿವೆಗೆ ಇರುವ ಸಂಬಂಧದ ಕುರಿತೂ ಮುಖ್ಯವಾದ ವಿಚಾರಗಳನ್ನು ಮುಂದಿಡುತ್ತಾರೆ. 

ಸಿಂಧೂ ಕಣಿವೆ ನಾಗರಿಕತೆಯ ಅಳಿವು, ಸಿಂಧೂ ಕಣಿವೆಯ ಜನಗಳ ಒಟ್ಟು ಮೊತ್ತವಾದ ಅಂತ್ಯವೂ ಅಲ್ಲ. ಹಾಗೆಯೇ, ಸಂಗಮ್ ಸಾಹಿತ್ಯ ಹಳೆಯ ತಮಿಳಿನ ಪ್ರಾರಂಭವೂ ಅಲ್ಲ ಎಂಬುದು ಅವರ ಅಧ್ಯಯನ ಬುನಾದಿ. 

ದೊಡ್ಡ ದೊಡ್ಡ ನಗರಗಳನ್ನು ನಿರ್ಮಿಸಿ ಜೀವನ ಮಾಡಿದ ಸಿಂಧೂ ಕಣಿವೆಯ ಜನಗಳು ಹೇಗೆ ಅಳಿದು ಹೋದರು ಎಂಬುದು, ಇಂದಿನವರೆಗೆ ಉತ್ತರ ಕಂಡುಕೊಳ್ಳದ ಪ್ರಶ್ನೆಯಾಗಿಯೇ ಇದೆ. ಖಂಡಿತ ಒಂದೇ ದಿನದಲ್ಲಿ ಅಳಿದುಹೋಗಿರಲು ಸಾಧ್ಯವಿಲ್ಲ. ಅವರು ವಲಸೆ ಹೋದರೇ? ಅಥವಾ ಪ್ರಕೃತಿಯ ವಿಕೋಪಕ್ಕೆ ತುತ್ತಾದರೇ? ಎಂಬ ಪ್ರಶ್ನೆಗಳು ಏಳುತ್ತವೆ. 

ಸಿಂಧೂ ಕಣಿವೆಯಲ್ಲಿ ಕಾಣುವ ಗುರುತುಗಳು, ಸಂಸ್ಕೃತಿಯ ದರ್ಶನಗಳು ಭಾರತದಲ್ಲಿ ಬೇರೆಲ್ಲಿ ಕಾಣುತ್ತವೆ? ಹಿಮಾಲಯದ ಬಗ್ಗೆ ಸಂಗಮ್ ಸಾಹಿತ್ಯ ಹೇಳುವುದರಿಂದ, ಅದಕ್ಕೂ ಸಿಂಧೂ ಕಣಿವೆಯ ನಾಗರಿಕತೆಗೂ ಯಾವ ಬಗೆಯ ಸಂಬಂಧವಿತ್ತು? ಸಿಂಧೂ ಕಣಿವೆಯ ಜನಗಳು ಯಾವ ಭಾಷೆಯಲ್ಲಿ ಮಾತನಾಡಿದರು? ಎಂದು ಬೆಳೆಯುತ್ತಲೇ ಹೋಗುವ ಪ್ರಶ್ನೆಗಳಿಗೆ ಇಂದಿಗೂ ಉತ್ತರವನ್ನು ಹುಡುಕುತ್ತಲೇ ಇದ್ದಾರೆ. 

ಐರಾವತಂ ಮಹಾದೇವನ್, ಆಸ್ಕೋ ಪಾರ್ಪೋಲ (Asko Parpola) ಮುಂತಾದ ತಜ್ಞರು ಸಿಂಧೂ ಕಣಿವೆಯಲ್ಲಿ ಬಳಸಿದ ಭಾಷೆಯ ಬಗ್ಗೆ ಹಲವು ವರ್ಷಗಳು ಆಳವಾದ ಅಧ್ಯಯನ ಮಾಡಿದರು. ಅದರ ಮತ್ತೊಂದು ಆಯಾಮವಾಗಿ ತಮಿಳಿಗೂ ಸಿಂಧೂ ಕಣಿವೆಗೂ ಇರುವ ಸಂಬಂಧವನ್ನು ಅಧ್ಯಯನ ಮಾಡುತ್ತಿದ್ದಾರೆ ಬಾಲಕೃಷ್ಣನ್. 

ಬಾಲಕೃಷ್ಣನ್ ಅವರ ಅಧ್ಯಯನ ಪ್ರಮುಖ ಊರುಗಳ ಹೆಸರುಗಳು ರೂಪಗೊಂಡ ಬಗೆಗೆ ಸೇರಿದ್ದು. ಸ್ಥಳಗಳ ಮತ್ತು ಮನುಷ್ಯರ ಹೆಸರುಗಳನ್ನು ಕುರಿತು ಅವರು ಬಹಳ ವಿಸ್ತಾರವಾದ ಅಧ್ಯಯನವನ್ನು ಮಾಡುತ್ತಿದ್ದಾರೆ. ವಿಶೇಷವಾಗಿ, ಸಂಗಮ್ ಕಾಲದ ತಮಿಳು ಹೆಸರುಗಳು ಎಲ್ಲೆಲ್ಲಾ ಕಾಣುತ್ತಿವೆ ಅದಕ್ಕೆ ಸಂಬಂಧಪಟ್ಟವು ಯಾವುವು ಎಂಬುದನ್ನು ಅವರ ಅಧ್ಯಯನ ಪ್ರಬಂಧಗಳು ವಿವರಿಸುತ್ತವೆ. 

ಸಿಂಧೂ ಕಣಿವೆಯ ಬಗ್ಗೆ ಅಸಂಖ್ಯಾತ ಹೊಸ ಅಧ್ಯಯನಗಳು, ವಿವರಣೆಗಳು ಪ್ರಕಟವಾಗುತ್ತಲೇ ಇವೆ. ಆದರೆ ಅದಕ್ಕೆ ಸಮನಾದ ಆದಿಚ್ಚನಲ್ಲೂರ್ ಬಗ್ಗೆ ಹೆಚ್ಚಿನ ಅಧ್ಯಯನಗಳು ಮಾಡಲಿಲ್ಲ. ಆದಿಚ್ಚನಲ್ಲೂರಿನ ಹಿರಿಮೆಯನ್ನು ತಮಿಳುನಾಡಿನಲ್ಲೇ ಹೆಚ್ಚಿನ ಜನ ಅರಿತಿರಲಿಲ್ಲ. 

ತಮಿಳರ ಪುರಾತನ ನಾಗರಿಕತೆಗೆ ಸಾಕ್ಷಿಯಾಗಿ ಇರುವುದು ಆದಿಚ್ಚನಲ್ಲೂರ್. ತಿರುನೆಲ್ವೇಲಿಯಿಂದ ಶ್ರೀವೈಕುಂಟಕ್ಕೆ ಹೋಗುವ ದಾರಿಯಲ್ಲಿ 24 ಕಿ.ಮೀ ದೂರದಲ್ಲಿ ಪೊನ್ನನ್ಕುರುಚ್ಚಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಆದಿಚ್ಚನಲ್ಲೂರ್, ತಾಮಿರಭರಣಿ ನದಿಯ ದಕ್ಷಿಣ ತೀರದಲ್ಲಿ ಇರುವ ಚಿಕ್ಕ ಹಳ್ಳಿ. ಅಲ್ಲಿ 114 ಎಕರೆ ವಿಸ್ತೀರ್ಣವುಳ್ಳ ಸ್ಮಶಾನ ಇದೆ. 

ಬಟ್ಟಬಯಲಾಗಿ ಹರಡಿಕೊಂಡಿರುವ ಭೂಮಿ. ಪುರಾತನ ಸ್ಥಳ ಎಂಬುದಕ್ಕೆ ಯಾವ ಕುರುಹೂ ಇಲ್ಲ. ಒಂದೇ ಒಂದು ಸೂಚನಾ ಫಲಕ ಗಾಳಿಗೆ ತುಕ್ಕು ಹಿಡಿದು ಕಾಣುತ್ತದೆ. ಕೆಲವು ಜಾಗಗಳಲ್ಲಿ ಉರುಟು ಕಲ್ಲುಗಳು ಕಾಣುತ್ತವೆ. ಅದರ ಕೆಳಗೆ ಗುಡಾಣದಲ್ಲಿ ಹೆಣಗಳನ್ನು ಇಟ್ಟು ಹೂತಿರಬಹುದು ಎನ್ನುತ್ತಾರೆ. ಸತ್ತ ದೇಹವಿರುವ ಆ ಗುಡಾಣವನ್ನು ನರಿಯೋ, ತೋಳವೋ ಅಗೆದು ತೆಗೆಯದಂತೆ ಇರಲು ಮಣ್ಣನ್ನು ಮುಚ್ಚಿ ಕಲ್ಲಿಡುವುದು ಪದ್ಧತಿ. ಬರಡು ಕಾಡಿನಂತಹ ಬಿಸಿಲು ದಗಿಸುವ ಬಯಲಲ್ಲಿ ನಡೆಯುತ್ತಿದ್ದರೆ ಒಡೆದ ಗುಡಾಣಗಳೂ, ಬುರಡೆಗಳು ಕಾಣುತ್ತವೆ. 

ಬಿಳಿ ಉರುಟುಕಲ್ಲುಗಳು ತುಂಬಿರುವ ಭೂಪ್ರದೇಶದ ಈ ಸ್ಮಶಾನ 10,000 ವರ್ಷಗಳಿಗೂ ಪುರಾತನವಾದದ್ದು. ಆ ಕಾಲದಲ್ಲಿ ಸತ್ತವರನ್ನು ಗುಡಾಣದಲ್ಲಿಟ್ಟು ಹೂಳುತ್ತಿದ್ದರು. ಆ ಪಾತ್ರೆಯನ್ನು ಹೂಳುಗುಡಾಣ ಎಂದು ಕರೆಯುತ್ತಿದ್ದರು. ಮೂರು ಹಂತಗಳಾಗಿ ಹೂಳಿದ ಗುಡಾಣಗಳು ಆದಿಚ್ಚನಲ್ಲೂರಿನಲ್ಲಿ ಹೇರಳವಾಗಿ ದೊರಕುತ್ತಿವೆ. 

ಅಂತ್ಯಕ್ರಿಯೆಯಲ್ಲಿ ಕಲ್ಲು ಹೂಳುವ ಪದ್ಧತಿ ತಮಿಳುನಾಡಿನಲ್ಲಿ ಇದೆ. ಆದರೇ, ಕಲ್ಲು ಹೂಳುವ ಪದ್ಧತಿ ಉಂಟಾಗುವುದಕ್ಕೆ ಮೊದಲ ಕಾಲಘಟ್ಟಕ್ಕೆ ಸೇರಿದ್ದು ಆದಿಚ್ಚನಲ್ಲೂರ್. ಇಲ್ಲಿ ದೊರಕಿರುವ  ಗುಡಾಣಗಳು ಕೆಂಪು ಬಣ್ಣದಲ್ಲಿ ಶಂಕುವಿನಾಕಾರದಲ್ಲಿ  ಮೂರು ಅಡಿ ಸುತ್ತಳತೆ ಇರುವಂತಹವು. ಗುಡಾಣದ ಅಂಚುಗಳಲ್ಲಿ ಕೈಬೆರಳು ಅಚ್ಚಿನ ಕುಸುರಿ ಕೆಲಸಗಳು ತ್ರಿಕೋಣಾಕಾರದಲ್ಲಿ ಚುಕ್ಕೆಗಳು ಕಾಣುತ್ತವೆ. 

ಮಣ್ಣಿನ ಗುಡಾಣದ ಹೊರಭಾಗದಲ್ಲಿ ಹೆಣ್ಣಿನ ಚಿತ್ರ, ಮೃಗಗಳು, ಹಕ್ಕಿಗಳು, ತಾವರಗಳು ಉಬ್ಬುಚಿತ್ರಗಳಾಗಿ ಕಾಣುತ್ತವೆ. ಈ ಹೆಣ್ಣಿನ ಆಕಾರ ಸಿಂಧೂ ಕಣಿವೆ ಪ್ರದೇಶದಲ್ಲಿ ದೊರಕಿರುವ ಹೆಣ್ಣಿನ ಆಕಾರಕ್ಕೆ ಹೋಲುತ್ತದೆ. 

ಆದಿಚ್ಚನಲ್ಲೂರನ್ನು ಮೊದಮೊದಲು ಉತ್ಖನನ ಮಾಡಿದವರು ಜರ್ಮನಿಗೆ ಸೇರಿದ ಡಾಕ್ಟರ್ ಜಾಗರ್ (Dr Jagar) ಎಂಬ ಪುರಾತತ್ವಶಾಸ್ತ್ರಜ್ಞ. 1876ನೇಯ ಇಸವಿ ಆದಿಚ್ಚನಲ್ಲೂರಿನ ಕೆಲವು ಭಾಗಗಳಲ್ಲಿ ಮಾನವ ಶಾಸ್ತ್ರ ಅಧ್ಯಯನಕ್ಕಾಗಿ ಬಂದ ಜಾಗರ್, ಅನಿರೀಕ್ಷಿತವಾಗಿ ಕಂಡು ಹಿಡಿದದ್ದೇ ಈ ತಮಿಳರ ನಾಗರಿಕತೆಯ ಕುರುಹು. 

ಜಾಗರ್ ನಂತರ ಲೂಯಿ ಲಾಬೆಕ್ಯೂ (Louis Labeque) ಎಂಬ ಫ್ರೆಂಚ್ ಅಧ್ಯಯನಕಾರಳು 1903 ನೇಯ ಇಸವಿ ಆದಿಚ್ಚನಲ್ಲೂರಿನಲ್ಲಿ ಸಂಶೋಧನೆ ಮಾಡಿ, ಕೆಲವು ಗುಡಾಣಗಳನ್ನು ಅಗೆದು ತೆಗೆದಳು. ಜಾಗರ್, ತಾನು  ಕಂಡು ಅರಿತ 50ಕ್ಕೂ ಹೆಚ್ಚಿನ ಪುರಾತತ್ತ್ವ ವಸ್ತುಗಳನ್ನು ಬರ್ಲಿನಿಗೆ ಕೊಂಡೊಯ್ದನು. ಅವು, ವೋಲ್ಗರ್ ಕೋಂಡೇ (Vulgar Konde) ಮ್ಯೂಸಿಯಂನಲ್ಲಿ ಇವೆ. ಲಾಬೇಕ್ಯೂ ತನ್ನ ಸಂಶೋಧನೆಯಲ್ಲಿ ಕಂಡು ಹಿಡಿದ ಪುರಾತತ್ತ್ವ ವಸ್ತುಗಳನ್ನು ಪ್ಯಾರಿಸಿಗೆ ಕೊಂಡೊಯ್ದಳು. ಆದರೇ, ಆದಿಚ್ಚನಲ್ಲೂರಿನ ಅಧ್ಯಯನವನ್ನು ಮುಂದುವರೆಸಲಿಲ್ಲ. 

ಅದರ ನಂತರ, ಚೆನ್ನೈ ಮ್ಯೂಸಿಯಂನಲ್ಲಿ  ಅಧೀಕ್ಷಕರಾಗಿದ್ದ ಅಲೆಗ್ಸಾಂಡರ್ ರಿಯಾ (Alexander Rea), ಆದಿಚ್ಚನಲ್ಲೂರಿನಲ್ಲಿ ಸಂಶೋಧನೆ ಮಾಡಿದರು. ಗುಡಾಣಗಳು, ಸತ್ತವರ ದೇಹಗಳು, ಮತ್ತು ಬಗೆ ಬಗೆಯಾದ ಮಣ್ಣಿನ ಪಾತ್ರೆಗಳು, ಕಬ್ಬಿಣದಿಂದ ಮಾಡಿದ ವಸ್ತುಗಳು, ಶಿಲ್ಪಗಳು, ಒಡವೆಗಳು, ದೀಪಗಳು, ಮಣಿಗಳು, ಉಪಕರಣ ಸಲಕರಣೆಗಳು ಎಂದು 4000 ಕ್ಕೂ ಹೆಚ್ಚಿನ ವಸ್ತುಗಳು ದೊರಕಿದವು. 

ಈ ಪುರಾವೆಗಳನ್ನು ಅಧ್ಯಯನ ಮಾಡಿದ ತಜ್ಞರು, ಇವು ಸಿಂಧೂ ಕಣಿವೆಯ ನಾಗರಿಕತೆಗೂ ಪುರಾತನವಾದದ್ದಾಗಿ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮಿಳರ ನಾಗರಿಕತೆ ಬಹಳ ಹಳೆಯದು ಎಂದರೆ, ಯಾಕೆ ಅದಕ್ಕಾದ ಸ್ಥಾನ ಇಂದಿನವರೆಗೆ ದೊರಕಲಿಲ್ಲ ಎಂದು ಅಧ್ಯಯನ ಮಾಡಿ ನೋಡಿದರೆ, ಅದರ ಹಿಂದೆ ಒಂದು ರಾಜಕೀಯ ಇರುವುದನ್ನು ಅರಿತುಕೊಳ್ಳಬಹುದು. 

ಆರ್ಯರ ಬರುವಿನ ನಂತರವೇ ಭಾರತಕ್ಕೆ ಸಂಸ್ಕೃತಿ ಬಂದಿತು ಎಂಬ ಸುಳ್ಳನ್ನು ಹಲವು ಕಾಲದಿಂದ ಮತ್ತೆ ಮತ್ತೆ ನಾವು ಓದುತ್ತಾ ಬರುತ್ತಿದ್ದೇವೆ. ಅದಕ್ಕೆ ವಿರುದ್ಧವಾಗಿ ಇಂತಹ ಪುರಾತನ ತಮಿಳರ ನಾಗರಿಕತೆ ಇದ್ದಿದೆ ಎಂದು ತೋರಿಸುವುದನ್ನು ಆರ್ಯರನ್ನು ಪ್ರಧಾನವಾಗಿಸುವ ಅಧ್ಯಯನಕಾರರು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. 

ಇಂದು ಐರೋಪ್ಯದ ಇತಿಹಾಸದ ಅಧ್ಯಯನಕಾರರು ಆರ್ಯ ಜನಾಂಗವನ್ನು ಹೆಮ್ಮೆಗೊಳಿಸುವುದರಲ್ಲಿ ಆಸಕ್ತಿಯನ್ನು ತೋರುತ್ತಾರೆ. ನಿಜವಾದ ಭಾರತದ ಇತಿಹಾಸ ಇನ್ನೂ ಸಂಪೂರ್ಣವಾಗಿ ಬರೆದಿಲ್ಲ. ಆದಿಚ್ಚನಲ್ಲೂರಿನ ಪುರಾತನ ನಾಗರಿಕತೆ ಸಿಂಧೂ ಕಣಿವೆಯ ನಾಗರಿಕತೆಯೊಂದಿಗೆ ಹೋಲಿಕೆ ಮಾಡಿ ಅಧ್ಯಯನ ಮಾಡಬೇಕಾಗಿರುವುದು, ವಿಶೇಷವಾಗಿ, ಎರಡು ಸ್ಥಳಗಳಲ್ಲಿ ದೊರಕಿರುವ ಮಣ್ಣು ಪಾತ್ರೆಗಳನ್ನು, ಅದರಲ್ಲಿ ಬರೆದಿರುವ ಚಿಹ್ನೆಗಳು, ಅಕ್ಷರಗಳು ಮತ್ತು ಕರಕುಶಲ ವಸ್ತುಗಳನ್ನು ಅಧ್ಯಯನ ಮಾಡಬೇಕಾಗಿದೆ. 

ದಿನನಿತ್ಯ ಬಳಸುವ ಮಣ್ಣಿನ ಪಾತ್ರೆಗಳಲ್ಲಿ ಅಕ್ಷರದ ಆಕಾರಗಳು ಕೆತ್ತಿರುವುದು ಅಂದು ವಿದ್ಯೆಯಲ್ಲಿ ತಮಿಳರು ಉನ್ನತಿ ಪಡೆದಿದ್ದರು ಎಂಬುದಕ್ಕೆ ಸಾಕ್ಷಿಯಾಗಿವೆ. ಕ್ರಿ.ಪೂ.800 ವರ್ಷಗಳ ಹಿಂದೆ ಆದಿಚ್ಚನಲ್ಲೂರ್-ನಲ್ಲಿ ನಾಗರಿಕ ಜೀವನವನ್ನು ಜನಗಳು ನಡೆಸಿದ್ದಾರೆ. 

ಪುರಾತ ತಮಿಳರು ಕಬ್ಬಿಣವನ್ನು ಬಳಸಿ ಬಹಳ ಉಪಕರಣಗಳನ್ನು ಮಾಡಿದ್ದಾರೆ ಎಂಬುದರಿಂದ, ಯಾವ ಬಗೆಯ ಕುಲುಮೆಯಿಂದ ಕಬ್ಬಿಣವನ್ನು ಕರಗಿಸಿರಬಹುದು? ಅಚ್ಚು ಹೇಗೆ ಮಾಡಿದರು? ಮುಂತಾದುವನ್ನು ಅಧ್ಯಯನ ಮಾಡಬೇಕಾಗಿರುವುದು ಅಗತ್ಯ. 

ಆದಿಚ್ಚನಲ್ಲೂರ್ ಕುರಿತು ತೀವ್ರವಾದ ಅಧ್ಯಯನ ಮಾಡಿದ ತಮಿಳು ತಜ್ಞರಾದ ತೊ. ಪರಮಶಿವಂ ಈ ಭಾಗದಲ್ಲಿ ಕಬ್ಬಿಣವನ್ನು ಕರಗಿಸುವ ಕುಲುಮೆಗಳು ಇದ್ದಿರುವುದನ್ನು ಕಂಡು ಹಿಡಿದಿದ್ದಾರೆ. ನೈಸರ್ಗಿಕವಾಗಿ ನಿರ್ಮಿಸಿರುವ ಈ ಕುಲುಮೆಗಳಲ್ಲಿ ತಾಮಿರಭರಣಿ ನದಿಯ ಮರಳಿನಲ್ಲಿ ದೊರಕಿದ ಕಬ್ಬಿಣದ ಧಾತುಗಳನ್ನು ಕರಗಿಸಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ. 

ಅದೇ ರೀತಿ, ಆದಿಚ್ಚನಲ್ಲೂರ್ ಬಗ್ಗೆ ವಿಸ್ತಾರವಾದ ಅಧ್ಯಯನವನ್ನು ಮಾಡಿರುವ ಎಸ್. ರಾಮಚಂದ್ರನ್, 2,000 ವರ್ಷಗಳ ಹಿಂದಿನ ಕಪ್ಪು ಬಿಳುಪು ಕುಡಿಕೆಗಳ ಚಿಪ್ಪುಗಳನ್ನು ಶೇಕರಿಸಿದ್ದಾರೆ. ಇವರ ಆದಿಚ್ಚನಲ್ಲೂರ್ ಬಗ್ಗೆಯ ಪ್ರಬಂಧದಲ್ಲಿ ಗುಡಾಣದಲ್ಲಿ ಹೂಳಲಾದ ಮನುಷ್ಯರು ಬಹಳ ನಾಗರಿಕರಾಗಿ ಇದ್ದರು ಎಂದರೆ, ಅವರು ಎಲ್ಲಿ ವಾಸವಿದ್ದರು? ಯಾವುದು ಅವರ ಪೂರ್ವಿಕ, ಎಂಬುದನ್ನು, ವಿಸ್ತಾರವಾಗಿ ವಿವರಿಸುತ್ತಾರೆ. 

| ಇನ್ನು ನಾಳೆಗೆ |

‍ಲೇಖಕರು Admin

August 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: