ಬೆಟ್ಟ ಗುಡ್ಡ ಹತ್ತಿ ಇಳಿದೆ..

ನಡೆಯಲಂಜಿಕೆಯೇಕೆ?

ಮಾಂತೇಶ್ ಬಂಜೇನಹಳ್ಳಿ.. ಶಿಕ್ಷಕರು. ತರೀಕೆರೆ ತಾಲ್ಲೂಕು

ನಾನು ನೌಕರಿಗೆ ಎರಡು ಸಾವಿರದ ಏಳರಲ್ಲಿ ಸೇರ್ಪಡೆಗೊಂಡಾಗ ಕಳಸ ತಾಲ್ಲೂಕಿನ ಹಿರೇಬೈಲಿನಲ್ಲಿ ಬಸ್ಸಿಳಿದೆ. ಕೂಗಳತೆ ದೂರದಲ್ಲಿ ಬಲರಾಮಣ್ಣರ ಜೀಪೊಂದು ಕೈತಪ್ಪಿತ್ತು. ಪೋನಿಲ್ಲ, ಹೆಮ್ಮಕ್ಕಿ ಜೀಪ್ ಮಾಲೀಕರು ಕಂ ಚಾಲಕರಾಗಿದ್ದ ಬಲರಾಮಣ್ಣರ  ಪರಿಚಯವೂ ಇಲ್ಲ. ಅಂದು ಆ ಊರಿಗೆ  ಹೊಸ ಮೇಷ್ಟ್ರಾಗಿ ಮೊದಲ‌ ಅಡಿ ಇಡುವವನಾಗಿದ್ದೆ. ಹೇಗೂ ಆಟೋ ಹಿಡಿದು ಹೆಮ್ಮಕ್ಕಿ ಸರಕಾರಿ ಶಾಲೆಗೆ ಕರ್ತವ್ಯಕ್ಮೆ ಹಾಜರಾಗಿ ವರದಿ‌ ಮಾಡಿಕೊಂಡೆ.

ಅಂದಿನ ಸಂಜೆಯಿಂದಲೇ ಆ ಕಡೆಯಿಂದ ವಾಸ್ತವ್ಯ ಹೂಡುವ ಹಿರೇಬೈಲಿಗೆ ನಡೆಯುವ ಕಾರ್ಯಕ್ರಮ ಆರಂಭ.
ಹಿರೇಬೈಲು ಮತ್ತು ಹೆಮ್ಮಕ್ಕಿ ನಡುವೆ ಸುಮಾರು ಹತ್ತು ಕಿಲೋ ಮೀಟರ್ಗಳ ದುರ್ಗಮ ಹಾದಿ. ಹಿರೇಬೈಲು ಊರು ದಾಟುವ ಹೊತ್ತಿಗೇ ಶರೀರ ಸಂಪೂರ್ಣ ಕೃಶವಾಗುವಷ್ಟು ಒಂದೇ ಸಮನೆ ಆಕಾಶಕ್ಕೆ ತೂಗು ಸೇತುವೆ ಮಾದರಿ ಹಾದಿಯಾದಂತಹ  ಬೆಟ್ಟವನೇರಿ, ಮುಂದೆ ಇಳಿಜಾರಿಗೆ ಹೆಜ್ಜೆ ಇಡಬೇಕಿತ್ತು. ಇನ್ನೂ ಮುಂದೆ ಐದಾರು ಬೆಟ್ಟಗಳ ಮಧ್ಯಕ್ಕೆ ಅಂಟಿ ನಡೆಸುವ ಗಾದಿಯಲ್ಲಿ ಇಳಿಯುತ್ತಾ ಮಲ್ಲೇಶನ‌ಗುಡ್ಡದ ಬುಡಕ್ಕಿಳಿದು ಕೋಟೆಮಕ್ಕಿ ದಾಟಿ, ಮತ್ತೊಂದೆರಡು ಕಿ.ಮೀ ನಡೆದು ನನ್ನ ಶಾಲೆಯೂರ ಸೇರಿಕೊಳ್ಳಬೇಕಿತ್ತು.

ಶಾಲೆ ತಾಕಿ ಸ್ವಲ್ಪ ನೀರನ್ಹೀರಿ ಸುಧಾರಿಸಿಕೊಂಡು, ತರಗತಿಯೊಳಗೆ ಕಾಣದ ಬರಗಲ್ ಕಡೆಯಿಂದ ಶಾಲೆಗೆ ಹಾಜರಾಗದ ಮಕ್ಕಳ ಹುಡುಕಿ ಶಾಲೆಗೆ ಕರೆತರಲು ಮತ್ತೆ ಕಾಡೊಳಗೆ ಎರಡು ಕಿ.ಮೀ ದೂರ ನಡೆದು ಹೊರಟು ಬಿಡುತ್ತಿದ್ದೆವು. ಹೇಗಾದರೂ ಮಾಡಿ ಮಕ್ಕಳ ಕರೆತಂದು ಅಂದಿನ ಪಾಠ ಪ್ರವಚನ ಹೇಳಿ, ಮತ್ತೆ ಸಂಜೆಗೆ ಹಿರೇಬೈಲ್ ಕಡೆ ಬೆಳಗ್ಗೆ ಇಳಿದ ಇಳಿಜಾರ ಹಾದಿಯ ಎದುರಾಗಿ ಗುಡ್ಡಗಳ ಏರುತ್ತಾ, ಏದುಸಿರು ಬಿಡುತ್ತಾ ಸಾಗಬೇಕಾದ ಅನಿವಾರ್ಯತೆ.

ಸೊಂಟದ ಕೀಲುಗಳೋ ಲಟಲಟಾಂತ ಕಳಚಿಕೊಂಡವೇನೋ ಎನ್ನುವಷ್ಟರ ಮಟ್ಟಿಗೆ ಅನುಭವವಾಗುತ್ತಿತ್ತು. ಸುಮಾರು ಮೂರು ವರ್ಷ ನಡೆ ನಡೆ ನಡೆ ಒಂದೇ ಸಮನೆ ನಡಿಗೆ. ಆದರೂ ನಡಿಗೆ ಬರು ಬರುತ್ತಾ ದೇಹಕ್ಕೆ ಬಹಳ ಒಗ್ಗಿ‌ ಹೋಗಿತ್ತು. ದೇಹದಲ್ಲಿನ ಕೊಬ್ಬು ಕುಗ್ಗಿ ಹೋಗಿತ್ತು. ಹದಿನೈದು ದಿನಕ್ಕೊಮ್ಮೆ ನನ್ನ ಚಪ್ಪಲಿಗಳು ಭೂಮಿಯೊಳಗೆ ಹುದುಗಿ ಪಾದವಷ್ಟೇ ಮೇಲ್ಮಟ್ಟದಲ್ಲಿ ಗೋಚರಿಸುತ್ತಿದ್ದವು.
ನಡೆಯುವುದು ಕ್ರಮೇಣ ಮನೋಗತವಾದ್ದರಿಂದ ಊರ ಕಡೆ ಬಂದಾಗ ವಾಹನಗಳಿಗೆ ಕಾಯಲು ಮನಸಾಗುತ್ತಿರಲಿಲ್ಲ. ಈ ಮೊದಲು ಹಲವಾರು ಬಾರಿ ಕಡೂರು ಪಟ್ಟಣದಿಂದ ಎಂಟು ಕಿ. ಮೀ. ದೂರದ ಊರೆಡೆಗೆ ಸರಿದೋಡುವ ವಾಹನಗಳಿಗಾಗಿ ಮೂರ್ನಾಲ್ಕು ತಾಸು‌‌ ಕಾದಿದ್ದುಂಟು. ಕೊನೆಕೊನೆಗೆ ಕಾಯಲಾರದೆ, ನಡೆಯಲಾರಂಭಿಸಿ ಹಾದಿ ಮಧ್ಯದಲ್ಲಿ ವಾಹನಗಳೇರಿ ಊರು ತಲುಪಿದ್ದುಂಟು.

ಒಮ್ಮೆ ಶಾಲಾ ಕಾರ್ಯನಿಮಿತ್ತ ಕೆಳಗೂರು ಬಳಿಯ ಜಾವಳಿ ಬ್ಯಾಂಕ್ ಗೆ ತೆರಳಿದ್ದೆ. ಅಲ್ಲಿ ತಾಂತ್ರಿಕ ಕಾರಣಗಳಿಂದ ಹಣ ನಗದಾಗಲಿಲ್ಲ. ವಾಪಸ್ ಬಸ್ಸೇರಲು ಹಣವಿರಲಿಲ್ಲ. ಕೆಳಗೂರು ಶಾಲೆಯ ಗೆಳೆಯ ಶಂಕರ್ ಯಾ ಸುಂಕಸಾಲೆ ಶಾಲಾ ಶಿಕ್ಷಕ ಆತ್ಮೀಯ ಕಾಂತುಗೆ ಕರೆ ಮಾಡಲು ಪೋನಿಲ್ಲ. ಅಪರಿಚಿತ ತಾಣ, ನಡೆಯಲಾರಂಭಿಸಿದೆ. ಯಾವ ವಾಹನಗಳಿಗೂ ನಿಲ್ಲಿರೆಂದು ಹಲುಬಲಿಲ್ಲ, ಕೈದೋರಲಿಲ್ಲ.
ನಮ್ಮ ಶಾಲೆಯ ಭಿತ್ತಿಗಳಿಗೆ ಚಿತ್ರ ಬರೆಯಲು ಬಂದು ಪರಿಚಿತನಾಗಿದ್ದ ಬಣಕಲ್ ನವರಾದ ಶ್ರೀಯುತ ಶಿವಾಜಿರವರು ಅನಿರೀಕ್ಷಿತವಾಗಿ ಅದೇ ದಾರಿಯಲ್ಲಿ ಬೈಕಿನಲ್ಲಿ ಎದುರ್ಗೊಂಡರು ಮತ್ತು ಕರೆದುಕೊಂಡು ಹೋಗಿ ಶಾಲೆಯ ಬಳಿ ಬಿಟ್ಟು ವಾಪಸ್ಸಾಗಿದ್ದರು.

ಇದೆಲ್ಲಾ ಇಲ್ಯಾಕೆ ಪ್ರಸ್ತಾಪಿಸುತ್ತಿರುವೆನೆಂದರೆ ಕಾಲ‌ ಬದಲಾಗಿದೆ. ಈಗಿನ ಮಕ್ಕಳು ಕಣ್ಣಳತೆಯ, ಕೂಗಳತೆಯ ದೂರಕ್ಕೂ ದ್ವಿಚಕ್ರ ವಾಹನಗಳಿಗೆ ಕೈದೋರುತ್ತಾರೆ, ಕಾಡುತ್ತಾರೆ, ಒಂದ್ನಾಲ್ಕಾರು ಹೆಜ್ಜೆ ಹಿಂದೆಯೇ ಓಡಿ ಬರುತ್ತಾರೆ.

ಯಾಕಿಂತ ಜಡತ್ವ? ಸೋಮಾರಿತನ? ನಡೆಯಲು ಕಾಲಿದ್ದರೂ ಮನಸ್ಸಿಲ್ಲವೇಕೆ? ಎಲ್ಲವನ್ನೂ ನಾವು ಪೋಷಕರಾಗಿ ಕಲಿಸಲೇಬೇಕಿದೆ. ಜಮೈಕಾದ ಓಟಗಾರರು ಮನೆಗೆ, ಶಾಲೆಗೆ, ಹೊಲಕ್ಕೆ, ಅಂಗಡಿಗೆ, ಪಕ್ಕದ ಮನೆಗೆ ಓಡಿಯೇ ಹೋಗುತ್ತಾರಂತೆ. ಮಾನ್ಯ ಹುಸೇನ್ ಬೋಲ್ಟ್ ಜಮೈಕಾದವರು.
ಓಡುವುದು ಅವರವರ ಇಚ್ಛೆ
ಇನ್ನಾದರೂ ಕನಿಷ್ಠ ನಡೆಯಲು ಮಕ್ಕಳಿಗೆ ಮನವೊಲಿಸೋಣವೇ?

‍ಲೇಖಕರು avadhi

January 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ನಿಜ, ಮಕ್ಕಳಿಗೆ ನಡೆಯುವುದನ್ನು ಕಲಿಸಬೇಕಿದೆ.

    ಪ್ರತಿಕ್ರಿಯೆ
  2. Veda

    Nija, makkala jothege avara appa ammandirigu nadeyuva abyasa roodiyagabekide. Chendada baraha Mantesh

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: