ಟೈಮ್ ಪಾಸ್ ಕಡ್ಲೆ ಕಾಯ್ : ಬ್ರಹ್ಮನ ಅಸಿಸ್ಟೆಂಟ್ ಒಮ್ಮೆ ಯಾಮಾರಿದಾಗ

ಶ್ರೀನಾಥ್ ಭಲ್ಲೆ

ಬ್ರಹ್ಮದೇವನ ಅಸಿಸ್ಟಂಟ್ ದೇವನೊಬ್ಬ ತನ್ನ ಕೆಲಸದಲ್ಲಿ ಯಥಾಪ್ರಕಾರ ಸಿಕ್ಕಾಪಟ್ಟೆ ಬ್ಯುಸಿ ಇರುವ ಸಮಯದಲ್ಲಿ, ಮನತಪ್ಪಿ (ಕೈತಪ್ಪಿ ಅನ್ನೋ ಹಾಗೆ) ಒಂದು ಜೀವಾತ್ಮಕ್ಕೆ ಮಾತು ಕೊಟ್ಟುಬಿಟ್ಟ. ಆಗ ನಡೆದ ಸಂಭಾಷಣೆ ಇದು:-
ಜೀವಾತ್ಮ: ಅಡ್ಡಬಿದ್ದೆ ತಂದೆ. ತಾವು ಇಷ್ಟು ಬೇಗ ನನಗೆ ಮಾತು ಕೊಟ್ಟುಬಿಟ್ರೇ, ಒಂಬತ್ತು ತಿಂಗಳು ಕತ್ತಲೆ ಕೋಣೆಯಲ್ಲಿ ನಾನೊಬ್ನೇ ಏನ್ ಮಾಡಲಿ? ಯಾರ ಜೊತೆ ಮಾತಾಡ್ಲಿ?
ದೇವ: ಯಾವುದೋ ಧ್ಯಾನದಲ್ಲಿ ನನಗೆ ಕೊಟ್ಟಿದ್ದ ಸ್ಟೆಪ್ಸ್’ನಲ್ಲಿ ಏನೋ ತಪ್ಪಾಯ್ತು. ಒಂದು ಕೆಲಸ ಮಾಡ್ತೀನಿ. ಈಗ ಮಾಡಿದ ತಪ್ಪನ್ನ ಇನ್ನೊಂದ್ ಸಾರಿ ಮಾಡಿ ಎರಡೂ ಜೀವಾತ್ಮಗಳನ್ನು ಒಂದೇ ದೇಹಕ್ಕೆ ಬಿಟ್ರೆ ಟೈಮ್ ಪಾಸ್ ಆಗುತ್ತೆ. ಹೇಗಿದೆ ಯೋಚನೆ?
ಜೀವಾತ್ಮ: ದೇವಾ, ನಾನೊಂದು ರೀಸೈಕಲ್ ಆಗಿರೋ ಆತ್ಮ. ನನಗೆ ಲೋಕದ ವ್ಯವಹಾರ ಚೆನ್ನಾಗಿ ಗೊತ್ತು. ಹುಟ್ಟೋವಾಗ ಅಣ್ಣ-ತಮ್ಮಂದಿರು ಬೆಳೆದಾಗ ದಾಯಾದಿಗಳು ಅಂತಾರೆ. ನಿನ್ ಐಡಿಯಾ ತೊಗೊಂಡ್ರೆ, ಒಳಗೇ ಕಿತ್ತಾಟ ಶುರುವಾಗುತ್ತೆ. ಪುಟ್ಟ ಉದರದಲ್ಲೇ ಪಾರ್ಟಿ ಶುರುವಾಗುತ್ತೆ. ಅದರಿಂದ ಅಲ್ಲೇ ಪಾರ್ಟಿ’ಗಳು ಶುರುವಾಗುತ್ತೆ. ಹೆತ್ತಾಗಲೇ ನಾವ್ ಗುರಾಯಿಸ್ಕೊಂಡ್ ಹುಟ್ಟಿದ್ರೆ ಪಾಪ ನಮ್ಮನ್ ಹೆರೋ ಆ ತಾಯಿಗೆ ಬೇಸರವಾಗೋಲ್ವಾ? ಬ್ಯಾಡ ಬಿಡು. ನಿನ್ನ ಯೋಚನೆ ಯೋಜನೆ ಆಗದೇ ಇರಲಿ.
ದೇವ: ಹಾಗಿದ್ರೆ ’ಅವನು’ ಬದಲು ’ಅವಳು’ ಆದ್ರೆ?
ಜೀವಾತ್ಮ: ತಂದೇ, ಹೆಣ್ ಮಕ್ಳು ಸ್ಟ್ರಾಂಗು … ನಾನು ಉದರದಲ್ಲೇ ಮ್ಯೂಟ್ ಆಗಿಬಿಡ್ತೀನಿ .. ನಾನ್ ಕೇಳಿದ್ದು ನನ್ ಜೊತೆ ಮಾತಿಗೆ ಒಬ್ಬರು ಇರಲಿ ಅಂತ. ಅಕ್ಕನೋ ತಂಗಿಯೋ ನನ್ ಜೊತೆ ಅಲ್ಲಿ ಮಾತಾಡ್ಕೊಂಡ್ ಕೂತಿದ್ದು ನನಗೆ ಮಾತಾಡೋಕ್ಕೆ ಅವಕಾಶ ಕೊಡದಿದ್ರೆ? ಕೇಳಿದ್ದು ತಪ್ಪಾಯ್ತು, ಯಾರೂ ಬ್ಯಾಡ ಬಿಡಿ ಸಾರ್ … ಹೇಗೋ ಅಡ್ಜಸ್ಟ್ ಮಾಡ್ಕೋತೀನಿ … ಒಂದಾರೇಳು ತಿಂಗಳು ತಾನೇ? ದುಡ್ಡು ಮಾಡೋಕ್ಕೆ ಈಗಿನ ಆಸ್ಪತ್ರೆಯವರು ಆಪರೇಷನ್ ಮಾಡಿ ಬೇಗ ಹೊರಗೆ ತಂದು ಬಿಡುತ್ತಾರೆ !
ದೇವ: ನನ್ ತಪ್ಪಿಗೆ ಏನಾದ್ರೂ ತಪ್ಪೊಪ್ಪಿಗೆ ಅಂತ ಕೊಡದೇ ಹೋದ್ರೆ ನನಗೆ ಸಮಾಧಾನ ಇರೋಲ್ಲ. ನಿನಗೆ ಏನಾಗಬೇಕು ಅಂತ ಆಸೆ ಇದೆಯೋ ಹೇಳು, ಹಾಗೇ ಆಗೋ ಹಾಗೆ ಬುದ್ದಿ ಈಗಲೇ ತುಂಬಿಬಿಡ್ತೀನಿ !
ಜೀವಾತ್ಮ: ಓಹೋ! ಒಳ್ಳೇ ದೀಪಾವಳಿ ಆಫರ್ರು !! ಆಗಬಹುದು. ನಿನ್ ಡಿಪಾರ್ಟ್ಮೆಂಟ್ ಆಪ್ಷನ್ಸ್ ಹೇಳು ತಂದೆ !
ದೇವ: ನಿನ್ ತಲೆಗೆ ಡಾಕ್ಟರ್ ಬುದ್ದಿ ತುಂಬ್ಲಾ?
ಜೀವಾತ್ಮ: ದಿನೇ ದಿನೇ ಖಾಯಿಲೆಗಳು ಹೆಚ್ಚುತ್ತಾ ಇದೆ, ವೈದ್ಯನಾಗೋದು ಒಳ್ಳೇ ಐಡಿಯಾನೇ. ಏನೇನೋ ’ಬೋಲಾ’ಗಳು ಜನರನ್ನ ಕಾಡ್ತಿದೆ. ಛೇ! ಆದರೆ ಏನ್ ಮಾಡೋದು? ಈಗ ತಾನೇ ಹೇಳಿದ ಹಾಗೆ ಕಾಲ ಕೆಟ್ಟುಹೋಗಿದೆ. ಒಬ್ಬ ವೈದ್ಯನ ಸುತ್ತ ಹಲವಾರು ಮುಳ್ಳುಬೇಲಿಗಳು ಸುತ್ತಿ ವೃತ್ತಿಯ ಘನತೆಯನ್ನೇ ಹಾಳುಗೆಡವುತ್ತಿದೆ. ಇಲ್ಲದ ಖಾಯಿಲೆಗೆ ಔಷದಿ ಕೊಟ್ಟು ದುಡ್ಡು ಮಾಡೋದು, ಯಾವುದೋ ಖಾಯಿಲೆಗೆ ಯಾವುದೋ ಔಷದಿ ಕೊಟ್ಟು ಇನ್ಸೂರೆನ್ಸ್’ನಿಂದ ದುಡ್ಡು ಹೊಡೆಯೋದು ಹೆಚ್ಚಾಗಿದೆ. ಅದು ಸಾಲದು ಅಂತ ಆಂಬುಲೆನ್ಸ್’ನವರು ರೋಗಿಯನ್ನು ತಮ್ಮದೇ ಆಸ್ಪತ್ರೆಗೆ ಕರೆದುಕೊಂಡುಬರುವ ಹಾಗೆ ಮಾಡೊ ಲಾಬಿಗಳು ಸಿಕ್ಕಾಪಟ್ಟೆ ಹೆಚ್ಚಿದೆ ! ತಾನು ನೀತಿವಂತನಾಗಿ ಇರ್ತೀನಿ ಅಂದ್ರೂ ವ್ಯವಸ್ಥೆ ಅವನನ್ನು ಹಾಗಿರಲು ಬಿಡೋಲ್ಲ. ಕ್ಷಮಿಸು, ನಾ ವೈದ್ಯನಾಗಲಾರೆ ತಂದೆ.
ದೇವ: ಕಂಪ್ಯೂಟರ್ ಇಂಜಿನಿಯರ್ ಮಾಡ್ಲಾ?
ಜೀವಾತ್ಮ: ಮನೆ ಮಠ ಎಲ್ಲ ಬಿಟ್ಟುಬಿಡು ಅಂತೀಯಾ ತಂದೆ! ಅಲ್ಲಿ ಭಯಂಕರ ಪೈಪೋಟಿ ಇದೆ ದೇವಾ, ಬ್ಯಾಡ. ಈ ಐ.ಟಿ ಕಂಪನಿಗಳು ಹೇಗೆ ಅಂದ್ರೆ ಛಳಿಗೆ ಎಲೆಗಳ ಉದುರಿಸಿ ವಸಂತಕ್ಕೆ ಚಿಗುರಿಸೋ ಮರಗಳಿದ್ದ ಹಾಗೆ. ತೊಗೋತಾರೆ, ತೆಗೀತಾರೆ. ಚಿಗುರು ಮೂಡೋ ಹಾಗೆ ಪ್ರತಿ ದಿನ ಏನೋ ಒಂದು ಬರುತ್ತಾನೇ ಇರುತ್ತೆ, ಅದನ್ನೆಲ್ಲ ಅಂದೇ ಕಲಿತು ಜಾಣರಾಗಬೇಕು. ಇಲ್ದಿದ್ರೆ ಸತ್ವ ಕಳೆದುಕೊಂಡ ಎಲೆ ಅಂತ ಕೊಡವಿಬಿಡುತ್ತೆ ಆ ಮರ !! ಬಲೇ ರಿಸ್ಕ್ ಇದೆ ಅಲ್ಲಿ. ಒಂದು ವಿಧದಲ್ಲಿ ಸರಿಯೇ! ಅರ್ಥಾತ್ ಹೊಸಬರಿಗೂ ಅವಕಾಶ ಸಿಗುತ್ತೆ. ಈ ಬಿಳಲು ಬಿಟ್ಟ ಆಲದಂತಹ ಸರ್ಕಾರಿ ನೌಕರಿಗೆ ಹೋಲಿಸಿದರೆ ಖಂಡಿತ ಒಳ್ಳೇದೇ. ಆದರೆ ದಿನನಿತ್ಯ ತಲೆ ಮೇಲೆ ಕತ್ತಿ ತೂಗುತ್ತಿರುತ್ತೆ. ಹಗಲಿಲ್ಲ ಇರುಳಿಲ್ಲ, ನಿನ್ ಹಾಗೆ ನಾನೂ ಕೆಲಸ ಮಾಡಬೇಕು. ಬ್ಯಾಡಪ್ಪೋ.
ದೇವ: ಹೋಗಲೀ! ಒಬ್ಬ ಅತೀ ಬುದ್ದಿವಂತ ಪ್ರೊಫೆಸರ್ ಮಾಡಲೇ?
ಜೀವಾತ್ಮ: ಗುರುಕುಲದ ಉದ್ಯೋಗ ಒಳ್ಳೇದೇನೆ. ಆದರೇನು ಮಾಡೊದು? ವಿದ್ಯೆಯನ್ನು ಅರ್ಥೈಸಿಕೊಳ್ಳೋ ಅರ್ಥಿಗಳು ಬೇಕಲ್ಲ? ಉತ್ತಮ ವಿದ್ಯಾರ್ಥಿಗಳು ಇಲ್ಲ ಅಂತ್ಲೇ ಈ ಕಾಯಕದವರು ಸುದ್ದಿಯಲ್ಲಿ ಇರಬೇಕು ಅಂತ ನಿನ್ನಂಥ ದೇವನ ಮೂರ್ತಿಗಳ ಮೇಲೆ … ಬ್ಯಾಡಪ್ಪ, ಹುಟ್ಟೋ ಮೊದಲೇ ಏನೇನೋ ಮಾತು ಬ್ಯಾಡ. ಈ ವೃತ್ತಿ ನನಗಲ್ಲ.
ದೇವ: ಹೋಗ್ಲಿ, ಕನ್ನಡ ಭಾಷೆ ಸಿನಿಮಾದಲ್ಲಿ ಉತ್ತಮ ಗಾಯಕ ಆಗ್ತೀಯಾ?
ಜೀವಾತ್ಮ: ಗಾಯನ ಅನ್ನೋದು ಪವಿತ್ರ ವೃತ್ತಿ. ಎಂತೆಂತಹ ಗಾಯಕರು ದೇವನನ್ನೇ ಒಲಿಸಿಕೊಂಡಿದ್ದಾರೆ. ನಿಜ, ಹಾಡುವವರಿಗೂ, ಕೇಳುವವರಿಗೂ ಖುಷಿ ಕೊಡುತ್ತೆ. ಆದರೆ ಬರೀ ಅಮುದು ಗಾಯಕರೇ ತುಂಬಿ ಕನ್ನಡದ ಗಾಯಕರು ಅದುಮಿಕೊಂಡು ಕೂತಿರೋದನ್ನು ತಿಳಿದೂ ತಿಳಿದೂ ಬಾವಿಗೆ ಬೀಳಲೇ? ’ಏನೋ ಒಂತರಾ’ ಅಂತ ಹಾಡುವವರ ಮಧ್ಯೆ ನಾನು ’ಏನೋ ಒಂಥರಾ’ ಅಂತ ಹಾಡಿದರೆ ನನ್ನ ಭಾಷೆ ಸರಿ ಇಲ್ಲ ಅಂತ ಹೊರಗೆ ಓಡಿಸ್ತಾರೆ. ಬೇಡಾ …

ದೇವ: ದೊಡ್ಡ ಸಾಹಿತಿ ಆಗ್ತೀಯಾ?
ಜೀವಾತ್ಮ: ನನಗೆ ರಾಜಕೀಯ ಇಷ್ಟ ಇಲ್ಲ ದೇವ. ಪ್ರಶಸ್ತಿಗಳು ಹತ್ತಿರ ಬರೋಲ್ಲ, ನಾನೇ ಅದರ ಹತ್ತಿರ ಹೋಗಬೇಕು. ಲಾಬಿ ಮಾಡಬೇಕು. ಪ್ರಚಾರ ಇಲ್ದೇ ಹೋದ್ರೆ ಜನ ಕ್ಯಾರೆ ಅನ್ನಲ್ಲ. ಎಲ್ಲಾ ಸರಿ ಇದ್ರೆ ತಲೆ ಮೇಲೆ ಕೂರಿಸಿಕೊಳ್ತಾರೆ. ಆದರೆ ಏನೋ ಮಾಡಲು ಹೋಗಿ ತಪ್ಪಾದ್ರೆ ಅದೇ ಜನ ಉಗೀತಾರೆ. ಅಯ್ಯಯ್ಯಪ್ಪ, ಭಯವಾಗುತ್ತೆ, ಬ್ಯಾಡ
ದೇವ: ನಿನಗೆ ಇದು ಕಡೆ ಅವಕಾಶ … ಆಮೇಲೆ ನಿರ್ಧಾರ ನಿನ್ನದು … ಇಹಲೋಕದ ವೃತ್ತಿಗಳೇ ಬೇಡ. ನಿರಾಕಾರನ, ನಿರ್ವಿಕಾರನ ಅರಿಯಲು ಒಬ್ಬ ಸನ್ಯಾಸಿಯನ್ನಾಗಿ ಮಾಡಲೇ?
ಜೀವಾತ್ಮ: ಕಾವಿ ಕಾಟ ಬೇಡವೇ ಬೇಡ ತಂದೆ … ಕಾವಿ ತೊಟ್ಟೋರೆಲ್ಲ ಬುದ್ದ ಆಗೋಲ್ಲ. ಕಷಾಯ ವಸ್ತ್ರಕ್ಕೆ ಬಿಳೀ ಬಣ್ಣದ ಬಟ್ಟೆಯ ಕಾಟ ಜಾಸ್ತಿ. ನಿರಾಕಾರನ, ನಿರ್ವಿಕಾರನ ಅರಿಯೋ ವೇಷದಲ್ಲಿ ಹಲವಾರು ಕಾವಿಗಳು ಏನೇನೋ ಯಾರ್ಯಾರದೋ ಆಕಾರ ನೋಡುತ್ತ ಸಮಾಜ ಹಾಳು ಮಾಡುತ್ತಿದ್ದಾರೆ. ಬೇಡವೇ ಬೇಡ ತಂದೆ!
ದೇವ: ನಾ ಆಗಲೇ ಹೇಳಿದ ಹಾಗೆ ಇನ್ನು ನಿನಗೆ ಬಿಟ್ಟಿದ್ದು. ನೀ ಕೇಳಿಕೋ. ನನ್ನ ವ್ಯಾಪ್ತಿಯಲ್ಲಿ ಇರೋದಾದ್ರೆ ಖಂಡಿತ ನೆಡೆಸಿಕೊಡ್ತೀನಿ
ಜೀವಾತ್ಮ: ಏನು ತಂದೆ? ಒಳ್ಳೇ ಪೋಲೀಸ್’ನವರ ತರಹ ’ವ್ಯಾಪ್ತಿ’ ಅಂತೆಲ್ಲ ಹೇಳೋದೇ?
ದೇವ: ಬೇಗ ಬೇಗ … ನನ್ನ ಕನ್ವೇಯರ್ ಬೆಲ್ಟ್ ಮೇಲೆ ಜೀವಾತ್ಮಗಳು ಬ್ಲಾಕ್ ಆಗಿದ್ದಾರೆ … ನನಗೆ ಸಮಯ ಇಲ್ಲ!
ಜೀವಾತ್ಮ: ನಾನೊಬ್ಬ ಮನುಷ್ಯನಾಗಿ ಹುಟ್ಟಿ ಯಾವುದೋ ವೃತ್ತಿಗೆ ಜೋತು ಬಿದ್ದು ಬಾಳ ಸವಿಸಲಾರೆ. ನಾನು ಈ ಲೋಕದಲ್ಲಿ ಜೀವ ಇರುವ ಎಲ್ಲದರ ಮಾನಸ ಪುತ್ರನಾಗಿ ’ಆತ್ಮಸಾಕ್ಷಿಯಂತೆ’ ಎಲ್ಲರಲ್ಲೂ ಇರಬೇಕು. ಕೆಡುಕು ಮಾಡ ಬಯಸುವ ಇರಾದೆ ತೋರುತ್ತಿದ್ದಂತೆ ನಾ ಎಚ್ಚರಗೊಳ್ಳಬೇಕು. ಹೆಮ್ಮರವಾಗಿ ಬೆಳೆಯಬೇಕು. ಕೆಡುಕನ್ನು ಮೂಲದಲ್ಲೇ ಚಿವುಟಬೇಕು. ಅನ್ಯಾಯಕ್ಕೆ ತಡೆ ಒಡ್ಡುವಂತಾಗಿ, ಅಮಾಯಕರು ಬಲಿಯಾಗುವುದನ್ನು ತಡೆಯಬೇಕು.
ದೇವ: ಹುಮ್! … ಕೆಡುಕೆಂಬುದೇ ಇಲ್ಲದೆ ಒಳಿತೇ ಎಲ್ಲೆಡೆ ಇದ್ದಲ್ಲಿ ಭೂಮಿಯಲ್ಲಿ ಸಮತೋಳನವೇ ತಪ್ಪಿಹೋಗುತ್ತದೆ ಕಂದಾ. ಇಷ್ಟಕ್ಕೂ ಒಳಿತು ಕೆಡುಕನ್ನು ಅರಿವುದಾದರೂ ಹೇಗೆ? ವನ್ಯ ಜೀವಿಗಳು ಕೊಂದು ತಿನ್ನುತ್ತದೆ ಎಂದು ಅದು ಕೆಟ್ಟದ್ದಲ್ಲ. ಅದು ಪ್ರಕೃತಿ ನಿಯಮ. ಕಪ್ಪೆಗಳನ್ನು ತಿನ್ನುವ ಹಾವು ತಾ ಬಗೆಯುತ್ತಿರುವುದು ಕೇಡು ಎಂದು ಸುಮ್ಮನಾದರೆ, ಹಾವಿನ ಸಂತತಿ ಅಳಿಯುತ್ತದೆ. ಕಪ್ಪೆಗಳ ಸಂತತಿ ಹೆಚ್ಚಿ ಬೇರಾರಿಗೂ ಉಳಿಗಾಲವೇ ಇಲ್ಲದಂತೆಯೂ ಆಗಬಹುದು. ಕೆಡುಕೇ ಇಲ್ಲದೆ, ಎಲ್ಲರೂ ಪೂಜನೀಯರೇ ಆದರೆ ಪೂಜಿಸುವವರಾರು? ಎಲ್ಲರೂ ಯೋಗ್ಯರೇ ಆಗಿ ಹೋದರೆ ಆಳುವವರು ಯಾರು? ಎಲ್ಲೆಡೆ ಸಮೃದ್ದಿ, ಶಾಂತಿ ಇದ್ದಾಗ ಎಲ್ಲವೂ ಚೆನ್ನಾಗಿರುತ್ತದೆ ಎಂಬ ನಂಬುಗೆ ತಪ್ಪು. ಎಲ್ಲೆಡೆ ಸಮೃದ್ದಿ, ಪ್ರಬಲ್ಯತೆ ಇದ್ದೂ ಕೃಷ್ಣನಂತಹ ಮಾರ್ಗದರ್ಶಿ ಇದ್ದಾಗ್ಯೂ ಕೊನೆಯಲ್ಲಿ ಯದುವಂಶದಲ್ಲಿ ಶಾಂತಿಗಿಂತ ಮುಂಚೆ ನೆಲೆಸಿದ್ದೇ ಅರಿಷಡ್ವರ್ಗ. ಇದಿಲ್ಲದಿದ್ದಿದ್ದರೆ ಯದುವಂಶದ ಕೊನೆಯಾದರೂ ಹೇಗಾಗುತ್ತಿತ್ತು?
ಜೀವಾತ್ಮ: ತಂದೇ, ನನ್ನ ಇರಾದೆಯೇ ಬೇರೆ ಇತ್ತು. ದಿನ ನಿತ್ಯ ನೆಡೆಯುತ್ತಿರುವ ಶೋಷಣೆಯ ಬಗ್ಗೆ ನನ್ನ ಆಲೋಚನೆ. ಅರಿಷಡ್ವರ್ಗವನ್ನು ಅರಿವ ಅರಿವು ನಾನಾಗುವಂತೆ ಹರಸಿ ಎಲ್ಲ ಮನುಜರಲ್ಲೂ ನನ್ನನ್ನು ಸೇರಿಸು! ಹಾಗಾದರೂ ಜಗತ್ತಿನಾದ್ಯಂತ ನಿತ್ಯ ನೆಡೆಯುತ್ತಿರುವ ಶೊಷಣೆ ನಿಲ್ಲುತ್ತದೆ.
ದೇವ: ಅರಿಷಡ್ವರ್ಗಗಳೇ ಮನುಷ್ಯನ ಅವನತಿಗೆ ಕಾರಣ. ಮನುಷ್ಯರನ್ನು ಮೋಕ್ಷ ಸಿಗದಂತೆ ತಡೆವ ಸಾಧನ. ಸುಲಭ ಪ್ರಾಪ್ತಿಯಾದರೆ ಮೋಕ್ಷಕ್ಕೆ ಬೆಲೆಯೇ ಇರುವುದಿಲ್ಲ. ನಿನ್ನೀ ಬೇಡಿಕೆಯನ್ನು ನಾ ಪೂರೈಸಲಾರೆ. ಕಾರಣ? ಒಂದು, ನಿನಗೆ ನಾ ಕೊಟ್ಟ ಸಮಯ ಮುಗಿದಿದೆ. ಎರಡು, ನಿನಗೆ ನೀಡಲಾಗಿದ್ದು ಒಂದೇ ವರ. ಮೂರು, ನೀ ಕೇಳಿದ ವರವನ್ನು ನೀಡುವುದು ನನ್ನ ವ್ಯಾಪ್ತಿಯಲ್ಲಿಲ್ಲ !!! ನಾ ಮನತಪ್ಪಿ ನೀಡಿರೋ ವರದಿಂದಾಗಿ ನಿನ್ನನ್ನು ಮನುಷ್ಯನಲ್ಲಿ ಸೇರಿಸುವ ಬದಲು ಯಾವುದಾದರೂ ಪ್ರಾಣಿಯಲ್ಲಿ ಸೇರಿಸುತ್ತೇನೆ. ಪ್ರಾಣಿಯಾಗಿ ನೀನಾಡುವ ಮಾತು ಯಾರಿಗೂ ಅರ್ಥವಾಗುವುದಿಲ್ಲ. ಮನುಷ್ಯನಲ್ಲಿ ಸೇರಿ, ಹುಟ್ಟಿದ ದಿನವೇ ಮಾತಾನಡಲು ತೊಡಗಿದರೆ ಮೂಢ ಜನ ನಿನ್ನನ್ನು ದೇವರನ್ನಾಗಿ ಮಾಡಿಬಿಡುತ್ತಾರೆ. ಹೋಗಿ ಬಾ!
 

‍ಲೇಖಕರು G

November 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

4 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: