ಬೇಲೂರು ರಘುನಂದನ್ ಕಾಲಂ ’ಉಮಾಸಿರಿ’ : ಹಂಸಲೇಖಾಗೆ ಉಮಾಶ್ರೀ ಬರೆದುಕೊಟ್ಟ ಪತ್ರ

(ಇಲ್ಲಿಯವರೆಗೆ…)

ಹಂಗೂ ಹಿಂಗೂ ಉಮಾಶ್ರೀ ಅವರು ಬೇಲೂರಿಗೆ ಬಂದು ವರ್ಷ ಕಳೆದಿತ್ತು. ಅವರು ಕೊಟ್ಟ ಅಡ್ರೆಸ್ಸ್ ನೋಡಿಕೊಂಡೇ ವರ್ಷ ಕಳೆದಿದ್ದೆ. ಅವರ ಭೇಟಿಯ ಕನಸನ್ನು ಕಂಡಿದ್ದೆ. ಅದೆಂಥಾ ಕನಸು ಅಂದ್ರೆ ನಾ ಬೆಂಗಳೂರಿಗೆ ಹೋಗಿ ಅವರನ್ನ ಭೇಟಿ ಮಾಡಿಬಿಟ್ರೆ, ನಾ ಜೀವನದಲ್ಲೇ ಸೆಟಲ್ ಆಗಿಬಿಡುತ್ತೇನೆ ಅನ್ನುವ ಬಹು ದೊಡ್ಡ ಕನಸು. ನನ್ನ ಪ್ರತಿಭೆಗೆ ಒಳ್ಳೊಳ್ಳೇ ಅವಕಾಶ ಸಿಕ್ಕಿಬಿಡತ್ತೆ ಅನ್ನುವ ಕನಸು. ಇಷ್ಟೆಲ್ಲಾ ಕನಸು ಇಟ್ಟುಕೊಂಡು ಅವರನ್ನು ಮೀಟ್ ಮಾಡಲು ಹೋಗೋಕೆ ಆಗಲಿಲ್ಲ. ಅವರನ್ನು ಮೊದಲು ಭೇಟಿ ಮಾಡಿ ವರ್ಷ ಕಳೆದರೂ. ಕಾರಣ ದುಡ್ಡು ಕಾಸಿನ ಸಮಸ್ಯೆ. ಬಸ್ಚಾರ್ಜು, ಅಲ್ಲಿ ಓಡಾಡೋ ಖರ್ಚು ಅಂತೆಲ್ಲಾ ದುಡ್ ಹೊಂದಿಸಿಕೊಳ್ಳೋಕೇ ಆಗಲಿಲ್ಲ. ಬೆಂಗಳೂರಿನಲ್ಲಿ ಉಳಿಯಲು ಏನು ಸಮಸ್ಯೆ ಇರಲಿಲ್ಲ. ಯಾಕಂದ್ರೆ ನಮ್ಮಮ್ಮನ ಊರು ಬೆಂಗಳೂರೇ. ನಮ್ಮಜ್ಜಿ ಮನೆ ಇದ್ದಿದ್ದು ಮೆಜಸ್ಟಿಕ್ಕಿನ ಹತ್ತಿರದ ಕಾಟನ್ ಪೇಟೆಯಲ್ಲಿ.
ಒಂದಿನ ಹೀಗೆ ನನ್ ತಂಗಿ ಶೇತಮ್ಮನ ಹತ್ತಿರ ಬೆಂಗಳೂರಿಗೆ ಹೋಗಿ ಬರುತ್ತೇನೆ. ಉಮಾಶ್ರೀ ಅವರನ್ನ ಭೇಟಿ ಮಾಡಿಕೊಂಡು ಬರುತ್ತೇನೆ. ಏನಾದ್ರೂ ಸಹಾಯ ಆಗಬಹುದು ಅಂದೆ. ಅವಳು ಎರಡು ಮೂರು ದಿನ ಆದ್ರೂ ಬೇಕಾಗುತ್ತೆ ನೀ ಹೋದರೆ. ಇಲ್ಲಿ ಮನೆ ಪಾಠದ ಹುಡುಗರ ಪೇರೆಂಟ್ಸ್ ಎಲ್ಲ ಸಿಟ್ಟು ಮಾಡುತ್ತಾರೆ. ಒಂದರಿಂದ ಐದನೇ ತರಗತಿ ವರೆಗೂ ನಾನೇ ನಿಭಾಯಿಸುತ್ತೇನೆ ಉಳಿದದ್ದು ಕಷ್ಟ ಅಂದ್ಲು. ಅಷ್ಟೊತ್ತಿಗಾಗಲೇ ಅವಳು ನಾನು ಮಾಡುತ್ತಿದ್ದ ಮನೆ ಪಾಠದ ಬುಸ್ಯಿ ಶೆಡ್ಯೂಲ್ ನ ಅವಳೂ ಕೂಡ ಹಂಚಿಕೊಳ್ಳುತ್ತಿದ್ದಳು. ಫೀಸ್ ಕಲೆಕ್ಟ್ ಮಾಡೋದು ಇನ್ನಿತರ ಅಲ್ಲಿನ ಕೆಲಸಗಳನ್ನು ಆಕೆ ನೋಡಿಕೊಳ್ಳುತಿದ್ದಳು. ಪಾಠ ಮಾಡೋದಷ್ಟೇ ನನ್ನ ಕೆಲಸ ಆಗಿತ್ತು. ಟೈಮ್ ಟೇಬಲ್. ಬ್ಯಾಚ್ ಡಿವೈಡ್ ಎಲ್ಲಾ ಅವಳೇ ಮಾಡಿಕೊಡುತ್ತಿದ್ದಳು. ನಿಜಕ್ಕೂ ಒಳ್ಳೇ ನಾಯಕತ್ವ ಗುಣ ಉಳ್ಳವಳು ನನ್ನ ತಂಗಿ. ಹಾಗೂ ಅಷ್ಟೇ ಜವಾಬ್ದಾರಿ ಹೆಣ್ಣು ಮಗಳು. ಎಂಥಾ ಸಂದರ್ಭದಲ್ಲೂ ಒಂದು ರುಪಾಯಿಯನ್ನು ಅನವಶ್ಯ ಖರ್ಚು ಮಾಡುತ್ತಿರಲ್ಲಿಲ್ಲ. ಹೀಗಿರುವ ಆಕೆ ಅವಳು ಕೂಡಿಟ್ಟ 500 ರೂಗಳನ್ನು ಕೊಟ್ಟಳು. ಅದನ್ನು ತಗೊಂಡು ಬೆಂಗಳೂರಿಗೆ ಬಂದೆ.
ಉಮಾಶ್ರೀ ಅವರ ಜಯನಗರದ ಮನೆಗೆ ಬೆಂಗಳೂರಿನ 2 ನೇ ನಂ ಬಿ.ಟಿ.ಎಸ್ ಬಸ್ ಹಿಡಿದು ಹೊರಟೆ. ಭಯ ಮತ್ತು ಆತಂಕ. ಸೆಲೆಬ್ರಿಟಿ ಸರಿಯಾಗಿ ಸ್ಪಂದಿಸದೇ ಹೋದರೆ, ಅವಮಾನ ಮಾಡಿಬಿಟ್ರೆ ಹೀಗೇ ಏನೇನೋ ಹಾಳಾದ್ ಯೋಚನೆ. ಜೊತೆಗೆ ಮುಜುಗರ ಬೇರೆ. ಅಂತೂ ಇಂತೂ ಅವರ ಮನೆ ಹತ್ತಿರ ಹೋದೆ. ಆಗ ಸುಮಾರು ಬೆಳಿಗ್ಗೆ 8 ಗಂಟೆ ಆಗಿತ್ತೇನೋ. ಅವರ ಮನೆ ಗೇಟ್ ಹಾಕಿತ್ತು. ಧೈರ್ಯ ಮಾಡಿ ಒಳಗೆ ಹೋಗಲು ಮನಸಾಗಲಿಲ್ಲ. ಮೊದಲನೇ ಪ್ಲೋರ್ ಮನೆ ಬಾಗಿಲು ಬೇರೆ ಹಾಕಿತ್ತು. ನಾ ಅವರು ಕೆಳಗೆ ಬರೋ ತನಕ ಕಾಯೋಣ ಅಂತ ಅಲ್ಲೇ ನಿಂತಿದ್ದೆ. 10 ಗಂಟೆ ಆದ್ರೂ ಬರುವ ಲಕ್ಷಣ ಕಾಣಲಿಲ್ಲ. ನಾ ಹೊರಗಡೆ ಗೇಟ್ ಹತ್ರಾನೇ ನಿಂತಿದ್ದೆ, ಅವರ ಮನೆಯ ಹೆಸರು ‘ನಮ್ಮಮ್ಮ’ ಅಂತ ಹಾಕಿದ್ದನ್ನು ಏನೇನೋ ಭಾವೋದ್ವೇಗದಲ್ಲಿ ನೋಡುತ್ತಾ. ಉಮಾಶ್ರೀ ಅವರ ಮನೆಯ ಮುಂದೆ ಒಬ್ಬ ಅಜ್ಜ ಇದ್ದ. ಬಹುಶಃ ಆ ತಾತನ ಹತ್ತಿರ ಅವರು ತುಂಬಾ ಪ್ರೀತಿ ಮತ್ತು ವಿಶ್ವಾಸದಿಂದ ಇದ್ದರು ಅಂತ ಕಾಣುತ್ತೆ. ನಾ ಬೆಳಗಿನಿಂದ ಮುಚ್ಚಿದ ಗೇಟ್ ಹತ್ರಾನೇ ನಿಂತಿರೋದನ್ನ ನೋಡಿದ ಆ ತಾತ. ಒಂದೇ ಸಮಾ ಜೋರಾಗಿ ಕಿರುಚೋಕೆ ಶುರು ಮಾಡಿತು. ಅಮ್ಮ ಉಮವ್ವಾ..ಉಮವ್ವಾ ಆ ಹುಡ್ಗ ಬೆಳಗ್ಗೆಯಿಂದ ನಿನ್ನ ನೋಡೋಕೆ ಗೇಟ್ ಹತ್ತಿರಾನೇ ನಿಂತಿದ್ದಾನೆ. ಬಾಗಿಲು ತೆಗೆಯಮ್ಮ ಅಂತ. ಆ ತಾತಾ ನನ್ನ ಯಾಕೆ ಬಂದಿರೋದು ಅಂತೇನು ಕೇಳಲಿಲ್ಲ. ನನ್ನ ಏನೂ ಕೇಳದೇ ನನ್ನ ಉದ್ದೇಶ ತಿಳಿದುಕೊಂಡು ಉಮಾಶ್ರೀ ಅವರನ್ನು ಆ ತಾತ ಕರೆಯಿತಲ್ಲ ಅಂತ ಸಕತ್ ಖುಷಿ ಆಗೋಯ್ತು. ತಾತನ ಸದ್ದು ಕೇಳಿದ ಕೂಡಲೇ ಉಮಾಶ್ರೀ ಅವರು ದಡಬಡ ಇಳಿದು ಬಂದು ಗೇಟ್ ಬೀಗ ತೆಗೆದರು. ಆ ತಾತ ಬೆಳಗ್ಗೆಯಿಂದ ನಿನ್ನನ್ನೇ ಕಾಯುತ್ತಿದ್ದಾನೆ ನೋಡಮ್ಮ ಅಂತು. ಅದಕ್ಕೆ ಅವರು ಹೌದಾ ಅನ್ನುತ್ತಾ ಬೆಲ್ ಮಾಡೋದಲ್ವೇನಪ್ಪ, ಬಾ ಒಳಗೆ ಎಂದು ಕರೆದರು. ಹೋದೆ ಉಮಾಶ್ರೀ ಅವರ ಸಿನಿಮಾದಲ್ಲೇ ಬೇರೆ ತರ ಕಾಣ್ತಾರೆ ಇಲ್ಲೇ ಬೇರೆ ತರ ಇದ್ದಾರೆ. ತುಂಬಾ ಸಿಂಪಲ್ ಇವರು ತುಂಬಾ ಒಳ್ಳೇ ಜನ ಅಂತ ಏನೇನೋ ಅನ್ಕೊಂಡು ಸುಮ್ಮನ್ನಿದ್ದೆ. ಸ್ವಗತದಲ್ಲಿ ಏನೇನೋ ಸಂಘರ್ಷಗಳು ಕುಣಿತಿದ್ವು. ಒಟ್ಟು ಆಕೆಯನ್ನು ನೋಡಿದ ತಕ್ಷಣ ಏನು ಮಾತಾಡಬೇಕು ಅಂತ ತಿಳಿಯದೇ ಸುಮ್ಮನಿದ್ದೆ. ಅವ್ರು ನನ್ನನ್ನು ಕೂರಿಸಿ ಒಳ ಹೋದರು. ಒಂದು ಕಪ್ ಗ್ರೀನ್ ಟೀ ಅವರಿಗಾಗಿ ನಂಗೆ ಹಾಲಿನಲ್ಲಿ ಟೀ ಮಾಡಿಕೊಂಡು ಬಂದರು. ಟೀ ಕೊಟ್ಟು ಹೇಳಪ್ಪ ಅಂದ್ರು ,
ನಾನು : ನಮಸ್ತೆ ಅಮ್ಮಾ
ಅವರು : ನಮಸ್ತೆ ಹೇಳಪ್ಪಾ
ನಾನು :ಅಮ್ಮ , ಕಳೆದ ವರ್ಷ ನೀವು ಬೇಲೂರಿಗೆ ಬಂದಿದ್ರಿ. ನೀವು ಕಾರಲ್ಲಿ ಕೂತಾಗ ನನ್ನ ಕರೆದು ನಿಮ್ಮ ವಿಳಾಸ ಬರೆದು ಕೊಟ್ರಿ ಅಂದೆ
ಅವರು : ಹಾ ಹೌದಲ್ವಾ, ಎನ್ ಮಾಡ್ತಿದ್ದೀಯಪ್ಪ ? ಬಂದಿದ್ದೇನು ? ಅಂದ್ರು
ನಾನು : ಏನಕ್ಕೆ ಬಂದೆ ಅಂತ ಹೇಳೋಕೆ ಮತ್ತು ಎನ್ ಕೇಳಬೇಕು ಅನ್ನೋ ಪೂರ್ತಾ ಚಿತ್ರಣ ಇಲ್ಲದೇ ‘ಅಮ್ಮಾ, ನಾನು ಹಾಡುತ್ತೇನೆ, ಡಾನ್ಸ್ ಮಾಡೋಕೆ ಬರುತ್ತೆ, ಅಭಿನಯ ಕೂಡ ಬರತ್ತೆ. ಬೇಲೂರಿನ ಎಲ್ಲಾ ಶಾಲೆ ಮಕ್ಕಳಿಗೂ ನಾನೇ ಡಾನ್ಸ್ ಕಲಿಸೋದು’ ಅಂದು ಬಿಟ್ಟೆ. ನಾ ಕಲಿಸುತ್ತಿದ್ದುದು ನೇತಾಜಿ ಶಾಲೆಗೆ ಮತ್ತು ಇನ್ನೊಂದೆರಡು ಶಾಲೆಗಳಿಗೆ ಮಾತ್ರ. ಆದ್ರೆ ಮಾತಾಡುವ ಬರದಲ್ಲಿ ಎಲ್ಲಾ ಶಾಲೆಗೆ ಅಂದು ಬಿಟ್ಟೆ.
ಅವರು : ಎಲ್ಲಾ ಶಾಲೆಗೆ ಹೇಗೆ ಕಲಿಸ್ತೀಯಪ್ಪ ? ಕಷ್ಟ ಅಲ್ವ , ಎಲ್ಲಾ ಶಾಲೆಯ ಟೈಮಿಂಗ್ಸ್ ಒಂದೇ ಅಲ್ವ? ಅಂದ್ರು.
ನಾನು : ಏನೂ ಮಾತಾಡದೇ ಸುಮ್ಮನಿದ್ದೆ, ಏನು ಹೇಳಲು ಗೊತ್ತಾಗದೇ.
ಅವರು : ಆಯ್ತು ಹೇಳಪ್ಪ ಈಗ ನನ್ನಿಂದ ಏನಾಗಬೇಕು ? ಅಂದ್ರು
ನಾನು : ಮತ್ತೆ ಶುರು ಮಾಡಿದೆ ‘ನಂಗೆ ಹಾಡೋಕೆ ಬರುತ್ತೆ, ಡಾನ್ಸ್ ಮಾಡೋಕೆ ಬರುತ್ತೆ, ಅಭಿನಯ ಕೂಡ ಮಾಡುತ್ತೇನೆ. ಬೇಲೂರಿನ ವನಮಾಲ ಟೀಚರ್ ಹತ್ರ ಗಮಕ ಕಲಿತಿದ್ದೇನೆ. ಅವರು ವಿದ್ವಾನ್ ಕೂಡ. ಅಂತೆಲ್ಲಾ ಬಡ ಬಡ ಹೇಳಿ ಬಿಟ್ಟೆ.
ಅವರು : ಸರೀನಪ್ಪ ಹಾಡೋಕೆ ಬರುತ್ತೆ, ಡಾನ್ಸ್ ಮಾಡೋಕೆ ಬರುತ್ತೆ, ಅಭಿನಯ ಕೂಡ ಮಾಡ್ತೀನಿ ಅಂತಿದ್ದೀಯ, ಇವು ಮೂರರಲ್ಲಿ ನಿನಗೆ ಚೆನ್ನಾಗಿ ಯಾವುದು ಬರತ್ತೆ ? ಅಂತ ಕೇಳುದ್ರು
ನಾನು : ಎಲ್ಲಾ ಅಂದೆ
ಅವರು : ನೀನ್ ಹೇಳೋ ಪ್ರಕಾರ ಗಮಕ ಕಲಿತಿದ್ದೀನಿ ಅಂತೀಯ. ಚೆನ್ನಾಗಿ ಹಾಡೋಕೆ ಬರುತ್ತೆ ಅನ್ಸುತ್ತೆ ಆಲ್ವಾ ? ನಿಮ್ಮ ಗುರುಗಳು ಚೆನ್ನಾಗಿ ಹೇಳಿ ಕೊಟ್ಟಿದ್ದಾರ ?
ನಾನು : ಹಂಗೆ ಅವರು ಕೇಳಿದ ತಕ್ಷಣ, ‘ ಓ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದಾರೆ’ ಅಂದು, ನಾಟ್ ರಾಗದಲ್ಲಿ ವಿದುಷಿ ವನಮಾಲ ಮೇಡಂ ಹೇಳಿಕೊಟ್ಟಿದ್ದ ಕುಮಾರವ್ಯಾಸ ಭಾರತದ ನಾಂದಿ ಪದ್ಯ
‘ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನಿಕರ ದಾತಾರ’
…….’ ಅಂತ ಹಾಡೋಕೆ ಶುರು ಮಾಡಿದೆ
ಅವರು : ಶ್ರದ್ಧೆಯಿಂದ ಕೇಳಿಸಿಕೊಂಡು ಇನ್ನೂ ಅಭ್ಯಾಸ ಮಾಡಬೇಕು. ಇನ್ನೂ ನಿಮ್ಮ ಗುರುಗಳ ಹತ್ತಿರ ಹೆಚ್ಚು ಸಮಯ ಕಳೆಯ ಬೇಕು. ಪೂರ್ಣ ಕಲಿಕೆ ಆಗೋ ವರೆಗೂ ಶಿರಸಾವಹಿಸಿ ಸಂಗೀತ ಕಲಿಯ ಬೇಕು ಅಂದ್ರು.
ನಾನು : ಏನಪ್ಪಾ ಇದು ನಾ ಹಾಡಿದ ಹಾಡು ಅವರಿಗೆ ಇಷ್ಟ ಆಗಲಿಲ್ಲವೇನೋ ಅಂತ ಅನ್ಕೊಂಡು ಸಪ್ಪೆ ಮುಖ ಹಾಕ್ಕೊಂಡು ಆಯಿತು ಅಮ್ಮಾ ಅಂದೆ
ಅವರು : ಎಷ್ಟು ವರ್ಷದಿಂದ ಗಮಕ ಕಲಿತಿದ್ದೀಯ? ಅಂದ್ರು
ನಾನು : 3 ವರ್ಷದಿಂದ ಅಮ್ಮ. ಕಾಜಾಣ ಪರೀಕ್ಷೆ ( ಜೂನಿಯರ್ ) ಮುಗಿಸಿದೆ. ಈಗ ಪಾರೀಣ ಕಲಿಯುತ್ತಿದ್ದೇನೆ ( ಸೀನಿಯರ್ ). ನಾನೊಬ್ಬನೇ ಅಲ್ಲಾ , ನನ್ನ ತಂಗಿ ಕೂಡ ಗಮಕ ಕಲಿಯುತ್ತಿದ್ದಾಳೆ. ನಮಗೆ ಗಮಕ ಹೇಳಿಕೊಡೋ ವನಮಾಲ ಟೀಚರ್ ಒಂಚೂರು ಫೀಸ್ ತಗೋಳಲ್ಲ. ತುಂಬಾ ಚೆನ್ನಾಗಿ ಹೇಳಿಕೊಡ್ತಾರೆ ಅಂತೆಲ್ಲಾ ತುಂಬಾ ಎಕ್ಸೈಟ್ ಆಗಿ ಮಾತಾಡಿದೆ.
ಅವರು : ಹೌದಾ
ನಾನು : ಹೌದಾ ಅಂತ ಅವರು ಅಂದ ಕೂಡಲೇ ನಾನು ನನ್ ತಂಗಿ ಮನೆ ಪಾಠ ಮಾಡುತ್ತಿದ್ದೇವೆ. ತುಂಬಾ ಕಷ್ಟಪಟ್ಟು ಜೀವನ ಕಟ್ಟಿಕೋತಿದ್ದೇವೆ ಅಂದೆ.
ಅವರು : ಕಷ್ಟ ಪಡಬೇಕಪ್ಪ.. ಅಂದ್ರು
ನಾನು : ಆಯಿತು ಅಂದೆ. ಆದ್ರೆ ನನ್ನ ಮನದ ಒಳಗೆ ಇಡೀ, ನಾ ಪಟ್ಟ ಪಾಡುಗಳೆಲ್ಲಾ ಕಣ್ ಮುಂದೆ ಹಿಂಗ್ ಬಂದು ಹಂಗ್ ಹೋಯಿತು. ಕಣ್ಣು ಒಂಚೂರು ತೇವ ಆಗಿತ್ತು. ಆದ್ರೂ ನಾ ಎಲ್ಲೂ ವೀಕ್ ಅಂತ ತೋರಿಸಿಕೊಳ್ಳಲಿಲ್ಲ. ಅನುಕಂಪಕ್ಕಾಗಿ ಹಾತೊರೆಯಲಿಲ್ಲ.
ಅವರು : ಆಯಿತು ರಘು, ಒಂದು ಕೆಲಸ ಮಾಡು. ನಾ ಹಂಸಲೇಖ ಅವರಿಗೆ ಒಂದು ಪತ್ರ ಬರೆದುಕೊಡುತ್ತೇನೆ. ಅವರಿಗೆ ತೋರಿಸು. ಕಷ್ಟ ಪಟ್ಟು ಅವರ ಜೊತೆ ಇದ್ದು ಒಂದೈದು ವರ್ಷ ಸಂಗೀತ ಕಲಿ ಅಂದ್ರು.
ನಾನು : ಖುಷಿಯಿಂದ ನಕ್ಕೆ
ಅವರು : ಪತ್ರ ಬರೆದುಕೊಟ್ಟು ಒಳ್ಳೆದಾಗಲಿ ಎಂದು ಹರಸಿ ನಿಮ್ಮ ಗಮಕ ಟೀಚರ್ ಗೆ ನನ್ನ ಶುಭಾಶಯಗಳನ್ನ ತಿಳಿಸು ಅಂದ್ರು.

ಉಮಾಶ್ರೀ ಅವರು ಬರೆದು ಕೊಟ್ಟ ಪತ್ರ ಹಿಡಿದುಕೊಂಡು ಹಂಸಲೇಖ ಅವರ ಮನೆಯ ಕಡೆ ಹೋದೆ. ಅವರು ಇರಲಿಲ್ಲ. ಸುಮಾರು 3 ಗಂಟೆ ಕಾದೆ. ಅವರು ಬರಲೇ ಇಲ್ಲಾ. ಆದ್ರೆ ಉಮಾಶ್ರೀ ಅವರು ನನ್ನ ಕಾವ್ಯ ವಾಚನ ಕೇಳಿ ‘ಇನ್ನೂ ಕಲಿಯಬೇಕಪ್ಪಾ. ಅಭ್ಯಾಸ ಸಾಲದು’ ಅಂದಿದ್ದು, ನಂಗೆ ಸರಿ ಅನ್ನಿಸಿತು. ಹಂಸಲೇಖ ಅವರನ್ನು ಕಾದ ಅಷ್ಟೂ ಹೊತ್ತು ನನ್ನನ್ನು ನಾನು ಆತ್ಮ ವಿಮರ್ಶೆ ಮಾಡಿಕೊಂಡು ನಾ ಇನ್ನೂ ಕಲಿಯುವುದು ಬೇಕಾದಷ್ಟಿದೆ ಅಂದುಕೊಳ್ಳುವಷ್ಟರ ಹೊತ್ತಿಗೆ ಹಂಸಲೇಖ ಅವರು ಬಂದರು. ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದರು ಅನ್ನಿಸುತ್ತೆ. ನಾ ಅವರ ಮನೆಯ ಮುಂದೆಯೇ ಓಡಾಡುತ್ತಿದ್ದೆ. ಅವರು ಬಂದಿದ್ದನ್ನು ನೋಡಿ ಪತ್ರ ತೋರಿಸೋಣ ಅಂದುಕೊಳ್ಳುವಷ್ಟರಲ್ಲೇ ನನ್ನ ಬುದ್ಧಿ ತಡೆದು ಒಂದಷ್ಟು ಸಾಧನೆ ಮಾಡಿ ಬಾ ಅಂದಿತು. ನಾ ಹಂಸಲೇಖ ಅವರನ್ನು ದೂರದಿಂದಲೇ ನೋಡಿ, ಪತ್ರವನ್ನೂ ತೋರಿಸದೇ, ಅವರನ್ನು ಮಾತಾಡಿಸದೇ ಅಲ್ಲಿಂದ ವಾಪಸ್ ಬೇಲೂರಿನಕಡೆ ಹೊರಟೆ.
ಇದೆಲ್ಲಾ ಆದಮೇಲೆ ನಾ ಅವರ ಪತ್ರ ಹಿಡಿದು ಬಂದೆ. ನನ್ನ ಆಪ್ತರಿಗೆಲ್ಲಾ ಹೇಳಿ ಸಂಭ್ರಮಿಸಿದೆ. ನನ್ ತಂಗಿಗೆ ನಡೆದ ವಿಷಯವನ್ನೆಲ್ಲಾ ತಿಳಿಸಿದೆ. ಗಮಕ ಟೀಚರ್ ಗೆ ಅವರು ಹೇಳಿದ ಶುಭಾಶಯ ತಲುಪಿಸಿದೆ. ಇದೆಲ್ಲಾ ಆದಮೇಲೆ ನಾ ಮತ್ತೆ ಉಮಾಶ್ರೀ ಅವರನ್ನ ಭೇಟಿ ಮಾಡಲೇ ಇಲ್ಲ. ಉಮಾಶ್ರೀ ಹತ್ರ ಮತ್ತೆ ಹೋಗಬೇಕು ಅನ್ನಿಸಲೇ ಇಲ್ಲ. ನನ್ನ ಪಾಡಿಗೆ ಓದು ಬರಹ ಮನೆಪಾಠ. ಅಜ್ಜಿ ತಾತನ ಹಾರೈಕೆ. ತಂಗಿಯ ಕಾಳಜಿ ಇವುಗಳಲ್ಲೇ ಕಾಲ ದೂಡಿದೆ ಬದುಕಿಗಿರುವ ಅದಮ್ಯ ಸಾಧ್ಯತೆಗಳ ನೆನೆ ನೆನೆದು.
(ಮುಂದುವರಿಯುತ್ತದೆ…)

‍ಲೇಖಕರು G

November 10, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

11 ಪ್ರತಿಕ್ರಿಯೆಗಳು

  1. vijay

    Umashree avaru yaaro aparichita vyakthige torisida kalaji Adhdbhuta. Kasta dinda mele bandavaru maatra inobara kasta artha maadikollalu Sadhya. Mundina baaga bega barali.

    ಪ್ರತಿಕ್ರಿಯೆ
  2. Hussain(Nenapinasanchi )

    ಉಮಾಶ್ರೀರವರ ಹೃದಯ ವಿಶಾಲತೆ ಬೆರಗು ಹುಟ್ಟಿಸುತ್ತದೆ.. ಸರಣಿಯನ್ನು ಕಾದು ಓದುವಂತಾಗಿದೆ

    ಪ್ರತಿಕ್ರಿಯೆ
  3. Naveen

    ಬೇಲೂರು ರಘುನಂದನ್ ಅವರ, ಸರಳ ಬರಹದ ಶೈಲಿ ಬಹಳ ಹಿಡಿಸಿತು,
    ಉಮಕ್ಕನ ದೊಡ್ಡತನ, ಆಕೆಯ ಸರಳ ಗುಣ, ಕಣ್ಣಿಗೆ ಕಟಿದಂತೆ ನಿಲ್ಲುತ್ತವೆ.
    ಹುಡುಗನೊಬ್ಬನಿಗೆ ವಿಳಾಸ ಬರೆದು ಕೊಡುವ ಅವರ ದೊಡ್ಡತನ,,,,,,,,, ಹಾಗು ಹಂಸಲೇಖ ಅವರಿಗೆ ಪತ್ರ ಬರೆದು ಕೊಟ್ಟಿದ್ದು, ಹಾಗು ಆ ಪತ್ರವನ್ನು ಈಗಲೂ ಜಾಗರೂಕವಾಗಿ ಇಟ್ಟುಕೊಂಡು, ಪ್ರಕಟಿಸಿದ ರಘು ಅವರ ಬದುಕಿನ ಆಳ ಎಲ್ಲವು ವಿಶಿಷ್ಟ,,,,
    ಸರಣಿ ಮುಂದುವರೆಯಲಿ,,,
    ಓದಲು ಅನುವು ಮಾಡಿ ಕೊಡುತ್ತಿರುವ ಅವಧಿ ಬಳಗಕ್ಕೆ,,,,, ಬಹಳ ಧನ್ಯವಾದಗಳು,,,,
    ಹಾಗೆಯೇ ಇತ್ತೀಚಿಗಷ್ಟೇ ಪ್ರತಿಷ್ಟಿತ ಪ್ರಶಸ್ತಿಯೊಂದಕ್ಕೆ ಬಾಜನರಾದ ರಘು ಅವರಿಗೆ ಅಭಿನಂದನೆ,
    ರಘು ಅಣ್ಣ ಸಾಗಲಿ ನಿಮ್ಮ ಅಕ್ಷರ ಬೇಸಾಯ,,,,
    -ಜೀ ಕೇ ನವೀನ್ ಕುಮಾರ್

    ಪ್ರತಿಕ್ರಿಯೆ
  4. Gopaala Wajapeyi

    Ishtavaayitu nimma shaili. Tumba aaptavaagide. Mundina kantannu eduru noduve.

    ಪ್ರತಿಕ್ರಿಯೆ
  5. rajkumar

    ಬದುಕು ನಿಗೂಢ ಅಂದ್ರೆ ಉಮಾಶ್ರೀ ಅಮ್ಮನ ಬದುಕು ಅದಕ್ಕೂ ನಿಗೂಢ, ಅಪ್ಯಾಯ, ಸ್ತ್ರೀ ಅಂತ:ಶಕ್ತಿಯ ಆಸ್ಪೋಟ, ಅವರು ಬದುಕನ್ನ ಸ್ವೀಕರಿಸಿದ್ದು, ಎದುರಿಸಿದ್ದು ಜ್ವಲಂತ+ಪ್ರಸ್ತುತ ಪವಾಡ, ನನ್ನ ಸಾಕವ್ವನ ಒಡಲಾಳದ “ಉಮಾಸಿರಿ ” ಅಷ್ಟೇ ಆತ್ಮೀಯವಾಗಿ ಬರ್ದಿದಿರಿ ರಘುನಂದನ್ ಅವರೇ ನಿಮಗೆ ಶರಣು.

    ಪ್ರತಿಕ್ರಿಯೆ
  6. Manjunatha.g

    sir pratiyobbaru saha tamma eliegagi kasta paduvavare .umashri antha obba nati tanna balige banda huduganobbanige modala barige istu protstaha kottiddu nijakku tumbha dodda mathu . ankana channagide. mundina ankanakagi eduru noduteve.

    ಪ್ರತಿಕ್ರಿಯೆ
  7. vinaykumar k

    ಬೇಲೂರು ರಘುನಂದನ್ ಕಾಲಂ ಅವಧಿಯಲ್ಲಿ ತುಂಬಾಚನಾಗಿ ಬರುತಾಯಿದೆ ಅವರ ಬರೆಯುವಶ್ಯಲಿ
    ಅವರು ವ್ಯಕ್ತಪಡಿಸು ಸಾಹಿತ್ಯಾದ ಸೊಬಗು ನಮಗೆ ಹತಿರವಾಗಿರುತ್ತೆ
    ಅವರು ಬರೆಯುವ ಕಾಲಂ ನಮಗೆ ತುಂಬಾ ಇಸ್ಟಾ ಸರ್ ಹಿಗೆ ಬರಿತಾಯಿರಿ

    ಪ್ರತಿಕ್ರಿಯೆ
  8. ಗವಿಸಿದ್ಧ ಹೊಸಮನಿ

    ನೋವುಂಡ ಮನಸೊಂದರ ತೀವ್ರತೆ, ತುಡಿತ, ಅದರ ಹಪಹಪಿ ಹೇಗೆಲ್ಲಾ ಇರುತ್ತವೆ.. ಎಷ್ಟೆಲ್ಲಾ ಕಾಯಿಸುತ್ತವೆ..!
    ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಯಿತು ಬರೆಹ.
    ದೇವನೂರ ಮಹಾದೇವ ಅವರ ಒಡಲಾಳ ನಾಟಕದಲ್ಲಿ ಸಾಕವ್ವನ ಪಾತ್ರ ಮಾಡಿ ಅದರಿಂದ ಸಾಕಷ್ಟು ಹೆಸರು ಮಾಡಿ ಉಮಾಶ್ರೀಗೆ ಉಮಾಶ್ರೀಯೇ ಸಾಟಿ ಅನ್ನೋ ಮಟ್ಟಿಗೆ ಬೆಳೆದ ಉಮಾಶ್ರೀಯವರು ಒಳ್ಳೆಯ ಕಲಾವಿದೆ ಅನ್ನೋದು ಎಲ್ರಿಗೂ ಗೊತ್ತು.
    ಹುಡುಗನೊಬ್ಬನ ಆಸೆಗಣ್ಣನ್ನು ಗುರುತಿಸಿದ್ದು, ‘ಬೆಳೀಲಿ ಹುಡುಗ’ ಅಂತ ಪತ್ರ ಬರೆದುಕೊಟ್ಟಿದ್ದನ್ನು ನೋಡಿದರೆ ಹಿರಿಯ ಕಲಾವಿದೆ ಉಮಾಶ್ರೀಯೊಳಗೆ ಕಲಾವಿದೆ ಅಷ್ಟೆ ಅಲ್ಲ, ಅವರೊಳಗೆ ಅಂತದ್ದೊಂದು ತಾಯಿ ಮನಸು ಕೂಡ ಇದೆ ಅಂತ ನನಗಿನಿಸಿತು.
    ಆ ತಾಯಿ ಮನಿಸಿಗೆ ಆ ಹೊತ್ತು ಅಂತಹದೊಂದು ಹೃದಯ ವೈಶ್ಯಾಲತೆ ಇರದೇ ಹೋಗಿದ್ದರೆ…
    ಪತ್ರ ಕಾದಿಟ್ಟ ಆ ಹುಡುಗನ ಅವತ್ತು ಹಾಗೇ ಕನಸು ಕಾಣದೇ ಹೋಗಿದ್ದರೆ ಈ ‘ಉಮಾಸಿರಿ’ ಇನ್ನೆಲ್ಲಿ?
    ಲೇಖಕರ ಮುಂದಿನ ಬರೆಹದ ಬಗ್ಗೆ ಕುತೂಹಲಗೊಂಡಿದ್ದೇನೆ.
    -ಗವಿಸಿದ್ಧ ಹೊಸಮನಿ

    ಪ್ರತಿಕ್ರಿಯೆ
  9. rajkumar

    ಆದ್ರೆ ಉಮಾಶ್ರೀ ಅವರು ನನ್ನ ಕಾವ್ಯ ವಾಚನ ಕೇಳಿ ‘ಇನ್ನೂ ಕಲಿಯಬೇಕಪ್ಪಾ. ಅಭ್ಯಾಸ ಸಾಲದು’ ಅಂದಿದ್ದು, ನಂಗೆ ಸರಿ ಅನ್ನಿಸಿತು. ಹಂಸಲೇಖ ಅವರನ್ನು ಕಾದ ಅಷ್ಟೂ ಹೊತ್ತು ನನ್ನನ್ನು ನಾನು ಆತ್ಮ ವಿಮರ್ಶೆ ಮಾಡಿಕೊಂಡು ನಾ ಇನ್ನೂ ಕಲಿಯುವುದು ಬೇಕಾದಷ್ಟಿದೆ ಅಂದುಕೊಳ್ಳುವಷ್ಟರ ಹೊತ್ತಿಗೆ ಹಂಸಲೇಖ ಅವರು ಬಂದರು. ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದರು ಅನ್ನಿಸುತ್ತೆ. ನಾ ಅವರ ಮನೆಯ ಮುಂದೆಯೇ ಓಡಾಡುತ್ತಿದ್ದೆ. ಅವರು ಬಂದಿದ್ದನ್ನು ನೋಡಿ ಪತ್ರ ತೋರಿಸೋಣ ಅಂದುಕೊಳ್ಳುವಷ್ಟರಲ್ಲೇ ನನ್ನ ಬುದ್ಧಿ ತಡೆದು ಒಂದಷ್ಟು ಸಾಧನೆ ಮಾಡಿ ಬಾ ಅಂದಿತು. ನಾ ಹಂಸಲೇಖ ಅವರನ್ನು ದೂರದಿಂದಲೇ ನೋಡಿ, ಪತ್ರವನ್ನೂ ತೋರಿಸದೇ, ಅವರನ್ನು ಮಾತಾಡಿಸದೇ ಅಲ್ಲಿಂದ ವಾಪಸ್ ಬೇಲೂರಿನಕಡೆ ಹೊರಟೆ….
    “ನೀವೇ ಬರೆದ ನಿಮ್ಮದೇ ಅನುಭವ ನನ್ನ ಅನುಭವಕ್ಕೂ ಬಂದು ಮೊನ್ನೆ ನೀವು ಧಾರವಾಡಕ್ಕೆ ಬಂದಾಗ ಎದುರುಗೊಂಡು ಮಾತಾಡಲು ಆಗಲಿಲ್ಲ, ನಿನ್ನೆ ರಾತ್ರಿ ತಾವು “ಮತ್ತೆ ಮಾತಾಡಿಸಲೇ ಇಲ್ಲ ” ಅಂತಾ ಟಂಕಿಸಿ ಕಳಿಸಿದ ಸಂದೇಶಕ್ಕೆ ಉತ್ತರ ಸಿಕ್ಕಿತು ಅಂದುಕೊಳ್ಳುವೆ! ಧನ್ಯವಾದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: