ಎಚ್ಚೆಸ್ವಿ ಅನಾತ್ಮ ಕಥನ: ಮೆಲ್ಲಗೆ! ಅಜ್ಜಿಯ ಕಾಲಿಗೆ ಬಾಗಿಲವಾಡ ತಾಕುತ್ತೆ…

೧೯೭೩. ನಾನು ಎಂ.ಎ ಪರೀಕ್ಷೆ ಮುಗಿಸಿ ಬೆಂಗಳೂರಿಂದ ಊರಿಗೆ ಹಿಂದಿರುಗಿ, ಮತ್ತೆ ಮಲ್ಲಾಡಿಹಳ್ಳಿಯ ಹೈಸ್ಕೂಲಲ್ಲಿ ಕ್ರಾಫ್ಟ್ ಟೀಚರ್ ಹುದ್ದೆ ಮುಂದುವರೆಸಿದೆ. ಎಂ ಎ ಆಗಿದ್ದರು ಯಾವುದಾದರೂ ಕಾಲೇಜಲ್ಲಿ ಕೆಲಸ ಸಿಗಬಹುದೆಂಬ ಗ್ಯಾರಂಟಿಯೇನೂ ನನಗೆ ಇರಲಿಲ್ಲ. ಸಂದರ್ಶನದ ಮೊದಲ ಎರಡು ಅನುಭವಗಳು ಕೂಡ ನನಗೆ ಹಿತಕಾರಿಯಾಗಿರಲಿಲ್ಲ. ಶಿವಮೊಗ್ಗದ ಡಿ ವಿ ಎಸ್ ಕಾಲೇಜಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದೆ. ನನ್ನ ಆಯ್ಕೆ ಆಗಲಿಲ್ಲ. ಸತ್ಯನಾರಾಯಣರಾವ್ ಅಣತಿಯವರ ಆಯ್ಕೆ ಆಯಿತು. ತೀರ್ಥಹಳ್ಳಿಯ ಕಾಲೇಜಿಗೆ ಶಿವಮೊಗ್ಗದಲ್ಲೇ ಸಂದರ್ಶನ ನಡೆಯಿತು. ಅಲ್ಲಿಯೂ ನನ್ನ ಆಯ್ಕೆ ಆಗಲಿಲ್ಲ. ರಮೇಶ್ ಅವರ ಆಯ್ಕೆ ಆಯಿತು.

ಪ್ರಾಯಶಃ ನನಗೆ ಯಾವುದಾದರೂ ಕಾಲೇಜಲ್ಲಿ ಉಪನ್ಯಾಸಕ ಹುದ್ದೆ ದೊರೆಯಬಹುದು ಎಂಬ ನಂಬಿಕೆ ನಿಧಾನವಾಗಿ ಕರಗತೊಡಗಿತ್ತು. ಹೇಗೂ ಕ್ರಾಫ್ಟ್ ಮೇಷ್ಟ್ರ ಹುದ್ದೆ ಒಂದು ಇತ್ತಲ್ಲ! ಸದ್ಯಕ್ಕೆ ಹೀಗೆ ನಡೆಯಲಿ ಮುಂದಿನದು ದೇವರ ಚಿತ್ತ ಎಂದುಕೊಂಡು, ನಿತ್ಯ ಹೋದಿಗ್ಗೆರೆಯಿಂದ ಮಲ್ಲಾಡಿಹಳ್ಳಿಗೆ ಓಡಾಡುತ್ತಾ ನನ್ನ ಯಾವತ್ತಿನ ದಿನಚರಿ ಪ್ರಾರಂಭಿಸಿದ್ದು ಆಯಿತು. ನನ್ನಲ್ಲಿ ಒಂದು ವಿಚಿತ್ರ ಸ್ವಭಾವವುಂಟು. ಬದುಕು ಹೇಗೆ ಹೇಗೆ ಒದಗುತ್ತದೋ ಹಾಗೆ ಹಾಗೆ ಅದನ್ನು ತೆಗೆದುಕೊಳ್ಳುತ್ತಾ ಹೋಗುವ ಸ್ವಭಾವ ಅದು. ಯಾವುದೋ ಸಿಗಬೇಕಾದದ್ದು ಸಿಗಲಿಲ್ಲವೆಂದು ವ್ಯಗ್ರಗೊಳ್ಳುವ ಸ್ವಭಾವ ಅದಲ್ಲ. ಇದಕ್ಕೆ ಆತ್ಮವಿಶ್ವಾಸದ ಕೊರತೆ ಕಾರಣವೋ…ನನಗಿಂತ ಅರ್ಹರಾದ ಬೇಕಾದಷ್ಟು ಮಂದಿ ಪ್ರತಿಭಾವಂತರು ಈ ಜಗತ್ತಲ್ಲಿ ಇದ್ದಾರೆ ಎಂಬ ವಿನಯ ಕಾರಣವೋ ದೇವರಾಣೆ ಗೊತ್ತಿಲ್ಲ…

ಭೀಮಜ್ಜಿ ಆಗ ನನ್ನೊಂದಿಗೇ ಇದ್ದರು. ಒಂದೆರಡು ದಿನದ ಮಟ್ಟಿಗೆ ತಂಗಿಯ ಮನೆಗೆ ಹೋಗಿದ್ದರು. ಅಲ್ಲಿ ಅವರಿಗೆ ಒಂದು ಬೆಳಿಗ್ಗೆ ಹಾಸಿಗೆ ಬಿಟ್ಟು ಮೇಲೇಳುವುದೇ ಸಾಧ್ಯವಾಗಲಿಲ್ಲವಂತೆ. ಡಾಕ್ಟರ್ ಬಂದು ನೋಡಿ ಸ್ಟ್ರೋಕ್ ಆಗಿದೆ ಎಂದು ಹೇಳಿದರಂತೆ. ಒಂದು ಕಾರು ಬಾಡಿಗೆ ಮಾಡಿಕೊಂಡು ಭೀಮಜ್ಜಿಯನ್ನು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಊರಲ್ಲಿ ನಾನು ನನ್ನ ಹೆಂಡತಿ ಮತ್ತು ತಾಯಿ. ಇಬ್ಬರು ಮಕ್ಕಳು. ಭೀಮಜ್ಜಿಯನ್ನು ನೋಡಿಕೊಳ್ಳುವುದಕ್ಕೆ ಸೀತಜ್ಜಿ ಚಿತ್ರದುರ್ಗಕ್ಕೆ ಹೋಗಿದ್ದರು. ಅವರನ್ನು ತುಂಬ ಹಚ್ಚಿಕೊಂಡ ನನ್ನ ಎರಡನೇ ಮಗ ಸುಧಿ ಅವರ ಜೊತೆಯಲ್ಲೇ ಇದ್ದನು. ಆಗ ನಾಗರಹಾವು ಚಿತ್ರ ಬಂದ ಹೊಸದು. ಆಸ್ಪತ್ರೆಯ ದಾದಿಯರು ಸುಧಿಯನ್ನು ಅವನ ಉದ್ದ ಕೂದಲಿನ ಕಾರಣ ರಾಮಾಚಾರಿ ಎಂದು ಹಾಸ್ಯ ಮಾಡುತ್ತಿದ್ದರು. ಹುಡುಗ ತುಂಬ ಮುದ್ದಾಗಿದ್ದುದರಿಂದ ಎತ್ತಿಕೊಂಡು ಮುದ್ದಾಡುತ್ತಾ ಇದ್ದರು. ನಮ್ಮ ಅಜ್ಜಿ ನಮ್ಮ ಸೋದರಮಾವ ರಾಮದಾಸರ ಮನೆಯಲ್ಲಿ ಬಿಡಾರ ಹೂಡಿದ್ದರು. ರಾತ್ರಿ ದೊಡ್ಡಜ್ಜಿಯೊಂದಿಗೆ ಮಲಗುವುದಕ್ಕೆ ಆಸ್ಪತ್ರೆಗೆ ಬರುತ್ತಾ ಇದ್ದರು. ಬಸವನ ಹಿಂದೆ ಬಾಲ ಎನ್ನುವಂತೆ ಸುಧಿಯೂ ಅವರ ಹಿಂದೆ ಆಸ್ಪತ್ರೆಗೆ ಬಂದು ಅಲ್ಲೇ ಮಲಗುತ್ತಾ ಇದ್ದನು. ಸುಮಾರು ಹದಿನೈದು ದಿನ ಭೀಮಜ್ಜಿ ಆಸ್ಪತ್ರೆಯಲ್ಲಿ ಇದ್ದರು. ನಿಧಾನಕ್ಕೆ ಅವರು ಚೇತರಿಸಿಕೊಳ್ಳುತ್ತಾ ಇದ್ದರು. ಈಗೀಗ ಮೆಲ್ಲಗೆ ಕೋಲೂರಿ ನಡೆಯುವುದಕ್ಕೂ ಪ್ರಾರಂಭಿಸಿದ್ದರು. ಸ್ವಲ್ಪ ಕೈಯಿ ಕಾಲು ಸ್ವಾಧೀನಕ್ಕೆ ಬಂದ ಮೇಲೆ ತಮ್ಮ ಬಿಲ್ಲು ಮತ್ತು ಹತ್ತಿ ಬುಟ್ಟಿ ಆಸ್ಪತ್ರೆಗೇ ತರಿಸಿಕೊಂಡು ಅಲ್ಲೇ ತಮ್ಮ ಹೂಬತ್ತಿ ಹೊಸೆಯುವ ಗೃಹ ಕೈಗಾರಿಕೆ ಪ್ರಾರಂಭಿಸಿಯೇ ಬಿಟ್ಟರು! ಅವರನ್ನು ನೋಡಿ ವೈದ್ಯರಿಗೇ ಆಶ್ಚರ್ಯ. ಸಾಮಾನ್ಯವಾಗಿ ಸ್ಟ್ರೋಕ್ ಆದವರು ತಮ್ಮನ್ನು ನೋಡಲು ಬಂದವರೊಂದಿಗೆ ಮಾತೇ ಆಡದೆ ಗಳ ಗಳ ಅಳಲಿಕ್ಕೆ ಶುರುಮಾಡುತ್ತಾರಂತೆ. ಭೀಮಜ್ಜಿ ಅದಕ್ಕೆ ಅಪವಾದ. ಏನೇ ..ನಿನ್ನ ಗಂಡ ಹೇಗಿದ್ದಾನೇ? ನಿನ್ನ ಮಗುವಿಗೆ ಹಲ್ಲು ಬಂತಾ ಹೇಗೆ? ಮಗಳು ಇನ್ನೂ ಎರಡು ಜಡೆ ಹಾಕಿಕೊಳ್ಳುತ್ತಾಳಾ? ಮುಂತಾಗಿ ಬಂದವರನ್ನು ಪ್ರಶ್ನಿಸುತ್ತಾ ತಾವು ಯಾಕೆ ಆಸ್ಪತ್ರೆಯಲ್ಲಿ ಇರುವುದು ಎಂಬುದನ್ನೇ ಮರೆತುಬಿಡುತ್ತಿದ್ದರು!ಅವರನ್ನು ಪರೀಕ್ಷೆ ಮಾಡುವುದಕ್ಕೆ ಬೆಳಿಗ್ಗೆ ಒಬ್ಬ ಹುಡುಗ ವೈದ್ಯ ಬರುತ್ತಿದ್ದರು. ಅವರಿಗೆ ಹೆಣ್ಣು ನೋಡುವ ಉಸಾಬರಿ ಭೀಮಜ್ಜಿಗೆ. ತಮ್ಮ ಪರಿಚಯದ ಯಾರು ಯಾರನ್ನೋ ನೆನೆಸಿಕೊಳ್ಳುತ್ತಾ ಆ ಹುಡುಗಿ ನಮ್ಮ ಡಾಕ್ಟರಿಗೆ ಒಳ್ಳೆ ಜೋಡಿ ಆಗಬಹುದು ಅಲ್ಲವಾ? ಎಂದು ತಂಗಿಯೊಂದಿಗೆ ವಿಚಾರ ಮಾಡುತ್ತಿದ್ದರು. ತಾವು ಆಸ್ಪತ್ರೆಯಿಂದ ಡಿಸ್ಛಾರ್ಜ್ ಆಗುವ ವೇಳೆಗೆ ಆ ಡಾಕ್ಟರ್ ಒಂದಿಗೆ ಏಕವಚನದಲ್ಲೇ ಸಲ್ಲಪಿಸಲು ಶುರು ಹಚ್ಚಿದರು. ನಮ್ಮ ಅಕ್ಕ ಸ್ವಲ್ಪ ಹಳ್ಳಿಯವರು. ಅವರಿಗೆ ಹೇಗೆ ಮಾತಾಡುವುದೋ ತಿಳಿಯುವುದಿಲ್ಲ. ತಪ್ಪು ತಿಳ್ಕೋ ಬೇಡಿ ಸರ್ ಎಂದು ಸೀತಜ್ಜಿ ಹೇಳಿದರೆ, ಡಾಕ್ಟರ್ ನಕ್ಕು, ಪರವಾಗಿಲ್ಲ ಅಜ್ಜಮ್ಮಾ…ಅವರು ನನ್ನ ಅಜ್ಜಿಯ ಹಾಗೇ ಇದ್ದಾರೆ! ಎನ್ನುತ್ತಿದ್ದರಂತೆ.

ಭೀಮಜ್ಜಿ ಇನ್ನೂ ಆಸ್ಪತ್ರೆಯಲ್ಲಿ ಇರುವಾಗಲೇ ನನಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಲ್ಲಿ ಸಂದರ್ಶನ ಆಗಿ ಉಪನ್ಯಾಸಕ ಹುದ್ದೆ ದೊರೆತರೆ ನನಗದನ್ನು ನಂಬುವುದಕ್ಕೇ ಆಗಲಿಲ್ಲ. ಆರ್ಡರ್ ತೋರಿಸಿದರೂ ನಮ್ಮ ಅಮ್ಮ ಅಜ್ಜಿಗಳಿಗೆ ಅನುಮಾನವೇ. ನಿಜಕ್ಕೂ ಬೆಂಗಳೂರಲ್ಲಿ ಕೆಲಸ ಸಿಕ್ಕಿದೆಯಾ ಎಂದು ಮತ್ತೆ ಮತ್ತೆ ಕೌತುಕದಿಂದ ಅವರು ಕೇಳುತಾ ಇದ್ದರು. ನಿಮಗೆ ಒಳ್ಳೇ ಕಡೆ ಕೆಲಸ ಸಿಗತ್ತೆ ಅಂತ ನನಗೆ ಗೊತ್ತಿತ್ತು ಅಂತ ಹುಬ್ಬು ಎಗರಿಸಿದವಳು ನನ್ನ ಹೆಂಡತಿ ಮಾತ್ರ! ಮಲ್ಲಾಡಿಹಳ್ಳಿ ಶಾಲೆಗೆ ರಾಜಾನಾಮೆ ನೀಡಿ, ಅಲ್ಲಿನ ಆಪ್ತರಾದ ಟಿ ಎಸ್ ಆರ್, ಜಿ ಎಲ್ ಆರ್, ಚಿದಂಬರರಾವ್, ಮೊದಲಾದವರಿಗೆ ವಿದಾಯ ಹೇಳಿ ಹೊರಡುವಾಗ, ಸ್ವಾಮೀಜಿಯನ್ನು ಮಾತ್ರ ನೀವು ನೋಡ ಬೇಡಿ…ನೀವು ಕೆಲಸ ಬಿಡುತ್ತಿರೋದು ಅವರಿಗೆ ಕೋಪ ತರಿಸಿರತ್ತೆ ಅಂತ ಎಲ್ಲರೂ ಹಿತವಚನ ಹೇಳಿದರೂ, ನಾನು ಮೊಂಡಾಟ ಮಾಡಿಕೊಂಡು, ಅವರು ಏನು ಬೇಕಾದರೂ ಅನ್ನಲಿ, ನಾನು ಅವರಿಗೆ ಹೇಳಿ ಹೋಗುವುದೇ ಸರಿ ಎಂದು ಸ್ವಾಮೀಜಿ ಇರುತ್ತಿದ್ದ ತಪೋವನದ ಗಾಂಧಿಸ್ಮಾರಕ ಭವನಕ್ಕೆ ನುಗ್ಗಿದೆ. ನಾನು ನಮಸ್ಕರಿಸಿದಾಗ ಸ್ವಾಮೀಜಿ ಸರಕ್ಕನೆ ಕಾಲು ಹಿಂದೆಳೆದುಕೊಂಡರು. ನಿಮಗೆ ನಿಮ್ಮ ಲೆಕ್ಚರರ್ ಹುದ್ದೆ, ಹೆಚ್ಚಾಗುವ ಸಂಬಳ ಮುಖ್ಯವಾಯಿತು; ಸೇವೆ ಮುಖ್ಯವಾಗಲಿಲ್ಲ. ನೀವು ಉದ್ಧಾರವಾಗುವುದಿಲ್ಲ, ಹಾಳಾಗಿ ಹೋಗುತ್ತೀರಿ- ಎಂದು ಸ್ವಾಮೀಜಿ ಸಿಡಿದರು! ಅವರ ಆ ಕೋಪಕ್ಕೆ ನನ್ನ ಬಗ್ಗೆ ಅವರಿಟ್ಟಿದ್ದ ವಿಶ್ವಾಸವೇ ಕಾರಣವೆಂಬುದು ನನಗೆ ತಿಳಿದಿತ್ತು. ನಾನು ಪೆಚ್ಚು ನಗೆ ನಕ್ಕು ಅವರಿಂದ ಬೀಳ್ಕೊಂಡೆ!

ಬೆಂಗಳೂರಿಗೆ ಬಂದು ಎಷ್ಟು ಅಲೆದರೂ ನನ್ನ ಯೋಗ್ಯತೆಗೆ ತಕ್ಕುದಾದ ಮನೆ ಸಿಗುವಂತಿಲ್ಲ! ಕೊನೆಗೆ ನಮ್ಮ ಬೆಂಗಳೂರತ್ತೆ ಚಾಮರಾಜಪೇಟೆಯ ಚಿಕ್ಕಣ್ಣ ಗಾರ್ಡನ್ನಲ್ಲಿ ಒಂದು ಒಳಮನೆಯನ್ನು ಹುಡುಕಿಕೊಂಡು ಬಂದರು. ಅಲ್ಲಿ ಹಾಲುಕ್ಕಿಸುವ ಶಾಸ್ತ್ರ ಮಾಡಿ ಸಂಸಾರ ಸಾಗಿಸಲು ನಾನು ಹೋದಿಗ್ಗೆರೆಗೆ ಹೋದೆ. ಮನೆಯವರೆಲ್ಲಾ ಬಸ್ಸಲ್ಲಿ ಬೆಂಗಳೂರಿಗೆ ಹೊರಟರು. ಭೀಮಜ್ಜಿಗೆ ಸ್ಟ್ರೋಕ್ ಆಗಿದ್ದುದರಿಂದ ಅವರು ಬಸ್ಸಲ್ಲಿ ಕೂತು ಪ್ರಯಾಣ ಮಾಡುವಂತಿರಲಿಲ್ಲ. ನನ್ನ ಭಾವಮೈದುನ ಸತ್ಯಣ್ಣ ಆಗ ಚಿತ್ರದುರ್ಗದ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಾ ಇದ್ದರು. ಅವರ ಪ್ರಭಾವದಿಂದ ಆಸ್ಪತ್ರೆಯ ಆಂಬುಲೆನ್ಸಲ್ಲಿ ದೊಡ್ಡಜ್ಜಿಯನ್ನು ಮಲಗಿಸಿಕೊಂಡು, ಜತೆಯಲ್ಲಿ ನಾನು ಮತ್ತು ನಮ್ಮ ಕಾಶಣ್ಣಜ್ಜ ಕೂತು, ಮನೆಯ ಕೆಲವು ಸಾಮಾನನ್ನು ತುಂಬಿಕೊಂಡು ಬೆಂಗಳೂರತ್ತ ಪ್ರಯಾಣ ಬೆಳೆಸಿದೆವು. ಹೀಗೆ ನಮ್ಮ ಕುಟುಂಬದ ಬೆಂಗಳೂರು ವಾಸ ಪ್ರಾರಂಭವಾಯಿತು.

ಬೆಂಗಳೂರಲ್ಲಿ ನಾವು ತ್ಯಾಗರಾಜನಗರದ ಗಣೇಶಮಂದಿರ ರಸ್ತೆಯಲ್ಲಿದ್ದ ೧೦೧ನೇ ನಂಬರಿನ ಮನೆಯಲ್ಲೇ ಹದಿನೆಂಟು ವರ್ಷಗಳಿದ್ದೆವು ಎಂದರೆ ನೀವು ನಂಬಬೇಕು. ಶ್ರೀರಾಮನ ವನವಾಸ ಕೂಡ ೧೪ವರ್ಷಗಳಲ್ಲಿ ಮುಗಿದಿತ್ತು. ಅದಕ್ಕಿಂತ ಹೆಚ್ಚಿನ ಕಾಲಾವಧಿ ಇದು. ೧೦೧ನೇ ನಂಬರಿನ ಮನೆಗೆ ಸಂಬಂಧಿಸಿದಂತೆ ನನಗೆ ಮರೆಯಲಿಕ್ಕಾಗದ ಸಿಹಿನೆನಪುಗಳಿವೆ; ದುಸ್ಸಹವಾದ ವಿಷಾದದ ನೆನಪುಗಳೂ ಇವೆ. ಅವುಗಳಲ್ಲಿ ನಾನಿಲ್ಲಿ ಹೇಳಬೇಕಾಗಿರುವುದು ನಮ್ಮ ಭೀಮಜ್ಜಿಯ ಕಡೆಗಾಲದ ದಿನಗಳನ್ನು ಕುರಿತು. ಭೀಮಜ್ಜಿಗೆ ಪಾರ್ಶ್ವವಾಯು ಹೊಡೆದಿದ್ದರೂ ಅವರು ಜೀವನದ ಉತ್ಸಾಹವನ್ನು ಕಿಂಚಿತ್ತೂ ಕಳೆದುಕೊಂಡಿರಲಿಲ್ಲ ಎಂಬುದನ್ನೂ ಈ ಮೊದಲೇ ಅರಿಕೆ ಮಾಡಿದ್ದೇನೆ. ಅವರಿಗೆ ಈಗ ಹೆಚ್ಚು ಓಡಾಡುವುದು, ಕೆಲಸ ಮಾಡುವುದು ಆಗುತ್ತಿರಲಿಲ್ಲ. ಹೀಗಾಗಿ ಅವರ ಬಹಳಷ್ಟು ಸಮಯ ನನ್ನ ಮಕ್ಕಳೊಂದಿಗೆ ಆಟವಾಡುವುದರಲ್ಲಿ, ಅವರಿಗೆ ಕಥೆ ಹೇಳುವುದರಲ್ಲಿ, ಸಂಜೆ ಅವರೊಂದಿಗೆ ಗಣೇಶನ ಗುಡಿಗೆ ಹೋಗಿ ಚರಪು ತೆಗೆದುಕೊಂಡು ಬರುವುದರಲ್ಲಿ ಕಳೆದುಹೋಗುತ್ತಿತ್ತು. ಅದೇ ಬೀದಿಯಲ್ಲಿ ಇದ್ದ ಅನಂತ ಕ್ಲಿನಿಕ್ಕಿನ ಡಾ ಅನಂತರಾಮನ್ ಕೊನೆಕೊನೆಗೆ ಅವರ ಮೊಮ್ಮಗನೇ ಆಗಿಬಿಟ್ಟಿದ್ದರು. ನಿಮಗೆ ಇಬ್ಬರು ಮೊಮ್ಮಕ್ಕಳಜ್ಜೀ..ಏನೂ ಯೋಚನೆ ಮಾಡಬೇಡಿ- ಎಂದು ಅವರು ಹಾಸ್ಯ ಮಾಡುತ್ತಾ ಇದ್ದರು.

ಭೀಮಜ್ಜಿಗೆ ರಾಜಕುಮಾರ್ ಸಿನಿಮಾಗಳೆಂದರೆ ಮಹಾ ಹುಚ್ಚು. ಅವರು ರಾಜಕುಮಾರರ ಕಟ್ಟಾ ಅಭಿಮಾನಿಯಾಗಿದ್ದರು. ಅವರಿಗೆ ಸ್ಟ್ರೋಕ್ ಆದ ಮೇಲೆ ಪಾಪ ಸಿನಿಮಾ ನೋಡುವುದೇ ಸಾಧ್ಯವಾಗಿರಲಿಲ್ಲ. ಆಗ ಶಾಂತಿ ಟಾಕೀಸಲ್ಲಿ ಭಕ್ತಕುಂಬಾರ ಸಿನಿಮಾ ನಡೆಯುತ್ತಿತ್ತು. ನಾವೆಲ್ಲಾ ನೋಡಿಕೊಂಡು ಬಂದೆವು. ಭೀಮಜ್ಜಿಗೆ ಒಳಗೊಳಗೇ ಗುದುಗುದು. ಸಂಜೆ ನಾನು ಕಾಲೇಜಿಂದ ಬಂದು, ತಿಂಡಿ ಮುಗಿಸಿದ್ದಾದ ಮೇಲೆ, ನನ್ನನ್ನು ಹತ್ತಿರ ಕರೆದು, ” ನನ್ನ ಕೊನೇ ಆಸೆ ಒಂದದೆ… ತೀರಿಸ್ತೀ ತಾನೆ?” ಅಂತ ಕೇಳಿದರು. ನಾನು ನಗುತ್ತಾ , ವಿದ್ಯಾರ್ಥಿಭವನದ ದೋಸೆ ತರಬೇಕಾ? ಎಂದೆ. ನಂಗೆ ಬ್ಯಾಡ ಮಾರಾಯ…ಭಕ್ತ ಕುಂಬಾರ ಸಿನಿಮಾ ಬಂದಿದೆಯಂತಲ್ಲೋ ರಾಜ್ಕುಮಾರ್ದು…ಲೀಲಾವತಿ ರಾಜಕುಮಾರ್ ಭಾಳ ಚೆನ್ನಾಗಿ ಮಾಡಿದಾರಂತಲ್ಲ…. ರಾಜಕುಮಾರ ಮಗೂನ ಕಾಲಲ್ಲಿ ತುಳಿಯೋದು ಭಾಳ ಚಂದಗದೆಯಂತಲ್ಲಾ….ಅಮೃತಾ ಬಾಯಿ ಹೇಳಿದರು…ಅತ್ತೂ ಅತ್ತು ಸಾಕಾಗಿ ಹೋತಂತೆ ಅವರಿಗೆ…ಏನಾರ ಮಾಡಿ ನಂಗೂ ಆ ಸಿನಿಮಾ ತೋರ್ಸೋ…?”

“ಯಾಕೆ? ನೀನೂ ಹೋಗಿ ಅತ್ತು ಬರಬೇಕಾ?”

ಹೂಂಕಣಪ್ಪ ಅಂದರು ನಮ್ಮ ಅಜ್ಜಿ ಮುಗ್ಧವಾಗಿ!

 

ಭಾನುವಾರ ಒಂದು ರಿಕ್ಷಾ ಮಾಡಿಕೊಂಡು ಶಾಂತಿಗೆ ಹೋದೆವು. ಭೀಮಜ್ಜಿ ತಮ್ಮ ಟ್ರಂಕಿಂದ ನೀಲಿ ಕ್ರೇಪ್ ಸೀರೆ ತೆಗಿಸಿ ಅಜ್ಜಿಯ ಸಹಾಯದಿಂದ ಅದನ್ನು ಉಟ್ಟುಕೊಂಡು ರೆಡಿಯಾದರು. ಕೂದಲಿಗೆ ಗಂಟು ಹಾಕಿಸಿಕೊಂಡು , ಮುಂದಲೆ ಮತ್ತೆ ಮತ್ತೆ ತಿದ್ದಿಕೊಂಡು ನಾನು ರೆಡಿ ಕಣಪ್ಪಾ ಎಂದರು. ಥಿಯೇಟರ್ ಮುಂದೇ ಪಂಢರೀಪುರದ ವಿಟ್ಠಲ ಸ್ವಾಮಿಯ ಆಳೆತ್ತರದ ವಿಗ್ರಹ ಇಟ್ಟಿದ್ದರು. ಸಿನಿಮಾಕ್ಕೆ ಹೋದವರೆಲ್ಲಾ ವಿಟ್ಠಲನ ಪಾದದ ಮೇಲೆ ಕಾಸು ಹಾಕುತ್ತಾ ಇದ್ದರು. ಭೀಮಜ್ಜಿಯೂ ಬಾಳೇಕಾಯಿಂದ ಐವತ್ತು ಪೈಸೆ ಪ್ರಯಾಸದಿಂದ ತೆಗೆದು ವಿಟ್ಠಲನ ಪಾದಕ್ಕೆ ಹಾಕಿ ಕೆನ್ನೆ ಕೆನ್ನೆ ಬಡಿದುಕೊಂಡು ಬೇಗ ನಿನ್ನ ಪಾದಕ್ಕೆ ನನ್ನ ಕರೆಸ್ಕೊಳ್ಳಪ್ಪ ಎಂದು ಬೇಡಿಕೊಂಡರು. ಅಜ್ಜಿಯನ್ನ ಅನಾಮತ್ತು ಎತ್ತಿಕೊಂಡು ನಾವು ಥಿಯೇಟರಿನೊಳಕ್ಕೆ ಅವರನ್ನು ಸಾಗಿಸಿದೆವು. ಸೀತಜ್ಜಿ ಗಟ್ಟಿಮುಟ್ಟಾದ ಹೆಂಗಸಾದುದರಿಂದ ಬೆಂಡಾಗಿದ್ದ ಭೀಮಜ್ಜಿಯನ್ನು ಎತ್ತಿಕೊಂದು ಹೋಗುವುದು ಅವರಿಗೆ ಏನೂ ಕಷ್ಟವಾಗಲಿಲ್ಲ. ಸಿನಿಮಾ ನೋಡುವಾಗ ತಿನ್ನಕ್ಕೆ ಪಾಪಕಾರ್ನಿ ತಂದುಕೊಡೋ ಅಂತ ಭೀಮಜ್ಜಿ ಹೇಳಿದರು. ಭಕ್ತ ಕುಂಬಾರ ಹಾಡುವಾಗ ಇವರೂ ಚಪ್ಪಾಳೆ ತಟ್ಟುತ್ತಾ ಭಜನೆಯಲ್ಲಿ ಪಾಲ್ಗೊಂಡರು. ಕುಂಬಾರ ಕೈ ಕತ್ತರಿಸಿಕೊಂಡು ವಿಟ್ಠಲಾ ಎಂದು ಕೂಗಿ ಹಾಡುವಾಗ ಭೀಮಜ್ಜಿ ಸಶಬ್ದವಾಗಿಯೇ ಅಳಲಿಕ್ಕೆ ಶುರು ಹಚ್ಚಿದರು. ಅಯ್ಯೋ ಮುಂಡೇ ಮಗನೇ ನಿಂಗ್ಯಾಕಿಂತ ಕಷ್ಟ ಕೊಟ್ಟನಪ್ಪಾ ಭಗವಂತ ಎಂದು ಬಿಸುಸುಯ್ದರು. ಕೈಕಾಲು ಹೋದ ಮ್ಯಾಲೆ ಬದುಕಿರಬಾರ್ದಪ್ಪಾ…ಅಂತ ತಮ್ಮೊಂದಿಗೆ ರಾಜಕುಮಾರನನ್ನು ಸಮೀಕರಿಸಿಕೊಂಡರು. ಮನೆಗೆ ಬರುವಾಗ ನೋಡುತ್ತೇನೆ. ಅತ್ತು ಅತ್ತು ಅವರ ಕಣ್ಣು ಕೆಂಪಗೆ ಇಷ್ಟು ದಪ್ಪ ಊದಿಕೊಂಡುಬಿಟ್ಟಿವೆ. ಹೆಂಗಿತ್ತಜ್ಜೀ ರಾಜ್ಕುಮಾರ್ ಆಕ್ಟಿಂಗ್ ಅಂತ ಕೇಳಿದೆ. ರಾಜಕುಮಾರಲ್ಲ… ಅದು ಭಕ್ತ ಕುಂಬಾರೇ…ದೇವರಂಥ ಮನುಷ್ಯ ಕಣಪ್ಪಾ ಅವನು…ಸಾವಿರ ಕಾಲ ತಣ್ಣಗೆ ಬದುಕಿರಲಿ ನಮ್ಮಪ್ಪ-ಅಂತ ರಾಜಕುಮಾರ್ ಅನ್ನು ಮನತುಂಬಿ ನಮ್ಮ ಅಜ್ಜಿ ಹರಸಿದ್ದೂ ಆಯಿತು.

ಇದಾದ ಮೇಲೆ ಬಹಳ ಹೆಚ್ಚಿನ ದಿನ ಏನೂ ಭೀಮಜ್ಜಿ ಬದುಕಿರಲಿಲ್ಲ. ಅವರ ಉಸಿರಾಟದ ತೊಂದರೆಯೂ ತೀವ್ರವಾಯಿತು. ಇನ್ನು ಹೆಚ್ಚು ದಿನ ಭೀಮಜ್ಜಿ ಬದುಕಲಾರರು ಎಂದು ಅನಂತ ಡಾಕ್ಟರು ಹೇಳಿದರು. ಅಜ್ಜಿಯನ್ನು ನೋಡಿಕೊಂಡು ಹೋಗಲಿಕ್ಕೆ ನೆಂಟರಿಷ್ಟರೆಲ್ಲಾ ಬಂದು ಹೋಗ ತೊಡಗಿದರು. ಆಗ ವರ್ಡ್ ಸ್ಪೋರ್ಟ್ಸ್ ನಡೀತಾ ಇತ್ತು . ಭೀಮಜ್ಜಿಯನ್ನು ನೋಡಲು ಬಂದವರು ಅವರನ್ನು ನೋಡಿದ ಶಾಸ್ತ್ರವಾದ ಮೇಲೆ ವರ್ಡ್ಸ್ ಸ್ಪೋರ್ಟ್ಸ್ ನೋಡುತ್ತಾ ಕಾಲ ಕಳೆಯುತ್ತಾ ಇದ್ದರು.ಜಿಮ್ನಾಸ್ಟಿಕ್ಸ್ ನೋಡಿದ ನಮ್ಮ ಹುಣಿಸೇಕಟ್ಟೆ ಹುಲಿ…ಇದೆಲ್ಲಾ ಕ್ಯಾಮರಾ ಟ್ರಿಕ್ಸು ಅಷ್ಟೆ…ನಿಜ ಅಲ್ಲ..ಎಂದು ಘೋಷಿಸಿದ್ದು ಆಗಲೇ!

ಆವತ್ತು ಬಹಳ ಹೊತ್ತು ವರ್ಡ್ ಸ್ಪೋರ್ಟ್ಸ್ ನೋಡಿ ನಾನು ನನ್ನ ಪತ್ನಿ ಆಗತಾನೆ ಹಾಸುಗೆಯಲ್ಲಿ ಕಾಲು ಚಾಚಿದ್ದೇವೆ. ಮಕ್ಕಳು ಸೀತಜ್ಜಿ ನಡುಮನೆಯಲ್ಲಿ ಮಲಗಿದ್ದಾರೆ. ಜೋರಾಗಿ ಏದುಸಿರು ಬಿಡುತ್ತಾ ಭೀಮಜ್ಜಿ ಮಂಚದ ಮೇಲೆ ಮಲಗಿದ್ದಾರೆ. ಸೀತಜ್ಜಿಗೆ ಈವತ್ತು ರಾತ್ರಿ ಇವಳು ಊಳಿಯೋದಿಲ್ಲ ಅನ್ನಿಸಿತಂತೆ ಯಾಕೋ. ಕಣ್ಣು ಮುಚ್ಚಿಕೊಂಡು ಅಕ್ಕ ತೇಕುವುದನ್ನೇ ನೋಡುತ್ತಾ ಮಂಚದ ಪಕ್ಕ ಅವರು ಕೂತಿದ್ದಾರೆ. ನಿಧನಿಧಾನಕ್ಕೆ ಉಸಿರಾಟ ಕಡಿಮೆಯಾಗುತ್ತ ಕೊನೆಗೊಮ್ಮೆ ಥಟ್ಟನೆ ನಿಂತುಹೋಗಿದೆ. ಸೀತಜ್ಜಿ ನಮ್ಮ ಕೋಣೆಯ ಬಾಗಿಲು ಬಡಿದು…ಏಳಪ್ಪಾ…ನಿಮ್ಮಜ್ಜಿ ಹೋಗಿಬಿಟ್ಟಳು ಅಂದದ್ದು ಕೇಳಿಸಿತು. ಹಾಸುಗೆಯಲ್ಲಿ ಗಟ್ಟಿಯಾಗಿ ಉಸಿರಾಡುತ್ತಾ ಮಲಗಿದ್ದ ನಾವು, ಹೇಗೋ ಸಾವರಿಸಿಕೊಂಡು ಹೊರಗೆ ಬಂದೆವು. ಅಜ್ಜಿ ತಣ್ಣಗೆ ಮಲಗಿದ್ದರು. ವಿಲಕ್ಷಣವಾದ ಪಾಪಪ್ರಜ್ಞೆಯಿಂದ ನನ್ನ ಮುಖ ಸಣ್ಣಗಾಯಿತು. ಬೇಗ ಬೇಗ ಮಕ್ಕಳನ್ನೆಲ್ಲಾ ರೂಮೊಳಕ್ಕೆ ಎತ್ತಿ ತಂದು ಮಲಗಿಸಿದೆವು. ನಿಶ್ಚಲವಾಗಿ, ನಿಶ್ಚಿಂತವಾಗಿ ಮಲಗಿದ್ದರು ಭೀಮಜ್ಜಿ.

ಬೆಳಿಗ್ಗೆ ಶವವನ್ನು ಚಿತಾಗಾರಕ್ಕೆ ಸಾಗಿಸುವಾಗ ಬಾಲು ನನ್ನ ಜತೆಯಲ್ಲಿ ಇದ್ದರು. ದೇಹವನ್ನು ಹೊರಕ್ಕೆ ತರುವಾಗ , “ಮೆಲ್ಲಗೆ…ಅಜ್ಜಿಯ ಕಾಲಿಗೆ ಬಾಗಿಲವಾಡ ತಾಕುತ್ತಾ ಇದೆ”- ಅಂತ ನಾನು ಗಟ್ಟಿಯಾಗಿ ಕೂಗಿದೆನಂತೆ… ನನಗೆ ಅದು ನೆನಪಲ್ಲಿ ಉಳಿದಿಲ್ಲ…ನೀವು ಹಾಗೆ ಕೂಗಿದಿರಿ ಅಂತ ಬಾಲು ಹಿಂದಿನಿಂದ ನನಗೆ ಹೇಳಿದ್ದು…

 

 

‍ಲೇಖಕರು G

March 6, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಪ್ರಜ್ಞಾ

    ನಿಮ್ಮ ಭೀಮಜ್ಜಿಯ ಬಗ್ಗೆ ಕೆಟ್ಟ ಕುತೂಹಲ ಶುರುವಾಗಿಬಿಟ್ಟಿದೆ ಸಾರ್! ಮುಗಿಸಬೇಡಿ ಇಲ್ಲಿಗೆ. ಅವರ ಬಗ್ಗೆ ಇನ್ನೂ ಎನಾರ ನೆನಪಿದ್ರೆ ಬರೀರಿ..

    -ಪ್ರಜ್ಞಾ

    ಪ್ರತಿಕ್ರಿಯೆ
  2. ರಾಮಚಂದ್ರ ನಾಡಿಗ್

    ಭೀಮಜ್ಜಿ ಬಗ್ಗೆ ಬರ್ದಿರೋದು ಬಾಳಾ ಚೆನ್ನಾಗಿದೆ… ಜೊತೆಗೆ ಹೊದಿಗೆರೆ ಹಾಗೂ ಸುತ್ತಮುತ್ತಲ ಪರಿಸರದ ಬಗ್ಗೆ ಬರೆದಾಗ್ಲಂತೂ ಮನಸ್ಸು ಒಂದು ಕ್ಷಣ ಅಲ್ಲಿಗೇ ಓಡಿಬಿಡುತ್ತೆ… ನಾನು ಅಲ್ಲೇ ಇದ್ದೀನೇನೋ ಅನ್ನಿಸುತ್ತೆ….
    ಇನ್ನು ನಿಮ್ಮ ವಿಚಿತ್ರ ಸ್ವಭಾವದ ಬಗ್ಗೆ ಬರೆದಿರೋದು ನನ್ ಮನಸ್ಸಿಗೆ ಬಾಳಾ ಹತ್ರ ಆಯ್ತು… ಯಾಕಂದ್ರೆ ನನ್ನ ಸ್ವಭಾವ ಕೂಡಾ ಹಾಗೇನೇ… ನಾನು ಮಾತ್ರ ಹಾಗೇನಾ ಅಂತಾ ಆಗಾಗ ಅನ್ನಿಸ್ತಿತ್ತು…. ಆದ್ರೆ ನೀವು ಬರೆದಿರೋ ಆ ಎರಡೂಕಾಲು ಸಾಲು ನನ್ನ ಮನಸ್ಸನ್ನ ಸಮಾಧಾನಪಡಿಸಿದ್ವು…

    ರಾಮಚಂದ್ರ

    ಪ್ರತಿಕ್ರಿಯೆ
  3. rAjashEkhar mALUr

    “ಅಂತ ತಮ್ಮೊಂದಿಗೆ ರಾಜಕುಮಾರನನ್ನು ಸಮೀಕರಿಸಿಕೊಂಡರು” – idu best statement about Bheemajji. mattu ee vAkya tuMbA ‘loaded’ vAkya… kaleyannu anubhavisuvudu hEge eMdu tOrisuttade. ee ‘samIkaraNa’ mommaganigU salluvaMtahudE… nIvu harishchandra kAvya hELuvAga eshTu bhAvukarAguttIri eMbudannu kaMDu balle.

    …’ ಎಂದು ಸ್ವಾಮೀಜಿ ಸಿಡಿದರು! ಅವರ ಆ ಕೋಪಕ್ಕೆ ನನ್ನ ಬಗ್ಗೆ ಅವರಿಟ್ಟಿದ್ದ ವಿಶ್ವಾಸವೇ ಕಾರಣವೆಂಬುದು ನನಗೆ ತಿಳಿದಿತ್ತು – idu nimma doDDatana alvA sAr?

    bheemajji eega adeshTu janara manemAtAgiddAre! avaru ellU hOgilla… illE iddAre.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: