ಬೇಲೂರು ರಘುನಂದನ್ ಕಾಲಂ : ಕೇಸರಿ ಹರವು ಕಂಡಂತೆ ಉಮಾಶ್ರೀ

Umasiri-1411
ನಾನು ಬಿ.ಎಸ್ಸಿ ಓದುವಾದಗಿನಿಂದ ಕಾಲೇಜಿಗೆ ಚಕ್ಕರ್ ಹೊಡೆದು ರಂಗಭೂಮಿಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದೆ. ಅಂದಿನಿಂದ ಇಂದಿನವರೆಗೂ ಉಮಾಶ್ರೀ ಅವರನ್ನು ನೋಡುತ್ತಲೇ ಬಂದಿದ್ದೇನೆ. ಆರಂಭಿಕ ಸಿನೆಮಾಗಳಲ್ಲಿ ಎಂದು ಮಾತ್ರ ಉಮಾಶ್ರೀ ಅಭಿನಯವನ್ನು ನೋಡಲು ಸಾಧ್ಯವಿಲ್ಲ. ಸಿನೆಮಾ ಮತ್ತು ರಂಗಭೂಮಿ ಎರಡೂ ಪ್ರಕಾರಗಳಲ್ಲೂ ಸಮರ್ಥವಾಗಿ ಅಭಿನಯಿಸಿದ ಕಲಾವಿದೆ ಆಕೆ.
ಕಂಪನಿ ನಾಟಕ, ಹವ್ಯಾಸಿ ರಂಗಭೂಮಿ ಹಾಗೂ ಒಡಲಾಳ ಈ ಮೂರು ಸಾಧ್ಯತೆಗಳಲ್ಲೂ ಉಮಾಶ್ರೀ ಅವರ ಅಭಿನಯವನ್ನು ಬೇರೆ ಬೇರೆ ರೀತಿಯಲ್ಲಿಯೇ ಗಮನಿಸಬೇಕಾಗುತ್ತದೆ. ಒಡಲಾಳ ಹವ್ಯಾಸಿ ನಾಟಕ ಆದರೂ ಅದು ನಿಲ್ಲುವ ಜಾಗವೇ ಬೇರೆ. ಯಾಕೆಂದರೆ ಕಂಪನಿ ನಾಟಕಗಳಲ್ಲಿ ಅಭಿನಯಿಸಿದ ಹಾಗೇ ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಲು ಸಾಧ್ಯವಿಲ್ಲ. ಹಾಗೆಯೇ ನಾಟಕಗಳಲ್ಲಿ ಅಭಿನಯಿಸಿದ ಹಾಗೇ ಸಿನೆಮಾದಲ್ಲಿ ಅಭಿನಯಿಸಲು ಸಾಧ್ಯವಿಲ್ಲ. ಆದರೆ ಅಭಿನಯಕ್ಕೆ ಸಂಬಂಧಿಸಿದಂತೆ ಮೂಲ ಸಿದ್ಧಾಂತ ಎಲ್ಲಾ ಕಡೆಗಳಲ್ಲೂ ಕೆಲಸ ಮಾಡುತ್ತಿರುತ್ತದೆ ಅಷ್ಟೇ. ಹಾಗಾಗಿ ಎಲ್ಲ ರೀತಿಯ ಪಾತ್ರ ನಿರ್ವಹಣೆಯಲ್ಲೂ ಉಮಾಶ್ರೀ ಅವರು ತನ್ನನ್ನು ತಾನು ಒಗ್ಗಿಸಿಕೊಂಡಿದ್ದ ಒಬ್ಬ ಉತ್ತಮ ಕಲಾವಿದೆ.
ಉದಾಹರಣೆಗೆ ಸಂಗ್ಯಾಬಾಳ್ಯದಲ್ಲಿನ ಅಭಿನಯಕ್ಕೂ, ಅನುಭವದ ಪದ್ದಿಯ ಅಭಿನಯಕ್ಕೂ, ಪಟ್ಟಣಕ್ಕೆ ಬಂದ ಪತ್ನಿಯರು ಸಿನೆಮಾದಲ್ಲಿ ಎಸ್ ಬಾಸ್ ನೋ ಬಾಸ್ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಾಗೆಯೇ ಅನುಭವದಲ್ಲಿ ದ್ವಂದಾರ್ಥ ಸಂಭಾಷಣೆ ಮತ್ತು ಎನ್. ಎಸ್. ರಾವ್ ಅವರ ಜೊತೆ ಮಾಡಿದ ಅಭಿನಯಕ್ಕೂ ಕೂಡ ಸಾಕಷ್ಟು ವ್ಯತ್ಯಾಸವಿದೆ. ಹೀಗಿದ್ದೂ ಸಿನೆಮಾದಲ್ಲೇ ಬಹು ಸಾಧ್ಯತೆಗಳನ್ನು ಉಮಾಶ್ರೀ ಅವರ ಅಭಿನಯದಲ್ಲಿ ಕಾಣಬಹುದು.
ಪ್ರಸಿದ್ಧ ಪ್ರೆಂಚ್ ಸಿನೆಮಾ ನಿರ್ದೇಶಕ ಬ್ರೆಸವ್ ಹೇಳುವಂತೆ ‘ಪ್ರತೀ ಸಿಮಾವೊಂದಕ್ಕೆ ಮೂರು ಹುಟ್ಟು ಮತ್ತು ಎರಡು ಸಾವುಗಳಿರುತ್ತವೆ. ಮೊದಲು ಸಿನೆಮಾ ಮಾಡುವವನ ಮನದಲ್ಲಿ ಹೈಪಾಥೀಸಿಸ್ ರೀತಿಯಲ್ಲಿ ಮೊದಲು ಸಿನೆಮಾ ಹುಟ್ಟುತ್ತದೆ. ಅದು ಸ್ಕ್ರಿಪ್ಟ್ ಆಗಿ  ಅಕ್ಷರದ ರೂಪ ಪಡೆದು ಸಾಯುತ್ತದೆ. ಆಮೇಲೆ ಸ್ಕ್ರಿಪ್ಟ್ ನಟ ವರ್ಗದ ಅಭಿನಯದಿಂದ ದಿಂದ ಮತ್ತೊಮ್ಮೆ ಮರು ಹುಟ್ಟು ಪಡೆಯುತ್ತದೆ.  ನಂತರ ನೆಗೆಟಿವ್ ನಲ್ಲಿ ಮತ್ತೆ ಅದು ಸಾಯುತ್ತದೆ. ಕೊನೆಯದಾಗಿ ಪರದೆಯ ಮೇಲೆ ಪ್ರೇಕ್ಷಕನ ಎದುರು ಸಿನೆಮಾ ಮೂರನೇ ಹುಟ್ಟು ಪಡೆಯುತ್ತದೆ’. ಹೀಗೆ ಹುಟ್ಟಿ ಸಾಯುವ ಪ್ರಕ್ರಿಯೆಯಲ್ಲಿ  ಸಿನೆಮಾವೊಂದು ಪರಿ ಪೂರ್ಣ ಆಗುವ ಹಂತದಲ್ಲಿ ನಟನೆಯೂ ಬಹಳ ಮುಖ್ಯ ಪಾತ್ರವನ್ನು ಪಡೆಯುತ್ತದೆ. ಈ ರೀತಿಯಲ್ಲಿ ಸಿನೆಮಾಗಳ ಎರಡನೇ ಹುಟ್ಟಿಗೆ  ಅನೇಕ ಕಡೆ ಉಮಾಶ್ರೀ ಕಾರಣರಾಗಿದ್ದಾರೆ. ಉಮಾಶ್ರೀ ಅವರಿಂದಲೇ ಸಿನೆಮಾ ಗೆದ್ದಿರುವ ಉದಾಹರಣೆಗಳೂ ಸಾಕಷ್ಟು ಇವೆ.
ಒಡಲಾಳದ ಸಾಕವ್ವನ ಪಾತ್ರ ಮತ್ತು ಪುಟ್ನಂಜ ಸಿನೆಮಾದ ಪುಟ್ಟಮಲ್ಲಿಯ ಪಾತ್ರ ಮೇಲ್ನೋಟಕ್ಕೆ ಒಂದೇ ರೀತಿಯಲ್ಲಿದೆ ಎಂದು ಪ್ರೇಕ್ಷಕ ಅಂದುಕೊಂಡು ಬಿಡುತ್ತಾನೆ. ಆದ್ರೆ ಸಾಕವ್ವನಿಗೂ ಮತ್ತು ಪುಟ್ಟಮಲ್ಲಿ  ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಇಲ್ಲಿ ಉಮಾಶ್ರೀ ಅವರು ಪುಟ್ನಂಜ ಸಿನೆಮಾದಲ್ಲಿ ಸಾಕವ್ವನ್ನು ಶೋ ಕೇಸ್ ಮಾಡಿದ್ದಾರೆ ಹೊರತು ಪೂರ್ಣ ಪ್ರಮಾಣದಲ್ಲಿ ಸಾಕವ್ವ ಆಗಲು ಸಾಧ್ಯವಾಗಿಲ್ಲ.
ಗುಲಾಬಿಯ ಪಾತ್ರ ಅನೇಕ ಸಾಂಸ್ಕೃತಿಕ ಪಲ್ಲಟಗಳ ಒತ್ತಡವನ್ನು ಅದುಮಿಟ್ಟುಕೊಂಡ ಪಾತ್ರ. ಗಿರೀಶ್ ಅವರ ಸ್ಕ್ರಿಪ್ಟ್ ಕೂಡ ಬಹಳ ಗಟ್ಟಿಯಾಗಿತ್ತು. ಅದು ಉಮಾಶ್ರೀಗೆ ಸಿಕ್ಕಿತು. ಎಲ್ಲ ಭಾವನೆಗಳನ್ನು ಅದುಮಿಟ್ಟು ಗುಲಾಬಿಯನ್ನು ಬಹಳ ಸಮರ್ಥವಾಗಿ ಉಮಾಶ್ರೀ ಅಭಿನಯಿಸಲೂ ಕೂಡ ಸಾಧ್ಯವಾಯಿತು. ಸಣ್ಣ ಸಣ್ಣ ಗೆಶ್ಚರ್ ತೋರುವ ಮೂಲಕವೇ ಗುಲಾಬಿಯನ್ನು ಕಟ್ಟಿಕೊಟ್ಟಿದ್ದಾರೆ. ಈ ರೀತಿ ತನ್ನನ್ನು ತಾನು ಒಡ್ಡಿಕೊಳ್ಳುವ ಮತ್ತು ತನ್ನ ಅಭಿನಯದ ಸಾಮರ್ಥ್ಯವನ್ನು ತೋರಿಸುವಂಥಹ ಪಾತ್ರಗಳು ಉಮಾಶ್ರೀ ಅವರಿಗೆ ಸಿಕ್ಕಿದ್ದು ಬಹಳ ಕಡಿಮೆ.
Untitled
ಉಮಾಶ್ರೀ ಅವರ ಬಗೆಗೆ ಕೇಸರಿ ಹರವು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ :
ಕನ್ನಡ ಸಿನೆಮಾ ತನ್ನ ನೆಲೆಯನ್ನು ಕಂಡುಕೊಂಡಿದ್ದು ರಂಗಭೂಮಿಯ ಹಿನ್ನೆಲೆಯಿಂದ ಮತ್ತು ಮದ್ರಾಸ್ ಸಿನೆಮಾ ಇಂಡಸ್ಟ್ರೀ ಹಾಕಿಕೊಟ್ಟ ದಾರಿಯಿಂದ. ಹಾಗಾಗಿ ನಟರಲ್ಲಿ ರಂಗಭೂಮಿಯ ನೆಲೆಯ ಮತ್ತು ಮದ್ರಾಸ್ ಬಿಂಬಿಸುತ್ತಿದ್ದ ಪಾತ್ರಗಳ ರೀತಿಯಲ್ಲೇ ಅಭಿವ್ಯಕ್ತಿ ಬರಲು ಸಾಧ್ಯವಾಗಿತ್ತು ಮತ್ತು ಆ ಹೊತ್ತಿನ ಸಿನೆಮಾ ಅದನ್ನು ಒತ್ತಾಯಿಸುತ್ತಿತ್ತು ಕೂಡ. ಹಾಗೂ ಕಾದಂಬರಿ ಆಧಾರಿತ ಸಿನೆಮಾಗಳು ಹೆಚ್ಚು ಬರುತ್ತಿದ್ದ ಕಾಲಘಟ್ಟವದು. ಹೀಗೆಲ್ಲಾ ಇದ್ದಾಗ ಆ ಸಮಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭವೇ ಪಾತ್ರಗಳ ಕಟ್ಟುವ ಕ್ರಮವನ್ನು ನಿರ್ವಹಿಸುತ್ತಿತ್ತು. ಹಾಗಾಗಿ ಆರತಿ ಭಾರತಿ ಕಾಲಕ್ಕೂ ಉಮಾಶ್ರೀ ಮತ್ತು ರೇಖಾದಾಸ್ ಕಾಲಕ್ಕೂ ಬೇರೆ ಬೇರೆ ಆಯಾಮಗಳಿಂದ ಭಿನ್ನತೆ ಇವೆ. ಉಮಾಶ್ರೀ ಅವರು ಇದನ್ನು ಅರಿತು ತಾನು ಮಾಡುತ್ತಿರುವ ಪಾತ್ರ ಮತ್ತು ಕಾಲವನ್ನು ಎಲ್ಲ ಸಿನೆಮಾಗಳಲ್ಲೂ ಗಮನದಲ್ಲಿ ಇಟ್ಟುಕೊಂಡೇ ಅಭಿನಯಿಸಿದ್ದಾರೆ. ಅವರ ಒಟ್ಟು ಸಿನೆಮಾಗಳನ್ನು ನೋಡಿದಾಗ ಈ ಅಂಶ ಅರಿವಿಗೆ ಬರುತ್ತದೆ.
ಉಮಾಶ್ರೀ ಅವರ ವಿಷಯದಲ್ಲಿ ಸಿನೆಮಾ ಮತ್ತು ಪಾತ್ರಗಳ ಆಯ್ಕೆ ಮೊದ ಮೊದಲು ಖಂಡಿತಾ ಸಾಧ್ಯವಾಗಿಲ್ಲ. ಆಯ್ಕೆಯ ಪ್ರೆಶ್ನೆ ಏನಿದ್ದರೂ ಇತ್ತೀಚಿಗೆ ಅನ್ನಿಸುತ್ತದೆ. ಅದೂ ತೀರ ದೊಡ್ಡ ಪ್ರಮಾಣದಲ್ಲಿ ಅಲ್ಲ. ಉಮಾಶ್ರೀ ಅವರು ಬದುಕಿನ ಅನಿವಾರ್ಯತೆಗಾಗಿ ರಂಗಭೂಮಿಯಿಂದ  ಸಿನೆಮಾಗೆ ಬಂದವರು. ಅಭಿನಯವೇ ಆಕೆಯನ್ನು ಸಾಕಬೇಕಿದ್ದ ಕಾರಣ ಸಂಪೂರ್ಣವಾಗಿ ಬಂದಂಥಹ ಪಾತ್ರಗಳಿಗೆ ಒಡ್ಡಿಕೊಂಡರು. ಇತ್ತ ರಂಗಭೂಮಿಯಲ್ಲೂ ಅಭಿನಯಿಸುತ್ತಿದ್ದರು ಅತ್ತ ಸಿನೆಮಾದಲ್ಲೂ  ಅಭಿನಯಿಸುತ್ತಿದ್ದರು. ಬದುಕಿನ ಅಗತ್ಯ ದೊಡ್ಡದಾಗಿದ್ದ ಕಾರಣ ಆಯ್ಕೆ ಉಮಾಶ್ರೀ ಅವರ ಆಯ್ಕೆ ಆಗಿರಲಿಲ್ಲ.
ಇತ್ತೀಚಿಗೆ ಒಂದು ಅಂತರ ರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿಯಾಗಿದ್ದೆ. ಅಲ್ಲೊಬ್ಬ ಸುಪ್ರಸಿದ್ಧ ಸಿನೆಮಾ ನಿರ್ದೇಶಕರು ಸಿಕ್ಕಿದ್ದರು. ಸಿನೆಮಾ ಬಿಟ್ಟು ಬೇರೆ ಜಗತ್ತು ಗೊತ್ತಿಲ್ಲದ ಅವರಿಗೆ ಬರು ಬರುತ್ತಾ ಅವಕಾಶಗಳು ಕಡಿಮೆ ಆಗಿದ್ದವಂತೆ. ಹೀಗಿದ್ದಾಗ ಬದುಕಿನ ಅನಿವಾರ್ಯತೆ ತನಗೆ ಗೊತ್ತಿರುವ ಲೋಕವನ್ನೇ ದುಡಿಸಿಕೊಳ್ಳಲು ಹಾತೊರೆಯುತ್ತದೆ. ಹಾಗಾಗಿ  ಯಾರೋ ಒಬ್ಬ ನಿರ್ಮಾತೃ ನೀಲಿ ಚಿತ್ರವೊಂದನ್ನು ನಿರ್ದೇಶಿಸಿ ಕೊಡುತ್ತೀಯ ? ಅಂತ ಕೇಳಿದ್ದಕ್ಕೆ ಒಪ್ಪಿ ಮಾಡಿಕೊಟ್ಟೆ ಎಂದು ಹೇಳಿಕೊಂಡರು. ಹಾಗೆಂದ ಮಾತ್ರಕ್ಕೆ ಒಬ್ಬ ಒಳ್ಳೆಯ ನಿರ್ದೇಶಕ ಕೆಟ್ಟ ನಿರ್ದೇಶಕ ಆಗಲು ಸಾಧ್ಯವೇ ಇಲ್ಲ.  ಒಟ್ಟು ಬದುಕಿನ ಅನಿವಾರ್ಯತೆಗಳು ಎದುರಿಸುವಾಗ ತನ್ನ ಎಚ್ಚರ ಇಟ್ಟುಕೊಂಡೇ ಇರುವ ಅವಕಾಶದಲ್ಲೇ ತನ್ನ ಗಟ್ಟಿಯಾದ ನಿಲುವನ್ನು ಮತ್ತು ಅಭಿನಯಕ್ಕೆ ಇರುವ ಸಾಧ್ಯತೆಯನ್ನು ಬಿಂಬಿಸುತ್ತಾ ಹೋಗುವುದೇ ಉಮಾಶ್ರೀ ಮತ್ತು ಆ ರೀತಿಯ ಕಲಾವಿದರ ಶಕ್ತಿ.
ಕನ್ನಡ ಸಿನೆಮಾದ ಸಂದರ್ಭದಲ್ಲಿ ಪುಟ್ಟಣ ಅವರ ಕಾಲಘಟ್ಟವೇ ಬೇರೆ ಕಾಶೀನಾಥ್ ಅವರ ಕಾಲಘಟ್ಟವೇ ಬೇರೆ. ಸುಮಾರು ಎರಡು ದಶಕಗಳ ಅಂತರ. ಪುಟ್ಟಣ್ಣ ಕಣಗಾಲ್ ಸಿನೆಮಾ ನಿರ್ದೇಶಿಸುವ ಸಂದರ್ಭದಲ್ಲಿ ಕಾದಂಬರಿಯಲ್ಲಿನ ಸ್ತ್ರೀ ಪಾತ್ರಗಳನ್ನು ಪ್ರಧಾನ ಕೇಂದ್ರವಾಗಿಟ್ಟುಕೊಂಡು ಸಿನೆಮಾಗಳು ಬಂದವು. ಆ ಸಿನೆಮಾಗಳು ಬಂದ ಸಾಮಾಜಿಕ ಸಂದರ್ಭವೇ ಬೇರೆ.  ಅಷ್ಟೇ ಅಲ್ಲ ಪುಟ್ಟಣ ಅವರು ಸಮಾಜದಲ್ಲಿ ಇದ್ದ ಸಂಪ್ರದಾಯ ಮತ್ತು ಮಡಿವಂತಿಕೆಯ ವಸ್ತುಗಳ ಸಿನೆಮಾದ ಚೌಕಟ್ಟಿನಿಂದ ಹೊರಬರಲು ಸಾಧ್ಯ ಆಗಲಿಲ್ಲ. ಜೊತೆಗೆ ಟಿ.ವಿ. ಇಲ್ಲದ ಕಾಲಮಾನದಲ್ಲಿ ಜನರಿಗೆ ಸಿನೆಮಾ ಒಂದೇ ಮನರಂಜನೆಯ ಕೇಂದ್ರವಾಗಿತ್ತು. ಕುಟುಂಬದವರೆಲ್ಲಾ ಸಿನೆಮಾ ನೋಡುವ ಟಾರ್ಗೆಟ್ ಆಗಿದ್ದ ಕಾರಣ ಆ ಬಗೆಯ ಸಿನೆಮಾಗಳು ಮತ್ತು ಅಲ್ಲಿನ ಸ್ತ್ರೀ ಪಾತ್ರಗಳು ಹೀಗೆ  ಬಿಂಬಿಸಲ್ಪಡುತ್ತಿದ್ದವು. ಆದ್ರೆ ಕಾಶೀನಾಥ್ ಅನುಭವ ಸಿನೆಮಾ ತೆಗೆದ ಕಾಲಘಟ್ಟ ಮತ್ತು ಸಾಮಾಜಿಕ ಸಂದರ್ಭವೇ ಬೇರೆ ಆಗಿತ್ತು. ಕನ್ನಡ ಸಿನೆಮಾ ಪೌರಾಣಿಕ ಮತ್ತು ಕಾದಂಬರಿ ಪ್ರಧಾನ ಸಿನೆಮಾಗಳಲ್ಲಿ ಪಡೆದ ವೈಭವ ಮಂಕಾಗಲು ಶುರು ಆಗಿತ್ತು. ಆರ್ಥಿಕತೆಯ ದೃಷ್ಟಿಯಿಂದಲೂ ಕೂಡ. ಇದನ್ನು ಸರಿಯಾಗಿ ಕ್ಯಾಪ್ಚರ್ ಮಾಡಿ ಕಾಶೀನಾಥ್ ಅನುಭವ ಸಿನೆಮಾ ಮಾಡಿದರು. ಅದೂ ವರೆಗೂ ಕಾಯುತ್ತಿದ್ದ ಹೊಸ ತುರ್ತಿಗೆ ಅನುಭವ ಕೂಡ ಕೊಡುಗೆ ಕೊಟ್ಟಿದೆ ಎಂದರೆ ತಪ್ಪಾಗಲಾರದು. ಉಮಾಶ್ರೀ ಅವರು ಕೂಡ ಇದನ್ನು ಬಹಳ ಸಮರ್ಥವಾಗಿ ಬಳಸಿಕೊಂಡರು. ಮುಜುಗರ ಮಾಡಿಕೊಂಡು ಸಿನೆಮಾ ನೋಡಿದರೆ ಮುಜುಗರ ಆಗಿಯೇ ಆಗುತ್ತದೆ. ಮದುವೆಯಾದ ಗಂಡ ತನ್ನ ಹೆಂಡತಿಯಿಂದ ಸಂತೋಷ ಸಿಗದಿದ್ದಾಗ ಇನ್ನೊಬ್ಬ ಹೆಣ್ಣಿನ ಬಳಿ ಹೋಗುವ ಒಂದು ಕೌಟುಂಬಿಕ ಲಹರಿಯನ್ನು ಕಾಶೀನಾಥ್ ಅವರು ತುಂಬಾ ಸಮರ್ಥವಾಗಿ ತೋರಿಸುವ ಮೂಲಕ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ. ಇಲ್ಲೆಲ್ಲೂ ಅಶ್ಲೀಲ ಅನ್ನಿಸುವುದಿಲ್ಲ ನನಗೆ. ಕೊನೆಗೂ ಪುಟ್ಟಣ್ಣ ಅವರ ಸಿನೆಮಾಗಳನ್ನು ಪುಟ್ಟಣ್ಣ ಅವರ ನೆಲೆಯಲ್ಲೇ ನಿಂತು ನೋಡಬೇಕು. ಕಾಶೀನಾಥ್ ಅವರ ಸಿನೆಮಾವನ್ನು ಕಾಶೀನಾಥ್ ಅವರ ನೆಲೆಯಲ್ಲಿಯೇ ನಿಂತು ನೋಡಬೇಕು.
ಸಿನೆಮಾ ಗೆಲ್ಲಿಸಬೇಕು. ಹಾಕಿದ ಬಂಡವಾಳವನ್ನು ವಾಪಸ್ ತೆಗೆಯಬೇಕು ಅನ್ನುವ ಅನೇಕ ಪೂರ್ವ ಕಲ್ಪಿತ ಕಾರಣಗಳಿಂದಲೇ  ಸಿನೆಮಾವನ್ನು ನಿರ್ಮಿಸುತ್ತಾರೆ. ವ್ಯಾಪಾರಿ ದೃಷ್ಟಿಯಿಂದ ಸಿನೆಮಾ ಮಾಡಿದಾಗ ಅದಕ್ಕೆ ಪೂರಕವಾದ ಗ್ಲಾಮರ್ ಗಮನದಲ್ಲಿ ಇಟ್ಟುಕೊಂಡೇ ಸಿನೆಮಾ ಮಾಡುತ್ತಾರೆ. ಇಷ್ಟಕ್ಕೂ A ಯಿಂದ M  ತನಕ ರಂಗಭೂಮಿ ಕಟ್ಟಿಕೊಟ್ಟಿದೆ N ನಿಂದ Z ತನಕ  ಸಿನೆಮಾ ಬೆಳೆಸಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಯಾವುದು ಯಾವ ರೂಪವನ್ನಾದರೂ ಪಡೆಯ ಬಹುದು. ಉದಾಹರಣೆಗೆ ಒಂದು ಸುಂದರವಾದ ನ್ಯೂಡ್ ಪೇಂಟಿಂಗ್ ನೋಡಿದಾಗ ಅಶ್ಲೀಲ ಅಂದುಕೊಂಡು ನೋಡಿದರೆ ಅದು ಕೊಡುವ ಅನುಭವವೇ ಬೇರೆ ಒಂದು ಕಲಾಕೃತಿ ಅಂದುಕೊಂಡು ನೋಡಿದರೆ ಅದು ಕೊಡುವ ಅನುಭೂತಿಯೇ ಬೇರೆ. ನೋಡುವ ದೃಷ್ಟಿ ಮುಖ್ಯ ಅಷ್ಟೇ. ಇಲ್ಲಿ ಪ್ರೇಕ್ಷಕನ ಪಾತ್ರವೂ ಬಹಳ ದೊಡ್ಡದು.
ಉಮಾಶ್ರೀ ಅವರ ಅಭಿನಯವನ್ನು ಹೀಗೆ ಅಂತ ಡಿಸೈಡ್ ಮಾಡೋದು ಎಷ್ಟು ಕಷ್ಟವೋ ಹಾಗೇ ಇಂತಲ್ಲಿ ರೂಪಾಂತರ ಆಗಿದೆ ಅಂತ ಹೇಳುವುದು ಕಷ್ಟ. ಯಾಕೆಂದರೆ ಸಮಯ ಸಂದರ್ಭಕ್ಕೆ ನಿರ್ಮಾತೃ ಏನು ಕೇಳುತ್ತಾರೋ ಅದನ್ನು ಉಮಾಶ್ರೀ ಕೊಡುತ್ತಾ ಬಂದಿದ್ದಾರೆ. ಹಾಗೇ ಕೊಡುವಾಗ ತನ್ನ ಪರಿಧಿಯ ಒಳಗೆ ಏನು ಬರುತ್ತೋ ಅದಕ್ಕೆ ಸಾಕಷ್ಟು ನ್ಯಾಯ ಒದಗಿಸಿದ್ದಾರೆ. ರಂಗಭೂಮಿಗೆ ಬೇಕಾದ ಭಾಷೆ ಮತ್ತು ಸಿನೆಮಾಕ್ಕೆ ಬೇಕಾದ ಭಾಷೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಕಾರಣ ಉಮಾಶ್ರೀ ಅವರನ್ನು ಇಲ್ಲಿ ಹೀಗೆ ಅಂತ ಸ್ಪೇಸ್ ಮಾಡುವುದು ಕಷ್ಟ . ಹಾಗೂ ಇಂಥಹ ಕಡೆ ಬದಲಾವಣೆ ಆಗಿದೆ ಎಂದು ಹೇಳುವುದು ಕೂಡ ಕಷ್ಟವೇ.  ಎಲ್ಲ ಸಿನೆಮಾ ಮತ್ತು ಎಲ್ಲ ರಂಗ ಪ್ರಯೋಗಗಳನ್ನು ನೋಡದಿರುವುದು ಕೂಡ ಈ ಪ್ರೆಶ್ನೆಗೆ ಉತ್ತರಿಸಲು ಕಷ್ಟ ಆಗುತ್ತಿದೆ ಅನ್ನಿಸುತ್ತಿದೆ.
ಉಮಾಶ್ರೀ ಅವರ ಸಾಮರ್ಥ್ಯಕ್ಕೆ ಅಭಿನಯಕ್ಕೆ ಹೆಚ್ಚು ಅವಕಾಶ ಇರುವ ಪಾತ್ರಗಳು ಅವರಿಗೆ ಸಿಕ್ಕಿಲ್ಲ. ಅವರ ಕೆಲವು ಪಾತ್ರಗಳನ್ನು ಮಾತ್ರ ಶೋಕೇಸ್ ಮಾಡಲು ಮಾತ್ರ ಸಾಧ್ಯವಾಗಿದೆ. ಉಮಾಶ್ರೀ ಅವರು ಮಾಡಬೇಕಾದ ಪಾತ್ರಗಳೂ ಇನ್ನೂ ಬೇಕಾದಷ್ಟು ಇವೆ. ಈಗ ಅವರನ್ನು ರಾಜಕೀಯ ಅವರನ್ನು ಸೆಳೆದುಬಿಟ್ಟಿದೆ. ಪ್ರಾದೇಶಿಕ ಭಾಷಾ ಸತ್ವ, ಆಂಗಿಕಗಳ ವೈವಿಧ್ಯತೆ, ಭಾವನೆಗಳ ಅಭಿವ್ಯಕ್ತಿ ಈ ಎಲ್ಲಾ ಹಿನ್ನೆಲೆಯಲ್ಲೂ ಉಮಾಶ್ರೀ ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯ ಕಲಾವಿದೆ. ಕೆಲವು ಪಾತ್ರಗಳನ್ನು ಶೋಕೇಸ್ ಮಾಡಿದ್ದಾರೆ, ಇನ್ನೂ ಕೆಲ ಪಾತ್ರಗಳಲ್ಲಿ ಎಷ್ಟು ಬೇಕೋ ಅಷ್ಟು ಅಭಿನಯಿದ್ದಾರೆ. ಇನ್ನೂ ಕೆಲವು ಪಾತ್ರಗಳಲ್ಲಿ ಪಾತ್ರದಿಂದ ಹೊರಗೆ ನಿಂತು ಅಭಿನಯಿಸಿದ್ದಾರೆ. ಯಾವ ಯಾವ ಪಾತ್ರವನ್ನು ಹೇಗೆ ಹೇಗೆ ಅಭಿನಯಿಸಬೇಕು ಎಂದು ತಿಳಿದಿರುವ ಕಲಾವಿದೆ ಉಮಾಶ್ರೀ. ಅವರಿನ್ನೂ ಅಗತ್ಯವಾಗಿ  ಮಾಡಬೇಕಾದ ಪಾತ್ರಗಳು ಅನೇಕ ಇವೆ. ಎಲಿಯಾನಿಟಿಕ್ ಆಗುವ ಮತ್ತು ಕ್ಯಾರಕ್ಟರ್ ಆಗುವ ಅಗತ್ಯಗಳು ಎಲ್ಲೆಲ್ಲಿ ಹೇಗೆ ಅನ್ನೋದು ಉಮಾಶ್ರೀ ಅವರಿಗೆ ಚೆನ್ನಾಗಿ ಗೊತ್ತಿದೆ ಅನ್ನುವುದನ್ನು ಅವರು ಅಭಿನಯಿಸಿದ ಪಾತ್ರಗಳೇ ಹೇಳುತ್ತವೆ.
ಒಟ್ಟು ರಂಗಭೂಮಿಯಿಂದ ಬಂದು ಅದರ ಅನುಭವವನ್ನು ಸಿನೆಮಾದಲ್ಲಿ ಹೇಗೆ ಬೇಕು ಎಷ್ಟು ಬೇಕು ಅನ್ನುವುದನ್ನು ಸರಿಯಾಗಿ ಅಡಾಪ್ಟ್ ಮಾಡಿಕೊಂಡು ಕನ್ನಡ ಸಿನೆಮಾ ಲೋಕವನ್ನು  ಕಟ್ಟಿದ ಕಲಾವಿದರು ಅನೇಕರಿದ್ದಾರೆ. ಉಮಾಶ್ರೀ ಅವರು ಕೂಡ ರಂಗದ ಅನುಭವವನ್ನು ಬಹಳ ಸಮರ್ಥವಾಗಿ ಸಿನೆಮಾಗೆ ಅಡಾಪ್ಟ್ ಮಾಡಿದ ಬಹಳ ಮುಖ್ಯ ಕಲಾವಿದೆ ಅನ್ನಬಹುದು.

‍ಲೇಖಕರು G

August 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. NARAYANAPPA M

    ಉಮ ಅಮ್ಮನವರ ಜೀವನ ಚರಿತ್ರೆ ಓದಿದಂತೆ ಭಾಸವಾಗುತ್ತದೆ. ಸರ್.

    ಪ್ರತಿಕ್ರಿಯೆ
  2. Anonymous

    Umashree endare halavu prathibhegala sangama… avara naija abhinayadalli avaru jeevanada horaatagalannu kanabahudu… “Ammaa u r great”. Hats of u Raghu sir..!!!

    ಪ್ರತಿಕ್ರಿಯೆ
  3. NARAYANAPPA M

    ಉಮ ಅಮ್ಮನವರ ಜೀವನ ಚರಿತ್ರೆ ಓದಿದಂತೆ ಭಾಸವಾಗುತ್ತದೆ. ಸರ್. ಕನ್ನಡದ ಬಹುಮುಖ ಪ್ರತಿಭೆಗೆ ಸಲ್ಲಲೇಬೇಕಾದ ನಿಜವಾದ ಸನ್ಮಾನ ಇದು. ಅವದಿಗೆ ಓದುಗರ ಪರವಾಗಿ ಅಭಿನಂದನೆಗಳು.

    ಪ್ರತಿಕ್ರಿಯೆ
  4. Anonymous

    ಅದ್ಭುತವಾದ ಕಲಾವಿದೆ
    ಕಮ್ ರಾಜಕಾರಣಿ
    ಆಡು ಮುಟ್ಟದ ಸೋಪ್ಪು ಇಲ್ಲಾ ಸಾಕವ್ವ ಅಭಿನಯಿಸದ ಪಾತ್ರಗಳು ಇಲ್ಲಾ

    ಪ್ರತಿಕ್ರಿಯೆ
  5. ನಿಮ್ಮ ಅಭ್ಹಿಮಾನಿ

    ರಘ್ಹು ಅವರೆ ಈ ಅದ್ಭುತ ಬರಹವನ್ನು ನಾನು ತುಂಬಾ ಸಂತೋಷದಿಂದ ಹಾಗೂ ಹೆಮ್ಮೆಯಿಂದ ಓದುತ್ತಿದ್ದೇನೆ, ನಿಮ್ಮ ಬರಹ ಮೆಚ್ಹ್ಚ್ಹುಗೆ ವ್ಯಕ್ತ ಪಡಿಸುವಂತಹದ್ದು
    ಉಮಾಶ್ರಿ ಅಮ್ಮನ ಅಭಿನಯ ಯಲ್ಲರಿಗೂ ಅರ್ಥವಾಗುತ್ತೆ ಮಕ್ಕಳಿಂದ ದೊಡ್ಡ ಪ್ರಾಯದವರೆಗೂ, ಒಬ್ಬರನ್ನು ಸಂತೋಷ ಪಡಿಸುವುದು ಎಂದರೆ ಅದು ಕುಷಲವೆ? ಇವರ ಅಭಿನಯದಿಂದ, ಎಂತಾ ನೋವಿನಿಂದ ಬಳಲಿತ್ತಿದ್ದ್ರರು ಅವರು ಇವರ ಅಬ್ಹಿನಯವನ್ನು ನೋಡಿ ಅಪಾರ ಸಂತೋಷವನ್ನು ಕಾಣುತ್ತಾರೆ, ಅಮ್ಮ ತನ್ನ ಮನಸ್ಸಿನಲ್ಲಿ ನೋವು ಅದುಮಿ ಬದಿಗಿ ಇಟ್ಟು ಸಹಸ್ರಾರು ಪ್ರೇಕ್ಧಕರಿಗೆ ಸಂತ್ಸವನ್ನು ನೀಡಿರುವಂತಹ ಮಹಾನ ಅಬ್ಹಿನೇತ್ರಿ
    ಇನ್ನು ಸಂಗೋಳ್ಳಿ ರಾಯಣ್ಣ ತಾಯಿಯ ಪಾತ್ರ ನಿಜಕ್ಕು ಇವರೆ ಆ ಮಹಾನ ಯೋಧನ ರಾಯಣ್ಣನ ನಿಜವಾದ ತಾಯಿ ಇದ್ರು ಅನ್ನುವದರಲ್ಲಿ ಸಂದೇಹವಿಲ್ಲ
    ಆ ಕೂಗು ಆ ಕಣ್ಣೀರು ಆ ಝೇಂಕಾರ ಆ ಮಾತುಗಳು ನಿಜವಾದ ನೇರ ಸಂವಾದ
    ಅದ್ಭುತ ಅಬ್ಹಿನಯ,,,,
    ಅಬ್ಹಿನಯ ಶಾರದೆ
    ದೇವಿ ಅನುಗ್ರಹ ಇವರಿಗೆ ಇವರ ಕುಟುಂಬಕ್ಕೆ ಸದಾ ಇರಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: