ನಾಗಭೂಷಣ ನೆನಪುಗಳು…

ಸತೀಶ ಕುಲಕರ್ಣಿ

ಪ್ರೀತಿಯಿಂದ ವಿಷ ಕೊಟ್ಟರೂ ನಾನು ಕುಡಿಯುತ್ತೇನೆ. ೨೦೨೧ ಅಕ್ಟೋಬರ್ ೧೩ ರಂದು ಹಾವೇರಿಗೆ ಆತ್ಮೀಯರಾದ ಡಿ.ಎಸ್. ನಾಗಭೂಷಣ ಬಂದಾಗ ಹೇಳಿದ ಮಾತಿದು.

ಇಂದು ಅವರ ನಿಧನದ ಸುದ್ದಿ ಕೇಳಿದಾಗ ನೆನಪಾಯಿತು. ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿದಾಗಿನಿಂದ ಪರಿಚಿತರಾದ ನಾಗಭೂಷಣರು ಒಬ್ಬ ಅಪ್ಪಟ ಸಮಾಜವಾದಿ. ಯಾವಾಗಲು ಚರ್ಚೆ, ವಾಗ್ವಾದ ಈ ಇವತ್ತಿನ ಎಲ್ಲವನ್ನು ಅಳಿದು ತೂಗಿ ಇಳಿದು ಚಿಂತಿಸಿದ ಚಿಂತಕ.

ಅವರನ್ನು ಮೊದಲು ಭೇಟಿಯಾದಾಗ ಅವರ ಪತ್ನಿ ಶ್ರೀಮತಿ ಸವಿತಾರ (ಆವಾಗ ಸವಿತಾ ಪೈ) ಪುಸ್ತಕವೊಂದರ ವಿಮರ್ಶೆ ಸಂಯುಕ್ತ ಕರ್ನಾಟಕಕ್ಕೆ ಬರೆದುದನ್ನು ಹೇಳಿದ್ದೆ. ಅದನ್ನು ಕಳಿಸಲು ಕೇಳಿಕೊಂಡರು. ಆನಂತರ ಸವಿತಾರಿಗೆ ಮುಟ್ಟಿಸಿ ದೂರವಾಣಿಯಲ್ಲಿ ಮಾತನಾಡಿಸದ್ದಲ್ಲದೆ, ನಾಲ್ಕು ಸಾಲಿನ ಕೃತಜ್ಞತಾ ಪತ್ರ ಕೂಡಾ ಬರೆದಿದ್ದರು.

ನಾಗಭೂಷಣ ರ ಗಾಂಧಿ ಕಥನ ಓದಿ ಅವಧಿಗೆ ಲೇಖನ ಕೂಡ ಬರೆದಿದ್ದೆ. ಸುಮಾರು ೮೦೦ ಪುಟದ ಗಾಂಧಿಯನ್ನು ಬೇರೆ ಬೇರೆ ನಿಟ್ಟು ನೋಟಗಳಿಂದ ತಿಳಿಯಲು ಸಾಧ್ಯವಾಗಿತ್ತು. ಭಾರತದ ನೆಲದಲ್ಲಿಯ ಗಾಂಧಿ ಹೋರಾಟಕ್ಕಿಂತ, ಅವರು ಮಾಡಿದ ದಕ್ಷಿಣ ಆಫ್ರಿಕಾ ಹೋರಾಟವೇ ಪ್ರಖರ ಅನಿಸಿದ್ದನ್ನು ಹಂಚಿಕೊ೦ಡಿದ್ದೆ. ಗಾಂಧಿಜಿಯವರು ತಮ್ಮ ಕುಟುಂಬಸ್ಥರ ಬಗ್ಗೆ ತೆಗೆದುಕೊಂಡ ಹಲವು ಕಠಿಣ ಕಠೋರ ನಿಲುವುಗಳ ಬಗ್ಗೆಯೂ ಚರ್ಚಿಸಿದ್ದೆ.

ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗಾಂಧಿ ಕಥನಕ್ಕೆ ಬಂದಿತ್ತು. ನಾನು ಕೂಡ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಭಾಷಾ ಸಲಹಾ ಸಮಿತಿ ಸದಸ್ಯನಾದ ಪ್ರಯುಕ್ತ ೧೨. ೦೩. ೨೦೨೨ ದೆಹಲಿಯಲ್ಲಿ ಜರುಗಿದ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಹೋಗಿದ್ದೆ. ಆದರೆ ನಾಗಭೂಷಣ ಪ್ರಶಸ್ತಿ ಸ್ವೀಕರಿಸಲು ಗೈರು ಹಾಜರಾಗಿದ್ದರು. ಅನಾರೋಗ್ಯದ ಕಾರಣದಿಂದ ಬರಲಾಗಿರಲಿಲ್ಲ. ದೆಹಲಿ ರವೀಂದ್ರ ಭವನದ ಅಕಾಡೆಮಿ ಆವರಣದಲ್ಲಿ ನಾಗಭೂಷಣ ರ ಭಾವಚಿತ್ರ ಸಹಿತದ ಪರಿಚಯ ಫೋಟೊ ಇಟ್ಟು ಜೊತೆಗೆ ಬೇರೆ ಬೇರೆ ಭಾಷೆಯ ಎಲ್ಲ ಪ್ರಶಸ್ತಿ ಪುರಸ್ಕೃತರದೂ ಕೂಡ. ನಾನು ಸರ್ಜೂ ಕಾಟ್ಕರ್, ಬಾಳಾಸಾಹೇಬ ಲೋಕಾಪುರ ಹೆಮ್ಮೆಯಿಂದ ನಾಗಭೂಷಣರ ಚಿತ್ರ ನೋಡಿದ್ದೆವು.

೨೦೧೨ ರಲ್ಲಿ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ನನ್ನ ಗಾಂಧಿ ಗಿಡ ಕವನ ಸಂಕಲನ ಪ್ರಕಟಿಸಿದ್ದರು. ಆಗ ಅದರ ಬಿಡುಗಡೆಗೆ ನಾಗಭೂಷಣ ದಂಪತಿಗಳು ಹಾವೇರಿಗೆ ಬಂದಿದ್ದರು. ಸವಿತಾ ಅವರೇ ಪುಸ್ತಕ ಬಿಡುಗಡೆ ಮಾಡಿದ್ದರು. ನಾಗಭೂಷಣ ಲೋಹಿಯಾ ಕುರಿತು ಅದ್ಭುತ ಮಾತುಗಳನ್ನಾಡಿದ್ದರು.

ಹಾವೇರಿಯ ಮೇಲೆ ಹಾಯ್ದು ಹೋಗುವಾಗೊಮ್ಮೆ ನಾಗಭೂಷಣ ದಂಪತಿಗಳು ಖಂಡಿತವಾಗಿಯೂ ಒಂದು ಸಣ್ಣ ವ್ಹಿಜಿಟ್ ನನ್ನ ಮನೆಗೆ ಮಾಡುತ್ತಿದ್ದರು. ಕಳೆದ ಬಾರಿ ಗದುಗಿನಲ್ಲಿ ಅವರ ಗಾಂಧಿ ಕಥನ ಬಿಡುಗಡೆಯಾಗಿತ್ತು. ಅದರ ಸಾವಿರ ಪ್ರತಿಗಳನ್ನು ಡಿ. ಆರ್ ಪಾಟೀಲ (ಎಚ್.ಕೆ. ಪಾಟೀಲರ ಸಹೋದರರು) ಖರಿದಿ ಮಾಡಿದ್ದರು. ಗದುಗಿನಿಂದ ವಾಪಸ್ಸ್ ಬರುವಾಗ ರಾತ್ರಿ ೮ ಗಂಟೆ. ಹಾವೇರಿಯಲ್ಲಿ ನಾವೆಲ್ಲ ಅವರ ಪ್ರೀತಿಯ ರೊಟ್ಟಿ ಊಟ ಮಾಡಿದ್ದೆವು. ಊಟ ಮುಗಿದಾಗ ೧೦ ಗಂಟೆ. ನನ್ನ ವಿನಂತಿಯನ್ನು ಮನ್ನಿಸಿ ಅಲ್ಲಿಯೇ ಹತ್ತಿರವಿದ್ದ ಖ್ಯಾತ ಕಲಾವಿದ ಕರಿಯಪ್ಪ ಹಂಚಿನಮನಿ ಅವರ ‘ಹಂಚಿನಮನಿ ಆರ್ಟ ಗ್ಯಾಲರಿ’ ಗೆ ಜೋರಾ ಜೋರಿನಿಂದ ಕರೆದುಕೊಂಡು ಹೋಗಿದ್ದೆವು. ಒಂದಿಷ್ಟು ಬೇಸರದಿಂದಲೇ ಮಳೆ ಗಾಳಿ ಕಚ್ಚಾ ರಸ್ತೆ ಮೂಲಕ ಗ್ಯಾಲರಿಗೆ ಬಂದಿದ್ದರು. ಅಲ್ಲಿಯ ಎಲ್ಲ ಪೇಂಟಿ೦ಗ್ಸ ಗಳನ್ನು ನೋಡಿ ಆನಂದಿಸಿದ್ದರು. ಅದರಲ್ಲೂ ದೇವನೂರ ಮಹಾದೇವರ ಚಿತ್ರವನ್ನು ನೋಡಿ ‘ನಮ್ಮ ಮಾದೇವ’ ಎಂದು ಉದ್ಗರಿಸಿ ಒಂದು ಫೋಟೋ ಸಹಿತ ತೆಗೆಸಿ, ದೇವನೂರಿಗೆ ಕಳುಹಿಸಿ ಅಂದಿದ್ದರು. ಬೇಸರದಿಂದ ಗ್ಯಾಲರಿಗೆ ಬಂದಿದ್ದ ನಾಗಭೂಷಣ ರು ‘ಈಗ ನನಗೆ ನೀವು ಪ್ರೀತಿಯಿಂದ ವಿಷ ಕೊಟ್ಟರೂ ನಾನು ಕುಡಿಯುತ್ತೇನೆ’ ಎಂದು ತಮ್ಮ ಆನಂದ ವ್ಯಕ್ತ ಮಾಡಿದ್ದರು.

ಅವರ ಹೊಸ ಮನುಷ್ಯ ಪತ್ರಿಕೆಯ ಪ್ರತಿ ವಾರ್ಷಿಕ ಸಂಚಿಕೆಗೆ ನನ್ನ ಕವಿತೆ ಕೇಳಿ ಪಡೆಯುತ್ತಿದ್ದರು. ಅದರಲ್ಲಿನ ಲೇಖನಗಳ ಬಗ್ಗೆ ಆಗಾಗ ಪ್ರತಿಕ್ರಿಯೆ ಕೂಡ ಕೊಡುತ್ತಿದ್ದೆ. ಒಂದು ಸಂಚಿಕೆಯಲ್ಲಿ ಬಂಡಾಯ ಸಾಹಿತ್ಯ ಚಳವಳಿಯ ಬಗ್ಗೆ ಬರೆಯುತ್ತ ಎಲ್ಲರನ್ನೂ ಟೀಕಿಸಿದ್ದರು. ಹೊಂದಾಣಿಕೆ, ಸ್ಥಾನಮಾನ, ಪ್ರಶಸ್ತಿ ಇವುಗಳ ನಡುವೆ ಕೊಚ್ಚಿ ಹೋದ ಚಳವಳಿ ಬಗ್ಗೆ ಬರೆದು, ಕೊನೆಯಲ್ಲಿ ‘ಕಟ್ಟತೇವ ನಾವು ಕಟ್ಟತೇವ’ ಎಂಬ ಕ್ರಾಂತಿ ಕವಿತೆಯ ನಾಲ್ಕು ಸಾಲುಗಳು ಮಾತ್ರ ಉಳಿಯುತ್ತವೆ ಎಂದಿದ್ದರು. ನಾನು ಅವರಿಗೆ ಮಾತನಾಡಿ ಇದು ತಪ್ಪು, ನಮ್ಮ ತಲೆಮಾರು ತಮ್ಮ ಮಹತ್ವದ ಜೀವಿತದ ದಶಕಗಳನ್ನು ಇದಕ್ಕಾಗಿ ಕೊಟ್ಟಿದ್ದಾರೆ. ನಿಮ್ಮ ಮಾತು ಸರಿಯಲ್ಲ ಎಂದಿದ್ದೆ.

ನಾಗಭೂಷಣ ದಂಪತಿಗಳ ಕಣ್‌ಬೆಳಕಿನಲ್ಲಿ ಬೆಳೆದ ಲಕ್ಷ್ಮೀ ಎಂಬ ಲಂಬಾಣಿ ಜನಾಂಗದ ಪ್ರತಿಭಾವಂತ ಹುಡುಗಿಗೆ ಹಾವೇರಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಅಪಾಯಿಂಟ್ಮೆ೦ಟ್ ಆದಾಗ ಅವಳನ್ನು ಬಿಡಲು ಹಾವೇರಿಗೆ ಬಂದಿದ್ದರು. ಹಾಸ್ಟೇಲೊಂದರಲ್ಲಿ ಅವಳಿಗೆ ಇರುವ ವ್ಯವಸ್ಥೆ ಮಾಡಿಕೊಟ್ಟಿದ್ದೆ. ಇದು ನಮ್ಮ ಪ್ರೀತಿಯ ಮಗಳು ಲಕ್ಷ್ಮೀ ಅವಳ ಜವಾಬ್ದಾರಿ ನಿಮ್ಮದು ಎಂದು ಸವಿತಾಜಿ ಹೇಳಿದ್ದರು. ನಾಗಭೂಷಣ ದೂರವಾಣಿಯ ಮೂಲಕ ಉಳಿಯುವ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕಾಗಿ ಕೃತಜ್ಞತೆ ಸೂಚಿಸಿದ್ದರು.

ಅದ್ಭುತ ಮನುಷ್ಯ, ಯಾರ ಹಂಗಿಲ್ಲದೆ ಉರಿಯುವ ಬೆಂಕಿಗೆ ಕೈ ಹಾಕುವ ತಾಕತ್ತಿನವ. ಈಗ ಬರವಣಿಗೆಗೆ ವಿರಾಮ ಹೇಳಿದ್ದಾರೆ. ನನಗೆ ಮತ್ತೆ ಮತ್ತೆ ನೆನಪಾಗುವುದು… ಪ್ರೀತಿಯಿಂದ ವಿಷ ಕೊಟ್ಟರೂ ನಾನು ಕುಡಿಯುತ್ತೇನೆ ಎಂಬ ಮಾತು.

‍ಲೇಖಕರು Admin

May 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: