ಮೈಸೂರು ನಂಬರ್ ಒನ್ – ಉಳಿದ ನಗರಗಳ ಗತಿ ?

divakar
ನಾ ದಿವಾಕರ

ಅರ್ಜಿ ಗುಜರಾಯಿಸಿ ಪಡೆದ ಪ್ರಶಸ್ತಿಗಳು ಮೌಲ್ಯಯುತವಾಗಿರುವುದಿಲ್ಲ. ಇದು ಸಾರ್ವತ್ರಿಕ ಸತ್ಯ. ಸಾಹಿತ್ಯ ಪ್ರಶಸ್ತಿಗೆ ಅನ್ವಯಿಸುವಷ್ಟೇ ಈ ಮಾತುಗಳು ಭಾರತರತ್ನದಂತಹ ಪ್ರತಿಷ್ಠಿತ ಪ್ರಶಸ್ತಿಗೂ ಅನ್ವಯಿಸುತ್ತದೆ. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಶಸ್ತಿಗಳೂ ಸಹ ಒಂದು ಜಾಹೀರಾತು ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತವೆ. ಕೆಲವೊಮ್ಮೆ ವಿವಾದಗಳೂ ಸಹ ಲಾಭದಾಯಕ ಜಾಹೀರಾತುಗಳಾಗಿ ಪರಿಣಮಿಸುತ್ತವೆ. ಕುಸಿಯುತ್ತಿರುವ ಮಾರುಕಟ್ಟೆಯನ್ನು ಪುನಶ್ಚೇತನಗೊಳಿಸಲು ವಿವಾದಗಳು ನೆರವಾಗುವಷ್ಟೇ ಪ್ರತಿರೋಧಗಳೂ ನೆರವಾಗುವುದನ್ನು ಹಲವು ಸಂದರ್ಭಗಳಲ್ಲಿ ಕಾಣಬಹುದು. ಇತ್ತೀಚೆಗೆ ದೇಶದ ಪ್ರಮುಖ ನಗರಗಳನ್ನು ಸ್ವಚ್ಚತೆಯ ಆಧಾರದ ಮೇಲೆ ಗುರುತಿಸುವುದು ಮತ್ತು ಕೆಲವು ಅಳತೆಗೋಲುಗಳನ್ನಾಧರಿಸಿ ನಗರಗಳ ಸ್ವಚ್ಚತೆಯನ್ನು ನಿರ್ಧರಿಸುವ ಪ್ರವೃತ್ತಿ ಆಳುವ ವರ್ಗಗಳಲ್ಲಿ ಕಾಣುತ್ತಿದೆ. ಈ ಸ್ವಚ್ಚತೆಯ ಪರಿಕಲ್ಪನೆ ನರೇಂದ್ರ ಮೋದಿಯ ಸ್ವಚ್ಚ ಭಾರತ ಅಭಿಯಾನದ ಚೌಕಟ್ಟಿನಲ್ಲೇ ಮೂಡಿಬರುತ್ತದೆ. ಸ್ಮಾರ್ಟ್ ಸಿಟಿ ಅಥವಾ ಸುಂದರ ನಗರಗಳನ್ನು ನಿರ್ಮಿಸುವ ಬಂಡವಾಳ ಪ್ರೇರಿತ ಅರ್ಥ ವ್ಯವಸ್ಥೆಗೆ ಇಂತಹ ಉತ್ಸವ ಮೂರ್ತಿಗಳು ಅತ್ಯವಶ್ಯ. ಮೈಸೂರು ಇದೀಗ ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದು ಎಲ್ಲರ ಪ್ರಶಂಸೆಗೆ ಒಳಗಾಗಿದೆ. ಕರ್ನಾಟಕದ ಐದು ನಗರಗಳು ಟಾಪ್ ಟೆನ್ ಸ್ವಚ್ಚ ನಗರಗಳೆಂದು ಗುರುತಿಸಲ್ಪಟ್ಟಿದೆ.

215

ಚಿತ್ರ : ಪುಂಡಲೀಕ ಕಲ್ಲಿಗನೂರು

ಇಲ್ಲಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಸರ್ಕಾರ ಅಥವಾ ಸರ್ಕಾರಿ ಪ್ರೇರಿತ ಸಂಸ್ಥೆಯೊಂದು ಈ ಪ್ರಶಸ್ತಿಗೆ ಆಯ್ಕೆ ಮಾಡಲು ಅನುಸರಿಸುವ ಮಾನದಂಡಗಳೇನು ? ಎರಡನೆಯದು ಒಂದು ವೇಳೆ ಪ್ರಶಸ್ತಿ ವಿಜೇತ ನಗರಗಳು ಸ್ವಚ್ಚವಾಗಿರುವುದೇ ಆದರೆ ಈ ಸ್ವಚ್ಚತೆಯ ಹರಿಕಾರರು ಯಾರು ? ಜನಸಾಮಾನ್ಯರ ಪರಿಭಾಷೆಯಲ್ಲಿ ಯಾವುದೇ ಒಂದು ನಗರ ಅಥವಾ ಪಟ್ಟಣದ ಸ್ವಚ್ಚತೆಗೆ ಹಲವು ಆಯಾಮಗಳಿರುತ್ತವೆ. ಪ್ರಶಸ್ತಿ ನೀಡುವ ಸಂಸ್ಥೆಗೆ ಸಾಮಾನ್ಯರ ಪರಿಭಾಷೆ ಅರ್ಥವಾಗುವುದಿಲ್ಲ. ಹಾಗಾಗಿಯೇ ಮೈಸೂರು ನಂಬರ್ ಒನ್ ಸ್ವಚ್ಚ ನಗರಿ ಎಂದು ಘೋಷಿಸಿದಾಗ ಎಲ್ಲರಿಗೂ ಅಚ್ಚರಿಯಾಗುತ್ತದೆ. ಮೂಲತಃ ಸ್ವಚ್ಚತೆ ಎನ್ನುವುದೇ ಒಂದು ಸಾಪೇಕ್ಷ ವಿದ್ಯಮಾನ. ಹಾಗಾಗಿ ಸ್ಫಟಿಕ ಸ್ಪಷ್ಟತೆಯೂ ಸಹ ಕೆಲವೊಮ್ಮೆ ಭಿನ್ನ ಅಭಿಪ್ರಾಯಗಳನ್ನು ಮೂಡಿಸಬಹುದು. ಶೌಚಾಲಯ ನಿರ್ಮಾಣ, ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ವಿಂಗಡನೆ ಮುಂತಾದ ಮಾನದಂಡಗಳನ್ನು ಆಧರಿಸಿ ಒಂದು ನಗರವನ್ನು ಸ್ವಚ್ಚ ಎಂದು ಘೋಷಿಸುವುದು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಸ್ವೀಕೃತವಾಗಬಹುದು. ಆದರೆ ದಿನನಿತ್ಯ ನಗರ ಪ್ರದಕ್ಷಿಣೆ ಮಾಡುವ ಸಾಮಾನ್ಯ ನಾಗರಿಕರಿಗೆ ವಾಸ್ತವದ ಅರಿವು ಇರುತ್ತದೆ. ಪ್ರಶಸ್ತಿಯ ಮಾನದಂಡಗಳಲ್ಲಿ ಈ ನಾಗರಿಕ ಅಭಿಪ್ರಾಯಕ್ಕೆ ಮನ್ನಣೆಯೇ ಇರುವುದಿಲ್ಲ. ಇದು ಎಲ್ಲ ಪ್ರಶಸ್ತಿಗಳಲ್ಲೂ ಕಾಡುವ ಪ್ರಶ್ನೆ.

ಎರಡನೆಯ ಪ್ರಶ್ನೆ ಎಂದರೆ ಪ್ರಶಸ್ತಿ ಭಾಜನ ನಗರಗಳ ಸ್ವಚ್ಚತೆಗೆ ಮೂಲ ಕಾರಣ ಯಾರು ಎಂಬುದು. ಮೈಸೂರು ನಂಬರ್ ಒನ್ ನಗರ ಎಂದು ಘೋಷಿಸಿದ ಕೂಡಲೇ ಬೆನ್ನು ತಟ್ಟಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹಿಪ್ ಹಿಪ್ ಹುರ್ರೇ ಎಂದು ನಲಿದಾಡುವ ದನಿಗಳು ಆಡಳಿತ ವ್ಯವಸ್ಥೆಯ ಅಂಗಣಗಳಲ್ಲಿ ಕೇಳಿಬರುತ್ತಿವೆ. ಮುಂಬರುವ ಚುನಾವಣೆಗಳಲ್ಲಿ ಈ ಪ್ರಶಸ್ತಿ ಎಷ್ಟು ಮತಗಳನ್ನು ಗಳಿಸಬಹುದು ಎಂದು ಪಾಲಿಕೆಗಳಲ್ಲಿ, ಪಂಚಾಯತ್ಗಳಲ್ಲಿ, ವಿಧಾನಸೌಧದಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ. ಮುಖ್ಯಮಂತ್ರಿಗಳಿಂದ ಹಿಡಿದು ಪಾಲಿಕೆಯ ಸದಸ್ಯರವರೆಗೆ ಎಲ್ಲರೂ ಸಹ ವಿಜೃಂಭಿಸುತ್ತಿದ್ದಾರೆ, ಆತ್ಮರತಿಯ ಹೊಳೆಯಲ್ಲಿ. ಆದರೆ ಮೈಸೂರು ನಗರ ತ್ಯಾಜ್ಯ ವಿಂಗಡನೆ ಮತ್ತು ನಿರ್ವಹಣೆಯಿಂದಲೇ ಪ್ರಶಸ್ತಿ ಗಳಿಸಿದೆ ಎಂದರೆ ಈ ಸಾಧನೆಯ ಹಿಂದಿನ ಕಾಣದ ಕೈಗಳು ಯಾವುವು ? ದಿನಬೆಳಗಾದರೆ ಮನೆಮನೆಗೆ ತೆರಳಿ ವಿಂಗಡಿಸದ ತ್ಯಾಜ್ಯವನ್ನು ಸಂಗ್ರಹಿಸುವ ಪೌರ ಕಾರ್ಮಿಕರಲ್ಲವೇ. ಗುತ್ತಿಗೆ ಕಾರ್ಮಿಕರೋ, ಶಾಶ್ವತ ಕಾರ್ಮಿಕರೋ ಮುಖ್ಯವಲ್ಲ. ಒಟ್ಟಿನಲ್ಲಿ ಈ ಸ್ವಚ್ಚತೆಯ ಹರಿಕಾರರು ಇವರೇ ಅಲ್ಲವೇ. ಸಮಾಜದ , ನಾಗರಿಕರ ಸ್ವಾಸ್ಥ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಪೌರ ಕಾರ್ಮಿಕರ ದೇಹ ಸ್ವಾಸ್ಥ್ಯವನ್ನು ಕಾಪಾಡಲು ಸರ್ಕಾರ, ಪಾಲಿಕೆ ಮತ್ತು ಪಂಚಾಯತ್ ಯಾವ ಕ್ರಮಗಳನ್ನು ಕೈಗೊಂಡಿವೆ ? ಬಹುಶಃ ಈ ಪ್ರಶ್ನೆ ಎದುರಾದಾಗ ನಿರುಮ್ಮಳ ಮೌನ ಆವರಿಸುತ್ತದೆ.

ಪ್ರಶಸ್ತಿಗಳು ಆತ್ಮಾವಲೋಕನದ ಮಾರ್ಗಗಳಾಗಬೇಕು. ಆದರೆ ಯಾವುದೋ ಒಂದು ನಿರ್ದಿಷ್ಟ ಉದ್ದೇಶದಿಂದ ನಿರ್ಧಾರವಾಗುವ ಪ್ರಶಸ್ತಿಗಳು ಕೇವಲ ಆತ್ಮರತಿಯ ಮಾರ್ಗಗಳಾಗುತ್ತವೆ. ಹಾಗಾಗಿ ಸಾಧನೆಯ ಹಿಂದಿನ ಕಾಣದ ಕೈಗಳು ಕಾಣದಾಗಿಯೇ ಉಳಿದುಬಿಡುತ್ತವೆ. ಮೈಸೂರು ನಗರವನ್ನೊಮ್ಮೆ ಸುತ್ತಿ ಬಂದರೆ ಈ ಪ್ರಶಸ್ತಿ ಎಷ್ಟು ಪ್ರಾಮಾಣಿಕ ಎಂದು ಅರಿವಾಗುತ್ತದೆ. ತ್ಯಾಜ್ಯ ವಿಂಗಡನೆ ಮತ್ತು ಸಂಗ್ರಹಣೆಯೇ ಪ್ರಧಾನವಾದಲ್ಲಿ ಸಂಗ್ರಹಿತ ತ್ಯಾಜ್ಯವನ್ನು ಗುಡ್ಡೆ ಹಾಕುವ ಮೂಲಕ ಒಂದು ಇಡೀ ಜನನಿಬಿಡ ಪ್ರದೇಶವನ್ನೇ ಬದುಕಲಾರದಂತೆ ಮಾಡಿರುವುದಕ್ಕೆ ಯಾವ ಪ್ರಶಸ್ತಿ ನೀಡಬೇಕು. ಮೈಸೂರಿನ ಸೂಯೆಜ್ ಫಾಮರ್್ ಸುತ್ತಮುತ್ತಲಿನ ಜನತೆ ಪ್ರತಿದಿನ ಸಂಜೆ ಎದುರಿಸುವ ಪರಿಸ್ಥಿತಿಯನ್ನು ಸುಧಾರಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ. ಪ್ರವಾಸೋದ್ಯಮ ಕೇಂದ್ರವಾಗಿ ವಿಶ್ವವಿಖ್ಯಾತವಾಗಿರುವ ಮೈಸೂರಿನ ಪಾರಂಪರಿಕ ತಾಣಗಳು ಮತ್ತು ಸುತ್ತಲಿನ ಪರಿಸರ ಎಷ್ಟು ಸ್ವಚ್ಚವಾಗಿದೆ ? ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ, ಅರಮನೆಯ ಪಾಶ್ರ್ವ ಗೋಡೆಗಳ ಬಳಿ, ಕುಕ್ಕರ ಹಳ್ಳಿ ಕೆರೆಯ ದಡದಲ್ಲಿ, ವಿಶ್ವವಿದ್ಯಾಲಯದ ಆವರಣದಲ್ಲಿ, ಕೆಆರ್ಎಸ್ ಅಣೆಕಟ್ಟಿನ ಸುತ್ತಲು ಇರುವ ತ್ಯಾಜ್ಯ ಸಂಗ್ರಹವನ್ನು ಒಮ್ಮೆ ನೋಡಿದರೆ, ತ್ಯಾಜ್ಯವನ್ನು ಕಾಪಾಡಿರುವುದಕ್ಕೇ ಮೈಸೂರಿಗೆ ನಂಬರ್ ಒನ್ ಪ್ರಶಸ್ತಿ ನೀಡಬೇಕಾಗುತ್ತದೆ.

ಆದರೂ ಇತರ ನಗರಗಳಿಗೆ ಹೋಲಿಸದರೆ ಮೈಸೂರು ಉತ್ತಮ ಎನ್ನುವುದಾದರೆ, ಸ್ವಚ್ಚತೆಯನ್ನು ಕಾಪಾಡುವ ಪೌರ ಕಾರ್ಮಿಕರಿಗೆ ಪಾಲಿಕೆಯಾಗಲಿ ಸರ್ಕಾರವಾಗಲೀ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಿದೆ? ಕಾರ್ಮಿಕರ ದೇಹ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿಯ ರಕ್ಷಣಾ ಕವಚಗಳನ್ನು ಒದಗಿಸಿದೆ ? ಕಸದ ವಾಹನ ಎಂದರೆ ಕೊಳಕು ಮೆತ್ತಿರಲೇಬೇಕು ಎಂಬ ನಿಯಮವೇನಾದರೂ ಇದೆಯೇ ? ಈ ವಾಹನವನ್ನೂ ದಿನನಿತ್ಯ ಸ್ವಚ್ಚಗೊಳಿಸಬಹುದಲ್ಲವೇ ? ರಸ್ತೆ ಬದಿಯಲ್ಲಿನ ಕಸದ ತೊಟ್ಟಿಗಳನ್ನು ಒಮ್ಮೆಯಾದರೂ ತೊಳೆದು ಸ್ವಚ್ಚಗೊಳಿಸಲಾಗಿದೆಯೇ ? ನಗರದಲ್ಲಿರುವ ಪ್ರತಿಷ್ಠಿತ ಐಷಾರಾಮಿ ಛತ್ರಗಳಲ್ಲಿ ಮದುವೆ ನಡೆದ ನಂತರ ರಸ್ತೆಬದಿಯಲ್ಲಿ ಬೀಳುವ ತ್ಯಾಜ್ಯದ ಪರಿಣಾಮವನ್ನು ಪಾಲಿಕೆ ಗ್ರಹಿಸಿದೆಯೇ ? ಛತ್ರಗಳು ಶುಭ್ರವಾಗಿರಲಿ ಎಂದು ಎಲ್ಲ ತ್ಯಾಜ್ಯವನ್ನೂ ರಸ್ತೆಯಲ್ಲಿನ ತೊಟ್ಟಿಗೆ ಬಿಸಾಡುವ ಧೋರಣೆ ಎಷ್ಟು ಸರಿ ? ಲಕ್ಷಾಂತರ ರೂ ಬಾಡಿಗೆ ಪಡೆಯುವ ಛತ್ರದ ಮಾಲೀಕರು ( ಇತ್ತೀಚೆಗೆ ಎಲ್ಲ ಪ್ರತಿಷ್ಠಿತ ಛತ್ರಗಳಿಗೂ ರಾಜಕಾರಣಿಗಳೇ ಮಾಲೀಕರು !) ತ್ಯಾಜ್ಯ ನಿರ್ವಹಣೆಯನ್ನು ತಮ್ಮ ನೈತಿಕ ಕರ್ತವ್ಯ ಎಂದೇಕೆ ಭಾವಿಸುವುದಿಲ್ಲ ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋಗುವ ನಾಗರಿಕ ತ್ರಿವಿಕ್ರಮನಿಗೆ ಬೇತಾಳ ಉತ್ತರಿಸುವುದೇ ಇಲ್ಲ !!!!

‍ಲೇಖಕರು G

August 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: