ಭಾನು ಮುಷ್ತಾಕ್ ಬರಹ: ಮೌನವೆಂಬುದು ಶರಣಾಗತಿಯ ಇನ್ನೊಂದು ರೂಪ

ಬಾನು ಮುಷ್ತಾಕ್

(ಸದ್ಯದಲ್ಲೇ ಲಡಾಯಿ ಪ್ರಕಾಶನದಿಂದ ಹೊರಬರುತ್ತ್ತಿರುವ ಭಾನು ಮುಷ್ತಾಕ್ ಅವರ ಲೇಖನ ಸಂಗ್ರಹಕ್ಕೆ ಬರೆದಿರುವ ಮಾತು ಇದು)

ಹೀಗೆ ನಿಮ್ಮೊಡನೆ ಒಂದಿಷ್ಟು ಅತ್ಮೀಯವಾಗಿ ಮಾತನಾಡುವಾಗ ನನಗೆ ಒಂದು ಕತೆ ನೆನಪಾಗುತ್ತಿದೆ. ಬಹುಶಃ ಜಾನಪದ ಹಿನ್ನೆಲೆಯಿಂದ ಈ ಕಥೆ ಹುಟ್ಟಿರಬಹುದು ಎಂದು ನನ್ನ ಅನಿಸಿಕೆ . ನಾನು ಎಲ್ಲಿ ಈ ಕಥೆಯನ್ನು ಕೇಳಿದ್ದೆ ಎನ್ನುವುದು ಕೂಡ ನೆನಪಾಗುತ್ತಿಲ್ಲ. ಪೂರ್ತಾ ಕತೆ ಕೂಡಾ ನೆನಪಿನಲ್ಲಿ ಉಳಿದಿಲ್ಲ . ಮನಸ್ಸಿನಾಳದಲ್ಲಿ ಎಲ್ಲೋ ಹುದುಗಿದ್ದ ಒಂದು ಎಳೆಗೆ ನನ್ನ ಕಲ್ಪನೆಯನ್ನೂ ಸೇರಿಸಿಕೊಂಡು ಹೇಳುವುದಾದರೆ ಕಥೆ ಹೀಗಿದೆ ;

ಆಕೆಯೊಬ್ಬ ಕನಸುಗಣ್ಣಿನ ಚೆಲುವೆ . ಬಳುಕುವ ಬಳ್ಳಿಯಂತಿದ್ದ ಆಕೆಗೆ ಪ್ರಕೃತಿದತ್ತವಾದ ಯೌವನದೊಂದಿಗೆ ಸಿರಿಕಂಠದ ಬಳುವಳಿಯೂ ದೊರಕಿತ್ತು . ಆಕೆ ಹಾಡುತ್ತಾ ಹಾಡುತ್ತ ಬೆಳೆದಳು . ಅಕೆಯ ಕಂಠ ಮಾಧುರ್ಯಕ್ಕೆ ಸೋತ ಕೋಗಿಲೆಯೊಂದು ಬಾಲ್ಯದಿಂದಲೇ ಅದಕೆ ಹಾಡಿನ ಸಾಂಗತ್ಯವನ್ನು ನೀಡುತ್ತಿತ್ತು . ಇಬ್ಬರೂ ಅನ್ಯೋನ್ಯವಾಗಿದ್ದರು . ಹೊಸಹೊಸ ರಾಗಗಳನ್ನು ಸೃಷ್ಟಿಸಿದ್ದೇವೆ ಎಂಬ ಯಾವ ಹಮ್ಮುಬಿಮ್ಮುಗಳಿಲ್ಲದೆ ಸಹಜವಾಗಿ,ಮುಕ್ತವಾಗಿ ಸಂತೋಷದಿಂದ ಹಾಡುತ್ತಾ ಆತ್ಮ ತೃಪ್ತಿಯನ್ನು ಪಡೆಯುತ್ತಿದ್ದರು . ಆಕೆ ನೀರಿಗೆ ಹೋದಾಗ ಅದು ಮರದಿಂದ ಮರಕೆ ಹಾರುತ್ತ ,ಬೀಸುಗಾಳಿಯ ನಿನಾದದ ಲಯವನ್ನು ಆಕೆಯ ಹೃದಯದಲಿ ಸ್ಥಾಪಿಸುತ್ತಿತ್ತು . ಆಕೆ ಕೆರೆಯಲಿ ಬಿಂದಿಗೆಯನ್ನು ಮುಳುಗಿಸಿದಾಗ ,ಅದರ ನಾದಕೆ ಸೊತು ಕೋಗಿಲೆ ಅವಳ ಸುತ್ತಾ ರೆಕ್ಕೆ ಬಡಿದು ಸುಳಿ ಸುಳಿದು ಚಿಮ್ಮುತ್ತಿತ್ತು .

ಅವರಿಬ್ಬರ ನೆಂಟನ್ನು ಕಂಡು ಹಲವಾರು ಮಂದಿ ಸಂತೋಷ ಪಡುತ್ತಿದ್ದರು . ಆದರೆ ವಿಘ್ನಸಂತೋಷಿಗಳೂ ಕೂಡ ಇರುತ್ತಾರಲ್ಲಾ . .. . ಅವರು ಪುಕಾರೊಂದನ್ನು ಹಬ್ಬಿಸಿದರು . ಆಕೆಗೆ ಯಾವುದೋ ಪ್ರೇತದ ಕಾಟವಿದೆ . . .ಅದು ಕೋಗಿಲೆಯ ರೂಪದಲ್ಲಿ ಆಕೆಯನ್ನು ಕಾಡುತ್ತಿದೆ. . ಗೊತ್ತಲ್ಲಾ ಈ ಪ್ರಪಂಚದ ರಿವಾಜು ; ಮಾಮೂಲಿಗಿಂತ ಭಿನ್ನವಾದುದು ಮತ್ತು ಈ ಜನರ ಅರಿವಿಗೆ ಎರವಾದುದು ದೇವರಾಗುತ್ತೆ ಇಲ್ಲ ದೆವ್ವವಾಗುತ್ತೆ . ಹೀಗಾಗಿ ಅವಳ ಮದುವೆಯೇ ಆಗಲಿಲ್ಲ . ಆ ಕಾರಣದಿಂದಲೇ ಆಕೆ ಹಾಡುತ್ತಾ ಹಾಡುತ್ತಾ ಮತ್ತು ಕೋಗಿಲೆಯ ಸ್ವರ ಬಾಂಧವ್ಯದೊಂದಿಗೆ ನೆಮ್ಮದಿಯಾಗಿದ್ದಳು .

ತಂಪಾದ ಮಳೆಗಾಲದ ಒಂದು ದಿನ ಕೋಗಿಲೆಯು ಅವಳ ಅಡಿಗೆ ಮನೆಯ ಕಿಟಕಿಯಲ್ಲಿ ಬಂದು ಕುಳಿತು ಅವಳ ಕೈಯ ರವಷ್ಟು ತಿನಿಸು ಮತ್ತು ಅವಳ ಧ್ವನಿಯ ಮಾಧುರ್ಯದ ಇಂಪು ಒಂದಿಷ್ಟನ್ನು ನಿರೀಕ್ಷಿಸುತ್ತಿತ್ತು . ಆದರೆ ಕಿಟಕಿಯಿಂದ ಹೊರ ಚಾಚಿದ್ದು ರೊಮಭರಿತ ಒರಟು ಕೈ .ಅವಳ ತಂದೆ ಆ ಕೋಗಿಲೆಯನ್ನು ಸೆರೆಹಿಡಿದ ಮತ್ತು ಯಾರೋ ಒಬ್ಬ ದೂರದೇಶದವನನ್ನು ಹಿಡಿದು ಆಕೆಯ ಮದುವೆಯನ್ನು ಮಾಡಿ ಮುಗಿಸಿದ . ಅದೆಷ್ಟೋ ದಿನಗಳ ನಂತರ ಬಿಡುಗಡೆ ಹೊಂದಿದ ಕೋಗಿಲೆ ಆಕೆಯ ದನಿಗಾಗಿ ಪರಿತಪಿಸಿತು . ತನ್ನ ರೆಕ್ಕೆಗಳ ಸಾಮರ್ಥ್ಯವನ್ನು ಕೂಡ ಮೀರಿ ಹದ್ದಿನಂತೆ ನಭದ ವಿಸ್ತಾರದಗಲಕೂ ರೆಕ್ಕೆಗಳನು ಹರಡಿತು . ಅದು ಅಲೆದು ಅಲೆದು ಬೆಂಡಾಯಿತು .ಅವಳ ಸುಳಿವು ಕೂಡ ದೊರಕಲಿಲ್ಲ .

ಅವಳ ಸಾಂಗತ್ಯ ಮತ್ತು ಒಡನಾಟದ ಅನ್ವೇಷಣೆಯೇ ಆ ಕೋಗಿಲೆಯ ಬದುಕಿನ ಪರಮ ಗುರಿಯಾಯಿತು . ಒಂದು ದಿನ ಬೆಂಗಾಡಿನ ಒಂಟಿ ಮನೆಯ ಚಿಮಣಿಯ ಹೊಗೆಯನ್ನು ನಿರ್ಲಕ್ಷಿಸಿ , ಬೇರೆತ್ತಲೋ ಹಾರಬೇಕೆಂದುಕೊಂಡಿದ್ದ ಕೋಗಿಲೆಗೆ ಯಾವುದೋ ಚಿರಪರಿಚಿತ ಸುವಾಸನೆ ಆಕರ್ಷಿಸಿತು . ನಿಧಾನಕ್ಕೆ ರೆಕ್ಕೆಗಳ ಇಳಿ ಬಿಟ್ಟು ಒಂಟಿ ಮನೆಯ ಪಕ್ಕದ ಮಾವಿನ ಮರದ ಮೇಲೆ ಬೀಡು ಬಿಟ್ಟು ಕುಹೂ ಕುಹೂ ಎಂದು ಉಲಿಯಿತು . ಅದರ ಸ್ವರ ಮಾತ್ರ ಪ್ರತಿಧ್ವನಿಸಿತು . ಸುತ್ತಲೂ ನಿರುತ್ತರ .ಸೋತು ಬಳಲಿ ಬೆಂಡಾಗಿ ಹನಿದುಂಬಿದ ಕಿರಿದಾದ ಕಂಗಳಿಂದ ಅದು ವೀಕ್ಷಿಸಿದಾಗ , ಕಿಟಕಿಯ ಬಳಿ ಚಾಚಿದ್ದು, ಅದೇ ಚಿರಪರಿಚಿತ ಅನ್ನವಿಕ್ಕಿದ ಕೈ .

ಸಂತೋಷಾತಿರೇಕದಿಂದ ಅದರ ಕಂಠವೇ ರುದ್ಧವಾಯಿತು . ಅದರೂ ಸಾವರಿಸಿಕೊಂಡು , ಅದು ತನ್ನ ಎದೆಯ ಹಾಡನು ಆಲಾಪಿಸಿತು . ಸಂತೋಷ ,ದುಃಖ ,ಯಾತನೆ ,ವಿರಹ -ಎಲ್ಲಾ ಭಾವಗಳನು ಪಲಕು ಹಾಕಿತು . ಯಾವುದೇ ಪ್ರತಿಕ್ರಿಯೆ ಇಲ್ಲಾ . ತನ್ನ ಜೀವದುಂಬಿದ ಹಸಿಮಣ್ಣಿನ ಸಂದೇಶ ಅಕೆಗೆ ತಲುಪಿತೋ ಇಲ್ಲವೋ . . . ಆಕೆ ಹೌದೋ ಅಲ್ಲವೋ . . . . ಹಾಗಾದರೆ ಅವಳೆಲ್ಲಿ ? ಅದರ ಚಡಪಡಿಕೆಯನ್ನು ಪರದೇಶದಲ್ಲಿ ಕೇಳುವವರಾದರೂ ಯಾರು ? ಅದರ ಕಂಠವು ದನಿಯನ್ನು ಕಳೆದುಕೊಂಡು ,ಮೈ ಮನಸು ಶಕ್ತಿಹೀನವಾಗಿ ,ಗೋಣನ್ನು ಚೆಲ್ಲಬೇಕೆಂದು ಕೊಂಡಾಗ , ಆ ಮನೆಯ ಕದ ತೆರೆಯಿತು . ಅವಳು ಮೆಲ್ಲನೆ ಅಡಿ ಇಟ್ಟು ಬಂದಳು . ಕೃಶಾಂಗಿಯಾಗಿದ್ದ ಅವಳು ಬೀರಿದ್ದು ಒಂದೇ ನೋಟ . ’ಎಲ್ಲವೂ ಸರಿ ಇಲ್ಲಾ . ಏನೇನೂ ಸರಿ ಇಲ್ಲಾ ’ ಅದರ ಎದೆ ಬಿರಿಯಿತು .

ಅವಳು ಮತ್ತೊಂದು ದೃಷ್ಟಿಯನ್ನು ಅದರತ್ತ ಹಾಯಿಸಲಿಲ್ಲ . ನಿದಾನವಾಗಿ ನೆಲದತ್ತ ನೊಟವನ್ನು ನೆಟ್ಟು ರಂಗವಲ್ಲಿಯನ್ನು ಬಿಡಿಸತೊಡಗಿದಳು , ಆ ರಂಗವಲ್ಲಿಯು ಚಿತ್ರವಾಗುತ್ತಾ ಹೋಗುತ್ತಿದ್ದಂತೆಯೇ ರಾಗಗಳು ಗಾಳಿಯಲ್ಲಿ ಬಿತ್ತರವಾಗತೊಡಗಿದವು . ಥರಥರನೆ ನಡುಗಿದ ಕೋಗಿಲೆ ತನ್ನ ಹೃದಯವಿದ್ರಾವಕವಾದ ಚೀತ್ಕಾರವನ್ನು ಅಲ್ಲಿಯೇ ತಡೆ ಹಿಡಿಯಿತು .ರಂಗವಲ್ಲಿ ಸ್ಫುಟವಾಗತೊಡಗಿತು . ಅದು ಬಿತ್ತರಿಸಿದ ಸಂದೇಶ ಹೀಗಿತ್ತು ” ನಾನು ಹಾಡಲಾರೆ , ಅವನು ನನ್ನ ನಾಲಿಗೆಯನ್ನು ತುಂಡರಿಸಿದ್ದಾನೆ. ಈ ರಂಗವಲ್ಲಿಯ ಮೂಲಕ ನಾನು ನನ್ನ ಸಂಗತಿಯನ್ನು ಅರುಹಲು ಹೊರ ಬಂದಿದ್ದೇನೆ . ನೀನು ಇಲ್ಲಿಂದ ಹೋಗು ; ನಿನ್ನ ಗಗನ ವಿಸ್ತಾರವಾಗಿದೆ . ಯಾವಾಗಲಾದರೊಮ್ಮೆ ನಿನ್ನ ಕುಹೂ ಕುಹೂ ರಾಗ ನನ್ನ ಕಿವಿಗೆ ಬಿದ್ದರೆ , ನನ್ನ ಪುಣ್ಯ “. ಆ ಕೋಗಿಲೆ ಹಾರಿತೇ ಅವಳ ಸಾಂಗತ್ಯವನ್ನು ತೊರೆದು ? ಯಾವುದಾದರೂ ಯಕ್ಷಿಣಿ ಅಥವ ದೈವಕೃಪೆಯಿಂದ ಅವಳ ನಾಲಿಗೆ ಮರಳಿ ಬೆಳೆಯಿತೇ? ಮತ್ತೆ ಅವರಿಬ್ಬರ ಕೂಡು ಮೇಳ ಮುಂದುವರೆಯಿತೆ ? ಈ ಬಾಂಧವ್ಯವು ಸಮಾಜದ ಸಂಕೋಲೆಗಳಿಂದ ಮುಕ್ತವಾಗಿ ಹೊಸ ದಿಕ್ಕು ದೆಶೆಗಳನ್ನು ಅರಸಿತೇ? ಈ ಸಂಬಂಧಕ್ಕೆ ಸಮಾಜ ಹೆಸರನ್ನೇನಾದರೂ ಕೊಟ್ಟು ಮಾನ್ಯ ಮಾಡಿತೇ ?

ಇನ್ನೇನು ಸಾಧ್ಯತೆಗಳು ಸನ್ನಿವೇಶಗಳು ಕೂಡಿ ಶುಭ ಮಂಗಳದ ಮುಕ್ತಾಯವಾಗಬೇಕು ; ಅಥವಾ ಇದೊಂದು ದುರಂತ ಅಂತ್ಯವನ್ನು ಕಾಣುವುದೇ – ಈ ಎಲ್ಲಾ ವಿಷಯವು ಮುಂದುವರೆಯ ಬೇಕಾದುದು ನಿಮ್ಮ ಕಲ್ಪನೆಯ ಆಧಾರದ ಮೇಲೆ, ನಿಮ್ಮ ಮನಸ್ಸಿನ ಪರದೆಯ ಮೇಲೆ . ನಿಮ್ಮ ಆಲೋಚನೆ ಇನ್ನೊಂದು ರೀತಿಯಲ್ಲಿ ಪ್ರವಹಿಸಲು ಕೂಡ ಸಾಧ್ಯವಿದೆ .ಇದೊಂದು ಪ್ರೇಮ ಕಥೆ . ಆ ಕೋಗಿಲೆ ಒಬ್ಬ ಶಾಪಗ್ರಸ್ತ ರಾಜಕುಮಾರ . ಅದರ ಪ್ರೀತಿಯ ಶಕ್ತಿಯಿಂದ ಅವಳು ನಾಲಿಗೆಯನ್ನು ಮತ್ತು ತನ್ನ ಗಾನವನ್ನು ಮರಳಿಪಡೆದಳು ಅವಳ ಪ್ರೀತಿಯ ದೆಸೆಯಿಂದ ಆ ಕೋಗಿಲೆಯ ಮಾರುವೇಷ ಕಳಚಿ ರಾಜಕುಮಾರನಾದ ಎಂದು ಸುಲಭವಾಗಿ ಕೆಲವರು ಪರಿಹಾರ ಸೂಚಿಸಿ , ಪರರ ಪತ್ನಿಯನ್ನು ದಾರಾಳವಾಗಿ ಪರಪುರುಷನಿಗೆ ಧಾರೆ ಎರೆದು ಕೊಟ್ಟು ನೆಮ್ಮದಿಯನ್ನು ಅನುಭವಿಸಬಹುದು .

ನಾನು ಈ ಅಪೂರ್ಣ ಕಥೆಯನ್ನು ಮುಂದಿಟ್ಟುಕೊಂಡು , ಮನುಷ್ಯ ಜೀವಿಯ ಅಭಿವ್ಯಕ್ತಿಯ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇನೆ. ಅದರಲ್ಲಿಯೂ ಅವಳ ಅಸ್ತಿತ್ವವನ್ನು ಹದ್ದುಬಸ್ತಿನಲ್ಲಿಟ್ಟಿರುವ ಸಾಮಾಜಿಕ ಸೀಮಾರೇಖೆಗಳು ಅವಳ ಅಭಿವ್ಯಕ್ತಿಯ ಸಾಧ್ಯತೆಗಳಿಗೆ ನಿರ್ಮಿಸಿರುವ ನಿರ್ದಯ ಗಡಿಗಳನ್ನು ಹಾಗೂ ಅದನ್ನು ಉಲ್ಲಂಘಿಸಿದವರ ಮೇಲಿನ ಅಮಾನುಷ ಕ್ರೌರ್ಯವನ್ನು ಗಮನಿಸಿದಾಗ, ’ ಅವಳ ನಾಲಿಗೆ’ ಕೇವಲ ಸಂಕೇತವಾಗಿ ಉಳಿಯುವುದಿಲ್ಲ ; ಬದಲಿಗೆ ವಿಭಿನ್ನ ರೂಪದಲ್ಲಿ ಇತಿಹಾಸದ ಪುಟಗಳಲ್ಲಿ ಪದೇ ಪದೇ ಪ್ರಕಟಗೊಳ್ಳುವ ವಾಸ್ತವತೆಯಾಗುತ್ತದೆ. ನಾಗರಿಕ ಸಮಾಜದ ಅಸೀಮ ಸಾಧ್ಯತೆಗಳ ನಡುವೆಯೂ ಈ ವಾಸ್ತವತೆ ತನ್ನ ಎಲ್ಲಾ ಕರಾಳಮುಖಗಳೊಂದಿಗೆ ವಿಜೃಂಭಿಸುತ್ತದೆ.

ಅಭಿವ್ಯಕ್ತಿ ಕ್ರಿಯೆಯು ನಮ್ಮ ವ್ಯಕ್ತಿತ್ವದ ಅವಿನಾವ ಭಾಗ ,ನಮ್ಮ ಸಾಮಾಜಿಕ ವ್ಯಕ್ತಿತ್ವದ ಅಭಿವ್ಯಕ್ತಿಯು ನಾವು ನಂಬಿದ ಸತ್ಯಗಳ ಆಧಾರದ ಮೇಲೆ ಪ್ರೇರಿತವಾಗಿರುತ್ತದೆ .ನಮ್ಮ ವೈಯುಕ್ತಿಕ ಸತ್ಯ ಮತ್ತು ಇತರೆಯವರ ಸತ್ಯದ ನಡುವಿನ ತಾಕಲಾಟ ಮತ್ತು ಮೇಲುಕೀಳಾಟವು ಪಟ್ಟಭದ್ರಹಿತಾಸಕ್ತಿಗಳು ಹಾಗೂ ಪ್ರಭುತ್ವಕ್ಕೆ ಎಂದಿನಿಂದಲೂ ಸವಾಲನ್ನು ಒಡ್ಡುತ್ತಲೇ ಬರುತ್ತಿವೆ . ಹಾಗೂ ನಿರ್ದಯವಾಗಿ ದಮನಕ್ಕೆ ಒಳಗಾಗುತ್ತಲೇ ಇವೆ . ವರ್ತಮಾನದ ಬದುಕಿನಲ್ಲಿ ಮೌನವೆಂಬುದು ಶರಣಾಗತಿಯ ಇನ್ನೊಂದು ರೂಪವಾಗುತ್ತಿದೆ . ಯಾರ ಪರವೂ ವಹಿಸದೇ ಇರುವುದೂ ಕೂಡ ಪರ ವಹಿಸಿದಂತೆ ಎಂಬ ಸತ್ಯವನ್ನು ನಾವು ಕಂಡೂ ಕಾಣದಂತೆ ಮೌನ ವಹಿಸಿ ಜಾಣ ಕುರುಡು ಮತ್ತು ಜಾಣ ಕಿವುಡನ್ನು ಅಭ್ಯಾಸ ಮಾಡಿಕೊಂಡಿದ್ದೇವೆ .

ನಾಜೂಕಾಗಿ ನಾವು ಬದುಕುವುದನ್ನು ಕಲಿಯುತ್ತಿದ್ದೇವೆ . ಹೀಗಾಗಿ ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವುದಕ್ಕೆ ಬದಲಾಗಿ ಮುಂದೊಂದು ದಿನ ಯಾವಾಗಲಾದರೂ ಉಪಯೋಗಕ್ಕೆ ಬಂದೀತೆಂದು ಅವುಗಳನ್ನು ಶೈತ್ಯೀಕರಿಸುವ , ಮಂಜುಗಡ್ಡೆಯನ್ನಾಗಿಸುವ ಕ್ರಿಯೆಯಲ್ಲಿ ತೊಡಗಿದ್ದೇವೇನೋ . . . . ಎಂದೆನಿಸುತ್ತಿದೆ . ಈ ಎಲ್ಲಾ ಅತಂಕ ಮತ್ತು ಕಾರ್ಮೋಡಗಳ ನಡುವೆ ಹಿಂದೆ ನಾನು ಕಾಲಕಾಲಕ್ಕೆ ಸಾಮಾಜಿಕವಾಗಿ ಪ್ರತಿಕ್ರಿಯೆ ನೀಡಿದ ಕೆಲವು ಲೇಖನಗಳು ನನ್ನ ಕಣ್ಣ ಮುಂದೆ ಮೂಡಿದ ಸಂದರ್ಭದಲ್ಲಿಯೇ ಮಿತ್ರರಾದ ಬಸವರಾಜ ಸೂಳಿಭಾವಿಯವರು ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ , ಆ ಪ್ರಬಂಧಗಳನ್ನು ಪ್ರಕಟಿಸುವುದಾಗಿ ಹೇಳಿದರು . ಮತ್ತು ಅವುಗಳ ಪೈಕಿ ಕೆಲವೊಂದು ನಿಮ್ಮೆದುರಿಗೆ ಇವೆ .

ನೀಲು , ಇಶಿಡೋಲ್ಮ ,ಜಮಾಲ್‌ನನ್ನು ಕಬಳಿಸಿದ ಆಲೂ ಗೆಡ್ಡೆ , ಹಜ್ ಕಮಿಟಿ , ಕಪ್ಪುಹಣ , ಮದ್ರಸ -ಇವುಗಳೆಲ್ಲಾ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದವು . ಆವರಣದ ಬಗ್ಗೆ ಬರೆದ ಪ್ರಬಂಧವು ಗೌರಿ ಲಂಕೇಶ್ ಪ್ರಕಟಿತ ’ಆವರಣ ಒಂದು ವಿಕೃತಿ ’ಪುಸ್ತಕದಲ್ಲಿ ಪ್ರಕಟವಾಗಿದೆ . ಸಾಮಾಜಿಕ ಪ್ರತ್ಯೇಕೀಕರಣ ದ ಬಗೆಗಿನ ಲೇಖನವು ಚಂದ್ರಶೇಖರ್ ಐಜೂರ್‌ರವರ ಅನುರೋಧದ ಮೆರೆಗೆ ಮೂಡಿಬಂದದ್ದು. ಸಾರಾಗೊಂದು ಪತ್ರ ವು ಸಬೀಹಾರವರ ಕೋರಿಕೆ ,ನೆನಪಿನ ದೂರವಾಣಿ ಮತ್ತು ಕೊನೆಯದಾಗಿ ಅವರ ಭಯೋತ್ಪಾದನೆಯ ಮೇರೆಗೆ ಅಕ್ಷರ ರೂಪವನ್ನು ತಾಳಿದ್ದು . ಸೊರಯ್ಯಾ ,ಎಮ್ ಮತ್ತು ಲಂಕೇಶರವರ ಬಗೆಗಿನ ಲೇಖನವು ತಿಂಗಳು ಮಾಸಪತ್ರಿಕೆಯ ಸಂಪಾದಕರು ಮತ್ತು ಅಭಿರುಚಿ ಪ್ರಕಾಶನದ ಗಣೇಶ್‌ರವರ ಕೋರಿಕೆಯ ಮೇರೆಗೆ – ಹೀಗೆ ಈ ಬರವಣಿಗೆಯ ಹಿನ್ನೆಲೆಯಲ್ಲಿ ಮತ್ತು ಪ್ರಕಟಗೊಂಡಿದ್ದರ ಬಗ್ಗೆ ಅನೇಕಾನೇಕ ಮಿತ್ರರ ಒತ್ತಡ ಮತ್ತು ಅನುರೋಧವು ಕ್ರಿಯಾಶೀಲವಾಗಿದೆ .ಅವರೆಲ್ಲರಿಗೂ ನನ್ನ ಕೃತಜ್ಞತೆಗಳು . ಆಯಾಕಾಲಘಟ್ಟದ ನನ್ನ ಅನಿಸಿಕೆಗಳು ಹಾಗೂ ಸಾಮಾಜಿಕ ನಿಲುವುಗಳನ್ನು ನಿಮ್ಮೆದುರಿಗೆ ಸಂಕಲನದ ರೂಪದಲ್ಲಿ ತರಲು ಶ್ರಮಿಸಿರುವ ಬಸವರಾಜ್‌ರವರಿಗೆ ವಂದನೆಗಳನ್ನು ಸಲ್ಲಿಸುತ್ತಾ

– ಬಾನು ಮುಷ್ತಾಕ್

 

 

‍ಲೇಖಕರು G

March 5, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. vibha

    banuji, nimage nimma katha rupada hudukatakke salam.mouna sharaagatiya athava asayakathegya innondu mukha, idu nija tamma e janapada shyliya kathe hrudaya thattide. varthamaanada vaastavakke kannadi hididide.

    ಪ್ರತಿಕ್ರಿಯೆ
  2. lingaraju bs hassan

    idu kathe alla.nijavadudu.ellaa janapada kathegalu ello ondu kade bahushah nammaneyallu nadedira bahudu.nammavva enadru helalu bayteredaaga summaniru ninge gootagalla annuvaga athava naanedru nanna shreemathige ee reethi helovaga ee katheyannu nammavva nange heltale.mattomme nenapisiddakkagi thanks.adu international women day century sandarbhadalli.

    ಪ್ರತಿಕ್ರಿಯೆ
  3. Mahesh

    ಖಂಡಿತ, ಸುರಕ್ಷತೆಗಾಗಿ ಸ್ವಾತಂತ್ರ್ಯವನ್ನು ದೂರ ಮಾಡಿದರೆ ಸ್ವಾತಂತ್ರ್ಯ ಮತ್ತು ಸುರಕ್ಷೆ ಎರಡನ್ನೂ ಕಳೆದುಕೊಳ್ಳುತ್ತೇವೆ ನಿಮ್ಮ ಕತೆ ಓದಿ ಅವಳ ಪರಿಸ್ಥಿತಿಯನ್ನು ನೆನೆದು ತುಂಬಾ ಬೇಜಾರಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: