ಭಾರತದ ಲಂಡನ್ – ಕೊಲ್ಕತ್ತಾದಲ್ಲಿ ಒಂದು ಸುತ್ತು

ಸಿದ್ದು ಯಾಪಲಪರವಿ

ಬ್ರಿಟಿಷರು ನಮ್ಮನ್ನು ಆಳುವಾಗ ಹಾರ್ಬರ್ ಸೌಲಭ್ಯ ಹೊಂದಿದ ನಗರಗಳನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ‌ಇದೇ ಕಾರಣದಿಂದ ಮದ್ರಾಸ್, ಕೊಲ್ಕತ್ತಾ ಮತ್ತು ಮುಂಬೈ ಕೇಂದ್ರಿತ ಆಡಳಿತ ಅವರದಾಗಿತ್ತು.

ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಅತ್ಯಂತ ಪ್ರಾಚೀನ ಐತಿಹಾಸಿಕ ನಗರ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ, ಸ್ವಾತಂತ್ರ್ಯ ಹೋರಾಟ ಹೀಗೆ ಎಲ್ಲಾ ರಂಗಗಳಲ್ಲಿ ತನ್ನ ಹಿರಿಮೆ ಮೆರೆದಿದೆ. ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟಾಗೋರ್ ಅವರ ಕಾರಣದಿಂದ ಕೊಲ್ಕತ್ತಾ ಜಾಗತಿಕ ಮನ್ನಣೆ ಪಡೆಯಿತು. ಅವರು ಆರಂಭಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯ, ಶಾಂತಿನಿಕೇತನ ಜಾಗತಿಕ ಪ್ರವಾಸಿ ತಾಣವಾಗಿದೆ. ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಸಾಂಸ್ಕೃತಿಕ ಗಟ್ಟಿತನ ಭಾರತಕ್ಕೆ ಲಭಿಸಲು ಮಹರ್ಷಿ ರವೀಂದ್ರನಾಥ ಕಾರಣರಾದರು.

ಇದರ ಜೊತೆಗೆ ಸುಭಾಸಚಂದ್ರ ಬೋಸ್ ಅವರ ಸ್ವಾತಂತ್ರ್ಯ ಚಳುವಳಿಯ ಸ್ವರೂಪದಿಂದ ಪಶ್ಚಿಮ ಬಂಗಾಳ ತನ್ನ‌ ಚಳುವಳಿಯ ಆಳವನ್ನು ವಿಸ್ತರಿಸಿಕೊಂಡಿತು. ಸಿನೆಮಾ ರಂಗದ ಭೀಷ್ಮ ಸತ್ಯಜಿತ್‌ ರಾಯ್‌, ಕುಷ್ಠ ರೋಗಿಗಳಿಗೆ ತಾಯಿಯಾಗಿದ್ದ ಮದರ್‌ ತೆರೇಸಾರಂತಹ ನೂರಾರು ಮಹನೀಯರ ಜೊತೆಗೆ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಸಾಧನೆ ಮೂಲಕ ಲೋಕದ ಗಮನ ಸೆಳೆದರು. ‘ವಿಶ್ವದ ಎಲ್ಲ ಹಾದಿಗಳು ಬಂಗಾಲದೆಡೆಗೆ’ ಎಂಬ ಮಾತು ಜನಜನಿತವಾಯಿತು.

ಓದುವ, ಬರೆಯುವ ಮತ್ತು ಅಲೆಯುವ ವ್ಯಸನಿಯಾದ ನಾನು, ಈ ಹಿಂದೆ 2006 ರಲ್ಲಿ ಸಂಶೋಧನಾ ಅಧ್ಯಯನ ಕಾರಣದಿಂದ ಒಬ್ಬನೇ ಕೊಲ್ಕತ್ತಾಗೆ ಹೋಗಿ ಬಂದಿದ್ದೆ, ಈಗ ಮತ್ತೊಮ್ಮೆ ಸಮಾನ ಮನಸ್ಕ ಮನಸುಗಳೊಂದಿಗೆ ಹೋಗಿ ಬಂದಾಗ ಅದೇನೋ ಧನ್ಯತೆ.

ಬೆಂಗಳೂರು ಮೂಲದ ಪ್ರೊ.ಎಸ್.ಜ್ಯೋತಿ ಅವರು ತಮ್ಮ ಸಂಶೋಧನಾ ಅಧ್ಯಯನಕ್ಕಾಗಿ ಟ್ಯಾಗೋರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಷಯವಾಗಿ ಚರ್ಚೆ ಮಾಡಲು ಗದುಗಿಗೆ ಬಂದಿದ್ದರು. ‘ಧಾರವಾಡ ಕಟ್ಟೆ’ಯ ಗೆಳೆಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರವೀಂದ್ರನಾಥರ ಕುರಿತು ಉಪನ್ಯಾಸ ನೀಡಿದ್ದೆ. ಅದನ್ನು ಆಲಿಸಿದ ಪ್ರೊ.ಜ್ಯೋತಿ ಅವರು ಪ್ರಭಾವಿತರಾದದ್ದು ಯೋಗಾಯೋಗ ಅಷ್ಟೇ! ಅವರು ತಮ್ಮ ಕುಟುಂಬದ ಗೆಳೆಯರು, ಪ್ರಾಧ್ಯಾಪಕ ಮಿತ್ರರಾದ ಪ್ರೊ.ವೆಂಕಟೇಶ.ಎಚ್. ಅವರ ಪರಿವಾರದ ಜೊತೆಗೆ ಶಾಂತಿನಿಕೇತನ ಮತ್ತು ಕೊಲ್ಕತ್ತಾ ಪ್ರವಾಸವನ್ನು ಆಯೋಜಿಸಿ ಕೊಲ್ಕತ್ತಾ ನೆನಪನ್ನು ಪುನಶ್ಚೇತನಗೊಳಿಸಿದರು.

ಶಾಂತಿನಿಕೇತನ ಮತ್ತು ಟ್ಯಾಗೋರ್ ಅವರ ಕೊಲ್ಕತ್ತಾ ಮನೆಯ ಭೇಟಿ ಅವಿಸ್ಮರಣೀಯ. ಇದರ ಜೊತೆಗೆ ಬೇಲೂರು ರಾಮಕೃಷ್ಣ ಮಠದ ಭೇಟಿ ಬಹುದಿನಗಳ ಕನಸಾಗಿತ್ತು. ಗದುಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂಜ್ಯ ನಿರ್ಭಯಾನಂದರು ಬೇಲೂರು ಮಠದ ಕುರಿತು ಪ್ರಸ್ತಾಪ ಮಾಡಿದ್ದ ನೆನಪು ಮಾಸುವ ಮೊದಲು ಅಲ್ಲಿಗೆ ಹೋಗಿ ದರ್ಶನ ಪಡೆದೆ.

ಶತಮಾನದ ಇತಿಹಾಸ ಹೊಂದಿರುವ ಕೇಂದ್ರೀಯ ವಿಶ್ವವಿದ್ಯಾಲಯ ಶಾಂತಿನಿಕೇತನ ಈಗಲೂ ತನ್ನ ಗುಣಮಟ್ಟ ಕಾಪಾಡಿಕೊಂಡಿದೆ.‌ ವಿಶೇಷವಾಗಿ ಸಂಗೀತ ಮತ್ತು ಲಲಿತಕಲಾ ವಿಭಾಗಗಳಿಗೆ ಜಾಗತಿಕ ಮನ್ನಣೆ ಇದೆ. ಸಾವಿರ ಎಕರೆ ವಿಶಾಲವಾದ ಸುಂದರ ಪರಿಸರದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಗುರುಕುಲವಿದು. ಆಧ್ಯಾತ್ಮಿಕ ಹಿನ್ನೆಲೆಯ ಮಹರ್ಷಿ ರವೀಂದ್ರರು ದೇಶವಿದೇಶಗಳಲ್ಲಿ ನೆಲೆಸಿದ್ದ ಪ್ರತಿಭಾವಂತ ಪ್ರಾಧ್ಯಾಪಕರನ್ನು ಕರೆತಂದು ವಿಶ್ವವಿದ್ಯಾಲಯದ ಘನತೆ ಹೆಚ್ಚಿಸಿದರು.

ಮಹಾತ್ಮ ಗಾಂಧಿ, ಅಲ್ಬರ್ಟ್ ಐನ್‍ಸ್ಟೈನ್, ನೆಹರು, ಅಮೆರಿಕಾ ಮತ್ತು ಯುರೋಪಿಯನ್ ಬರಹಗಾರರು ರವೀಂದ್ರನಾಥರ ಪ್ರಭಾವಕ್ಕೆ ಒಳಗಾಗಿದ್ದರು. ಅವರು ರಚಿಸಿದ ಹಾಡು ನಮ್ಮ ರಾಷ್ಟ್ರಗೀತೆಯಾಯಿತು. ಗೀತಾಂಜಲಿ ಮತ್ತು ಇತರ ಕೃತಿಗಳನ್ನು ರಚಿಸಿದ ಶಾಂತಿನಿಕೇತನದಲ್ಲಿ ಅದೇನೋ ವೈಬ್ರೇಶನ್ ಅನುಭವಕ್ಕೆ ದಕ್ಕುತ್ತದೆ.‌

ಅಮರ್ತ್ಯ ಸೇನ್ ಅವರ ತಂದೆ ಏ.ಟಿ.ಸೇನ್ ಇಲ್ಲಿ ಪ್ರಾಧ್ಯಾಪಕರಾಗಿದ್ದರು. ಇಲ್ಲಿನ ಹೆಮ್ಮೆಯ ವಿದ್ಯಾರ್ಥಿ ಅಮರ್ತ್ಯ ಸೇನ್ ಈಗ ಜಗದ್ವಿಖ್ಯಾತ, ನೋಬೆಲ್ ಪುರಸ್ಕೃತ ಅರ್ಥಶಾಸ್ತಜ್ಞರು. ಹೀಗೆಯೇ ಪ್ರತಿಭಾನ್ವಿತರ ಪಡೆಯನ್ನು ನಿರ್ಮಾಣ ಮಾಡಿದ ಶೈಕ್ಷಣಿಕ ಮಂದಿರವಿದು.

ಕೊಲ್ಕತ್ತಾ ಈಗ ತುಂಬಾ ಬದಲಾದರೂ ತನ್ನ ಐತಿಹಾಸಿಕ ಮೌಲ್ಯ ಉಳಿಸಿಕೊಂಡಿದೆ. ಇವರ ಇತಿಹಾಸ ಪ್ರಜ್ಞೆ ಅನುಕರಣೀಯ, ಇದನ್ನು ನಾನು ಇಂಗ್ಲೆಂಡ್ ಭೇಟಿಯ ಸಂದರ್ಭದಲ್ಲಿ ಗಮನಿಸಿದ್ದೆ, ಅದಾದ ಬಳಿಕ ಆ ಐತಿಹಾಸಿಕ ಮಹತ್ವವನ್ನು ಇಲ್ಲಿ ಮಾತ್ರ ಕಾಣಲು ಸಾಧ್ಯ. ಟ್ಯಾಗೋರ್ ಅವರ ಮನೆ ನೋಡುವಾಗ ಇಡೀ ಇತಿಹಾಸ ಮರುಕಳಿಸಿತು. ಎಷ್ಟೇ ಸಾಧನೆ ಮಾಡಿದ್ದರು, ಜನ ಬೇಗ ಮರೆತು ಬಿಡುತ್ತಾರೆ. ಆದರೆ ಸ್ಮಾರಕಗಳು ಮತ್ತು ಮ್ಯೂಸಿಯಂಗಳು ಇತಿಹಾಸವನ್ನು ಕಟ್ಟಿಕೊಡಲು ಯಶಸ್ವಿಯಾಗುತ್ತವೆ.

ಬೇಲೂರು ಮಠದ ಮ್ಯೂಸಿಯಂ ಮೂಲಕ ರಾಮಕೃಷ್ಣ ಪರಮಹಂಸ, ಮಾತೆ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಅಪರೂಪದ ಇತಿಹಾಸವನ್ನು ಪುನರ್ ನಿರ್ಮಾಣ ಮಾಡಿದ್ದಾರೆ. ಇದು ಬೆಂಗಾಲಿಗಳ ಇತಿಹಾಸ ಪ್ರಜ್ಞೆಯ ಪ್ರತೀಕ. ವಿಕ್ಟೋರಿಯಾ ಮ್ಯೂಸಿಯಂ ಈಗ ಹೊಸ ಸ್ವರೂಪ ಪಡೆದಿದೆ. ಆಂಗ್ಲರ ಭಾರತದ ಮೇಲಿನ ವ್ಯಾಮೋಹಕ್ಕೆ ಅವರು ನಿರ್ಮಿಸಿದ ಅನೇಕ ಭವ್ಯ ಕಟ್ಟಡಗಳೇ ಸಾಕ್ಷಿ. ಹೌರಾ ಬ್ರಿಡ್ಜ್ ಮತ್ತು ವಿಕ್ಟೋರಿಯಾ ಮ್ಯೂಸಿಯಂ ಸಾಂಕೇತಿಕ ಉದಾಹರಣೆಗಳು.

ನಮ್ಮ ರಾಜ್ಯದ ಸಾಂಸ್ಕೃತಿಕ ಹಿರಿಮೆಯನ್ನು ಕಾಪಾಡಲು ನಾವು ವಿಫಲರಾಗಿದ್ದೇವೆ ಎಂಬ ನೋವು ಕಾಡಿದ್ದು ಸಹಜ. ಕನ್ನಡದ ಬರಹಗಾರರು ಮತ್ತು ಸಾಹಿತ್ಯಾಸಕ್ತರು ಕೊಲ್ಕತ್ತಾಗೆ ಭೇಟಿ ನೀಡಿ ಕನ್ನಡದ ಅಸ್ಮಿತೆಗೊಂದು ಆಯಾಮ ನೀಡಬೇಕು. ವಿಶ್ವವಿದ್ಯಾಲಯಗಳೆಂದರೆ ಕೇವಲ ಭವ್ಯ ಕಟ್ಟಡಗಳಲ್ಲ ಎಂಬುದನ್ನು ನಮ್ಮ ಕುಲಪತಿಗಳು, ಶಿಕ್ಷಣ ತಜ್ಞರು ಅರಿಯುವ ಅಗತ್ಯ ಈಗ ತುಂಬಾ ಇದೆ.‌

ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಮರು ವ್ಯಾಖ್ಯಾನವಾದಾಗ ಬದಲಾವಣೆ ಸಾಧ್ಯ. ಹೊಸ ಹೊಸ ಶೈಕ್ಷಣಿಕ ನೀತಿಗಳು ಯುವಕರ ಜ್ಞಾನ ಹೆಚ್ಚಿಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂಬ ಭಾವನೆ ಸ್ಥಾಯಿ ರೂಪ ಪಡೆಯಿತು.

ಮೈ ಬೆವರು, ಉರಿಬಿಸಿಲು ಮತ್ತು ಆಹಾರದ ರುಚಿಯನ್ನು ಲೆಕ್ಕಿಸದೆ ನಾಲ್ಕಾರು ದಿನ ಸುತ್ತಾಡಿ ಜ್ಞಾನದ ಹಸಿವನ್ನು ನೀಗಿಸಿಕೊಂಡ ಸಾರ್ಥಕ ಭಾವ. ಇಲ್ಲಿ ಸುತ್ತಾಡುವ ಹೊತ್ತಿನಲ್ಲಿ ಅನೇಕ ‘ಸಾಹಿತ್ಯ ಸಂಗಾತಿಗಳು’ ನೆನಪಾದದ್ದು ಸಹಜ. ಇಂತಹ ಅಪರೂಪದ ತಿರುಗಾಡಕ್ಕೆ ಕಾರಣರಾದ ಪ್ರೊ.ಎಸ್.ಜ್ಯೋತಿ, ಸಂಗಾತಿ ರೇಖಾ ಮತ್ತು ಪ್ರೊ.ವೆಂಕಟೇಶ ಹೊನ್ಗೈ ಅವರಿಗೆ ಕೃತಜ್ಞತೆಗಳು.‌

‍ಲೇಖಕರು Admin

May 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: