ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ಧ ಹಾಲುನಗೆ ಬೀರಿ

ಬುದ್ಧ ಪೂರ್ಣಿಮೆ
 ಸುಧಾ ಆಡುಕಳ

ಹಾಲು ಸುರಿಯುವ ಇರುಳು
ಕಡಲ ದಂಡೆಯ ಮರಳು
ಅಗಾಧ ಜಲರಾಶಿಯೆದುರು
ನಮ್ಮ ಭೇಟಿ
ಗುರುತು ಪರಿಚಯವಿಲ್ಲ
ಆತ್ಮ ಬಂಧುಗಳು
ಹೇಗೆ ಒಂದಾದೆವು?
ಅರಿವೇ ಇಲ್ಲ
ಸಂಧಿಸಿದ ಆ ಕ್ಷಣ
ಒಂದರಗಳಿಗೆ ಮೌನ
ಮತ್ತೊಂದು ಮುಗುಳ್ನಗು
ಮರುಕ್ಷಣ ನಿನ್ನ
ತೋಳ ತೆಕ್ಕೆಯಲಿ ನಾನು
ನನ್ನ ಮಡಿಲ ಮಗು ನೀನು!

ಹೆರಳ ರಾಶಿಯ ಹರಡಿ
ನೇವರಿಸುವಾಗ ನೀ
ರಾಗವಾಗಿ ಮಿಡಿದೆ ನಾನು
ನಿನ್ನೆದೆಯ ಮೇಲೆ
ಬೆರಳಲ್ಲಿ ಬರೆದೆ
ನನ್ನದೇ ಹೆಸರನ್ನು
ನನ್ನ ಬೆನ್ನಿನ ಮೇಲೆ
ನಿನ್ನ ಹೆಸರಿನ ಗುರುತು
ಕಡಲ ಭೋರ್ಗರೆತ!
ತೆರೆಯ ಮಾರ್ದನಿ
ಮರುಗಳಿಗೆ ಎಲ್ಲ
ಶಾಂತ, ನಿಶಾಂತ
ಕಪ್ಪುಬಿಳುಪಿನ ಚಿತ್ರ
ವಿಶಾಲ ಕಡಲು
ಒಂದು ಇರುಳು, ಎರಡು ನೆರಳು
ಅಂಗಾತ ಮಲಗಿ
ಆಗಸವ ದಿಟ್ಟಿಸಿದರೆ
ಬುದ್ಧ ಹಾಲುನಗೆ ಬೀರಿ
ನಗುತ್ತಿದ್ದ!
ಮಿಕ್ಕಿದ್ದೆಲ್ಲವೂ ವಿಷ
ಬೇರೆಯಾದೆವು ನಾವು
ಆ ಕ್ಷಣದ ಇರವು
ಅದುವೇ ಸತ್ಯ
ಬುದ್ಧವಾಣಿಯ ಸದ್ದಿಗೆ
ಕನಸು ಹರಿದು ಬೆಳಗಾಯಿತು

‍ಲೇಖಕರು nalike

20 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading