ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಆಕಾಶವಾಣಿಯಲ್ಲಿ ಶ್ರೀಕಂಠನ್…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

9

‘ನಾನು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆದ ಅನಿರೀಕ್ಷಿತ ಪರಿಚಯಗಳಲ್ಲಿ, ನನಗೆ ತುಂಬ ಆಪ್ತವಾಗಿರುವ ಪರಿಚಯ ಶ್ರೀಕಂಠನ್ ರವರದು ಮತ್ತು ಹಲವು ಸಂಗೀತ ಕಾರ್ಯಕ್ರಮಗಳ ನಿರ್ಮಾಣದ ನಿಮಿತ್ತ ಆದ ಅವರ ಸಂಗೀತಮಯ ವ್ಯಕ್ತಿತ್ವದ್ದು’ ಎಂದು ಜ್ಞಾಪಿಸಿಕೊಳ್ಳುತ್ತಾರೆ ಎಂಬತ್ತರ ದಶಕದಲ್ಲಿರುವ ಗಾಯಕರೂ, ಮೈಸೂರು ವಾಸುದೇವಾಚಾರ್ಯರ ಪೌತ್ರರೂ ಆದ ಎಸ್.ಕೃಷ್ಣಮೂರ್ತಿಯವರು. ಆಕಾಶವಾಣಿಯಲ್ಲಿ ತಾವು ಕಳೆದ ಸುವರ್ಣ ವರ್ಷಗಳನ್ನು ನೆನಪಿಸಿಕೊಳ್ಳುತ್ತ, “ನಮ್ಮ ಸ್ನೇಹ ಅರವತ್ತು ವರ್ಷಗಳಿಗೂ ಹಿಂದಿನದ್ದು ಮತ್ತು ಅದರಲ್ಲಿ ಮೂವತ್ಮೂರು ವರ್ಷಗಳ ಕಾಲ ನಾವು ರೇಡಿಯೋದಲ್ಲಿ ಸಹೋದ್ಯೋಗಿಗಳಾಗಿದ್ದೆವು”ಎಂದು ಎಸ್.ಕೃಷ್ಣಮೂರ್ತಿಯವರು ಆಹ್ಲಾದದಿಂದ ನುಡಿಯುತ್ತಾರೆ.

ಶ್ರೀಕಂಠನ್ ಮೈಸೂರು ಆಕಾಶವಾಣಿಯ ಕಟ್ಟಡವನ್ನು ಪ್ರವೇಶಿಸಿದ ಪ್ರಸಂಗವನ್ನು ಎಸ್.ಕೃಷ್ಣಮೂರ್ತಿಯವರು ಹಾಸಯವಾಗಿ ಸ್ಮರಿಸಿಕೊಳ್ಳುತ್ತಾರೆ- “ಈಗಲೂ ಆ ಚಿತ್ರ ನನ್ನ ಕಣ್ಣಿಗೆ ಕಟ್ಟಿದಂತಿದೆ. ಬಾದಾಮಿ ಕ್ಷೌರ (ಸ್ಥಳೀಯ ಭಾಷೆಯಲ್ಲಿ ಚಿಕ್ಕ ಹೇರ್‌ಕಟ್) ಮಾಡಿಸಿಕೊಂಡು, ತಲೆಯ ಹಿಂಬದಿಯಲ್ಲಿ ನೆಲ್ಲಿ ಗಾತ್ರದ ಜುಟ್ಟು ಬಿಟ್ಟುಕೊಂಡು (ಬ್ರಾಹಣ್ಯದ ಸಂಕೇತ), ೨೭ರ ಹರೆಯದ, ಸಾಂಪ್ರದಾಯಿಕ ವೇಷದ, ಮೆದುಮಾತಿನ ಶ್ರೀಕಂಠನ್ ಶಾಂತರಾಗಿ ಕಂಡುಬ೦ದರೂ, ಈ ಹೊಸ ಕೆಲಸದಲ್ಲಿ ಅಷ್ಟೇನೂ ನಿರಾಳವಾಗಿರಲಿಲ್ಲ. ಲಲಾಟದ ಮೇಲೆ ಶ್ರೀಗಂಧ ಮತ್ತು ಕುಂಕುಮದ ಬೊಟ್ಟು, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿರುತ್ತಿದ್ದ ಅವರು ಸಂಪ್ರದಾಯದ ಪ್ರತಿರೂಪವೆಂಬ೦ತೆ ಕಂಡುಬರುತ್ತಿದ್ದರು. ಅವರ ಆ ಸಾಂಪ್ರದಾಯಿಕ ರೂಪ ಧೋತಿ-ಜುಬ್ಬಾಗಳಿಂದ ಪೂರ್ಣತೆಯನ್ನು ಪಡೆದಿತ್ತು. ಕಂಠದ ರಕ್ಷಣೆಗಾಗಿ ಆವರು ತೊಡುತ್ತಿದ್ದ ಉಣ್ಣೆಯ ಮಫ್ಲರ್ ಮತ್ತು ಕೈಯಲ್ಲಿ ಹಿಡಿದಿರುತ್ತಿದ್ದ ಕೊಡೆ, ಅವರ ಸರ್ವಕಾಲದ ಸಂಪತ್ತಾಗಿತ್ತು.”

ಮೈಸೂರು ಆಕಾಶವಾಣಿಯ ನಿಲಯದ ನಿರ್ದೇಶಕರಾಗಿದ್ದ ಎ.ಎಂ.ನಟೇಶ್ ರವರು ಈ ಯುವಕನಿಗೆ ತನ್ನ ‘ಸಾಂಪ್ರದಾಯಿಕ ಆಸ್ತಿ’ಗಳನ್ನು ಮನೆಯಲ್ಲೇ ಬಿಟ್ಟುಬರುವಂತೆ ಹೇಳಲೇಬೇಕಾಗಿ ಬಂತು. ಇಲ್ಲದಿದ್ದರೆ, ಯುವಕ ಶ್ರೀಕಂಠನ್ ಧರಿಸುತ್ತಿದ್ದ ಪೋಷಾಕು ಅವರನ್ನು ಒಬ್ಬ ‘ಮಡಿವಂತ’ನೆ೦ದು ಸಾಬೀತುಪಡಿಸಿಬಿಡುತ್ತಿತ್ತು. ನಟೇಶ್ ಪದೇಪದೇ ಮಾತಿನಲ್ಲೇ ಮೃದುವಾಗಿ ತಿವಿಯುತ್ತಿದ್ದರು- “ನೀವೊಬ್ಬ ಬಿ.ಎ.ಪದವೀಧರ ಮತ್ತು ನೀವೀಗ ರೇಡಿಯೋ ಮಾಧ್ಯಮದಲ್ಲಿ ಕೆಲಸ ಮಾಡಬೇಕಾಗಿದೆ” ಎಂದು. ತನ್ನ ಮೇಲಧಿಕಾರಿಯನ್ನು ಎದುರು ಹಾಕಿಕೊಳ್ಳಲು ಶ್ರೀಕಂಠನ್‌ಗೆ ಇಷ್ಟವಿಲ್ಲದಿದ್ದರೂ, ಅವರು ಈ ಮಾತುಗಳನ್ನು ಕೇಳಿ ಹತಾಶರಾದರು ಎನ್ನುವುದು ನಮಗೆ ಗೊತ್ತು! “ತಮ್ಮ ವೇಷಭೂಷಣಗಳಲ್ಲಿ ಮಾರ್ಪಾಡು ತಂದುಕೊಳ್ಳಲು ಶ್ರೀಕಂಠನ್ ರವರಿಗೆ ನಿಜವಾಗಿಯೂ ಕೆಲವೇ ದಿನಗಳು ಸಾಕಾದವು! ಅವರ ಸಾಂಪ್ರದಾಯಿಕ ರೂಪದಿಂದ ಮೊದಲು ಕಣ್ಮರೆಯಾದದ್ದು ಅವರ ಶಿಖೆ! ಇದರಿಂದ ಅವರಿಗೆ ಏನನ್ನೋ ಕಳೆದುಕೊಂಡ ಭಾವನೆ ಎಷ್ಟು ಗಾಢವಾಗಿತ್ತು ಎನ್ನುವುದು ಸ್ಪಷ್ಟವಾಗಿ ನಮಗೆ ಗೋಚರಿಸುತ್ತಿತ್ತು. ಈ ಕುರಿತು ನಾವು ಅವರನ್ನು ರೇಗಿಸುತ್ತ ಸದಾ ಗೋಳುಹೊಯ್ದುಕೊಳ್ಳುತ್ತಿದ್ದೆವು.

ಆ ಸಂದರ್ಭದಲ್ಲಿ ಕೃಷ್ಣಮೂರ್ತಿಗಳು, “ಶ್ರೀಕಂಠ, ನಿನ್ನ ಜುಟ್ಟು ಇನ್ನೊಬ್ಬರ ಕೈಲಿಲ್ಲ ಇನ್ಮೇಲೆ!” ಎಂದು ಹಾಸ್ಯ ಮಾಡಿದ್ದರು! ಈ ಎಲ್ಲ ಕುಚೇಷ್ಟೆಯ ವಿವರಗಳನ್ನೂ ಈ ಆಕಾಶವಾಣಿಯ ವ್ಯಕ್ತಿ ಸ್ವಾರಸ್ಯವಾಗಿ ಕನ್ನಡದಲ್ಲಿ ಜ್ಞಾಪಿಸಿಕೊಂಡರು! “ಆದರೆ ನಮಗೆ ತಿಳಿದಿರುವಂತೆ, ಶ್ರೀಕಂಠನ್ ರವರ ಅಣ್ಣಂದಿರಿಗೆ ತಮ್ಮ ಕಿರಿಯ ಸೋದರ ಹೀಗೆ ಚಂಡೀಶೀಖೆಯಿಲ್ಲದೆ ಇರುವುದನ್ನು ನೋಡಿ ಆಘಾತ ಉಂಟಾಯಿತು. ಅವರು ಕೆಲದಿನಗಳ ಕಾಲ ತಮ್ಮನೊಡನೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು.” ಎಂದು ಎಸ್.ಕೃಷ್ಣಮೂರ್ತಿಯವರು ಸಂಪ್ರದಾಯದೊಡನೆ ಆ ಮನೆತನಕ್ಕಿದ್ದ ಗಾಢನಂಟನ್ನು ಜ್ಞಾಪಿಸಿಕೊಳ್ಳುತ್ತಾರೆ. ಹಾಗೆ ನೋಡಿದರೆ, ಈ ಸೋದರರಲ್ಲೆಲ್ಲ ಅತ್ಯಂತ ಹಿರಿಯರಾದ ವೆಂಕಟರಾಮಾ ಶಾಸ್ತ್ರೀಗಳು ೧೯೬೪ರಲ್ಲಿ ವಿಶ್ವಸಂಸ್ಥೆಯಲ್ಲಿ (ನ್ಯೂಯಾರ್ಕ್ನಲ್ಲಿ ಶ್ರೀ ಯು ಥಾಂಟ್ ಸೆಕ್ರೆಟರಿ ಜನರಲ್ ಆಗಿದ್ದ ಕಾಲದಲ್ಲಿ) ಎಂ.ಎಸ್.ಸುಬ್ಬುಲಕ್ಷ್ಮೀಯವರೊಡನೆ ಪಿಟೀಲಿನಲ್ಲಿ ಪಕ್ಕವಾದ್ಯ ನುಡಿಸಲು ನಿರಾಕರಿಸಿದ್ದೂ, ಸಂಪ್ರದಾಯ ಸಮುದ್ರೋಲ್ಲಂಘನ ಮಾಡುವುದನ್ನು ನಿಷೇಧಿಸಿದ್ದರಿಂದ ತಾನೆ!

“ನಮ್ಮ ದೊಡ್ಡಪ್ಪ ಜೀವನದಲ್ಲಿ ಒಂದು ದಿನವೂ ಸಂಧ್ಯಾವ೦ದನೆಯನ್ನು ತಪ್ಪಿಸಿದವರಲ್ಲ. ಪ್ರಯಾಣ ಮಾಡುವಾಗಲೂ ಅವರು ರೈಲ್ವೆ ಪ್ಲಾಟ್‌ಫಾರಮ್ ಮೇಲೆ ಕುಳಿತು ತಮ್ಮ ಕರ್ತವ್ಯವನ್ನು ನೆರವೇರಿಸುತ್ತಿದ್ದರು” ಎನ್ನುತ್ತಾರೆ, ಅವರ ಬಳಿಯೂ ಕೆಲಕಾಲ ಸಂಗೀತಶಿಕ್ಷಣ ಪಡೆದಿದ್ದ ಶ್ರೀಕಂಠನ್ ರವರ ಪುತ್ರ ರಮಾಕಾಂತ್.
ಬಾಹ್ಯದಲ್ಲಿ ಶಾಂತರಾಗಿ ಕಾಣುತ್ತಿದ್ದ ಶ್ರೀಕಂಠನ್ ಆಂತರ್ಯದಲ್ಲಿ ಅತ್ಯಂತ ದೃಢನಿಶ್ಚಯವುಳ್ಳವರಾಗಿದ್ದರು. ಬಾಹ್ಯಪ್ರಪಂಚದಲ್ಲಿನ ಬದಲಾವಣೆಗಳು ಅವರ ಗಮನವನ್ನು ಸೆಳೆಯಲು ಅತ್ಯಂತ ಕ್ಷುಲ್ಲಕವಾಗಿದ್ದವು. ತಾವು ಅನುಸರಿಸಬೇಕಾದ ಗುರಿಯ ಬಗ್ಗೆ ಅವರಿಗೆ ಸ್ಪಷ್ಟತೆ ಇತ್ತು. ‘ಆತ್ಯಂತಿಕ ತೃಪ್ತಿಗಾಗಿ ಕೇವಲ ಸಂಗೀತ; ನನ್ನ ಜೀವ ಮತ್ತು ಆತ್ಮಗಳು ನಾದಕ್ಕಾಗಿ ಹಂಬಲಿಸುತ್ತವೆ’ ಎನ್ನುವಷ್ಟರ ಚೌಕಟ್ಟಿನಲ್ಲಿ ಶ್ರೀಕಂಠನ್ ಕೆಲಸ ಮಾಡಿದರು” ಎನ್ನುತ್ತಾರೆ ಕೃಷ್ಣಮೂರ್ತಿಯವರು.

“ಈ ಯುವಕನ ಆಂತರ್ಯದಲ್ಲಿ ತಾನಾಗಿ ನೆಲೆಗೊಂಡಿದ್ದ ದೃಢ ನಿರ್ಧಾರ ಮತ್ತು ಧ್ಯೇಯಗಳು ಒಂದು ರೀತಿಯಲ್ಲಿ ಗತಿಶೀಲವಾಗಿದ್ದವು; ತಮ್ಮ ಸೃಜನಶೀಲ ಸ್ವಭಾವಕ್ಕೆ ಅವರು ರೇಡಿಯೋ ಕಾರ್ಯಕ್ರಮಗಳ ನಿರ್ಮಾಣದಲ್ಲಿ ಮಾಡಿದ ಕೆಲಸವೇ ಸಾಕ್ಷಿ” ಎನ್ನುವುದು ಕೃಷ್ಣಮೂರ್ತಿಯವರ ಹೇಳಿಕೆ.

“ಶ್ರುತಿಶುದ್ಧವಾಗಿ ಹಾಡುವುದು ಕಠಿಣ; ಆದರೆ ಒಬ್ಬ ಶ್ರುತಿಕಾರನಿಗೆ ಶ್ರುತಿ ಬಿಟ್ಟು ಹಾಡುವುದು ಕಠಿಣತರ” ಎಂಬುದನ್ನು ಶ್ರೀಕಂಠನ್ ಧಾರವಾಡದಲ್ಲಿ ಕೃಷ್ಣಮೂರ್ತಿಯವರು ಮಾಡಿದ ರೇಡಿಯೋ ಕಾರ್ಯಕ್ರಮ ನಿರ್ಮಾಣವೊಂದರಲ್ಲಿ ಸಾಬೀತುಪಡಿಸಿದರು. ‘ಸಂಗಮ’ ಎನ್ನುವ ಗೀತನಾಟಕದಲ್ಲಿ ಸರ್ವಭಕ್ಷಕವೂ ಸಂವೇದನಾಶೂನ್ಯವೂ ಆದ ಸ್ವಾರ್ಥ ಸ್ವಭಾವದ ನಾಯಕ ತನ್ನ ಕಂಠವನ್ನು ಕಳೆದುಕೊಳ್ಳುತ್ತಾನೆ. ತನಗೆ ಈ ಸತ್ಯ ಗೊತ್ತಾದಾಗ ಅವನು ವಾಸ್ತವವನ್ನು ಒಪ್ಪಿಕೊಳ್ಳುತ್ತಾನೆ.

ಈ ನಾಟಕಕ್ಕಾಗಿ ಶ್ರೀಕಂಠನ್ ರವರಿಗೆ ಅಪಸ್ವರ ಹೊರಡಿಸುವ ತರಬೇತಿಯನ್ನು ನೀಡುವ ಹೊತ್ತಿಗೆ ಕೃಷ್ಣಮೂರ್ತಿಯವರಿಗೆ ಸಾಕುಬೇಕಾಯಿತು!

ಶ್ರೀಕಂಠನ್ ಒಬ್ಬ ಒಳ್ಳೆಯ ಸಂಗೀತಗಾರರು ಎನ್ನುವುದು ನಿಜವೇ. ಆದರೆ ಎಂದಿಗೂ ಕೈಕೊಡದ ಮತ್ತು ಶ್ರುತಿಲೀನವಾಗಿ ಝೇಂಕರಿಸುವ ದನಿಯನ್ನು ಹೊಂದಿರುವುದು ಒಂದು ಅಸಾಧಾರಣ ಸೌಭಾಗ್ಯ. “ಹಲವು ದಶಕಗಳಿಂದ ಅವರ ಕಂಠ ಹಾಗೇ ಇದೆ.ಅದಕ್ಕೆ ಅವರ ಶಿಸ್ತು ಮತ್ತು ಧ್ವನಿಸಂಸ್ಕರಣೆಯೇ ಕಾರಣ” ಎನ್ನುವುದು ಕೃಷ್ಣಮೂರ್ತಿಯವರ ಅಭಿಮತ. ತಮ್ಮ ಸಂತಸವನ್ನು ಇನ್ನಷ್ಟು ನಿಚ್ಚಳವಾಗಿ ವ್ಯಕ್ತಪಡಿಸುತ್ತ ಅವರು ಹೇಳುತ್ತಾರೆ, “೧೯೫೦ ಮತ್ತು ೧೯೭೭೦ರ ದಶಕಗಳಲ್ಲಿ ಆಕಾಶವಾಣಿಯಲ್ಲಿದ್ದ ನಾವು ನಾಲ್ಕು ಜನ – ಸೆಲ್ವಪಿಳ್ಳೆö ಅಯ್ಯಂಗಾರ್, ಶ್ರೀಕಂಠನ್, ವೀಣೆ ದೊರೆಸ್ವಾಮಿ ಅಯ್ಯಂಗಾರ್ ಮತ್ತು ನಾನು ಅತ್ಯಂತ ಆಪ್ತರಾಗಿದ್ದೆವು. ದೊರೆಸ್ವಾಮಿ ಅಯ್ಯಂಗಾರ್ ಮತ್ತು ನಾನು ತಿಂಗಳಿಗೊಮ್ಮೆ ಪ್ರಸಾರವಾಗುವ ‘ಸಂಗೀತ ಸಾಮ್ರಾಜ್ಯ’ ಎನ್ನುವ ಕಾರ್ಯಕ್ರಮವನ್ನು ರೂಪಿಸಿದೆವು.

ಮುಂದೆ ಅತ್ಯಂತ ಜನಪ್ರಿಯವಾದ ಈ ಕಾರ್ಯಕ್ರಮಕ್ಕಾಗಿ ಅಪರೂಪದ ರಾಗಗಳಲ್ಲಿ ಮತ್ತು ಕ್ಲಿಷ್ಟ ತಾಳಗಳಲ್ಲಿರುವ ಅಪ್ರಚಲಿತ ಕೃತಿಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದೆವು. ಸೆಲ್ವಪಿಳ್ಳೆö ಅಯ್ಯಂಗಾರ್ (ಮೇಲುಕೋಟೆಯವರು) ಮತ್ತು ಶ್ರೀಕಂಠನ್ (ರುದ್ರಪಟ್ಣದವರು) ಅವರಿಬ್ಬರೂ ದ್ವಂದ್ವಗಾಯನದಲ್ಲಿ ಈ ಕೃತಿಗಳನ್ನು ಪ್ರಸ್ತುತಪಡಿಸಬೇಕೆಂಬುದು ನಮ್ಮ ಬಯಕೆ. ನಾವು ತಮಾಷೆಯಾಗಿ ಅವರಿಬ್ಬರಿಗೂ ‘ರುದ್ರಕೋಟೆ’ ಸಹೋದರರು ಎಂದು ನಾಮಕರಣವನ್ನೂ ಮಾಡಿದೆವು! ಈ ರುದ್ರ-ಕೋಟೆ ಸಹೋದರರು ಹಾಡಿದ ಮಹಾವೈದ್ಯನಾಥ ಅಯ್ಯರ್ ಅವರ ‘ಮೇಳರಾಗಮಾಲಿಕೆ’ ಅಥವಾ ನವರಾತ್ರಿಗೆ ವಿಶಿಷ್ಟವಾದ ‘ನವಾವರಣ ಕೃತಿ’ಗಳಂಥ ಅಪರೂಪದ ರಸಗಟ್ಟಿಗಳು ಜನಮನವನ್ನು ಸಂಪೂರ್ಣವಾಗಿ ಸೂರೆಗೊಂಡವು!”ಎ೦ದು.

ಇನ್ನಷ್ಟು ಸ್ವಾರಸ್ಯವನ್ನು ತೆರೆದಿಡುತ್ತ ಕೃಷ್ಣಮೂರ್ತಿಯವರು ಹೇಳುತ್ತಾರೆ, “ಈ ಕಾರ್ಯಕ್ರಮದಲ್ಲಿ ಅತ್ಯಪರೂಪದ ಕೃತಿಗಳನ್ನು ಆಲಿಸಬಹುದಾಗಿದ್ದು, ಅವರಿಬ್ಬರ ಶಾರೀರಗಳ ಹೊಂದಾಣಿಕೆಯೂ ಕೂಡ ಅದ್ಭುತವಾಗಿದ್ದುದರಿಂದ ‘ಸಂಗೀತ ಸಾಮ್ರಾಜ್ಯ’ ಜನರನ್ನು ಹುಚ್ಚೆಬ್ಬಿಸಿತು. ಅವೆಲ್ಲ ತುಂಬ ಸಂತೋಷದ ದಿನಗಳು. ಇಂಥ ಪ್ರಯೋಗಗಳನ್ನೆಲ್ಲ ಮಾಡುವಂತೆ ನಾವು ನಮ್ಮ ಗೆಳೆಯರನ್ನು ಒತ್ತಾಯಪಡಿಸಬಹುದಾಗಿತ್ತು ಮತ್ತು ನಮಗೂ ಕೂಡ ಇದೊಂದು ಸವಾಲಾಗಿತ್ತು” ಎಂದು. “ಆ ದಿನಗಳಲ್ಲಿ ನೂತನ ಕೃತಿಗಳು ಅಷ್ಟು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಆದ್ದರಿಂದ ರೇಡಿಯೋನಲ್ಲಿ ನಡೆದ ಇಂಥ ಪ್ರಯೋಗಗಳು ಸಾವಿರಾರು ಜನರನ್ನು ಆಕರ್ಷಿಸಿದವು. ಇಂಥ ಕಾರ್ಯಕ್ರಮಗಳು ಸಂಗ್ರಹಕಾರರಿಗೂ ಸಂತಸವನ್ನಿತ್ತವು.

ನ೦ತರ ಅತ್ಯಂತ ಯಶಸ್ವಿಯಾಗಿ ಬಿತ್ತರಗೊಂಡ ಶ್ರೀಕಂಠನ್ ರವರ ‘ಗಾನವಿಹಾರ’ ಕಾರ್ಯಕ್ರಮ ಅವರಿಗೆ ಸಾವಿರಾರು ‘ಆಕಾಶವಾಣಿ’ ಶಿಷ್ಯರನ್ನು, ಅನುಯಾಯಿಗಳನ್ನು ಸಂಪಾದಿಸಿಕೊಟ್ಟಿತು. ರೇಡಿಯೋದಲ್ಲಿ ಸಂಗೀತಪಾಠ ಹೇಳಿಕೊಡುವ ಮೂಲಕ ಶ್ರೀಕಂಠನ್ ಸಂಗೀತ ಪ್ರಪಂಚಕ್ಕೆ ಮಹತ್ತರ ಸೇವೆ ಸಲ್ಲಿಸಿದರು. ಈ ಕಾರ್ಯಕ್ರಮ ಜನಪ್ರಿಯವೂ, ಆಹ್ಲಾದಕರವೂ, ವಿಷಯದ ಆಗರವೂ ಆಗಿದ್ದುದರಿಂದ ಪ್ರತಿಯೊಂದು ಸಂಚಿಕೆಯೂ ಜಯಭೇರಿ ಬಾರಿಸಿತು. ಶ್ರೀಕಂಠನ್ ರವರಿಂದ ನೇರವಾಗಿ ಸಂಗೀತ ಕಲಿಯಲು ನೂರಾರು ಜನ ಮನೆಗಳಲ್ಲಿ ವ್ರತ ತೊಟ್ಟವರಂತೆ ರೇಡಿಯೋದ ಮುಂದೆ ಕುಳಿತುಕೊಳ್ಳುತ್ತಿದ್ದರು.

ಈ ಕಾರ್ಯಕ್ರಮ ಎಷ್ಟು ಜನಪ್ರಿಯವಾಯಿತೆಂದರೆ, ಪ್ರತಿ ವಾರ ವಿಶೇಷ ಸೋದಾಹರಣ ಕಾರ್ಯಕ್ರಮಗಳನ್ನು ನಡೆಸಿಕೊಡುವಂತೆ ಶ್ರೀಕಂಠನ್ ರವರತ್ತ ಮನವಿಗಳ ಮಹಾಪೂರವೇ ಹರಿದುಬರುತ್ತಿತ್ತು. ಈ ಕಾಲಘಟ್ಟದಲ್ಲಿ ದಕ್ಷಿಣಾತ್ಯ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದ ಸಂಗೀತ ಲೋಕದಲ್ಲಿ ಶ್ರೀಕಂಠನ್ ರವರ ಹೆಸರು ಮನೆಮಾತಾಯಿತು. ಎ.ಐ.ಆರ್ ನಿಂದ ಪ್ರತಿ ದಿನ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಭಕ್ತಿಸಂಗೀತದ ಕಾರ್ಯಕ್ರಮ ‘ಗೀತಾರಾಧನ’ ಶ್ರೀಕಂಠನ್ ರವರ ಮತ್ತೊಂದು ಕೊಡುಗೆ. ಕೃಷ್ಣಮೂರ್ತಿಯವರು ಹೇಳುತ್ತಾರೆ, “ನಾಡಿನ ಜನತೆ ಇಂಥ ‘ಸುಪ್ರಭಾತ’ವನ್ನು ಭಕ್ತಿರಸದಲ್ಲಿ ಸ್ವೀಕರಿಸುತ್ತಿದ್ದರು” ಎಂದು.

ಗಾನವಿಹಾರ ಕಾರ್ಯಕ್ರಮ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಪ್ರಸಾರವಾಗುತ್ತಿದ್ದುದರಿಂದ ಶ್ರೀಕಂಠನ್ ರವರಿಗೆ ನೂರಾರು ಜನ ‘ಆಕಾಶವಾಣಿ’ ವಿದ್ಯಾರ್ಥಿಗಳು ದೊರೆತರು. ಆದರೆ ಅವರಿಗೆ ತಮ್ಮ ರೇಡಿಯೋ ತರಗತಿಗಳ ಮಹತ್ವದ ಅರಿವಾಗಲು ಪ್ರಾರಂಭವಾದದ್ದು ಸಂಗೀತ ಕಛೇರಿಗಳಿಗೆಂದು ಅವರು ದಕ್ಷಿಣ ಭಾರತದ ಮೂಲೆಮೂಲೆಗಳಿಗೆ ಭೇಟಿ ನೀಡಿದಾಗಲೇ. ರಮಾಕಾಂತ್ ಹೇಳುತ್ತಾರೆ- “ನಾವು ಸೇಲಂ, ಈರೋಡು, ತಂಜಾವೂರು, ಹೈದರಾಬಾದ್, ವಿಶಾಖಪಟ್ಣಂ, ಕಾಕಿನಾಡ, ತಿರುವನಂತಪುರ, ಕೊಚಿನ್, ಮೈಸೂರು, ಮಂಗಳೂರು ಮತ್ತಿತರ ಸ್ಥಳಗಳಿಗೆ ಹೋದಾಗ, ಕಛೇರಿಗಳು ಮುಗಿದ ನಂತರ ಅಸಂಖ್ಯ ರಸಿಕರು ನಮ್ಮ ತಂದೆಯವರ ಬಳಿಗೆ ಬಂದು, “ನಾನು ನಿಮ್ಮ ಶಿಷ್ಯ; ನೀವು ಪಾಠ ಹೇಳಿಕೊಡುವ ರೀತಿ ನನಗೆ ಬಹಳ ಮೆಚ್ಚಿಕೆಯಾಗಿದೆ” ಎನ್ನುತ್ತಿದ್ದರು. ಅವರು ‘ನಾನು ನಿಮ್ಮ ಶಿಷ್ಯ’ ಎನ್ನುವುದನ್ನು ಕೇಳಿ ನಮ್ಮ ತಂದೆಯವರಿಗೆ ಆಶ್ಚರ್ಯವಾಗುತ್ತಿತ್ತು. ಅದನ್ನು ನೋಡಿ ಆ ಜನ ಕೂಡಲೇ ನುಡಿಯುತ್ತಿದ್ದರು- “ನಾವು ನಿಮ್ಮ ಗಾನವಿಹಾರ ಕಾರ್ಯಕ್ರಮವನ್ನು ಕೇಳಿ ಸಂಗೀತ ಕಲಿತುಕೊಳ್ಳುತ್ತೇವೆ!” ಎಂದು.

ಈ ವೇಳೆಗೆ ಶ್ರೀಕಂಠನ್ ರವರು ವೇದಿಕೆಯ ಮೇಲೆ ಯಾವುದೇ ಅವಿವೇಕವನ್ನು ಸಹಿಸದ ಸಂಗೀತ ವಿದ್ವಾಂಸರಾಗುವುದರ ಜೊತೆಗೆ ಓರ್ವ ಅತ್ಯುತ್ತಮ ಗುರುವಾಗಿಯೂ ಪ್ರತಿಷ್ಠಿತರಾಗಿದ್ದರು. ಕ್ರಮಶಃ ಓರ್ವ ಕಲಾವಿದರಾಗಿ ಮತ್ತು ಸಂಗೀತಜ್ಞ ಗುರುವಾಗಿ ಅವರ ಸಾಮರ್ಥ್ಯ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿತು. ಅವರು ಆಕಾಶವಾಣಿಯಲ್ಲಿ ಎ-ಟಾಪ್ ಕಲಾವಿದರಾಗಿದ್ದುದಲ್ಲದೆ, ಸುಪ್ರಸಿದ್ಧ ಸಂಗೀತೋತ್ಸವಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಲು ಸದಾ ಸಂಚಾರದಲ್ಲಿರುತ್ತಿದ್ದರು.

ನವದೆಹಲಿಯ ಆಲ್ ಇಂಡಿಯಾ ರೇಡಿಯೋ ‘ಸಂಗೀತಕ್ಕೆ ಕನ್ನಡನಾಡಿನ ಕೊಡುಗೆ’ ಎನ್ನುವ ವಿಷಯದ ಕುರಿತು ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲು ಬಯಸಿದಾಗ, ೩೫ ಸದಸ್ಯರ ತಂಡವನ್ನು ದೆಹಲಿಗೆ ಕರೆದೊಯ್ದು, ಅಲ್ಲಿನ ಆಹ್ವಾನಿತ ಶ್ರೋತೃಗಳಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದ್ದು ಬೆಂಗಳೂರು ಆಕಾಶವಾಣಿ ನಿಲಯದ ನಿರ್ದೇಶಕರಾಗಿದ್ದ ಕೃಷ್ಣಮೂರ್ತಿಯವರು ಮತ್ತು ಅನನುಕರಣೀಯ ಶ್ರೀಕಂಠನ್ ರವರೇ!

ಸಾಮಾನ್ಯವಾಗಿ ಕೃಷ್ಣಮೂರ್ತಿಯವರು ಶ್ರೀಕಂಠನ್ ರವರ ಎಲ್ಲ ಕಛೇರಿಗಳಿಗೂ ಬರುತ್ತಿದ್ದರು.ಬೆಂಗಳೂರಿನಲ್ಲಿ ಇಂಥ ಒಂದು ಕಛೇರಿಯಲ್ಲಿ ಅದ್ಭುತವಾದ ಬೇಗಡೆ ರಾಗಾಲಾಪನೆ ಮತ್ತು ಅದರಷ್ಟೇ ಹಿತವಾಗಿ ಮಿಡಿದ ಪಲ್ಲವಿಯ ನಂತರ, ಶ್ರೀಕಂಠನ್ ರವರ ಪತ್ನಿ ಮೈತ್ರೇಯಿಯವರು ಮುಂದಿನ ಸಾಲಿನಲ್ಲಿ ಕುಳಿತು ಸಂಗೀತವನ್ನು ಆಸ್ವಾದಿಸುತ್ತಿದ್ದುದನ್ನು ಕೃಷ್ಣಮೂರ್ತಿಯವರು ಕಂಡರು. ಕಛೇರಿ ಮುಗಿದ ನಂತರ ಅವರು ಮೈತ್ರೇಯಿಯವರನ್ನು ಕೇಳಿದರು- “ಇವತ್ತು ಸರ್ ಇಷ್ಟು ಅಮೋಘವಾಗಿ ಹಾಡಿದರಲ್ಲ, ಇಂದು ನಿಮ್ಮ ಅಡಿಗೆಯಲ್ಲಿ ಅಂಥ ವಿಶೇಷವೇನಿತ್ತು? ದಿನದಿಂದ ದಿನಕ್ಕೆ ಅವರ ಗಾಯನದ ಗುಣಮಟ್ಟ ಇನ್ನಷ್ಟು ಮತ್ತಷ್ಟು ವರ್ಧಿಸುತ್ತಲೇ ಇದೆ” ಎಂದು.

ಮೈತ್ರೇಯಿಯವರಿಂದ ಉತ್ತರ ತಟ್ಟನೆ ಹೊಮ್ಮಿತು- “ವಿಶೇಷವೇನೂ ಇಲ್ಲ. ಅವರು ಇವತ್ತು ಅನ್ನ, ಸಾರು ಮತ್ತು ಹಾಗಲಕಾಯಿ ಗೊಜ್ಜು ಊಟ ಮಾಡಿದರು” ಎಂದು. ಕೃಷ್ಣಮೂರ್ತಿಯವರು ಅಚ್ಚರಿ ಪಡುವಂತೆ, ಶ್ರೀಕಂಠನ್ ರವರು ಹಿಂದೆಯೂ ಹಲವಾರು ಸಾರಿ ಇದೇ ಖಾದ್ಯಪಟ್ಟಿಯನ್ನು ಅವರ ಮುಂದಿಟ್ಟಿದ್ದರು.

ಈಗ ಕೃಷ್ಣಮೂರ್ತಿಯವರು ಮೈತ್ರೇಯಿ ಅವರಿಗೆ ಹೇಳಿದರು- “ನಿಮ್ಮ ಪತಿ ಸ್ವತಃ ಕಹಿಯುಂಡು ಇತರರಿಗೆ ಅಮೃತವನ್ನು ನೀಡುತ್ತಾರೆ ಎನ್ನುವ ವಿಷಯವನ್ನು ಯಾರೂ ಅಲ್ಲಗಳೆಯಲಾರರು” ಎಂದು. ಅದಕ್ಕೆ ಆ ನಿಷ್ಠಾವಂತ ಸತಿ ಹೇಳಿದ್ದು ಇದು- “ಶುದ್ಧ ತುಪ್ಪ ಹಾಕಿದ ಬಿಸಿಸಾರು ಅವರಿಗೆ ಬಹಳ ಪ್ರಿಯ. ಅದು ತಮ್ಮ ಕಂಠಕ್ಕೆ ಹಿತವೆನಿಸುತ್ತದೆ ಮಾತ್ರವಲ್ಲ, ಶಾರೀರವನ್ನು ಮೃದುಗೊಳಿಸುತ್ತದೆ ಎನ್ನುತ್ತಾರೆ ಅವರು”.

ಶ್ರೀಕಂಠನ್ ರವರ ಸಕಾರಾತ್ಮಕ ಗುಣಗಳಲ್ಲಿ ಇಂಗ್ಲಿಷ್ ಹಾಗೂ ಕನ್ನಡ- ಈ ಎರಡೂ ಭಾಷೆಗಳಲ್ಲಿ ಅವರಿಗಿದ್ದ ನಿರರ್ಗಳತೆಯೂ ಒಂದು ಎನ್ನುವುದು ಕೃಷ್ಣಮೂರ್ತಿಯವರ ಅಭಿಪ್ರಾಯ. ಕ್ರಮವಾಗಿ ವರ್ಧಿಸುತ್ತಿದ್ದ ಅವರ ಸೋದಾಹರಣ ಭಾಷಣಗಳ ಘನತೆ ಎಂಥದ್ದೆ೦ದರೆ, ಅವರ ಕಛೇರಿಗಳು ಸೋದಾಹರಣ-ಭಾಷಣಗಳ ಅಧಿವೇಶನಗಳಾಗಿ ವಿಸ್ತಾರಗೊಳ್ಳುತ್ತಿದ್ದವು. ತುಂಬಿದ ಸಭೆಗಳನ್ನು ಆಕರ್ಷಿಸಿದ ಶ್ರೀಕಂಠನ್ ರವರ ಸೋದಾಹರಣ ಭಾಷಣಗಳ ನೆನಪಿನಲ್ಲಿ ಕೃಷ್ಣಮೂರ್ತಿಯವರು ಹೇಳುತ್ತಾರೆ-“ಸಾಮಾನ್ಯವಾಗಿ ಚೆನ್ನಾಗಿ ಹಾಡುವವರು ಪ್ರಭಾವಶಾಲಿ ವಾಗ್ಮಿಗಳಾಗಿರುವುದಿಲ್ಲ. ಅಂಥವರು ಜನ ಜ್ಞಾನಾರ್ಜನೆ ಮಾಡಲು ಅನುಕೂಲವಾಗುವಂತೆ ತಮ್ಮ ಸಾಂಗೀತಿಕ ಪ್ರಸ್ತುತಿಯನ್ನು ಶಬ್ದಗಳಲ್ಲಿ ಸಮರ್ಥವಾಗಿ ವಿವರಿಸಲಾರರು. ಆದರೆ ಇದಕ್ಕೂ ಶ್ರೀಕಂಠನ್ ಅವರೊಂದು ಅಪವಾದ” ಎಂದು.

ರಾಗಗಳ ತುಲನಾತ್ಮಕ ಚರ್ಚೆ, ಏಕರೂಪದ ಆರೋಹಣ-ಅವರೋಹಣಗಳನ್ನು ಹೊಂದಿಯೂ ತಮ್ಮ ಗುರುತನ್ನು ಸ್ಪಷ್ಟಪಡಿಸಲು ವಿಭಿನ್ನ ಪ್ರಯೋಗಗಳುಳ್ಳ ರಾಗಗಳು, ಮರೆವಿನಾಳಕ್ಕಿಳಿದ ಹಲವು ಸಂತ-ವಾಗ್ಗೇಯಕಾರರ ಕೃತಿಗಳು, ಸಾಧಾರಣ ಗಾಂಧಾರವನ್ನು ಎರವಲು ಪಡೆಯುವ ಹಲವು ರಾಗಗಳು ಇವೇ ಮೊದಲಾದ ನೂರಾರು ವಿಷಯಗಳ ಕುರಿತ ಸೋದಾಹರಣ ಭಾಷಣಗಳು ಮತ್ತು ‘ಅಪರೂಪದ ಆರೋಹಣ-ಅವರೋಹಣಗಳ ರಾಗಗಳಲ್ಲಿ ತ್ರಿಮೂರ್ತಿಗಳ ಕೃತಿಗಳು’ಎನ್ನುವ ಕುರಿತ ಕಾರ್ಯಾಗಾರ ವಿದ್ಯಾರ್ಥಿಗಳ ಮತ್ತು ಕೋರ್ಸ್ಗಳಲ್ಲಿ ಭಾಗವಹಿಸುತ್ತಿದ್ದ ರಸಿಕರ ಪಾಲಿಗೆ ನಿಧಿಯೆನಿಸಿದವು.

ಸಂಗೀತಶಾಸ್ತçಜ್ಞರಾದ ರಾ.ಸತ್ಯನಾರಾಯಣ ಅವರು ಆಗಾಗ ಹೇಳುತ್ತಿರುತ್ತಾರೆ- “ಶ್ರೀಕಂಠನ್ ರವರು ತಮ್ಮ ಉಪನ್ಯಾಸಗಳಿಗಾಗಿ ಸಿದ್ಧಪಡಿಸಿಕೊಳ್ಳುವ ವಿದ್ವತ್ಪೂರ್ಣ ಟಿಪ್ಪಣಿಗಳು ‘ಬೆಳಕು ಬೀರುವಂಥವು’ ಎಂದರೆ ಅದು ನ್ಯೂನೋಕ್ತಿಯಾಗುತ್ತದೆ. ಅವರು ಈ ಟಿಪ್ಪಣಿಗಳನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ವಿಷಯವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ, ಅತ್ಯುಪಯುಕ್ತವಾದ ಅಧಿವೇಶನಗಳನ್ನು ನಡೆಸಿಕೊಡುತ್ತಾರೆ. ಅವರ ಉಪನ್ಯಾಸಗಳು ಸಂಗೀತ ಕಲಿಕೆಗಾಗಿ ರಚಿಸಲ್ಪಟ್ಟ ಗ್ರಂಥಗಳಿದ್ದ೦ತೆ- ಅವು ಸಾಮಾನ್ಯರಿಗೂ ಬಹಳ ಶಿಕ್ಷಾಪ್ರದವಾಗಿರುತ್ತವೆ” ಎಂದು.

ಕೃತಿ ಸಂಗ್ರಹಕಾರ
“ಭಗವ೦ತನೇ ನನ್ನನ್ನು ಅಲ್ಲಿರಿಸಿದ್ದಾನೆ… ಸರಿಯಾದ ಸಮಯಕ್ಕೆ, ಸರಿಯಾದ ಸ್ಥಳದಲ್ಲಿ” ಎನ್ನುವ ಮಾತನ್ನು ಆಕಾಶವಾಣಿಯಲ್ಲಿನ ತಮ್ಮ ಸೇವಾವಧಿ ದೃಢೀಕರಿಸುತ್ತದೆ ಎಂದು ಶ್ರೀಕಂಠನ್ ರವರು ಅರ್ಥ ಮಾಡಿಕೊಂಡರು. ಆಕಾಶವಾಣಿಯಲ್ಲಿ ಶಾಸ್ತ್ರೀಯ ಪದ್ಧತಿಯ ಮತ್ತು ಲಘುಸಂಗೀತದ ಧ್ವನಿಮುದ್ರಣಗಳ ಅಪೂರ್ವ ಭಂಡಾರವೇ ಇತ್ತು. ಕಾರ್ಯಕ್ರಮಗಳನ್ನು ಬಿತ್ತರಿಸುವ ಹೊಣೆ ಹೊತ್ತಿದ್ದ ಶ್ರೀಕಂಠನ್ ರವರೇ ಆ ಕಾಲದ ವಿದ್ವಾಂಸರ ಧ್ವನಿಮುದ್ರಣಗಳ ಮರುಪ್ರಸಾರ ಕಾರ್ಯವನ್ನೂ ನೋಡಿಕೊಳ್ಳುತ್ತಿದ್ದುದು ಅವರ ಪಾಲಿಗೊಂದು ವರದಾನವೇ ಆಯಿತು. “ಆ ವಿದ್ವಾಂಸರು ನನಗೆ ಗೊತ್ತಿರದ ಕೃತಿಗಳನ್ನು ಹಾಡಿದ್ದರೆ, ನಾನು ಅವುಗಳ ಸಾಹಿತ್ಯವನ್ನೂ ಸ್ವರಮಟ್ಟನ್ನೂ ಬರೆದುಕೊಂಡು, ಕೂಡಲೇ ನನ್ನ ಮುಂದಿನ ಕಛೇರಿಯಲ್ಲಿ ಹಾಡುತ್ತಿದ್ದೆ” ಎನ್ನುತ್ತಾರೆ ಶ್ರೀಕಂಠನ್.

ಈ ಸಂದರ್ಭದಲ್ಲಿ ಶ್ರೀಕಂಠನ್ ರವರ ಪಾಲಿಗೆ ಸಂಗೀತ ತರಗತಿಗಳನ್ನು, ಸೋದಾಹರಣ ಭಾಷಣಗಳನ್ನು, ಕಾರ್ಯಾಗಾರಗಳನ್ನು ಮತ್ತು ಕಛೇರಿಗಳನ್ನು ನಡೆಸಿಕೊಡುವ ಅವಕಾಶಗಳು ದಿನೇದಿನೇ ಹೆಚ್ಚಿದಂತೆ, ಕೃತಿಗಳನ್ನು ಸಂಚಯ ಮಾಡುವ ಉತ್ಕಟ ಆಸಕ್ತಿಯೂ ಹೆಚ್ಚಿ, ಜನ ಅವರನ್ನು ‘ಕೃತಿ ಸಂಗ್ರಹಕಾರ’ ಎಂದೇ ಕರೆಯತೊಡಗಿದರು. ನಿರಂತರ ಹೆಚ್ಚುತ್ತಲೇ ಇದ್ದ ಅವರ ಶಿಷ್ಯ ಸಮುದಾಯದ ಹಿತಾಸಕ್ತಿಯ ದೃಷ್ಟಿಯಿಂದ ಈ ಕೃತಿಚಯನ ಕಾರ್ಯ ಅವರಿಗೆ ಬಹಳ ಪ್ರಯೋಜನಕಾರಿಯಾಯಿತು. ಸಂಗೀತದ ತರಗತಿಗಳನ್ನು ಮತ್ತು ಕಾರ್ಯಾಗಾರಗಳನ್ನು ನಡೆಸುವ ಪ್ರಕ್ರಿಯೆ ಕೃತಿಗಳ ಬೃಹತ್ ಭಂಡಾರವನ್ನೇ ಅಪೇಕ್ಷಿಸುತ್ತಿತ್ತು. ಶ್ರೀಕಂಠನ್ ಹೇಳುತ್ತಾರೆ, “ನನ್ನ ಸಂಗ್ರಹದಿ೦ದ ಬಂದ ಪ್ರತಿಯೊಂದು ಕೃತಿ ಅಗಣಿತ ತರಗತಿಗಳ ಮೂಲಕ ಬೆಳಕು ಕಂಡದ್ದು, ನನ್ನಲ್ಲಿ ಕೃತಾರ್ಥತೆಯನ್ನು ಮತ್ತು ಸಮ್ಮಾನಿತ ಭಾವವನ್ನು ಮೂಡಿಸಿತು. ಕೊನೆಗೂ ನನ್ನ ಕೃತಿಸಂಗ್ರಹಣೆಯ ಪ್ರವೃತ್ತಿ ಅವನ್ನು ಅಪಾರ ಶಿಷ್ಯಗಣದೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಯಿತು. ಅವರು ಅವನ್ನು ಮತ್ತಷ್ಟು ಜನ ರಸಿಕರ ನಡುವೆ ಪ್ರಚಲಿತಗೊಳಿಸಿದರು” ಎಂದು.

ಘಟ ವಿದ್ವಾಂಸರಾದ ಬೆಂಗಳೂರು ಕೆ ವೆಂಕಟರಾ೦ರವರ ಪ್ರಕಾರ “ಕೃತಿ ಸಂಗ್ರಹಣೆಗೆ ಸಂಬ೦ಧಪಟ್ಟ೦ತೆ, ತಮ್ಮ ‘ನಿಧಿ’ಯನ್ನು ಕಾಯ್ದುಕೊಳ್ಳುತ್ತಿದ್ದ ಶ್ರೀಕಂಠನ್ ‘ಕೃಪಣರು’ ಎಂಬ ಭಾವನೆ ಪ್ರಚಲಿತವಿತ್ತು. ವಿಶೇಷವಾಗಿ, ಕೃತಿಗಳು ಪುರಾತನವಾದಷ್ಟೂ, ಅಪರೂಪವಾದಷ್ಟೂ, ಅವನ್ನು ಬಿಟ್ಟುಕೊಡಲು ಶ್ರೀಕಂಠನ್‌ಗೆ ಇಷ್ಟವಿರಲಿಲ್ಲ. ಆದರೆ ಕಾಲಕ್ರಮದಲ್ಲಿ ಅವರ ನೇತೃತ್ವದಲ್ಲಿ ವಿಭಿನ್ನ ಸ್ವರೂಪದ ತರಗತಿಗಳು ವಿಸ್ತಾರಗೊಂಡ೦ತೆ, ತಾವು ಅಲ್ಲಿಯವರೆಗೆ ಸಂರಕ್ಷಿಸಿದ್ದ ಸಂಪತ್ತನ್ನು ಅವರು ಬಳಸಿಕೊಂಡರು.

ಶ್ರೀಕಂಠನ್ ಅವರು ಹಲವು ಹಳೆಯ ಕೃತಿಗಳನ್ನು, ವಿಶೇಷವಾಗಿ ತಾವು ಪರಿಷ್ಕರಿಸಿ ಮೆರುಗು ಕೊಟ್ಟಿದ್ದ ಕೃತಿಗಳನ್ನು ತಮ್ಮ ಆಯ್ದ ಶಿಷ್ಯರಿಗೆ ಮತ್ತು ಅರ್ಹತೆಯುಳ್ಳ ಯುವಜನತೆಗೆ ಕಲಿಸಿಕೊಟ್ಟರು” ಎಂದು. ಆದರೆ ಅಗ್ರಪಂಕ್ತಿಯ ಗಾಯಕಿಯೂ, ಸಂಸ್ಕೃತ ವಿಶೇಷಜ್ಞೆಯೂ, ಬೆಂಗಳೂರಿನಲ್ಲಿ ಆರ್.ಕೆ.ಎಸ್ ಅವರ ಹಿರಿಯ ಶಿಷ್ಯೆಯೂ ಆಗಿರುವ ಟಿ.ಎಸ್.ಸತ್ಯವತಿ ವಿವರಿಸುತ್ತಾರೆ- “ನನ್ನ ಗುರುಗಳು ಕೃತಿಗಳನ್ನು ಧಾರೆ ಎರೆಯುವಲ್ಲಿಯೂ ತತ್ವಗಳಿಗೆ ಬದ್ಧರಾಗಿದ್ದರು. ಅನರ್ಹರಾದ ವಿದ್ಯಾರ್ಥಿಗಳು ಅವನ್ನು ಬಾಚಿಕೊಂಡು ಪುಸ್ತಕದ ಗೂಡಿನಲ್ಲಿರಿಸಿ ಮರೆತುಬಿಡುವುದು ಅವರಿಗೆ ಇಷ್ಟವಿರಲಿಲ್ಲ. ಸಂಗೀತಗಾರರು ಉಪಯೋಗಿಸದೆ ಅಂಥ ಪುಸ್ತಕಗಳು ಧೂಳು ಹಿಡಿಯುವುದು ತಪ್ಪು ಎನ್ನುತ್ತಿದ್ದರು ಅವರು. ಕೃತಿಗಳ ನಿಧಿ ಅರ್ಹ-ಸಮರ್ಥ ಹಸ್ತಗಳಿಗೆ ಸೇರಬೇಕೆನ್ನುವುದೇ ಅವರ ಆಶಯವಾಗಿತ್ತು. ಆದ್ದರಿಂದಲೇ ಅವರು ಕೃತಿಗಳ ಸ್ವರ ಸಹಿತ ಸಾಹಿತ್ಯದ ಲಿಪಿ ಯೋಗ್ಯರಾದ ಸಂಗೀತಗಾರರಿಗೆ ತಲುಪಬೆಕು ಎಂದು ಒತ್ತಿಹೇಳುತ್ತಿದ್ದರು.”

ಕಾರ್ಯಾಗಾರಗಳನ್ನು ನಡೆಸುವಂತೆ ಬೇಡಿಕೆಗಳೂ ಕ್ರಮೇಣ ಹೆಚ್ಚುತ್ತಿದ್ದವು. ಈ ವೇಳೆಗೆ, ತಮ್ಮ ತಲೆಮಾರಿನ ಸಂಗೀತಗಾರರಿಗೆ ಹೋಲಿಸಿದರೆ, ಶ್ರೀಕಂಠನ್ ರವರ ಬಳಿ, ಅವರು ೧೯೩೩ನೇ ಸಾಲಿನಲ್ಲಿ, ತಮ್ಮ ೧೩ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ ವೇದಿಕೆಯನ್ನು ಏರಿದಂದಿನಿ೦ದ ಸಂಗ್ರಹಿಸಿದ ವೈವಿಧ್ಯಪೂರ್ಣ ಕೃತಿಗಳ ಸುಬೃಹತ್ ಭಂಡಾರವೇ ಇತ್ತು.

ಶ್ರೀಕಂಠನ್ ವಿಶದೀಕರಿಸುತ್ತಾರೆ-“ಇತರರು ಯಾವುದಾದರೂ ಕೃತಿಯನ್ನು ಹಾಡುತ್ತಿದ್ದರೆ, ಅದು ನನ್ನಲ್ಲೂ ಇರಬೇಕೆಂದು ನಾನು ಹಾತೊರೆಯುತ್ತಿದ್ದೆ. ಆ ಕೃತಿಯ ನಡೆಯನ್ನು ಅರಿತುಕೊಳ್ಳುವ ಮತ್ತು ಅದರ ಸೂಕ್ಷö್ಮಗಳನ್ನು ಗ್ರಹಿಸಿ ಸಂತೋಷಿಸುವ ಆಕಾಂಕ್ಷೆಯಲ್ಲಿ ನನ್ನ ಮನ ಚಡಪಡಿಸುತ್ತಿತ್ತು. ಆ ಕೃತಿಯನ್ನು ಪ್ರಸ್ತುತಪಡಿಸಲು ಕಾಯುವ ತಾಳ್ಮೆಯಂತೂ ನನಗಿರಲೇ ಇಲ್ಲ. ಹೊಸ ಕೃತಿಗಳನ್ನು ಕಲಿಯಲು ನನ್ನಲ್ಲಿದ್ದ ತೃಷ್ಣೆ, ಬಹುಶಃ ವಯಸ್ಸಿಗೆ ಮೀರಿದ್ದಾಗಿತ್ತು.

ಕೃತಿಗಳ ಸಾಹಿತ್ಯವನ್ನು ನೀಡುವಂತೆ ವಿದ್ವಾಂಸರನ್ನು ನೇರವಾಗಿ ಕೇಳಲೂ ನಾನು ಹಿಂದೆಗೆಯುತ್ತಿರಲಿಲ್ಲ. ವಿದ್ವಾಂಸರು ಕೃತಿಗಳನ್ನು ಹಾಡುವಾಗ ಅವುಗಳನ್ನು ಬರೆದಿಟ್ಟುಕೊಳ್ಳುವ ಕಾರ್ಯದಲ್ಲಿ ನಾನು ನಿರತನಾಗಿರುತ್ತಿದ್ದೆ” ಎಂದು. ಕ್ಲಿಕ್ಕಿಸಿದೊಡನೆ ಕೃತಿಗಳ ಸಾಹಿತ್ಯ ದೊರೆಯುವ ಈ ಕಂಪ್ಯೂಟರ್ ಯುಗದಲ್ಲಿ ಇಂದಿನ ಯುವಮನಸ್ಸುಗಳಿಗೆ ಶ್ರೀಕಂಠನ್ ರವರ ಕಾತರತೆ ಬಾಲಿಶವಾಗಿ ಮತ್ತು ಹಾಸ್ಯಾಸ್ಪದವಾಗಿ ಕಾಣಬಹುದು. ಆದರೆ ಆ ಕಾಲದಲ್ಲಿ ಪುಸ್ತಕದ ಅಂಗಡಿಗಳಲ್ಲೂ ಇವು ಲಭ್ಯವಿರಲಿಲ್ಲವಾದ್ದರಿಂದ, ಕಲಿಯುವ ಉತ್ಸಾಹ ಉಕ್ಕುತ್ತಿದ್ದ ವಿದ್ಯಾರ್ಥಿಗೆ ಮುನ್ನಡೆಯಲು ಇದ್ದ ಮಾರ್ಗ ಇದೊಂದೇ ಆಗಿತ್ತು.

ವೃತ್ತಿ ಮತ್ತು ವಿಸ್ತರಣೆ
ಕ್ರಮೇಣ ಶ್ರೀಕಂಠನ್ ಸಂಪೂರ್ಣವಾಗಿ ನೂತನವೂ, ಸುದೂರವ್ಯಾಪೀ ಪರಿಣಾಮವುಳ್ಳದ್ದೂ ಆದ ಪ್ರಯತ್ನವೊಂದರಲ್ಲಿ ತೊಡಗಿದರು. ಅವರು ತಮ್ಮ ‘ಭಾವಗೀತೆ’ ಕಾರ್ಯಕ್ರಮದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಬೇಂದ್ರೆ, ಅಡಿಗ ಮತ್ತು ಡಿ.ವಿ.ಗುಂಡಪ್ಪನವರ೦ಥ ಕನ್ನಡದ ಕವಿಗಳ ಕವಿತೆಗಳಿಗೆ ರಾಗಸಂಯೋಜನೆ ಮಾಡಿದರು. ಅಷ್ಟೇ ಅಲ್ಲದೆ, ಇದಕ್ಕೆ ಪೂರಕವೆನಿಸುವ ವಾದ್ಯಸಂಗೀತವನ್ನೂ ಸಂಯೋಜಿಸಿದರು. ‘ಗಮಕ’ ಕಾರ್ಯಕ್ರಮದಲ್ಲಿ ವಿದ್ವಾಂಸರು ರನ್ನ, ಪೊನ್ನ, ಪಂಪ ಮತ್ತು ಕುಮಾರವ್ಯಾಸನಂಥ ಹಳೆಯ ಕಾಲದ ಕನ್ನಡದ ಕವಿಗಳ ಕಾವ್ಯಗಳ ಕುರಿತು ಚರ್ಚೆ ನಡೆಸಿದರೆ, ತದನಂತರ ಶ್ರೀಕಂಠನ್ ಈ ಕಾವ್ಯಗಳನ್ನು ಶಾಸ್ತ್ರೀಯ ಮಟ್ಟಿನಲ್ಲಿ ಹಾಡುತ್ತಿದ್ದರು.

ರಾಗಸಂಯೋಜನೆಯಲ್ಲಿ ಅತ್ಯುತ್ತಮ ಅಭಿರುಚಿ ಹೊಂದಿದ್ದ ಶ್ರೀಕಂಠನ್ ಹರಿದಾಸರ ಅನೇಕ ಕೀರ್ತನೆಗಳಿಗೆ, ಬಸವೇಶ್ವರ, ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭುಗಳಂತಹ ಶಿವಶರಣರ ವಚನಗಳಿಗೆ ಸ್ವರಸಂಯೋಜನೆ ಮಾಡಿದರು. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ೧೫ ಕವಿತೆಗಳಿಗೆ (ಅವರ ಬಿನ್ನಹ ಕವನ ಸಂಕಲನದಿ೦ದ), ಡಿ.ವಿ.ಗುಂಡಪ್ಪನವರ ಅಂತಃಪುರಗೀತೆ, ಮಂಕುತಿಮ್ಮನ ಕಗ್ಗ ಮತ್ತು ಶ್ರೀಕೃಷ್ಣಪರೀಕ್ಷಣಂ ಕೃತಿಗಳ ಪದ್ಯಗಳಿಗೆ ಶ್ರೀಕಂಠನ್ ರಾಗ ಹಾಕಿದ್ದೂ ಅಲ್ಲದೆ ಅವುಗಳನ್ನು ಭಾವಪೂರ್ಣವಾಗಿ ಹಾಡಿದರು. ಉಡುಪಿಯ ಪರಮೇಶ್ವರ ಭಟ್ಟ, ಪು.ತಿ.ನರಸಿಂಹಾಚಾರ್ ಮತ್ತು ಕುವೆಂಪು ಅವರ ಕವನಗಳನ್ನು ಗೇಯರೂಪಕ್ಕೆ ತರಲು, ಅವುಗಳಿಗೆ ನಾದದ ಜೀವರಸವನ್ನೂಡಿದರು.

ಕನ್ನಡದ ದಾರ್ಶನಿಕ ಕೈವಾರ ನಾರೇಯಣಪ್ಪನವರ ರಚನೆಗಳಿಗೂ ಶ್ರೀಕಂಠನ್ ರಾಗಸಂಯೋಜನೆ ಮಾಡಿ ಹಾಡಿದ್ದಾರೆ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ತಮ್ಮ ಗೀತಾರಾಧನ ಕಾರ್ಯಕ್ರಮಕ್ಕಾಗಿ ಅವರು ಮಹಾಕಾವ್ಯಗಳಿಂದ ಹಲವು ಸ್ತೋತ್ರಗಳಿಗೆ ರಾಗಾರೋಪಣೆ ಮಾಡಿದ್ದಾರೆ. “ನನ್ನ ಸಂಗೀತ ರೂಪಕ ‘ಶ್ರೀಕೃಷ್ಣ ವೈಭವಂ’ನಲ್ಲಿ ಶ್ಲೋಕಗಳು, ಭಜನೆಗಳು, ವರ್ಣಗಳು ಮತ್ತು ಕೃತಿಗಳಿದ್ದು, ಇವುಗಳಲ್ಲಿ ಹಲವು ರಚನೆಗಳ ರಾಗಗಳು ಹಿಂದೂಸ್ಥಾನೀ ಪದ್ಧತಿಯವಾಗಿದ್ದವು.

ಮುಂದೆ ಮೈಸೂರಿನ ಪರಕಾಲ ಮಠವೂ ಇಂಥ ರೂಪಕಗಳನ್ನು ನಿರ್ಮಾಣ ಮಾಡುವಂತೆ ನನ್ನನ್ನು ಕೇಳಿಕೊಂಡಿತು” ಎನ್ನುತ್ತಾರೆ ಶ್ರೀಕಂಠನ್. ಅವರು ಹರಿದಾಸ ಸಾಹಿತ್ಯಕ್ಕೆ ಮಾಡಿರುವ ರಾಗಸಂಯೋಜನೆ ಸಂಪ್ರದಾಯದತ್ತ ರಾಗ ಮತ್ತು ತಾಳಗಳಲ್ಲೇ ಮೂಲತಃ ಇದ್ದರೂ, ಅವಕ್ಕೆ ಅವರು ಮಾಡಿರುವ ನಾದದ ಅಲಂಕರಣ ಮಾತ್ರ ಸುಂದರವೂ ಸುಖಕರವೂ ಆದ ಆಧುನಿಕತೆಯ ಕವಚದೊಳಗಿದೆ.

ತಾವು ವೃತ್ತಿಜೀವನದಲ್ಲಿ ಮುಂದುವರಿಯುವ೦ತೆ ಬಹುಮಟ್ಟಿಗೆ ಸಹಾಯ ಮಾಡಿದ್ದು ಆಕಾಶವಾಣಿಯೇ ಎನ್ನುತ್ತಾರೆ ಶ್ರೀಕಂಠನ್. “ಆ ದಿನಗಳಲ್ಲಿ ಕಾರ್ಯಕ್ರಮದಲ್ಲಿ ನುಸುಳುವ ದೋಷಗಳಿಂದ ಶ್ರೋತೃಗಳು ನೊಂದುಕೊಳ್ಳುತ್ತಿದ್ದರು ಮತ್ತು ಆ ತಪ್ಪುಗಳನ್ನು ಎತ್ತಿತೋರಿಸುತ್ತಿದ್ದರು. ಒಮ್ಮೆ ನಾನು ಹಾಡುತ್ತಿದ್ದ ಸಂಸ್ಕೃತ ಶ್ಲೋಕದಲ್ಲಿ ‘ವಾರಾಣಸೀ’ ಎನ್ನುವ ಶಬ್ದವನ್ನು ‘ವಾರಣಾಸೀ’ ಎಂದು ತಪ್ಪಾಗಿ ಉಚ್ಚರಿಸಿದೆ. ಕೋಪಗೊಂಡ ಪಂಡಿತರೊಬ್ಬರು ಕೂಡಲೇ ನಿಲಯದ ನಿರ್ದೇಶಕರಿಗೆ ಫೋನ್ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇದು ನಮ್ಮೆಲ್ಲರಿಗೂ ಒಂದು ಪಾಠವಾಯಿತು. ನಾವು ಯಾವ ವಿಷಯವನ್ನು ಎಷ್ಟೇ ಚೆನ್ನಾಗಿ ಕಲಿತಿರಲಿ, ನಮ್ಮ ಕಲಿಕೆ ಪರ್ಯಾಪ್ತವಾಗುತ್ತಿರಲಿಲ್ಲ. ಆದರೆ ನಾವು ವಿನೀತರಾಗಿರುವಂತೆ ಮತ್ತು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಂತೆ ಮಾಡಿದ ಅನೇಕ ಪ್ರಸಂಗಗಳು ಜರುಗಿದವು” ಎನ್ನುವುದು ಅವರ ಅನುಭವದ ನುಡಿ.

ಏನೇ ಆಗಲಿ, ಶ್ರೀಕಂಠನ್ ರವರೆಡೆಗೆ ಶ್ಲಾಘನೆಯ ಮಹಾಪೂರವೇ ಹರಿದು ಬಂದದ್ದ೦ತೂ ಸತ್ಯ. ಶ್ರೀಕಂಠನ್ ನೀಡಿದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಆ ಕಾಲದಲ್ಲಿ ಪ್ರಮುಖರೂ, ಹೃತ್ಕಂಪನ ಮೂಡಿಸುವ ವಿಮರ್ಶಕರೂ ಆಗಿದ್ದ ಸುಬ್ಬುಡು ರವರಿಂದ ಉತ್ತಮ ಪ್ರತಿಕ್ರಿಯೆ ದೊರೆತರೆ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದ ಸಂದರ್ಭದಲ್ಲಿ ಎ.ಐ.ಆರ್‌ನ ಡೈರೆಕ್ಟರ್ ಜನರಲ್ ‘ಆಕಾಶವಾಣಿಯಲ್ಲಿ ಇಂಥ ಕಲಾವಿದರನ್ನು ತನ್ನ ಸಿಬ್ಬಂದಿಯಾಗಿ ಹೊಂದಿರುವುದು ನಮಗೆ ಹೆಮ್ಮೆ ತಂದಿದೆ’ ಎನ್ನುತ್ತ ಶ್ರೀಕಂಠನ್ ಅವರನ್ನು ಅಭಿನಂದಿಸಿದರು.

ಆಕಾಶವಾಣಿಯಲ್ಲಿ ಶ್ರೀಕಂಠನ್ ರವರ ೩೩ ವರ್ಷಗಳ ಉತ್ಸಾಹಭರಿತ ಸೇವೆ ಅತ್ಯಂತ ಪರಿಣಾಮಕಾರಿಯಾಗಿತ್ತು. “ನನ್ನ ಮೂರು ದಶಕಗಳಿಗೂ ಮೀರಿದ ಸೇವೆಯ ಕುರಿತು ನಾನು ಹೇಳಬಹುದಾದುದು ಬಹಳಷ್ಟಿದೆ. ಪ್ರಾಯಶಃ ಈ ಪುಸ್ತಕ ನನ್ನೀ ಅನುಭವಗಳಿಂದಲೇ ತುಂಬಿ ಹೋಗಬಹುದು” ಎನ್ನುತ್ತಾರೆ ಅವರು.

ಶ್ರೀಕಂಠನ್ ಅವರ ಕನ್ನಡದ ಜಾವಳಿಗಳನ್ನು ಕುರಿತ ಪ್ರಾತ್ಯಕ್ಷಿಕೆ ಶ್ರೋತೃಗಳನ್ನು ಗತಕಾಲಕ್ಕೊಯ್ದು ಅರಿಯಾಕ್ಕುಡಿಯವರ ಖಮಾಚ್ ರಾಗದ ‘ಮಾತಾಡಬಾರದೇನೋ’ಗೆ ಸದೃಶವಾದ ಪೂರ್ವಕಾಲದ ವಿದ್ವಾಂಸರರ ಸಂಗೀತವನ್ನು ಸ್ಮರಣೆಗೆ ತಂದಿತು. ಶ್ರೀಕಂಠನ್ ಹೇಳುತ್ತಾರೆ- “ಕನ್ನಡದ ಜಾವಳಿಗಳು ತಮ್ಮ ಮೂಲರಾಗಗಳನ್ನು ಉಳಿಸಿಕೊಂಡಿರುವುದು ಕರ್ನಾಟಕದ ಪಾಲಿಗೆ ಅಭಿಮಾನದ ಸಂಗತಿಯಾಗಿದೆ” ಎಂದು.

“ಆಕಾಶವಾಣಿ ಈಗ ನಿಯತಕಾಲಿಕೆಗಳನ್ನು ಹೊರತರುವುದನ್ನು ನಿಲ್ಲಿಸಿಬಿಟ್ಟಿರುವುದು ದುರದೃಷ್ಟಕರ” ಎಂದು ವಿಷಾದಿಸುವ ಶ್ರೀಕಂಠನ್ ದೆಹಲಿ ಕೇಂದ್ರದ ಲಿಸನರ್, ಮದ್ರಾಸು ಕೇಂದ್ರದ ವಾನೋಲಿ ಮತ್ತು ಬೆಂಗಳೂರು ಕೇಂದ್ರದ ತರಂಗರ೦ಗ ಪತ್ರಿಕೆಗಳ ಸಂಚಿಕೆಗಳನ್ನು ಸಂರಕ್ಷಿಸಿದ್ದರು. “ನಾನು ಗಾನವಿಹಾರ ಕಾರ್ಯಕ್ರಮದಲ್ಲಿ ಪಾಠ ಮಾಡಿದ ಕೃತಿಗಳ ಸಾಹಿತ್ಯ ಮತ್ತು ಸ್ವರಮಟ್ಟುಗಳು ಈ ನಿಯತಕಾಲಿಕೆಗಳಲ್ಲಿರುತ್ತಿದ್ದವು. ಆ ದಿನಗಳಲ್ಲಿ ಇವುಗಳನ್ನು ಪಡೆದುಕೊಳ್ಳಲು ಕಂಪ್ಯೂಟರ್ ಸೌಲಭ್ಯವಾಗಲೀ, ಪುಸ್ತಕದ ಅಂಗಡಿಗಳಾಗಲೀ ಇರುತ್ತಿರಲಿಲ್ಲವಾದ್ದರಿಂದ ಈ ಪತ್ರಿಕೆಗಳು ಅತ್ಯಮೂಲ್ಯವಾಗಿದ್ದವು. ಇದನ್ನೇ ಮುಂದುವರಿಸುತ್ತ ಇಂದು ನಾನು ಹೇಳುತ್ತೇನೆ, ಆಕಾಶವಾಣಿಯಲ್ಲಿರುವ ಪ್ರತಿಯೊಂದು ೭೮೦ ಆರ.ಪಿ.ಎಂ.ರೆಕಾರ್ಡೂ, ಅದರಲ್ಲಿರುವ ಅಪೂರ್ವ ನಿಧಿಯ ದೆಸೆಯಿಂದ ತುಂಬ ಬೆಲೆಬಾಳುವಂಥದ್ದು; ಅವು ಅಪರಂಜಿ ಇದ್ದಂತೆ. ಅವುಗಳ ರೂಪದಲ್ಲಿ ಅತ್ಯಂತ ಶ್ರೀಮಂತ ಸಂಗೀತ ಪರಂಪರೆ ಆಕಾಶವಾಣಿಯಲ್ಲಿದೆ. ಡಿ.ಕೆ.ಪಟ್ಟಮ್ಮಾಳ್ ಅವರು ಮಹಾವೈದ್ಯನಾಥ ಅಯ್ಯರ್ ರವರ ‘ಮೇಳರಾಗಮಾಲಿಕೆ’ಯ ಧ್ವನಿಮುದ್ರಣದ ಪ್ರತಿಗಾಗಿ ಕೋರಿಕೆ ಸಲ್ಲಿಸಿದ್ದು ಮತ್ತು ನಿಲಯದ ನಿರ್ದೇಶಕರು ತಕ್ಷಣ ಅವರ ಮನವಿಗೆ ಸ್ಪಂದಿಸಿದ್ದು ನನ್ನ ನೆನಪಿನಲ್ಲಿ ಇಂದಿಗೂ ಸ್ಪಷ್ಟವಾಗಿ ಉಳಿದಿದೆ!” ಎನ್ನುತ್ತಾರೆ ಶ್ರೀಕಂಠನ್.

ಅ೦ದಿನ ಗಾನಸಾಮ್ರಾಜ್ಯದ ಚಕ್ರವರ್ತಿಗಳಂತಿದ್ದ ಪಿಟೀಲು ವಿದ್ವಾಂಸರಾದ ಲಾಲ್‌ಗುಡಿ ಜಿ ಜಯರಾಮನ್, ಎಂ.ಎಸ್.ಗೋಪಾಲಕೃಷ್ಣನ್, ಎಂ.ಚ೦ದ್ರಶೇಖರ್ ಮತ್ತು ಆರ್.ಆರ್.ಕೇಶವಮೂರ್ತಿಗಳೊಂದಿಗೆ ಹಾಗೂ ಮೃದಂಗ ವಿದ್ವಾಂಸರಾದ ಪಾಲ್‌ಘಾಟ್ ಮಣಿ ಐಯ್ಯರ್, ವಿ.ಎಸ್.ಮುರುಗ ಭೂಪತಿ, ಉಮಯಾಳಪುರಂ ಶಿವರಾಮನ್, ಪಾಲ್ಘಾಟ್ ರಘು, ಎಂ.ಎಲ್.ವೀರಭದ್ರಯ್ಯ, ಶ್ರೀಮುಷ್ಣಂ ರಾಜಾರಾವ್, ಟಿ.ಕೆ.ಮೂರ್ತಿ, ಟಿ.ಎ.ಎಸ್.ಮಣಿ ಮತ್ತು ಎ.ವಿ.ಆನಂದ್ ಅವರ ಪಕ್ಕವಾದ್ಯದೊಂದಿಗೆ ಶ್ರೀಕಂಠನ್ ರವರ ಕಛೇರಿಗಳು ನಿರಂತರವಾಗಿ ನಡೆಯುತ್ತಿದ್ದವು. ಇಂದು ಹೆಚ್.ಎಸ್.ಸುಧೀಂದ್ರ, ಅರ್ಜುನ್ ಆನಂದ್, ರೇಣುಕಾಪ್ರಸಾದ್, ಆನೂರು ಶಿವು ಮತ್ತು ಸಿ.ಚೆಲುವರಾಜು ಅವರಂಥ ಹಲವು ಯುವ ಮೃದಂಗ ವಿದ್ವಾಂಸರ ವಾದ್ಯಸಹಕಾರದೊಂದಿಗೆ ಶ್ರೀಕಂಠನ್ ರವರ ಕಛೇರಿಗಳು ಜರುಗುತ್ತವೆ.

ಶ್ರೀಕಂಠನ್ ರವರ ಜನಪ್ರಿಯತೆಯ ರೇಖೆ ನಿರಂತರವಾಗಿ ಊರ್ಧ್ವಮುಖಿಯಾಗಿದೆ. ೧೯೫೪ರಲ್ಲಿ ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ (ಮೈಲಾಪುರದ ಪಿ.ಎಸ್. ಪ್ರೌಢಶಾಲೆಯ ಸಭಾಂಗಣದಲ್ಲಿ) ಮೊದಲ ಬಾರಿ ನೀಡಿದ ಕಛೇರಿಯಲ್ಲಿ ಶ್ರೀಕಂಠನ್ ದರ್ಬಾರ್ ರಾಗವನ್ನು ವಿಸ್ತರಿಸಿ, ಅಲ್ಲಿ ನೆರೆದಿದ್ದ ವಿದ್ವಾಂಸರು ಮತ್ತು ಸಂಗೀತ ಶಾಸ್ತçಜ್ಞರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದರು. ಮರುದಿನ ರೋಲ್ ಮಾಡೆಲ್ ಮುಸಿರಿಯವರು ಶ್ರೀಕಂಠನ್ ಅವರ ಬಳಿ ಹಾಸ್ಯ ಮಾಡಿದರು- “ನಿನ್ನೆ ನೀವು ದೊಡ್ಡ ‘ದರ್ಬಾರ’ನ್ನೇ ನಡೆಸಿದಿರಿ ಎಂದು ಕೇಳಿದೆ!” ಎಂದು.

ಭಾರತದ ಸಂತ-ವಾಗ್ಗೇಯಕಾರರು ರಚಿಸಿರುವ ಕೃತಿಗಳಲ್ಲಿ ಮುಳುಗಿಬಿಡಬೇಕು ಎನ್ನುವ ವಿಷಯದಲ್ಲಿ ಶ್ರೀಕಂಠನ್ ಎಂದಿನಿ೦ದಲೂ ವಿಶ್ವಾಸವುಳ್ಳವರಾಗಿದ್ದಾರೆ. ಸ್ವಯಂ ಆನಂದದ ಆಕರಗಳಾಗಿರುವ ಅವುಗಳನ್ನು ತಮ್ಮ ಜೀವಮಾನದುದ್ದಕ್ಕೂ ಆಸ್ವಾದಿಸುವ ಬಯಕೆ ಅವರದು. “ನಮ್ಮ ಸಂತ-ವಾಗ್ಗೇಯಕಾರರು ಬಿಟ್ಟುಹೋಗಿರುವ ಕೃತಿಗಳು ಹೃನ್ಮನಗಳನ್ನು ತೃಪ್ತಿಪಡಿಸುತ್ತವೆ ಮತ್ತು ಭಾವಬುದ್ಧಿಗಳು ಭಕ್ತಿಯೊಂದಿಗೆ ತಲ್ಲೀನಗೊಳ್ಳುವ ಸಾಮ್ರಾಜ್ಯವನ್ನು ತಲುಪುತ್ತವೆ.

ಕರ್ನಾಟಕ ಸಂಗೀತ ಹಲವು ಶತಮಾನಗಳಲ್ಲಿ ವಿಕಸನಹೊಂದಿದ್ದು, ನಮ್ಮ ಪುರಾಣಗಳಿಂದ ಪ್ರಭಾವಿತವಾಗಿದೆೆ. ನಮಗೆ ತಿಳಿದಿರುವಂತೆ ಪುರಂದರ ದಾಸರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಶಾಸ್ತ್ರೀಗಳು ಮೊದಲಾದವರ ಸ್ತರದ ಸಂಗೀತದ ಗುರುವರೇಣ್ಯರು ಇಂಥ ಪರಿಪೂರ್ಣತೆಯನ್ನು ಪಡೆಯಲು ಸಂಗೀತದಲ್ಲಿನ ತಮ್ಮ ಅಭಿಜಾತ ಪ್ರತಿಭೆಯನ್ನು ಸಾಧನವಾಗಿಸಿಕೊಂಡರು” ಎನ್ನುವುದು ಶ್ರೀಕಂಠನ್ ರವರ ನುಡಿ.

ಶ್ರೀಕಂಠನ್ ರವರು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ತಜ್ಞರ ಸಮಿತಿಯ ಸದಸ್ಯರಾದರು. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಕ್ರಿಯ ಅಧಿಕಾರಿಗಳಾಗಿದ್ದರು. ಜೊತೆಗೆ ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಕಲಾವಿದರನ್ನು ಆಯ್ಕೆ ಮಾಡುವ ಹಾಗೂ ರೇಡಿಯೋ ಕಲಾವಿದರಿಗೆ ಶ್ರೇಣಿಗಳನ್ನು ಪ್ರದಾನ ಮಾಡುವ ಎ.ಐ.ಆರ್. ನ ಆಯ್ಕೆ ಸಮಿತಿಯಲ್ಲೂ ಇದ್ದರು.

ಶ್ರೀಕಂಠನ್ ರವರು ಆರು ವರ್ಷಗಳ ಕಾಲ ಸಂಗೀತ ನೃತ್ಯ ಅಕಾಡೆಮಿಯಲ್ಲಿದ್ದಾಗ, ವಿಶೇಷವಾಗಿ ಹಿಂದಿನ ವಿದ್ವಾಂಸರ ಕೃತಿಸಮುಚ್ಚಯಗಳನ್ನು ಹೊಂದಿರುವ ನೂತನ ಸಂಗೀತ ಗ್ರಂಥಾಲಯವೊ೦ದನ್ನು ಸ್ಥಾಪಿಸುವ ಕುರಿತು ಸಲಹೆ ನೀಡಿದರು. ಜೊತೆಗೆ, ವಾದ್ಯಸಂಗೀತವನ್ನೂ ಒಳಗೊಂಡ೦ತೆ ಸಂಗೀತವನ್ನು ಅದರ ಎಲ್ಲ ಶಾಖೆಗಳೊಂದಿಗೆ ಕಲಿಸಲು ಸಂಗೀತದ ಕಾಲೇಜೊಂದನ್ನು ಸ್ಥಾಪಿಸುವಂತೆ ಶ್ರೀಕಂಠನ್ ರವರು ನೀಡಿದ ಸಲಹೆ ಹೆಚ್ಚು ಮೌಲಿಕವಾಗಿತ್ತು. ಮುಂದೇನಾಯಿತು? “ನಿರೀಕ್ಷಿತ ಘಟನೆಗಳಲ್ಲಿ ಮುಂದೇನಾಯಿತೆ೦ದು ನೀವು ಊಹಿಸಲಾರಿರಾ?” ಎಂದು ನಗೆಯಾಡುತ್ತಾರೆ ಶ್ರೀಕಂಠನ್!

‍ಲೇಖಕರು Admin

May 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: