ಪೂಜೆ!!

ಎಸ್.ಜಿ.ಶಿವಶಂಕರ್


ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ ಏನಿರಬಹುದೆಂದು ಯೋಚಿಸುತ್ತಿದ್ದೆ. ಕೆಲ ನಿಮಿಷಗಳ ನಂತರ ‘ನಾಳೆ ಮನೇಲಿ ಪೂಜೆ. ತಪ್ಪಿಸಿಕೊಂಡ್ರೆ ನಿನ್ನ ದಂತಪಕ್ತೀಲಿ ಕೆಲವು ಹಲ್ಲು ಕಳ್ಕೋತೀಯ’ ಎಂದು ಸುಬ್ಬು ಧಮಕಿ ಹಾಕಿದ್ದು ತಟ್ಟನೆ ನೆನಪಾಯಿತು. ಚಡ್ಡಿ ದೋಸ್ತ್ ಸುಬ್ಬು ನನ್ನನ್ನು ಆಜನ್ಮ ಶತೃವಂತೆ ನೋಡುವುದು ಮಾಮೂಲು. ಅವನ ಸ್ವಭಾವಕ್ಕೆ ಅನಿವಾರ್ಯವಾಗಿ ಒಗ್ಗಿಕೊಂಡಿದ್ದೆ. ಲಕ್ಷ್ಮೀಪುತ್ರ ಸುಬ್ಬು ನನ್ನ ಹಣಕಾಸಿನ ಅಗತ್ಯಗಳಿಗೆ ಅನಿವಾರ್ಯ! ಕೈಸಾಲ, ಕಾಲುಸಾಲಗಳಿಗೆ ಸುಬ್ಬು ಎಂಬ ಎಟಿಎಮ್ ಆಶ್ರಯಿಸುತ್ತಿದ್ದೆ!

ಸುಬ್ಬು ಮನೆಯಲ್ಲಿ ಆಗಾಗ್ಗೆ ಮನೆಯಲ್ಲಿ ಏನಾದರೊಂದು ಪೂಜೆ ನೆಡೆಯುವುದು ಮಾಮೂಲು. ಅಂತಾ ಸಮಯದಲ್ಲಿ ನಾನೂ ಕೈಜೋಡಿಸುತ್ತಿದ್ದೆ. ಇವತ್ತು ಕೂಡ ಸುಬ್ಬೂಗೆ ಸಹಾಯ ಬೇಕಾಗಬಹುದು ಎಂದು ಸಂಜೆ ಅವನ ಮನೆಗೆ ಹೋಗಲು ನಿರ್ಧರಿಸಿ ಕಾರ್ಖಾನೆಯ ಕೆಲಸದ ಸುನಾಮಿಗೆ ಒಡ್ಡಿಕೊಂಡೆ!

ಸಂಜೆ ಬೇಗನೆ ಫ್ಯಾಕ್ಟ್ರಿಯಿಂದ ಹೊರಟಾಗಲೇ ಬಾಸು ಫೋನಿನಲ್ಲಿ ಬುಸುಗುಟ್ಟಿತು. ಅವರಿಗೆ ಬೇಕಾದ ಮಾಹಿತಿ ನೀಡಿ ಫ್ಯಾಕ್ಟ್ರಿ ಗೇಟಿನ ಬಳಿ ಬಂದಾಗಲೂ ಯಾವ ಕ್ಷಣದಲ್ಲಾದರೂ ಬಾಸು ವಾಪಸ್ಸು ಕರೆಯಬಹುದೆಂದು ಎದೆಯಲ್ಲಿ ಅವಲಕ್ಕಿ ಬತ್ತ ಕುಟ್ಟುತ್ತಿತ್ತು!
ಸುಬ್ಬು ಮನೆ ಬಾಗಿಲ ಮುಂದೆ ನಿಂತಾಗ ವಾತಾವರಣ ಎಂದಿನಂತಿರಲಿಲ್ಲ! ಒಳಗೆ ಶಾಲಿನಿ ಅತ್ತಿಗೆ ಜೋರುದನಿಯಲ್ಲಿ ಮಾತಾಡುತ್ತಿರುವುದು ಕೇಳಿಸಿತು. ಮರುದಿನದ ಪೂಜೆಯ ಸಂಬಂಧ ಇರಬಹುದೆನಿಸಿತು.
‘ಸುಬ್ಬೂ’ ಎಂದು ಕೂಗುತ್ತಾ ಮನೆಯೊಳಗೆ ಕಾಲಿಟ್ಟೆ.

ತಲೆಯ ಮೇಲೆ ಕೈಹೊತ್ತು ಸೋಫಾದಲ್ಲಿ ಕೂತಿದ್ದ ಸುಬ್ಬು! ಎದುರಲ್ಲಿ ಪ್ರತಿಪಕ್ಷದ ನಾಯಕಿಯಂತೆ ವಾದಿಸುತ್ತಿದ್ದ ಶಾಲಿನಿ ಅತ್ತಿಗೆ! ಹೂವು, ವೀಳೆಯದೆಲೆ ಮುಂತಾದ ಪೂಜೆಗೆ ಬೇಕಾದ ವಸ್ತುಗಳು ಟೀಪಾಯ್ ಮೇಲೆ ಹರಡಿದ್ದವು.
‘ನನ್ನ ಮಾನ ಹರಾಜಾಗ್ತಿದೆ! ನೋಡಿ ಸಂತೋಷಪಡೋಕೆ ಬಂದಿದ್ದೀಯ? ನಿನ್ನ ಯಾರು ಕರೆಸಿದ್ದರು’
ಕಂಗಾಲಾಗಿದ್ದ ಸುಬ್ಬು ಕವಕ್ಕನೆ ನನ್ನ ಮೇಲೆ ರೇಗಿದ!
ಸುಬ್ಬುವಿನ ಎಂತಾ ಕಟಕಿಗೂ ಎಂದೂ ನಲುಗದ ನನ್ನ ಆತ್ಮಾಭಿಮಾನ ಒಮ್ಮೆಲೇ ಭುಗಿಲೆದ್ದಿತು. ಇಷ್ಟು ಅನ್ನಿಸಿಕೊಂಡ ಮೇಲೆ ಇಲ್ಲೇಕಿರಬೇಕು ಎಂದು ವಾಪಸ್ಸು ಹೋಗಲು ತಿರುಗಿದೆ.

‘ಇವರ ಬುದ್ದಿ ನಿಮಗೆ ಗೊತ್ತಲ್ಲ! ಹೋಗ್ಬೇಡಿ..ಬನ್ನಿ..’ ಶಾಲಿನಿ ಅತ್ತಿಗೆ ಕರೆದರು!
ಸುಬ್ಬು ಹೋಗೆನ್ನುತ್ತಿದ್ದಾನೆ! ಅತ್ತಿಗೆ ಬಾ ಎನ್ನುತ್ತಿದ್ದಾರೆ! ಏನು ಮಾಡಲಿ? ಇತ್ತ ದರಿ..ಅತ್ತ ಪುಲಿ! ಗೊಂದಲದಲ್ಲಿ ಸಿಕ್ಕಿದೆ.
‘ಶಾಲಿನಿ ನನ್ನ ಮಾನ ಹರಾಜು ಮಾಡ್ತಿದ್ದಾಳೆ! ನೀನೂ ಬಿಡ್ ಮಾಡುವಂತೆ ಬಾ..’
ಮತ್ತೊಂದು ಕೂರ್ಬಾಣ ಎಸೆದ ಸುಬ್ಬು!
‘ನಾಳೆ ಪೂಜೆಗೆ ಸಿದ್ಧತೆ ಮಾಡೋದು ಬಿಟ್ಟು ಹೀಗೆ..?’ ಕಚ್ಚಾಡ್ತಿದ್ದೀರಿ ಎನ್ನುವುದನ್ನು ನುಂಗಿಕೊಂಡು ಧೈರ್ಯದಿಂದ ಮಾತಾಡಿದೆ! ಸುಬ್ಬು ನನ್ನ ವಿರುದ್ಧ ಇದ್ದರೂ ಶಾಲಿನಿ ಅತ್ತಿಗೆ ನನ್ನ ಪರ ಎನ್ನುವ ಧೈರ್ಯ ಬಂದಿತ್ತು.

 

‘ನೋಡೇ..ಇವನೂ ಹೇಳ್ತಿದ್ದಾನೆ..ಯಾಕೆ ಹೀಗೆ ಅವಾಜ್ ಹಾಕ್ತಿದ್ದೀಯ..ತಪ್ಪು ಮಾಡಿದವರಿಗೆ ತಿದ್ದಿಕ್ಕೊಳ್ಳೋಕೆ ಕಾನೂನೂ ಅವಕಾಶ ಕೊಡುತ್ತೆ! ನೀನು ಮಾತ್ರ..’ ಸುಬ್ಬು ಮಾತೆಳೆದ.
‘ನಾನು ಅವಕಾಶ ಕೊಡೊಲ್ಲ! ಮದ್ವೆಯಾಗಿ ಇಪ್ಪತ್ತೈದು ವರ್ಷ ಆಗಿದೆ! ಇಷ್ಟೂ ವರ್ಷ ಬೆಪ್ಪಿತಕಡಿ ಹಾಗೆ ತಪ್ಪು ಮಾಡ್ತಾನೇ ಇದ್ದೀರ! ಇನ್ಯಾವಾಗ ಸರಿ ಮಾಡ್ಕೋತೀರಾ..?’
‘ಈಗ ಏನು ತಪ್ಪಾಗಿದೆ..?’ ನನಗೆ ಎರಡನೆ ಮಾತಾಡಲು ಅವಕಾಶ ಸಿಕ್ಕಿತು.

‘ನೋಡಿ ಈ ಹೂವು ನೋಡಿ! ನಾಳೆ ಪೂಜೆಗೇಂತ ಮಾರ್ಕೆಟ್ಟಿಂದ ಬಿಡಿ ಹೂವು ತಂದಿದ್ದಾರೆ! ಯಾರಾದ್ರೂ ಇಂತಾ ಹೂವು ತರ್ತಾರ..? ಇವರು ಇಂಜಿನಿಯರ್ ಬೇರೆ!’
ಅತ್ತಿಗೆ ಮಾತಿಗೆ ಕಸಿವಿಸಿಯಾಯಿತು! ನಾನು ಕೂಡ ಇಂಜಿನಿಯರ್ರೇ! ಸುಬ್ಬು ನಾನು ಒಟ್ಟಿಗೆ ಒಂದೇ ಕಾಲೇಜು! ಒಂದೇ ವರ್ಷ! ಹಿಂದು-ಮುಂದಲ ಬೀದೀಲಿ ಮನೆ! ಒಂದೇ ಕಾರ್ಖಾನೆ! ಪುಣ್ಯಕ್ಕೆ ಬೇರೆಬೇರೆ ಇಲಾಖೆಗಳ ಹೆಡ್ಡುಗಳು! ಅತ್ತಿಗೆ ನನ್ನನ್ನೂ ಸೇರಿಸಿ ಹಂಗಿಸಿದರೆ? ಉಗುಳು ನುಂಗಿದೆ!
‘ಹೂವಿನವನು ಕತ್ತಲೆ ಇರೋ ಜಾಗದಲ್ಲಿ ಇಟ್ಕೊಂಡಿದ್ದ! ನನಗೂ ಸರಿಯಾಗಿ ಕಾಣಲಿಲ್ಲ’
ಸುಬ್ಬು ವಿವರಿಸಿದ.

‘ನಿಮ್ಮ ಹರಿಕತೆ ಬೇಕಿಲ್ಲ! ನೋಡಿ, ಈ ಹೂನ ಯಾರಾದ್ರೂ ಪೂಜೆಗೆ ಇಡೋಕಾಗುತ್ತಾ..? ನೀವೇ ಹೇಳಿ..’ ಅತ್ತಿಗೆ ನೇರ ನನ್ನನ್ನೇ ಕೇಳಿದಾಗ ಹಣೆ ಬೆವರಿಟ್ಟಿತು!
‘ಸುಬ್ಬು ಅಥವಾ ಶಾಲಿನಿ ಅತ್ತಿಗೆ ಪರವಾಗಲೀ ವಹಿಸುವುದು ಸಾಧ್ಯವೇ ಇರಲಿಲ್ಲ. ಯಾಕಾದರೂ ಇಲ್ಲಿಗೆ ಬಂದೆ ಎಂದು ನನ್ನನ್ನು ನಾನೇ ಶಪಿಸಿಕೊಂಡೆ!
‘ಸರಿ, ಎಷ್ಟು ಕೊಟ್ರಿ ಈ ಕಸಕ್ಕೆ ಹಾಕೋ ಹೂವಿಗೆ?’ ಅತ್ತಿಗೆ ಗದರಿಸಿದರು.
‘ಎಂಬತ್ತು ರೂಪಾಯಿ ಕೆಜಿಗೆ’
‘ಬಡ್ಕೋಬೇಕು! ಅದೇನು ಫ್ಯಾಕ್ಟ್ರೀಲಿ ಕೆಲಸ ಮಾಡ್ತೀರೋ..? ಆ ಫ್ಯಾಕ್ಟ್ರಿ ಅದು ಹೇಗೆ ಲಾಭ ಮಾಡ್ತಿದೆಯೋ ದೇವರಿಗೇ ಗೊತ್ತು!’
‘ಈ ಸಲ ಮುನ್ನೂರು ಕೋಟಿ ಲಾಭ’ ಸುಬ್ಬು ಹೆಮ್ಮೆಯಿಂದ ಹೇಳಿದ.

ಇಲ್ಲಿ ಎಂಬತ್ತು ರೂಪಾಯಿ ನಮಗೆ ಲಾಸು’ ಅತ್ತಿಗೆ ಹಂಗಿಸಿದರು.
‘ಪೂಜೆ ಎಷ್ಟೊತ್ತಿಗೆ..?’ ಮಾತು ಬದಲಿಸಲು ಪ್ರಯತ್ನಿಸಿದೆ.
‘ಹತ್ತಕ್ಕೆ ಶಾಸ್ತ್ರಿಗಳು ಬರ್ತಿನಿ ಎಂದಿದ್ದಾರೆ ’
‘ನಾಳೆ ಬೆಳಿಗ್ಗೆ ಎಂಟಕ್ಕೇ ನಾನೂ ಸುಬ್ಬೂ ಹೋಗಿ ಫ್ರೆಷ್ ಆಗಿರೋ ಹೂವು ತರ್ತೀವಿ..’
‘ನಿಮ್ಮ ಫ್ರೆಂಡ್ನ ಮಾರ್ಕೆಟ್ಟಿಗೆ ಕರ್ಕೊಂಡು ಹೋದ್ರೆ ಇಲ್ಯಾರು ಕೆಲಸ ಮಾಡೋರು..? ನನ್ನ ಹೆಣ ಬಿದ್ದೋಗುತ್ತೆ..’
‘ಸರಿ ಬಿಡಿ. ನಾನೊಬ್ಬನೇ ಮಾರ್ಕೆಟ್ಟಿಗೆ ಹೋಗಿ ಚೆನ್ನಾಗಿರೋ ಹೂವು ತರ್ತೀನಿ’

‘ನೋಡಿ..ನನ್ನ ಬಾಯಿ ಜೋರೂಂತ ಎಲ್ಲಾ ಅಂತಾರೆ! ಆದ್ರೆ ಇವ್ರ ಕೆಲ್ಸ ನೋಡಿ! ಈ ವೀಳೆಯದೆಲೆ? ಮೇಲೆರೆಡು ಮಾತ್ರ ಚೆನ್ನಾಗಿದೆ. ಒಳಗಿರೋದೆಲ್ಲಾ ಕೊಳೆತಿದೆ! ಈ ತೆಂಗಿನ ಕಾಯಿಗಳು ಎಲ್ಲಾ ಎಳೇವು! ಇವು ತೆಂಗಿನ ಕಾಯಿ ಅಲ್ಲ ಎಳೆನೀರು! ಪಲ್ಯಕ್ಕೆ ಈ ಬಲಿತಿರೋ ಹುರುಳೀಕಾಯಿ..ನಾನು ಏನು ಬಡ್ಕೊಳ್ಳಲಿ?’
ಶಾಲಿನಿ ಅತ್ತಿಗೆಯ ಮಾತು ಜೋಗದ ಜಲಪಾತ!!
‘ಇಷ್ಟೆಲ್ಲಾ ಹಂಗಿಸೋ ಬದಲು ನೀನೇ ಎರಡು ಗಂಟೆ ಮಾರ್ಕೆಟ್ಟಿಗೆ ಬಂದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ!’
ಸುಬ್ಬು ಕನಲಿದ.

‘ಎಲ್ಲಾ ನಾನೇ ಮಾಡ್ತಿದ್ರೆ ನೀವು ಕ್ಲಬ್ಬಲ್ಲಿ ಎಣ್ಣೆ ಹೊಡ್ಕೊಂಡು ಕೂತ್ಕೋತೀರ! ಸ್ವಲ್ಪ ಮೈಬಗ್ಗಿಸಲಿ ಅಂದ್ರೆ ಹೀಗೆ ಅದ್ವಾನ ಮಾಡ್ಕೊಂಡು ಬರ್ತೀರಿ. ನಮ್ಮಪ್ಪ ಎಂತಾ ತಪ್ಪು ಮಾಡಿ ನಿಮಗೆ ಕಟ್ಟಿಬಿಟ್ಟ’
ಅತ್ತಿಗೆ ಕಣ್ಣಲ್ಲಿ ಅಮೆರಿಕಾದ ನಯಾಗರಾ ಜಲಪಾತ ಕಾಣಿಸಿತು!
ಇದೆಲ್ಲಾ ನೋಡಲಾರದ ಇಕ್ಕಟ್ಟಿಗೆ ಸಿಕ್ಕಿಕೊಂಡು ಪೇಚಾಡಿದೆ! ಸುಬ್ಬೂ ಪರವಹಿಸುವಂತೆಯೂ ಇರಲಿಲ್ಲ, ಸುಮ್ಮನಿರುವಂತೆಯೂ ಇಲ್ಲ!!
‘ನಿಮ್ಮಪ್ಪ ಮಾಡಿದ ತಪ್ಪನ್ನ ಸರಿ ಮಾಡ್ಕೋಬಹುದಲ್ಲ?’ ಸುಬ್ಬು ಸೆಟೆದು ನಿಂತ!!
‘ಏನು ಹಂಗಂದ್ರೆ? ಬಿಟ್ಟುಬಿಡ್ತೀರಾ..? ಡೈವರ್ಸು ಕೊಡ್ತೀರಾ..?’ ಶಾಲಿನಿ ಅತ್ತಿಗೆ ರುದ್ರ ರೂಪ ತಾಳುವಂತೆ ಕಂಡಿತು!
‘ನಾನು ಮಾಡೋ ಯಾವ ಕೆಲಸವೂ ನಿನಗೆ ಸರಿಹೋಗಿಲ್ಲ! ನೀನೇ ಮಾಡು ಅಂದ್ರೆ ಅದೂ ಆಗೊಲ್ಲ!’
ಮಾತಿಗೆ ಮಾತು, ಅಸ್ತ್ರಕ್ಕೆ ಪ್ರತ್ಯಸ್ತ್ರ! ಸುಬ್ಬು-ಶಾಲಿನಿ ಜಗಳ ಮಿತಿಮೀರುವ ಹಂತ ತಲುಪುವ ಎಲ್ಲಾ ಲಕ್ಷಣಗಳೂ ಕಂಡವು!! ಅದಕ್ಕೆ ಮುನ್ನ ಸುಬ್ಬು ಚಡ್ಡಿ ಸ್ನೇಹಿತನಾಗಿ ಏನಾದ್ರೂ ಮಾಡಲೇಬೇಕು! ಈ ಜಗಳ ಮುಂದುವರಿಯೋಕೆ ಬಿಡಬಾರದು!

‘ಒಂದ್ ನಿಮಿಷ  ಸುಬ್ಬು, ನಾನು ಬಂದಿದ್ದ ವಿಷಯಾನೇ ಹೇಳಲಿಲ್ಲ. ಒಂದು ಲೇಖನದ ಸಲುವಾಗಿ ಬಂದಿದ್ದೀನಿ. ‘ನಿಮ್ಮ ಗಮನ ಸೆಳೆದ ಆದರ್ಷ ದಂಪತಿಗಳು’ ಅನ್ನೋ ವಿಷಯದ ಬಗ್ಗೆ ಒಂದು ಪತ್ರಿಕೆಯವರು ಲೇಖನ ಕೇಳಿದ್ದಾರೆ. ಆಹ್ವಾನಿತ ಲೇಖನ. ಅದರಲ್ಲಿ ನಿಮ್ಮಿಬ್ಬರನ್ನೂ ಸೇರಿಸಬೇಕೂಂತಿದ್ದೀನಿ. ಅದಕ್ಕೆ ನಿಮ್ಮ ಒಪ್ಪಿಗೆ ಕೇಳೋಕೆ ಬಂದಿದ್ದು! ನೀವಿಬ್ಬರೂ ಜೊತೆಯಾಗಿರೋ ಒಂದು ಫೋಟೋ ಬೇಕು. ಅದು ಸಹಜವಾಗಿರಬೇಕು. ಸ್ಟುಡಿಯೋದಲ್ಲಿ ತೆಗೆಸಿದ್ದಲ್ಲ. ಎಲ್ಲಾದರೂ ಹೊರಗೆ ಹೋಗಿದ್ದಾಗ ತೆಗೆದ ಫೋಟೋ ಆದ್ರೆ ಸಾಕು’
ನನ್ನ ಮಾತಿಗೆ ದೀಪಾವಳಿಯಲ್ಲಿ ಸಿಡಿಯುತ್ತಿದ್ದ ಸಾವಿರ ಆನೆಪಟಾಕಿ ಸರ ಟುಸ್ಸಾಯಿತು! ಇಬ್ಬರೂ ಬಾಯಿಗೆ ಬೀಗ ಬಿತ್ತು.

‘ಫೋಟೋ ಅರ್ಜೆಂಟಿಲ್ಲ..ನಾಡಿದ್ದು ಸಿಕ್ಕರೂ ಸಾಕು..’ ಮೌನವನ್ನು ಭೇದಿಸಿದೆ!
‘ರೀ..ನಾವು ಹೊರನಾಡಿಗೆ ಹೋಗಿದ್ದಾಗ ಪವನ್ ತೆಗೆದಿದ್ದನಲ್ಲಾ ಆ ಫೋಟೋ ಎಲ್ಲಿದೆ..?’
ಶಾಲಿನಿ ಅತ್ತಿಗೆ ಒಮ್ಮೆಲೇ ತಣ್ಣಗಾಗಿದ್ದರು.
‘ಅದು ಪವನ್ ಕ್ಯಾಮರಾದಿಂದ ಇನ್ನೂ ಡೌನ್‍ಲೋಡ್ ಮಾಡೇ ಇಲ್ಲಾನ್ಸುತ್ತೆ..’
ಸುಬ್ಬು ಕೂಡ ಕೂಲಾಗಿ ಹೇಳಿದ.
‘ಹಾ..ಡಿಜಿಟಲ್ ಇಮೇಜಾದ್ರೆ ಇನ್ನೂ ಒಳ್ಳೇದು..ಪವನನಿಗೆ ನಾನೇ ಹೇಳ್ತೀನಿ…’
‘ಸುಬ್ಬು, ನಾಳೆ ಮಾರ್ಕೆಟ್ಟಿಂದ ತರ್ಬೇಕಾಗಿರೋ ಸಾಮಾನು ಪಟ್ಟಿ ಕೊಡು. ಬೆಳಿಗ್ಗೆ ಏಳಕ್ಕೇ ಹೋಗಿ ತರ್ತೀನಿ..’
‘ಅಯ್ಯೋ ಅದೆಲ್ಲಾ ಏನೂ ಬೇಡ. ಇವರು ತಂದಿರೋದ್ರಲ್ಲೇ ಎಲ್ಲಾ ಅಡ್ಜೆಸ್ಟ್ ಮಾಡ್ಕೋಬಹುದು..’

ಅತ್ತಿಗೆ ಮಾತಿಗೆ ಸುಬ್ಬು ಕಣ್ಣರಳಿಸಿದ! ಕೇಳಿದ್ದು ನಂಬಲಾರದೆ ಆಶ್ಚರ್ಯದಿಂದ ಬಾಯಿ ತೆರೆದ!
‘ಸರಿ ಹಾಗಾದ್ರೆ ನಾಳೆ ಪೂಜೆ ಟೈಮಿಗೆ ಬರ್ತೀನಿ..’ ಎದ್ದು ಹೊರಟೆ!
‘ಅಯ್ಯೋ..ಕಾಫಿ ಕೂಡ ಕುಡೀದೆ ಹೋಗ್ತಿದ್ದೀರಾ..? ಹತ್ನಿಮಿಷ ಕಾಫಿ ಮಾಡ್ಕೊಂಡು ಬರ್ತೀನಿ!’
ಶಾಲಿನಿ ಅತ್ತಿಗೆ ಉತ್ಸಾಹದಿಂದ ಅಡಿಗೆ ಮನೆ ಕಡೆ ಹೊರಟರು!
‘ತ್ಯಾಂಕ್ಸ್ ಕಣೋ..ಒಂದೊಂದ್ಸಲ ನಿನ್ನಂತವನಿಂದಾನೂ ಸಹಾಯವಾಗುತ್ತೆ’ ಸುಬ್ಬು ಕಣ್ಣು ಮಿಟುಕಿಸಿದ!
‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಅನ್ನೋ ಮನುಷ್ಯ ನೀನು ಎಂದು ಮನಸ್ಸಿನಲ್ಲೇ ಹೇಳಿಕೊಂಡೆ!

‍ಲೇಖಕರು Avadhi

December 14, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: