ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಸಾಕವ್ವನ ಮೊದಲ ಭೇಟಿ


ನಾನು ಜೀವನಕ್ಕಾಗಿ ಬೇಲೂರಿನ ಚನ್ನೇಗೌಡರ ಬೀದಿಯ ಹೇಳೇ ಬಿಲ್ಡಿಂಗಿನಲ್ಲಿ ನಡೀತಿದ್ದ ನೇತಾಜಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದೆ, 350 ರೂಪಾಯಿ ಸಂಬಳಕ್ಕೆ. ನನಗೆ ಶಾಲೆಯಲ್ಲಿ ಮಕ್ಕಳಿಗೆ ಡ್ಯಾನ್ಸ್ ಕಲಿಸೋದು, ನಾಟ್ಕ ಆಡಿಸೋದು ಅಂದ್ರೆ ಬಲು ಪ್ರೀತಿ. ಹಾಗಾಗೇ ಆ ಶಾಲೆಯವರು ನನ್ನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ನಾನು 10 ನೇ ಕ್ಲಾಸ್ ಇದ್ದಾಗಲೇ ನೇತಾಜಿ ಸ್ಕೂಲ್ ಟೀಚರ್. ಅದಕ್ಕಿಂತ ಎರಡು ವರ್ಷ ಮುಂಚೆನೇ ಅದೇ ಶಾಲೆಯ ಮಕ್ಕಳಿಗೆ ಸ್ಕೂಲ್ ಡೇ ಟೈಮ್ ನಲ್ಲಿ ಡ್ಯಾನ್ಸ್ ಹೇಳಿಕೊಡೋ ಪಾರ್ಟ್ ಟೈಮ್ ಕೆಲಸ ಮಾಡ್ತಿದ್ದೆ. ನನ್ನ ಸ್ಕೂಲು ಕಾಲೇಜು ಮುಗಿಸಿಕೊಂಡು ನೇತಾಜಿ ಶಾಲೆಯಲ್ಲಿ ಪಾಠ ಮಾಡಲು ಅವಕಾಶ ಕೊಟ್ಟಿದ್ದ ಅವತ್ತಿನ ಎಚ್.ಎನ್. ಲೀಲಾವತಿ ಅನ್ನುವ ಹೆಡ್ ಮೇಡಂ ಅವರನ್ನು ಮರೆಯೋ ಹಾಗಿಲ್ಲ. ಯಾಕಂದ್ರೆ ಎಸ್.ಎಸ್.ಎಲ್.ಸಿ ಕ್ವಾಲಿಫಿಕೇಶನ್ ಗೆ 5 ನೇ ಕ್ಲಾಸ್ ತನಕ ಕನ್ನಡ ಮತ್ತು ಸೋಶಿಯಲ್ ಸೈನ್ಸ್ ಪಾಠ ಮಾಡೋಕೆ ಅವಕಾಶ ಕೊಟ್ಟಿದ್ರು. ಆಮೇಲೆ ಅದು 7 ನೇ ಕ್ಲಾಸ್ ತನಕ ವಿಸ್ತರಿಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮಕ್ಕಳಿಗೆ ಹೆಚ್ಚು ಅಂಕ ತಂದುಕೊಡೋ ತನಕ ಕೆಲಸ ಮಾಡಿ ಸೈ ಅನ್ನಿಸಿಕೊಳ್ಳಲು ಆಕೆ ಸಹಕರಿಸಿದ್ದರು. ನಾನ್ ನೋಡಿದ್ರೆ ಕನ್ನಡ ಮೀಡಿಯಂನಲ್ಲಿ ಇರೋ ಒಂದು ಇಂಗ್ಲಿಷ್ ಸಬ್ಜೆಕ್ಟ್ ಅನ್ನೇ ಕಷ್ಟ ಪಟ್ಟು ಓದುತ್ತಿದ್ದ ಕಾಲ. ಹೀಗಿದ್ದು ನನ್ನ ಹತ್ತಿರ ಇಂಗ್ಲಿಷ್ ಮೀಡಿಯಂಗೆ ಪಾಠ ಮಾಡಿಸಿದ ಆ ಶಾಲೆಯ ಮ್ಯಾನೇಜ್ಮೆಂಟಿನ ಮತ್ತು ಲೀಲಾವತಿ ಟೀಚರ್ ಅವರುಗಳ ಧೈರ್ಯವನ್ನು ಮೆಚ್ಚಲೇಬೇಕು. ಆದಾದ ಮೇಲೆ ಬೇಲೂರಿನಲ್ಲಿ ವಿಜಯಲಕ್ಷ್ಮಿ ಟ್ಯುಟೋರಿಯಲ್ಸ್ ಅಂತ ಮಾಡಿಕೊಂಡು ಎಲ್ ಕೆ ಜಿ ಯಿಂದ ಎರಡನೇ ಪಿ ಯು ಸಿ ಇಂಗ್ಲಿಷ್ ಪಾಠ ಮಾಡೋ ತನಕ ಫುಲ್ ಫೇಮಸ್ ಆಗಿಬಿಟ್ಟೆ. ನಾ ಪಾಠ ಮಾಡಿದ ನೂರಾರು ಮಂದಿ ಮಕ್ಕಳು ಒಳ್ಳೇ ಅಂಕ ತಗೋತಿದ್ರು. ಈಗಂತೂ ಅವರೆಲ್ಲಾ ಕೆ.ಎ.ಎಸ್ ಆಫಿಸರ್ಗಳು, ಇಂಜಿನಿಯರ್ಗಳು ಹೀಗೆ ಬೇರೆ ಬೇರೆಯ ಒಳ್ಳೊಳ್ಳೇ ಸ್ಥಾನದಲ್ಲಿದ್ದಾರೆ. ಇದೆಲ್ಲಾ ಕೊನೆಗೆ ಎಷ್ಟರ ಮಟ್ಟಿಗೆ ಹೋಯಿತೆಂದರೆ ಬೇಲೂರಿನ ಕೆಲ ಪ್ರೈವೇಟ್ ಶಾಲೆಗಳು ನನ್ನನ್ನು ಅವರ ಶಾಲೆಗೆ ಸೇರಿಸಿಕೊಳ್ಳಬೇಕೆಂದು ಪ್ರಯತ್ನಗಳು ನಡೆಸಿದವು. ಆಮಿಷಗಳನ್ನು ತೋರಿದರು. ರಘು ಇದ್ರೆ ಶಾಲೆಗೆ ಹೆಚ್ಚು ವಿಧ್ಯಾರ್ಥಿಗಳು ಬರುತ್ತಾರೆ. ಎಲ್ಲಾ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಬಹುಮಾನ ಬರುತ್ತೆ, ಶಾಲೆಗೆ ಹೆಸರು ಬರುತ್ತೆ ಅಂತ ತುಂಬಾ ಸಲ ನನ್ನನ್ನು ಕರೆದರು. ಆದ್ರೆ ನಾನು, ನನ್ನ ಕಡುಕಷ್ಟದ ದಿನಗಳಲ್ಲಿ ಮೊದಲು ಹಿಡಿ ಅನ್ನ ಕೊಟ್ಟ ಶಾಲೆ ಬಿಡೋದು ಬೇಡ ಅಂತ ಹಾಸನದಲ್ಲಿ ಎಂ.ಎ ಮುಗಿಸೋತನಕ ಅದೇ ಶಾಲೆಯ ಟೀಚರ್ ಆಗಿಯೇ ದುಡಿದೆ. ಕಲಿತದ್ದು ಅನೇಕ ಅಲ್ಲಿ. ಪಡೆದದ್ದು ಹಲವು ಪೋಷಕರ ಪ್ರೀತಿ ಮತ್ತು ಪುಟಾಣಿ ವಿಧ್ಯಾರ್ಥಿಗಳ ಪ್ರೀತಿ. ಜೊತೆಗೆ ಆತ್ಮವಿಶ್ವಾಸ. ನಾ ನೇತಾಜಿ ಸ್ಕೂಲ್ ಬಿಡೋ ಹೊತ್ತಿಗೆ ಅಂದ್ರೆ ಎಂ.ಎ. ಮುಗಿಸಿದ ಮೇಲೆ ಶಾಂತಲಾ ಪದವಿ ಕಾಲೇಜಿಗೆ ಆಮೇಲೆ ಸರ್ವೋದಯ ಪಿ.ಯು ಕಾಲೇಜಿಗೆ ಮತ್ತು ಹೊಯ್ಸಳ ಪಿ.ಯು ಕಾಲೇಜಿಗೆ ಕನ್ನಡ ಉಪನ್ಯಾಸಕ ಆಗೋತನಕ ಅದೇ ನೇತಾಜಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆ. ನಾ ನೇತಾಜಿ ಸ್ಕೂಲಿನಲ್ಲಿ ಕೆಲಸ ಬಿಡೋ ಕಾಲಕ್ಕೆ ನನ್ನ ಸಂಬಳ 1200 ರೂಪಾಯಿಗಳು ಮುಟ್ಟಿತ್ತು. ಅಷ್ಟೆಯಲ್ಲ ನಾ ಅಲ್ಲಿ ಆಗ ಸೀನಿಯರ್ ಮೋಸ್ಟ್ ಟೀಚರ್.
ಇಷ್ಟೆಲ್ಲಾ ಬ್ಯಾಕ್ ಗ್ರೌಂಡ್ ಇರೋ ನಾನು ಮಹತ್ವಾಕಾಂಕ್ಷಿ ಮೊದಲಿನಿಂದಲೂ. ಹೀಗಿರುವಾಗ ಒಂದಿನ ಬೆಳಿಗ್ಗೆ 5 ರಿಂದ 7ರ ತನಕ ಮನೆ ಪಾಠ, ಆಮೇಲೆ, ನಾನೇ ಪಾಠ ಮಾಡಬೇಕು ಅನ್ನುವ ಪೋಷಕರ ಒತ್ತಾಯಕ್ಕೆ ಶಾಲೆ 8 ರಿಂದ 10 ರ ತನಕ ಸ್ಪೆಷಲ್ ಕ್ಲಾಸ್ಗಳ ರೂಪದಲ್ಲಿ ಸ್ಕೂಲ್ ಮಕ್ಕಳಿಗೆ ಕ್ಲಾಸು , ಆಮೇಲೆ 10 ರಿಂದ ನನ್ನ ಕಾಲೇಜು ಮತ್ತೆ 3 ಗಂಟೆಗೆ ಶಾಲೆಗೆ ಬಂದು ಎರಡು ಪೀರಿಯಡ್ಡು ಪಾಠ, ಸಂಜೆ 5 ರಿಂದ 7.30 ರವರೆಗೆ ಮತ್ತೆ ಟ್ಯೂಶನ್ ಇವನ್ನೆಲ್ಲಾ ಮುಗಿಸಿಕೊಂಡು ಉಸ್ಸೋ ಎಂದು ಮನೆ ಕಡೆ ಬರ್ತಿದ್ದೆ. ಅವತ್ತು ಬೇಲೂರಿನ ದೇವಾಂಗ ಬೀದಿ ತುಂಬಾ ಗಿಜಿ ಗಿಜಿ. ಯಾಕಂದ್ರೆ ಸಂಘಟನೆಯ ಸಲುವಾಗಿ ಉಮಾಶ್ರೀ ಅವರು ಬೇಲೂರಿಗೆ ಬಂದಿದ್ರು. ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆಗೆಂದು ಬಂದಿದ್ದ ಅವರನ್ನು ನೋಡಲು ಜನವೋ ಜನ. ಉಮಾಶ್ರೀ ಅವರು ಕಷ್ಟಪಟ್ಟು ಮೇಲೆ ಬಂದಿರೋ ಹೆಣ್ಣು ಅಂತ ತುಂಬಾ ಜನ ಮಾತಾಡೋದನ್ನ ಕೇಳಿದ್ದೆ. ಒಂದೆರಡು ಸಲ ಟಿ.ವಿ ಯಲ್ಲಿ ಅವರ ಸಂದರ್ಶನ ಕೂಡ ನೋಡಿದ್ದೆ. ನಾನೂ ಈ ತರದ ಅನೇಕ ಕಷ್ಟಗಳನ್ನು, ಹಸಿವೆಯನ್ನು, ಅವಮಾನಗಳನ್ನು ಎದುರಿಸುತ್ತಿದ್ದ ಆ ಕಾಲಕ್ಕೆ ಅವರನ್ನು ಮಾತಾಡಿಸುವುದರಿಂದ ನನಗೆ ಒಂಚೂರು ಸಹಾಯ ಆಗುತ್ತೇನೋ ಅಂತ ಅವರನ್ನು ಮಾತಾಡಿಸಿ ನನ್ನ ಕಷ್ಟ ಹೇಳಿಕೊಳ್ಳೋಣ ಅಂದುಕೊಂಡೆ. ಅಷ್ಟೊತ್ತಿಗೆ ಸ್ಕೂಲು, ಮನೆ ಪಾಠ ಎಲ್ಲದರಿಂದ ನನ್ನ ಆದಾಯ ಒಟ್ಟು 3000 ಮುಟ್ಟಿದ್ದರೂ ಹೆಚ್ಚಿಗೆ ಸಂಪಾದಿಸಬೇಕು ಅನ್ನುವ ದೊಡ್ಡ ಕನಸು ಬೇರೆ ಜೊತೆಗೆ ಇತ್ತು. ನನ್ನ ಮುದ್ದು ತಂಗಿ ಶ್ವೇತಳನ್ನು ಓದಿಸಿ ಒಂದೊಳ್ಳೆ ಕಡೆ ಮದುವೆ ಮಾಡಬೇಕು. ಅವಳಿಗೆ ಒಳ್ಳೊಳ್ಳೇ ಚೂಡಿದಾರ ಕೊಡಿಸಬೇಕು, ನಮ್ಮ ಅಜ್ಜಿ ತಾತನ್ನು ಪ್ರೀತಿಯಿಂದ ನೋಡಿಕೊಂಡು ಅವರಿಷ್ಟಪಟ್ಟಿದ್ದನ್ನು ತಿನ್ನಿಸಬೇಕು, ನನ್ನ ತಾಯಿ ತಮ್ಮನನ್ನು ನಮ್ಮಪ್ಪನ ಕುಡಿತ, ಹೊಡೆತ ಹಿಂಸೆಗಳಿಂದ ತಪ್ಪಿಸಬೇಕು, ಒಂದಷ್ಟು ಪುಸ್ತಕಗಳನ್ನು ಕೊಂಡುಕೊಂಡು ಓದಬೇಕು, ಹೀಗೆ ಏನೇನೋ ಕನಸುಗಳೆಲ್ಲಾ ಕಣ್ಣ ಮುಂದೆ ಬಂದು, ಉಮಾಶ್ರೀ ಬಂದಿದ್ದಾರೆ ಅನ್ನುವ ಸುದ್ದಿ ಬೀದಿಯಲ್ಲಿ ಗೊತ್ತಾದ ತಕ್ಷಣ ನನ್ನ ಕಾಲಿನ ಹೆಜ್ಜೆ ಜೋರಾಯಿತು. ಉಸಿರಾಟ ಬಿಸಿ ಆಯಿತು.

ಅಂತೂ ಅವರು ಬಂದಿದ್ದ ಹಳೇ ಕಟ್ಟಡದಲ್ಲಿದ್ದ ಚೌಡೇಶ್ವರಿ ದೇವಸ್ಥಾನಕ್ಕೆ ನಾನೂ ಹೋದೆ. ಜನ ಜನ ಎಲ್ಲರೂ ಮಾತಾಡಿಸುತ್ತಿದ್ದರು. ಇನ್ನೂ ಬೇಲೂರಿನ ವಿ.ಐ.ಪಿ ಗಳು ಬೇರೆ ಸ್ವಲ್ಪ ಹಾಗೆ ಹೀಗೇ ಇರೋವರನ್ನು ಹತ್ತಿರಕ್ಕೂ ಬಿಡುತ್ತಿರಲಿಲ್ಲ. ಕೆಲವರು ನಟಿ ಅಂತ ಹತ್ತಿರ ಹೋಗಿ ಕೈ ಕುಲುಕಲು ಹೋಗುತ್ತಿದ್ದರೆ ಇನ್ನೂ ಕೆಲವರು ಪುಟ್ಟಮಲ್ಲಿ ಪುಟ್ಟಮಲ್ಲಿ ಅಂತ ಗುನುಗುತ್ತಿದ್ದರು. ಆ ಜನರ ಗುಂಪಿನಲ್ಲಿ ನಾನು ನುಗ್ಗಿ ಹೋಗಿ ಅವರನ್ನೇ ನೋಡುತ್ತಾ ನಿಂತಿದ್ದೆ. ಮಾತಾಡಿಸಲು ಧೈರ್ಯ ಸಾಲುತ್ತಿರಲಿಲ್ಲ. ಸಂಕೋಚ ಬೇರೆ ನನಗೆ. ಸುಮಾರು ಮುಕ್ಕಾಲು ಗಂಟೆ ಆಕೆ ಅಲ್ಲೇ ಇದ್ದರು. ಅಲ್ಲಿಯ ತನಕ ಅವರನ್ನೇ ನೋಡುತ್ತಾ ಕಣ್ಣು ಪಿಳಿ ಪಿಳಿ ಬಿಟ್ಕೊಂಡು ನಿಂತಿದ್ದೆ. ಇವರು ಒಳ್ಳೇ ರಂಗಭೂಮಿ ನಟಿ. ಒಳ್ಳೇ ಕಲಾವಿದೆ ಹಾಗಾಗಿ ನನಗೂ ಡ್ಯಾನ್ಸ್ ಬರುತ್ತೆ. ಬೇಲೂರಿನ ಸೌಮ್ಯಶ್ರೀ ಗಮಕ ಶಾಲೆಯಲ್ಲಿ ಎರಡು ವರ್ಷ ಗಮಕ ಕಲಿತಿದ್ದೇನೆ, ಹಾಡುತ್ತೇನೆ. ಮಕ್ಕಳಿಗೆಲ್ಲಾ ನಾಟ್ಕ ಕಲಿಸುತ್ತಿದ್ದರಿಂದ ಅಭಿನಯಿಸುತ್ತೇನೆ ಅಂತೆಲ್ಲಾ ಅವರ ಹತ್ತಿರ ಹೇಳಿ ಎಲ್ಲಾದರೂ ನನ್ನ ಪ್ರತಿಭೆಯನ್ನು ಗಮನಿಸಿ ಅವಕಾಶ ಕೊಡಿಸಿ ಅಂತ ಕೇಳ ಬಹುದು, ಅಂದುಕೊಂಡು ಸಾವಿರ ಕನಸುಗಳ ಹೊತ್ತುಕೊಂಡು ಅವರ ದೃಷ್ಟಿಗೆ ಬೀಳುವಂತೆ ಎದುರಿಗೇ ನಿಂತಿದ್ದೆ. ಆದ್ರೆ ಅಲ್ಲಿಯ ಜನ ಮತ್ತು ಗಡಿಬಿಡಿ ನೋಡಿದ್ರೆ ನನ್ನ ಕಥೆನಾಗ್ಲಿ ನನ್ನ ಕನಸುಗಳನ್ನಾಗ್ಲಿ ಕೇಳಿ ಅವರು ನಂಗೆ ಸಹಾಯ ಮಾಡುತ್ತಾರೆ ಅನ್ನುವ ಯಾವ ಲಕ್ಷಣ ಕಾಣಲಿಲ್ಲ. ಭರವಸೆಗಳು ಮಸುಕಾಗಿ ಹೋದವು. ಕೊನೆಗೆ ದೊಡ್ಡದೊಂದು ಹಾರ ಹಾಕಿದರು, ಅವರು ಹೊರಡಲು ಸಿದ್ಧರಾದರು.
ಅವರನ್ನು ನೋಡಿದ್ದು, ಅವರು ಮುಖ್ಯವಾಗಿ ಹಿಂದುಳಿದ ವರ್ಗಗಳ ಮಹಿಳೆಯ ಅಭಿವೃದ್ಧಿಯನ್ನು ಕುರಿತು ಮಾತಾಡಿದ್ದನ್ನು ಕೇಳಿಸಿಕೊಂಡಿದ್ದೇ ಖುಷಿ ಅಂದುಕೊಂಡು ನಿರಾಸೆಯಿಂದ ಮನೆಗೆ ಹೋಗೋಣ, ನನ್ನ ತಂಗಿ ಶೇತಮ್ಮನ ಹತ್ತಿರ ಇದೆಲ್ಲಾ ಹೇಳಿಕೊಂಡು ನಿರಾಳ ಆಗಿಬಿಡೋಣ ಅನ್ಕೊಂಡು ಹೊರಟೆ. ಅವರೂ ಅಷ್ಟು ಹೊತ್ತಿಗೆ ಹೊರಟರು. ನಾನು ಅವರು ಕಾರು ಕಾರು ಹತ್ತುವ ತನಕ ಅವರನ್ನೇ ನೋಡುತ್ತಿದ್ದೆ. ಅವರು ಕಾರು ಹತ್ತಿದ ಮೇಲೆ ಎಲ್ಲರಿಗೂ ಕೈ ಮುಗಿದರು. ನಾನು ಪೆಕ್ರನ ತರ ಭಕ್ತಿಯಿಂದಲೋ, ಒಳಗಿದ್ದ ನೋವೋ, ಬದುಕಿನ ಸಂಕಟವೋ ಎಲ್ಲಾ ಒಟ್ಟಿಗೆ ಉಮ್ಮಳಿಸಿಕೊಂಡು ಬಂದಂತೆ ನಾ ನಿಂತಲ್ಲೇ ಕೈ ಮುಗಿದೆ, ಕುಸಿದು ಹೋಗುವಷ್ಟು ನಿರಾಸೆಯಿಂದ. ಇದನ್ನೆಲ್ಲಾ ಗಮನಿಸಿದ ಅವರು ಕಾರಿನ ಹತ್ತಿರ ನನ್ನನು ಕರೆದರು. ಕೈ ಕುಲುಕಿದರು. ಅವರ ಕಣ್ಣುಗಳಲಿ ಸಾಂತ್ವನವಿತ್ತು. ನಗುವಲ್ಲಿ ಒಲುಮೆಯಿತ್ತು. ನನಗೆ ಸಂತೋಷದಿಂದ ಮಾತುಗಳು ಹೊರಡಲೇ ಇಲ್ಲ. ಆದ್ರೂ, ಅವರು ಹೇಳಪ್ಪ ಎನ್ ಓದುತ್ತಿದ್ದೀಯಾ ಅಂದೊಡನೆ, ಮೇಡಂ ನಾ ಹಾಡುತ್ತೇನೆ, ಡ್ಯಾನ್ಸ್ ಮಾಡುತ್ತೇನೆ, ನಾಟ್ಕ ಮಾಡುತ್ತೇನೆ, ಮನೆ ಪಾಠ ಮಾಡುತ್ತೇನೆ, ನನ್ನ ತಂಗಿ ನನ್ನ ಅಜ್ಜಿ ತಾತನನ್ನ ನೋಡಿಕೊಳ್ಳುತ್ತಿದ್ದೇನೆ ಅಂತ ಉಸಿರು ಬಿಗಿ ಹಿಡಿದುಕೊಂಡು ಪಟ ಪಟ ಹೇಳಿ, ಬೆಂಗಳೂರಿನಲ್ಲಿ ಮೂರೊತ್ತು ಊಟಕ್ಕೆ ಮತ್ತು ನನ್ನ ತಂಗಿಯನ್ನು ಓದಿಸೋಕೆ ಸಾಕಾಗೋ ಹಾಗೆ ನಾಟಕದಲ್ಲೋ ಸಿನಿಮಾದಲ್ಲೋ ಏನಾದರೂ ಕೆಲಸ ಇದ್ರೆ ಕೊಡಿಸುತ್ತೀರಾ? ಅಂದೆ. ಅವರು ಅದಕ್ಕೆ ಏನೂ ಪ್ರತಿಕ್ರಿಯಿಸಲಿಲ್ಲ. ಕರುಣೆಯಿಂದ ಕನಿಕರ ತೋರಲಿಲ್ಲ. ಹೊರಡುವ ಮೊದಲು ಎಷ್ತಪ್ಪ ನಿನ್ನ ವಯಸ್ಸು ಅಂದ್ರು. 20 ವರ್ಷ ಅಂದೆ. ಮತ್ತೇನು ಅವರು ಮಾತಾಡಲಿಲ್ಲ. ಕೈಗೆ ಅವರ ಮನೆಯ ಅಡ್ರೆಸ್ ಮತ್ತು ಅವರ ಫೋನ್ ನಂಬರ್ ಬರೆದುಕೊಟ್ಟು ಹೊರಟು ಬಿಟ್ಟರು. ನೆರೆದಿದ್ದ ಜನರ ಮುಂದೆಲ್ಲಾ ಆ ಕ್ಷಣ ನಾನು ಮನೆ ಪಾಠದ ಮೇಷ್ಟ್ರು ಹೋಗಿ ವಿ.ಐ.ಪಿ ಆಗಿಬಿಟ್ಟೆ.
ಉಮಾಶ್ರೀ ಮಾತಾಡಿಸಿ ಬಿಟ್ಟರು ಅನ್ನುವ ಸಣ್ಣ ಧಿಮಾಕು ಖುಷಿ ಎಲ್ಲ ಒಟ್ಟೊಟ್ಟಿಗೆ ಬಂದು ಬಿಟ್ಟವು. ಎಲ್ಲರೂ ಫೋನ್ ನಂಬರ್ ನಂಗೆ ಕೊಡು ಕೊಡು ಅಂತ ಕೇಳೋಕೆ ಶುರು ಮಾಡಿದರು. ನಾ ಕಷ್ಟಪಟ್ಟು ಸಂಪಾದಿಸಿದ ಆಸ್ತಿಯಂತೆ ಯಾರಿಗೂ ನಂಬರ್ ಕೊಡದೇ ನಡೆದ ವಿಷಯವನ್ನೆಲ್ಲಾ ತಂಗಿಗೆ ಹೇಳಿಬಿಡಬೇಕೆಂದು ಅಲ್ಲಿಂದ ಓಟ ಕಿತ್ತೆ. ಮನೆಗೆ ಬಂದು ನನ್ನ ಅಜ್ಜಿ ಮತ್ತು ತಂಗಿಯ ಹತ್ತಿರ ನಡೆದ ಘಟನೆಯನ್ನೆಲ್ಲಾ ಹೇಳಿಕೊಂಡೆ ನನ್ನ ತಂಗಿಯ ಕಣ್ಣು ತೇವ ಆಗಿದ್ದವು .ನೀನೂ ಒಂದು ದಿನ ಅವರಂತೆಯೇ ಸಾಧನೆ ಮಾಡುತ್ತೀಯ ಎಂದಳು. ನಮ್ಮಜ್ಜಿ ದಿಟ್ಟಿಸಿ ಸುಮ್ಮನೇ ನನ್ನನೇ ನೋಡುತ್ತಿತ್ತು.
(ಮುಂದುವರೆಯುತ್ತದೆ…)

‍ಲೇಖಕರು G

November 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

18 ಪ್ರತಿಕ್ರಿಯೆಗಳು

  1. Gopaala Wajapeyi

    ಪೀಠಿಕೆ ಚೆನ್ನಾಗಿದೆ. ಇನ್ನು ಈ ‘ಅಂಕಣ’ ಓದು ನಿತ್ಯದ ಕಾಯಕ… ಅಭಿನಂದನೆಗಳು.

    ಪ್ರತಿಕ್ರಿಯೆ
  2. Mohan V Kollegal

    ಒಳ್ಳೆಯ ಅಂಕಣ ಮತ್ತು ಓದು… ಮುಂದುವರೆಸಿ ಗುರುಗಳೇ… ಬೇಂದ್ರೆ ಪ್ರಶಸ್ತಿಗೆ ಹೃದಯ ತುಂಬಿದ ಅಭಿನಂದನೆಗಳು…

    ಪ್ರತಿಕ್ರಿಯೆ
  3. ಸಂತೋಷ ಗುಡ್ಡಿಯಂಗಡಿ

    ನನ್ನ ಬಾಲ್ಯವು ಹೆಚ್ಚೂ ಕಮ್ಮಿ ಹೀಗೆ ಅಥವಾ ಇದಕ್ಕಿಂತಲೂ ಹೆಚ್ಚು ಅನ್ನಬಹುದು. ನಿಮ್ಮನ್ನು ಅಂದು ಕಾರ್ಪೆಂಟರ್ ಪರಿಚಯ ಮಾಡಿದಾಗ ಕುಷಿಯಾಯ್ತು. ಸಶಕ್ತವಾದ ಆರಂಭ. ಕುಷಿಯಾಯ್ತು ಸರ್

    ಪ್ರತಿಕ್ರಿಯೆ
  4. vijay

    ಬೇಲೂರಿನವನಾದ ನನಗೆ ಈ ಅಂಕಣ ಓದಿ ಖುಷಿಯಾಯ್ತು … ನಮ್ಮ ಬೇಲೂರಿನ ನೆನಪೂ ಬಂತ್ತು …ರಘುನಂದನ್ ರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ
  5. Vijay

    umashree ravara manasannu odugarige tilisuva prayathna avadhi kottidakke abhinandanegalu. Belur Raghunanadan ravara ankana ella odugarannu talupali.

    ಪ್ರತಿಕ್ರಿಯೆ
  6. Ammu

    ಉಮಾಶ್ರೀ ಕರ್ನಾಟಕ ಕಂಡ ಪ್ರತಿಭಾವಂತ ಕಲಾವಿದೆ. ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆ ಹೀಗೆ ಎಲ್ಲಾ ತರಹದ ನಟನಾ ಕ್ಷೇತ್ರದಲ್ಲಿ ಅಭಿನಹಿಸಿರುವ ಇವರ ಬಗ್ಗೆ, ತನ್ನ ಸಣ್ಣ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬೇಲೂರು ರಘುನಂದನ್ ರವರಿಂದ ತಿಳಿದುಕೊಳ್ಳುತ್ತಿರುವುದು ಹರ್ಷದ ಸಂಗತಿ.

    ಪ್ರತಿಕ್ರಿಯೆ
  7. shivaraj anh

    Nijvaglu jeevana tumba kasta sir. Adre aa kasta Na hege sweekaristvi annodu mukya. Yaryaro yavdo Tara comment kodbodu nanu helodu enandre life nalli namge yar sahaya madtilla, nanninda enu agtilla anta kurbardu. Nanu e age avagle tinnoke uta ilde kelavu time upavasa idini. Punya enu Andre nam family jote idre nange enu kadime madalla. Oragade hodre prblm.adake nanu life nalli – jamin work,mecanic,driver,
    Gadde kelsa,gaare kelsa,hotel work Ella madidini.mrng 7 o clk he hogi evng 7 bartidde just25 rs kodtidru estu kasta gotta jeevana andre

    ಪ್ರತಿಕ್ರಿಯೆ
  8. ಸೂರ್ಯಕಾಂತ್ ಬಳ್ಳಾರಿ

    ಬಹಳ ಚೆನ್ನಾಗಿದೆ ಸರ್, ಓದಿಸಿಕೊಂಡು ಹೋಗುತ್ತೆ. ಖಂಡಿತ ಮುಂದುವರೆಸಿ, ಶುಭಾಶಯಗಳು

    ಪ್ರತಿಕ್ರಿಯೆ
  9. ಗವಿಸಿದ್ಧ ಹೊಸಮನಿ

    ‘ಉಮಾಸಿರಿ’ಯ ಬರೆಹ ಓದಿ ಮುಗಿಸುತ್ತಲೇ ಅದ್ಯಾಕೋ ತುಸು ಹೊತ್ತು ಮೌನವಾಗಿ ಕುಳಿತೆ.
    ಅದಕ್ಕಾಗಿ ಹಪಹಪಿಸಿದ ಆ ಜೀವವನ್ನು ಅವತ್ತು ಸಾಕವ್ವ ಅದ್ಹ್ಯಾಗೆ ಗುರುತಿಸಿ ಕರೆದು ವಿಳಾಸ ಕೊಟ್ಟಳೋ ಅನ್ನೋದು ನನ್ನನ್ನು ಚಕಿತಗೊಳಿಸಿತು. ಅವತ್ತು ಅವಳು ಹಾಗೆ ಕರೆಯದೇ ಸುಮ್ಮನೇ ಹೋಗಿದ್ದರೆ? ಪ್ರಶ್ನೆಯೂ ಹುಟ್ಟಿತು.
    ಹಸಿವಿನ ಸಂಕಟವನ್ನು ಹಸಿದವರು ಮಾತ್ರ ಬಲ್ಲರು. ಹಾಗಾಗಿ ಸಾಕವ್ವ ಅದು ಕಂಡಿದೆ. ನಮ್ಮ ಆಸೆ, ಬಯಕೆಗಳು ನಮ್ಮನ್ನು ಎಲ್ಲೆಲ್ಲಿಗೋ ಕರೆದೊಯ್ಯುತ್ತವೆ; ಏನೆಲ್ಲಾ ತಿರುವಿಗೆ ಕಾರಣವಾಗುತ್ತವೆ. ಲೇಖಕರ “ಉಮಾಸಿರಿ” ಬರೆಹ ನನ್ನ ಆ ಹಸಿವಿನ, ನಾನಾ ಆಸೆಗಳ ಆ ದಿನಗಳನ್ನು ನೆನಪಿಸಿತು.ಆತ್ಮಕತೆಯ ತರಹದ ಈ ಬರೆಹ ಆಪ್ತವಾಗಿ ಓದಿಸಿಕೊಳ್ಳುತ್ತದೆ.
    -ಗವಿಸಿದ್ಧ ಹೊಸಮನಿ

    ಪ್ರತಿಕ್ರಿಯೆ
  10. siddaiah k

    Sir e ankana tumba channagide, jeevanadalli yavadakku hedarade munde baruva hage spurtiya hage e hankana vannu barediddira sir, idannu mundu varesi sir nimage danyavadagalu.

    ಪ್ರತಿಕ್ರಿಯೆ

Trackbacks/Pingbacks

  1. ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಹಂಸಲೇಖಾಗೆ ಉಮಾಶ್ರೀ ಬರೆದುಕೊಟ್ಟ ಪತ್ರ « ಅವಧಿ / Avadhi - [...] ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಹಂಸಲೇಖಾಗೆ ಉಮಾಶ್ರೀ ಬರೆದುಕೊಟ್ಟ ಪತ್ರ November 10, 2014 (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: